ಬದುಕಿನಲ್ಲಿ ಎಲ್ಲವೂ ಇದೆ, ಆದರೆ ನೆಮ್ಮದಿನೇ ಇಲ್ಲ, ಏನೋ ಮಿಸ್ಸಿಂಗ್ ಅಂತ ಆಗಾಗ್ಗೆ ಬಡಬಡಿಸುವ ನಮಗೆ ಆ ಮಿಸ್ಸಿಂಗ್ ಮಿಸ್ಟರಿ ಅರ್ಥವಾಗಬೇಕೆಂದರೆ ಜೋಗಿರವರ “ಸ್ವಲ್ಪ ದುಃಖಪಡಿ “ ಪುಸ್ತಕ ಓದಿದ್ರೆ ಸಾಕು, ಎಲ್ಲ ತಿಳಿದುಬಿಡುತ್ತದೆ.
ನಾವು ಗಳಿಸಿರುವ ಹೆಸರು, ಸಂತೋಷ, ಗೌರವ, ದುಡ್ಡಿನ ಮಧ್ಯೆ “ being unhappy” ಆಗಿಬಿಟ್ಟರೆ, ಆ ನಮ್ಮ ಸಂತೋಷಕ್ಕೆ ಒಂದು ಅರ್ಥ ಅನ್ಸುತ್ತೆ. ಅಂದರೆ, ಇನ್ನೊಬ್ಬರ ದುಃಖವನ್ನು, ನಾವು ಒಂದಿಷ್ಟು ನಮ್ಮ ಕಣ್ಣಲ್ಲಿ ಇಟ್ಟುಕೊಂಡುಬಿಟ್ರೆ, ಹೃದಯದಲ್ಲಿ ಫೀಲ್ ಮಾಡಿಬಿಟ್ರೆ ಸಾಕು, ನಮ್ಮ ಸಂತೋಷ ಇಮ್ಮಡಿಯಾಗುತ್ತೆ. ಈ ನಿಟ್ಟಿನಲ್ಲಿ ನನ್ನದೊಂದು ಪ್ರಯತ್ನ. ಸುಂದರ ಬದುಕನ್ನು ಕಟ್ಟಿಕೊಳ್ಳಲು ನೂರಾರು ಕನಸುಗಳ ಬೆನ್ನೇರಿ ಹೊರಟಿರುವ NRI ಗಳ ಕತೆಯನ್ನು ಹೇಳೋಣ ಅಂತ. ಬದುಕನ್ನು ನಾವು ರೂಪಿಸಿಕೊಳ್ಳುತ್ತೇವೆಯೋ ಅಥವಾ ಬದುಕೇ ನಮ್ಮನ್ನು ರೂಪಿಸುತ್ತದೋ, ಒಟ್ಟಿನಲ್ಲಿ ಬಣ್ಣ ಬಣ್ಣದ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ಹೋಗುವ ಅನಿವಾಸಿ ಭಾರತೀಯರ ಬವಣೆಯ ಅವ್ಯಕ್ತ ಬದುಕನ್ನೊಮ್ಮೆ ನೋಡಿ ಬರೋಣ.
ಅಶ್ವಿನಿ
22 ರ ಹರೆಯದ ಅಶ್ವಿನಿ, ಗಾಯತ್ರಿ-ಮಂಜುನಾಥ್ ರವರ ಏಕೈಕ ಪುತ್ರಿ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಳು. ತಂದೆ-ತಾಯಿಗೋ ಎಲ್ಲಿಲ್ಲದ ಸಂಭ್ರಮ. ಮಗಳ ಭವಿಷ್ಯಕ್ಕೆ ಬ್ಯಾಂಕ್ ಸಾಲ ಮಾಡಿ ವಿದೇಶಕ್ಕೆ ಕಳಿಸಲು ತಯಾರಿ ಮಾಡಿಕೊಂಡಿದ್ದರು. ಮಗಳು ಹೊರಡುವ ದಿನದಂದು ಸುತರಾಂ ಅಳುವ ಸೀನ್ ಬೇಡವೇ ಬೇಡ ಎಂದು ಇಬ್ಬರೂ ನಿರ್ಧರಿಸಿ, ಮನೆ ದೇವರ ಮೇಲೆ ಮಗಳ ಸುರಕ್ಷತೆಯ ಭಾರ ಹೊರಿಸಿ ಸಂತೋಷವಾಗಿ ಕಳಿಸಿಕೊಡಬೇಕೆಂದು ತೀರ್ಮಾನಿಸಿ ಕಣ್ಣೀರನ್ನು ಒಳಗೆ ಅದುಮಿಟ್ಟು ಕೊಂಡು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದರು. ಸಖೇದಾನಂದದ ಭಾವದೊಂದಿಗೆ ಭಾರವಾದ ಮನಸ್ಸಿನಲ್ಲಿ ಮನೆಗೆ ಸೇರಿದರು.
ಮನೆಯ ಒಳಗೆ ಕಾಲಿಡುತ್ತಲೇ ಮನೆ ಖಾಲಿ ಎನಿಸಿತು. ಅವಳ ಬಾಲ್ಯ, ಮೊದಲ ಬಾರಿ ಶಾಲೆಗೆ ಕಳಿಸುವಾಗ ಅವಳು ಅತ್ತಿದ್ದು, ಅ.ಆ. ಇ. ಈ ಹೇಳುವಾಗ ತಡವರಿಸುತ್ತಿದ್ದುದು, home work ಮಾಡಿಸುವಾಗ ಹಠ ಮಾಡುತ್ತಿದ್ದುದು, ಕನ್ನಡಿ ಮುಂದೆ ನಿಂತುಕೊಂಡು ಟೀಚರ್ ತರಹ ನಟಿಸುತ್ತಿದ್ದುದು ಎಲ್ಲವನ್ನು ನೆನಪಿಸಿಕೊಳ್ಳುತ್ತಾ, ಎಷ್ಟು ಬೇಗ ದಿನಗಳು, ವರ್ಷಗಳು ಕಳೆದುಹೋಯಿತು, ತಮ್ಮ ಮಗಳು ಸ್ವಂತಂತ್ರ ಬದುಕು ಕಟ್ಟಿಕೊಳ್ಳುವ ಮಟ್ಟಿಗೆ ಬೆಳೆದುಬಿಟ್ಟಳೆ? ನಮ್ಮಿಂದ ದೂರ ಹೋಗಿಬಿಟ್ಟಳ? ….ಇನ್ನು ಇಬ್ಬರಿಗೂ ಕಣ್ಣೀರು ತಡೆಯುವ ಯಾವ ಶಕ್ತಿಯೂ ಇರಲಿಲ್ಲ. ಹಗುರವಾಗುವವರೆಗೂ ಅತ್ತುಬಿಟ್ಟರು.
ಇತ್ತ, ವಿಮಾನ ಹೊರಟಾಗ, ಕಿಟಕಿಯಿಂದ ಕೆಳಗೆ ನೋಡಿದ ಅಶ್ವಿನಿಗೆ ಬೆಂಗಳೂರು ನಿಧಾನವಾಗಿ ಚಿಕ್ಕದಾಗುತ್ತಾ ಹೋಯಿತು. ತನ್ನ ಮನೆ, ಅಪ್ಪ-ಅಮ್ಮ, ಸ್ನೇಹಿತರು, ಕಾಲೇಜು, ಪ್ರತಿದಿನದ ಪರಿಚಿತ ಬದುಕು—ಎಲ್ಲವೂ ಆ ಮೋಡಗಳ ಕೆಳಗೆ ಮರೆಯಾಯಿತು. ವಿಮಾನ ಟೇಕ್ ಆಫ್ ಆಗುವಾಗ ಹೊಟ್ಟೆಯಲ್ಲಿ ಏನೋ ಅವರ್ಣನೀಯ ತಳಮಳ.
ಸುಮಾರು 24 ಗಂಟೆಗಳ ಪ್ರಯಾಣ ಮುಗಿಸಿ ಲೋಸ್ ಏಂಜೆಲಿಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ಅಮೆರಿಕದ ವಲಸೆ ನಿಯಮಗಳನ್ನು ಮುಗಿಸಿದಳು. ಒಮ್ಮೆ ಕ್ಷಣ ಕಾಲ ಸುಮ್ಮನೆ ನಿಂತು ಸುತ್ತಲು ಕಣ್ಣನ್ನು ಹಾಯಿಸಿದಳು. ನೆಲದ ಮೇಲೆ ಕಾಲಿಟ್ಟ ಕ್ಷಣ ಅವಳ ಹೃದಯದಲ್ಲಿ ಸಾವಿರ ಭಾವನೆಗಳು ಏಕಕಾಲಕ್ಕೆ ಹೌಹಾರಿದವು. “ ಇದೆ ನನ್ನ ಕನಸುಗಳ ಅಮೆರಿಕ! ಎಂದು ಮನಸು ಹರ್ಷದಿಂದ ಕೂಗಿತು. ಹೊಸ ಬದುಕಿನ ಬಾಗಿಲು ತೆರೆದಿತ್ತು. ತಾನು ತಂಗಬೇಕಿದ್ದ ವಸತಿ ಸಮುಚ್ಚಯಕ್ಕೆ ಉಬರ್ ಹಿಡಿದು “ದೇಶ ಎಷ್ಟು ವ್ಯವಸ್ಥಿತವಾಗಿದೆ” ಎಂದು ಕಾರಿನ ಕಿಟಕಿಯಿಂದಲೇ ಕಣ್ಣನ್ನು ಮಿಟುಕಿಸದೆ ನೋಡುತ್ತಾ ಬಂದಳು.
ಒಂದು ವಾರ ತನ್ನ ಕೊಠಡಿಯನ್ನು ಸಿದ್ಧಗೊಳಿಸುವುದೇ ಆಯಿತು. ಕಾಲೇಜ್ಗೆ ಹೇಗೆ ಹೋಗಬೇಕು, ಮನೆಗೆ ಸಾಮಾನು, ತರಕಾರಿಗಳು ಎಲ್ಲಿ ಸಿಗುತ್ತವೆ ಇತ್ಯಾದಿ ಮಾಹಿತಿಗಳನ್ನು ತನ್ನ ಕೊಠಡಿ ಸಹವಾಸಿಯಿಂದ ತಿಳಿದುಕೊಂಡಳು. ಹೊಸ ದೇಶ… ಹೊಸ ಜನ… ಭಾಷೆಯ ಹೊಸ ಶೈಲಿ.. ಹೊಸ ಸಂಸ್ಕೃತಿ…ಹೊಸ ಹವಾಮಾನ… ಹೊಸ ವಿಶ್ವವಿದ್ಯಾಲಯ…ಎಲ್ಲವನ್ನು ಗಮನಿಸುತ್ತಿದ್ದಳು ಅಶ್ವಿನಿ . ಸ್ವಲ್ಪ ಆಕರ್ಷಿತಳೂ ಆಗಿದ್ದಳು. “ಅಮ್ಮ, ಇಲ್ಲಿ ನಾನು happy ಯಾಗಿ ಇದ್ದೇನೆ, ನೀವು worry ಮಾಡೋದು ಬೇಡ” ಎಂದು ಅಂದಿದ್ದಳು.
ಆದರೆ ದಿನಗಳು ಕಳೆಯುತ್ತಿದ್ದಂತೆ ಅವಳಲ್ಲಿ ಬಂದಾಗ ಇದ್ದ ಉತ್ಸಾಹ ಕಮ್ಮಿಯಾಗಿತ್ತು. ಒಳ್ಳೆ ನಿದ್ರೆ ಬರುತ್ತಿಲ್ಲ, ಕಾಲೇಜ್ಗೆ ಹೋಗಲು ಯಾಕೋ ಬೇಸರ. ಬೆಳಗ್ಗೆ ಏಳೋದಿಕ್ಕೆ ತುಂಬಾ ಕಷ್ಟ ಆಗುತ್ತಿತ್ತು. ಸುಮ್ಮನೆ ಒಬ್ಬಳೇ ಅಳುತ್ತಿದ್ದಳು. ಮನಸಿನಲ್ಲಿ ಏನೋ ಒಂದು ತರಹದ ಬೇಗುದಿ. ದಿನ ರಾತ್ರಿ ತನ್ನ ಅಪಾರ್ಟ್‌ಮೆಂಟ್‌ನ ಕಿಟಕಿಯ ಬಳಿ ಒಬ್ಬಳೇ ನಿಂತು ಏನೋ ಯೋಚಿಸುತ್ತಿದ್ದಳು. ಯಾಕೆ ಹೀಗೆ ಆಗುತ್ತಿದೆ, ಒಂದು ವಿಚಿತ್ರವಾದ ಖಾಲಿತನ ಕಾಡುತ್ತಿದೆಯಲ್ಲಾ? ಅಂತೂ ಸಾವರಿಸಿಕೊಂಡು ಕಾಲೇಜಿಗೆ ಹೋಗಿ ಬಂದಿದ್ದಳು.
ತಕ್ಷಣವೇ ತಾಯಿಯ ಫೋನ್ ಬಂತು: “ ಮಗಳೇ, ಕಾಲೇಜ್ಗೆ ಹೋಗಿದ್ಯಾ, ಏನು ಊಟ ಮಾಡಿದೆ?
ಅಶ್ವಿನಿ ಕೈಯಲ್ಲೂ ಫೋನ್ ಇತ್ತು . ಆದರೆ ಮಾತು ನೈಜವಾಗಿ ಹೊರಬರಲಾಗದೆ ಅಮ್ಮನ ಧ್ವನಿ ಕೇಳುತ್ತಿದ್ದಂತೆ ತುಟಿಗಳು ನಡುಗುತ್ತಿದ್ದವು. ಕಣ್ಣಂಚಿನಲ್ಲಿ ನಿಂತಿದ್ದ ಕಣ್ಣೀರು ಕೆನ್ನೆಯ ಮೇಲೆ ಜಾರಿತು. ಮಾತುಗಳು ಗಂಟಲಲ್ಲೇ ಸಿಲುಕಿಕೊಂಡವು. ಕೆಲವು ಕ್ಷಣ ಏನೂ ಹೇಳದೇ ಫೋನ್ ಹಿಡಿದುಕೊಂಡೇ ಮೌನವಾಗಿ ಅತ್ತುಬಿಟ್ಟಳು. ಫೋನ್ ನ ಆ ತುದಿಯಲ್ಲಿ ಅಮ್ಮನಿಗೆ ಅವಳ ಅಳುವಿನ ಸದ್ದು ಮಾತ್ರ ಕೇಳಿಸುತ್ತಿತ್ತು.
“ ಮಗಳೇ, ಏನಾಯಿತು, ಅಳಬೇಡ, …ನಾವೆಲ್ಲಾ ನಿನ್ನ ಜೊತೆ ಇದ್ದೇವೆ, ನೀನು ದೂರದಲ್ಲಿದ್ದೀಯ ಅಷ್ಟೇ, ಎಲ್ಲವೂ ಸರಿಯಾಗುತ್ತದೆ, ಧೈಯ ಕಳೆದುಕೊಳ್ಳಬೇಡ”. ತಾಯಿಯ ಧ್ವನಿಯಲ್ಲಿ ಇದ್ದ ಮಮತೆ ಅವಳ ಮನಸಿಗೆ ಸ್ವಲ್ಪ ನೆಮ್ಮದಿ ನೀಡಿತು. ಕಣ್ಣೀರು ಒರೆಸಿಕೊಂಡು ಬಿಕ್ಕಳಿಸುತ್ತಲೇ ತನ್ನ ನೋವನ್ನು ಹೇಳಲು ಪ್ರಯತ್ನಿಸಿದಳು. ತಾಯಿಯ ಪ್ರೀತಿಯ ಭರವಸೆಯ ಮಾತುಗಳು ಅವಳಿಗೆ ಸ್ವಲ್ಪ ಹಗುರವೆನಿಸಿತು.
ಆ ದಿನ ಮೊದಲ ಬಾರಿಗೆ ಅಶ್ವಿನಿಗೆ ಅರ್ಥವಾಯಿತು. ತಾಯ್ನಾಡನ್ನು ಬಿಟ್ಟು ಮತ್ತೊಂದು ದೇಶಕ್ಕೆ ಬರುವುದು ಎಂದರೆ ಕೇವಲ ಸಾವಿರಾರು ಮೈಲುಗಳ ಪ್ರಯಾಣವಲ್ಲ; ಪರಿಚಿತವಾದ ಒಂದು ಬದುಕಿನಿಂದ ಅಪರಿಚಿತವಾದ ಮತ್ತೊಂದು ಬದುಕಿನೊಳಗೆ ಕಾಲಿಡುವುದು.
“ನಾನು ಇಲ್ಲಿ ಬಂದಿರುವುದು ಸೋಲಲು ಅಲ್ಲ… ನನ್ನ ಕನಸನ್ನು ನನಸು ಮಾಡಿಕೊಳ್ಳಲು .” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡರೂ ಏನೋ ದುಃಖಪೂರಿತ ಮನಸ್ಥಿತಿ, ವಿಷಾದ ಛಾಯೆ! ಮಂಕುತನ, ಒಂಟಿತನದ ಭಾವ. ಭಾರತ ಬೇರು-ಅಮೆರಿಕದ ಬದುಕು, ಎರಡು ಸಂಸ್ಕೃತಿಗಳ ನಡುವೆ ಬೆಳೆಯಬೇಕಾದ ಸವಾಲು ಅವಳದಾಗಿತ್ತು.
ಅಮೆರಿಕಾ – “The Land of Opportunities.” ……ಅವಕಾಶಗಳ ನಾಡು. ಆದರೆ ಅವಕಾಶಗಳ ಹಿಂದೆ ಇರುವ ಮತ್ತೊಂದು ಮುಖದ ಪರಿಚಯ ಅಶ್ವಿನಿಗೆ ತಿಳಿಯುತ್ತಾ ಹೋಯಿತು.
ತನ್ನವರನ್ನು ಬಿಟ್ಟು ಬಂದ ನೋವು, ಪರಿಚಯವಿಲ್ಲದ ನೆಲದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಕಷ್ಟ…ತನ್ನವರಿಂದ ದೂರವಾಗಿ, ಅಪರಿಚಿತ ನೆಲದಲ್ಲಿ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವ ಸಂಘರ್ಷದ ಬದುಕು. ಭಾಷೆ, ಜನ, ಸಂಸ್ಕೃತಿ, ವಾತಾವರಣ—ಎಲ್ಲವೂ ಹೊಸದು. ಪರಸ್ಪರ ಭಾವನೆ, ನೋವುಗಳನ್ನು ಹಂಚಿಕೊಳ್ಳಲು ತನ್ನವರು ಎಂದು ಯಾರೂ ಇಲ್ಲ. ತಂದೆ- ತಾಯಿಯ ಬಳಿಯೂ ವ್ಯಕ್ತಪಡಿಸಲಾಗದ ಸಂದಿಗ್ಧ ಪರಿಸ್ಥಿತಿ. ಬದುಕಿನ ವಾಸ್ತವತೆ ಅವಳ ಎದೆಯನ್ನು ನಡುಗಿಸಿತ್ತು. ಓದಿನ ಜೊತೆಗೆ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು. ತನ್ನ ತಂದೆ ತಾಯಿಗೆ ಹೆಚ್ಚಿನ ಹೊರೆಯಾಗಬಾರದೆಂದು ಖರ್ಚು ವೆಚ್ಚಗಳನ್ನು ತಾನೇ ನಿಭಾಯಿಸಲು ತುಂಬಾ ಕಷ್ಟ ಪಡುತ್ತಿದ್ದಳು. ಉದ್ಯೋಗ ಸಿಕ್ಕದಿದ್ದರೆ ಭಾರತಕ್ಕೆ ಮರಳಬೇಕು ಎಂಬ ಅಸ್ಥಿರತೆ ಅವಳನ್ನು ಇನ್ನಷ್ಟು ಹೈರಾಣು ಮಾಡುತ್ತಿತ್ತು. ಎಲ್ಲವನ್ನೂ ತಾನು ಒಬ್ಬಳೇ ಸಂಭಾಳಿಸಬೇಕು ಎನ್ನುವ ಸತ್ಯ ಅರಿವಾಗುತ್ತಾ ಬಂತು . ಎಲ್ಲಾ ಪ್ರತಿಕೂಲಕ್ಕೂ ಒಗ್ಗಿಸಿಕೊಳ್ಳೋದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ತಂದೆ ನನ್ನ ಭವಿಷ್ಯಕ್ಕಾಗಿ ಸಾಲ ಮಾಡಿದ್ದಾರೆ. ತಾಯಿ ನನ್ನ ಭವಿಷ್ಯವನ್ನು ಬಯಸುತ್ತಿದ್ದಾರೆ, ನನಗೂ ಕನಸಿದೆ. ಇಲ್ಲಾ… ನಾನು ದೃತಿಗೆಡಬಾರದು. ಈ ಸಂಘರ್ಷಕ್ಕೆ ನಾನು ರೂಢಿಸಿಕೊಳ್ಳಬೇಕು. ನನ್ನ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಳು.
“struggle is my strength” ಎಂದು ಭರವಸೆಯೊಂದಿಗೆ, ವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳುವ ಅಶ್ವಿನಿಯಂತಹ ಎಷ್ಟೋ NRI ಗಳ ಕತೆಯಿದು. ಅಶ್ವಿನಿಯ ಬದುಕಿನ ಮತ್ತೊಂದು ಮುಖವನ್ನು ನೋಡಿದ ನಾವು ಅವಳ ನೋವನ್ನು ಸ್ವಲ್ಪ ಮಟ್ಟಿಗಾದರೂ ಫೀಲ್ ಮಾಡಿದರೆ, ಬಹುಶ: ನಮ್ಮ ಸಂತೋಷ ಜಾಸ್ತಿಯಾಗಬಹುದು. So let us be unhappy.
ಅರುಣ
ಅರುಣ ಮೈಸೂರಿನ ಹುಡುಗ. ಬಡತನದ ಕುಟುಂಬದಲ್ಲಿ ಹುಟ್ಟಿದವನಾದರೂ, ಅವನ ಕನಸುಗಳು ಮಾತ್ರ ದೊಡ್ಡದಾಗಿದ್ದವು. ತನ್ನ ಬುದ್ಧಿವಂತಿಕೆ, ಪರಿಶ್ರಮ ಮತ್ತು ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಅಮೆರಿಕಕ್ಕೆ ಬಂದಿದ್ದ. ಮಿಚಿಗನ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದ ಮೇಲೆ ಅವನಿಗೆ ಮಾತ್ರವಲ್ಲ, ಅವನ ಇಡೀ ಕುಟುಂಬಕ್ಕೂ ಒಂದು ಹೊಸ ಭರವಸೆ ಮೂಡಿತ್ತು. ಮನೆಯ ಪರಿಸ್ಥಿತಿಯೂ ನಿಧಾನವಾಗಿ ಸುಧಾರಿಸಿತ್ತು. ತಂಗಿಯರ ಮದುವೆ ಮಾಡಬೇಕಿತ್ತು. ತಂದೆ-ತಾಯಿಯ ವೈದ್ಯಕೀಯ ಖರ್ಚುಗಳಿದ್ದವು. ಮನೆಯ ಸಾಲ, ದಿನನಿತ್ಯದ ಖರ್ಚು, ಸಂಬಂಧಿಕರ ನಿರೀಕ್ಷೆಗಳು—ಒಂದೊಂದಾಗಿ ಎಲ್ಲವೂ ಅರುಣನ ಹೆಗಲ ಮೇಲೆ ಬಂದು ಕುಳಿತಿದ್ದವು. ಅವನು ಎಂದಿಗೂ ಅದನ್ನು ಹೊರೆಯೆಂದು ಭಾವಿಸಿರಲಿಲ್ಲ.
“ನಾನು ಇದ್ದೀನಲ್ಲ… ಎಲ್ಲವೂ ಸರಿಯಾಗುತ್ತದೆ.” ಎಂದು ತಂದೆ- ತಾಯಿಗೆ ಧೈರ್ಯ ಹೇಳುತ್ತಿದ್ದ. ಆ ಮಾತುಗಳನ್ನು ಹೇಳುವಾಗ ಅವನ ಧ್ವನಿಯಲ್ಲಿ ಆತ್ಮವಿಶ್ವಾಸ ಇರುತ್ತಿತ್ತು. ಆದರೆ ಒಂದು ದಿನ ಆ ಆತ್ಮವಿಶ್ವಾಸವೇ ಅವನಿಗೆ ಆಘಾತವಾಗಿ ತಿರುಗಿತು.
ಅಮೆರಿಕದ ಕಂಪನಿಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. ಹೊಸ ನಿಯಮಗಳು, ಪುನರ್‌ರಚನೆ, ವೆಚ್ಚ ಕಡಿತ… ಕೊನೆಗೆ ಅರುಣನಿಗೂ ಆ ಸುದ್ದಿ ಬಂತು. ಅವನ ಉದ್ಯೋಗ ಹೋಗಿತ್ತು.
ಕೆಲವು ಕ್ಷಣಗಳ ಕಾಲ ಅವನಿಗೆ ಆ ಮಾತುಗಳೇ ಅರ್ಥವಾಗಲಿಲ್ಲ.ಕಂಪ್ಯೂಟರ್ ಪರದೆಯ ಮುಂದೆ ಕುಳಿತಿದ್ದ ಅರುಣನ ಕಣ್ಣುಗಳು ಒಂದೇ ಕಡೆ ನೆಟ್ಟಿದ್ದವು.“ನನ್ನ ಕೆಲಸ ಹೋಯಿತಾ?” ಅವನ ಮನಸ್ಸಿನಲ್ಲಿ ಮೊದಲು ಬಂದ ಪ್ರಶ್ನೆ ಅದು ಅಲ್ಲ. “ಇದನ್ನು ಅಪ್ಪ-ಅಮ್ಮನಿಗೆ ಹೇಗೆ ಹೇಳಲಿ?” ಅದೇ ಅವನನ್ನು ಒಳಗಿನಿಂದ ಕಾಡತೊಡಗಿತು. ತಂಗಿಯ ಮದುವೆಯ ಖರ್ಚು? ತಂದೆಯ ವೈದ್ಯಕೀಯ ಚಿಕಿತ್ಸೆ? ತಾಯಿಯ ಔಷಧಿ? ಮನೆಯ ಮಾಸಿಕ ಖರ್ಚು? ತಾನು ಕಳುಹಿಸುತ್ತಿದ್ದ ಹಣ ನಿಂತರೆ ಮನೆಯ ಪರಿಸ್ಥಿತಿಏನಾಗಬಹುದು? ಒಂದೊಂದೇ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಸುತ್ತತೊಡಗಿದವು.
ಅವನು ತನ್ನ ತಂದೆಗೆ ಫೋನ್ ಮಾಡಿದ. “ಹಲೋ ಅಪ್ಪ…” “ಏನಪ್ಪಾ? ಕೆಲಸ ಹೇಗಿದೆ?”
ಆ ಒಂದು ಪ್ರಶ್ನೆ ಕೇಳಿದಾಗ ಅರುಣನ ಗಂಟಲು ಕಟ್ಟಿಕೊಂಡಿತು. “ಕೆಲಸ ಚೆನ್ನಾಗಿದೆ ಅಪ್ಪ…” ಎಂದು ಸುಳ್ಳು ಹೇಳಿದ. ಫೋನ್ ಇಟ್ಟ ನಂತರ ಬಹಳ ಹೊತ್ತು ಸುಮ್ಮನೆ ಕುಳಿತ. ಅವನಿಗೆ ಕೆಲಸ ಕಳೆದುಕೊಂಡ ನೋವಿಗಿಂತ, ತನ್ನನ್ನು ನಂಬಿಕೊಂಡಿದ್ದ ತಂದೆ-ತಾಯಿಯನ್ನು ನಿರಾಶೆಗೊಳಿಸುತ್ತಿದ್ದೇನೆ ಎಂಬ ಭಾವನೆಯೇ ಹೆಚ್ಚು ನೋವು ಕೊಟ್ಟಿತು.
ಮುಂದಿನ ಆರು ತಿಂಗಳಲ್ಲಿ ಕೆಲಸ ಸಿಗದಿದ್ದರೆ ತಾನು ಮರಳಿ ಭಾರತಕ್ಕೆ ಹೋಗಬೇಕೆಂಬ ವಾಸ್ತವ ಅವನ ಶಕ್ತಿಯನ್ನೇ ಕುಂದಿಸಿ ಬಿಟ್ಟಿತ್ತು. ತಕ್ಷಣವೇ ಅವನು ಕೆಲಸ ಹುಡುಕಲು ಆರಂಭಿಸಿದ. ಬೆಳಗ್ಗೆ ಲ್ಯಾಪ್‌ಟಾಪ್ ತೆರೆದು ರೆಸ್ಯೂಮ್ ಕಳಿಸಿದ..ಲಿಂಕ್ಡ್ ಇನ್ನಲ್ಲಿ ಉದ್ಯೋಗ ಹುಡುಕಿದ. ಸ್ನೇಹಿತರಿಗೆ ಮೆಸೇಜ್ ಮಾಡಿದ. ಇಂಟರ್ವ್ಯೂಗಳಿಗೆ ಹಾಜರಾಗುವುದು. ಉತ್ತರಕ್ಕೆ ಕಾಯುವುದು. ಕಂಪನಿಯಿಂದ ನಿರಾಕರಣೆ ಬರುವುದು. ಮತ್ತೆ ಅರ್ಜಿ ಹಾಕುವುದು. ಮೂರು ತಿಂಗಳಾದರೂ ಕೆಲಸ ಸಿಕ್ಕದಿದ್ದಾಗ ತುಂಬಾ ವಿಚಲಿತನಾದ. ಸ್ನೇಹಿತರ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ. ನಂತರ ಕುಟುಂಬದವರ ಫೋನ್‌ಗಳನ್ನು ತಪ್ಪಿಸಿಕೊಳ್ಳತೊಡಗಿದ. ತಂದೆ ಫೋನ್ ಮಾಡಿದಾಗ, “ನಂತರ ಮಾತಾಡ್ತೀನಿ ಅಪ್ಪ…” ಎಂದು ಹೇಳುತ್ತಿದ್ದ. ತಾಯಿ ಕೇಳುತ್ತಿದ್ದಳು,“ಏನಪ್ಪಾ, ನಿನ್ನ ಧ್ವನಿ ಯಾಕೋ ಸರಿ ಇಲ್ಲ?” “ಏನಿಲ್ಲ ಅಮ್ಮ… ಕೆಲಸದ ಟೆನ್ಷನ್ ಅಷ್ಟೇ.” ಎಂದು ಹೇಳುತ್ತಿದ್ದ.
ಅಮೆರಿಕದಲ್ಲಿ ಅವನ ಸುತ್ತಲೂ ಸಾವಿರಾರು ಜನರಿದ್ದರು. ಆದರೆ ಆ ದಿನಗಳಲ್ಲಿ ಅವನಿಗೆ ತಾನು ಮಾತ್ರ ಈ ಜಗತ್ತಿನಲ್ಲಿ ಒಂಟಿಯಾಗಿರುವಂತೆ ಅನಿಸತೊಡಗಿತು. ಕತ್ತಲೆಯ ಕೋಣೆಯಲ್ಲಿ ಮೇಲ್ಛಾವಣಿಯನ್ನು ನೋಡುತ್ತಾ “ ನಾಳೆ ಏನು? ನನ್ನ ಉದ್ಯೋಗ, ವೀಸಾ ಭವಿಷ್ಯ ಹೇಗೆ? ಕುಟುಂಬದ ಭರವಸೆ? ಹೊರಗೆ ಹಿಮ ಸುರಿಯುತ್ತಿದ್ದರೂ ಅವನೊಳಗೆ ಮಾತ್ರ ಭಯದ ತಾಪ ಉರಿಯುತ್ತಿತ್ತು.
“ನಾನು ಸೋತಿಲ್ಲ… ಆದರೆ ಈಗ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ.” ಅದು ಅವನ ಜೀವನದ ಅತ್ಯಂತ ಕಠಿಣ ಹಂತವಾಗಿತ್ತು. ಅವನಿಗೆ ಬೇಕಾಗಿದ್ದು ಕೇವಲ ಮತ್ತೊಂದು ಉದ್ಯೋಗವಲ್ಲ. ತನ್ನ ಮೇಲೆ ಮತ್ತೆ ನಂಬಿಕೆ ಇಡುವ ಧೈರ್ಯ. ತನ್ನ ಕುಟುಂಬಕ್ಕೆ ಸತ್ಯ ಹೇಳುವ ಧೈರ್ಯ.
ಪ್ರತಿ ಬಾರಿ ಇ-ಮೇಲ್ ತೆರೆದಾಗ ಅವನ ಹೃದಯ ಬಡಿತ ಹೆಚ್ಚಾಗುತ್ತಿತ್ತು. ಒಂದು ದಿನ ಅವನು ಲ್ಯಾಪ್‌ಟಾಪ್ ಮುಚ್ಚಿ ಬಹಳ ಹೊತ್ತು ಸುಮ್ಮನೆ ಕುಳಿತ. ಆ ದಿನ ಮೊದಲ ಬಾರಿಗೆ ಅವನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಆಲೋಚನೆ ಬಂತು. “ನನ್ನಲ್ಲಿ ಏನಾದರೂ ಕೊರತೆ ಇದೆಯಾ?” ಅದು ನಿಧಾನವಾಗಿ ಮತ್ತೊಂದು ಪ್ರಶ್ನೆಯಾಯಿತು. “ನಾನು ಇಷ್ಟು ವರ್ಷ ಮಾಡಿದ ಪರಿಶ್ರಮಕ್ಕೆ ಅರ್ಥವೇ ಇಲ್ಲವೇ?” ಅವನ ಕಣ್ಣುಗಳಲ್ಲಿ ನೀರು ತುಂಬಿತು. ಅವನು ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಆಗಲೇ ಅವನು ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಪ್ರತಿಯೊಂದು ನಿರಾಕರಣೆಯ ಈ-ಮೇಲ್ ಅವನ ಆತ್ಮವಿಶ್ವಾಸಕ್ಕೆ ಮತ್ತೊಂದು ಹೊಡೆತವಾಗಿತ್ತು. ಅದನ್ನು ಒಬ್ಬನೇ ಹಿಮ್ಮೆಟ್ಟಿಸಲು ಪ್ರಯತ್ನ ಪಡುತ್ತಿದ್ದ. ಸಂಪೂರ್ಣ ಕತ್ತಲೆಯ ನಡುವೆ ಒಂದು ಸಣ್ಣ ಬೆಳಕು ಇರುವಂತೆ, “ ಕೆಲಸ ಹೋಗಿದೆ…. ಜೀವನವಲ್ಲ” ಎಂದು ತನ್ನೊಳಗೆ ಧೈರ್ಯ ತಂದುಕೊಳ್ಳುತ್ತಿದ್ದ. ಎಂದಿನಂತೆ ತನ್ನ ಲ್ಯಾಪ್ಟಾಪ್ ತೆರೆದು, ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದ. ಅವನ ಕೆಲಸದ ಅನ್ವೇಷಣೆ ಮುಂದುವರಿದಿತ್ತು.
ಎಷ್ಟೋ NRI ಗಳ ಕತೆಯೂ ಅರುಣನ ಕತೆಯಂತೆ ಇರಬಹುದಲ್ವಾ? ಅವನ ಪ್ರಯತ್ನಕ್ಕೆ “ All the best” ಹೇಳೋಣ, ನಮ್ಮ ಸಂತೋಷ ಜಾಸ್ತಿಯಾಗುತ್ತೆ.
ಅರವಿಂದ
ಅರವಿಂದ ಒಬ್ಬ ಎನ್‌ಆರ್‌ಐ. ಸುಶೀಲಾ ಹಾಗೂ ಜಗದೀಶರವರ ಒಬ್ಬನೇ ಮಗ.ಅಮೆರಿಕಕ್ಕೆ ಬಂದಿದ್ದು ದೊಡ್ಡ ಕನಸಿನೊಂದಿಗೆ. ವಿದ್ಯಾಭ್ಯಾಸ, ಕೆಲಸ, ಒಳ್ಳೆಯ ಬದುಕು—ಇವೆಲ್ಲವೂ ಇದ್ದವು. ಆದರೆ ಈಗ ಅವನ ವೀಸಾ ಅವಧಿ ಮುಗಿದುಹೋಗಿತ್ತು. ಅಮೆರಿಕದಲ್ಲಿ ಕಾನೂನುಬದ್ಧವಾಗಿ ಉಳಿಯುವ ದಾರಿ ಏನು ಎಂಬುದು ಅವನಿಗೆ ಸ್ಪಷ್ಟವಾಗಿರಲಿಲ್ಲ. ಪ್ರತಿದಿನವೂ ವಲಸೆ ವಕೀಲರಿಗೆ ಕರೆ ಮಾಡುತ್ತಿದ್ದ. ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದ. ಆದರೆ ಪ್ರತಿಯೊಂದು ಉತ್ತರದ ಜೊತೆಗೆ ಮತ್ತೊಂದು ಹೊಸ ದಾಖಲೆ, ಮತ್ತೊಂದು ಹೊಸ ಪ್ರಕ್ರಿಯೆ, ಮತ್ತೊಂದು ಹೊಸ ಅನಿಶ್ಚಿತತೆ.
ಆ ಅನಿಶ್ಚಿತತೆಯ ನಡುವೆಯೇ ಒಂದು ದಿನ—ಫೋನ್ ರಿಂಗಣಿಸಿತು. ಭಾರತದಿಂದ ಬಂದ ಕರೆ. ಅರವಿಂದ ಎಂದಿನಂತೆ ಫೋನ್ ತೆಗೆದುಕೊಂಡ. “ಹಲೋ…”ಅತ್ತ ಕಡೆಯಿಂದ ತಾಯಿಯ ನಡುಗಿದ ಧ್ವನಿ.“ಅರವಿಂದ… ನಿನ್ನ ಅಪ್ಪ…”ಸ್ವಲ್ಪ ಮೌನ.“ಅಪ್ಪ ಹೋಗಿಬಿಟ್ಟರು, ”ಆ ಒಂದು ಮಾತು ಅರವಿಂದನ ಇಡೀ ಬದುಕನ್ನೇ ಒಡೆದು ಹಾಕಿದಂತಾಯಿತು. ಅವನ ಕೈಯಲ್ಲಿದ್ದ ಮೊಬೈಲ್ ಜಾರಿ ಬೀಳುವಂತಾಯಿತು.“ಅಮ್ಮಾ…!” ಅವನ ಧ್ವನಿ ನಡುಗಿತು. ಕೆಲವು ಕ್ಷಣಗಳ ಕಾಲ ಅವನಿಗೆ ಏನೂ ಅರ್ಥವಾಗಲಿಲ್ಲ. ಕಣ್ಣ ಮುಂದೆ ಅಪ್ಪನ ಮುಖ ಮಾತ್ರ. ಬಾಲ್ಯದಲ್ಲಿ ತನ್ನ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪ. ತಾನು ಅಮೆರಿಕಕ್ಕೆ ಹೊರಡುವಾಗ ವಿಮಾನ ನಿಲ್ದಾಣದಲ್ಲಿ ಕಣ್ಣೀರನ್ನು ಮರೆಮಾಚಿಕೊಂಡು, “ಚೆನ್ನಾಗಿ ಓದು… ದೊಡ್ಡವನಾಗು… ಒಂದು ದಿನ ನಿನ್ನನ್ನು ನೋಡಿ ನನಗೆ ಹೆಮ್ಮೆ ಆಗಬೇಕು,” ಎಂದು ಹೇಳಿದ್ದ ಅಪ್ಪ. ಅರವಿಂದ ಕಣ್ಣು ಮುಚ್ಚಿಕೊಂಡ. “ಅಪ್ಪ… ನಾನು ಬರುತ್ತೇನೆ. ಆದರೆ ಈಗ? ಅವನು ತಕ್ಷಣ ಪಾಸ್‌ಪೋರ್ಟ್ ತೆಗೆದುಕೊಂಡ. ಭಾರತಕ್ಕೆ ಹೋಗಬೇಕು. ಅಪ್ಪನನ್ನು ಕೊನೆಯ ಬಾರಿ ನೋಡಬೇಕು. ಆದರೆ ಪಾಸ್‌ಪೋರ್ಟ್ ತೆರೆದ ಕ್ಷಣವೇ ಅವನ ಹೃದಯ ಮತ್ತೆ ಕುಸಿಯಿತು. ವೀಸಾ ಅವಧಿ ಮುಗಿದಿತ್ತು. ಅಮೆರಿಕದಿಂದ ಹೊರಗೆ ಹೋದರೆ ಮತ್ತೆ ಅಮೆರಿಕಕ್ಕೆ ಹಿಂದಿರುಗಲು ಸಾಧ್ಯವಾಗದೇ ಇರಬಹುದೆಂಬ ಭಯ ಅವನನ್ನು ಕಾಡಿತು. ವಲಸೆ ವಕೀಲರ ಮಾತುಗಳು ಮತ್ತೆ ಮತ್ತೆ ಅವನ ಕಿವಿಯಲ್ಲಿ ಮೊಳಗಿದವು: “ನೀವು ಈಗ ದೇಶ ಬಿಟ್ಟರೆ, ಮುಂದೆ ಗಂಭೀರ ಸಮಸ್ಯೆಗಳು ಎದುರಾಗಬಹುದು.”
ಒಂದು ಕಡೆ—
ತಂದೆಯ ಅಂತಿಮ ದರ್ಶನ. ಮತ್ತೊಂದು ಕಡೆ—ತನ್ನ ಭವಿಷ್ಯ. ತನ್ನ ಕಾನೂನುಬದ್ಧ ಸ್ಥಿತಿ. ತನ್ನ ಕೆಲಸ. ತನ್ನ ಬದುಕು. ಎಲ್ಲಕ್ಕಿಂತ ಮುಖ್ಯವಾಗಿ—ಕುಟುಂಬವನ್ನು ಮತ್ತೆ ಯಾವಾಗ ನೋಡಬಹುದು ಎಂಬ ಅನಿಶ್ಚಿತತೆ. ಅರವಿಂದ ನಿಧಾನವಾಗಿ ನೆಲದ ಮೇಲೆ ಕುಳಿತುಕೊಂಡ. ತಲೆಯನ್ನು ಕೈಗಳಲ್ಲಿ ಮುಚ್ಚಿಕೊಂಡ. ಕಣ್ಣೀರು ನಿಲ್ಲಲೇ ಇಲ್ಲ. “ಅಪ್ಪನನ್ನು ಕೊನೆಯ ಬಾರಿ ನೋಡಲು ಕೂಡ ನನಗೆ ಹಕ್ಕಿಲ್ಲವೇ…?” ಅವನ ತುಟಿಗಳಿಂದ ಆ ಮಾತು ಹೊರಬಂದಿತು. ಅತ್ತ ತಾಯಿ ಎಲ್ಲವನ್ನೂ ಅರ್ಥಮಾಡಿಕೊಂಡಿದ್ದಳು.
“ನೀನು ಬರಲಾಗದಿದ್ದರೂ ಪರವಾಗಿಲ್ಲ ಮಗು.. ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುತ್ತೆ… ಚಿಂತಿಸಬೇಡ ” ತಾಯಿಯ ಆ ಮಾತು ಅರವಿಂದನ ಹೃದಯವನ್ನು ಇನ್ನಷ್ಟು ನೋಯಿಸಿತು. ಅಪ್ಪನ ಅಂತ್ಯಕ್ರಿಯೆಯನ್ನು ವೀಡಿಯೋ ಕಾಲ್‌ನಲ್ಲಿ ನೋಡಬೇಕಾಯಿತು. ಮೊಬೈಲ್ ಪರದೆಯ ಮೇಲೆ ಮನೆಯ ಅಂಗಳ. ಅಪ್ಪನ ಫೋಟೋ. ಅದರ ಸುತ್ತ ಕುಳಿತಿದ್ದ ಬಂಧುಗಳು. ಮಂತ್ರಗಳ ಧ್ವನಿ. ಅಂತಿಮ ವಿಧಿಗಳು. ಬೆಂಕಿ ಹೊತ್ತಿಕೊಂಡ ಕ್ಷಣ— ಅರವಿಂದನ ಕಣ್ಣುಗಳು ಮಸುಕಾದವು. ಅವನು ಮೊಬೈಲ್‌ನ್ನು ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡ. ಫೋನ್‌ನ ಕ್ಯಾಮೆರಾದಲ್ಲಿದ್ದ ದೃಶ್ಯ ಮಸುಕಾಗಿತ್ತು. ಅವನ ಕಣ್ಣೀರಿನಿಂದಲೋ, ಅವನ ಮನಸ್ಸಿನ ನೋವಿನಿಂದಲೋ—ಅವನಿಗೇ ತಿಳಿಯಲಿಲ್ಲ. “ಅಪ್ಪ…” ಅವನು ಗೋಳಾಡಿದ . “ಕ್ಷಮಿಸಿ… ನಾನು ಬರಲಾಗಲಿಲ್ಲ.” ಸ್ವಲ್ಪ
ಹೊತ್ತು ಮೌನ. ಅಪ್ಪ.. ನೀವು ನಮ್ಮನ್ನು ಬಿಟ್ಟು ಹೋಗಿಲ್ಲ. ಅವನ ಧ್ವನಿ ಗದ್ಗದಿಸಿತು. “ನೀವು ಕಂಡ ಕನಸುಗಳನ್ನು ಮಾತ್ರ ನಾನು ಬಿಟ್ಟು ಹೋಗುವುದಿಲ್ಲ.” ಆ ರಾತ್ರಿ ಅರವಿಂದನಿಗೆ ನಿದ್ರೆ ಬರಲಿಲ್ಲ. ಹಳೆಯ ಸಂದೇಶಗಳನ್ನು ಹುಡುಕುತ್ತಾ ತನ್ನ ಫೋನ್‌ನ್ನು ತೆರೆದ. ಅಲ್ಲಿ ಅಪ್ಪನ ಹಳೆಯ ಧ್ವನಿ ಸಂದೇಶವೊಂದು ಸಿಕ್ಕಿತು. ಅವನು ಪ್ಲೇ ಮಾಡಿದ. ಅಪ್ಪನ ಧ್ವನಿ ಕೋಣೆಯೊಳಗೆ ಕೇಳಿಸಿತು— “ಕಷ್ಟ ಬಂದಾಗ ದಾರಿ ಕಾಣಿಸದಿದ್ದರೂ ನಡೆಯುತ್ತಿರು… ದಾರಿ ತಾನೇ ಸಿಗುತ್ತದೆ.” ಅರವಿಂದ ಕಣ್ಣು ಮುಚ್ಚಿಕೊಂಡ. ಅಪ್ಪ ಇಲ್ಲ. ಆದರೆ ಅಪ್ಪನ ಧ್ವನಿ ಇನ್ನೂ ಅವನ ಜೊತೆಗಿತ್ತು. ಆ ರಾತ್ರಿ ಅವನು ಒಂದು ನಿರ್ಧಾರ ತೆಗೆದುಕೊಂಡ. ತಾನು ಅನುಭವಿಸಿದ ಈ ನೋವು ತನ್ನ ಬದುಕನ್ನು ಮುಗಿಸುವ ಕಾರಣವಾಗಬಾರದು. ಅದೇ ನೋವು ತನ್ನ ಬದುಕನ್ನು ಕಟ್ಟುವ ಕಾರಣವಾಗಬೇಕು.
ಅರವಿಂದ ನಿಧಾನವಾಗಿ ಎದ್ದು ನಿಂತ. ಕಣ್ಣೀರನ್ನು ಒರೆಸಿಕೊಂಡ. ತನ್ನ ಮುಂದೆ ಇದ್ದ ಕತ್ತಲೆಯನ್ನು ನೋಡುತ್ತಾ ಅಪ್ಪನ ಮಾತನ್ನು ಮತ್ತೊಮ್ಮೆ ನೆನಪಿಸಿಕೊಂಡ. “ದಾರಿ ಕಾಣಿಸದಿದ್ದರೂ ನಡೆಯುತ್ತಿರು…” ಅರವಿಂದ ನಡೆಯಲು ಆರಂಭಿಸಿದ. ಅರವಿಂದನಿಗೆ ಅಪ್ಪನ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥನೆ ಮಾಡೋಣ, ನಮ್ಮ ಸಂತೋಷ ಹೆಚ್ಚಾಗಬಹುದೇನೋ!

–ವತ್ಸಲ ಸುರೇಶ್

