ನಮ್ಮದೇ ದೇಶವೆನಿಸಿದರೂ ನಮ್ಮ ಭೂಭಾಗದಲ್ಲಿ ಇಲ್ಲದ ದ್ವೀಪ ಸಮೂಹವಾಗಿದೆ…ಅಂಡಮಾನ್ ಮತ್ತು ನಿಕೋಬಾರ್. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರಾಜಕೀಯ ಕೈದಿಗಳನ್ನು ಬಂಧನದಲ್ಲಿರಿಸಲು ಸಮುದ್ರ ಮಧ್ಯದಲ್ಲಿರುವ ಈ ದ್ವೀಪದಲ್ಲಿ ಕಾರಾಗೃಹವನ್ನು ಕಟ್ಟಿಸಿದ್ದರು. ಕಾಲಾಪಾನಿ ಎಂದೇ ಕುಖ್ಯಾತಿ ಪಡೆದಿದ್ದ ಈ ಶಿಕ್ಷೆಯು, ಕೈದಿಯು ಯಾವುದೇ ರೀತಿಯಲ್ಲೂ ತಪ್ಪಿಸಿಕೊಳ್ಳಲು ಸಾಧ್ಯವಾಗದ ದಿಗ್ಭಂಧನವಾಗಿತ್ತು. ನಮ್ಮ ದೇಶದ ಸಾವಿರಾರು ಸ್ವಾತಂತ್ರ ಹೋರಾಟಗಾರರು ಇಲ್ಲಿ ಅನಾಥರಂತೆ ಜೀವತೆತ್ತು ಹುತಾತ್ಮರಾಗಿರುವುದು ಇತಿಹಾಸ. ಇಲ್ಲಿಯ ಮಣ್ಣಲ್ಲಿ ಓಡಾಡಬೇಕೆಂಬ ಹಲವಾರು ವರ್ಷಗಳ ಹಂಬಲವು ಈಡೇರುವ ಸಮಯವು ಸಮೀಪಿಸಿತ್ತು. ಕೆಲವು ವರ್ಷಗಳ ಹಿಂದೆ ಸಹೋದ್ಯೋಗಿಗಳೊಂದಿಗೆ ಅಂಡಮಾನಿಗೆ ಹೋಗುವ ಯೋಜನೆ ರೂಪಿಸಿದ್ದರೂ ಯಾವುದೋ ಕಾರಣದಿಂದ ಹೋಗಲಾಗಿರಲಿಲ್ಲ. ಆದರೆ, ಆ ಬಳಿಕ ಅದೇ ಸಮಯದಲ್ಲಿ ಅಲ್ಲಿ ಭಯಾನಕ ಸುನಾಮಿ ಅಪ್ಪಳಿಸಿತ್ತು! ಒಂದು ವೇಳೆ ಹೋಗಿದ್ದರೆ?? ಎಂದು ಯೋಚಿಸುವಾಗಲೇ ಎದೆ ನಡುಗುತ್ತದೆ!
ಏಜೆನ್ಸಿಯವರು ಪ್ರವಾಸ ಏರ್ಪಡಿಸಲು ಕಡಿಮೆ ಎಂದರೆ ಹದಿನೈದು ಜನವಾದರೂ ಬೇಕು, ಇಲ್ಲವಾದರೆ ಕಷ್ಟ ಎಂದುಬಿಟ್ಟರು. ಅಮೆರಿಕದಿಂದ ಬಂದ ಮಗಳು ಇರುವ ಕೆಲವೇ ದಿನಗಳಲ್ಲಿ ಆ ರೀತಿ ಪ್ರವಾಸಿಗರನ್ನು ಹೊಂದಿಸುವುದೂ ಕಷ್ಟವಾಗಿತ್ತು. ಆದ್ದರಿಂದ ಮಕ್ಕಳೇ ಅಂತರ್ಜಾಲ ಮೂಲಕ ರೂಪಿಸಿದ ಪ್ರವಾಸಕ್ಕೆ ಸಿದ್ಧರಾದೆವು. ಈ ಪ್ರವಾಸವು ಬಯಸದೇ ಬಂದ ಭಾಗ್ಯದಂತೆ ಒಲಿದುಬಂದಿತ್ತು ಎನ್ನಬಹುದು.12.2.2023, ಆದಿತ್ಯವಾರದಂದು ಮನೆಯಿಂದ, ನಾವು ನಾಲ್ಕು ಮಂದಿ ಮುಂಜಾನೆ ಹೊರಟು ಸಂಜೆ ನಾಲ್ಕು ಗಂಟೆಗೆ ಖಾಸಗಿ ಕಾರಿನಲ್ಲಿ ಬೆಂಗಳೂರು ತಲಪಿದೆವು. ಮರುದಿನ ಮಧ್ಯಾಹ್ನ 11.30ಕ್ಕೆ ಅಂಡಮಾನಿನ ರಾಜಧಾನಿ ಪೋರ್ಟ್ ಬ್ಲೈರ್ ಗೆ ಇರುವ ವಿಮಾನದಲ್ಲಿ ನಾವು ಪ್ರಯಾಣಿಸಬೇಕಿತ್ತು.
ಮರುದಿನ ಸೋಮವಾರ…. ಬೆಳಿಗ್ಗೆ ಎಂಟು ಗಂಟೆಗೆ ವಿಮಾನ ನಿಲ್ದಾಣದತ್ತ ನಮ್ಮ ಪಯಣ. ನಾವು ಸಮಯಕ್ಕೆ ಸರಿಯಾಗಿ, 180 ಆಸನಗಳ ಪುಟ್ಟ ಇಂಡಿಗೋ ವಿಮಾನವು, ಸುಮಾರು 1650ಕಿ.ಮೀ. ದೂರದ ಪೋರ್ಟ್ ಬ್ಲೈರ್ ನತ್ತ ಹಾರಿತು. ಸಂಜೆ 3.30ಕ್ಕೆ ಅಂಡಮಾನಿನ ನೆಲದಲ್ಲಿ ಕಾಲಿರಿಸಿದಾಗ ರೋಮಾಂಚನ… ಹಲವಾರು ವರ್ಷಗಳ ಕನಸು ನನಸಾದ ಸಂಭ್ರಮ!
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಹನ್ನೊಂದು ವರ್ಷಗಳಷ್ಟು ದೀರ್ಘಕಾಲ ರಾಜಕೀಯ ಕೈದಿಯನ್ನಾಗಿ ಇಲ್ಲಿಯ ಸೆಲ್ಯುಲರ್ ಜೈಲಿನಲ್ಲಿ ಇರಿಸಲಾಗಿತ್ತು. ಅವರ ಗೌರವಾರ್ಥ ಪೋರ್ಟ್ ಬ್ಲೈರ್ ಪಟ್ಟಣದ ದಕ್ಷಿಣಕ್ಕೆ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಪುಟ್ಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ವೀರಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ; ಸುಮಾರು 6,100 ಚ. ಮೀ. ವಿಸ್ತೀರ್ಣದ ಈ ಸಣ್ಣ ನಿಲ್ದಾಣದ ಸಮೀಪದಲ್ಲಿಯೇ ಹೆಚ್ಚು ವಿಸ್ತಾರವಾದ ವಿಮಾನ ನಿಲ್ದಾಣದ ಕೆಲಸವು ಪ್ರಗತಿಯಲ್ಲಿದೆ. ಭಾರತೀಯ ವಾಯುದಳ ಮತ್ತು ವಿಮಾನಯಾನ ಸಂಸ್ಥೆ ಜಂಟಿಯಾಗಿ ಈ ನಿಲ್ದಾಣದ ಮೇಲ್ವಿಚಾರಣೆಯನ್ನು ನಡೆಸುವರು.
ಈ ನಿಲ್ದಾಣದಲ್ಲಿ ನಾವು ಇಳಿದು, ಮೊದಲೇ ನಿರ್ಧರಿಸಿದ್ದಂತೆ, ನಮಗಾಗಿ ಕಾದಿರಿಸಿದ್ದ ಹೋಟೆಲಿಗೆ ಕರೆದೊಯ್ಯಲು ಬಂದಿದ್ದ ತಮಿಳುನಾಡಿನ ರಘುವಿನ ವಾಹನವೇರಿದೆವು. ಇಲ್ಲಿನ ನಿವಾಸಿಗಳು ಹೆಚ್ಚಿನವರು ತಮಿಳರೇ ಆಗಿರುವುದು ಸಾಮಾನ್ಯ. ಮುಂದೆ ಅರ್ಧ ಗಂಟೆಯಲ್ಲಿ Three Star Hotel T & G Emerald View ಗೆ ತಲಪಿದೆವು. ನಮಗಾಗಿ ಕಾದಿರಿಸಿದ್ದ ಎರಡು ಕೋಣೆಗಳು ವಿಶಾಲವಾಗಿದ್ದು, ಉತ್ತಮ ಸವಲತ್ತುಗಳನ್ನು ಹೊಂದಿದ್ದವು. ಕೋಣೆಗಳಲ್ಲಿ ಸಾಮಾನುಗಳನ್ನು ಇರಿಸಿ, ಅಂಡಮಾನ್ ಸುತ್ತಲು ರಘು ನಮ್ಮನ್ನು ಕರೆದೊಯ್ದ. ಅವನಿಗೆ ತಮಿಳಿನ ಜೊತೆಗೆ ಆಂಗ್ಲಭಾಷೆ ಬರುತ್ತಿದ್ದರೂ ಮಗಳು ಅವನಲ್ಲಿ ಚೆನ್ನಾಗಿ ತಮಿಳಿನಲ್ಲೇ ಮಾತನಾಡುತ್ತಿದ್ದಳು. ಆದ್ದರಿಂದ ಮುಂದೆ ಸಂವಹನದ ಕೊರತೆ ಎಲ್ಲೂ ಕಾಡಲಿಲ್ಲ.
ಇಲ್ಲಿರುವ ಒಟ್ಟು 572 ದ್ವೀಪಗಳ ಸಮೂಹಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರ ಭಾಗವನ್ನು ಅಂಡಮಾನ್ ದ್ವೀಪಗಳೆಂದೂ, ದಕ್ಷಿಣ ಭಾಗವನ್ನು ನಿಕೋಬಾರ್ ದ್ವೀಪಗಳೆಂದೂ ಕರೆಯಲಾಗುವುದು. ಇವೆರಡರ ನಡುವೆ 150ಕಿ.ಮೀ ಅಗಲದ, ಬಂಗಾಳಕೊಲ್ಲಿಯ ಸಮುದ್ರ ಕಾಲುವೆಯಿದೆ. ಉತ್ತರದ ಅಂಡಮಾನ್ ಭಾಗದ ಕೊನೆಯ ತಾಣವನ್ನು ಇಂದಿರಾ ಪಾಯಿಂಟ್ ಎನ್ನುವರು. ಇಲ್ಲಿಯ ಕೇವಲ 38ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಾರೆ. ಈ ಮೊದಲು ಪೂರ್ವದ ಪ್ಯಾರಿಸ್ ಎಂದೇ ಖ್ಯಾತಿ ಪಡೆದಿದ್ದ ಅಂಡಮಾನ್, 1941ರಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ 26.12.2004ರಲ್ಲಿ ಅಪ್ಪಳಿಸಿದ ಮಾರಣಾಂತಿಕ ಸುನಾಮಿಯಿಂದಾಗಿ ಬಹಳಷ್ಟು ಹಾನಿಗೊಳಗಾಯಿತು. ಇಲ್ಲಿನ ಒಟ್ಟು ಭೂಪ್ರದೇಶದಲ್ಲಿ ಸುಮಾರು 240ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಾಸಿಸುತ್ತವೆ.
ಸಂಜೆಯ ಸಮಯದ ಸದುಪಯೋಗಕ್ಕಾಗಿ ಮೊದಲಿಗೆ ಇಲ್ಲಿಯ Corbyn’s Cove ಎಂಬ ವಿಶಿಷ್ಟ ಸಮುದ್ರ ತೀರವನ್ನು ವೀಕ್ಷಿಸಲು ಹೊರಟೆವು. ಪಟ್ಟಣದಿಂದ ಕೇವಲ ಹತ್ತು ನಿಮಿಷಗಳ ಪ್ರಯಾಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲೇ ಅತ್ಯಂತ ಸ್ವಚ್ಛ ಮತ್ತು ಮುತುವರ್ಜಿಯಿಂದ ನಿರ್ವಹಿಸಲ್ಪಡುವ ಸುಮಾರು ಐದು ಕಿ.ಮೀ. ಅರ್ಧವೃತ್ತಾಕಾರದ ಸಮುದ್ರತೀರವನ್ನು ತಲಪಿದೆವು. ಕರಾವಳಿಯ ಹಿನ್ನೆಲೆಯಲ್ಲಿ ಸಮೃದ್ಧವಾಗಿ ಬೆಳೆದ ಪಾಮ್ ಮರಗಳು ಇದರ ಅಂದವನ್ನು ಹೆಚ್ಚಿಸಿವೆ. ಇಲ್ಲಿ ನೀರಿನ ಮಟ್ಟವು ಅತ್ಯಂತ ಸುರಕ್ಷಿತವಾಗಿದ್ದು ಎಲ್ಲ ರೀತಿಯ ಸಮುದ್ರದ ಸಾಹಸ ಕ್ರೀಡೆಗಳಿಗೆ ಉಪಯುಕ್ತವಾಗಿದೆ. ಸಮುದ್ರದ ಈ ಭಾಗವು ಅಳಿವೆಯಂತಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ತೀರಕ್ಕೆ ಬಡಿಯುವ ಸಣ್ಣ ಅಲೆಗಳ ಸದ್ದು ಅಹ್ಲಾದಕರವಾಗಿದೆ. ಸಾಕಷ್ಟು ಜನರಿದ್ದರೂ ದಟ್ಟಣೆ ಇರಲಿಲ್ಲ. ಚಂದದ ಸೂರ್ಯಾಸ್ತವನ್ನು ವೀಕ್ಷಿಸಲು ಇಲ್ಲಿ ಸಾಧ್ಯವಿಲ್ಲದಿದ್ದರೂ, ಪುಟ್ಟ ಮಕ್ಕಳು ಕೂಡಾ ಯಾವುದೇ ಭಯವಿಲ್ಲದೆ ನೀರಲ್ಲಿ ಆಡುವುದನ್ನು ನೋಡುವುದೇ ಖುಷಿ!
ಮುಂದಕ್ಕೆ, ಸೆಲ್ಯುಲರ್ ಜೈಲಿನ ಆವರಣದಲ್ಲಿ ಸಂಜೆ 6.30ಕ್ಕೆ ಪ್ರಾರಂಭವಾಗುವ ಲೇಸರ್ ಪ್ರದರ್ಶನ ವೀಕ್ಷಣೆಗೆ ಹೋಗುವುದಿತ್ತು. ರಾತ್ರಿಯ ಬೆಳದಿಂಗಳಿನಲ್ಲಿ ಒಂದು ಗಂಟೆ ಸಮಯ ನಡೆಯುವ ಈ ಪ್ರದ ರ್ಶನವು ಪ್ರತಿದಿನ ಮೂರು ಬಾರಿ ಇರುತ್ತದೆ. ನಾವು ಹೋಗಲಿರುವ ಪ್ರದರ್ಶನಕ್ಕೆ ಇನ್ನೂ ಸಮಯವಿತ್ತು, ಆದರೆ ಕತ್ತಲಾವರಿಸಿತ್ತು. ಆದ್ದರಿಂದ ಪಟ್ಟಣದ ಕಡಲ ಕಿನಾರೆಗೆ ಹೊಂದಿಕೊಂಡಿರುವ ಒಂದು ವಿಶೇಷ ತಾಣಕ್ಕೆ ನಾವು ಭೇಟಿ ಕೊಟ್ಟೆವು.
ಇಲ್ಲಿ, 1943 ಎಂದು ಲೋಹದಲ್ಲಿ ದೊಡ್ಡದಾಗಿ ಬರೆದ ಬರೆಹದ ಮೇಲೆ ಹಾಕಿದ ಬೆಳಕು ಅದನ್ನು ದೂರದ ವರೆಗೂ ಗೋಚರಿಸುವಂತೆ ಮಾಡಿದೆ. ಅದರ ಕೆಳಗಡೆಗೆ 1st TRICOLOUR HOISTING IN INDIA ಎಂಬ ಬರೆಹ ರಾರಾಜಿಸುತ್ತಿದೆ. ನಮ್ಮ ಭಾರತ ದೇಶದ ಭಾಗವಾದ ಅಂಡಮಾನಿನಲ್ಲಿ 30.12.1943ರಂದು ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ಕಣ್ಣು ತಪ್ಪಿಸಿ ಮೊತ್ತ ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿದ ಪವಿತ್ರ ತಾಣವಾಗಿದೆ ಇದು. 150ಅಡಿ ಎತ್ತರದ ಧ್ವಜಸ್ತಂಭದ ತುದಿಯಲ್ಲಿ ನಿರಂತರ ಹಾರಾಡುತ್ತಿರುವ ತ್ರಿವರ್ಣ ಧ್ವಜವು; ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ, ಮನದಲ್ಲಿ ಸದಾ ಅಚ್ಚೊತ್ತಿ ನಿಲ್ಲುವಂತಹ ಮಹಾನ್ ಘಟನೆಯೊಂದನ್ನು ನಿರಂತರ ನೆನಪಿಸುತ್ತದೆ.
ಈ ತಾಣವನ್ನು ಅತ್ಯಂತ ಸುರಕ್ಷಿತವಾಗಿ, ಸ್ವಚ್ಛ ಹಾಗೂ ಸುಂದರವಾಗಿ ಇರಿಸಲಾಗಿದೆ. ತಣ್ಣಗೆ ರಭಸವಾಗಿ ಬೀಸುತ್ತಿದ್ದ ಗಾಳಿಯಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ, ಸಾಕಷ್ಟು ಚಿತ್ರಗಳನ್ನು ತೆಗೆದೆವು. ಅಲ್ಲಿಯೇ ಪಕ್ಕದಲ್ಲಿ ಎತ್ತರವಾದ ಗೋಪುರವಿರುವ ದೇವಾಲಯವೊಂದು ಗೋಚರಿಸಿತು .ಆದರೆ ಅಲ್ಲಿಗೆ ಹೋಗುವ ದಾರಿಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇರಲಿಲ್ಲ. ಅಪರಿಚಿತ ಜಾಗದಲ್ಲಿ ಸ್ವಲ್ಪ ಅಳುಕಿನಿಂದಲೇ ದೇಗುಲದತ್ತ ನಡೆದೆವು. ಅದು ಅಲ್ಲಿಯ ಪ್ರಸಿದ್ಧ ಮುರುಗನ್ ದೇವಾಲಯವಾಗಿದ್ದು; ಪ್ರಶಾಂತವಾದ ಆವರಣದ ಹೊರಭಾಗದಲ್ಲಿ ದೊಡ್ಡ ಮರಗಳು, ಅಲ್ಲೇ ಬಳಿಯಲ್ಲಿ ಪೌರಾಣಿಕ ಕಥಾ ಹಿನ್ನೆಲೆಯ, ಬಣ್ಣ ಬಣ್ಣದ ಹಲವು ದೊಡ್ಡದಾದ ವಿಗ್ರಹಗಳು ಕಂಡುಬಂದವು. ವಿಶಾಲವಾದ ಮುಂಭಾಗದ ಪ್ರಾಂಗಣ, ಗಾಢವರ್ಣದಲ್ಲಿ ಕಂಗೊಳಿಸುವ ಕಂಬಗಳು, ಗೋಡೆಗಳು ಗಮನ ಸೆಳೆಯುವಂತಿದ್ದವು. ತಡವಾಗಿ ಬಂದ ಅರ್ಚಕರು ನೀಡಿದ ತೀರ್ಥಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ಹೊರಟೆವು….ಸೆಲ್ಯುಲರ್ ಜೈಲಿನತ್ತ…
(ಮುಂದುವರಿಯುವುದು…)

-ಶಂಕರಿ ಶರ್ಮ, ಪುತ್ತೂರು.

