ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಾನು ರಿಟೈರ್ ಆಗುತ್ತಿದ್ದಂತೆ ನಮ್ಮೂರಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ನೀವು ಹೇಳುವ ಕೆಲಸಗಳು ಶೀಘ್ರವಾಗಿ ಮುಗಿಯುವಂತಹವಲ್ಲ. ಹೇಗೆ ಒಪ್ಪಿಕೊಳ್ಳಲಿ” ಎಂದು ಹೇಳಿದಳು ಭಾರ್ಗವಿ.

“ಹೌದು ಮೇಡಂ, ಅದು ನಮಗೂ ಗೊತ್ತು ತಾವು ಪ್ರಾರಂಭಿಸಿ ಒಂದು ಹಂತಕ್ಕೆ ತನ್ನಿ, ಮುಂದಿನ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ. ಅಲ್ಲದೆ ತಾವು ನೆನ್ನೆಯಷ್ಟೇ ನಿವೃತ್ತರಾಗಿದ್ದೀರಿ. ನಿಮ್ಮ ವೈಯಕ್ತಿಕ ಕೆಲಸಕಾರ್ಯಗಳು ಮುಗಿಯುವವರೆಗಂತೂ ಇಲ್ಲಿ ಇರಲೇಬೇಕಾಗುತ್ತದೆ. ಅಷ್ಟರಲ್ಲಿ ಆ ಅವಧಿಯೊಳಗೆ ಈ ಒಂದು ಕೆಲಸ ಮಾಡಿಸಿಕೊಟ್ಟರೆ ತುಂಬ ಉಪಕಾರವಾಗುತ್ತದೆ” ಎಂದು ಕೇಳಿಕೊಂಡರು.
ಮನಸ್ಸಿನೊಳಗೆ ಭಾರ್ಗವಿ ಏಕಾಗಬಾರದು, ಬಾಗಿಲಿಗೆ ಬಂದಿರುವ ಅವಕಾಶವನ್ನು ಉಪಯೋಗಿಸಿಕೊಂಡರೆ ಹೇಗೆ? ದೇವಿಕಾ ಹಾಗೂ ನನ್ನ ಇಚ್ಛೆಯಂತೆ ಊರಿನಲ್ಲೂ ಮಹಿಳೆಯರಿಗಾಗಿ ಏನಾದರೂ ಯೋಜನೆ ಅನುಷ್ಠಾನ ಮಾಡುವ ಮೊದಲು ಇಲ್ಲಿನ ವ್ಯವಹಾರ ಮಗಿಸಿದರೆ ನಮಗೂ ಒಂದು ಮಾದರಿಯಾಗಬಹುದೆಂದು ವಿಚಾರ ಮಾಡಿದಳು. ಆಮೇಲೆ “ಆಯಿತು..ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ. ನನಗೆ ಯೋಚಿಸಲು ಒಂದೆರಡು ದಿನ ಅವಕಾಶ ಕೊಡಿ” ಎಂದು ಬಂದವರನ್ನು ಬೀಳ್ಕೊಟ್ಟಳು.

ಈ ವಿಷಯವನ್ನು ತನ್ನ ಗೆಳತಿ ಸುಮನಾ, ಅಣ್ಣ ಬಾಲು, ಮತ್ತು ಅತ್ತಿಗೆ ದೇವಿಕಾ, ಪತಿ ಸಿದ್ಧಾರ್ಥ, ಮಕ್ಕಳು ಎಲ್ಲರೊಡನೆ ಹಂಚಿಕೊಂಡಳು. ಅವರುಗಳ ಅಭಿಪ್ರಾಯ ಕೋರಿದಳು ಭಾರ್ಗವಿ. ಅತ್ತಿಗೆ ದೇವಿಕಾ, ಬಾಲಣ್ಣ, ಗೆಳತಿ ಸುಮನಾ ಆಯಿತು ಅವರು ಕೇಳಿಕೊಂಡಿರುವ ಕೆಲಸವನ್ನು ಒಪ್ಪಿಕೊಂಡು ನಿನ್ನ ಪೆನ್ಷನ್ ಇತ್ಯಾದಿಗಳು ಸೆಟ್ಲ್ ಆಗುವವರೆಗೆ ಮಾಡು. ತದನಂತರ ನಂಬಿಕಸ್ಥರನ್ನು ನೇಮಿಸಿಕೊಟ್ಟು ನೀನು ಅವರಿಗೆ ಸಲಹೆ ಸೂಚನೆ ಕೊಟ್ಟು ಮುಂದುವರಿಸು. ಎಷ್ಟು ಬೇಗ ಆಗುತ್ತದೆಯೋ ಅಷ್ಟುಬೇಗ ಊರಿಗೆ ಬಂದು ಸೇರು ಎಂದು ಹೇಳಿದರು. ಅವರುಗಳಿಗೆ ಭಾರ್ಗವಿಯ ಬಗ್ಗೆ ಹೆಚ್ಚಿನ ಕಾಳಜಿಯಿತ್ತು. ಮಕ್ಕಳು ಕಾಲಕ್ಕೆ ತಕ್ಕಂತೆ “ವಾವ್..ಅಮ್ಮ ನಿಮಗೆ ಹೇಳಿ ಮಾಡಿಸಿದಂತಹ ಕೆಲಸ, ಮಾಡಿ ಆನಂತರ ಯೋಚಿಸೋಣ. ಆ ಊರಿಗೆ ಹೋಗಿ ಏನು ಮಾಡುತ್ತೀರಾ? ನಾವುಗಳು ಹೋಗಿಬಂದು ಮಾಡಲೂ ತೊಂದರೆಯಾಗುತ್ತದೆ. ಇನ್ನು ಮುಂದೆ ನೀವು ಅಲ್ಲೇ ಇರುವುದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಇದರ ಬಗ್ಗೆ ನೀವೂ ಯೋಚಿಸಿ, ತೀರಾ ಸೆಂಟಿಮೆಂಟಲ್ ಆಗಬೇಡಿ.” ಎಂದರು.

ಆದರೆ ಇವರೆಲ್ಲರಿಗಿಂತ ವಿಭಿನ್ನವಾದ ಉತ್ತರ ಕೊಟ್ಟವನು ಸಿದ್ಧಾರ್ಥ. “ಓ ! ಕಂಗ್ರಾಟ್ಸ್ ಭಾರ್ಗವಿ, ನಿನ್ನ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡು ಅದನ್ನು ಮಾಡಬಲ್ಲಳೆಂದು ಅವರು ನಿನ್ನಲ್ಲಿಗೆ ಬಂದಿದ್ದಾರೆ. ಭರವಸೆಯೂ ಇದೆ. ನಿನಗೂ ಬಹಳಷ್ಟು ಜನರ ಪರಿಚಯ ಒಡನಾಟವಿದೆ ಒಪ್ಪಿಕೋ. ಈ ಕೊಂಪೆಗೆ ಏಕೆ ಬರುತ್ತೀಯಾ? ಇಲ್ಲಿ ಎಷ್ಟು ಮಾಡಿದರೂ ಅಷ್ಟೇ. ತಕ್ಕಡಿ ಮೇಲಕ್ಕೆರುವುದೇ ಇಲ್ಲ. ಆಗಾಗ್ಗೆ ಬರುತ್ತೀಯಲ್ಲ. ಅದನ್ನಷ್ಟೇ ಮುಂದುವರಿಸು. ಯಾವಾಗಲೂ ಚಟುವಟಿಕೆಯಿಂದ ಇದ್ದವಳಿಗೆ ಸುಮ್ಮನೆ ಕುಳಿತು ಕೊಳ್ಳಲಾಗುವುದಿಲ್ಲ” ಹಾಗೆ ಹೀಗೆಂದು ಹೊಗಳಿದ್ದೇ ಹೊಗಳಿದ್ದು. ನೀವೇನೇ ಹೇಳಿ ಸಿದ್ಧಾರ್ಥ ಇಲ್ಲಿನ ನನ್ನ ಕೆಲಸ ಮುಗಿಸಿದ ಮೇಲೆ ಮನೆ ಬಾಡಿಗೆಗೆ ಕೊಟ್ಟು ಊರಿಗೆ ಬರುವ ನಿರ್ಧಾರ ಮಾಡಿಯಾಗಿದೆ. ಬಂದೇ ಬರುತ್ತೇನೆ. ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡಳು. ಮೇಲೆ ಮಾತ್ರ “ನೀವು ಇಷ್ಟು ಹೇಳಿದಮೇಲೆ ಖಂಡಿತಾ ಆ ಕೆಲಸ ನನ್ನಿಂದಾಗುತ್ತದೆಂಬ ಭರವಸೆ ಬರುತ್ತಿದೆ” ಎಂದು ಹೇಳಿದಳು.

ಎಲ್ಲವೂ ಸರಿಯೇ ಏಕೆ ನನ್ನ ಗಂಡ ನಾನು ಊರಿಗೆ ಬರುವುದನ್ನು ತಡೆಯುತ್ತಿದ್ದಾರೆ? ತನ್ನ ಸೋಮಾರಿತನಕ್ಕೆ ಸಂಚಕಾರ ಬರುತ್ತದೆಂದೋ, ಇರಬೇಕು ಇರಲಿ ನೋಡೋಣ ಎಂದುಕೊಂಡು ಬಿಟ್ಟ ಕೆಲಸವನ್ನು ಕೈಗೆತ್ತಿಕೊಂಡಳು.

ಮರುದಿನ ಆಶ್ರಮದ ವ್ಯಕ್ತಿಗಳು ಮತ್ತೆ ಮನೆಗೆ ಬಂದರು. ಅವರಿಗೆ ಆತಿಥ್ಯ ನೀಡಿ ತನ್ನ ಒಪ್ಪಿಗೆಯನ್ನು ತಿಳಿಸಿದಳು. ಹಾಗೆಯೇ ಅವರ ಆಶ್ರಮವನ್ನು ನೋಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದಳು.
ಭಾರ್ಗವಿ ಮೇಡಂ ಅವರು ತಮ್ಮ ಬೇಡಿಕೆಗೆ ಸ್ಪಂದಿಸಿದ್ದು ಬಂದಿದ್ದವರಿಗೆ ಮಹದಾನಂದ ತಂದಿತು. “ಈಗಲೇ ಬನ್ನಿ ಮೇಡಂ ಹೋಗೋಣ” ಎಂದು ತಾವು ತಂದಿದ್ದ ವಾಹನದಲ್ಲೇ ಭಾರ್ಗವಿಯನ್ನು ಕರೆದೊಯ್ದರು. ಮೈಸೂರಿನ ಹೊರವಲಯದಲ್ಲಿ ಸುಮಾರು ದೂರ ಕ್ರಮಿಸಿದ ನಂತರ ಆಶ್ರಮವೊಂದು “ಮಮತಾ” ಎಂಬ ನಾಮಫಲಕವನ್ನು ಹೊತ್ತು ನಿಂತಿತ್ತು.

ವಾಹನದಿಂದ ಕೆಳಗಿಳಿದ ಭಾರ್ಗವಿ ಸುತ್ತಲೂ ತನ್ನ ನೋಟ ಹರಿಸಿದಳು. ಅದನ್ನರಿತವರಂತೆ ಅವಳನ್ನು ಕರೆತಂದವರು ಅಕ್ಕಪಕ್ಕದಲ್ಲಿರುವ ಕಟ್ಟಡಗಳೂ ಇದಕ್ಕೇ ಸೇರಿದವು. ಒಂದೆಡೆ ಕಾರ್ಯಾಗಾರ, ಮತ್ತೊಂದೆಡೆ ಶಾಲೆ ಪ್ರಾರಂಭಿಸಬೇಕೆದು ಉದ್ದೇಶಿಸಿದ್ದೇವೆ ಬನ್ನಿ ಮೇಡಂ” ಎಂದು ಗೇಟು ತೆರೆದು ಒಳಕ್ಕೆ ಬರಮಾಡಿಕೊಂಡರು.

ವಿಶಾಲವಾದ ಬಯಲು, ಗಿಡಮರಗಳಿಂದ ಶೋಭಿಸುತ್ತಿತ್ತು. ಸೀದ ಹೊರಟ ಭಾರ್ಗವಿಗೆ ಎದುರಿಗೆ ಗಣಪನ ವಿಗ್ರಹ ಕಾಣಿಸಿತು. ಅದರ ಮುಂದೆ ಸಣ್ಣದಾಗಿ ಉರಿಯುತ್ತಿರುವ ದೀಪಗಳು. ಅದೊಂದು ಚಿಕ್ಕ ಸಭಾಂಗಣದಂತೆ ಭಾಸವಾಯಿತು. ಏಕೆಂದರೆ ಒಂದು ಪುಟ್ಟ ವೇದಿಕೆಯಿತ್ತು. ಮಳೆಗಿಳೆ ಬಂದಾಗ ರಕ್ಷಣೆ ಕೊಡಲು ಮೇಲ್ಗಡೆ ಶೀಟಿನ ಹೊದಿಕೆ. ಮೇಲಿನಿಂದ ತೂಗುಬಿದ್ದ ಫ್ಯಾನು, ಲೈಟುಗಳಿದ್ದವು. ವಿನಾಯಕನಿಗೆ ಕೈಮುಗಿದು ಜೊತೆಯಲ್ಲಿದ್ದವರ ಮಾರ್ಗದರ್ಶನದಂತೆ ಬಲಭಾಗಕ್ಕೆ ತಿರುಗಿ ನಡೆದಳು. ಮೂರು ಮೆಟ್ಟಿಲುಗಳ ಸಾಲು ಅವುಗಳನ್ನು ಹತ್ತಿದೊಡನೆ ತೆರೆದ ಬಾಗಿಲು ಭಾರ್ಗವಿಯನ್ನು ಸ್ವಾಗತಿಸಿತು. ವೆರಾಂಡ, ದಾಟಿಹೋದರೆ ದೊಡ್ಡದಾದ ಹಾಲ್, ಎರಡೂ ಕಡೆಗೂ ಕೊಠಡಿಗಳ ಸಾಲು. ಸುಮಾರು ೬+೬ =೧೨ ಕೊಠಡಿಗಳು. ಇಪ್ಪತ್ತೈದು ಮಹಿಳೆಯರು, ಕೆಲವರು ಮಕ್ಕಳು ವಾಸಿಸುತ್ತಿದ್ದಾರೆಂದು ಪೈಲಿನಲ್ಲಿ ಮಾಹಿತಿ ಓದಿದ ನೆನಪು. ಸಿಬ್ಬಂದಿವರ್ಗ ಎಂದುಕೊಂಡೇ ಮುಂದೆ ನಡೆದಾಗ ಅಲ್ಲಿಯೂ ಒಂದು ವೆರಾಂಡ ಒಂದು ಪಕ್ಕದಲ್ಲಿ ಅಡುಗೆಮನೆ, ಅದಕ್ಕೆ ಹೊಂದಿಕೊಂಡಂತೆ ಉಗ್ರಾಣ, ಮತ್ತೊಂದು ಪಕ್ಕದಲ್ಲಿ ಬಾತ್‌ರೂಮು, ಹಿಂದೆ ಹಿತ್ತಲು, ಬಟ್ಟೆಬರೆ ತೊಳೆಯಲು ಜಾಗ, ಪಾತ್ರೆಪಡಗಗಳನ್ನು ಬೆಳಗಿಡಲು ಜಾಗ, ದೊಡ್ಡದಾದ ತೊಟ್ಟಿ. ಹಿಂದುಗಡೆ ತೆಂಗು, ಬಾಳೆಗಿಡಗಳೂ ಕಾಣಿಸಿದವು. ಸುತ್ತಲಿನ ವಾತಾವರಣ ಶಾಂತತೆಯಿಂದ ಕೂಡಿತ್ತು.

ಇದಿಷ್ಟು ಆಶ್ರಮ, ಅಕ್ಕಪಕ್ಕದ ಕಟ್ಟಡಗಳನ್ನು ನೋಡುವಿರಂತೆ ಎಂದು ಅಲ್ಲಿಗೂ ಭಾರ್ಗವಿಯನ್ನು ಕರೆದುಕೊಂಡು ಹೋದರು. ಕೀಲಿಕೊಟ್ಟ ಗೊಂಬೆಯಂತೆ ಅವರೊಡನೆ ಹೆಜ್ಜೆ ಹಾಕಿದಳು. ಒಂದು ಕಟ್ಟಡದಲ್ಲಿ ಪೂರ್ತಿ ಕಾರ್ಯಾಗಾರದ ಚಟುವಟಿಕೆಗಳಿಗಾಗಿಯೇ ಮೀಸಲಾಗಿಟ್ಟಿದ್ದಾರೆಂದು ತಿಳಿಯಿತು. ಹಪ್ಪಳ, ಸಂಡಿಗೆ, ಮಸಾಲೆ ಪುಡಿಗಳ ತಯಾರಿಕೆ. ಮತ್ತೊಂದು ವಿಭಾಗದಲ್ಲಿ ಬಟ್ಟೆಬ್ಯಾಗುಗಳು, ನರ್ಸಿಂಗ್ ಹೋಂ ಸಿಬ್ಬಂದಿಗೆ ಬೇಕಾದ ಏಪ್ರಾನ್, ಕ್ಯಾಪ್, ಮಕ್ಕಳಿಗೆ ಬೇಕಾಗುವ ಸಣ್ಣಪುಟ್ಟ ಪರಿಕರಗಳನ್ನು ತಯಾರು ಮಾಡುವ ಕೆಲಸ. ಮಹಿಳಾಮಣಿಗಳಿಂದ ಸಾಗುತ್ತಿತ್ತು. ಹಾಗೇ ಅಲ್ಲಿನ ಹಿತ್ತಲಲ್ಲಿ ತರಕಾರಿಗಳು, ವಿವಿಧ ಬಗೆಯ ಸೊಪ್ಪುಗಳು ಬೆಳೆಸಿದ್ದರು. ಆಶ್ರಮಕ್ಕೆ ಅಗತ್ಯವಾದ ಹಾಲಿಗೋಸ್ಕರ ಕೆಲವು ಹಸುಗಳು ಕೊಟ್ಟಿಗೆಯಲ್ಲಿದ್ದವು. ಎಲ್ಲ ವ್ಯವಸ್ಥೆಗಳೂ ಸುಸಜ್ಜಿತವಾಗಿದ್ದವು.

ಮತ್ತೊಂದು ಕಟ್ಟಡದಲ್ಲಿ ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಲು ಅನುಕೂಲಕರವಾದಂತಹ ವಸ್ತುಗಳು, ಒಂದು ಕೊಠಡಿಯನ್ನು ಕಛೇರಿ ಮಾಡಿಕೊಳ್ಳಲು ಅನುಕೂಲವಿತ್ತು. ಮತ್ತೆ ಒಂದೆರಡು ಕೊಠಡಿಗಳಲ್ಲಿ ಗೋಡೆಬೋರ್ಡ್ಗಳು, ಚಾರ್ಟ್ಗಳು, ಆಟದ ವಸ್ತುಗಳನ್ನು ತುಂಬಿಸಿಟ್ಟಿದ್ದ ಡಬ್ಬಗಳು, ಹೊರಗಡೆಗೆ ಒಂದೆರಡು ಶೌಚಾಲಯ, ಆಟದ ಬಯಲು, ಎಲ್ಲವನ್ನೂ ಒಂದು ಸುತ್ತು ಹಾಕಿಕೊಂಡು ಬಂದವಳೇ “ನೀವು ಶಾಲೆಯನ್ನು ಪ್ರಾರಂಭಿಸಲು ಹೊಂದಿರುವ ಉದ್ದೇಶ ನನಗೆ ಇಷ್ಟವಾಯಿತು. ಆದರೆ ಅಲ್ಲಿ ಆಫೀಸುರೂಂ ಸೇರಿ ಸುಮಾರು ಮೂರು ನಾಲ್ಕು ಕೊಠಡಿಗಳಷ್ಟೇ ಇವೆ. ಪಕ್ಕದಲ್ಲೇ ಒಂದು ಅಡುಗೆ ತಯಾರಿಕೆಗೆ ಏರ್ಪಾಡು ಇದೆ. ನನಗೆ ಕೊಠಡಿಗಳ ಸಂಖ್ಯೆ ಸಾಲದೆನ್ನಿಸುತ್ತದೆ” ಎಂದಳು ಭಾರ್ಗವಿ.

“ಮೇಡಂ ನಾವು ಸದ್ಯದ ಪರಿಸ್ಥಿತಿಯಲ್ಲಿ ಎಲ್.ಕೆ.ಜಿ.ಗೆ ಮಾತ್ರ ಇಲ್ಲಿರುವ ಮಹಿಳೆಯರ ಮಕ್ಕಳಿಗೆ ಮತ್ತು ಸಮೀಪದ ಮಕ್ಕಳಿಗೆಂದು ಆಲೋಚಿಸಿದ್ದೇವೆ. ಸುತ್ತಮುತ್ತಲೂ ಸಮೀಪದಲ್ಲೆಲ್ಲೂ ಬೇಬಿಸಿಟ್ಟಿಂಗ್ ಆಗಲೀ ಎಲೆ.ಕೆ.ಜಿ., ಯು.ಕೆ.ಜಿ ಯಾಗಲಿ ಇಲ್ಲವೇ ಇಲ್ಲ. ಅದಕ್ಕೋಸ್ಕರ ಇಲ್ಲಿ ಉದ್ದೇಶಿದ್ದೇವೆ.” ಎಂದರು.

“ಅಯ್ಯೋ ಅದಕ್ಕೇನು ಅಷ್ಟು ಪ್ರಾಬ್ಲಂ ಆಗುವುದಿಲ್ಲ. ಇತ್ತೀಚೆಗೆ ಸಣ್ಣಸಣ್ಣ ಮನೆಗಳಲ್ಲಿಯೇ ಪ್ರಾರಂಭಿಸುತ್ತಾರೆ. ಅಂಥಹುದರಲ್ಲಿ ಇಷ್ಟೊಂದು ಸುಸಜ್ಜಿತವಾದ ಜಾಗ, ಅನುಕೂಲ ಮಾಡಿಕೊಡಲು ನೀವು ಸಿದ್ಧರಿರುವಾಗ” ಎಂದ ಭಾರ್ಗವಿ “ಆಯಿತು ನಿಮ್ಮ ಸಂಸ್ಥೆಯಿಂದ ಒಂದು ಅರ್ಜಿ ಕೊಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ. ಅದೆಲ್ಲ ಸರಿ ಇಷ್ಟು ದೊಡ್ಡ ಜಾಗ ನಿಮಗೆ ಯಾರಿಂದ, ಹೇಗೆ ದೊರಕಿತೆಂದು ಕೇಳಬಹುದೇ?” ಎಂದಳು.

ಇದು ಮೈಸೂರಿನಲ್ಲಿಯೇ ಕಟ್ಟಡಗಳ ಕಾಂಟ್ರಾಕ್ಟ್ ಕೆಲಸ ಮಾಡಿಸುತ್ತಿದ್ದ ಒಬ್ಬ ಇಂಜಿನಿಯರದಂತೆ. ಅವರಿಗಿದ್ದ ನಾಲ್ಕು ಗಂಡುಮಕ್ಕಳಿಗಾಗಿ ಯಾವಾಗಲೋ ಕೊಂಡು ಇರಿಸಿದ್ದ ಜಾಗವಿದು. ಅವರ ಪುತ್ರರು ಓದು ಮುಗಿಸಿ ಕೆಲಸ ಹುಡುಕಿಕೊಂಡು ವಿದೇಶಗಳಿಗೆ ಹಾರಿಹೋದವರು ನಮ್ಮ ದೇಶಕ್ಕೆ ಬರಲೇ ಇಲ್ಲವಂತೆ. ಆ ಇಂಜಿನಿಯರರ ಬಾಲ್ಯದ ಗೆಳೆಯ ದಂಪತಿಗಳು ಒಂದು ಆಶ್ರಮ ಪ್ರಾರಂಭಿಸಬೇಕೆಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಅವರಿಗೆ ಬಹಳ ಕಡಿಮೆ ಬೆಲೆಗೆ ಇದನ್ನು ಕೊಟ್ಟರಂತೆ. ಆನಂತರ ಇದನ್ನು ಅಭಿವೃದ್ಧಿ ಪಡಿಸಿ ಈ ಹಂತಕ್ಕೆ ಕೊಂಡುಕೊಂಡವರು ತಂದಿದ್ದಾರೆ. ಈಗ ಅವರಿಲ್ಲ, ಅವರ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಅವರ ಹೆಸರು ಶ್ರೀ ದತ್ತಾತ್ರೇಯ ಮತ್ತು ಶ್ರಿಮತಿ ಜಾಹ್ನವಿ ಎಂದು ಬಹಳ ಒಳ್ಳೆಯ ಜನ” ಎಂದು ವಿವರಣೆ ಕೊಟ್ಟರು.

ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಅಲ್ಲಿನ ವಿದ್ಯಮಾನಗಳನ್ನು ಕಣ್ಣಾರೆ ಕಂಡು ಬಂದಳು ಭಾರ್ಗವಿ. ಕೇವಲ ಒಂದೆರಡು ತಿಂಗಳಲ್ಲಿ ಅವರ ಬೇಡಿಕೆಗಳು ಪೂರೈಸುವಂತೆ ಮಾಡಿಕೊಟ್ಟಳು. ಆ ಶಾಲೆಯ ಸೇವೆಗಾಗಿ ಉಪಾಧ್ಯಾಯಿನಿಯರನ್ನೂ ಒದಗಿಸಿಕೊಟ್ಟಳು. ಇದರಿಂದಾಗಿ ಆಶ್ರಮದ ನಂಟು ಭಾರ್ಗವಿಗೆ ಅರಿವಿಲ್ಲದೆಯೇ ಬೆಸೆದುಕೊಂಡಿತು. ಒಂದುದಿನ ಅಲ್ಲಿಗೆ ಹೋಗದಿದ್ದರೆ ಏನನ್ನೋ ಕಳೆದುಕೊಂಡ ಅನುಭವವಾಗಲು ಪ್ರಾರಂಭವಾಯಿತು. ವಿವರಿಸಲಾಗದಷ್ಟರ ಮಟ್ಟಿಗೆ ತನ್ನೆಲ್ಲ ಚಟುವಟಿಕೆಗಳು, ಅನುಭವಗಳ ಬಗ್ಗೆ ಮಕ್ಕಳಲ್ಲಿ, ತನ್ನ ಗೆಳತಿ ಸುಮನಾಳಲ್ಲಿ, ಅಣ್ಣ ಬಾಲುವಿನೊಡನೆ ಅಷ್ಟೇ ಏಕೆ ಗಂಡ ಸಿದ್ಧಾರ್ಥನೊಡನೆಯೂ ಹಂಚಿಕೊಳ್ಳುತ್ತಿದ್ದಳು.

ಭಾರ್ಗವಿ ನಿವೃತ್ತಿಯಾಗುವ ಸಮಯದಲ್ಲಿ ಹೇಳಿದಂತೆ ಅವರವರ ಆಲೋಚನೆಗೆ ತಕ್ಕಂತೆ ಪ್ರತ್ಯುತ್ತರಿಸುತ್ತಿದ್ದರು. ಎಲ್ಲರಿಗಿಂತ ಹೆಚ್ಚಾಗಿ ಸಿದ್ಧಾರ್ಥ ಒಳ್ಳೆಯ ಕೆಲಸ ಭಾರ್ಗವಿ ಇಂಥಹ ಅವಕಾಶಗಳು ಬಂದಾಗ ಬಿಡಬಾರದು. ಸದುಪಯೋಗಪಡಿಸಿಕೊಳ್ಳಬೇಕು. ಕೆಲಸ ಮಾಡುವುದೂ, ಅದರಲ್ಲಿ ಹೆಸರು ಗಳಿಸುವುದು ಹೆಚ್ಚುಗಾರಿಕೆಗಿಂತ ಇಂಥಹ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಸಿಗುವ ಗೌರವಾದರಗಳೇ ಬೇರೆ ಎಂದು ಹುರಿದುಂಬಿಸುತ್ತಿದ್ದ.

ಯಾರು ಏನೇ ಹೆಳಿದರೂ ಭಾರ್ಗವಿಯ ನಿರ್ಧಾರ ಮಾತ್ರ ದಿನೇದಿನೇ ಗಟ್ಟಿಯಾಗುತ್ತಲೇ ಇತ್ತು. ಗೆಳತಿ ಸುಮನಾಳ ಜೊತೆಗೆ ಹೇಳಿಕೊಳ್ಳುತ್ತಿದ್ದುದೂ ಅದನ್ನೇ. ಎಲ್ಲವೂ ಒಂದು ಹಂತಕ್ಕೆ ಬರುವಷ್ಟರಲ್ಲಿ ಭಾರ್ಗವಿಯ ಹಣಕಾಸಿನ ವ್ಯವಹಾರವೂ ಪೂರ್ತಿಯಾಗುವ ಘಟ್ಟಕ್ಕೆ ಬಂದಿತು. ತಾನು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನುಭವಿಸುತ್ತಿದ್ದ ಆತಂಕ, ದಾವಂತ ಎಲ್ಲವೂ ಈಗ ತಹಬಂದಿಗೆ ಬಂದಿದ್ದವು. ಶಾಂತಿ ಸಮಾಧಾನದಿಂದ ದಿನಗಳು ಕಳೆಯುತ್ತಿದ್ದವು.

ಹೀಗೇ ಒಂದುದಿನ ಆಶ್ರಮಕ್ಕೆ ಭೇಟಿಕೊಟ್ಟು ತನ್ನ ಗೆಳತಿ ಸುಮನಾಳನ್ನು ಮಾತನಾಡಿಸಿಕೊಂಡು ಮನೆಗೆ ಹಿಂತಿರುಗಿದಳು ಭಾರ್ಗವಿ. ಗೇಟು ತೆರೆದು ಒಳಗೆ ಬಂದು ಪರ್ಸಿನಿಂದ ಮುಂಬಾಗಿಲ ಕೀ ತೆಗೆಯುವಷ್ಟರಲ್ಲಿ ಮನೆಯ ಬಾಗಿಲು ತೆರೆದುದ್ದುದನ್ನು ಕಂಡು ಸಿದ್ಧಾರ್ಥನೇನಾದರೂ ಬಂದಿರಬಹುದು. ನನಗೆ ಸರ್‌ ಪ್ರೈಸ್ ಕೊಡಲು ಬಂದಿದ್ದಾರೋ ಏನೋ ಎಂದುಕೊಳ್ಳುತ್ತಿರುವಾಗಲೇ ಮಗಳು ಮಾಲಿನಿಯ ಮುಖ ಕಾಣಿಸಿತು.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45907

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *