ಈಗ ಪಿತೃಪಕ್ಷ ಶುರುವಾತಲ್ಲಾ. ನಮ್ಮ ಹಿರಿಯರು ತೀರಿಹೋದವರನ್ನು ನೆನಪು ಮಾಡಿಕೊಳ್ಳುವ ದಿನಗಳು. ವರ್ಷಕ್ಕೊಮ್ಮೆ ಹಿರಿಯರಿಗೆ ಶ್ರಾದ್ಧ ಮಾಡುವ ಪದ್ಧತಿ ನಮ್ಮ ಹವ್ಯಕದಲ್ಲಿ ಒಂದು ಸಂಪ್ರದಾಯ. ನಂತರ ಮಹಾಲಯದಲ್ಲಿ ಅಷ್ಟಕ ಶ್ರಾದ್ಧವೂ ನಮ್ಮಲ್ಲಿ ನಡೆದು ಬಂದ ಶಾಸ್ತ್ರ. ಮಾಡದವರೂ ಇರುವರು, ಮಾಡುವವರೂ ಇರುವರು. ನೋಡಿ, ನನ್ನ ಪುರಾಣ ಹೇಳ್ತೇನೆ.
ನಮ್ಮ ಮನೆಗೆ ಒಂದು ಬೆಕ್ಕು ಬಂದು ಐದಾರು ದಿನ ಆಯ್ತು. ಬೇರೆ ದಿನಗಳಲ್ಲಿ ಹೀಗೆ ಮನೆಗೆ ಬೆಕ್ಕು ಬಂದರೆ ನಾನು ಓಡಿಸುವೆ. ಆದರೆ ಈ ಸರ್ತಿ ಅದು ಬಂದಾಗ ನನಗೇಕೋ ಅದರ ಮೇಲೆ ಪ್ರೀತಿ ಹುಟ್ಟಿತ್ತು. ಅದೇ ಸಮಯಕ್ಕೆ ಪಿತೃಪಕ್ಷವೂ ಶುರುವಾತಲ್ಲಾ! ಆಗ ಮನಸ್ಸಿನಲ್ಲಿ ಒಂದು ಯೋಚನೆ ಬಂತು. ‘ನಮ್ಮ ಹಿರಿಯರಲ್ಲಿ ಯಾರಾದರೂ ಹೀಗೆ ಒಂದು ರೂಪದಲ್ಲಿ ನಮ್ಮ ಮನೆಗೆ ಬಂದಿರುವರೋ?’ ಅಂತ. ಅದರ ಫೋಟೋ ತೆಗೆದು ಮಗಳಿಗೆ ಕಳಿಸಿದೆ.
ಆಗ ಮಗಳು ಹೇಳಿದಳು, “ಅಮ್ಮಾ, ಪಿತೃಪಕ್ಷದಲ್ಲಿ ಯಾರೇ ಆಗಲಿ ನಮ್ಮ ಮನೆಗೆ ಬಂದು ಊಟ ಮಾಡಿ ಹೋದರೆ ಒಳ್ಳೆಯದು ಅಂತ ಶಾಸ್ತ್ರದಲ್ಲಿ ಹೇಳುವ ವಾಡಿಕೆ ಇದೆ.” ಅವಳು ಹೇಳಿದ ಮೇಲೆ ನನ್ನ ಯೋಚನೆ ಇನ್ನೂ ಮುಂದುವರಿಯಿತು. ‘ಈ ಬೆಕ್ಕು ಯಾರದ್ದಾಗಿರಬಹುದು? ನಮ್ಮ ಅಪ್ಪನೋ, ಮಾವನೋ, ಅತ್ತೆಯೋ? ಹೀಗೆ ಹೇಗೆ ಗೊತ್ತಾಗೋದು?’ ಮನಸ್ಸಿನೊಳಗೆ ಆಲೋಚನೆ ಮಾಡುತ್ತಾ ಇರುವಾಗ ಮತ್ತೊಂದು ಪ್ರಶ್ನೆ ಬಂತು.
‘ಪಿತೃಗಳು ಒಮ್ಮೆ ನಮ್ಮ ಮನೆಗೆ ಬಂದು, ನಮ್ಮನ್ನು ನೋಡಿ, ನಮ್ಮ ಜೊತೆ ಇದ್ದು ಮತ್ತೆ ಹೋಗುವುದು ಯಾವುದಾದರೂ ರೂಪದಲ್ಲೇನಾ? ಹಾಗೆ ಬಂದಿದ್ದರೆ ಈ ಬೆಕ್ಕಿನ ರೂಪದಲ್ಲಿ ಬಂದಿರಬಹುದೇ?’ . ಹೀಗೆ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಮೂಡತೊಡಗಿದವು. ಅದು ನಿಜವೋ, ನನ್ನ ಮನಸ್ಸಿನ ಭಾವನೆಯೋ ಗೊತ್ತಿಲ್ಲ. ಆದರೆ ಈ ಬೆಕ್ಕನ್ನು ನೋಡಿದಾಗ ಈ ಸರ್ತಿ ಅದನ್ನು ಓಡಿಸಲು ಮನಸ್ಸೇ ಬರಲಿಲ್ಲ. ಬದಲಾಗಿ, ‘ಬಂದದ್ದು ಬಂದಿರಲಿ… ನಾಲ್ಕು ದಿನ ನಮ್ಮ ಮನೆಯಲ್ಲೇ ಇದ್ದು ಹೋಗಲಿ’ ಅನ್ನಿಸಿತು.
ಮೊದಲೆಲ್ಲ ಶ್ರಾದ್ಧದ ದಿನ ಕಾಗೆಗಳ ಹಿಂಡು ಬರುತ್ತಿತ್ತು. ಈಗ ಕಾಗೆಗಳು ಬರುವುದೇ ಕಡಿಮೆಯಾಗಿದೆ. ಆದ್ದರಿಂದ ಯಾವ ರೂಪದಲ್ಲಾದರೂ ಪಿತೃಗಳು ಬರಬಹುದು ಅಂತ ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಹಾಗಾಗಿ ಈ ಬೆಕ್ಕನ್ನು ನೋಡಿದಾಗ ನನಗೂ ಹಾಗೆ ಅನಿಸಿತು ಅಷ್ಟೇ. ಇದು ನನ್ನ ನಂಬಿಕೆ, ನನ್ನ ಮನಸ್ಸಿನ ಭಾವನೆ ಅಷ್ಟೇ. ಇದನ್ನು ಸತ್ಯವೆಂದು ಹೇಳುತ್ತಿಲ್ಲ. ಪಿತೃಪಕ್ಷ ಮುಗಿಯುವಾಗ ಈ ಬೆಕ್ಕು ತನ್ನಷ್ಟಕ್ಕೆ ತಾನೇ ಹೋಗಿಬಿಟ್ಟರೆ, ‘ಹಿರಿಯರು ಬಂದು ನಮ್ಮನ್ನು ನೋಡಿ ಹೋದರೇನೋ!’ ಎಂಬ ನಂಬಿಕೆ ನನಗೆ ಇನ್ನೂ ಗಟ್ಟಿಯಾಗಬಹುದು.
ಓದಿದವರು ನಿಮ್ಮ ಮನಸ್ಸಿಗೆ ಬಂದದ್ದನ್ನು ಹೇಳಿ… ಈ ಮಾರ್ಜಾಲ ಯಾರಾಗಿರಬಹುದು ಅಂತ ನಿಮಗೆ ಅನಿಸುತ್ತದೆ?

–ಆಶಾ ನೂಜಿ, ಮಂಜೇಶ್ವರ
