ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 19

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಅರೇ ! ಮಗಳೇ ಇದೇನು ಇದ್ದಕ್ಕಿದ್ದ ಹಾಗೆ ಫೋನ್, ಮೆಸೇಜ್ ಏನೂ ಇಲ್ಲದೆ ಬಂದಿದ್ದೀಯೆ. ರಜೆ ಹಾಕಿದ್ದೀಯಾ? ಅಥವಾ ವರ್ಕ್ ಫ್ರಂ ಹೋಂ” ಎಂದಳು ಭಾರ್ಗವಿ.
“ಹೂ ಅಮ್ಮಾ, ಈ ವಾರ ವರ್ಕ್ ಫ್ರಂ ಹೋಂ. ಅಲ್ಲಿಗಿಂತ ಇಲ್ಲಿಯೇ ಮಾಡೋಣ ಅಂತ. ನಿನ್ನ ಜೊತೆ ಇದ್ದಹಾಗೂ ಆಗುತ್ತೆ ಅಂದುಕೊಂಡು ಬಂದೆ. ನೀವು ಒಳಕ್ಕೆ ಬನ್ನಿ ನಿಮಗೆ ಸರ್‌ ಪ್ರೈಸ್ ಕೊಡೋಣಾಂತಲೇ ಹೇಳಲಿಲ್ಲ.” ಎಂದಳು ಮಾಲಿನಿ.
“ಓ.ಕೆ. ಒಳ್ಳೆಯದೇ ಆಯಿತು.” ಎಂದು ಒಳಬಂದು ಬಾಗಿಲು ಭದ್ರಪಡಿಸಿದಳು. ಉಡುಪು ಬದಲಿಸಿ ಕೈಕಾಲು ಮುಖ ತೊಳೆದು ಅಡುಗೆ ಮನೆಗೆ ಹೋದಳು ಭಾರ್ಗವಿ. ಅಲ್ಲಿ ಕಂಡದ್ದೇನು ಮಗಳು ಸ್ಟೌಮೇಲೆ ತಪ್ಪಲೆಯೊಳಗೆ ಸೌಟು ಹಾಕಿ ತಿರುಗಿಸುತ್ತಿದ್ದಾಳೆ. “ಅರೇ ನೀನ್ಯಾಕೆ ಅಡುಗೆ ಕೆಲಸಕ್ಕೆ ಕೈ ಹಾಕಿದೆ. ನಾನು ಬರುತ್ತಿದ್ದೆನಲ್ಲ. ಬಂದು ಮಾಡುತ್ತಿದ್ದೆ” ಎಂದಳು.
ಏನಿಲ್ಲಮ್ಮಾ ಅವರೇಕಾಯಿ ಸುಲಿದು ಇಟ್ಟುಕೊಂಡಿದ್ದೆ. ಇಲ್ಲಿಂದ ಬೆಂಗಳೂರಿಗೆ ಹೋಗುವವರೆಗೆ ಇಟ್ಟರೆ ಹಾಳಾಗುತ್ತದಲ್ಲ ಎಂದು ಅದರದ್ದೇ ಸಾರು ಮಾಡುತ್ತಿದ್ದೆ. ಮುದ್ದೆ, ಅನ್ನ ತಯಾರಾಗಿದೆ. ಹೆಚ್ಚೇನಿಲ್ಲ. ಇನ್ನೇನು ಸಾರೂ ಕುದ್ದಿದ್ದಾಯಿತು. ತಟ್ಟೆ ಇಡಿ ಊಟಮಾಡೋಣ” ಎಂದಳಿ ಮಾಲಿನಿ.

ಭಾರ್ಗವಿಗೂ ಬೆಳಗ್ಗೆ ತಿಂದ ದೋಸೆ ಕರಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಗೆಳತಿ ಸುಮನಾ ಒತ್ತಾಯಿಸಿದರೂ ಬಿಗುಮಾನದಿಂದ ಅವರ ಮನೆಯಲ್ಲಿ ಏನನ್ನೂ ತಿನ್ನದೆ ಬರೀ ಕಾಫಿ ಮುಗಿಸಿ ಬಂದಿದ್ದಳು. ಹೆಚ್ಚು ಉಪಚಾರ ಹೇಳಿಸಿಕೊಳ್ಳದೆ ಪದಾರ್ಥಗಳನ್ನು ತೆಗೆದು ಡೈನಿಂಗ್ ಟೇಬಲ್ಲಿನ ಮೇಲಿಟ್ಟಳು. ತಟ್ಟೆಗಳನ್ನಿಟ್ಟು ಲೋಟಗಳಿಗೆ ನೀರು ತುಂಬಿಟ್ಟಳು. ಇಬ್ಬರೂ ಅದೂ ಇದೂ ಸುದ್ಧಿ ಮಾತನಾಡುತ್ತಾ ಊಟ ಮುಗಿಸಿದರು. ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿದ ಭಾರ್ಗವಿ “ಪುಟ್ಟಾ ನನಗೆ ತುಂಬ ಸಾಕಾಗಿದೆ, ಕಣ್ಣುಗಳು ಎಳೆಯುತ್ತಿವೆ. ಮತ್ತೆ ಬೆಳಗ್ಗೆ ಬೇಗನೇ ಏಳಬೇಕು. ಆಶ್ರಮಕ್ಕೆ ಯಾರೋ ವಿಸಿರ‍್ಸ್ ಬರುತ್ತಿದ್ದಾರೆ ನೀವೂ ಬನ್ನಿ ಮೆಡಂ ಎಂದು ಕರೆದಿದ್ದಾರೆ. ನೀನು ಬರುವುದು ಗೊತ್ತಿದ್ದರೆ ಅವಾಯ್ಡ್ ಮಾಡಬಹುದಾಗಿತ್ತು. ಹೇಳಿಬಿಟ್ಟಿದ್ದೇನೆ. ಹೋಗಲೇಬೇಕು. ಹೊರಗಿನ ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡ. ಲೈಟುಗಳನ್ನಾರಿಸಿ ಹಿಂದಿನ ಬಾಗಿಲು ಒಂದು ಸಾರಿ ನೋಡಿ ಮಲಗಿಕೋ. ಆಗಲೇ ಹತ್ತು ಗಂಟೆಯ ಮೇಲಾಗಿದೆ” ಎಂದು ಹೇಳಿ ಅವಳ ಉತ್ತರವನ್ನು ಕಾಯದೆ ತನ್ನ ರೂಮಿಗೆ ಹೊರಟಳು ಭಾರ್ಗವಿ.

ಆ ದಿನದ ಕೆಲಸ ಮುಗಿಸಿ ಲ್ಯಾಪ್‌ಟಾಪ್ ಷಟ್‌ಡೌನ್ ಮಾಡಿ ಅಮ್ಮನ ಆದೇಶದಂತೆ ಗೇಟಿಗೆ ಬೀಗಹಾಕಲೆಂದು ಹೋದಾಗ ಹೊರಗೆ ಮಹಡಿ ಮೇಲಿನವರು ಬಂದಿದ್ದು ಅವರೇ ಬೀಗ ಹಾಕಿರುವುದನ್ನು ಕಂಡು ಮುಂಬಾಗಿಲನ್ನು ಭದ್ರಪಡಿಸಿದಳು ಮಾಲಿನಿ. ಅಡುಗೆ ಮನೆಗೆ ಹೋಗಿ ನೀರನ್ನು ತುಸು ಬೆಚ್ಚಗೆ ಮಾಡಿಕೊಂಡು ಕುಡಿದು ಲೈಟಾರಿಸಿ ಹೊರಬಂದಳು. ಹಿಂಬಾಗಿಲು ಭದ್ರವಾಗಿರುವುದನ್ನು ಗಮನಿಸಿದಳು. ಏನೋ ನೆನಪಿಸಿಕೊಂಡವಳಂತೆ ಒಂದು ಪುಟ್ಟ ಜಗ್ಗಿನಲ್ಲಿ ನೀರುತುಂಬಿಸಿ ಲೋಟ ತೆಗೆದುಕೊಂಡು ಭಾರ್ಗವಿಯ ರೂಮಿಗೆ ಹೋದಳು. ನನಗೆ ಲೈಟಾರಿಸಲು ಹೇಳಿ ತಾವೇ ಲೈಟಾರಿಸದೆ ನಿದ್ರಾದೇವಿಗೆ ಶರಣಾಗಿದ್ದ ತಾಯಿಯನ್ನು ನೋಡಿದಳು. ತಂದಿದ್ದ ಜಗ್ಗ್ ಮತ್ತು ಲೋಟವನ್ನು ಅಲ್ಲಿದ್ದ ಪುಟ್ಟ ಸ್ಟೂಲಿನ ಮೇಲಿಟ್ಟಳು. ಇತ್ತೀಚೆಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಲವಲವಿಕೆಯಿಂದ ಇರುವ ಇವರಿಗೆ ನಾನು ಕಂಡು ಕೇಳಿದ ವಿಚಾರವನ್ನು ಹೇಗೆ ತಿಳಿಸುವುದು. ಊಹಿಸಲಾರದಂತಹ ಪ್ರಸಂಗ.. ಛೇ..ಯಾರು ಯಾವಾಗ ಹೇಗೆ ಬದಲಾಗುತ್ತಾರೆಂಬುದೇ ತಿಳಿಯುತ್ತಿಲ್ಲ. ಒಂದು ವಾರ ಹೇಗೂ ಇರುತ್ತೇನಲ್ಲ, ಸಮಯ ಸಂದರ್ಭ ನೋಡಿ ಹೇಳಬೇಕು ಎಂದುಕೊಳ್ಳುತ್ತ ಅಮ್ಮನ ಕಾಲಬುಡದಲ್ಲಿ ಬಿದ್ದಿದ್ದ ಬ್ಲಾಂಕೆಟ್ಟನ್ನು ಮೈತುಂಬ ಹೊದ್ದಿಸಿ ರೂಮಿನ ಲೈಟಾರಿಸಿ ಹೊರಬಂದಳು ಮಾಲಿನಿ.

ತನ್ನ ರೂಮಿಗೆ ಬಂದು ಹಾಸಿಗೆಯ ಮೇಲೆ ಮಲಗಿದರೂ ನಿದ್ರೆ ಬರದೆ ಸುಮಾರು ಹೊತ್ತು ಅತ್ತಿಂದಿತ್ತ ಹೊರಳಾಡಿ ಅವಳಿಗೇ ಯಾವಾಗ ನಿದ್ರೆ ಹತ್ತಿತೋ ಗೊತ್ತಾಗಲಿಲ್ಲ. ಬೆಳಗ್ಗೆ ಭಾರ್ಗವಿ ಬಂದು ಕಿಟಕಿಯ ಪರದೆ ಸರಿಸಿ “ಏಳು ಮಗಳೇ ಗಂಟೆ ಎಂಟಾಯಿತು. ರಾತ್ರಿ ಎಷ್ಟು ಹೊತ್ತಿಗೆ ಮಲಗಿದೆ? “ ಎಂದಾಗಲೇ ಎಚ್ಚರ. ಕಣ್ಣುಬಿಟ್ಟು “ಓ ! ಆಗಲೇ ಎಂಟು ಗಂಟೆಯಾಯಿತೇ?” ಎಂದಳು ಮಾಲಿನಿ.

“ಹೂಂ ಏಳುವ ಮನಸ್ಸಿಲ್ಲವೇ? ನಾನು ಎಲ್ಲ ತರಕಾರಿಗಳನ್ನು ಹಾಕಿ ಸಾಗುಮಾಡಿ, ಚಪಾತಿಗಳನ್ನು ಮಾಡಿ ಹಾಟ್‌ಕೇಸಿಗೆ ಹಾಕಿದ್ದೇನೆ. ಕಾಫಿಗೆ ಡಿಕಾಕ್ಷನ್ ಫ್ರಿಜ್ಜಿನಲ್ಲಿದೆ. ಹಾಲು ಕಾಯ್ದಿದೆ. ಕೆಲಸದವಳು ಬಂದು ಹೋಗಿದ್ದಾಯಿತು. ನಾನು ಬರುವುದು ಸಂಜೆಯಾಗಬಹುದು.” ಎಂದು ಹೇಳುತ್ತ ಹೊರನಡೆದಳು ಭಾರ್ಗವಿ. ಇನ್ನೂ ಸ್ವಲ್ಪ ಹೊತ್ತಿನ ನಂತರ “ಮಗಳೇ ಏಳಲಿಲ್ಲವೇ?..ನಾನು ಹೊರಡುತ್ತಿದ್ದೇನೆ. ಬಂದು ಮುಂಬಾಗಿಲು ಹಾಕಿಕೋಮ್ಮ. ಆಮೇಲೆ ಬೇಕಿದ್ದರೆ ಮತ್ತೆ ಮಲಗಿಕೋ.” ಎಂದು ಕೂಗಿದಾಗ ವಿಧಿಯಿಲ್ಲದೆ ಎದ್ದು ಹೊರಬಂದಳು ಮಾಲಿನಿ. ಹೊರಡಲು ಸಿದ್ಧವಾಗಿ ವ್ಯಾನಿಟಿ ಬ್ಯಾಗನ್ನು ಹೆಗಲಿಗೆ ಸೇರಿಸಿ ಚಪ್ಪಲಿಯನ್ನು ಗೂಡಿನಲ್ಲಿದ್ದ ತುಂಡುಬಟ್ಟೆಯಿಂದ ಒರೆಸಿಕೊಂಡು ಕಾಲಿಗೆ ಹಾಕಿಕೊಂಡು ತಲೆಯೆತ್ತಿದ್ದ ತಾಯಿಯನ್ನು ಎವೆಯಿಕ್ಕದೆ ನೋಡಿದಳು ಮಾಲಿನಿ.

ಇದುವರೆಗೆ ಕಾಣದಿದ್ದ ಹೊಸತನ ಅವರ ಮುಖದಲ್ಲಿ ಕಾಣುತ್ತಿತ್ತು.. ಉಟ್ಟಿದ್ದು ಸಾಧಾರಣ ಕಾಟನ್ ಸೀರೆಯಾದರೂ ಅವರ ಬಣ್ಣ ಮತ್ತು ನಿಲುವಿಗೆ ಒಪ್ಪುತ್ತಿತ್ತು. ಕುತ್ತಿಗೆಯಲ್ಲಿನ ಕರಿಮಣಿಸರ, ಕಿವಿಯಲ್ಲಿ ಕೆಂಪು ಕಲ್ಲಿನ ಓಲೆ, ಒಂದು ಕೈತುಂಬ ಹಸಿರು ಬಳೆಗಳು, ಮತ್ತೊಂದರಲ್ಲಿ ರಿಸ್ಟ್ವಾಚ್, ತಲೆಗೂದಲನ್ನು ಎತ್ತಿಕಟ್ಟಿ ಕ್ಲಿಪ್ ಹಾಕಿದ್ದರು. ಪಕ್ಕದಲ್ಲೊಂದು ಗುಲಾಬಿ ಹೂವಿತ್ತು. ನವಿರಾಗಿ ಮುಖಕ್ಕೆ ಹಚ್ಚಿದ್ದ ಪೌಡರ್, ಹಣೆಯ ಮಧ್ಯದಲ್ಲಿ ದುಂಡಾದ ಬಿಂದಿ, ಬಣ್ಣ ಹಚ್ಚಿದಿದ್ದರೂ ಸೋಕಿಸಿದ್ದಾರೆಂಬಂತಿದ್ದ ಕೆಂಪಾದ ತುಟಿಗಳು. ನೀಳವಾಗಿದ್ದ ಮೂಗಿಗೆ ಹಾಕಿದ್ದ ನತ್ತು, ಅಬ್ಬಾ ಇಷ್ಟೊಂದು ಪುರುಸೊತ್ತಾಗಿ ನಾನು ನನ್ನಮ್ಮನನ್ನು ನೋಡಿದ್ದ ನೆನಪೇ ಇಲ್ಲವಲ್ಲಾ ಎಂದುಕೊಳ್ಳುವಷ್ಟರಲ್ಲಿ
“ಏನು ಮಗಳೇ, ಏನು ನನ್ನನ್ನು ಎಂದೂ ನೋಡೇ ಇಲ್ಲವೇನೋ ಎಂಬಂತೆ ನೋಡುತ್ತಿದ್ದೀ?”
ತಾಯಿಯ ಮಾತಿನಿಂದ ಎಚ್ಚೆತ್ತ ಮಾಲಿನಿ “ಏನಿಲ್ಲಮ್ಮಾ ನೀವು ಕೆಲಸಕ್ಕೆ ಹೋಗುವಾಗ ಇಷ್ಟು ನೀಟಾಗಿ ಹೋಗಿದ್ದನ್ನು ಕಂಡಿರಲಿಲ್ಲ. ಹಾಗಂತ ಹೇಗೆಂದರೆ ಹಾಗೆ ಹೋದದ್ದನ್ನೂ ಕಾಣೆ, ಆದರೆ ಈಗ ಇಷ್ಟು ನಿರಾತಂಕವಾಗಿ ತಯಾರಾಗಿ ಹೋಗಿದ್ದು ಕಾಣೆ. ಅದನ್ನೇ ನೋಡುತ್ತಿದ್ದೆ. ಎಲ್ಲಿ ಒಂದೇ ಒಂದು ಫೋಟೋ ತೆಗೀತೇನೆ ಹಾಗೇ ನಿಲ್ಲಿ” ಎಂದು ಟೀಪಾಯಿ ಮೇಲಿದ್ದ ಮೊಬೈಲಿನಿಂದ ಅಮ್ಮನ ಫೊಟೋ ಕ್ಲಿಕ್ಕಿಸಿದಳು.

“ನಿನ್ನ ಪ್ರಶ್ನೆಗೆ ಏನೆಂದು ಉತ್ತರಕೊಡಲಿ ಮಗಳೇ, ಈಗ ಅವೆಲ್ಲ ಸರಿದುಹೋದ ಸಂಗತಿಗಳು. ಎರಡು ಬಸ್ಸಿಡಿದು ಕೆಲಸಕ್ಕೆ ಹೋಗಬೇಕಿತ್ತು. ಜವಾಬ್ದಾರಿಯ ಕೆಲಸ. ಅಲೆದಾಟ, ಸಹೋದ್ಯೋಗಿಗಳೊಡನೆ ಸೆಣಸಾಟ. ಎಲ್ಲವನ್ನೂ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸೋತುಸೊಪ್ಪಾಗಿರುತ್ತಿದ್ದೆ.. ಬಿಡು ಇನ್ನು ಆರಾಮ. ಇಲ್ಲಿಯದೆಲ್ಲ ಮುಗಿದ ಮೇಲಂತೂ ಊರಿಗೆ. ಹೌದು ಇಷ್ಟು ವರ್ಷ ಕಳೆದುಕೊಂಡಿದ್ದನ್ನೆಲ್ಲ ಆ ಪ್ರಕೃತಿಯ ಮಡಿಲಲ್ಲಿ ಪಡೆದುಕೊಳ್ಳುವ ಆಸೆ. ಅಲ್ಲಿರುವ ಗ್ರಾಮೀಣ ಮಹಿಳಾ ಸಮುದಾಯಕ್ಕೆ ಜಾಗೃತಿಯನ್ನು ಮೂಡಿಸಬೇಕೆಂಬ ಬಯಕೆ ಅದಮ್ಯವಾಗಿದೆ. ಈ ಆಶ್ರಮದ ಸಹವಾಸದಿಂದ ಮತ್ತಷ್ಟು ಮಾಹಿತಿ ಸಿಕ್ಕಿದ ಹಾಗಾಯ್ತು. ಹೀಗೇ ನಿನ್ನೊಡನೆ ಮಾತನಾಡುತ್ತ ನಿಂತರೆ ಆಯಿತು. ಓ ಆಶ್ರಮದ ಜನ ಗಾಡಿಯನ್ನೇ ಇಲ್ಲಿಗೆ ಕಳುಹಿಸಿದ ಹಾಗಿದೆ. ಇದೇ ಆ ಗಾಡಿಯ ಹಾರನ್ ಸದ್ದು ನಾ ಬರಲಾ ಜೋಪಾನ” ಎಂದು ಕೈಬೀಸುತ್ತ ಹೊರನಡೆದಳು ಭಾರ್ಗವಿ.

ಹೂಂ ತಮ್ಮದೇ ಕನಸಿನ ಲೋಕದಲ್ಲಿ ವಿಹರಿಸುತ್ತಿರುವವರನ್ನು ಹಾಗೇ ಬಿಡಬೇಕು. ಬೆಂಗಳೂರಿಗೆ ಹೋಗುವ ಮುನ್ನ ವಿಷಯ ತಿಳಿಸಿದರೆ ಸಾಕು. ಅವರ ಗೆಳತಿ ಸುಮನಾ ಆಂಟಿಗೆ ಹೇಳಿ ಅವರ ಮೂಲಕ ಹೇಳಿಸಿದರೆ? ಛೇ..ಛೇ..ಬೇಡ ಬೇಡ..ಅಮ್ಮ ಅವರ ಹತ್ತಿರ ಎಷ್ಟರ ಮಟ್ಟಿಗೆ ಕಾನ್ಫಿಡೆನ್ಷಿಯಲ್ ವಿಷಯಗಳನ್ನು ಹೇಳಿಕೊಂಡಿದ್ದಾರೋ ಏನೋ..ನಾನು ಹಾಗೆ ಮಾಡುವುದು ಬೇಡ. ನೊಂದುಕೊಳ್ಳಬಹುದು. ಒಂದು ಪತ್ರ ಬರೆದು ಇಟ್ಟು ಹೋದರೆ.. ಪರಿಣಾಮ? ಅದೂ ಬೇಡ. ಧೈರ್ಯಮಾಡಿ ಎದುರಿಗೇ ಕೂರಿಸಿಕೊಂಡು ಹೇಳಿಬಿಡುತ್ತೇನೆ. ಫಲಿತಾಂಶವನ್ನು ಎದುರಿಸೋಣ. ಅದೇ ಸರಿಯಾದದ್ದು ಎಂದುಕೊAಡು ನಿರ್ಧರಿಸಿ ಮುಂಬಾಗಿಲನ್ನು ಹಾಕಿಕೊಂಡು ಒಳನಡೆದಳು ಮಾಲಿನಿ.

ಇಂದು ನಾಳೆ ಎನ್ನುತ್ತಲೇ ಬೆಂಗಳೂರಿಗೆ ಹಿಂತಿರುಗುವ ದಿನ ಹತ್ತಿರ ಬಂದೇಬಿಟ್ಟಿತು. ಇನ್ನು ಕೇವಲ ಎರಡೇ ದಿನವಿದೆ. ಒಂದು ವಾರಕ್ಕೆಂದು ಬಂದವಳು ಇನ್ನೊಂದು ವಾರಕ್ಕೆ ಆಫೀಸಿನಿಂದ ಪರ್ಮಿಷನ್ ತೆಗೆದುಕೊಂಡು ಮುಂದುವರಿದರೂ ತಾನು ಹೇಳಬೇಕೆಂದಿದ್ದನ್ನು ಹೇಳಲಾಗಲೇ ಇಲ್ಲ. ತುಂಬಾ ಆಲೋಚಿಸಿ ಒಂದು ದಿನ ರಾತ್ರಿ ಊಟ ಮುಗಿಸಿ ಹೊರಗಡೆ ಸ್ವಲ್ಪ ಅಡ್ಡಾಡಿ ಟಿ.ವಿ.ಮುಂದೆ ಕುಳಿತಾಗ “ಅಮ್ಮಾ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು. ನಾನು ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಧೈರ್ಯ ಕಳೆದುಕೊಳ್ಳಬಾರದು. ಅನಿರೀಕ್ಷಿತ ಸುದ್ಧಿಯಿಂದ ವಿಚಲಿತರಾಗಬಾರದು” ಎಂದು ಪೀಠಿಕೆ ಹಾಕಿದಳು ಮಾಲಿನಿ.

ಮಗಳ ಮಾತನ್ನು ಕೇಳಿದ ಭಾರ್ಗವಿ ಅವಳು ಯಾರನ್ನಾದರೂ ಪ್ರೀತಿಸಿರಬಹುದು, ನೇರವಾಗಿ ವಿಷಯ ತಿಳಿಸಲಾರದೆ ಸುತ್ತೀಬಳಸಿ ಹೇಳುತ್ತಿದ್ದಾಳೆ. ಹಾಗೇನಾದರೂ ಇದ್ದರೆ ಸಿದ್ಧಾರ್ಥನಿಗೆ ತಿಳಿಸಿ ವಿಚಾರಿಸಿ ಒಪ್ಪಿಗೆಯಾದರೆ ಜೋಡಿ ಮಾಡೇಬಿಡಬೇಕು ಎಂದು ಮನದಲ್ಲೇ ಮಂಡಿಗೆ ತಿಂದಳು. ಹೊರಗೆ ಮಾತ್ರ “ಹೇಳು ಮಗಳೇ ನನ್ನ ಹತ್ತಿರ ಸಂಕೋಚವೇನು. ಐ ಮೀನ್ ಎನಿ ಲೌ ಮ್ಯಾಟರ್?” ಎಂದು ಕೇಳಿದಳು ಭಾರ್ಗವಿ.

ಹುಂ ಅಮ್ಮ ಊಹಿಸುವುದರಲ್ಲಿ ತಪ್ಪೇನಿಲ್ಲ. ಸಂದರ್ಭವೇ ಹಾಗಿದೆ. ನಾನು ವಿದ್ಯಾಭ್ಯಾಸ ಮುಗಿಸಿ ಕೆಲಸ ಹೊಂಚಿಕೊಂಡು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಕಾಲಕ್ಕೆ ತಕ್ಕಂತೆ ಆಯ್ಕೆ ನನ್ನದೇ ಆಗಿದ್ದರೆ ಅವರಿಗೆ ಅನುಕೂಲ. ಆದ್ದರಿಂದ ಅವರ ಮನಸ್ಸಿನಲ್ಲಿ ಓಡುತ್ತಿರುವ ವಿಚಾರ ನನ್ನ ಮದುವೆಗೆ ಸಂಬಂಧಿಸಿದ್ದೇ ಆಗಿದೆ. ಸಹಜವಾಗಿ ಕೇಳಿದ್ದಾರೆ. ಆದರೆ ಇಲ್ಲಿ ಊಹಿಸಲಾರದಂತಹ ಪ್ರಸಂಗ ನಡೆದಿದೆಯಲ್ಲ. ಅಮ್ಮ ಅವರ ಬಗ್ಗೆ ಬೇಸರಿಸಿದಾಗಲೆಲ್ಲ ನಾವು ಸೋದರಿಯರು ಅವರ ಪರವಾಗಿಯೇ ವಕಾಲತ್ತು ವಹಿಸುತ್ತಿದ್ದೆವು. ಅಮ್ಮನನ್ನೇ ಟೀಕಿಸುತ್ತಿದ್ದೆವು. ಎಂಥಹ ಪೂಜನೀಯ ಭಾವನೆ ಇಟ್ಟುಕೊಂಡಿದ್ದೆವು. ಅಂತಹ ಮನಸ್ಸಿರುವ ಹುಡುಗನೇ ನಮಗೂ ದೊರಕಲೆಂದು ನಾನೂ ಮತ್ತು ನನ್ನ ಸೋದರಿ ಮಾನಸಾ ಹಾರೈಸುತ್ತಿದ್ದೆವು. ಆದರೀಗ ಎಲ್ಲ ಭರವಸೆಗಳೂ ತಿರುವುಮುರುವು ಆಗಿದೆ. ಮುಗ್ಧರನ್ನು ನಂಬಿಸಿ ಕತ್ತು ಕೊಯ್ದಂತಾಗಿದೆ. ಅಮ್ಮನಿಗೆ ಮೊದಲೇ ಅವರ ಬೇಜವಾಬ್ದಾರಿತನದಿಂದ ಇರಿಸುಮುರುಸು ಆಗಿದೆ. ಹೀಗೇ ಮನಸ್ಸಿನಲ್ಲಿ ಆಲೋಚನೆ ಸಾಗುತ್ತಿತ್ತು.

“ಏನೆಂದು ಹೇಳು ಪುಟ್ಟೀ, ಎಕೆ ಮೌನ ತಾಳಿದೆ? ನಾನೇನೂ ಪ್ರತಿರೋಧ ತೋರಲ್ಲ. ನಮ್ಮ ಕಾಳಜಿಗೋಸ್ಕರ ನಿನ್ನಿಂದ ವಿವರಣೆ ಅಷ್ಟೇ. ಅದೂ ಬೇಡವೆಂದರೆ ಬೇಡ. ಮುಂದೆ ಬದುಕಿ ಬಾಳಬೇಕಾದವರು ನೀವೇ ತಾನೇ ಧೈರ್ಯವಾಗಿ ಹೇಳು” ಎಂದು ಕೇಳಿದಳು ಭಾರ್ಗವಿ.
“ಅಮ್ಮಾ ನಾನು ಹೇಳುತ್ತಿರುವುದು ನಾನು ಆಯ್ಕೆ ಮಾಡಿಕೊಂಡವರ ಬಗ್ಗೆಯಲ್ಲ. ನನಗಿನ್ನೂ ಅಂತಹ ಹುಡುಗ ಸಿಕ್ಕಿಲ್ಲ. ಈಗಿನ ವಿಷಯ ನೀವೇ ಆಯ್ಕೆ ಮಾಡಿಕೊಂಡು ಇದುವರೆಗೆ ಜೋಡಿಯಾಗಿ ಬದುಕಿನ ಬಂಡಿ ಎಳೆಯುತ್ತಾ ಬಂದಿರುವ ನಿಮ್ಮ ಬಾಳಸಂಗಾತಿಯ ಬಗ್ಗೆ” ಎಂದಳು ಮಾಲಿನಿ.
“ಆ..ಏನು..ನಿಮ್ಮ ಪಪ್ಪನ ಬಗ್ಗೆ ! ..ಐ ಮೀನ್ ಸಿದ್ಧಾರ್ಥನ ಬಗ್ಗೆ , ಏನು ಅವರಿಗೆ ಸಂಬಂಧಿಸಿದ್ದು? ನೆನ್ನೆ ಮಾತನಾಡಿದರಲ್ಲಾ ..ನೀನೇ ಕೇಳಿಸಿಕೊಂಡೆ, ನಿನ್ನ ಹತ್ತಿರವೂ ಮಾತನಾಡಿದರು. ಮತ್ತೇನು ವಿಷಯ..ಅಜ್ಜಿ..ಅತ್ತೆ..”
ಭಾರ್ಗವಿ ಮಾತಿನ ಮಧ್ಯೆ ಬಾಯಿಹಾಕಿ “ಅಮ್ಮಾ ನಿಮ್ಮ ಪಟ್ಟಿ ಹೇಳೋದನ್ನು ನಿಲ್ಲಿಸುತ್ತೀರಾ? ನೀವು ಹೇಳಿದಿರಲ್ಲ ಸಿದ್ಧಾರ್ಥ ಅಂದರೆ ನಮ್ಮ ಪಪ್ಪಾ ಅವರದ್ದೇ ವಿಷಯ. ಬೇರೆ ಯಾರದ್ದೂ ಅಲ್ಲ ಕೇಳಿಸಿಕೊಳ್ಳಿ” ಎಂದಳು ಮಾಲಿನಿ.
“ಸಾರಿ..ಸಾರಿ.. ಮಧ್ಯೆ ನಾನು ಮಾತನಾಡುವುದಿಲ್ಲ, ನೀನು ಹೇಳು” ಎಂದಳು ಭಾರ್ಗವಿ.

“ಮತ್ತೆ..ಮತ್ತೆ ಪಪ್ಪಾ ಇನ್ನೊಂದು ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ಅವರ ಹೆಂಡತಿಯ ಜೊತೆಯಲ್ಲಿ ಒಡಾಡುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ” ಎಂದಳು.

“ಓ..ಅದಾ ತಪ್ಪು ತಿಳಿದಿದ್ದೀಯೆ ಮಗಳೇ, ನಿಮ್ಮ ಅತ್ತೆಯ ಮಗಳು ತಾನೇ. ಅವಳದ್ದೇನೋ ಕೇಸುಗಳು..ನಿನಗೆ ಅವರ ವಿಷಯ ಗೊತ್ತಿಲ್ಲವಾ, ಅವಳ ಗಂಡ ತೀರಿಹೋದಾಗ ಅವಳಿಗೆ ಅನುಕಂಪ ಆಧಾರಿತ ಕೆಲಸ ಸಿಗುವ ಅವಕಾಶವಿತ್ತು. ಆದರೆ ಅವಳದನ್ನು ಒಪ್ಪಿಕೊಳ್ಳದೆ ಅದನ್ನು ತನ್ನ ಮಗನಿಗೆ ಅವನಿಗೆ 18 ವರ್ಷವಾದಾಗ ಕೊಡಿರೆಂದು ಕೋರಿಕೆ ಸಲ್ಲಿಸಿದ್ದಳು. ಅದಕ್ಕಾಗಿ ನಿಮ್ಮ ಪಪ್ಪನೂ ಓಡಾಡಿ ಕೊಡಿಸಿದ್ದಾರೆ. ಅವನಿರುವ ಕಡೆಯೇ ಮನೆ ಮಾಡಿದ್ದಾನೆ. ಅಲ್ಲಿಗೆ ಹೋಗಿಬಂದು ಮಾಡುತ್ತಿರುತ್ತಾಳೆ. ನಿಮ್ಮ ಪಪ್ಪನೂ ಅಲ್ಲಿಗೆ ಬಂದಿರಬಹುದು. ನೀನು ಮಿಸ್ಟೇಕ್ ಮಾಡಿಕೊಂಡಿದ್ದೀಯೆ. ನಿಮ್ಮ ಪಪ್ಪ ಕಾಮ್‌ಚೋರ್ ಇರಬಹುದು, ಆದರೆ ಹಂಗೆಲ್ಲ ಮಾಡಲಾರರು” ಎಂದಳು ಭಾರ್ಗವಿ.

“ಹೂಂ ಮೊದಲು ನಾನೂ ಹಾಗೇ ಅಂದುಕೊಂಡಿದ್ದೆ. ಆದರೆ ಅಮ್ಮಾ ವಿಷಯ ಬಹಳ ದೂರ ಹೋಗಿದೆ. ಹೆಣ್ಣಿಗೆ ಹೆಣ್ಣೇ ಶತೃ ಅನ್ನೋದನ್ನು ನಿರೂಪಿಸಿಬಿಟ್ಟಿದ್ದಾರೆ. ಅದಕ್ಕೆ ಅಜ್ಜಿ ಮತ್ತು ಅತ್ತೆಯ ಕುಮ್ಮಕ್ಕೂ ಇದೆ. ಮೇಲಿಂದ ಮೇಲೆ ಬರುತ್ತಿದ್ದುದನ್ನು ಕಂಡು ಒಮ್ಮೆ ಅವರಿಗೆ ಕಾಣದ ಹಾಗೆ ದೂರದಲ್ಲಿ ನಿಂತು ನನ್ನ ಮೊಬೈಲಿನಲ್ಲಿ ಫೋಟೋ ತೆಗೆದಿದ್ದೇನೆ, ನೀವೇ ನೋಡಿ. ಸ್ಪಷ್ಟವಾಗಿ ಬಂದಿಲ್ಲ, ಆದರೆ ದಿಟ್ಟಿಸಿ ನೋಡಿದರೆ ಗುರುತು ಸಿಗುತ್ತದೆ. ಇನ್ನೂ ಒಂದು ರೀತಿಯಲ್ಲಿ ಪತ್ತೇದಾರಿ ಮಾಡಿದ್ದೇನೆ. ಅವರಿಗೆ ಕಾಣದ ಹಾಗೆ ಹಿಂಬಾಲಿಸಿ ಮನೆಯ ಗುರುತು ಮಾಡಿಕೊಂಡು ನಾನೇ ಅಲ್ಲಿಗೆ ಇನ್ನೊಮ್ಮೆ ಹೋಗಿ ಅಕ್ಕಪಕ್ಕದವರನ್ನು ವಿಚಾರಿಸಿದಾಗ ತಿಳಿದುಬಂದದ್ದಿಷ್ಟು. ಅವರು ಹೇಳಿದ ಪ್ರಕಾರ ಅವರಿಬ್ಬರು ಗಂಡಹೆಂಡತಿಯೇ, ಮಗ ಯಾವುದೋ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಆ ಹುಡುಗ ಮಾತ್ರ ಅವರನ್ನು ಮಾಮ ಎಂದೇ ಕರೆಯೋದು ಕಂಡಿದ್ದೇವೆ. ಯಾಕ್ಹೀಗೆ ಎಂದು ಕೇಳಿದಾಗ ನಾನು ಸೋದರ ಮಾವನನ್ನೇ ಮದುವೆಯಾಗಿರೋದು. ಅಭ್ಯಾಸಬಲದಿಂದ ನಾನು ಅವರನ್ನು ಮಾಮ ಎಂದೇ ಕರೆಯೋದು. ಮಗನೂ ಅದನ್ನೇ ರೂಢಿಮಾಡಿಕೊಂಡಿದ್ದಾನೆ ಎಂದು ಹೇಳಿದ್ದರು ಎಂದರು. ನಾವು ಇನ್ನೊಬ್ಬರ ವಿಚಾರ ನಮಗೇಕೆಂದು ಸುಮ್ಮನಾದೆವು, ಊರಿನಲ್ಲಿ ಜಮೀನು ಬೇರೆ ಇದೆಯಂತೆ. ಆಗಾಗ್ಗೆ ಅಲ್ಲಿಗೂ ಹೋಗಿ ಬರುತ್ತಿರುತ್ತಾರೆ. ಆ ಹುಡುಗಿಯ ಅಪ್ಪ, ಅಮ್ಮ ಕೂಡ ಬರುತ್ತಿರುತ್ತಾರೆ ಎಂದೂ ಹೇಳಿದರು. ಆಗಲೇ ಮನೆಯ ಒಳಹೊಕ್ಕು ಕೇಳಲೇ, ಅಥವಾ ಊರಿಗೆ ಹೋಗಿ ವಿಚಾರಿಸಲೇ ಎನ್ನಿಸಿತು. ನಿಮಗೆ ತಿಳಿಸದೆ, ನಿಮ್ಮ ಸಲಹೆ ಕೇಳದೇ ಮುಂದುವರೆಯಬಾರದು ಎಂದು ನಿಶ್ಚಯಿಸಿದೆ. ಫೋನಿನಲ್ಲಿ ತಿಳಿಸುವ ವಿಚಾರವಲ್ಲ. ಅದಕ್ಕಾಗಿಯೇ ವರ್ಕ್ಫ್ರಂ ಹೋಮ್ ಪರ್ಮಿಷನ್ ತೆಗೆದುಕೊಂಡು ಇಲ್ಲಿಗೇ ಬಂದೆ” ಎಂದು ವಿವರವಾಗಿ ಹೇಳಿದಳು ಮಾಲಿನಿ.

(ಮುಂದುವರಿಯುವುದು)https://surahonne.com/?p=45924
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  :

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *