ಬೊಗಸೆಬಿಂಬ

ಸಂವಹನ

Share Button

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದೊಂದು ಗಾದೆ ಮಾತಿದೆ. ಹೌದು ಬಾಯಿಂದ ಹೊರಬರುವ ಮಾತುಗಳಿಂದ ಎಷ್ಟೋ ವೇಳೆ ಅನಾಹುತಗಳೇ ನಡೆದು ಹೋಗುತ್ತದೆ. ಹಾಗೆಯೇ ಮಾತು ಬಲ್ಲ ಜಾಣರು ತಮ್ಮ ವಾಕ್ ಚಾತುರ್ಯದಿಂದ ಮಹತ್ತರವಾದುದನ್ನೇ ಸಾಧಿಸಿಬಿಡುತ್ತಾರೆ. ಹಿಂದಿನ ಕಾಲದಲ್ಲಿ ಕುಟುಂಬದ, ಸುತ್ತಮುತ್ತಿನ ಜನಜೀವನದಿಂದಷ್ಟೇ ಕಲಿತ ಮಾತುಗಳಿಂದ ಸಂವಹನ ಕ್ರಿಯೆ ನಡೆಯುತಿತ್ತು. ಆದರೆ ಇತ್ತೀಚೆಗೆ ಅದಕ್ಕೆಂದೇ ತರಗತಿಗಳು ನಡೆಯುತ್ತವೆ. ಅಲ್ಲಿ ಹೇಗೆ ಮಾತನಾಡಬೇಕು, ಎಲ್ಲಿ ಎಷ್ಟು ಒತ್ತು ಕೊಡಬೇಕು, ಯಾವ ರೀತಿ ಮಾತನಾಡಬಾರದು, ಎಂಬೆಲ್ಲ ರೀತಿಯ ತರಬೇತಿ ನೀಡುತ್ತಾರಂತೆ. ಉನ್ನತ ವ್ಯಾಸಂಗದಲ್ಲೂ, ಆಡಳಿತಾತ್ಮಕ ವಿದ್ಯಾಭ್ಯಾಸದಲ್ಲೂ ಸಂವಹನದ ಒಂದು ವಿಭಾಗ ಕಡ್ಡಾಯವಾಗಿ ಇರುತ್ತದಂತೆ. ಮತ್ತದೇ ಗಾದೆಯ ಮೊರೆ ಹೊಕ್ಕರೆ, – ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಬರುತ್ತದೆ – ಎಂದು ಹಿರಿಯರು ಹೇಳಿರುವುದನ್ನು ಕೇಳಿದ್ದೇವೆ ಆದರೆ ಅವನ್ನೆಲ್ಲಾ ಓಲ್ಡ್‌ ಫ್ಯಾಷನ್‌ ಎಂದು ಯುವ ಜನರನ್ನು ನಂಬಿಸಿ, ಕಮ್ಯೂನಿಕೇಷನ್‌ ಸ್ಕಿಲ್‌ ಎಂಬ ಚಂದದೊಂದು ಆಂಗ್ಲ ಹೆಸರಿನಿಂದ ಕರೆದು ದೊಡ್ಡ ಮೊತ್ತದ ಫೀ ವಸೂಲಿ ಮಾಡಿ ʼಸಂವಹನ ನಡೆಸುವುದು ಹೇಗೆʼ ಎಂದು ಹೇಳಿಕೊಡುತ್ತಾರಂತೆ. ಹೇಳಿಕೊಟ್ಟ ಮಾತುಗಳು ಎಷ್ಟು ದಿನ ಬರುತ್ತೋ ತರಗತಿಗಳಿಗೆ ಹೋದವರನ್ನೇ ಕೇಳಬೇಕು. ಅವರುಗಳೂ ತಾವುಗಳು ಕುರಿಗಳಂತೆ ಬಿದ್ದ ಹಳ್ಳಕ್ಕೆ ಇತರರೂ ಬಿದ್ದು ಹಣ ಕಳೆದುಕೊಳ್ಳಲಿ ಎಂದು ಅತೀ ಒಳ್ಳೆಯ ಅಭಿಪ್ರಾಯವನ್ನೇ ನೀಡಬಹುದೆಂಬುದು ನನ್ನ ಗುಮಾನಿಯಷ್ಟೇ.

ಕೆಲವು ಚಾಣಾಕ್ಷ ಸಂವಹನಕಾರರು ಆಕಾಶದಲ್ಲಿರುವ ಸೂರ್ಯ ಚಂದ್ರ ನಕ್ಷತ್ರ ತಾರೆಗಳನ್ನೆಲ್ಲಾ ನಮ್ಮ ಅಂಗೈಯಲ್ಲಿ ತಂದು ಕೂರಿಸುತ್ತಾರೇನೋ ಎಂಬಷ್ಟೇ ಚೆಂದದ ಮಾತುಗಳನ್ನಾಡುತ್ತಾರೆ. ಅದಕ್ಕೊಂದು ಸೊಗಸಾದ ಉದಾಹರಣೆ ನಮ್ಮ ರಾಜಕಾರಣಿಗಳು. ಚುನಾವಣೆ ಸಮಯದಲ್ಲಿ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿ ನಂತರದಲ್ಲಿ ಮುಂದಿನ ಚುನಾವಣೆಗಳವರೆಗೆ ಇತ್ತ ತಲೆಯಿಟ್ಟು ಮಲಗುವುದೂ ಇಲ್ಲ. ಆದಾಗ್ಯೂ ಅವರುಗಳ ವಾಗ್ಝರಿಗೆ ಮನಸೋತು ಮಂಗಗಳಾದ ಮತದಾರರು ಮತ ನೀಡಿ ನಂತರ ಕೈ ಕೈ ಹಿಸುಕಿಕೊಳ್ಳುತ್ತಾರೆ.

ಸಂವಹನ ಅಥವಾ ಮಾತುಗಾರಿಕೆಯ ಕುರಿತು ಮತ್ತೂ ಒಂದು ಗಾದೆ ಮಾತಿದೆ. ಅದನ್ನು ನಮ್ಮ ಹಿಂದಿನ ಚಲನಚಿತ್ರದಲ್ಲೂ ಅಳವಡಿಸಿಕೊಂಡಿದ್ದರು, ಜ್ಞಾಪಿಸಿಕೊಳ್ಳೀ,. . ಅದೇ . . ಮಾತೇ ಮುತ್ತು, ಮಾತೇ ಮೃತ್ಯು . . . ಎಂಬ ಸಾಲುಗಳು. ಹೌದು ಕೆಲವೊಮ್ಮೆ ಆಡಿದ ಮಾತುಗಳು ಹೃದಯಕ್ಕೆ ನೆಟ್ಟ ಮುಳ್ಳಿನಂತಾಗಿ ಸದಾ ಚುಚ್ಚಿ ಚುಚ್ಚಿ ನೋಯಿಸುತ್ತಿರುತ್ತದೆ. ಆದರೆ ಅದೇ ನಲ್ನುಡಿಗಳು ಮನವನ್ನು ಪ್ರಫುಲ್ಲಗೊಳಿಸುತ್ತವೆ. ಆಡಿದವರ ಕುರಿತು ಸದ್ಭಾವನೆ ಮೂಡುವಂತೆ ಮಾಡುತ್ತದೆ. ಇರುವ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸುತ್ತದೆ. ಈ ಹೊತ್ತಿನಲ್ಲಿ ನನ್ನ ಮನಕ್ಕೆ ಬಂದುದೊಂದು ವಿಚಾರ ಯುದ್ಧಭೂಮಿಯಲ್ಲಿ, ಗಂಡಾತರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ವೀರಾವೇಶದ, ಪ್ರೋತ್ಸಾಹದಾಯಕ ಮಾತುಗಳು ತುಂಬಾ ಒಳ್ಳೆಯ ಪರಿಣಾಮವನ್ನು ಬೀರುತ್ತವೆ.

ಇಲ್ಲಿ ಮುಖ್ಯವಾದ ಒಂದು ಅಂಶವನ್ನು ಮರೆಯುವಂತಿಲ್ಲ. ಇಂಗ್ಲೀಷಿನಲ್ಲಿ ಫೇಸ್‌ ಈಜ಼್ ಇಂಡೆಕ್ಸ್‌ ಆಫ್‌ ಮೈಂಡ್‌ ಎನ್ನುತ್ತಾರೆ, ಮುಖಭಾವಗಳು ಮನಸ್ಸಿನ ಕೈಗನ್ನಡಿ ಎನ್ನಬಹುದೇನೋ, ಆದರೆ ಸಂವಹನ ಹಾಗಲ್ಲ. ನರವಿಲ್ಲದ ನಾಲಿಗೆ ನಾವು ಕುಣಿಸಿದಂತೆ ಕುಣಿಯುತ್ತದೆ, ಆಡಿಸಿದಂತೆ ಆಡುತ್ತದೆ. ಏಕೆಂದರೆ ಕೆಲವರು ಮನಸ್ಸಿನಲ್ಲಿ ವಿಷವನ್ನೇ ತುಂಬಿಕೊಂಡಿದ್ದರೂ ತಮ್ಮ ಸಂವಹನ ಚಾತುರ್ಯದಿಂದ ಜೇನಿಗಿಂತ ಸಿಹಿಯಾದ ಮಾತುಗಳನ್ನು ಆಡುತ್ತಾರೆ. ಆದರೆ ಮನದಲ್ಲಿ ಯಾವುದೇ ಸುವಿಚಾರಗಳೂ ಇರುವುದಿಲ್ಲ. ತಮ್ಮ ಕೆಲಸವಾಗಬೇಕಿದ್ದರೆ, ಕಾರ್ಯವಾಸಿ ಕತ್ತೆಕಾಲು ಕಟ್ಟು ಅಥವಾ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಚಂದದ ಮಾತುಗಳನ್ನಾಡಿ ತಮ್ಮ ಕಾರ್ಯವನ್ನು ಸಾಧಿಸಿಕೊಂಡುಬಿಡುತ್ತಾರೆ. ಅದೇ ಕೆಲವರು ಮನಸ್ಸು ಮೃದುವಾಗಿದ್ದರೂ ಒಳ್ಳೆಯ ಭಾವನೆಗಳೂ ಒಳ್ಳೆಯ ವಿಚಾರಗಳೂ ಮನದಲ್ಲಿ ತುಂಬಿದ್ದರೂ ಸಂವಹನಾ ಚಾತುರ್ಯದ ಕೊರತೆಯಿಂದಾಗಿ ತಮ್ಮ ಮನದ ಭಾವನೆಗಳನ್ನು ಹೊರಗೆಡವಲಾಗದೆ ಬೇರೆಯವರ ದೃಷ್ಠಿಯಲ್ಲಿ, ಕೆಲವೊಮ್ಮೆ ತಮ್ಮ ಪ್ರೀತಿಪಾತ್ರರ ದೃಷ್ಠಿಯಲ್ಲೀ ನಿಕೃಷ್ಠರಾಗಿಬಿಡುತ್ತಾರೆ.

ಹಾಗಾಗಿ ಸಂವಹನ ಕಲೆಯ ಕುರಿತಾಗಿಯೂ ಕೊಂಚ ಗಂಭೀರವಾಗಿ ಯೋಚಿಸಿ ಸ್ವಲ್ಪವಾದರೂ ರೂಢಿಸಿಕೊಂಡರೆ, ನಮ್ಮ ಮನದ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಹೊರಹೊಮ್ಮಿಸುವುದ ಸಾಧಿಸಿದರೆ ಅದರಿಂದ ದೊರೆಯುವ ಫಲಿತಾಂಶವಂತೂ ಖಂಡಿತಾ ಸಿಹಿಯಾಗಿರುತ್ತದೆ. ಅದೇ ಮತ್ತೊಂದು ಗಾದೆ ಮಾತು, ನಿಮಗೆಲ್ಲಾ ಗೊತ್ತಲ್ಲಾ – ಮಾತು ಬಲ್ಲವನಿಗೆ ಜಗಳವೇ ಇಲ್ಲ, ಊಟ ಬಲ್ಲವನಿಗೆ ರೋಗವಿಲ್ಲ – ಎಂಬ ಮಾತು. ಎಷ್ಟು ಸರಳವಾಗಿದೆಯೆಂದರೆ ಅದರ ಕುರಿತಾಗಿ ಯಾವುದೇ ವಿವರ ನೀಡಲು ನಾನು ಹೋಗುವುದಿಲ್ಲ.

ಕೆಲವಾರು ಉದಾಹರಣೆಗಳನ್ನು ನೋಡಿದರೆ ಜೀವನದಲ್ಲಿ ಸಂವಹನದ ಮಹತ್ವದ ಅರಿವಾಗುತ್ತದೆ.

ಮೊದಲೊಂದೆರಡು ಸಲ ಸಿಹಿಲೇಪಿತ ಗುಳಿಗೆಯಂತೆ ಕೆಲವರ ಮಾತುಗಳಿಂದ ಪ್ರಭಾವಿತರಾದರೂ ಬೇಗದಲ್ಲೇ ಕೃತಿಮತೆಯ ಅರಿವಾಗಿಬಿಡುತ್ತದೆ.

ಗಗನ ಸಖಿಯರು ಕೆಲವೊಮ್ಮೆ ವ್ಯಾವಹಾರಿಕವಾಗಿ ನಗುತ್ತಾ ವಂದನೆಗಳನ್ನು ಸಲ್ಲಿಸಿದಾಗ, ಕೃತಿಮತೆ ಎದ್ದು ಕಾಣುತ್ತದೆ. ಅದೇ ಬಿಸಿಲಿನಲ್ಲಿ ಹಳ್ಳಿಯ ಕಡೆ ನಡೆದು ಹೋಗುತ್ತಿರುವಾಗ ಯಾರದಾದರೂ ಮನೆಯಲ್ಲಿ ಕೆಲವಾರು ಘಳಿಗೆ ವಿಶ್ರಾಂತಿಗಾಗಿ ತಂಗಿದಾಗ, ಆ ಮನೆಯ ಅಜ್ಜಿ, ಗಡಸು ದನಿಯಲ್ಲಿ, – ಬಿಸಿಲಿನ ಸಮಯವಾಯಿತು, ರಾಗಿಯ ಅಂಬಲಿ ಕೊಡುತ್ತೇನೆ, ಉಂಡು ನೀರುಮಜ್ಜಿಗೆಯನ್ನು ಕುಡಿದೇ ಮುಂದೆ ಹೋಗಬೇಕೆಂದಾಗ – ಅವರಲ್ಲಿರುವ ಆತಿಥ್ಯ ನೀಡಲು ಬಯಸುವ ಹೃದಯವನ್ನೂ ಅಂತಃಕರಣವನ್ನೂ ಗುರುತಿಸದಿರುವುದೇ ಮನಸ್ಸು?

ಒಮ್ಮೆ ವಯಸ್ಸಾದ ಮಹಿಳೆಯೊಬ್ಬರು ತಮ್ಮ ಪತಿಯನ್ನು ಕಳೆದುಕೊಂಡು ಕೆಲವಾರು ದಿನಗಳ ನಂತರ ಮತ್ತೊಂದು ಬಡಾವಣೆಯಲ್ಲಿದ್ದ ಮಗನ ಮನೆಗೆ ಬರುವಾಗ ಎದುರಿಗೆ ಸಿಕ್ಕ ನೆರೆಯವರು ಕೇಳಿದ್ದು – ಚೆನ್ನಾಗಿದ್ದೀರಾ? ಎಂದು. ಏನೂ ಉತ್ತರಿಸದೆ ದುಡುದುಡು ಬಂದ ಆಕೆ ದಿನಪೂರ್ತಿ ಅಳುತ್ತಿದ್ದರು. ನನಗನಿಸಿದ್ದು, ʼಹೇಗಿದ್ದೀರೀ?ʼ ಎನ್ನಬಹುದಿತ್ತಲ್ಲವೇ ಎಂದು.

ಮತ್ತೊಬ್ಬ ಮಹಿಳೆ, ಅವರ ಮಕ್ಕಳುಗಳು ವಿದೇಶದಲ್ಲಿದ್ದು ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದರು, ಬಡತನದಿಂದ ಮೇಲೆ ಬಂದು ಇದೀಗ ಶ್ರೀಮಂತಿಕೆಯ ಮೆಟ್ಟಲೇರಿದ್ದರು. ಆಕೆಯ ತಮ್ಮ, ಚಿಕ್ಕದೊಂದು ನೌಕರಿಯಲ್ಲಿದ್ದು ನಿವೃತ್ತಿ ಹೊಂದಿದಾಗ, ಎಲ್ಲಿ ಕಮ್ಮಿ ಕೇಳಿದರೆ ಜಂಬ ಎಂದುಕೊಳ್ಳುತ್ತಾರೋ ಎಂಬ ಹಿಂಜರಿಕೆಯಿಂದ ಕೇಳಿದ್ದು –ರಿಟೈರ್‌ ಆದಾಗ ನಿನಗೆ ಕೋಟಿ ಹಣ ಬಂತೇ – ಎಂದು. ಈಗ ನಿಜಕ್ಕೂ ಅವರಿಗೆ ʼಜಂಬ ಬಂದಿದೆʼ ಎಂಬ ಹಣೆಪಟ್ಟಿ ಅಂಟಿಬಿಟ್ಟಿತು. ನನಗನಿಸಿದ್ದು, ಕೇಳಲೇಬಾರದಿತ್ತು, ಅಕಸ್ಮಾತ್‌ ಕೇಳಿದ್ದರೂ ʼಎಷ್ಟು ಬಂತುʼ ಎನ್ನಬಹುದಿತ್ತಲ್ಲವೇ?

ತುಂಬಾ ವಯಸ್ಸಿನ ಅಂತರವಿದ್ದ ಅಣ್ಣತಮ್ಮಂದಿರು ಬಂದಾಗ ಕೇಳಿದ ಪ್ರಶ್ನೆ – ನಿಮ್ಮ ಮಗನಾ? – ಪಾಪ, ಆ ಅಣ್ಣನಿಗೆ ಮದುವೆಯೇ ಆಗಿರಲಿಲ್ಲ. ಆತ ಮುಖ ಚಿಕ್ಕದು ಮಾಡಿಕೊಂಡು – ಇವನು ನನ್ನ ತಮ್ಮ, ನನಗಿನ್ನೂ ಮದುವೆಯೇ ಆಗಿಲ್ಲ – ಎನ್ನುವಾಗ ಆತನ ಮನಸ್ಸಿಗಾದ ನೋವು, ಇರುಸು ಮುರುಸು ಎದ್ದು ಕಾಣುತಿತ್ತು. – ಇವರು ಯಾರು, ತಿಳಿಯಲಿಲ್ಲಾ, – ಎನ್ನಬಹುದಿತ್ತಲ್ಲವಾ?

ವಯಸ್ಸಾದರೂ ಬರ್ಮುಡಾ ಹಾಕಿಕೊಂಡು ತಲೆಯ ಕೂದಲು, ಮೀಸೆಗೆ ಬಣ್ಣ ಹಚ್ಚಿಕೊಂಡು ಬೆಳೆದ ಮಗಳೊಂದಿಗೆ ಜಾಗಿಂಗ್‌ ಹೊರಟ ವ್ಯಕ್ತಿಯನ್ನು – ದಂಪತಿ ತುಂಬಾ ಜೋಶ್‌ ನಿಂದ ಹೊರಟುಬಿಟ್ಟಿದ್ದೀರಿ – ಎಂದು ಎದುರಿಗೆ ಸಿಕ್ಕ ಪರಿಚಿತರೊಬ್ಬರಿಂದ ಬಂದ ಪ್ರತಿಕ್ರಿಯೆ ಪಾಪ ಆ ಹುಡುಗಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಅಟೋದಲ್ಲಿ ಫಿಯಾನ್ಸಿಯೊಂದಿಗೆ ಚಲನಚಿತ್ರಕ್ಕೆ ಹೋಗಿಬಂದ ಯುವತಿಯನ್ನು ಮಾರನೆಯ ದಿನ ಸಹಪಾಠಿಯೊಬ್ಬಳು – ನಿನ್ನೆ ನಿಮ್ಮ ತಂದೆಯೊಂದಿಗೆ ಆಟೋದಲ್ಲಿ ಹೋಗುತ್ತಿದುದನ್ನು ನೋಡಿದೆ – ಎಂದಾಗ ಯುವತಿಯ ಮೊಗ ಬಾಡಿಹೋಯಿತು. ವಾಸ್ತವದಲ್ಲಿ ಆದದ್ದು – ಬರಿಯ ಪುರುಷನ ಉಡುಪು ಕಾಣಿಸಿದ್ದಕ್ಕೆ ತನ್ನ ಊಹೆಯನ್ನು ಸೇರಿಸಿ ನಡೆಸಿದ ಸಂವಹನದ ಪರಿಣಾಮ ಇದಾಗಿತ್ತು.

ಆಯೋಜಕರೊಬ್ಬರು ಆತ್ಮೀಯರಾಗಿದ್ದ ಎಲ್ಲಕ್ಕೂ ಸಹಾಯ ಹಸ್ತವನ್ನು ಚಾಚುತ್ತಿದ್ದ ಸ್ನೇಹಿತರನ್ನು ಆಹ್ವಾನಿಸಲು ಕರೆಮಾಡಿ – ಖಂಡಿತಾ ಬರಬೇಕು, ಬಂದು ಕುರ್ಚಿ ಮೇಜುಗಳನ್ನೂ ಜೋಡಿಸಲೂ ಸಹಕರಿಸಬೇಕು – ಎನ್ನಬೇಕೇ? ಒಳಬಂದು ಹೆಂಡತಿಯೊಂದಿಗೆ, ಅವರು ಎಷ್ಟು ಒಳ್ಳೆಯವರು, ಸಹೃದಯರು, ಅಂಥಹವರು ಕಾರ್ಯಕ್ರಮಕ್ಕೆ ಬಂದರೆ ಶೋಭೆ ಹೆಚ್ಚುತ್ತದೆ – ಎಂದಾಗ ತಲೆ ತಲೆ ಚಚ್ಚಿಕೊಂಡ ಅವರ ಹೆಂಡತಿ, ನನ್ನ ಮುಂದೆ ಹೇಳಿದ ಮಾತುಗಳನ್ನು ಅವರ ಮುಂದೆಯೂ ಅವರ ಮುಂದೆ ಹೇಳಿದ ಮಾತುಗಳನ್ನು ನನ್ನ ಮುಂದೆಯೂ ಆಡಬಾರದಿತ್ತೇ, ಆಡಬೇಕಲ್ಲವೇ, ಎಂದಾಗಲೂ ತಲೆಗೆ ಹಚ್ಚಿಕೊಳ್ಳದಿರುವವರನ್ನು ಯಾವ ಸಂವಹನ ಕಾರ್ಯಾಗಾರಕ್ಕೆ ಕಳಿಸೋಣ ನೀವೇ ಹೇಳಿ?

ಇಂದಿಲ್ಲಿಗೆ ಸಂವಹನ ಕಥಾಮೃತಸಾರವನ್ನು ಸಮಾಪ್ತಿಗೊಳಿಸೋಣವೆ, ಇಲ್ಲದಿದ್ದಲ್ಲಿ ಚಂದಾ ಎತ್ತಿ ಓದುಗರು ನನ್ನನ್ನೂ ಸಂವಹನ ತರಗತಿಗೆ ಕಳುಹಿಸುವುದರಲ್ಲಿ ಸಂಶಯವೂ ಇಲ್ಲ, ಸಂದೇಹವೂ ಇಲ್ಲ.

–ಪದ್ಮಾ ಆನಂದ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *