(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಆಗಸ್ಟ್ 06, 2026ರಂದು ಸೂರ್ಯೋದಯವಾಗಿ, ಬೆಳಕು ಪಸರಿಸಿ ನಮ್ಮನ್ನು ಎಬ್ಬಿಸಿತು.
ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯ ‘ನಾರ್ಕಂಡ್’ ನಲ್ಲಿರುವ ಹೋಟೆಲ್ ರಣವೀರ್ ಪ್ಯಾಲೇಸ್ ಅನುಕೂಲಕರವಾಗಿತ್ತು. ಮುಂಜಾನೆ ಬಾಲ್ಕನಿಯಿಂದ ನೋಡಿದರೆ, ಊಟಿಯಂತಹ ಪರಿಸರದಲ್ಲಿ ನಾವು ಇದ್ದೇವೆ ಎಂದು ಗೊತ್ತಾಯಿತು. ಹಿತವಾದ ಮಂಜು, ಮಳೆಯ ಭಾರಕ್ಕೆ ತೂಗಿ ತೊನೆಯುತ್ತಿದ್ದ ದೇವದಾರು, ಪೈನ್ ಮೊದಲಾದ ವೃಕ್ಷಗಳು , ಸುತ್ತುಮುತ್ತಲೂ ಫಲ ಬಿಟ್ಟಿದ್ದ ಸೇಬು ಹಣ್ಣಿನ ಮರಗಳು ಕಣ್ಣಿಗೂ ಮನಸ್ಸಿಗೂ ತಂಪನ್ನೆರೆದುವು. ನಮ್ಮ ಅಂದಿನ ಮೊದಲ ಕಾರ್ಯಕ್ರಮ ‘ಹಾಟು ಮಾತಾ ಮಂದಿರ ಭೇಟಿ ಕೊಡುವುದಾಗಿತ್ತು. ಇದು ಹೋಟೆಲ್ ನಿಂದ ಅಂದಾಜು 7 ಕಿಮೀ ದೂರದಲ್ಲಿ, ಸಮುದ್ರಮಟ್ಟದಿಂದ 11500 ಅಡಿ ಎತ್ತರದಲ್ಲಿರುವ ‘ಹಾಟು’ ಪರ್ವತ ಶಿಖರದಲ್ಲಿದೆ. ಟ್ರಾವೆಲ್ಸ್ ಫಾರ್ ಯು ನವರು ನಾಲ್ಕು ಜೀಪ್ ವ್ಯವಸ್ಥೆ ಮಾಡಿದ್ದರು. ನಾಲ್ಕು ಜೀಪ್ ಗಳು ಹೊರಟವು. ದಾರಿಮಧ್ಯೆ, ನಾವಿದ್ದ ಜೀಪ್ ನಲ್ಲಿ ಏನೋ ತೊಂದರೆಯಾಗಿ, ನಿಂತುಬಿಟ್ಟಿತು. ಚಾಲಕ ಸರಿಪಡಿಸಲು ಪ್ರಯತ್ನಿಸುತ್ತಿದ್ದರು.
ಆ ಪರಿಸರ ಚೆನ್ನಾಗಿದೆಯೆಂದು ಶೋಭನಾ ಮತ್ತು ನಾನು ಅಲ್ಲಿದ್ದ ಹಿಮಾಚ್ಚಾದಿತ ಕಣಿವೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಕಾಲಕ್ಷೇಪ ಮಾಡಿದೆವು. ಸ್ವಲ್ಪ ಮೊದಲು , ‘ಹಾಟು ಮಂದಿರ’ಕ್ಕೆ ಇನ್ನು ಒಂದು ಕಿಮೀ ದೂರವಿದೆ ಎಂಬ ಫಲಕ ನೋಡಿರುವುದು ನೆನಪಾಯಿತು. ಇನ್ನು ಸ್ವಲ್ಪ ದೂರ ತಾನೇ, ನಾವು ನಡೆಯಬಲ್ಲೆವು ಎಂದೆವು ಅತ್ಯುತ್ಸಾಹದಿಂದ. ಎತ್ತರದ ಪರ್ವತಭಾಗದಲ್ಲಿ, ಏರುಮಾರ್ಗದಲ್ಲಿ, ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ಏದುಸಿರು ಬರಲು ಶುರುವಾಯಿತು. ‘ಇಷ್ಟೇನಾ ನಿಮ್ಮ ಆರಂಭಶೂರತ್ವ?’ ಎಂದು ಪರ್ವತವು ಅಣಕಿಸಿದಂತಾಯಿತು. ಆಮೇಲೆ, ಬಂದ ಇನ್ನೊಂದು ಜೀಪಿನಲ್ಲಿ ಪ್ರಯಾಣಿಸಿ , ಮಂದಿರದ ಬಳಿ ತಲಪಿದೆವು.
ಹಿಮಾಚಲಿ ಶೈಲಿಯಲ್ಲಿ , ದೇವದಾರು ಮರದಲ್ಲಿ ಕೆತ್ತಿದ ಆಕರ್ಷಕ ಕಾಷ್ಟ ಶಿಲ್ಪಗಳುಳ್ಳ ಸುಂದರವಾದ ಮಂದಿರವಿದು . ನಿಂತಲ್ಲೇ ಒಂದು ಸುತ್ತು ಹಾಕಿದರೆ ಎಲ್ಲೆಡೆಯೂ ಹಿಮಾಲಯದ ರಮಣೀಯ ನೋಟ. ಚಳಿಯೂ ಜೋರಾಗಿಯೇ ಇತ್ತು. ನಾವು ಹೋಗಿದ್ದ ಸಮಯ ಮುಂಜಾನೆಯಾಗಿತ್ತು. ಸ್ಥಳೀಯ ಅರ್ಚಕರೊಬ್ಬರು ಬಂದು ಪೂಜೆ ನೆರವೇರಿಸಿ, ಕುಂಕುಮ ಪ್ರಸಾದ ಕೊಟ್ಟರು ಹಾಗೂ ಸ್ಥಳ ಪುರಾಣ ತಿಳಿಸಿದರು. ಇಲ್ಲಿ ಆರಾಧಿಸಲ್ಪಡುವ ‘ ಹಾಟು ಮಾತಾ’ ಕಾಳಿಯ ಅವತಾರ ಎಂಬ ನಂಬಿಕೆಯಿದೆ. ರಾವಣನ ಮಡದಿಯಾದ ಮಂಡೋದರಿಯು ಈ ಮಂದಿರದಲ್ಲಿ ದೇವಿಯನ್ನು ಪೂಜಿಸಿದ್ದಳೆಂದೂ ಪ್ರತೀತಿಯಿದೆ.
ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ತಂಗಿದ್ದರೆಂದೂ, ‘ಭೀಮ್ ಚೂಲಾ’ ಎಂಬಲ್ಲಿರುವ ಒಲೆಯಲ್ಲಿ ಅಡುಗೆ ಮಾಡಿದ್ದರೆಂದೂ ಪೌರಾಣಿಕ ಕತೆಗಳೂ ಇವೆ.
‘ಹಾಟು ಮಾತೆ’ಯ ದರ್ಶನಮಾಡಿ, ಹೋಟೆಲ್ ಗೆ ಬಂದು ಪೋಹಾ, ಉಪ್ಪಿಟ್ಟು, ಬ್ರೆಡ್ ಸ್ಯಾಂಡ್ ವಿಚ್ , ಕಾಫಿ/ಚಹಾ ಇದ್ದ ರುಚಿಕಟ್ಟಾಗಿದ್ದ ಉಪಾಹಾರ ಸೇವಿಸಿ , ರಸ್ತೆಬದಿಯಲ್ಲಿದ್ದ ಸೇಬಿನ ಮರಗಳಿಂದ ಹಣ್ಣು ಕೀಳಲು ಸಾಧ್ಯವಿದೆಯೇ ಎಂಬ ಗಮನಿಸುತ್ತಾ, ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.
(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು


