ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 10
ಉಷಾ ಅನಿರುದ್ಧರ ಕಲ್ಯಾಣ – ಬಾಣಾಸುರ ಯುದ್ಧ
ಬಲಿಂದ್ರನ ಹಿರಿಯ ಮಗ ಬಾಣಾಸುರ
ಅದ್ವಿತೀಯ ಶಿವಭಕ್ತ
ಪರಶಿವನ ತಾಂಡವ ನೃತ್ಯಕಾಲದಿ
ಸಹಸ್ರಬಾಹುಗಳಲಿ ವಾದ್ಯವ ನುಡಿಸಿ
ಶಿವನೇ ತನ್ನ ರಾಜಧಾನಿಯ
ರಕ್ಷಕನೆಂಬ ವರವ ಪಡೆದ
ಉಷೆ ಬಾಣಾಸುರ ಪುತ್ರಿ ತ್ರಿಲೋಕ ಸುಂದರಿ
ಕನಸಿನಲಿ ಪ್ರದ್ಯಮ್ನಕುಮಾರ ಅನಿರುದ್ಧನ
ಮೂರ್ತಿಯ ಕಂಡು ಮೋಹಗೊಂಡಳು
ಅವನ ಚಿಂತೆಯಲ್ಲೇ ಮುಳುಗಿದ
ಉಷೆಯ ಕಂಡು ಅವಳ ಸಖಿ
ಭೂಲೋಕದ ಸಮಸ್ತ ರಾಜಪುತ್ರರ
ಚಿತ್ರಬಿಡಿಸಿ ತೋರಿಸೆ
ಪ್ರದ್ಯಮ್ನನ ಚಿತ್ರ ನೋಡಿ
ಅವನಲಿ ಲೇಶಮಾತ್ರ ಸಾದೃಶ್ಯವ ಕಂಡು
ನಂತರದಿ ಅನಿರುದ್ಧನ ಚಿತ್ರವ ನೋಡಿ
ಅವನೇ ತನ್ನ ಕನಸಿನ ಪುರುಷನೆಂದರುಹೆ
ಸಖಿ ಚಿತ್ರಲೇಖೆ ತನ್ನ ಮಾಯೆಯಲಿ
ಆಕಾಶಮಾರ್ಗದಲಿ ಹೊರಟು
ದ್ವಾರಕಾನಗರಿಯ ರಾಜಾಂತಃಪುರ ಪ್ರವೇಶಿಸಿ
ಮಂಚದ ಮೇಲೆ ಮಲಗಿದ್ದ ಅನಿರುದ್ಧನ
ತನ್ನ ಮಾಯಾ ಸಾಮರ್ಥ್ಯದಿಂ ಮಂಚದೊಡನೆ
ಶೋಣಿತಪುರದ ಉಷೆಯ ಶಯನ ಗೃಹದಲ್ಲಿರಿಸಿದಳು
ಉಷೆ ಪರಮ ಸಂತುಷ್ಟಳಾಗಿ
ತನ್ನ ಹಾವ ಭಾವ ವಿಲಾಸದಿಂ
ಅನಿರುದ್ಧನ ಮೆಚ್ಚಿಸಿ ಅವನೊಡನೆ ರಮಿಸುತ್ತಿದ್ದರೆ
ಅನಿರುದ್ಧನೂ ಸಮಯ, ಸ್ಥಳದ ಪರಿವೆಯಿಲ್ಲದೆ
ಉಷೆಯೊಡನೆ ಸುಖಿಸುತ್ತಿದ್ದನು
ಕೊನೆಗೊಂದು ದಿನ ಅಂತ:ಪುರದಿ
ಓರ್ವ ಪುರುಷನೊಡನೆ ಮಗಳು
ಸರಸ ಸಲ್ಲಾಪದಲ್ಲಿರುವ ಸುದ್ದಿಯ
ರಾಜದೂತರಿಂದ ತಿಳಿದು ಬಾಣಾಸುರ
ಮಹದಾತಂಕಯುಕ್ತನಾಗಿ
ಮಗಳ ಪ್ರೇಮಸಲ್ಲಾಪವ ಕಂಡು
ಏನೂ ಹೇಳಲು ತೋರದೆ
ಆ ಧೂರ್ತಪುರುಷನ ಕೊಲ್ಲಲು ಅಜ್ಞಾಪಿಸೆ
ಭಟರು ಅನಿರುದ್ಧನ ಆಕ್ರಮಿಸೆ
ಅನಿರುದ್ಧ ಅಲ್ಲಿದ್ದ ಒಂದು ಪರಿಘಾಯುಧವ ಹಿಡಿದು
ಎಲ್ಲರನು ಸದೆದು ಅಟ್ಟಿದನು
ಭಟರ ಪರಾಭವವ ಕಂಡು ಬಾಣಾಸುರನು
ಒಡನೆ ನಾಗಪಾಶವ ಪ್ರಯೋಗಿಸಿ
ಅನಿರುದ್ಧನ ಬಂಧಿಸಿದನು
ತಿಂಗಳುಗಳ ಕಾಲ ಅನಿರುದ್ಧನ ಕಾಣದೆ
ಅವನ್ನೆಲ್ಲ ಬಾಂಧವರು ಮಹಾ ವ್ಯಸನದಲ್ಲಿರೆ
ನಾರದನಿಂದ ಅನಿರುದ್ಧ ನಾಗಪಾಶದಿ
ಬಾಣಾಸುರ ಬಂಧಿಯಾಗಿಹನೆಂಬ ವಿಷಯ ತಿಳಿದು
ಪ್ರದ್ಯುಮ್ನ ಕೃಷ್ಣ ಬಲರಾಮರು
ಯದುವೀರರ ಹನ್ನೆರಡು
ಅಕ್ಷೋಹಿಣಿ ಸೈನ್ಯದೊಂದಿಗೆ
ಶೋಣಿತನಗರವ ಮುತ್ತಿದರು
ಬಾಣಾಸುರನ ಸೈನ್ಯಕೆ ಬೆಂಬಲವಾಗಿ
ರುದ್ರನೂ ಮಗನಾದ ಷಣ್ಮುಖನೊಡಗೂಡಿ
ಯದುಸೈನ್ಯವನೆದುರಿಸಿದನು
ಕೃಷ್ಣ, ಯುದ್ಧ ಪ್ರಾರಂಭದಲೇ
ತನ್ನ ಬಾಣದಿ ರುದ್ರನನುಚರರಾದ
ಯಕ್ಷ ರಾಕ್ಷಸ ಭೂತ ಪ್ರೇತ
ಪಿಶಾಚಾದಿ ಗಣಗಳ ಓಡಿಸಿದನು
ಸ್ವತಃ ರುದ್ರನೇ ಧನುರ್ಧಾರಿಯಾಗಿ
ಕೃಷ್ಣನೆದುರಿಸೆ ಉಭಯ ವೀರರೂ
ವಾಯುವ್ಯಾಸ್ತ್ರ ಅಗ್ನೇಯಾಸ್ತ್ರ ಪಾಶುಪತಾಸ್ತ್ರ
ಬ್ರಹಾಸ್ತ್ರಗಳನ್ನೆಲ್ಲಾ ಪ್ರಯೋಗಿಸೆ
ಕೃಷ್ಣ ಜೃಂಭಣಾಸ್ತ್ರವ ಪ್ರಯೋಗಿಸಲು
ರುದ್ರನು ಮೂರ್ಛಿತನಾದನು
ಕೃಷ್ಣನ ಶರಗಳ ಆಘಾತವ ತಡೆಯಲಾರದೆ
ಅಸುರರು ಓಡಿಹೋಗಿ ಪಟ್ಟಣದಲ್ಲವಿತುಕೊಂಡರು
ಇದಕೆ ಕೆರಳಿ ರುದ್ರ ಮಾಹೇಶ್ವರ ಜ್ವರ ಎಂಬ
ಭಯಂಕರ ಅಸ್ತ್ರವ ಬಿಡೆ
ಕೃಷ್ಣ ವೈಷ್ಣವ ಜ್ವರವ ಪ್ರಯೋಗಿಸೆ
ಮಾಹೇಶ್ವರ ಜ್ವರ ಪರಾಭವ ಹೊಂದಿ
ಅದರ ತೇಜಸ್ಸಿನಲಿ ನರಳುತಿಹ
ಪುರುಷರೂಪಿ ಮಹೇಶ್ವರ ಜ್ವರದ
ಪ್ರಾರ್ಥನೆಯ ಮನ್ನಿಸಿ
ಕೃಷ್ಣ ಅದರ ಬಾಧೆ ನೀಗಿಸಿದ
ಪುನಃ ಚೇತರಿಸಿಕೊಂಡು ಬಂದ ಬಾಣಾಸುರನ
ಕೃಷ್ಣ ಚಕ್ರಾಯುಧದಿ ಅವನ ತೋಳುಗಳ ಕತ್ತರಿಸೆ
ರುದ್ರ ದೇವ ತನ್ನ ಭಕ್ತ ಬಾಣಾಸುರನ ಮನ್ನಿಸಿ
ಕಾಪಾಡಬೇಕೆಂದು ಪ್ರಾರ್ಥಿಸೆ
ಕೃಷ್ಣ ಅವನ ಕೊಲ್ಲದೆ ಪರಮಭಕ್ತ ಪ್ರಹ್ಲಾದನ
ವಂಶಜನಾದ ಬಾಣಾಸುರಗೆ ಅಭಯ ನೀಡಿದ
ನಂತರದಿ ಬಾಣಸುರ
ತನ್ನ ಮಗಳು ಉಷೆಯನ್ನು ಅನಿರುದ್ಧನನ್ನೂ
ದಿವ್ಯರಥದಲ್ಲಿ ಕುಳ್ಳಿರಿಸಿ
ಕೃಷ್ಣನ ಅಡಿದಾವರೆಗಳಿಗೊಪಿಸಿದನು
ದ್ವಾರಕೆಯಲಿ ಉಷಾ ಅನಿರುದ್ಧ ವಿವಾಹ
ಸಂಭ್ರಮದಿ ಸಂಪನ್ನಗೊಂಡಿತು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45292

-ಎಂ. ಆರ್. ಆನಂದ, ಮೈಸೂರು

