ಏಕಾದಶ ಸ್ಕಂದ –ಅಧ್ಯಾಯ –2
ಇಪ್ಪತ್ತನಾಲ್ಕು ಗುರುಗಳು – 1
ಯಾವಬಗೆಯ ಆಶಾಮೋಹಾದಿಗಳಿಗೂ
ಬದ್ಧನಾಗದೆ ಆತ್ಮಾನಂದವ ಅನುಭವಿಸುತ್ತಿರ್ಪ
ಅವಧೂತ ಬ್ರಾಹ್ಮಣನ ಗುರುಗಳಾರೆಂದು
ಯದುರಾಜ ತಿಳಿಯ ಬಯಸೆ
ಬ್ರಾಹ್ಮಣನರುಹಿದ ಇಪ್ಪತ್ತನಾಲ್ಕು ಗುರುಗಳ
ಮತ್ತವರಿಂದ ಕಲಿತ ಪಾಠಗಳ
ವಿವರಗಳಿಂತಿರ್ಪುವು
1. ಮೊದಲಿಗೆ ಭೂಮಿ – ಕ್ಷಮಾಗುಣ ಬೋಧಿಸಿ
ಸಕಲರೂ ತನ್ನ ತುಳಿದು ಮೆಟ್ಟಿ ಹಿಂಸಿಸಿದರೂ
ಪ್ರತಿಕ್ರಿಯೆ ನೀಡದೆ ತನ್ನಲ್ಲೇ ಹುಟ್ಟಿ ಬೆಳೆದ
ವೃಕ್ಷ ವನಸ್ಪತಿ ಪರ್ವತಗಳು
ಪರೋಪಕಾರಿಯಾಗಿರುವಂತಿರಲು
ಕಲಿಸಿದಳು
2. ವಾಯು – ಚಂದನ ಅಗ್ನಿ ಸುಗಂಧ ದುರ್ಗಂಧಗಳ
ಶೀತೋಷ್ಣಾದಿ ವಸ್ತುಗಳ ಮೇಲೆ ಬೀಸಿಬಂದರೂ
ಆ ಗುಣಗಳನಂಟಿಸಿಕೊಳ್ಳದಿರುವಂತೆ ಯೋಗಿಯೂ
ಪ್ರಿಯಾಪ್ರಿಯ ವಿಷಯಗಳ ಇಂದ್ರಯದಿಂ ಅನುಭವಿಸಿಯೂ
ಸುಖ ದುಖಃ ಉದ್ವೇಗಾದಿಗಳ ಹೊಂದದೆ ನಿರ್ಲಿಪ್ತವಾಗಿರ್ಪ
ಬುದ್ಧಿಯ ಕಲಿತೆ
3. ಆಕಾಶ – ಅಂತರಿಕ್ಷದಲ್ಲಿರ್ಪ ಮೇಘಗಳು ಪೃಥ್ವಿ ಅಪ್ಪು
ಮತ್ತು ತೇಜೋಮಯ ಅಂಶಗಳಲಿ ಸಕಲವೂ ವಾಯುವಿನಿಂದ
ಚಲಿಸುತ್ತ ಸುತ್ತ ವ್ಯಾಪಿಸಿದ್ದರೂ ಸ್ಪರ್ಶವಿಲ್ಲದಂತಿರುವ ಆಕಾಶದಿಂ
ಚರಾಚರ ವಸ್ತುಗಳೊಳಗೆಲ್ಲ ವ್ಯಾಪಿಸಿಯೂ ವಸ್ತು ಲೋಪಕ್ಕೀಡಾಗದೆ
ಆಕಾಶದ ಪರಿ ನಿರ್ಲಿಪ್ತನಾಗಿರುವುದ ಕಲಿತೆ
4. ಜಲ – ನೀರು ತಾನು ಸ್ವಚ್ಛವಾಗಿ ತನ್ನ ಸೇವಿಸಿದವರನ್ನೂ
ಪಾವನಮಾಡುವಂತೆ ಸಾಧಕ ಮುನಿಯೂ ತನ್ನ ದರ್ಶನ
ಸಂಭಾಷಣೆಗಳಿಂದ ನಿರ್ಮಲ ಮನಸ್ಥಿತಿಗಳನ್ನುಂಟು
ಮಾಡುವುದ ಕಲಿತೆ
5. ಅಗ್ನಿ – ಸ್ವಂತ ತೇಜಸ್ಸಿನಲಿ ಶುದ್ಧಾಶುದ್ಧ ವಸ್ತುಗಳ
ದಹಿಸಿಯೂ ಸ್ವತಃ ಶುದ್ಧವಾಗಿರ್ಪ ತೆರದಿ
ಯೋಗಿ ಜ್ಞಾನ ತಪಸ್ಸಾದಿ ಕ್ರಿಯೆಗಳಿಂದ
ತೇಜಸ್ಸನ್ನು ಬೆಳಗಿಸಿಕೊಂಡು
ಉದರಾಭರಣಕ್ಕಾಗಿ ಮಾತ್ರ ಆಹಾರ ಸೇವಿಸಿ
ಬೂದಿ ಮುಚ್ಚಿದ ಕೆಂಡದ ಪರಿ
ಆಡಂಬರಾದಿಗಳ ತೋರ್ಪಡದೆ ಸಕಲರ
ಪಾಪಗಳ ದಹಿಸುವ ಪರಿಯನೂ
ಅಗ್ನಿಯು ತಾನು ದಹಿಸುವ ವಸ್ತುಗಳ
ಆಕಾರದಲ್ಲೇ ಇರುವ ಪರಿ
ದೇವ-ಮನುಷ್ಯ-ಪಶು ಚರಚರಾತ್ಮಕ
ದೇಹಗಳಲಿ ಆಯಾ ರೂಪಗಳಲ್ಲೇ
ಕಂಡು ಬರುವುದನು ಗ್ರಹಿಸಿದನು
6. ಚಂದ್ರ – ಶಶಿಯ ಬಿಂಬದ ಕಳೆಗಳಿಗೆ ಆಗುವ
ವೃದ್ಧಿ ಕ್ಷಯಗಳು ಚಂದ್ರನಿಗೆ ಇಲ್ಲದಂತೆಯೂ
ಮನುಜಗೆ ಬಾಲ್ಯ ಯೌವನ ಕೌಮಾರ್ಯ
ಅವಸ್ಥೆಗಳಲಿ ಉಂಟಾಗುವ ಸುಖ ದುಖಃ
ವೃದ್ಧಿ ಕ್ಷಯಾದಿಗಳು ಕಾಲವೇಗದಿ
ಪಡೆದ ವಿಕಾರಗಳೇ ಹೊರತು
ಜೀವಾತ್ಮನಿಗೇನೂ ವಿಕಾರವಿಲ್ಲ
ಎಂಬುದ ಚಂದ್ರನಿಂದ ಕಲಿತೆ
7. ಸೂರ್ಯ – ದಿನಕರ ಕೆರೆ ಭಾವಿಗಳ ಜಲವ
ಕಿರಣರೂಪದಿ ಸ್ವೀಕರಿಸಿ ಮಳೆಯ ರೂಪದಿ
ಲೋಕಕೆ ನೀಡಿ ಉಪಕರಿಪ ರೀತಿ
ಅಂತರಿಕ್ಷದ ಸೂರ್ಯ ನೀರು ಕನ್ನಡಿಗಳಲಿ ಪ್ರಿತಿಬಿಂಬಿಸಿದರೂ
ಅವುಗಳ ಸಂಸರ್ಗವೇ ಇಲ್ಲದ ಪರಿ
ಅಂತರಾತ್ಮನೂ ವಿವಿಧ ಶರೀರಗಳಿದ್ದೂ
ಅದರ ಸ್ವಭಾವಕೆ ಈಡಾಗದಿರುವುದ
ಸೂರ್ಯನಿಂ ಕಲಿತೆ
8. ಕಪೋತ ಪಕ್ಷಿ – ಕಪೋತ ಪಕ್ಷಿಯು
ಭಾರ್ಯೆಯೊಡನೆ ಗೂಡು ಕಟ್ಟಿ ಮೊಟ್ಟೆಗಳಿಟ್ಟು
ಹೆಣ್ಣು ಪಕ್ಷಿಯ ಇಚ್ಛೆಯಲಿ ಗಂಡು ಪಕ್ಷಿ
ಅಲೆದಲೆದು ಆಹಾರ ತಂದು ಮರಿಗಳಿಗೆ ಉಣಿಸಿ ಬೆಳೆಸಿ
ನಂತರದಿ ಆಹಾರ ಸಂಪಾದನೆಗೆ
ದೂರ ನಡೆದಾಗ ಹೆಣ್ಣು ಪಕ್ಷಿ
ಬೇಟೆಗಾರನ ಬಲೆಗೆ ಬಲಿಯಾದುದ ಕಂಡು
ದುಖಃದಿ ಮರಣಿಪ ಪರಿ
ಮನುಜನೂ ಸದ್ಗತಿ ಸಾಧನೆಗೆ ಅಕರವಾದ
ಮನುಜ ಜನುಮ ದೊರಕಿದರೂ
ಮಡದಿ ಮಕ್ಕಳ ಮೋಹದಿ ನಾಶವಾಗುವ ಪರಿ
ಕಪೋತ ಪಕ್ಷಿಯಂತೆ ನಾಶವಾಗುವುದನು
ನೋಡಿ ಕಲಿತೆ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45917

-ಎಂ. ಆರ್. ಆನಂದ, ಮೈಸೂರು

