ಕೈಲಾಸ ಎಂದಾಕ್ಷಣ ಮನದಲ್ಲಿ ಮೂಡುವುದು ಶಿವನ ಆಲಯದ ನೋಟ. ‘ಓಂ ನಮಃ ಶಿವಾಯ’ ಎಂಬ ಷಡಕ್ಷರಿ ಮಂತ್ರದ ಪ್ರತಿಧ್ವನಿ ಝೇಂಕರಿಸುತ್ತಿರುವುದು ಕೈಲಾಸದ ಗಿರಿಶಿಖರಗಳಲ್ಲಿ. ಬಾಲ್ಯ, ಮುಪ್ಪಿಲ್ಲದ ತೇಜಸ್ವಿ ತರುಣನೊಬ್ಬ ಕೈಲಾಸದ ಗಿರಿಶಿಖರಗಳ ಮೇಲೇರಿ ಧ್ಯಾನಮಗ್ನನಾಗಿ ಕುಳಿತಿರುವನು. ಪರಶಿವನ ಅರ್ಧಾಂಗಿಯಾದ ಪಾರ್ವತಿಯು ಸನಿಹದಲ್ಲಿ ಮಂದಸ್ಮಿತಳಾಗಿ ಕುಳಿತಿರುವಳು. ತಾಳ್ಮೆಯ ಪ್ರತೀಕವಾದ ಶಿವನ ವಾಹನವಾದ ನಂದಿಯು ತನ್ನ ಆರಾಧ್ಯದೈವವಾದ ಪರಶಿವನನ್ನು ಆರಾಧಿಸುತ್ತಾ ಗಣಂಗಳ ಜೊತೆಗೂಡಿ ನಿಂತಿರುವನು. ವೈರಾಗ್ಯನಿಧಿಯಾದ ಶಿವನಲ್ಲಿ ಕಂಡುಬರುವ ಪಂಚಸೂಚಕಗಳತ್ತ ಗಮನ ಹರಿಸೋಣ ಬನ್ನಿ – ಸಮುದ್ರಮಂಥನದ ಸಮಯದಲ್ಲಿ ಹಾಲಾಹಲವನ್ನು ನುಂಗಿ ನೀಲಕಂಠನಾದವನು ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ಜಯಿಸುವ ಸಂಕೇತ, ಶಿವನ ಹಣೆಗಣ್ಣು ನಮ್ಮೆಲ್ಲರಲ್ಲಿರುವ ಅರಿವಿನ ಒಳಗಣ್ಣಿನ ಪ್ರತೀಕ, ಸ್ಮಶಾನವಾಸಿಯಾದ ಶಿವನು ವೈರಾಗ್ಯದ ಸಂಕೇತ, ತನ್ನ ಜಟೆಯಲ್ಲಿ ಗಂಗೆಯನ್ನು ಹೊತ್ತಿರುವ ಶಿವನು ನಮ್ಮೆಲ್ಲರ ನೆತ್ತಿ ತಂಪಾಗಿಸಿ ಶಾಂತಿಯಿಂದ ಬಾಳಲಿ ಎಂಬುದರ ಸೂಚಕ, ಅರ್ಧನಾರೀಶ್ವರನಾದ ಶಿವನು ಶಿಸ್ತು, ಪರಿಶ್ರಮದ ಜೊತೆಜೊತೆಗೇ ದಯೆ, ತಾಳ್ಮೆ ಹಾಗೂ ಕರುಣೆಯ ಸಂಕೇತ. ಹಿಮಪರ್ವತಗಳ ಮಡಿಲಲ್ಲಿ ತಪಗೈವ ಈ ಶಿವನನ್ನು ಕಾಣುವುದಾದರೂ ಹೇಗೆ?
ನನ್ನ ಕುತೂಹಲಕ್ಕೆ ಪರಿಹಾರ ದೊರೆತದ್ದು ಹೇಗೆ ಅಂತೀರಾ? ಬೆಂಗಳೂರು ನಿವಾಸಿಯಾಗಿರುವ ನಿರ್ಮಲಕ್ಕ ಪದೇ ಪದೇ ನನಗೆ ಫೋನ್ ಮಾಡಿ ಕೈಲಾಸಗಿರಿಯನ್ನು ನೋಡಲು ಬಾ ಎಂದು ಕರೆದಾಗ ನನಗೆ ಅಚ್ಚರಿಯಾಗಿತ್ತು. ಹಿಮಾಲಯದಲ್ಲಿರುವ ಕೈಲಾಸಗಿರಿ ಬೆಂಗಳೂರಿಗೆ ಬಂದದ್ದಾದರೂ ಹೇಗೆ? ಕಾಂಕ್ರೀಟ್ ಜಂಗಲ್ ಎಂದೇ ಹೆಸರಾಗಿರುವ ಈ ಬೃಹತ್ ಬೆಂಗಳೂರು ಯಾವಾಗ ಕೈಲಾಸಗಿರಿಯಾಗಲು ಸಜ್ಜಾಯಿತು? ಈ ಸಂದೇಹಗಳನ್ನು ಪರಿಹರಿಸಿಕೊಳ್ಳಲು ನಾನು ಮನೆಯವರ ಜೊತೆಗೂಡಿ ಬೆಂಗಳೂರಿಗೆ ಹೊರಟೇ ಬಿಟ್ಟೆ. ಮನೆಯವರ ಎಂಬತ್ತರ ಹುಟ್ಟುಹಬ್ಬವನ್ನು ಆಚರಿಸಲು ಕೈಲಾಸಗಿರಿಗಿಂತ ಪ್ರಶಸ್ತವಾದ ಸ್ಥಳವಾದರೂ ಎಲ್ಲಿದೆ? ಸ್ಕಾಟ್‌ಲ್ಯಾಂಡಿನಲ್ಲಿ ನೆಲಸಿರುವ ಮಗ ನಂದೀಶನೂ ಅಪ್ಪನ ಹುಟ್ಟುಹಬ್ಬದಲ್ಲಿ ಭಾಗಿಯಾಗಲು ದಿಢೀರನೆ ಬೆಂಗಳೂರಿಗೆ ಬಂದಿಳಿದ. ಕುಮಾರ್ ಭಾವ, ನಿರ್ಮಲಕ್ಕನವರ ಕಾರಿನಲ್ಲಿ ನಾವು 2026, ಅಗಸ್ಟ್ 8 ರಂದು ಕೈಲಾಸಗಿರಿಗೆ ಭೇಟಿ ನೀಡಲು ಸಿದ್ದರಾದೆವು.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಗನನ್ನು ಕರೆದುಕೊಂಡು ನಾವು ಕೈಲಾಸಗಿರಿಯತ್ತ ಹೊರಟಾಗ ಮದ್ಯಾಹ್ನದ ಊಟದ ಹೊತ್ತಾಗಿತ್ತು. ಊಟ ಮುಗಿಸಿ ಕೈಲಾಸಗಿರಿಯನ್ನು ನೋಡಲು ಹೊರಟೆವು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕವಲಗಾನಗ್ರಾಮದಲ್ಲಿ ಅಂಬಾಜಿದುರ್ಗದ ಬೆಟ್ಟಗಳ ಸಾಲಿನಲ್ಲಿ ಈ ಸುಂದರವಾದ ಗುಹಾಂತರ ದೇಗುಲಗಳಿವೆ. ಬೃಹತ್ ಕಲ್ಲಿನ ಬೆಟ್ಟಗಳನ್ನು ಕೊರೆದು ಈ ಅಪರೂಪದ ದೇಗುಲಗಳನ್ನು ನಿರ್ಮಿಸಲಾಗಿದೆ. ಗೂಗಲಣ್ಣನ ಮಾರ್ಗದರ್ಶನದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೈಲಾಸಗಿರಿಯತ್ತ ಮುಖ ಮಾಡಿದೆವು. ದಾರಿಯಲ್ಲಿ ನಿರ್ಮಲಕ್ಕ ಕೈಲಾಸಗಿರಿಯ ಐತಿಹಾಸಿಕ ಸಂಗತಿಗಳನ್ನು ಹೇಳುತ್ತಾ ಹೋದಳು – ‘1990 ಅಂದರೆ ಸುಮಾರು ಮೂರೂವರೆ ದಶಕಗಳ ಹಿಂದೆ ಶಿವಭಕ್ತರಾದ ಶ್ರೀ ಚೌಡೀರೆಡ್ಡಿಯವರು ಶ್ರೀ ಗಂಗಾಧರೇಶ್ವರ ಸೇವಾ ಟ್ರಸ್ಟನ್ನು ಸ್ಥಾಪಿಸಿ, ಈ ಸಂಘದ ಮಾರ್ಗದರ್ಶನದಲ್ಲಿ ದೇಗುಲದ ಕೆಲಸವನ್ನು ಆರಂಭಿಸಿದರು. ಈ ಕೆಲಸಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾದವು, ಅಂಬಾಜಿ ಬೆಟ್ಟಗಳ ಸಾಲಿನಲ್ಲಿ ಇರುವುದರಿಂದ ಪುರಾತತ್ವ ಇಲಾಖೆಯ ಅನುಮತಿ ಪಡೆಯಬೇಕು, ಅಲ್ಲದೇ ಇದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವುದರಿಂದ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಯಾವ ದೇಗುಲವನ್ನಾಗಲೀ, ರಸ್ತೆಯನ್ನಾಗಲೀ ನಿರ್ಮಿಸುವಂತಿಲ್ಲ. ಹೀಗೆ ಮಾನ್ಯ ಚೌಡೀರೆಡ್ಡಿಯವರ ಭಗೀರಥ ಪ್ರಯತ್ನದಿಂದ ಸುಮಾರು 20,000 ಚದರ ಅಡಿಯಲ್ಲಿ ಈ ದೇಗುಲದ ನಿರ್ಮಾಣ ಕಾರ್ಯ 1990 ರಿಂದ ಭರದಿಂದ ಸಾಗುತ್ತಿದೆ. ಸದ್ಯಕ್ಕೆ ಕಾರಣಾಂತರಗಳಿಂದ ಕೆಲಸ ಸ್ಥಗಿತಗೊಂಡಿದೆ’ ಎಂದು ನಿರ್ಮಲಕ್ಕ ಬೇಸರದಿಂದ ನುಡಿದಳು.
ಬೆಂಗಳೂರಿನಿಂದ ಸುಮಾರು ಎಂಭತ್ತು ಕಿ.ಮೀ. ದೂರದಲ್ಲಿರುವ ಈ ಗುಹಾಂತರ ದೇಗುಲವನ್ನು ನಾವು ತಲುಪಿದಾಗ ಸಂಜೆ ಐದು ಗಂಟೆಯಾಗಿತ್ತು. ಸಂಜೆಯ ಅಹ್ಲಾದಕರ ವಾತಾವರಣ ಮನಸ್ಸಿಗೆ ಮುದ ನೀಡಿತ್ತು. ನಮಗೆ ಮೊದಲು ಕಂಡದ್ದು ಬೃಹತ್ತಾದ ಬಂಡೆಗಳು, ಆ ಬಂಡೆಗಳ ಮೇಲೆ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದ ಕಪಿಗಳು ನಮ್ಮನ್ನು ಹಲ್ಲು ಕಿರಿಯತ್ತಾ ಸ್ವಾಗತಿಸಿದವು. ನಾವು ನಮ್ಮ ನಮ್ಮ ಬ್ಯಾಗುಗಳನ್ನು ಭದ್ರವಾಗಿ ಹಿಡಿದು, ಮರದ ರೆಂಬೆಯೊಂದನ್ನು ರಕ್ಷಣೆಗಾಗಿ ಕೈಲಿ ಹಿಡಿದು ಮುಂದೆ ಸಾಗಿದೆವು. ಬಂಡೆಗಳ ಬುಡದಲ್ಲಿ ಮಾನವ ನಿರ್ಮಿತ ಗುಹೆಗಳು, ಆ ಗುಹೆಗಳ ಒಳಹೊಕ್ಕಾಗ ಕಂಡ ನೋಟ ಅದ್ಭುತವಾಗಿತ್ತು.
ಬೃಹತ್ತಾದ ಕಲ್ಲಿನ ಬೆಟ್ಟಗಳನ್ನು ಕೊರೆದು ಗುಹಾಂತರ ದೇಗುಲಗಳನ್ನು ರಚಿಸಿ ದ್ರಾವಿಡ-ಚೋಳ-ಪಲ್ಲವರ ಶಿಲ್ಪಕಲಾ ಶೈಲಿಯಲ್ಲಿ ಹಲವು ವಿಗ್ರಹಗಳನ್ನು ಕೆತ್ತಲಾಗಿದೆ – ಈ ಗುಹಾಂತರ ದೇಗುಲದಲ್ಲಿ ಚತುರ್ಮುಖ ಲಿಂಗೇಶ್ವರ ಸ್ವಾಮಿಗೆ ಅಗ್ರಪೂಜೆ. ನಾಲ್ಕು ಮುಖಗಳುಳ್ಳ ಶಿವಲಿಂಗವು ನಾಲ್ಕು ದಿಕ್ಕುಗಳನ್ನೂ ಪೊರೆಯುತ್ತಿರುವ ದೇವನಾಗಿ ನಿಂತಿದ್ದು, ನಾಲ್ಕು ವೇದಗಳ ಸಂಕೇತವೂ ಆಗಿದೆ. ಈ ಮೂರ್ತಿಯು ಸಮಸ್ತ ವಿಶ್ವದಲ್ಲಿ ವ್ಯಾಪಿಸಿರುವ ಪರಾತತ್ವದ ಸಂಕೇತವೂ ಅಗಿದೆ. ವಿಘ್ನನಿವಾರಕನಾದ ‘ವಲ್ಲಭ ಗಣಪತಿಯ’ ಸುಂದರವಾದ ವಿಗ್ರಹವಿದೆ. ಸರ್ವರನ್ನೂ ರಕ್ಷಿಸುತ್ತಾ ನಿಂತಿರುವ ಜಗದಂಬೆ ದೇವಿಯ ಮೂರ್ತಿಯು ಭಕ್ತರ ಸಂಕಷ್ಟಗಳನ್ನೆಲ್ಲಾ ಆಲಿಸುತ್ತಾ ತನಗೆ ಶರಣಾದವರಿಗೆ ಅಭಯಹಸ್ತ ಚಾಚಿರುವಳು. ಜಗದಂಬೆಯು ಕರುಣೆ, ಶಕ್ತಿ ಹಾಗೂ ದುಷ್ಟಶಕ್ತಿಯ ಸಂಹಾರದ ಸಂಕೇತವಾಗಿ ನಿಂತಿಹಳು. ಇನ್ನು ಸುಂದರವಾದ ನಟರಾಜನ ವಿಗ್ರಹ ಸೃಷ್ಟಿ, ಸ್ಥಿತಿ ಹಾಗೂ ಲಯದ ಸಂಕೇತವಾಗಿ ರಾರಾಜಿಸುತ್ತಿದೆ. ಇಲ್ಲಿಂದ ಮುಂದೆ ಬಂದರೆ ಶ್ರೀವಿಷ್ಣುವಿನ ವಿಗ್ರಹ ಮಂದಹಾಸ ಬೀರುತ್ತಾ ನಿಂತಿದೆ. ಇದು ಕೇವಲ ಶೈವಾರಾಧನೆಯ ಸ್ಥಳವಲ್ಲ ಎಂದು ಸಾರುವ ಹರಿಯ ವಿಗ್ರಹವೂ ಕಣ್ಮನ ಸೆಳೆಯುವಂತಿದೆ. ಶೈವರು, ವೈಷ್ಣವರು ಎಂಬ ಬೇಧಭಾವ ಸಲ್ಲದು ಎಂದು ಸಾರುವಂತಿದೆ. ವಿಷ್ಣುವಿನ ಸನ್ನಿಧಿಯಲ್ಲಿ ಮಹಾಲಕ್ಷ್ಮಿಯ ವಿಗ್ರಹವು ಸಂಪತ್ತು, ಸಮೃದ್ಧಿ ಮತ್ತು ಸೌಭಾಗ್ಯದ ಪ್ರತೀಕವಾಗಿ ನಿಂತಿದೆ. ಸನಿಹದಲ್ಲಿ ಜ್ಞಾನ, ವಿದ್ಯೆ, ಸಂಗೀತ ಹಗೂ ಕಲೆಯ ಅಧಿದೇವತೆಯಾದ ಸರಸ್ವತಿಯೂ ಇಲ್ಲಿಗೆ ಆಗಮಿಸುವ ಭಕ್ತರನ್ನು ಹರಸುತ್ತಾ ನಿಂತಿರುವಳು. ಅರ್ಧನಾರೀಶ್ವರನ ವಿಗ್ರಹವು ಚೈತನ್ಯ ಮತ್ತು ಕ್ರಿಯಾಶಕ್ತಿಯ ಸಂಕೇತವಾಗಿ ನಿಂತಿದೆ. ಹುಟ್ಟಿನ ಬೆನ್ನ ಹಿಂದೆಯೇ ಸವಾರಿ ಮಾಡುತ್ತಾ ನಿಂತಿರುವ ಮೃತ್ಯುದೇವತೆಯ ಸ್ವರೂಪವಾದ ಕಾಲಭೈರವನೂ ನಮ್ಮನ್ನು ಎಚ್ಚರಿಸುತ್ತಲೇ ಇರುವನು. ನಮ್ಮ ಮುಂದಿರುವ ನಾಲ್ಕು ದಿನದ ಬದುಕಿನಲ್ಲಿ ನಗುನಗುತ್ತಾ ಚೆಂದದ ಬದುಕನ್ನು ಕಟ್ಟಿಕೊಳ್ಳಿ ಎಂದು ಹೇಳುತ್ತಿರುವ ಹಾಗೆ ಎನಿಸುತ್ತಿದೆ. ಈ ಸುಂದರವಾದ ಮೂರ್ತಿಗಳನ್ನು ನೋಡುತ್ತಾ ಸಾಗಿದವರಿಗೆ ನಾವು ಯಾವ ಕಾಲದಲ್ಲಿದ್ದೇವೆ ಎಂಬುದೇ ಮರೆತ ಹಾಗಾಗಿತ್ತು, ಇದೇನು ಹೊಯ್ಸಳರ ಕಾಲದ ವಿಗ್ರಹಗಳೋ, ಅಥವಾ ಚಾಲುಕ್ಯರ ಕಲಾ ವೈಭವವೋ ಅಥವಾ ವಿಜಯನಗರದ ಅರಸರ ಕಾಲದ ಸುಂದರವಾದ ಕೆತ್ತನೆಗಳೋ ಎಂಬ ಅನಿಸಿಕೆ ಮೂಡಿತ್ತು.
ಈ ಗುಹಾಂತರ ದೇವಾಲಯದಲ್ಲಿ ಹತ್ತು ನಿಮಿಷ ಧ್ಯಾನ ಮಾಡುತ್ತಾ ಕುಳಿತೆ. ಅಬ್ಬಾ, ಅದೆಂತಹ ಸುಂದರವಾದ ಅನುಭವ, ಈ ದೇವತೆಗಳ ಸನ್ನಿಧಿಯಲ್ಲಿ ಚೈತನ್ಯದ ಅಲೆಗಳು ನನ್ನೊಳಗೆ ಉಲ್ಲಾಸ, ಉತ್ಸಾಹ ಹಾಗೂ ಸ್ಪೂರ್ತಿಯನ್ನು ತುಂಬಿದ್ದನ್ನು ಕಂಡೆ. ಗುಹಾಂತರ ದೇಗುಲದ ಹೊರಗೆ ಬಂದಾಗ ಬಲಬದಿಯಲ್ಲಿ ಒಂದು ದೊಡ್ಡದಾದ ಆಂಜನೇಯ ಮೂರ್ತಿಯ ವಿಗ್ರಹವನ್ನು ರಚಿಸಲಾಗುತ್ತಿತ್ತು. ಇನ್ನೂ ಈ ಕಾರ್ಯ ಪೂರ್ಣವಾಗಿಲ್ಲದಿದ್ದರಿಂದ ನಮಗೆ ಹನುಮನ ದರ್ಶನಭಾಗ್ಯ ಲಭಿಸಲಿಲ್ಲ.
ಈ ಸ್ಥಳದ ಪೌರಾಣಿಕ ಐತಿಹ್ಯಗಳು ಏನು ಹೇಳುತ್ತವೆ ಕೇಳೋಣ ಬನ್ನಿ – ಪಾಂಡವರು ಅಜ್ಞಾತವಾಸದ ಸಮಯದಲ್ಲಿ ಈ ಗುಹೆಗಳಲ್ಲಿ ವಾಸ ಮಾಡುತ್ತಿದ್ದರು ಹಾಗೂ ಭೀಮನು ಬಕಾಸುರನ ವಧೆ ಮಾಡಿದ್ದು ಇಲ್ಲಿಯೇ ಹಾಗೂ ಈ ಎತ್ತರವಾದ ಬೆಟ್ಟಗಳನ್ನು ಭೀಮ ಬಕಾಸುರರ ಬೆಟ್ಟಗಳು ಎಂದೂ ಕರೆಯಲ್ಪಡುತ್ತವೆ. ಅಬ್ಬಾ, ದ್ವಾಪರ ಯುಗದಲ್ಲಿದ್ದ ಭೀಮ ಹಾಗೂ ಅಸುರನಾದ ಬಕಾಸುರನಿಗೆ ಇಷ್ಟೊಂದು ಬಾರಿ ಗಾತ್ರದ ದೇಹ ಇತ್ತಾ ಎಂಬ ಕುತೂಹಲವೂ ಕಾಡುವುದು. ಇರಲಿ, ಇವೆಲ್ಲಾ ನಮ್ಮ ನಮ್ಮ ಕಲ್ಪನೆಗೆ ಬಿಟ್ಟ ಸಂದರ್ಭಗಳು ಅಲ್ವಾ?
ಇನ್ನು ಈ ಸ್ಥಳದ ಐತಿಹಾಸಿಕ ವಿವರಗಳತ್ತ ಗಮನ ಹರಿಸೋಣ ಬನ್ನಿ – ಈ ಕೈಲಾಸಗಿರಿ ಅಂಬಾಜಿ ದುರ್ಗದ ಬೆಟ್ಟದ ಸಾಲುಗಳಲ್ಲಿ ರಾರಾಜಿಸುತ್ತಿದೆ. ಈ ನಾಡನ್ನು ಆಳಿದ ಅರಸರು, ಪಾಳೆಗಾರರು ತಮ್ಮ ಪ್ರಜೆಗಳನ್ನು ಪರಕೀಯರ ದಾಳಿಯಿಂದ ರಕ್ಷಿಸಲು ಭದ್ರವಾದ ಕೋಟೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ವೀರಾಂಜನೇಯ ಸ್ವಾಮಿಯ ವಿಗ್ರಹವೂ ಇದ್ದು, ತನ್ನ ಭಕ್ತರನ್ನು ಹರಸುತ್ತಾ ನಿಂತಿದೆ. ಈ ಕೋಟೆಯ ಅಧಿದೇವತೆಯಾದ ಅಂಬಾದೇವಿಯು ತನ್ನ ಅಭಯಹಸ್ತ ಚಾಚುತ್ತಾ ಎಲ್ಲರನ್ನೂ ರಕ್ಷಿಸುತ್ತಿರುವಳು. ಮುಂದೆ ಈ ಪ್ರದೇಶವನ್ನು ಆಕ್ರಮಿಸಿಕೊಂಡ ಟಿಪ್ಪು, ಬ್ರಿಟಿಷರ ಸೈನ್ಯದ ಚಲನವಲನಗಳನ್ನು ಗಮನಿಸಲು ಒಂದು ಮಿಲಿಟರಿ ವೀಕ್ಷಣಾ ಗೊಪುರವನ್ನು ಬೆಟ್ಟದ ನೆತ್ತಿಯಮೇಲೆ ಕಟ್ಟಿದ ಎಂಬ ದಾಖಲೆಯು ಸಹ ಸಿಗುತ್ತದೆ. ಈ ದುರ್ಗದಲ್ಲಿ ಸೈನಿಕರಿಗಾಗಿ ನಿರ್ಮಿಸಿದ ಕಲ್ಲಿನ ನೀರಿನ ಹೊಂಡಗಳು, ಕಲ್ಲಿನಲ್ಲಿ ಕೊರೆದ ಧಾನ್ಯದ ಉಗ್ರಾಣಗಳು ಅಂದಿನ ಕಥೆಯನ್ನು ಹೇಳುವಂತಿದೆ.
ನಾವು ಕೈಲಾಸಗಿರಿಯ ಬೆಟ್ಟವನ್ನು ಇಳಿಯುವಾಗ ಸಂಜೆ ಆರೂವರೆಯಾಗಿತ್ತು. ರವಿಯು ತನ್ನ ರಥದಲ್ಲಿ ಕುಳಿತು ಭೂತಾಯಿಯತ್ತ ಹೊಂಬಣ್ಣ ಎರಚುತ್ತಾ, ಪಶ್ಚಿಮದತ್ತ ಸಾಗುತ್ತಿದ್ದ, ನಾವು ಸೂರ್ಯಾಸ್ತದ ಅದ್ಭುತವಾದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ, ನೈಸರ್ಗಿಕ ಸೌಂದರ್ಯದ ಮಧ್ಯೆ ಕಂಗೊಳಿಸುವ ಕೈಲಾಸಗಿರಿಯನ್ನು ನಮ್ಮ ಹೃದಯದಲ್ಲಿ ಜೋಪಾನವಾಗಿರಿಸಿಕೊಂಡು ಮನೆಯತ್ತ ಹೊರಟೆವು.

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

