ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – ೧೨
ಬಲರಾಮ ತೀರ್ಥಯಾತ್ರೆ
ರಾಜಸೂಯ ಯಾಗಾತ್ಯಂದಿ ದುರ್ಯೋಧನ ಹೃದಯದಿ
ಹುಟ್ಟಿದ ದ್ವೇಷಾಸೂಯೆ ಬೆಳೆದು ಮಹಾಜ್ವಾಲೆಯಾಗಿ
ದುರ್ಯೋಧನ ಶಕುನಿ ಕರ್ಣ ದುಶ್ಯಾಸನರೆಲ್ಲ
ದುರಾಲೋಚನೆಯಲ್ಲಿ ಧರ್ಮರಾಜನೊಡನೆ
ಕಪಟದ್ಯೂತವನ್ನಾಡಿ ಪಾಂಡವರ ಸರ್ವಸ್ವವನ್ನಪಹರಿಸಿ
ವನವಾಸ ಅಜ್ಞಾತವಾಸಕಟ್ಟಿ, ಅದ ಮುಗಿಸಿದರೂ
ಎಲ್ಲ ಹಿರಿಯರ ಮಾತ ದುರ್ಲಕ್ಷ್ಯ ಮಾಡಿ
ಕೃಷ್ಣ ಸಂಧಾನವೂ ವಿಫಲವಾಗಿ
ಕ್ಷಾತ್ರಧರ್ಮದ ಯುದ್ಧ ಅನಿವಾರ್ಯವಾಗೆ
ಕೌರವ ಪಾಂಡವರಲ್ಲಿ ಬೆಳೆದು ಬಂದ
ದ್ವೇ಼ಷಭಾವದ ವಿಷಮ ಪರಿಸ್ಥಿತಿಗೆ
ಮನನೊಂದು ಬಲರಾಮ ತೀರ್ಥಯಾತ್ರೆಯ ನೆಪದಿ
ರಾಜಧಾನಿಯಿಂದ ನಿರ್ಗಮಿಸಿದನು
ಯಮುನಾ ಗಂಗಾ ಸರಸ್ವತೀ ನದಿಗಳ
ತ್ರಿವೇಣಿ ಸಂಗಮದಿ ಸ್ನಾನ ಮಾಡಿ
ನೈಮಿಷ ಕ್ಷೇತ್ರದಿ ಸತ್ರಯಾಗನಿರತ ಮಹರ್ಷಿಗಳ
ಗೌರವಾತಿಥ್ಯ ಸ್ವೀಕರಿಪ ಸಮಯದಿ
ಪೌರಾಣಿಕನಾಗಿ ಬ್ರಹ್ಮಾಸನದಿ ಕುಳಿತಿರ್ಪ
ಸೂತನು ಎದ್ದು ತನ್ನ ಗೌರವಿಸಲಿಲ್ಲವೆಂಬ ಕಾರಣಕೆ
ಒಂದು ದರ್ಭೆಯ ಮಂತ್ರಿಸಿ ಬಿಡಲು
ಅದು ಸೂತನ ಶಿರವ ಕತ್ತರಿಸೆ
ನೆರೆದಿರ್ಪ ಮಹರ್ಷಿಗಳು ಹಾಹಾಕಾರ ಮಾಡುತ್ತಾ
ವೇದವ್ಯಾಸ ಅನುಗ್ರಹೀತ ಬ್ರಹ್ಮಾಸನದಿ ಕುಳಿತು
ಪುಣ್ಯಕಥಾಶ್ರವಣ ಮಾಡ್ತಿರ್ಪ ಸೂತ
ಎಂತಹ ಹಿರಿಯರಿಗೂ ಗೌರವ ಸೂಚಿಸಲು
ಏಳಬೇಕಾದ ವಿಧಿಯಿಲ್ಲದಿರುವುದು ರೂಢಿ
ಅವನ ವಧಿಸಿ ಬ್ರಹ್ಮಹತ್ಯೆಗೆ ಸಮಾನವಾದ
ಪಾಪವನೆಸಗಿದ ಬಲರಾಮ ಲೋಕಶಿಕ್ಷಾರ್ಥವಾಗಿ
ನಿಯಮಪಾಲನೆಗಾಗಿ ಭೂಪ್ರದಕ್ಷಿಣೆಯ ಮಾಡಿ
ತೀರ್ಥಯಾತ್ರೆಯ ಮಾಡಿ ಸತ್ರಯಾಗಕಾಲದಿ
ಪುಣ್ಯಕಥಾಶ್ರವಣ ಮಾಡಿಸಲು
ಸೂತಪುರಾಣಿಕನ ಮಗ ಉಗ್ರಶ್ರವನ ಅನುಗ್ರಹಿಸಲು ತಿಳಿಸೆ
ಬಲರಾಮ ಮಾತ ಮನ್ನಿಸಿ ನಂತರದಿ ಯಾಗಕಾಲದಿ
ಯಾಗವ ಕೆಡಿಸುತ್ತಿದ್ದ ಇಲ್ವಲ ದುಷ್ಟ ರಕ್ಕಸನ ವಧಿಸಿದನು
ನಂತರದಿ ಬಲರಾಮ ಸಂಗಡದಿ ಬಂದ ಬ್ರಾಹ್ಮಣರೊಡಗೂಡಿ
ಪ್ರಯಾಗ ಕ್ಷೇತ್ರಕೆ ಬಂದು ಸ್ನಾನ ತರ್ಪಣಾದಿಗಳ ನಡೆಸಿ
ಗೋಮತಿ ಗಂಡಕಿ ಶೋಣಾ ನದಿಗಳಲಿ ಅಭ್ಯಂಜಿಸಿ
ಗಯೆಗೆ ಬಂದು ಕ್ಷೇತ್ರವಿಧಿಗಳ ನಡೆಸಿ
ಮಹೇಂದ್ರ ಪರ್ವತದಿ ಪರಶುರಾಮರ ಸಂದರ್ಶಿಸಿ
ಸಪ್ತಗೋದಾವರಿ ವೇಣಿ ಪಂಪೆ ಭಿಮ ರಥಿಗಳಲಿ ಸ್ನಾನಮಾಡಿ
ವೆಂಕಟಾಚಲ ಕ್ಷೇತ್ರದಿ ಸ್ವಾಮಿಯ ದರ್ಶಿಸಿ
ಕಾವೇರಿತೀರದ ಶ್ರೀರಂಗನ ಸೇವೆಗೈದು
ಅಂತ್ಯದಿ ಪ್ರಾರಂಭದಲಿ ಹೊರಟ
ಪ್ರಭಾಸತೀರ್ಥಕೆ ತಲುಪಿದನು
ಅಲ್ಲಿದ್ದವರಿಂದ ಕೌರವ ಪಾಂಡವರ
ಮಹಾಭಾರತಯುದ್ಧದಲಿ
ಕೌರವರ ಹದಿನೆಂಟು ಅಕ್ಷೋಹಿಣಿ ಸೈನ್ಯವು
ನಾಶವಾಗಿ ಭೀಮ ದುರ್ಯೋಧನರ ಗಧಾಯುದ್ಧವಾಗುವ
ವಾರ್ತೆ ತಿಳಿದು ನೇರವಾಗಿ ರಣರಂಗಕೆ ಬಂದು
ಪರಸ್ಪರ ಗಧಾಪ್ರಹಾರದಲಿ ನಿರತರಾದವರಿಗೆ
ಯುದ್ಧ ನಿಲ್ಲಿಸುವ ಹಿತೋಕ್ತಿ ನೀಡಿದರೂ
ಲಕ್ಷಮಾಡದಿರುವುದ ಕಂಡು ನೊಂದು
ದ್ವಾರಕೆಗೆ ಪಯಣಿಸಿ ಯಾತ್ರಾಂತ್ಯವಾದ
ಅವಭೃತ ಸ್ನಾನ ಮಾಡಿ ಶುಭ್ರವಸ್ತ್ರಾಭರಣ ಧಾರಣಮಾಡಿ
ದಾನಧರ್ಮ ದಕ್ಷಿಣಾದಿಗಳಿಂದ ಬ್ರಾಹ್ಮಣರ ತೃಪ್ತಿಪಡಿಸೆ
ಬಲರಾಮನ ತೀರ್ಥಯಾತ್ರಾ ಪ್ರಸಂಗ ಅಂತ್ಯಗೊಂಡಿತು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45600

-ಎಂ. ಆರ್. ಆನಂದ, ಮೈಸೂರು

