ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತನ್ನಣ್ಣನ ಗೆಳೆಯನಿಗೆ ನನ್ನ ಮೇಲಿದ್ದ ಆರಾಧನಾ ಭಾವನೆ, ಜೊತೆಗೆ ಮದುವೆಯ ನಂತರವೂ ನನ್ನನ್ನು ಓದಿಸುತ್ತೇನೆಂಬ ಆಶ್ವಾಸನೆ ಪದೇಪದೇ ಮನದೊಳಗಿನ ಆಸೆಯನ್ನು ಬಡಿದೆಬ್ಬಿಸತೊಡಗಿತು. ಎರಡೂ ಮನೆಯವರ ನಡುವೆ ಇದ್ದ ಒಡನಾಟ, ವಿಶ್ವಾಸ, ಪರಸ್ಪರ ಗೌರವಗಳು ಎಲ್ಲಕ್ಕೂ ಮಿಗಿಲಾಗಿ ಭಾರ್ಗವಿಗೆ ಪದವಿ ಪಡೆದಿದ್ದೇನೆಂಬ ಹೆಮ್ಮೆ ತನ್ನೊಳಗಿನ ಬಯಕೆಯನ್ನು ಪ್ರಚೋದಿಸಿದವು.
ಕಂಡು ಕೇಳದ, ಗುರುತು ಪರಿಚಯವಿಲ್ಲದ ಮನೆಗೆ ಹೋಗಿ ಅವರೆಲ್ಲರ ಮರ್ಜಿಯನ್ನು ತಿಳಿದು ಅರ್ಥಮಾಡಿಕೊಳ್ಳುವುದಕ್ಕೆ ಎಷ್ಟೋ ಕಾಲಬೇಕಾಗುತ್ತದೆ. ಒಂದುವೇಳೇ ಸಹ್ಯವಾಗದಿದ್ದರೂ ನಿರ್ವಾಹವಿಲ್ಲದೆ ಬಾಯಿಮುಚ್ಚಿಕೊಂಡು ಹೊಂದಿಕೊಂಡು ಬದುಕು ನಡೆಸಬೇಕು. ಇಂತಹ ಸಮಯದಲ್ಲಿ ನನ್ನ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಾರೆಂಬ ಭರವಸೆ ಎಲ್ಲಿಂದ ಸಾಧ್ಯ. ಆದರೆ ಇಲ್ಲಿ ಎಲ್ಲರೂ ಪರಿಚಿತರೇ, ಎಲ್ಲಕ್ಕಿಂತ ಹೆಚ್ಚಾಗಿ ನನ್ನಾಸೆಗೆ ಇಂಬುಕೊಟ್ಟು ಈಡೇರಿಸಲು ಒಪ್ಪಿರುವ ಆ ಮನೆಯ ಗಂಡುಮಗ. ಈ ಮೊದಲೇ ಅಣ್ಣನಿಗೆ ಸುಳಿವು ಕೊಟ್ಟಂತೆ ಅದನ್ನೇ ಅನುಷ್ಠಾನಕ್ಕೆ ತರಲು ಮುಂದಾದಳು ಭಾರ್ಗವಿ.

ಅಣ್ಣ ಬಾಲಕೃಷ್ಣ ಏರ್ಪಾಡು ಮಾಡಿಕೊಟ್ಟಂತೆ ಅವಳು ಸಿದ್ಧಾರ್ಥನನ್ನು ಭೇಟಿಮಾಡಿದಳು. ಚಿಕ್ಕಂದಿನಿಂದಲು ಒಬ್ಬರನ್ನೊಬ್ಬರು ನೋಡಿಕೊಂಡೇ ಬೆಳೆದವರು. ಪರಸ್ಪರ ಮಾತನಾಡದವರೇನಲ್ಲ. ಆದರೆ ಈಗ ಏಕೋ ಮಾತನಾಡಲು ಧೈರ್ಯ ಬರುತ್ತಿಲ್ಲ. ಸುಮ್ಮನೆ ಕುಳಿತಿದ್ದರು. ಇಬ್ಬರನ್ನೇ ಬಿಟ್ಟು ಅಳುಕಾಳುಗಳಿಗೆ ಕೆಲಸ ವಹಿಸಲು ಹೋಗಿದ್ದ ಬಾಲು ಹಿಂದಿರುಗಿ ಬಂದ. ಇಬ್ಬರ ಕಡೆಗೂ ನೋಡಿದ ಭಾರ್ಗವಿ ತಲೆ ಬಗ್ಗಿಸಿ ಕುಳಿತಿದ್ದಳು. ಅವಳತ್ತಲೇ ಸ್ನೇಹಭಾವದಿಂದ ನೋಡುತ್ತಾ ಕುಳಿತಿದ್ದ ಸಿದ್ಧಾರ್ಥ. ಇಬ್ಬರೂ ಮಾತನಾಡಲು ಆರಂಭಿಸಿದಂತೆಯೇ ಕಾಣಲಿಲ್ಲ. “ನೀವು ಹೀಗೇ ಕುಳಿತಿದ್ದರೆ ನನ್ನಪ್ಪ ಭಾರ್ಗವಿಯನ್ನು ಬೇರೆ ಯಾರಿಗಾದರೂ ಕಟ್ಟಿ ಕಳುಹಿಸಿಬಿಡುತ್ತಾರೆ. ಬೇಗಬೇಗನೆ ಅದೇನು ಬೇಕೋ ಮಾತನಾಡಿಕೊಳ್ಳಿ. ಒಂದು ತೀರ್ಮಾನಕ್ಕೆ ಬನ್ನಿ. ಯಾರಿಗೆ ಯಾರೂ ಬಲವಂತವಾಗಿ ಒಪ್ಪಿಸಿಕೊಳ್ಳಬೇಕಿಲ್ಲ. ಇದು ನಿಮ್ಮ ಬಾಳಿನ ಪ್ರಶ್ನೆ.” ಎಂದು ಎಚ್ಚರಿಸಿ ಮತ್ತೆ ಯಾರೋ ಕರೆದರೆಂದು ಬಾಲಕೃಷ್ನ ಅತ್ತಕಡೆಗೆ ಹೋದ.

“ಹಾ ಇದು ನಿಮ್ಮನ್ನು ಉದ್ದೇಶಿಸಿ ಹೇಳಿದ್ದು, ಕೇಳಿಸಿಕೊಂಡಿರಾ? ನಾನಂತೂ ನನ್ನ ಅಭಿಪ್ರಾಯವನ್ನು ಬಾಲುವಿಗೆ ಹೇಳಿಬಿಟ್ಟಿದ್ದೇನೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಅದು ನನ್ನ ಗಟ್ಟಿಯಾದ ನಿರ್ಧಾರ. ಏನಿದ್ದರೂ ನಿಮ್ಮ ಅಭಿಪ್ರಾಯ ಮುಖ್ಯ. ಯೋಚಿಸಿ ಹೇಳಿಬಿಡಿ. ಸರದಿ ನಿಮ್ಮದೇ” ಎಂದು ಸಿದ್ಧಾರ್ಥ ತನ್ನ ಮಾತು ಮುಗಿಸಿದ.

ಹೇಗೆ ಮಾತನ್ನು ಪ್ರಾರಂಭಿಸುವುದು ಎಂದು ಆಲೋಚಿಸುತ್ತಿದ್ದ ಭಾರ್ಗವಿಗೆ ಅವನ ಮಾತು ಕೇಳಿ ಹುರುಪು ಬಂತು. ತಾನು ಅಂದುಕೊಂಡಿರುವ, ಮುಂದೆ ಆಗಬೇಕೆಂದಿರುವ ತನ್ನಾಸೆಯನ್ನೆಲ್ಲ ಬಡಬಡನೆ ಹೇಳಿಬಿಟ್ಟಳು. “ರೀ ಸಿದ್ಧಾರ್ಥರವರೇ ಖಂಡಿತಾ ನೀವು ನನ್ನನ್ನು ಮುಂದೆ ಓದಿಸುತ್ತೀರಲ್ವಾ?” ಎಂದು ಕೇಳಿದಳು.

“ಹೂಂ..ಎಷ್ಟು ಸಾರಿ ಹೇಳಬೇಕು, ಖಂಡಿತವಾಗಿ ಅದನ್ನು ನಡೆಸಿಕೊಡುತ್ತೇನೆ. ಇಷ್ಟು ದಿವಸ ನನ್ನನ್ನು ಕಂಡಿದ್ದೀರಿ. ನನ್ನ ಗುಣಸ್ವಭಾವಗಳು ಗೊತ್ತಿದ್ದೂ ಈ ಪ್ರಶ್ನೆ, ಮತ್ತೆ ಪುನರುಚ್ಛರಿಸಿದ್ದೇನೆ. ನೀವು ಹೂಂ ಎಂದರೆ ಹಿರಿಯರ ಮುಂದೆ ವಿಷಯ ತಿಳಿಸಿ ಸಮ್ಮತಿ ಪಡೆದು ಮುಂದುವರೆಯೋಣ. ಅಂದಹಾಗೆ ನಿಮ್ಮ ಮನೆಯಲ್ಲೂ ಎಲ್ಲರೂ ಒಪ್ಪಬೇಕಲ್ಲಾ” ಎಂದ ಸಿದ್ಧಾರ್ಥ.

“ಒಪ್ಪದೇ ಏನು ಮಾಡ್ತಾರೆ, ಮನೆಯಲ್ಲಿ ನಮ್ಮಪ್ಪ ನನ್ನ ಆಸೆ ಆಕಾಂಕ್ಷೆಗಳಿಗೆ ಅಡ್ಡಿಮಾಡಲಾರರು. ಓದಿನ ವಿಷಯದಲ್ಲಿ ಅವರಿಗೆ ನಾನಾಗಲೇ ಹೇಳಿದ್ದೇನೆ. ಓದಿನ ವಿಷಯದಲ್ಲಿ ನಿಮ್ಮ ಒಪ್ಪಿಗೆ ಮುಖ್ಯವಾಗಿತ್ತು. ಓದಿದ ನಂತರ ನೀವು ಹೋಲಿಕೆ ಮಾಡಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದಾಗಲೀ, ಮತ್ಯಾರಾದರೂ ಇದರ ಬಗ್ಗೆ ಏನಾದರೂ ಅಂದರೂ ಅನ್ಯಥಾ ಭಾವಿಸಿಕೊಳ್ಳಬಾರದು. ಇನ್ನೊಂದು ಮಾತು. ನಾನು ಹೆಚ್ಚು ಓದಿದ ನಂತರ ಕೆಲಸಕ್ಕೂ ಕಳುಹಿಸಬೇಕು. ಹಾಗಂತ ನಾನು ಮನೆಯ ನಿರ್ವಹಣೆಯನ್ನಾಗಲಿ, ಮನೆಯ ಸದಸ್ಯರನ್ನಾಗಲಿ ಕಡಗಣಿಸುವುದಿಲ್ಲ. ಇದು ನನ್ನ ಪ್ರಾಮಿಸ್” ಎಂದಳು ಭಾರ್ಗವಿ.

ಅವಳ ನುಡಿಗಳನ್ನು ಕೇಳಿದ ಸಿದ್ಧಾರ್ಥ ನಾನು ತಿಳಿದುಕೊಂಡಷ್ಟು ಮುಗ್ಧೆ ಏನಲ್ಲ ಈಕೆ ಛಲವಾದಿ, ತಾನು ಹೇಳಿದ್ದನ್ನು ಮಾಡಿಯೇ ತೀರುತ್ತಾಳೆ. ಹೂಂ..ಏನದು ಓದಿಸಿದ ಮೇಲೆ ಕೆಲಸಕ್ಕೂ ಕಳುಹಿಸಬೇಕು. ನಾನು ಪಕ್ಕಾ ವ್ಯವಹಾರಸ್ಥ, ಇವಳನ್ನು ಹೇಗೆ ಬಳಸಿಕೊಳ್ಳುತ್ತೇನೆ ಎಂಬುದನ್ನು ಮಾಡಿ ತೋರಿಸುತ್ತೇನೆ ಅಂದುಕೊಂಡನು.
“ರೀ..ಸಿದ್ಧಾರ್ಥ, ಏನು ಯೋಚಿಸುತ್ತಿದ್ದೀರಾ? ನಾನು ಕೇಳಿದ್ದು ಕಷ್ಟ ಸಾಧ್ಯಾನಾ?”
“ಹ್ಹೆ..ಹ್ಹೇ ಅದೇನು ಇಲ್ಲ ಭಾರ್ಗವಿಯವರೇ, ಓದಿದ ಮೇಲೆ ಅದನ್ನು ಸಾರ್ಥಕ ಮಾಡಿಕೊಳ್ಳದಿದ್ದರೆ ಅದರ ಪ್ರಯೋಜನವೇನು? ಖಂಡಿತವಾಗಿ ನಡೆಸಿಕೊಡುತ್ತೇನೆ. ಸರೀನಾ? ಇನ್ನು ನಿಮ್ಮ ಅನುಮಾನಗಳೆಲ್ಲವೂ ಮುಗಿದಿದ್ದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದಲ್ಲಾ? ಅಥವಾ ನಿಮಗೆ ಸಮಯ ಬೇಕೆಂದಿದ್ದರೆ ನಿಧಾನವಾಗಿ ಯೋಚಿಸಿ ಹೇಳಿ” ಎಂದ ಸಿದ್ಧಾರ್ಥ.
“ಇಲ್ಲಪ್ಪಾ ನಿಧಾನ ಮಾಡಿದರೆ ನಮ್ಮಪ್ಪ ಅಣ್ಣ ಹೇಳಿದಂತೆ ಮಾಡುವ ಸಂಭವವುಂಟು. ನೀವು ನಿಮ್ಮ ಮನೆಯ ಹಿರಿಯರಿಗೆ ತಿಳಿಸಬಹುದು. ನನಗೆ ಹೇಳಲು ಸ್ವಲ್ಪ ಭಯ. ಅದಕ್ಕೆ ಅಣ್ಣನ ಮೊರೆ ಹೋಗುತ್ತೇನೆ” ಎಂದಳು ಭಾರ್ಗವಿ.
“ ಈಗ ಕೆಲವೇ ನಿಮಿಷಗಳ ಹಿಂದೆ ನನ್ನ ಆಸೆಗೆ ಅಪ್ಪ..”
ಅವನ ಮಾತನ್ನು ಅರ್ಧದಲ್ಲೇ ತಡೆದು “ಆಸೆಗೆ ಅಡ್ಡಿ ಪಡಿಸಲಾರರು, ಆದರೆ ನಾನೇ ನನ್ನ ಬಗ್ಗೆ ನಿಮ್ಮನ್ನು ಇಷ್ಟಪಟ್ಟಿದ್ದನ್ನು, ಭೇಟಿಮಾಡಿದ್ದನ್ನು ಹೇಳಿಕೊಳ್ಳುವುದು ಹೇಗೆ”
“ಗೊತ್ತಾಯಿತು ಬಿಡಿ” ಎಂದ ಸಿದ್ಧಾರ್ಥ.

ಅಷ್ಟರಲ್ಲಿ ಬಾಲಕೃಷ್ಣ ಅಲ್ಲಿಗೆ ಮತ್ತೆ ಬಂದನು. “ಏನೋ ಗೆಳೆಯಾ, ನನ್ನ ಸೋದರಿಯ ಜೊತೆ ಮಾತನಾಡಿದೆಯಾ? ಇಲ್ಲ ಹಾಗೇ ನೋಡುತ್ತಾ ಕುಳಿತಿದ್ದೀಯಾ? ಏನಮ್ಮ ಭಾರ್ಗವಿ ಕೇಳಿದೆಯಾ?”
ಅಣ್ಣನ ಮಾತಿಗೆ ತಲೆ ಅಲ್ಲಾಡಿಸುತ್ತಾ ಒಪ್ಪಿಗೆ ಎಂಬಂತೆ ತಿಳಿಸಿದಳು. ಸಿದ್ಧಾರ್ಥ “ನಿನ್ನ ತಂಗಿ ನನ್ನ ಮಾತಿನ ಮೇಲೆ ನಂಬಿಕೆಯಿಲ್ಲದಂತೆ ಪದೇಪದೆ ಕೇಳಿ ಪಕ್ಕಾ ಮಾಡಿಕೊಂಡರಪ್ಪಾ. ಈಗ ನಿನ್ನ ಮುಂದೆಯೂ ಹೇಳುತ್ತೇನೆ ಕೇಳಿಬಿಡು. ಮೊದಲು ನಿನ್ನ ಬಳಿ ಏನು ಹೇಳಿದ್ದೆನೋ ಅದನ್ನು ಅಕ್ಷರಶಃ ನಡೆಸಿಕೊಡುತ್ತೇನೆ. ಈಗ ಡಬಲ್ ಗ್ಯಾರಂಟಿಯಾಯಿತು. ನಾನಿನ್ನು ವಿಷಯವನ್ನು ಮನೆಯಲ್ಲಿ ತಿಳಿಸಬೇಕು. ರೀ ಭಾರ್ಗವಿ ಇನ್ನೊಮ್ಮೆ ದೀರ್ಘವಾಗಿ ಆಲೋಚಿಸಿ ನಿನ್ನ ಅಣ್ಣನ ಮೂಲಕ ಮನೆಯವರಿಗೆ ತಿಳಿಸಿ ಹಿರಿಯರ ಅನುಮತಿ ಕೇಳಿ” ಎಂದು ತಾನು ಅಲ್ಲಿಂದ ಹೊರಟನು.
ಗೆಳೆಯನ ಮೋಟರ್ ಸೈಕಲಿನ ಸದ್ದು ದೂರ ಹೋದ ನಂತರ ಬಾಲು ತಂಗಿಯ ಕಡೆ ತಿರುಗಿ “ಹೇಳಮ್ಮಾ ಈಗ ನಾನು ಅಪ್ಪ ಅಮ್ಮನೊಡನೆ ಪ್ರಸ್ತಾಪ ಮಾಡಬಹುದಾ? ತಡಮಾಡುವುದು ಬೇಡ.” ಎಂದದ್ದಕ್ಕೆ ಭಾರ್ಗವಿ “ನಾನಾಗಲೇ ಓ.ಕೆ. ಅಂದೆನಲ್ಲಾ” ಎಂದಳು.

“ಸರಿ ಈಗ ನೀನು ಮನೆಗೆ ಹೋಗಿರು, ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ. ಅಪ್ಪ ಮಾವಿನ ಮರಗಳನ್ನು ಗುತ್ತಿಗೆ ಹಿಡಿಯಲು ಯಾರೋ ಬರುತ್ತಾರೆ ಎಂದಿದ್ದರು. ಅವರು ಬಂದು ಹೋದಮೇಲೆ ನಾವಿಬ್ಬರೂ ಒಟ್ಟಿಗೇ ಬರುತ್ತೇವೆ” ಎಂದು ಹೇಳಿದನು ಬಾಲಕೃಷ್ಣ.

ರಾತ್ರಿ ಊಟವಾದ ಮೇಲೆ ತಂಗಿಯ ಅಪೇಕ್ಷೆಯ ಮೇರೆಗೆ ಹೆತ್ತವರ ಮುಂದೆ ತನ್ನ ಗೆಳೆಯನ ಜೊತೆ ನಡೆಸಿದ ಮಾತುಕತೆಗಳನ್ನು ಚಾಚೂ ತಪ್ಪದೆ ಹೇಳಿದನು ಬಾಲಕೃಷ್ಣ. ಆದರೆ ತನ್ನ ಗೆಳೆಯ ಸಿದ್ಧಾರ್ಥ ಮತ್ತು ಭಾರ್ಗವಿ ಭೇಟಿಯಾಗಿದ್ದರೆಂಬ ವಿಷಯ ಮುಚ್ಚಿಟ್ಟನು. ಹಾಗೇನಾದರೂ ಹೇಳಿದ್ದರೆ ಎಲ್ಲಾ ಹುಡುಗರೇ ನಿರ್ಧಾರ ಮಾಡಿಕೊಂಡು ನಾಮಕಾವಾಸ್ತೆ ನಮ್ಮ ಗಮನಕ್ಕೆ ತಂದಿದ್ದಾರೆ ಎಂದುಕೊAಡಾರೆAದು ಹೇಳಲಿಲ್ಲ. ಗೆಳೆಯನಿಗೂ ನೀವು ಭೇಟಿಯಾದ ವಿಷಯ ಹಿರಿಯರ ಮುಂದೆ ಹೇಳಬೇಡವೆಂದು ಫೋನ್ ಮಾಡಿದ್ದ. ನಮ್ಮ ಹಿರಿಯರು ಒಪ್ಪಿದ ನಂತರ ನಿಮ್ಮ ಮನೆಯ ಹಿರಿಯರೊಡನೆ ವಿಷಯ ಅವರಿಂದಲೇ ಪ್ರಸ್ತಾಪ ಮಾಡಲು ಹೇಳುತ್ತೇನೆ ಎಂದು ತಾಕೀತು ಮಾಡಿದ್ದ. “ಓ..ಬಾಲು ನನಗೀ ವಿಚಾರ ಹೊಳೆದೇ ಇರಲಿಲ್ಲ. ಭೇಷಾಯಿತು ಬಿಡು” ಎಂದಿದ್ದ ಸಿದ್ಧಾರ್ಥ.

ತನ್ನ ಮಗನ ಮಾತುಗಳನ್ನು ಸಮಾಧಾನದಿಂದ ಕೇಳಿದ ಮಲ್ಲಪ್ಪನವರಿಗೆ ತಮ್ಮ ಕಿವಿಗಳನ್ನು ತಾವೇ ನಂಬದಾದರು. ತಾಯಿ ಶಾಂತಮ್ಮನಂತೂ “ಕಂಡು ಕೇಳಿದ ಒಡನಾಟವಿರುವ ಮನೆ, ಅತ್ತೆ ಮಾವ ಇಬ್ಬರೂ ಚಿನ್ನದಂತಾವರು, ನಿನ್ನ ಸ್ನೇಹಿತ ಕೆಟ್ಟವನೇನಲ್ಲ, ಆದರೆ ಅವನು ನಿನ್ನ ಹಂಗೆ ಬೇಸಾಯ ಮಾಡಿಕೊಂಡಿರೋನು. ಹೆಚ್ಚು ಓದಿದೋನೇನಲ್ಲ. ಅವನನ್ನು ಕಟ್ಟಿಕೊಂಡವಳು ಕೆಲಸಕ್ಕೂ ಜೊತೆಯಾಗಿರಬೇಕೆಂದು ಬಯಸೋದು ಸಹಜ. ಅದು ಬಿಟ್ಟು ತಾನು ಕಟ್ಟಿಕೊಂಡವಳನ್ನು ಮುಂದಕ್ಕೆ ಹೆಚ್ಚು ಓದಿಸ್ತೀನಿ ಅಂತ ಅಂದವನೇ ಅಂದ್ರೆ ಬಿಟ್ಟಾರಾ. ನಮ್ಮ ಮನೆಯ ಹೆಣ್ಣು ಅವನಿಗೆ ಪಸಂದು ಬಂದದೆ. ಹಂಗೇ ಕೇಳಿದ್ರೆ ಕೊಡ್ತಾರೋ ಇಲ್ಲವೋ ಅಂತ, ನಮ್ಮ ಹುಡುಗಿಗೆ ಓದೋ ಹುಚ್ಚಿದೆ ಎಂಬ ವಿಷಯ ತಿಳಿದು ಹಿಂಗೆ ಪಿಲಾನ್ ಮಾಡವನಾ ಅಂತ ಗುಮಾನಿ ನನಗೆ” ಎಂದರು.

“ಹAಗ್ಯಾಕೆ ಹೇಳ್ತೀ ಶಾಂತೂ, ಬಾಲು ಹೇಳಿದ್ದನ್ನು ಕೇಳಿಕೊಂಡವನೆ, ಜೊತೆಗೆ ಅವನಿಗೂ ಇಷ್ಟ ಇತ್ತು ಅಂತ ಕಾಣುತ್ತೆ, ನಾವು ಮದುವೆಗೆ ಪ್ರಯತ್ನ ಮಾಡುತ್ತಿರೋದು, ತಂಗಿ ಹಟ ಹಿಡಿದಿರೋದು ಎಲ್ಲವನ್ನು ಕೇಳಿದ ಮೇಲೆ ಅವನೂ ತನ್ನ ಮಾತು ಹೊರಗೆಡವಿದ್ದಾನೆ. ಓದಿಸಿಯೂ ಓದಿಸಬಹುದು. ಮನೆಯಲ್ಲಿ ಅವನ ಮಾತೇ ನಡೆಯೋದು. ಪ್ರತಿಷ್ಠೆಗೋಸ್ಕರನಾದ್ರೂ ಹಠ ಮಾಡಿ ಅವರನ್ನೊಪ್ಪಿಸಬಹುದು. ನನ್ನ ಯೋಚನೆ ಅದಲ್ಲ, ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಅವರಪ್ಪನ ನಂತರ ಇವನು ಅವನಂತೆಯೇ ಮೈಮುರಿದು ಕಷ್ಟಪಡ್ತಾನೇಯೇ ಎಂಬ ಅನುಮಾನ. ಕಟ್ಟಿಕೊಂಡವಳನ್ನು ಓದಿಸೋ ನೆಪ ಇಟ್ಟುಕೊಂಡು ಊರಿಗೂ ಮೈಸೂರಿಗೂ ಅವಳ ಜೊತೆ ಅಡ್ಡಾಡುತ್ತಾ ಕೂತರೇನು ಪ್ರಯೋಜನ, ಅದೇ ನನ್ನ ಚಿಂತೆ” ಎಂದರು ಮಲ್ಲಪ್ಪನವರು.

ತಂದೆಯ ಮಾತಿಗೆ “ಅಪ್ಪಾ ತಲೆಮೇಲೆ ಜವಾಬ್ದಾರಿ ಬಿದ್ದರೆ ಎಂಥಾವನೂ ಬದಲಾಗುತ್ತಾನೆ. ಇದು ನೀವು ಆಗಾಗ ಹೇಳುವ ಮಾತೇ, ಹಾಗೇ ನನ್ನ ದೋಸ್ತನೂ ಬದಲಾಗಬಹುದು. ಮೇಲಾಗಿ ಅವನನ್ನು ಮದುವೆಯಾಗಲು ಒಪ್ಪಿರುವವಳು ಯಾರು?” ಎಂದು ತಂಗಿಯ ಬಗ್ಗೆ ಹೇಳಲು ಹೋದವನು ಅಷ್ಟಕ್ಕೇ ನಿಲ್ಲಿಸಿದನು. “ಅವನ ಮೇಲೆ ಒತ್ತಾಯ ಹಾಕಿದರಾಯಿತು” ಎಂದನು.

“ಸರಿ ಮಗಾ, ಈ ನಮ್ಮ ಹುಡುಗಿ ಅದೇನು ಓದಿ ದಬ್ಬಾಗ್ತಾಳೋ ನೋಡೇಬಿಡೋಣ. ಮೊದಲು ಅವರ ಮನೆ ಹಿರಿಯರನ್ನು ಕೇಳಿ ನೋಡುವಾ. ಅವರು ಒಂದು ಹೆಣ್ಣು ಮಗೀನ ಜವಾಬ್ದಾರಿ ಮುಗಿಸಿಕೊಂಡವರೆ, ಇನ್ನೊಂದು ಇವನಿಗಿಂತ ಚಿಕ್ಕದು ಇನ್ನು ಓದ್ತಾ ಇದೆ. ಕಮಲಮ್ಮ ಗೋವಿಂದಣ್ಣನವರ ಒಪ್ಪಿಗೆ ಮುಖ್ಯ. ನಾವು ಹೆಣ್ಣು ಹೆತ್ತವರು ನಾವೇ ಮುಂದಾಗಿ ಹಿಂಗಿಂಗೆ ಅಂತ ಒಂದು ಮಾತು ಕಿವಿಮೇಲೆ ಹಾಕುವಾ. ಅದುಸರಿ ನಮ್ಮ ಹುಡುಗಿನ ಕೇಳಿದ್ದೀಯಾ? ಅವಳನ್ನು ಮೊದಲು ಕೇಳಿಕೋ, ಆಮೇಲೆ ಮುಂದಿನದ್ದು. ಅಂತೂ ಅಣ್ಣನಾಗಿ ನೀನು ತಂಗಿಯ ಆಸೆ ಪುರೈಸೋಕೆ ಟೊಂಕಕಟ್ಟಿ ನಿಂತಿದ್ದೀ. ಹೇಗೋ ಅವರೂ ಒಪ್ಪಿದರೆ ಅಷ್ಟು ಸಾಕು. ನನಗೀಗ ನಿದ್ರೆ ಬತ್ತಾ ಐತೆ” ಎಂದು ತಮ್ಮ ರೂಮಿನ ಕಡೆಗೆ ನಡೆದರು ಮಲ್ಲಪ್ಪ. “ನಾನೂ ಕೂಡ ಹೊರಟೆ” ಅಂತ ಶಾಂತಮ್ಮನೂ ಮಲಗಲು ಹೊರಟರು.

ಅಪ್ಪ ಅಮ್ಮ ತಮ್ಮ ರೂಮಿನತ್ತ ಹೋಗುತ್ತಿದ್ದಂತೆ ತಂಗಿಯ ಮೊಬೈಲಿಗೆ ಸಕ್ಸಸ್ ಸಂದೇಶ ಕಳುಹಿಸಬೇಕೆನ್ನುವಷ್ಟರಲ್ಲಿ ಭಾರ್ಗವಿಯೇ ಅಲ್ಲಿಗೆ ಬಂದಳು. “ವ್ಹಾ..ನೀನಿಲ್ಲೇ ಎಲ್ಲೋ ಕಂಬದ ಮರೆಯಲ್ಲಿ ನಿಂತಿದ್ದೆ ಅಂತ ಕಾಣಿಸುತ್ತೆ. ಹಾಗಾದರೆ ಮಾತುಗಳನ್ನೆಲ್ಲ ಕೇಳಿಸಿಕೊಂಡರ‍್ತೀಯೆ” ಎಂದು ಪಿಸುದನಿಯಲ್ಲಿ ಹೇಳಿ ಮತ್ತೊಮ್ಮೆ ಹೆತ್ತವರು ಒಪ್ಪಿದ್ದಾರೆಂದು ತಿಳಿಸಿದನು ಬಾಲಕೃಷ್ಣ.
“ಹಾ..ನಾನು ಎಲ್ಲವನ್ನೂ ಕೇಳಿಸಿಕೊಂಡೆ. ತಿಳಿಯಿತು. ನಿನಗೆ ತುಂಬಾ ಥ್ಯಾಂಕ್ಸ್” ಎಂದಳು ಭಾರ್ಗವಿ.

“ಏ ಅದರಲ್ಲಿ ಥ್ಯಾಂಕ್ಸ್ ಎನು ಬಂತು ಭಾರ್ಗವಿ, ನೀನೇ ಓದಿನ ಹುಚ್ಚಿಗೆ ಬಿದ್ದು ಅವನಿಗೆ ಮರುಳಾಗಿದ್ದೀ. ಆದರೆ ಎಚ್ಚರ, ಈಗಷ್ಟೇ ಅಪ್ಪ ಹೇಳಿದ್ದು ಕೇಳಿಸಿಕೊಂಡೆಯಲ್ಲ. ಸ್ವಲ್ಪ ನನ್ನ ಗೆಳೆಯನನ್ನ ಕೆಲಸದ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡು. ನಮ್ಮೆಲ್ಲರ ಚಿಂತೆ ಅದೇ. ಈಗ ನೆಮ್ಮದಿಯಾಗಿ ಮಲಗಿಕೋ ಹೋಗು. ಏನಾದರು ಕೇಳಿದರೆ ನಾನು ನಿನ್ನನ್ನು ಕೇಳಿದ್ದೇನೆ ನೀನು ಒಪ್ಪಿದ್ದೀಯೆ, ಮುಂದಿನದು ನಿಮಗೆ ಬಿಟ್ಟದ್ದು ಎಂದು ಹೇಳುತ್ತೇನೆ. ನನ್ನ ಸ್ನೇಹಿತನಿಗೂ ಫೋನ್ ಮಾಡಿ ಏನೂ ತಿಳಿಯದಂತಿರಲು ಮುನ್ನೆಚ್ಚರಿಕೆ ಹೇಳುತ್ತೇನೆ. ಯಾರೇ ಬಾಯಿಬಿಟ್ಟರೂ ಕೆಲಸ ಕೆಡುತ್ತದೆ. ನಮ್ಮ ಅಪ್ಪ ಅಮ್ಮನಿಗೂ ಹೇಗೆ ವಿಷಯ ಮಾತನಾಡಬೇಕೆಂದು ಹೇಳಿಕಳುಹಿಸಬೇಕು.” ಎಂದು ಆಕೆಯ ತಲೆಯನ್ನು ಪ್ರೀತಿಯಿಂದ ಸವರಿ ತನ್ನ ರೂಮಿನೆಡೆಗೆ ನಡೆದ ಬಾಲಕೃಷ್ಣ.

ಏನೋ ಎಂತೋ ಎಂದು ಚಿಂತಿಸುತ್ತಿದ್ದ ಭಾರ್ಗವಿಗೆ ತನಗೆ ಒತ್ತಾಸೆಯಾಗಿ ನಿಂತ ಅಣ್ಣ ಅವನು ಕೊಟ್ಟ ಮಾತಿನಂತೆ ಅಪ್ಪನನ್ನು ಒಪ್ಪಿಸಿದ. ಮೊದಲು ಸ್ವಲ್ಪ ಪೇಚಾಡಿಕೊಂಡರು ನಂತರ ಸಮ್ಮತಿ ಇತ್ತು ಮುಂದಿನ ಮಾತುಕತೆಗೆ ಸಿದ್ಧರಾದರು. ಅವರು ತನ್ನ ಭಾವನೆಗಳಿಗೆ ಬೆಲೆಕೊಟ್ಟ ಹಿರಿತನಕ್ಕೆ ಹೃದಯ ತುಂಬಿ ಬಂತು. “ದೇವಾ, ನನ್ನಾಸೆ ಆಕಾಂಕ್ಷೆಗೆ ಜೊತೆಯಾಗಿ ನಿಲ್ಲುವೆನೆಂದು ಆಶ್ವಾಸನೆ ಕೊಟ್ಟವನ ಜೊತೆ ಬದುಕನ್ನು ಹಂಚಿಕೊಳ್ಳಲು ಮುಂದಾಗಿದ್ದೇನೆ. ಇದಕ್ಕೆ ಯಾವುದೇ ವಿಘ್ನ ಬಾರದಂತೆ, ಅವರ ಮನೆಯವರೂ ಒಪ್ಪುವಂತೆ ಮಾಡಪ್ಪಾ. ಮನೆಯವರೆಲ್ಲರ ಅಭಿಲಾಷೆಯಂತೆ ನನ್ನ ಜೊತೆಗಾರನಾಗುವವನು ಮುಂದೆ ಸೋಮಾರಿತನ ಬಿಟ್ಟು ಚುರುಕಾಗಿ ಕೃಷಿ ಕೆಲಸದಲ್ಲಿ ತೊಡಗುವಂತೆ ಮಾಡು. ಅದರಲ್ಲಿ ಅವನಿಗೆ ಯಶಸ್ಸು ದೊರೆಯುವಂತೆ ಆಶೀರ್ವದಿಸು” ಎಂದು ಭಗವಂತನಿಗೆ ಮನಸ್ಸಿನಲ್ಲಿಯೇ ಒಂದು ಕೋರಿಕೆ ಸಲ್ಲಿಸಿ ಪ್ರಾರ್ಥಿಸಿ ತನ್ನ ರೂಮಿಗೆ ನಡೆದಳು.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45385

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *