ಪ್ರವಾಸ

ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ ..ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಪಿಂಜೊರಾ ಗಾರ್ಡನ್ :

ಉಪಾಹಾರದ ನಂತರ ಸುಮಾರು 20 ಕಿಮೀ ಪ್ರಯಾಣಿಸಿ , ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ‘ಪಿಂಜೊರಾ  ಗಾರ್ಡನ್’ ಗೆ ತಲಪಿದೆವು. ಅಲ್ಲಿ ಪ್ರಸಿದ್ದವಾದ  ಮೊಘಲ್ ಶೈಲಿಯ ಉದ್ಯಾನವಿದೆ. 

17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಸೋದರಮಾವ ಮತ್ತು ವಾಸ್ತುಶಿಲ್ಪಿ ನವಾಬ್ ಫಿದಾಯ್ ಖಾನ್ ಅವರು ಈ ಉದ್ಯಾನವನ್ನು ನಿರ್ಮಿಸಿದರಂತೆ. ಕಾಶ್ಮೀರದ ಶಾಲಿಮಾರ್ ಬಾಗ್ ಮಾದರಿಯಲ್ಲಿ  ಈ ಉದ್ಯಾನವನ್ನು  ವಿನ್ಯಾಸಗೊಳಿಸಲಾಗಿದೆ.   ಬಹಳ ವಿಶಾಲವಾದ ಈ ಉದ್ಯಾನದಲ್ಲಿ ನಡೆಯುತ್ತಾ ಹೋಗುವಾಗ,  ಪ್ರವೇಶ ದ್ವಾರದಿಂದ  ಕೆಳಮುಖವಾಗಿ   ಟೆರೇಸ್ ಶೈಲಿಯಲ್ಲಿ ಹಂತ  ಹಂತವಾಗಿ ಉದ್ಯಾನ ಅನಾವರಣಗೊಳ್ಳುವುದು ಇಲ್ಲಿಯ ವಿಶೇಷ. ಇನ್ನೇನು ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಇನ್ನೊಂದು ಮಜಲಿನ ಉದ್ಯಾನ ಕಾಣಿಸುತ್ತಿತ್ತು. ಇಲ್ಲಿ  ಕೆಳಮುಖವಾಗಿ ಇಳಿಯುವ  ಒಟ್ಟು 7 ಹಂತಗಳಿವೆ. ಶೀಶ್  ಮಹಲ್, ಹವಾ ಮಹಲ್ , ರಂಗ್ ಮಹಲ್  ಮತ್ತು ಜಲ್ ಮಹಳ್ ಗಳಿವೆ.  ಕಾರಂಜಿಗಳಿವೆ.ಕೊನೆಯ ಹಂತದಲ್ಲಿ ತೆರೆದ ರಂಗಮಂದಿರವಿದೆ. 

ಉದ್ಯಾನದ ಮಧ್ಯದಲ್ಲಿ ಹರಿಯುವ ನೀರಿನ ಕಾಲುವೆಗಳು ಮತ್ತುವಿನ್ಯಾಸ ಸುಮಾರಾಗಿ ಮೈಸೂರಿನ    ಬೃಂದಾವನ್ ಗಾರ್ಡನ್ ನಂತೆಯೂ ಇದೆ ಅನಿಸಿತು. ರಾತ್ರಿ ಸಮಯ, ಕಾರಂಜಿಗಳು ಹಾಗೂ  ಬೆಳಕಿನ ಸಂಯೋಜನೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣಿಸಬಹುದು. ಪಕ್ಕದಲ್ಲಿ ಸ್ಟ್ರಾಬೆರಿ ,ಆಪ್ರಿಕೋಟ್ ಸಪೋಟ ಮರಗಳಿದ್ದುವು. ಒಂದೆಡೆ ಸೀಬೆಹಣ್ಣುಗಳನ್ನು ಹೆಚ್ಚಿ ಮಾರುತ್ತಿದ್ದರು. ಒಂದೇ ಗುಕ್ಕಿಗೆ ತಿನ್ನಬಹುದಾದ , ಚಿಕ್ಕ ಗಾತ್ರದ ,  ಬಾದಾಮಿಯಾಕಾರದ  ಸಪೋಟ ಹಣ್ಣುಗಳು ಮಾರಾಟಕ್ಕೆ ಲಭ್ಯವಿದ್ದುವು. ಎಲ್ಲವೂ ಚೆನ್ನಾಗಿದ್ದುವು. ಈ ಹಣ್ಣುಗಳನ್ನು ತಿನ್ನುತ್ತಾ ತಂಡದವರು ಪರಸ್ಪರ ಪರಿಚಯ ಮಾಡಿಕೊಂಡೆವು.

ಆದಿನ ನಮಗೆ ಚಂಡೀಘರ್ ನಿಂದ ಅಂದಾಜು 170 ಕಿಮೀ ದೂರದಲ್ಲಿರುವ ‘ನಾರ್ಖಂಡ್’ ಎಂಬಲ್ಲಿಗೆ ಪ್ರಯಾಣಿಸಬೇಕಿತ್ತು. ರಸ್ತೆ ಚೆನ್ನಾಗಿತ್ತು, ನಮ್ಮ  ಟೆಂಪೋ ಟ್ರಾವೆಲ್ರ್ ನ  ಸಾರಥಿಯರು ಅಚ್ಚುಕಟ್ಟಾಗಿ  ವಾಹನ ಚಲಾಯಿಸುತ್ತಿದ್ದರು.  ಹಿಂದಿನ ರಾತ್ರಿ ಬೆಂಗಳೂರಿನಿಂದ ನಿದ್ದೆಗೆಟ್ಟು ಪ್ರಯಾಣಿಸಿದ ಸುಸ್ತು, ಉಪಾಹಾರದಿಂದ ಹೊಟ್ಟೆ ತುಂಬಿದ ಭಾರ ಎಲ್ಲವೂ ಸೇರಿ , ಬಹುತೇಕರು ದಾರಿಯುದ್ದಕ್ಕೂ  ಮೌನಕ್ಕೆ ಶರಣಾಗಿದ್ದರು ಅಥವಾ ತೂಕಡಿಸುತ್ತಿದ್ದರು.  ಪ್ರಯಾಣ ಮುಂದುವರಿಯಿತು.

ಸೇಬು ಮರಗಳಿಗೆ ಬಲೆಯ ಹೊದಿಕೆ

ಮಧ್ಯಾಹ್ನದ ಊಟಕ್ಕಾಗಿ  ‘ ಹೋಟೆಲ್ ಕಿಚನ್ ಕಿಂಗ್’ ಎಂಬಲ್ಲಿ ನಿಲ್ಲಿಸಿದರು.  ಉತ್ತರ ಭಾರತೀಯ ಶೈಲಿಯ ದಾಲ್, ರೋಟಿ, ಸಬ್ಜಿ, ಸಲಾಡ್ ಇದ್ದ ರುಚಿಯಾದ ಊಟ ಮಾಡಿದೆವು.  ಪುನ: ಕೆಲವರಿಗೆ ನಿದ್ದೆಯಾದರೆ ಇನ್ನು ಕೆಲವರು ಹೊರಗಡೆ ನೋಡುತ್ತಾ ಪ್ರಕೃತಿ ವೀಕ್ಷಣೆ ಮಾಡುತ್ತಿದ್ದರು. ನಿಧಾನವಾಗಿ ನಗರದಿಂದ ದೂರ ಸರಿದಂತೆ ಹಿಮಮಣಿ ಸಿಂಚಿತ ಬೆಟ್ಟಗಳು ಎದುರಾದುವು. ಅಲ್ಲಲ್ಲಿ ಕಾಣಸಿಕ್ಕಿದ ಸೇಬಿನ ತೋಟದಲ್ಲಿ ಮರಗಳಿಗೆ ಬಲೆಯಂತೆ ಕಾಣಿಸುವ ಹೊದಿಕೆ ಹಾಕಿರುವುದು ವಿಶೇಷ ಅನಿಸಿತು. ಪಕ್ಷಿಗಳ ಕಾಟಕ್ಕೋ, ಆಲಿಕಲ್ಲಿನಿಂದಾಗಿ ಹಣ್ಣುಗಳು ಕೆಡುವುದುದಕ್ಕೋ ಇರಬಹುದು ಎಂದುಕೊಂಡೆವು. ಸಂಜೆ ನಾರ್ಖಂಡ್ ನಲ್ಲಿ ಇರುವ   ‘ ಹೋಟೆಲ್ ರಣವೀರ್ ಪ್ಯಾಲೇಸ್’ ತಲಪಿದೆವು. ಚಹಾ, ಊಟ ವಿಶ್ರಾಂತಿಯೊಂದಿಗೆ ಮೊದಲ ದಿನದ ಪ್ರಯಾಣ ಸಂಪನ್ನವಾಯಿತು.

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *