ಇಂದಿಗೂ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ನಮ್ಮ ದೇಶದಲ್ಲಿ ಕಷ್ಟಸಾಧ್ಯವೇ ಸರಿ. ಕಾಲೇಜನ್ನು ಸೇರುವ ವಿದ್ಯಾರ್ಥಿನಿಯರ ಸಂಖ್ಯೆ ಮತ್ತಷ್ಟು ಮೇಲಿನ ಸ್ತರದ ಶಿಕ್ಷಣ ಪಡೆಯುವತ್ತ ಸಾಗುವಾಗ ಕಡಿಮೆಯಾಗುತ್ತಲೇ ಹೋಗುತ್ತದೆ. ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೇ, ಇಲ್ಲವೇ ಎಂದು ಕೆಲವರು ಯೋಚಿಸಬಹುದು. ಮಗಳನ್ನು ಆದಷ್ಟು ಬೇಗ ಮದುವೆ ಮಾಡಿ ಕಳುಹಿಸಿಬಿಡೋಣ ಎನ್ನುವ ಮನೋಭಾವ ಕುಟುಂಬದಲ್ಲಿರಬಹುದು. ಇವೆಲ್ಲಕ್ಕೂ ಅನೇಕ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳು ಮತ್ತು ಹಿನ್ನೆಲೆ ಇರುತ್ತವೆ. ಆದರೆ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ ಎನ್ನುವುದೇ ಸಮಾಧಾನದ ವಿಷಯ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಂತೂ ನಮ್ಮಲ್ಲಿ ಬಾಲ್ಯ ವಿವಾಹ ಸಾಮಾನ್ಯವಾಗಿತ್ತು. ಇಂತಹ ಸಮಯದಲ್ಲಿ ಹುಟ್ಟಿದ ಒಬ್ಬ ಹೆಣ್ಣುಮಗಳು ನಮ್ಮ ಕನ್ನಡ ನಾಡಿನ ಮೊಟ್ಟಮೊದಲ ಇಂಜಿನಿಯರ್ ಮತ್ತು ವಿಜ್ಞಾನಿ ಆದರು ಎನ್ನುವುದು ಎಷ್ಟು ಹೆಮ್ಮೆಯ ವಿಷಯವಲ್ಲವೇ?
ಹೌದು ಇವರೇ ಡಾ.ರಾಜೇಶ್ವರಿ ಚಟರ್ಜಿ. ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರ್. ಇವರು ಸುಶಿಕ್ಷಿತ ಕುಟುಂಬದಲ್ಲಿ 24 ನೇ ಜನವರಿ 1922 ರಂದು ಜನಿಸಿದರು. ಇವರ ಅಜ್ಜಿ ಕಮಲಮ್ಮ ದಾಸಪ್ಪನವರು ಕರ್ನಾಟಕದ ಆಗಿನ ಕಾಲದ ಪದವಿ ಪಡೆದಿದ್ದ ಕೆಲವೇ ಮಹಿಳೆಯರಲ್ಲಿ ಒಬ್ಬರು. ಮಹಿಳೆಯರಿಗೆ, ಅದರಲ್ಲೂ ವಿಧವೆಯರಿಗೆ ಮತ್ತು ಕಷ್ಟದಲ್ಲಿದ್ದ ಇತರ ಮಹಿಳೆಯರಿಗೆ ಶಿಕ್ಷಣ ಕೊಡಿಸುತ್ತಿದ್ದ ಮಹಾನುಭಾವರು. ಇಂತಹ ಅಜ್ಜಿಯ ಗರಡಿಯಲ್ಲಿ ಪಳಗಿದವರು ರಾಜೇಶ್ವರಿ. ಇವರ ತಂದೆ ಬಿ.ಎಮ್. ಶಿವರಾಮಯ್ಯನವರು ನಂಜನಗೂಡಿನಲ್ಲಿ ವಕೀಲರಾಗಿದ್ದರು.
ಇವರ ಪ್ರಾಥಮಿಕ ವಿದ್ಯಾಭ್ಯಾಸ ವಿಶೇಷ ಆಂಗ್ಲಶಾಲೆಯಲ್ಲಾಯಿತು. ಶಾಲೆಯ ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ಭೌತವಿಜ್ಞಾನ ಮತ್ತು ಗಣಿತವನ್ನು ರಾಜೇಶ್ವರಿ ಆಯ್ಕೆ ಮಾಡಿಕೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಆನರ್ಸ್ ಮಾಡಿದರು. ಅನಂತರ ಸ್ನಾತಕೋತ್ತರ ಶಿಕ್ಷಣವನ್ನು ಗಣಿತದಲ್ಲಿ ಮಾಡಿದರು. ಇವೆರಡೂ ಕೋರ್ಸ್‍ಗಳಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೇ ಮೊದಲ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಇವೆರಡೂ ಪದವಿಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಬಹುಮಾನ, ಎಮ್.ಟಿ. ನಾರಾಯಣ ಅಯ್ಯಂಗಾರ್ ಬಹುಮಾನ ಹಾಗೂ ವಾಲ್ಟರ್ಸ್ ಮೆಮೊರಿಯಲ್ ಬಹುಮಾನಗಳು ಬಂದಿವೆ.
ಎಂ.ಎಸ್ಸಿ ನಂತರ 1943 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಗೆ ಸೇರಿಕೊಂಡರು. ಸಂವಹನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಎಲೆಕ್ಟ್ರಿಕಲ್ ತಂತ್ರಜ್ಞಾನ ವಿಭಾಗದಲ್ಲಿ ಪ್ರಾರಂಭ ಮಾಡಿದರು. ಡಾ.ರಾಜೇಶ್ವರಿಯವರು ಸರ್.ಸಿ.ವಿ.ರಾಮನ್ ಅವರ ಹತ್ತಿರ ಸಂಶೋಧನೆ ಮಾಡಲು ಬಯಸಿದ್ದರು. ಆದರೆ ಅದು ನೆರವೇರಲಿಲ್ಲ.
ಎರಡನೇ ಮಹಾಯುದ್ಧದ ನಂತರ ಭಾರತಕ್ಕೆ ಬ್ರಿಟನ್ ಅಧಿಕಾರ ಹಸ್ತಾಂತರ ಮಾಡುವ ಮೊದಲು ಭಾರತದಲ್ಲಿ ಮಧ್ಯಕಾಲದ ಸರ್ಕಾರ ಇತ್ತು. ಈ ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ನೀಡುತ್ತಿತ್ತು. ಇದರ ಸದುಪಯೋಗವನ್ನು ಡಾ.ರಾಜೇಶ್ವರಿ ಪಡೆದುಕೊಂಡರು. 1946 ರಲ್ಲಿ ‘ಬ್ರೈಟ್’ ವಿದ್ಯಾರ್ಥಿ ಎಂದು ಈ ಸರ್ಕಾರ ಇವರನ್ನು ಆಯ್ಕೆ ಮಾಡಿತು.
ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಅದರ ಅನ್ವಯಕತೆಗಳ ಬಗ್ಗೆ ಶಿಕ್ಷಣ ಪಡೆದರು. ಇವರು ಜುಲೈ 1947 ರಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಅಮೆರಿಕಕ್ಕೆ ಹೋದದ್ದೇ ಒಂದು ಸಾಹಸಗಾಥೆ ಎಂದು ಹೇಳಬಹುದು. ಅದೊಂದು ದಂಡಿನವರು ಪ್ರಯಾಣ ಮಾಡುವ ಹಡಗು. ಪ್ರಯಾಣಕ್ಕೆಂದು ಕೆಲವು ಮಾರ್ಪಾಡುಗಳನ್ನು ಮಾಡಲಾಗಿತ್ತು. ಎಸ್.ಎಸ್.ಮರೀನ್ ಆ್ಯಡರ್ ಎಂದು ಹಡಗಿನ ಹೆಸರು. ಪ್ರಯಾಣದ ಸಮಯ ಒಂದು ತಿಂಗಳು. ಆಗಿನ ಕಾಲದಲ್ಲಿ ಇಂತಹ ಪರಿಸ್ಥಿತಿಗಳಲ್ಲಿ ಮಹಿಳೆಯರಿಗೆ ವಿದೇಶ ಪ್ರಯಾಣ ಬಹಳ ಕಷ್ಟಸಾಧ್ಯವಾಗಿತ್ತು. ಆದರೆ ಡಾ.ರಾಜೇಶ್ವರಿ ಧೀರ ಮಹಿಳೆ. ಏಕಲವ್ಯನಂತೆ ಗುರಿ ಇರಿಸಿಕೊಂಡಿದ್ದರು. ಮಿಚಿಗನ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಎಂ.ಎಸ್. ವಿಭಾಗದಲ್ಲಿ ಪದವಿ ಪಡೆದರು. ಭಾರತ ಸರ್ಕಾರದ ಮಾರ್ಗದರ್ಶನದಂತೆ ನಂತರ ಎಂಟು ತಿಂಗಳು ರೇಡಿಯೋ ತರಂಗಾಂತರದ ಅಳತೆಗಳ ಬಗ್ಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ನ್ಯಾಷನಲ್ ಬ್ಯೂರೋ ಆಫ್ ಸ್ಟಾಂಡಡ್ರ್ಸ್‍ನಲ್ಲಿ ತರಬೇತಿ ಪಡೆದುಕೊಂಡರು. 1949 ರಲ್ಲಿ ಬಾರ್ಬೊರ್ ವಿದ್ಯಾರ್ಥಿವೇತನ ಸಿಕ್ಕಿತು. ರಾಜೇಶ್ವರಿಯವರು 1959 ರಲ್ಲಿ ಪ್ರೊಫೆಸರ್ ವಿಲಿಯಂ ಗೌಲ್ಡ್ ಡೌ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ.. ಪದವಿಯನ್ನು ಪಡೆದುಕೊಂಡರು. ಅದೇ ವರ್ಷ ಭಾರತಕ್ಕೆ ಹಿಂದಿರುಗಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ವಿಭಾಗದಲ್ಲಿ ಅಧ್ಯಾಪಕರಾಗಿ ನೇಮಕವಾಯಿತು. ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಎಲೆಕ್ಟ್ರಾನ್ ಟ್ಯೂಬ್ ಸಕ್ರ್ಯೂಟ್‍ಗಳು, ಮೈಕ್ರೋವೇವ್ ತಂತ್ರಜ್ಞಾನ ಮತ್ತು ರೇಡಿಯೋ ಎಂಜಿನಿಯರಿಂಗ್ ಇವುಗಳ ಬಗ್ಗೆ ಪಾಠ ಮಾಡುತ್ತಿದ್ದರು. ನಂತರ ವಿಭಾಗದ ಮುಖ್ಯಸ್ಥರೂ ಆಗಿದ್ದರು.
ಭಾರತೀಯ ವಿಜ್ಞಾನ ಮಂದಿರದಲ್ಲೇ ಅಧ್ಯಾಪಕರಾಗಿದ್ದ ಸಿಸಿರ್ ಕುಮಾರ್ ಚಟರ್ಜಿಯವರನ್ನು 1953 ರಲ್ಲಿ ವಿವಾಹವಾದರು. ಇಬ್ಬರ ಪರಿಶ್ರಮದಿಂದ ಮೈಕ್ರೋವೇವ್ ಪ್ರಯೋಗಾಲಯ ಇಲ್ಲಿಯೇ ಸ್ಥಾಪಿತವಾಯಿತು. ಇದು ಭಾರತದಲ್ಲೇ ಮೊದಲನೆಯದು ಎನ್ನುವುದೇ ಹೆಗ್ಗಳಿಕೆ. ಈ ಪ್ರಯೋಗಾಲಯದಲ್ಲಿ ಸಂಶೋಧನೆಗಳನ್ನು ಕೈಗೊಂಡರು. ಅವರು ಅಂದು ಸಂಶೋಧಿಸಿದ ಹಲವು ಉಪಕರಣಗಳು ಇಂದಿಗೂ ರಕ್ಷಣಾ ವಿಭಾಗದ ಡಿಆರ್‍ಡಿಎಲ್‍ನಲ್ಲಿ ಉಪಯೋಗವಾಗುತ್ತಿರುವುದು ಹೆಮ್ಮೆಯ ವಿಷಯ. ವಿಭಿನ್ನ ಬಗೆಯ ಅಂಟೆನ್ನಾಗಳನ್ನು ರೂಪಿಸಿರುವುದೂ ಇವರ ವಿಶೇಷ.
ಡಾ.ರಾಜೇಶ್ವರಿ ಚಟರ್ಜಿಯವರ ಮಾರ್ಗದರ್ಶನದಲ್ಲಿ ಇಪ್ಪತ್ತು ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು ಪಿಎಚ್.ಡಿ.. ಗಳಿಸಿದ್ದಾರೆ. ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಏಳು ಪುಸ್ತಕಗಳನ್ನು ಹೊರತಂದಿದ್ದಾರೆ.
ಡಾ.ರಾಜೇಶ್ವರಿಯವರ ಅವಿರತ ಶೈಕ್ಷಣಿಕ ಸಾಧನೆಗಳು ಹಲವಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬರುವಂತೆ ಮಾಡಿವೆ. ಮೊದಲ ಮೂರು ಪ್ರಶಸ್ತಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಎಂ.ಟಿ. ನಾರಾಯಣ ಅಯ್ಯಂಗಾರ್ ಬಹುಮಾನ ಮತ್ತು ವಾಲ್ಟರ್ಸ್ ಬಹುಮಾನಗಳು ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಗಳಿಸಿದಾಗಲೇ ಬಂದವು. ನಂತರ ಅತ್ಯುತ್ತಮ ಸಂಶೋಧನಾ ಲೇಖನವೆಂದು, ಎಲೆಕ್ಟ್ರಿಕಲ್ ಮತ್ತು ರೇಡಿಯೋ ಇಂಜಿನಿಯರಿಂಗ್ (ಯುಕೆ) ಇಲ್ಲಿಂದ ಮೌಂಟ್‍ಬೇಟನ್ ಬಹುಮಾನ ಸಂದಿದೆ. ಜೆ.ಸಿ.ಬೋಸ್ ಸ್ಮರಣಾರ್ಥ ಪ್ರಶಸ್ತಿಯೂ ಅತ್ಯುತ್ತಮ ಸಂಶೋಧನಾ ಲೇಖನಕ್ಕೆಂದು ಇಂಜಿನಿಯರ್‍ಗಳ ಸಂಸ್ಥೆಯಿಂದ ಕೊಡಲ್ಪಟ್ಟಿದೆ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಇಂಜಿನಿಯರಿಂಗ್ ಸಂಸ್ಥೆಯು ರಾಮಲಾಲ್ ವಾಧ್ವಾ ಪ್ರಶಸ್ತಿಯನ್ನು ಅತ್ಯುತ್ತಮ ಸಂಶೋಧನೆ ಮತ್ತು ಬೋಧನೆಗೆ ನೀಡಿದೆ.
ಡಾ.ರಾಜೇಶ್ವರಿಯವರು 1982 ರಲ್ಲಿ ನಿವೃತ್ತಿ ಹೊಂದಿದರು. ನಂತರವೂ ತಮ್ಮನ್ನು ಸಾಮಾಜಿಕ ಸೇವೆಯ ಕೆಲಸಗಳಲ್ಲಿ ತೊಡಗಿಸಿಕೊಂಡರು. ಭಾರತೀಯ ಮಹಿಳಾ ಅಧ್ಯಯನದ ಸಂಸ್ಥೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಅವರ ಒಬ್ಬಳೇ ಮಗಳು ಇಂದಿರಾ ಚಟರ್ಜಿ ಅಮೆರಿಕದ ನೆವಾಡಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಬಯೋಮೆಡಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.
ಡಾ.ರಾಜೇಶ್ವರಿ ಚಟರ್ಜಿಯವರು 3 ನೇ ಸೆಪ್ಟೆಂಬರ್ 2010 ರಲ್ಲಿ ಕಾಲವಾದರು. ಡಾ.ರಾಜೇಶ್ವರಿಯವರ ಹೆಸರು ಕರ್ನಾಟಕದ ಮೊಟ್ಟಮೊದಲ ಇಂಜಿನಿಯರ್ ಮತ್ತು ವಿಜ್ಞಾನಿ ಎಂದು ಅಜರಾಮರವಾಗಿದೆ. ಅವರ ಸಾಧನೆಯು ಇಂದಿಗೂ ಸ್ಫೂರ್ತಿದಾಯಕ. ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನದ ಎಲ್ಲ ವಿದ್ಯಾರ್ಥಿನಿಯರಿಗೂ ಡಾ.ರಾಜೇಶ್ವರಿಯವರು ಮಾದರಿಯಾಗಲಿ ಎನ್ನುವುದೇ ಆಶಯ.

–ಡಾ. ಎಸ್. ಸುಧಾ, ಮೈಸೂರು

