ಬೆಳಕು-ಬಳ್ಳಿ

ನಮ್ಮ ಮನೆಯ ದೀಪ

Share Button

ಮನ ಮುದುಡಿ ದುಃಖ ಮೈದಳೆದಾಗ,
ಮೊಗದಲಿ ಕಿರು ನಗೆಯ ತರುವವಳು —
ಎನ್ನ ಮಗಳು

ಭರವಸೆ ಕುಸಿದು,
ಕಣ್ಣಿಗೆ ಕತ್ತಲೆ ಕವಿದಾಗ,
ಬದುಕಿಗೆ ಬೆಳಕು ಚೆಲ್ಲುವ ದೀವಿಗೆಯಾದವಳು —
ಎನ್ನ ಕುವರಿ

ಕಾಲಚಕ್ರ ತಿರುಗಿ,
ವಯೋಮಾನ ಏರಿ,
ಹಿರಿಯರೆಂಬ ಹಣೆಪಟ್ಟಿ ಬಂದಾಗಲೂ
ಮತ್ತೆ ಮುಗ್ಧತನ ತುಂಬಿ
ಮಗುವಾಗಿಸಿದವಳು —
ಎನ್ನ ಪುತ್ರಿ

ನಿರೀಕ್ಷೆಗಳ ಭಾರ ಎದುರಿಸಲಾಗದೆ,
ಆತಂಕ ಮನೆ ಮಾಡಿ
ಎದೆ ಬಡಿದುಕೊಂಡಾಗ,
ಧನಾತ್ಮಕ ಚಿಂತನೆಗಳ ತುಂಬಿ
ತಬ್ಬಿ ಸಂತೈಸಿದವಳು —
ಈ ನನ್ನ ಕಣ್ಮಣಿ

ಯಾಂತ್ರಿಕ ಬದುಕಿನ
ಏಕತಾನತೆಯ ಬೇಸರದಲ್ಲಿ,
ಮಗಳಾಗಿ ಹುಟ್ಟಿ
ಖುಷಿಯ ಕ್ಷಣಗಳನು ತುಂಬಿ,
ಬದುಕಿನ ಸೊಗಸಿಗೆ
ಮತ್ತೆ ಮರುಳಾಗಿಸಿದವಳು —
ಈ ನನ್ನ ಗೊಂಬೆ

ಕಕ್ಕುಲತೆಯಿಂದ
ಮನದ ಗೆಳತಿಯಂತೆ
ಕಷ್ಟ-ಸುಖಗಳ ಕೇಳಿ,
“ಈ ಸ್ನೇಹಬಂಧ ಎಂದೆಂದಿಗೂ
ಮುರಿಯದು” ಎಂದು
ಮಾತು ಕೊಟ್ಟವಳು —
ಈ ನನ್ನ ಮನೆದೀಪ

ಮಗಳು ಎಂದರೆ
ಮನೆಯಂಗಳದ ನಗುವಷ್ಟೇ ಅಲ್ಲ;
ಮನದ ಕತ್ತಲೆಗೆ ಬೆಳಕು,
ಬದುಕಿನ ಬಿರುಗಾಳಿಗೆ ಆಸರೆ,
ಹೃದಯದ ನೋವಿಗೆ ಮದ್ದು,
ಮತ್ತು…

ಬದುಕು ಇನ್ನೂ ಸುಂದರವಾಗಿದೆ
ಎಂದು ನೆನಪಿಸುವ
ಒಂದು ಪುಟ್ಟ ದೀವಿಗೆ.

-ಕೆ.ಎಂ ಶರಣಬಸವೇಶ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *