ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಮಗಳೇ ನೀನು ಮುಂದಕ್ಕೆ ಓದುವ ಹುಚ್ಚಿಗೆ ತಿಲಾಂಜಲಿ ಕೊಡಬೇಕಾಗುತ್ತೆ. ಕಾರಣ ಹೇಳುತ್ತೇನೆ ಕೇಳು. ಈಗ ಒಂದೆರಡು ಸಂಬಂಧಗಳು ನಿನ್ನನ್ನು ಕೇಳಿಕೊಂಡು ಬಂದಿವೆ. ಅದರಲ್ಲೊಬ್ಬರು ಇವತ್ತು ಬೆಳಗ್ಗೆ ಭೇಟಿಯಾಗಿದ್ದರು. ಎಲ್ಲವನ್ನೂ ವಿಚಾರಿಸಿದರು. ನಾನೂ ಸುತ್ತಿಬಳಸಿ ನಿನ್ನ ಅಭಿಲಾಷೆಯನ್ನು ಅವರಿಗೆ ತಿಳಿಸಿದೆ. ನಾನಂದುಕೊಂಡಂತೆ ಅವರಿಂದ ನಕಾರಾತ್ಮಕವಾಗಿ ಉತ್ತರ ಬಂತು. ಅವರು ಹೇಳಿದ್ದಿಷ್ಟು “ಸ್ವಾಮಿ ನಮ್ಮ ಹುಡುಗನೂ ಓದಿದವನೇ, ಅವರು ಕೊಡೋ ಸಂಬಳ ಯಾವ ಮೂಲೆಗೆ ಸಾಲುತ್ತೆ ಅಂತ ಮನೆತನದ ಕಸುಬಿಗೇ ಕೈಹಾಕಿ ನಿಂತವನೆ. ಹೊಸ ಮನೆಯನ್ನೂ ಕಟ್ಟಿದ್ದಾನೆ. ನಮ್ಮ ಜೊತೇಲಿ ಒಟ್ಟಿಗೂ ಇರಬಹುದು ಅಥವಾ ಬೇರೆಯಾಗಿಯೂ ಇರಬಹುದು. ಅದಕ್ಕೆ ಸಿದ್ಧವಾಗವ್ನೆ. ನಿಮ್ಮ ಮಗಳೂ ಓದವ್ಳೆ. ಅವಳನ್ನು ನಮ್ಮ ಮನೆಗೆ ಕೊಟ್ಟರೆ ಇಬ್ಬರೂ ಒಬ್ಬರಿಗೊಬ್ಬರು ಒತ್ತಾಸೆಯಾಗಿ ವ್ಯವಹಾರ ಮಾಡಿಕೊಂಡು ಚೆಂದಾಗಿ ಬಾಳ್ವೇನು ನಡೆಸಬೌದು. ಇಬ್ಬರ ಜಾತಕಗಳೂ ಪಸಂದಾಗಿ ಕೂಡವೆ. ಬೇಸರವಾದರೆ ನಮ್ಮ ಹಳ್ಳಿ ಮಕ್ಕಳಿಗೆ ತಿಳಿವಳಿಕೆ ಕೊಡೂವಂತ ಕೆಲಸ ಮಾಡ್ಲಿ. ಅದೇ ಸ್ವಾಮಿ, ಅದೆಂತದೋ ತರಬೇತಿಗಳು ಕೊಡ್ತಾರಲ್ಲ ಅದನ್ನು ಮಾಡಲಿ. ನಮ್ಮ ಹುಡುಗನಿಗೆ ಬಹಳ ಜನರ ಪರಿಚಯವೂ ಇದೆ. ಚಿಟಿಕೆ ಒಡೆಯೋದರೊಳಗೆ ಸಾಕಷ್ಟು ಜನ ಸೇರಿಸ್ತಾನೆ. ತಕ್ಕೊಳ್ಳಿ ನಮ್ಮ ಹುಡುಗನ ಫೋಟೋ ಮತ್ತು ಜಾತಕಾನ. ನೀವೂ ಒಮ್ಮೆ ತೋರಿಸ್ಕೊಳ್ಳಿ. ನಮ್ಮದು ಹೆಣ್ಣು ಮಕ್ಕಳಿಲ್ಲದ ಮನೆ. ಮನೆಗೆ ಬರೋ ಸೊಸೆಯೇ ನಮ್ಮನೆ ಮಗಳು ಅಂದುಕೊಳ್ತೀವಿ. ನಮ್ಮ ದೊಡ್ಡ ಮಗಾ ಸೊಸೇನೂ ಕಲಿತಿರೋವ್ರೇ, ಅದೆಂತದ್ದೋ ಹಾರ‍್ಮೋನಿಯಮ್ ಪೆಟ್ಟಿಗೆ ತರದ್ದು ಮುಂದಿಟ್ಟುಕೊಂಡು ಕುಟ್ಟುತ್ತಿದ್ದರು. ಈವಾಗ ಬೇಸರ ಬಂದು ಇಲ್ಲಿಗೆ ಬಂದು ನಮ್ಮ ಹಳ್ಳಿ ಪಕ್ಕದಲ್ಲೇ ಇನ್ನೊಂದು ನಮ್ಮ ಜಮೀನಿತ್ತು. ಅದನ್ನೇ ಕೃಷಿಮಾಡಿಕೊಂಡು ಅಲ್ಲೇ ಮನೆ ಕಟ್ಟಿಕೊಂಡು ಜುಮ್ಮಂತ ಅವ್ರೆ. ಇಬ್ಬರು ಮೊಮ್ಮಕ್ಕಳು ನಮ್ಮನೆಯಿಂದ್ಲೇ ಇಸ್ಕೋಲಿಗೆ ಹೋಗುತ್ತಾವೆ. ನೀವೂ ನೋಡಿ ವಿಚಾರಮಾಡಿ, ಸರಿ ಬಂದರೆ ಹೇಳಿ ಕಳಿಸಿ ಬರ‍್ತೀವಿ” ಎಂದು ಹೋದರು ಎಂದು ಹೇಳಿದರು.

“ನೋಡಮ್ಮಾ ಆ ಹುಡುಗನ ಫೋಟೋ ಇಲ್ಲಿದೆ” ಎಂದು ತಂದೆ ಭಾರ್ಗವಿಗೆ ಕೊಟ್ಟರು. “ನನಗೇನೋ ಅವರದ್ದು ನೇರವಾದ ಮಾತುಕತೆ ಇಷ್ಟವಾಯಿತು. ಯಾವುದಕ್ಕೂ ನೀನು ಚೆನ್ನಾಗಿರಬೇಕು. ಯೋಚಿಸಿ ಹೇಳು.” ಎಂದು ಸ್ನಾನಕ್ಕೆ ಸಿದ್ಧವಾಗಿ “ಶಾಂತೂ ನೀರು ಕಾದಿದೆಯೇನೇ?” ಎನ್ನುತ್ತಾ ಹಿತ್ತಲು ಕಡೆಯಿದ್ದ ಬಚ್ಚಲಿಗೆ ಹೋದರು.
ಅಪ್ಪ ಅತ್ತಕಡೆ ಹೋಗುತ್ತಿದ್ದಂತೆ ಬಾಲು ತಂಗಿಯ ಕೈಯಿಂದ ಫೋಟೋ ಕಸಿದುಕೊಂಡು ನೋಡಿದ. “ಭಾರ್ಗವಿ ಹುಡುಗ ತುಂಬಾ ಸ್ಮಾರ್ಟಾಗಿದ್ದಾನೆ, ಬಿ.ಎಸ್.ಸಿ., ಪದವೀಧರ. ಜೊತೆಗೆ ಮನೆಯ ಹಿರಿಯರು ಬಹಳ ಮುಂದಾಲೋಚನೆಯುಳ್ಳವರು ಅನ್ನಿಸುತ್ತೆ. ಹೆಣ್ಣು ಮಕ್ಕಳಿಲ್ಲ. ಮಕ್ಕಳು ತಮ್ಮೊಡನೆಯೇ ಇರಬೇಕೆಂಬ ನಿರ್ಬಂಧವಿಲ್ಲ. ಸ್ವತಂತ್ರ ಮನೋಭಾವದವರು ಅನಿಸುತ್ತದೆ ನೋಡು” ಎಂದು ಕಣ್ಣು ಮಿಟುಕಿಸಿದನು.

“ಇಂಥಹ ಸಂಬಂಧ ಬಿಡೋದುಂಟೆ. ಭಾರ್ಗವಿ ಜಾತಕಾನ ನಾನೇ ಮುಂದಾಗಿ ಕಳಿಸಿಕೊಟ್ಟಿದ್ದೆ. ಸರಿಹೋದರೆ ನಿಮ್ಮ ಹುಡುಗನ ಜಾತಕಾನೂ ಕಳಿಸಿ ಅಂತ ಅವರ ಮನೆ ಹೆಂಗಸರಿಗೆ ಹೇಳಿದ್ದೆ. ಎಲ್ಲಿ ಆ ಹೈದನ ಫೋಟೋ ಕೊಡಿಲ್ಲಿ ಎಂದು ಮಗನ ಕೈಯಿಂದ ತೆಗೆದುಕೊಂಡು ಚಂದವಾಗಿದ್ದಾನೆ. ಈಡುಜೋಡೂ ಸರಿಹೋಗ್ತದೆ. ನೋಡು ಭಾರ್ಗವಿ. ನಮ್ಮಲ್ಲಿ ಗಂಡು ಹೈಕಳುಗಳು ಈ ರೀತಿ ಸಾದಾಸೀದಾ ಇರೋವ್ರು ಬಾಳಕಮ್ಮಿ. ಯೋಚಿಸು, ಕಲಿತವಳೂಂತ ನಿಮ್ಮಪ್ಪ ನಿನಗೆ ರಿಯಾಯಿತಿ ತೋರಿಸ್ತಾವರೆ. ನನ್ನ ಕೇಳಿದ್ರೆ ..ಹೂಂ.. ಸುಮ್ಮನೇಕೆ ಮಾತು” ಎಂದು ಹೇಳುತ್ತಾ ಟೀ ಕುಡಿದು ಖಾಲಿಯಾಗಿದ್ದ ಲೋಟಗಳನ್ನೆತ್ತಿಕೊಂಡು ಒಳನಡೆದರು ಶಾಂತಮ್ಮ.

ಭಾರ್ಗವಿಯ ಮನದಲ್ಲಿ ಒಂದರೆಕ್ಷಣ ಹೆತ್ತವರ, ಸೋದರನ ಮಾತುಗಳಿಗೆ ಮನದ ಮೂಲೆಯಲ್ಲಿ ಏಕಾಗಬಾರದು ಎನ್ನಿಸಿತು. ಜೊತೆಗೆ ಇಷ್ಟೆಲ್ಲ ಯೋಚಿಸುವ ಇವರುಗಳನ್ನು ಕಾಡೀ ಬೇಡಿ ಮುಂದೆ ಓದಲು ಅನುಮತಿ ಕೇಳಬಹುದಲ್ಲಾ. ಹ್ಹೆ..ಹ್ಹೆ.. ಭ್ರಮೆ ನನಗೆಲ್ಲೋ, ಗಂಡನಿಗಿಂತ ಹೆಂಡತಿ ಹೆಚ್ಚು ಓದಲು ಯಾರು ಒಪ್ಪುತ್ತಾರೆ. ಹಾಗೂ ಒಪ್ಪಿದರೆಂದರೂ ಮುಂದೆ ಓದಿದ ಮೇಲೆ ನಾನು ಆದರ್ಶ ಇಟ್ಟುಕೊಂಡವಳು ಸುಮ್ಮನೆ ಕೂರುತ್ತೀನಾ. ಕೆಲಸ ಮಾಡಬೇಕು, ನನ್ನ ಕಾಲಮೇಲೆ ನಾನು ನಿಲ್ಲುವಂತಾಗಬೇಕು. ಇಷ್ಟಪಟ್ಟು ಓದಿಸುತ್ತೇನೆಂದು ಮುಂದೆಬಂದಿರುವ ಸಿದ್ಧಾರ್ಥನನ್ನು ಒಪ್ಪಿಸಬಹುದು. ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತುಲನೆ ಮಾಡಿ ನೋಡಿದಳು ಭಾರ್ಗವಿ. ಮನಸ್ಸು ಸಿದ್ಧಾರ್ಥನ ಕಡೆಗೇ ವಾಲಿಕೊಂಡಿತು. ಯಾರೋ ಗುರುತು ಪರಿಚಯವಿಲ್ಲದ ಅಪರಿಚಿತ ವರನಿಗಿಂತ ಪರಿಚಿತನಾಗಿರುವ ಸಿದ್ಧಾರ್ಥನೇ ಸರಿಯಾದ ಆಯ್ಕೆ ಅನ್ನಿಸಿತು. ತನ್ನ ಮನದಿಂಗಿತವನ್ನು ಅಣ್ಣನ ಕಿವಿಯಲ್ಲಿ ಅರುಹಿದಳು.

ತನ್ನ ಮನದ ಬಯಕೆಯನ್ನು ಇಷ್ಟುಬೇಗ ತಿಳಿಸಿದ ತಂಗಿಯ ಕಡೆಗೆ ಅಚ್ಚರಿಯಿಂದ ನೋಡಿದ ಬಾಲಕೃಷ್ಣ. “ಆಯಿತು ನೀನೊಮ್ಮೆ ಸಿದ್ದಾರ್ಥನೊಡನೆ ಮಾತನಾಡು. ನಂತರ ಸಮಯ ಸಂದರ್ಭ ನೋಡಿಕೊಂಡು ಅಪ್ಪನೊಡನೆ ಪ್ರಸ್ತಾಪಿಸುತ್ತೇನೆ” ಎಂದು ಹೇಳಿದ. ಅಷ್ಟರಲ್ಲಿ ತಂದೆ ಸ್ನಾನ ಮುಗಿಸಿ ಬಂದ ಸುಳಿವನ್ನು ಅರಿತು ಬಾಲು ತಾನು ಸ್ನಾನಕ್ಕೆ ಹೋಗಲು ಮಡಿಬಟ್ಟೆಗಳನ್ನು ತರಲು ರೂಮಿಗೆ ಹೋದ.

ರೈತ ಕುಟುಂಬವಾದ್ದರಿಂದ ತಂದೆ ಮಗ ಇಬ್ಬರೂ ಬೆಳಗ್ಗೆ ರಾತ್ರಿ ಎರಡೂ ಹೊತ್ತು ಸ್ನಾನ ಮಾಡುವ ರೂಢಿ ಮಾಡಿಕೊಂಡಿದ್ದರು. ದಿನವಿಡೀ ಜಮೀನಿನ ಬಳಿ ಆಳುಕಾಳುಗಳೊಡನೆ ಬಿಸಿಲು ಮಳೆ ಎನ್ನದೆ ಕೆಲಸದಲ್ಲಿ ತೊಡಗುತ್ತಿದ್ದ ಅವರಿಗೆ ಸಂಜೆಯ ಸ್ನಾನ ಮೈಕೈಗೆ ಲವಲವಿಕೆಯನ್ನು ತರುತ್ತಿತ್ತು. ಇದೇ ವಿಚಾರವಾಗಿ ಕೆಲವರು ಬೆಳಗ್ಗೆ ಚಂದಾಗಿ ಕೈಕಾಲುಮುಖ ತೊಳೆದುಕೊಂಡು ಹೋಗಿ ಕೆಲಸ ಮುಗಿದ ಮೇಲೆ ಸಂಜೆಗೆ ಸ್ನಾನ ಮಾಡಿದರೆ ಆಗಾಕಿಲ್ವಾ? ಒಳ್ಳೆ ಪೂಜಾರಪ್ಪನೋರಂಗೆ ಮಾಡ್ತಾರೆ ಅಪ್ಪ ಮಗಾ” ಎಂದು ಆಡಿಕೊಳ್ಳುತ್ತಿದ್ದರು.
ಯಾರೇನೇ ಅನ್ನಲಿ ಕಿವಿಗೆ ಹಾಕಿಕೊಳ್ಳದೆ ತಮಗೆ ಸರಿಯೆನ್ನಿಸಿದಂತೆ ರೂಢಿಯಾಗಿದ್ದುದನ್ನು ಮುಂದುವರಿಸಿದ್ದರು. ಹುಡುಗನ ಫೋಟೋ ಮತ್ತು ಜಾತಕವನ್ನು ಭಾರ್ಗವಿ ತಂದೆಯ ಕಪಾಟಿನಲ್ಲಿಟ್ಟು, ದೇವರ ಕೋಣೆಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಅತ್ತ ನಡೆದಳು.

ಹೊರಗಿನ ಕಾಲಿಂಗ್‌ಬೆಲ್ ಜೊತೆಗೇ ಬಾಗಿಲನ್ನು ಕುಟ್ಟುವ ಸದ್ದು ಕೇಳಿಸಿತು. ಭಾರ್ಗವಿ ಬೆಚ್ಚಿಬಿದ್ದವಳಂತೆ ಅತ್ತಕಡೆ ಓಡಿದಳು. “ಯಾರು?” ಎಂದು ಕೇಳಿದಳು.
“ಅವ್ವಾ ಗಿರಿಜಾ” ಎಂದಮೇಲೆ ಬಾಗಿಲು ತೆರೆದಳು. “ನಿನಗೇನು ಹೊತ್ತಗೊತ್ತಿನ ಜ್ಞಾನವಿಲ್ಲವಾ? ಈಗ ಗಂಟೆ ಎಷ್ಟಾಗಿದೆ ಗೊತ್ತಾ? ಇದು ಕೆಲಸಕ್ಕೆ ಬರುವ ಟೈಮಾ?” ಎಂದೆಲ್ಲಾ ಪ್ರಶ್ನಿಸಿದಳು ಭಾರ್ಗವಿ.
“ಅವ್ವಾ.. ಒತ್ತಾರೇನೇ ಬಂದು ಬಾಗಿಲಿಗೆ ನೀರುಹಾಕಿ ರಂಗೋಲಿ ಬಿಟ್ಟು ಕಾಫಿ ಕುಡ್ಕೊಂಡು ಹೈಕಳ ಇಸ್ಕೂಲಿಗೆ ಹೋಗಿ ಬತ್ತೀನಂತಾ ನಿಮಗೇ ಏಳಿ ಓಗಿವ್ನಿ. ನೀವು ನೆಪ್ಪು ಮಾಡ್ಕಳಿ. ಸರೀರಿ” ಎಂದು ಜಾಗ ಮಾಡಿಕೊಂಡು ಒಳಬಂದವಳೇ ಕಸಬರಿಗೆ ಕೈಗೆ ತೆಗೆದುಕೊಂಡಳು.

“ಏನೋ ಯೋಚನೆಯಲ್ಲಿ ಮರೆತೆ ಗಿರಿಜಾ, ನೀನು ಹೋದ ಸ್ಕೂಲಿನ ಕೆಲಸ ಏನಾಯ್ತು. ಅಡ್ಮಿಷನ್ ಆಯಿತಾ?” ಎಂದು ಗಿರಿಜಳನ್ನು ಕೇಳಿದಳು.
“ಹೂನ್ರವ್ವಾ..ನೀವು ಹೇಳ್ದಂಗೆ ಇಸ್ಕೂಲಿನ ಹೆಡ್‌ಮಿಸ್ಸು ಹತ್ತಿರ ಹೋದ್ನಾ, ನೀವು ಕೊಟ್ಟ ಕಾಗದ ಕೊಟ್ಟೆ. ಅವರು ಅದನ್ನು ನೋಡಿ ಒಂದ್ನಿಮಿಷ ಕರೀತೀನಿ ಅಲ್ಲೆ ಇರು ಅಂದ್ರು. ನಾನು ಅಂಗೇ ನಿಂತಿದ್ದೆ. ಆಮ್ಯಾಕೆ ಅದ್ಯಾರಿಗೊ ಫೋನ್ ಹಚ್ರ‍್ರು. ಸ್ವಲ್ಪ ಹೊತ್ತಿನ ಮೇಲೆ ಒಬ್ಬರು ಬಂದ್ರು. ಅವರ ಜೊತೆಗೆ ನನ್ನ ಅಫೀಸುರೂಮಿಗೆ ಕರೆಸಿದ್ರು, ದುಡ್ಡು ಇಸ್ಕೊಂಡು ರಸೀತಿ ಕೊಟ್ರು. ಮಿಕ್ಕಿದ್ದನ್ನು ಎರಡು ಮೂರು ಕಂತಿನಲ್ಲಿ ಕಟ್ಟಬೇಕು ಅಂತೇಳಿದ್ರು. ನಾನು ಆಯ್ತು ಕನ್ರವ್ವಾ ಅಂತ ಒಪ್ಪಿಕೊಂಡು ವಾಪಸ್ಸು ಬಂದೆ.” ಎಂದು ಕೆಲಸದ ಗಿರಿಜಾ ಚಾಚೂ ತಪ್ಪದೆ ವರದಿ ಒಪ್ಪಿಸಿದಳು. ನಿಮ್ಮಿಂದ “ಬೋ ಉಪಕಾರ ಆಯ್ತು ಕಣ್ರವ್ವಾ” ಎಂದಳು ಗಿರಿಜಾ.

“ಏನು ಉಪಕಾರಾನೋ, ಸರ್ಕಾರಿ ಸ್ಕೂಲಿಗೆ ಸೇರಿಸಿ ಯಾರತ್ರಾನ ಮನೆ ಪಾಠಹೇಳಿಸು ಅಂದ್ರೆ ಸುತ್ರಾಂ ಕೇಳಲ್ಲ ನೀನು. ಮೂಗಿಗೆ ಕವಡೆಕಟ್ಕೊಂಡು ಬೆಳಗಿನಿಂದ ಸಂಜೆವರೆಗೆ ಕಷ್ಟಪಟ್ಟು ದುಡಿದು ಖಾಸಗಿ ಶಾಲೆಗೆ ಹಾಕ್ತೀರಾ. ಅದರಿಂದ ಏನು ಕೊಂಬು ಬಂತಾ? ಓದೋ ಮಕ್ಕಳು ಯಾವಶಾಲೇಲಿದ್ರೂ ಓದ್ತವೆ. ಆ ಪ್ರೈವೇಟ್ ಶಾಲೆಗಳಲ್ಲಿ ಕಲಿಸೋದಕ್ಕಿಂತ ಪ್ರದರ್ಶನವೇ ಜಾಸ್ತಿ. ಅದೇನೊ ಹೇಳ್ತಾರಲ್ಲಾ ‘ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಅಂತ. ಅದೇ ಸರ್ಕಾರಿ ಶಾಲೆಯಲ್ಲಿ ಫೀಜೂ ಇಲ್ಲ, ಮಧ್ಯಾನ್ಹದ ಬಿಸಿಯೂಟ ಪುಕ್ಕಟೆ ಸಿಗುತ್ತೆ. ಬಿ.ಪಿ.ಎಲ್ ಕಾರ್ಡುದಾರರಿಗೆ ಪುಕ್ಕಟೆ ಪುಸ್ತಕಗಳೂ, ಯೂನಿಫಾರಂ ಕೊಡ್ತಾರೆ. ಏನೋ ವ್ಯಾಮೋಹದಿಂದ ಪ್ರೈವೇಟ್ ಶಾಲೆ ಕಡೆ ಹೋಗ್ತೀರಿ” ಎಂದಳು ಭಾರ್ಗವಿ.
“ಏ ತೆಗೀರೀ, ಸರ್ಕಾರಿ ಇಸ್ಕೂಲಂತೆ ಅದೊಂದು ತಟ್ಟಿ ಸ್ಕೂಲು, ನಮ್ಮ ಬದುಕಂತೂ ಇನ್ನೊಬ್ಬರ ಮನೇಲಿ ದುಡಕೊಂಡು ತಿನ್ನೊದೇ ಆಯ್ತು. ನಮ್ಮ ಮಕ್ಕಳಾದ್ರೂ ಹೈಕ್ಲಾಸ್ ಇಂಗ್ಲಿಷ್‌ಸ್ಕೂಲಿನಾಗೆ ಕಲ್ತು ಒಳ್ಳೇ ಆಫೀಸರ್ ಆಗ್ಲಿ.” ಎಂದಳು ಗಿರಿಜಾ.

“ಹ್ಹ..ಹ್ಹ.. ಏನು ಆಫೀಸರ್ ಆಗ್ತಾರೋ ಏನೋ, ಏನೇ ಪ್ಲಾನ್ ಮಾಡಿದರೂ ಹಣೇಲಿ ಬರೆದಂಗೇ ಆಗೋದು. ನಮ್ಮ ನಮ್ಮ ಚಪಲಕ್ಕೆ ಯಾರೇನು ಮಾಡುವುದಕ್ಕಾಗ್ತದೆ.” ಎಂದುಕೊಂಡಳು ಏನೋ ನೆನೆಸಿಕೊಂಡವಳಂತೆ ಭಾರ್ಗವಿ. “ಗಿರಿಜಾ ಇವತ್ತು ಬೆರಕೆ ಸೊಪ್ಪಿನ ಮಸ್ಸೊಪ್ಪು ಮಾಡಿದ್ದೀನಿ. ಸ್ವಲ್ಪ ಜಾಸ್ತಿಯಾಗಿದೆ ಕೊಡಲಾ?” ಎಂದು ಕೇಳಿದಳು.
“ಕೊಡವ್ವಾ ಎಂದಾದರೂ ಬ್ಯಾಡ ಅಂದಿದ್ದೀನಾ, ಮಸ್ಸೊಪ್ಪು ಅಂದ್ರೆ ನನ್ನ ಗಂಡಂಗೆ ಬೋ ಪ್ರೀತಿ.” ಎಂದಳು ಗಿರಿಜಾ.
“ಓಹೋ ಹಾಗೇನು? ಯಾವ ಗಂಡನಿಗೋ?” ಎಂದು ಕಿಚಾಯಿಸಿದಳು ಭಾರ್ಗವಿ.
“ಹೂಂ..ನಗಾಡಿ ನಗಾಡಿ, ಎಂದು ನಾಚುತ್ತಾ ಮೊದಲನೆಯ ಗಂಡ ಚಲುವಂಗೆ” ಎಂದಳು.
“ಓ ಅವನ್ನಿನ್ನೂ ಮರೆತಿಲ್ಲವೇನೇ?” ಎಂದು ಕೇಳಿದಳು.
“ಹೆಂಗೆ ಮರೆಯಕಾಗುತ್ರವ್ವಾ, ಅವರ ಮನೆಯವ್ರು ನನಗೆ ಕಾಟ ಕೊಡದಿದ್ದರೆ ನಾನೇನು ಅವುನ್ನ ಬಿಟ್ಟು ಬತ್ತೀರಲಿಲ್ಲ. ಒಂದೇ ಒಂದು ಕಿತ ನನ್ನ ಪರವಾಗಿ ನಿಂತು ..ಆ ಕುಡಿತ ಒಸಿ ಕಮ್ಮಿ ಮಾಡ್ತೀನೇ ಗಿರಿ ಅಂದಿದ್ರೆ ಸಾಕಿತ್ತು..ಹುಂ..ಅಂಗೆ ಆಗಲೇ ಇಲ್ಲ ಬಿಡಿ.” ಎಂದು ಮಾತು ಮುಗಿಸಿ ಕೆಲಸದತ್ತ ಗಮನ ಹರಿಸಿದಳು.
ಕೆಲಸದವಳ ಮಾತನ್ನು ಕೇಳಿ ಭಾರ್ಗವಿ ಇವರುಗಳು ಎಷ್ಟು ನಿರಾಳವಾಗಿರುತ್ತಾರೆ. ಸಂಬಂಧ ಸರಿಬರಲಿಲ್ಲವಾ ಪಕ್ಕಕ್ಕೆ ಸರಿಸಿ ಬರುತ್ತಿರುತ್ತಾರೆ, ಆದರೆ ನಾವುಗಳು?

“ಅವ್ವಾ..ಏ..ಆವ್ವಾ..ಓ ತಕ್ಕಳ್ಳಿ, ಇವತ್ತು ನಿಮಗೇನೋ ಆಗದೆ” ಎಂದು ಜೋರಾಗಿ ಕೇಳಿದಾಗ ಎಚ್ಚೆತ್ತ ಭಾರ್ಗವಿ ಮಾರುತ್ತರ ಹೇಳದೆ ಬೆಳಗ್ಗೆ ಮಾಡಿದ್ದ ತಿಂಡಿಯನ್ನು ಒಂದು ಡಬ್ಬಿಗೆ ಮತ್ತು ಸಾರನ್ನು ಮತ್ತೊಂದು ಡಬ್ಬಿಗೆ ತುಂಬಿಸಿ ಗಿರಿಜಳ ಕೈಗೆ ಕೊಟ್ಟಳು. ಹಾಗೇ ಅವಳನ್ನು ಕಳುಹಿಸಿ ಬಾಗಿಲನ್ನು ಭದ್ರಪಡಿಸಿಕೊಂಡು ಒಳಬಂದ ಭಾರ್ಗವಿ ಗಡಿಯಾರದತ್ತ ದಿಟ್ಟಿಸಿದಳು. ಆಗಲೇ ಎರಡೂವರೆಯಾಗಿದೆ. ಊಟದ ಸಮಯ ಮೀರಿಹೋಗಿದೆ. ಮಾಡಬೇಕೆಂಬ ಹಂಬಲವೂ ಬತ್ತಿದಂತೆ ಅನ್ನಿಸಿತು. ಬೇಡಪ್ಪಾ ಸೇರಿದಷ್ಟು ತಿನ್ನೋಣ, ಇಲ್ಲಾಂದರೆ ಗೆಳತಿ ಡಾಕ್ಟರ್ ದೇವಕಿ ಗ್ರಹಚಾರ ಬಿಡಿಸಿಬಿಡುತ್ತಾಳೆ. “ಹೂಂ ಹೊತ್ತು ಗೊತ್ತಿಲ್ಲದೆ ಉಟತಿಂಡಿ ಮಾಡದಿದ್ದರೇನಾಗುತ್ತದೆ, ಅದರ ಪರಿಣಾಮವಾಗಿ ಗ್ಯಾಸ್ ಟ್ರಬಲ್, ಮೊದಲೇ ಬಿ.ಪಿ.,ಶುಗರ್ ಪೇಷೆಂಟುಗಳು, ಒಗ್ಗರಣೆ ಹಾಕಿದಂತೆ ನಿಮ್ಮ ರೀತಿನೀತಿಗಳು ನೋಡು ಭಾರ್ಗವಿ, ಗೆಳತಿಯಾಗಿ ಒಂದು ಮಾತು ಹೇಳ್ತೀನಿ ಕೇಳು, ನಿನ್ನ ಕೈಯಿಂದ ನೀನೇ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ನೀನು ಮಾಡಬೇಕಾದ ಕೆಲಸಗಳು ಇನ್ನೂ ಬೇಕಾದಷ್ಟಿವೆ, ಯೋಚಿಸು” ಎಂದು ಪದೇಪದೇ ಎಚ್ಚರಿಸುತ್ತಲೇ ಇರುತ್ತಾಳೆ. ತಟ್ಟೆಗೆ ಬೆಳಗ್ಗೆ ಮಾಡಿದ್ದ ಚಪಾತಿಯೊಂದನ್ನು ಹಾಕಿಕೊಂಡು ಕೋಸಿನಪಲ್ಯ, ಒಂದು ಬಟ್ಟಲಿನಲ್ಲಿ ಸೊಪ್ಪಿನ ಸಾರು, ಸ್ವಲ್ಪ ಅನ್ನ ಬಡಿಸಿಕೊಂಡು ತಿಂದು ಮುಗಿಸಿ ಹದಗೊಳಿಸಿಟ್ಟಿದ್ದ ಮಜ್ಜಿಗೆಯನ್ನು ಕುಡಿದು ‘ಅಬ್ಬಾ ! ಅಂತೂ ಊಟದ ಕೆಲಸ ಮುಗಿಯಿತು” ಎಂದು ತಟ್ಟೆಯನ್ನು ಬಚ್ಚಲಲ್ಲಿಟ್ಟು ಮಿಕ್ಕ ಪದಾರ್ಥಗಳನ್ನೆಲ್ಲ ಹಾಗೆಯೇ ಮುಚ್ಚಿಟ್ಟು ಹಾಲಿಗೆ ಬಂದಳು.

ಮತ್ತೆ ಮೊಬೈಲ್ ಸದ್ದುಮಾಡಿತು. ನೋಡಿದವಳಿಗೆ ಹಿರಿಯ ಮಗಳು ಮಾಲಿನಿಯಿಂದ ಕರೆ. ಓಹೋ ಅಲ್ಲಿಂದ ಶಿಫಾರಸ್ಸಿಗೆ ಕಾಲ್ ಮಾಡಿರಬೇಕು ಎಂದುಕೊಂಡು ಕಾಲ್ ಕಟ್ ಮಾಡಿದಳು. ಮತ್ತೆ ಮತ್ತೆ ಕಾಲ್ ಬಂದಾಗ ನಿರ್ವಾಹವಿಲ್ಲದೆ ಫೋನ್ ಎತ್ತಿಕೊಂಡಳು. “ಹಲೋ..ನಾನಾಗಲೇ ನಿನ್ನ ಸೋದರಿಗೆ ಹೇಳಿದ್ದೇನಲ್ಲಾ ಮತ್ತೇನು?” ಎಂದಳು ಖಾರವಾಗಿ.
“ಆಯಿತು, ಒಂದು ನಿಮಿಷ ಕಾಲ್ ಕಟ್ ಮಾಡಬೇಡಿ, ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ” ಎಂದಳು ಮಾಲಿನಿ.

“ಆಯಿತು ಅದೇನು ಹೇಳು” ಎಂದಳು ಭಾರ್ಗವಿ. “ಅಮ್ಮಾ ಪಪ್ಪನನ್ನು ಕರೆದುಕೊಂಡು ಗ್ರಾಜುಯೇಷನ್ ಫಂಕ್ಷನ್‌ಗೆ ಬನ್ನಿ ಎಂದರೆ ನೀವ್ಯಾಕೆ ಸಿಟ್ಟಿಗೇಳುತ್ತೀರಿ. ನೀವೇನು ಪಪ್ಪನನ್ನು ಬಿಟ್ಟಿದ್ದೀರಾ? ಐ ಮೀನ್ ಡೈವೋರ್ಸ್ ಮಾಡಿದ್ದೀರಾ? ಇದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ಅಂದ ಮೇಲೆ ಜೊತೆಯಾಗಿ ಹೋಗಿ ಅಟೆಂಡ್ ಮಾಡಿ ಮಗಳಿಗೆ ಆಶೀರ್ವಾದ ಮಾಡಿ ಬರೋದಕ್ಕೆ ಏನು ತೊಂದರೆ. ಇದರ ಬಗ್ಗೆ ವಾದವಿವಾದಗಳು ಬೇಡ. ನಾನೀವಾಗಲೇ ಎರಡು ಟಿಕೆಟ್ ಬುಕ್ ಮಾಡುತ್ತೇನೆ. ನಿಮ್ಮ ಮತ್ತು ಪಪ್ಪನ ಡೀಟೈಲ್ಸ್ ನನ್ನಬಳಿಯಿವೆ. ಅದು ನಿಮಗೂ ಗೊತ್ತು, ಮತ್ತೇನಾದರೂ ಬೇಕಾದರೆ ಕೇಳುತ್ತೇನೆ.” ಎಂದು ಉತ್ತರಕ್ಕೆ ಕಾಯದೆ ಕಾಲ್ ಕಟ್ ಮಾಡಿದಳು ಮಾಲಿನಿ.
“ಹೂಂ ಮಕ್ಕಳು ಹೇಳುತ್ತಿರುವುದರಲ್ಲಿ ಏನೂ ಸುಳ್ಳಿಲ್ಲ. ಹೌದು ನಾನೇಕೆ ಅವರನ್ನು ಬಿಟ್ಟು ನ್ಯಾಯಯುತವಾಗಿ ಬಿಡುಗಡೆ ಹೊಂದಲಿಲ್ಲ.” ಹಾಗೇ ಯೋಚಿಸುತ್ತಾ ಹಾಸಿಗೆಯ ಮೇಲೆ ಬಿದ್ದುಕೊಂಡಳು. ಮತ್ತೆ ಭಾರ್ಗವಿಯ ಅಂತರಂಗದ ಬಾಗಿಲು ಗತಕಾಲಕ್ಕೆ ತೆರೆದುಕೊಂಡಿತು.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45335

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *