ದಶಮಸ್ಕಂದ ಉತ್ತರಾರ್ಧ – ಅಧ್ಯಾಯ – ೧೦
ಬಲರಾಮಗಾಥಾ
ಬಾಲ್ಯದಿ ಆಡಿ ಬೆಳೆದ ನಂದಗೋಕುಲವ
ನೋಡಿ ಬರಬೇಕೆಂಬ ಇಚ್ಛೆಯಲಿ
ಅಪರೂಪಕೆ ಬಂದ ಬಲರಾಮನ
ಸಕಲರೂ ಆದರದಿ ಸ್ವಾಗತಿಸೆ, ಬಲರಾಮ,
ಯಶೋದ ನಂದಗೋಪರಿಗೆ ನಮಿಸಿ
ಸಕಲರ ಯೋಗಕ್ಷೇಮವ ವಿಚಾರಿಸಿ
ಸಂತೋಷದಿ ಕಾಲಕಳೆಯುತಿರೆ
ವಿಷಯವನರಿತ ಗೋಪಾಂಗನೆಯರು
ತಮ್ಮೆಲ್ಲ ಕೃಷ್ಣಪ್ರೇಮವ ಬಲರಾಮನೆದುರು
ಪರಿಪರಿಯಾಗಿ ಪೇಳುತ
ತಮ್ಮೆಲ್ಲ ಬಂಧು ಬಾಂಧವರನ್ನೂ
ಗಂಡ ಮಕ್ಕಳನ್ನೂ ತ್ಯಜಿಸಿ ಬಂದಿದ್ದವರ
ತೊರೆದು ಹೋದವ ಮರಳಿ ಬಾರದೆ
ಎಲ್ಲರ ಮರೆತಿಹನೆ
ಎಂದು ಪ್ರಲಾಪಿಸುತ
ತಮ್ಮ ಕೃಷ್ಣ ಅನುರಾಗವ
ಪರಿಪರಿಯಲಿ ತೋರ್ಪೆ
ಬಲರಾಮ ತನ್ನ ಮೃದುಮಾತಲಿ
ಕೃಷ್ಣ
ಗೋಪಿಕೆಯರ ಮರೆತಿಲ್ಲವೆಂದೂ
ಕಾರ್ಯಬಾಹುಳ್ಯದಿ ಬರಲು
ಅವಕಾಶವಾಗಲಿಲ್ಲವೆಂದೂ
ಎಲ್ಲರ ಸಂತೈಸಿದನು
ಪೂರ್ಣಚಂದ್ರನ ಚಂದ್ರಿಕೆಯಲಿ
ಶೋಭಿಸುತಿರ್ಪ ಯಮುನೆಯಲಿ
ಇರುಳೆಲ್ಲ ವಿಹರಿಸಿ
ವಾರುಣಿ ಮದ್ಯವ ಪಾನಮಾಡುತಿರೆ
ಗೋಪಿಯರು ಮಂಡಲಾಕಾರದಿ ನಿಂತು ಹಾಡುತಿರೆ
ಹೆಣ್ಣಾನೆಗಳ ಮಧ್ಯದಲ್ಲಿರ್ಪ
ಸಲಗದಂತೆ ವಿಹರಿಸಿದನು
ಎಲ್ಲರೊಡನೆ ಜಲಕ್ರೀಡೆಯಾಡಲೆಂಬ ಇಚ್ಛೆಯಲಿ
ನದಿಯು ಸ್ವಲ್ಪದೂರದಲ್ಲಿರೆ
ನದಿಯೇ ತನ್ನಲ್ಲಿಗೆ ಬರಲೆಂಬ
ಇಚ್ಛೆಯಲಿ ಕೂಗಿ ಕರೆದರೂ
ಉಪೇಕ್ಷಿಸಿ ಬಾರದ ಯಮುನೆಯ ಮೇಲೆ
ಸಿಟ್ಟಾಗಿ ಬಲರಾಮ
ತನ್ನ ನೇಗಿಲಿನಿಂದ ನೂರು ಹೋಳಾಗಿ
ಸೀಳುವೆ ಎಂದು ಗರ್ಜಿಸೆ
ಯಮುನಾದೇವಿ ಬೆದರಿ ಸ್ತ್ರೀರೂಪದಿ
ಬಳಿಬಂದು ಕ್ಷಮೆಯಾಚಿಸೆ
ಬಲರಾಮ ಅವಳ ಕೊರಳಿಗೆ ಹಾಕಿದ
ನೇಗಿಲ ತೆಗೆದನು
ಬಳಿಗೆ ಬಂದ ನದಿಯ ಪವಿತ್ರ
ಸಲಿಲದಿ ಗೋಪಾಂಗನೆಯರೊಂದಿಗೆ
ವಿಹರಿಸಿದನು ಬಲರಾಮ
ನರಕಾಸುರ ಸ್ನೇಹಿತ ದ್ವಿವಿದ ವಾನರ
ಮಿತ್ರನ ಸಾವಿನಿಂದ ರೋಷಗೊಂಡು
ಗ್ರಾಮ ನಗರಗಳ ಪ್ರವೇಶಿಸಿ
ಜನರಿಗೆ ವಿಧವಿಧವಾಗಿ ಕಿರುಕುಳಗಳ ನೀಡುತಿರೆ
ಒಮ್ಮೆ ಬಲರಾಮ ಗೋಪಿಕಾಸ್ತ್ರೀಯರೊಡಗೂಡನೆ
ಗಾನ ನರ್ತನದಿ ವಿನೋದದಿಂದಿರೆ
ದುರುಳ ವಾನರನು
ಬಲರಾಮನ ಮಧುಪಾತ್ರೆಯ ಒಡೆದು ಹಿಗ್ಗುತಿರೆ
ಬಲರಾಮ ಹಲಮುಸಲಾದಿ ಆಯುಧದಿಂ
ಅವನ ಪ್ರಹರಿಸೆ, ಮೈಯೆಲ್ಲ ರಕ್ತಮಯವಾಗಿ
ದ್ವಿವಿದ ಬಲರಾಮನ ಎದೆಯೆ ಅಪ್ಪಳಿಸೆ
ರೋಷದಿ ಬಲರಾಮ ಅವನನ್ನೂ ಅಪ್ಪಳಿಸೆ
ದ್ವಿವಿದ ರಕ್ತವ ವಮನ ಮಾಡಿ
ನೆಲಕೆ ಬಿದ್ದು ಪ್ರಾಣ ಬಿಟ್ಟನು
ದುರ್ಯೋಧನ ಪುತ್ರಿ ಲಕ್ಷಣೆ
ಸರ್ವಾಂಗ ಸುಂದರಿ
ಅವಳ ಸ್ವಯಂವರಕೆ
ಜಾಂಬವತೀ ಕೃಷ್ಣರ ಪುತ್ರ
ಸಾಂಬನ ತೆರಳಿ ಅವಳ ಬಳಿಗೈದು
ಅವಳನ್ನೆತ್ತಿ ರಥದಲ್ಲಿ ಕುಳ್ಳಿರಿಸಿ
ದ್ವಾರಕೆಗೆ ತೆರಳೆತ್ನಿಸೆ
ದುರ್ಯೋಧನ ದುಷ್ಯಾಸನ ಕರ್ಣಾದಿ ವೀರರೆಲ್ಲ
ಕ್ರೋಧವಶರಾಗಿ ಏಕಾಂಗಿ ವೀರನ
ಶೌರ್ಯಕ್ಕೆ ಬೆರಗಾಗುತ
ಐದಾರು ಮಂದಿ ವೀರರು ಒಂದಾಗಿ
ಅವನ ವಿರಥನನ್ನಾಗಿ ಮಾಡಿ ಸೆರೆ ಹಿಡಿದರು
ಯದುವೀರ ಸಾಂಬನನ ಸೆರೆಯಿಂ ಬಿಡಿಸಿ ತರಲು
ಕ್ರೋಧಗೊಂಡ ಯಾದವರು
ಸಕಲ ಸೈನ್ಯ ಸಮೇತ ಯುದ್ಧಕೆ ಸಿದ್ಧರಾಗೆ
ಬಲರಾಮ ಯಾದವ ಕೌರವರ ಮನಸ್ತಾಪ ತಗ್ಗಿಸಲು
ಮಿತಪರಿವಾರದಿ ಹಸ್ತಿನಾವತಿಗೆ ತೆರಳಿದ
ಬಲಾರಾಮನ ಶಾಂತಿಪ್ರಸ್ತಾಪವ ತಿರಸ್ಕರಿಸಿದ
ದುರಭಿಮಾನಿ ಶಿಷ್ಯ ದುರ್ಯೋಧನನ ನಡೆಗೆ
ಕ್ರೋಧಾವೇಷನಾದ ಬಲರಾಮ
ತನ್ನ ಹಲಾಯುಧವ ರಾಜಧಾನಿಯ
ದಕ್ಷಿಣ ಪಾರ್ಶ್ವಕ್ಕೆ ಹಾಕಿ ಎಳೆಯೆ
ಹಸ್ತಿನಾವತಿ ಚಕ್ರದ ಸುಳಿಯಲಿ ಸಿಕ್ಕಿ
ಗಂಗಾಪ್ರವಾಹದಲಿ ಮುಳುಗುತಿರೆ
ದುರ್ಯೋಧನಾದಿಗಳು ಪಶ್ಚಾತಾಪದಿ
ಆದಿಶೇಷಾವತಾರಿ ಬಲರಾಮನ
ಕ್ಷಮೆಗೆ ಪ್ರಾರ್ಥಿಸೆ
ಸುಪ್ರೀತ ಹಲಾಧರ ಅಭಯದಾನವನಿತ್ತ
ನಂತರದಿ ಸಾಂಬನ ಲಕ್ಷಣೆಯರ
ವಿವಾಹ ಸಂಪನ್ನವಾಯಿತು
ಬಲರಾಮನ ಮಹಿಮೆಯ ತೋರ್ಪ
ಕುರುಹಾಗಿ ಹಸ್ತಿನಾಪುರ ಗಂಗೆಯ ಕಡೆಗೆ
ಚಾಚಿಕೊಂಡಿಹ ದೃಶ್ಯ ಇಂದಿಗೂ ಇಹುದು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45313

-ಎಂ. ಆರ್. ಆನಂದ, ಮೈಸೂರು

