ಲಹರಿ

ಒಂದು ಕಥೆಯ ಅನುಭವ

Share Button

ನಾನಾಗ ಮೈಸೂರಿನ ಸಮೀಪದಲ್ಲಿದ್ದ ಬಿಳಿಕೆರೆಯ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ. ಆದಿನ ಸರೋಜಿನಿ ನಾಯಿಡು ಬರೆದಿರುವ ‘ಕೋರಮಂಡಲ್ ಫಿಶರ‍್ಸ್’ ಪದ್ಯ ಮಾಡಬೇಕಿತ್ತು. ನನಗೆ ಆ ಪದ್ಯ ತುಂಬಾ ಇಷ್ಟವಾಗಿತ್ತು. ಸಾಕಷ್ಟು ತಯಾರಿ ನಡೆಸಿ ಹತ್ತನೇ ತರಗತಿ ಪ್ರವೇಶಿಸಿ ಎರಡು ಸಲ ಪದ್ಯ ಓದಿ, ವಿವರಿಸಲಾರಂಭಿಸಿದೆ. ಅನಿರೀಕ್ಷಿತವಾಗಿ ನಮ್ಮ ಶಾಲೆಗೆ ಇಂಗ್ಲೀಷ್ ಭಾಷೆಯ ಪರಿವೀಕ್ಷಕರು ಆಗಮಿಸಿದರು. ನನ್ನ ತರಗತಿ ಪ್ರವೇಶಿಸಿ, ಬೋರ್ಡ್ ನೋಡಿದರು.
ನಾನು ಪದ್ಯ ಮಾಡಲು ಆರಂಭಿಸಿದೆ.
“ನೀವು ಕುಳಿತುಕೊಳ್ಳಿ. ನಾನು ಪದ್ಯ ಮಾಡುತ್ತೇನೆ” ಎಂದರು. ನಾನು ಅನಿವಾರ್ಯವಾಗಿ ಕುಳಿತೆ. ಯಾಕೋ ಮನಸ್ಸಿಗೆ ತುಂಬಾ ಬೇಜಾರಾಯಿತು.
“ನಾನು ಸರಿಯಾಗಿ ಸಿದ್ಧತೆ ನಡೆಸಿಲ್ಲವೆ?” ಎಂಬ ಪ್ರಶ್ನೆ ಕಾಡಿತು. ಅವರು ಪದ್ಯ ಮಾಡುತ್ತಲೇ ಇದ್ದರು. ಬೆಲ್ಲಾಯಿತು.

ಇಬ್ಬರೂ ಹೊರಗೆ ಬಂದೆವು. ಅವರು ನೇರವಾಗಿ ಸ್ಟಾಫ್‌ರೂಮ್‌ಗೇ ಬಂದರು.
“ಕುಳಿತುಕೊಳ್ಳಿ” ಎಂದರು. ನಾನು ಕುಳಿತೆ.
“ಯಾಕೆ ಹೀಗೆ ಮಾಡಿದ್ರಿ?” ಎಂದರು.
“ಸರ್, ನಾನು ಚೆನ್ನಾಗಿ……..”
“ನಾನು ಪದ್ಯದ ವಿಚಾರ ಹೇಳುತ್ತಿಲ್ಲ” ಎಂದು ತಮ್ಮ ಬ್ಯಾಗ್‌ನಿಂದ ‘ಸುಧಾ’ ಪತ್ರಿಕೆ ತೆಗೆದರು. ಅದರಲ್ಲಿ ನನ್ನ ‘ಸಾವು’ ಎನ್ನುವ ಕಥೆ ಬಂದಿತ್ತು.
“ನಿಮಗೆ ಇಂತಹ ಆಲೋಚನೆಗಳು ಬರಬಾರದು ಮೇಡಂ. ನಿಮಗೆ ಸಾಯುವಂತದ್ದು ಏನಾಗಿದೆ? ಆತ್ಮಹತ್ಯೆ ಯೋಚನೆ ಕಾಡುತ್ತಿದ್ದರೆ ಬಿಟ್ಟುಬಿಡಿ. ದೇವರು ನಿಮಗೆ ಬರೆಯುವ ಶಕ್ತಿ ಕೊಟ್ಟಿದ್ದಾನೆ. ಒಳ್ಳೆಯ ಕಥೆ, ಕಾದಂಬರಿ ಬರೆಯಿರಿ. ಈ ತರಹ ಯೋಚನೆ ಮಾಡಬೇಡಿ.”
“ಖಂಡಿತಾ ಇಲ್ಲ ಸರ್. ನೀವು ತುಂಬಾ ಭಾವುಕರು ಅನ್ನಿಸತ್ತೆ” ಎಂದೆ.
“ಹಾಗೇನಿಲ್ಲ. ಈ ಕಥೆಗೂ ನಿಮ್ಮ ಜೀವನಕ್ಕೂ ಸಾಮ್ಯತೆಯಿದೆ. ಕಥೆಯ ನಾಯಕಿ ಲೆಕ್ಚರರ್. ನೀವು ಪ್ರೌಢಶಾಲಾ ಶಿಕ್ಷಕಿ, ಆಕೆಯೂ ಅವಿವಾಹಿತೆ. ನೀವೂ ಅವಿವಾಹಿತೆ. ಆಕೆ ತಮ್ಮ ತಂಗಿ, ಅಕ್ಕ ಎಲ್ಲರಿಗೂ ಸಹಾಯ ಮಾಡ್ತಾರೆ. ನೀವೂ ಹಾಗೆ ಮಾಡಿದ್ದೀರ. ಆಕೆಯೂ ಲೇಖಕಿ, ನೀವು ಲೇಖಕಿ….”
“ಸರ್, ಅದು ಕಥೆ ಕಥೆಯಾಗಿ ಓದಿ. ನನ್ನ ಮೈಂಡ್ ಅಷ್ಟು ವೀಕ್ ಅಲ್ಲ. ನಿಮ್ಮ ಕಾಳಜಿಗೆ ತುಂಬಾ ಥ್ಯಾಂಕ್ಸ್” ಎಂದೆ.
ಶಾಲೆಯಲ್ಲಿ ಯಾರೂ ಆ ಕಥೆ ಓದಿರಲಿಲ್ಲ. ನಮ್ಮ ಮುಖ್ಯ ಶಿಕ್ಷಕರು ಓದಿದರೆ ಖಂಡಿತಾ ಕ್ಲಾಸ್ ತೊಗೋತಾರೆ ಎನ್ನಿಸಿತು.

ಸಾಯಂಕಾಲ ಮನೆಗೆ ಬಂದಕೂಡಲೆ “ಅಮ್ಮ ನಿನ್ನ ಕಥೆ ಸುಧಾದಲ್ಲಿ ಬಂದಿದೆ. ನಾಯಕಿ ಸಾಯಬಾರದಿತ್ತು” ಎಂದರು.
ನಾನು ಚರ್ಚೆ ಮಾಡಲಿಲ್ಲ. ಅವರಿಗೆ ಏನೂ ಹೇಳಲೂ ಇಲ್ಲ.

ಮೂರುದಿನ ಕಳೆಯಿತು. ಅಂದು ಭಾನುವಾರ ತಲೆಗೆ ಸ್ನಾನ ಮಾಡಿ ತಿಂಡಿ ತಿಂದು ಕುಳಿತಿದ್ದಾಗ ನನ್ನ ಆತ್ಮೀಯ ಗೆಳತಿ ಪದ್ಮ ಬಂದಳು. ಅವಳು ನಾನು ಒಟ್ಟಿಗೆ ಕೆಲಸ ಮಾಡಿದ್ದೆವು. ಅವಳೀಗ ಇಂಗ್ಲೀಷ್ ಲೆಕ್ಚರರ್ ಆಗಿ ಬೆಂಗಳೂರಿನಲ್ಲಿದ್ದಳು. ಮದುವೆಯಾಗಿ ಒಬ್ಬ ಮಗನೂ ಇದ್ದ. ಮೈಸೂರು ಅವಳ ತವರು. ನಾವು ತುಂಬಾ ಆತ್ಮೀಯ ಗೆಳತಿ ಯಾರಾದರೂ ವರ್ಷಕ್ಕೆ ಒಮ್ಮೆ ಭೇಟಿ ಮಾಡಿದರೆ ಹೆಚ್ಚು. ಫೋನ್‌ನಲ್ಲಿ ಗಂಟೆಗಟ್ಟಲೆ ಮಾತಾಡುವ ಅಭ್ಯಾಸವೂ ಇರಲಿಲ್ಲ. ರಜದಲ್ಲಿ ನಾನೇ ಅವರ ಮನೆಗೆ ಹೋಗಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಇದ್ದು ಬರುತ್ತಿದ್ದೆ. ಒಮ್ಮೆ ಮೌಲ್ಯಮಾಪನಕ್ಕೆ ಹೋದ ನಾನು ನನ್ನ ಗೆಳತಿ ಅವರ ಮನೆಯಲ್ಲೇ ಇದ್ದೆವು. ರಾತ್ರಿ ಸೆಕೆಂಡ್‌ಶೋಗೆ ಹೋಗುತ್ತಿದ್ದೆವು. ಅವಳ ಗಂಡ, ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಇಬ್ಬರು ಹುಡುಗರೂ ಕಂಪನಿ ಕೊಡುತ್ತಿದ್ದರು. ಮಲ್ಲೇಶ್ವರಂ ಸುತ್ತಿ ಯಾವ ಯಾವ ಹೋಟೆಲ್‌ನಲ್ಲಿ ಯಾವ ಯಾವ ತಿಂಡಿ ಚೆನ್ನಾಗಿದೆ” ಎಂದು ರುಚಿ ನೋಡುತ್ತಿದ್ದೆವು.
ಅಮ್ಮಾ “ತಿಂಡಿ ಕೊಡಲಾ?” ಎಂದರು.
“ಊಟ ತಿಂಡಿ ಏನೂ ಬೇಡ, ಕಾಫಿ ಕೊಡಿ ಸಾಕು. ಇವಳ ಜೊತೆ ಜಗಳ ಆಡಕ್ಕೆ ಬಂದೆ” ಅಂದಳು. ಅಮ್ಮಾ ಕಾಫಿ ಕೊಟ್ಟರು.
“ಏನಾಗಿದೆ ನಿನಗೆ? ಯಾಕೆ ಹಾಗೆ ಬರೆದಿದ್ದೀಯಾ? ನಿನಗೆ ಅಂತಹ ಆಲೋಚನೆ ಹೇಗೆ ಬಂತು? ನಿಮ್ಮಮ್ಮನ ಯೋಚನೆ ಬರಲಿಲ್ವಾ?” ಎಂದು ಬೈದಳು.
“ಸತ್ತಿರೋದು ಕಥಾನಾಯಕಿ. ನಾನು ಬದುಕಿದ್ದೀನಲ್ವಾ?” ಎಂದೆ.
“ನಮ್ಮನೆಯವರೂ ಕಥೆ ಓದಿದರು. ಅವರೂ ಬರಬೇಕೂಂತಿದ್ದರು. ನಾನೇ ಬೇಡಾಂದೆ. ಇನ್ನುಮೇಲೆ ಇಂತಹ ಕಥೆ ಬರೆಯಕೂಡದು” ಅಂದಳು.
ನಾನೇ ಅವಳಿಗೆ ಸಮಾಧಾನ ಹೇಳಿದೆ.

ಒಂದು ವಾರದ ನಂತರ ಒಬ್ಬ ಅಭಿಮಾನಿ ಪತ್ರ ಬರೆದಿದ್ದರು. “ನಾನು ನಿಮ್ಮ ಅಭಿಮಾನಿ. ಆದರೆ ಸಾವು’ ಕಥೆ ಓದಿ ಬೇಸರವಾಯಿತು. ನೀವು ಯಾಕೆ ಆ ತರಹ ಕಥೆ ಬರೆದ್ರಿ? ನಿಮಗೆ ಕೌನ್ಸಲಿಂಗ್ ಅಗತ್ಯವಿದೆ ಎನ್ನಿಸುತ್ತದೆ. ಸಾಮಾನ್ಯವಾಗಿ ಕಥೆಗಾರರು ಭಾವನಾ ಜೀವಿಗಳು. ಅವರು ತಾವೇ ಸೃಷ್ಟಿಸಿದ ಪಾತ್ರಗಳ ಜೊತೆ ನಗ್ತಾರೆ, ಅಳ್ತಾರೆ, ಸಂಕಟಪಡುತ್ತಾರೆ. ಒಂದು ತರಹ ಭ್ರಮೆಯಲ್ಲಿ ಮುಳುಗುತ್ತಾರೆ. ನೀವು ತುಂಬಾ ಭಾವುಕರು ಅನ್ನಿಸತ್ತೆ. ಅದು ಒಳ್ಳೆಯದಲ್ಲ. ದಯವಿಟ್ಟು ಮನಶಾಸ್ತ್ರಜ್ಞರನ್ನು ಭೇಟಿಮಾಡಿ. ಒಳ್ಳೆಯ ಕಥೆ, ಕಾದಂಬರಿ ಬರೆಯಿರಿ” ಎಂದು ಬರೆದಿದ್ದರು.

ನಾನು ಕಥಾ ನಯಕಿಯ ಬಗ್ಗೆ ಯೋಚಿಸಿದೆ. ಆಕೆ ದುರಂತ ಪಾತ್ರಗಳನ್ನು ಚಿತ್ರಿಸುವುದರಲ್ಲಿ ಸಿದ್ಧಹಸ್ತಳು. ಆಕೆ ಆಸ್ಪತ್ರೆಗೆ ಸೇರಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ, ಅವಳ ಮನಸ್ಸು ದುರ್ಬಲವಾಗಿರುತ್ತದೆ. ಅಲ್ಲಿಯ ನರ್ಸ್, ಡಾಕ್ಟರ್ಸ್ ಅವಳ ಅಭಿಮಾನಿಗಳು. ಅವರೆಲ್ಲಾ ಬಂದು ಮಾತನಾಡಿಸುತ್ತಾರೆ. ಅವಳನ್ನು ಹೊಗಳುತ್ತಾರೆ. ಅಕ್ಕ, ತಂಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವಳು ಬೆಡ್‌ನಲ್ಲಿ ಮಲಗಿರುವಾಗ ಅವಳೇ ಸೃಷ್ಟಿಸಿದ್ದ ಪಾತ್ರಗಳು ಜೀವಂತವಾಗಿ ಅವಳ ಮುಂದೆ ಕಾಣಿಸಿಕೊಂಡು,
“ನಮಗ್ಯಾರಿಗೂ ಸಾಯಲು ಇಷ್ಟವಿರಲಿಲ್ಲ. ಬದುಕಲು ನೂರಾರು ಮಾರ್ಗಗಳಿದ್ದವು. ಆದರೆ ನೀನು ನಮ್ಮನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಚಿತ್ರಿಸಿದೆ. ಈಗ ನೀನು ಯಾಕೆ ಬದುಕಬೇಕು? ನಿನಗಾಗಿ ಅಳಲು ಯಾರಿದ್ದಾರೆ? ನೀನು ಸಾಯಬೇಕು, ಸಾಯಬೇಕು” ಎಂದಂತಾಗುತ್ತದೆ. ಆ ಲೇಖಕಿ ಮಹಡಿಯಿಂದ ಹಾರಿ ಪ್ರಾಣ ಬಿಡುತ್ತಾಳೆ.

ನಾನು ಕಥೆ ಬರೆಯುವಾಗ ನನ್ನ ಉದ್ದೇಶವಿದ್ದಿದ್ದು ಮನುಷ್ಯನ ದೈಹಿಕ ದುರ್ಬಲತೆ, ಅವನ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಮನಸ್ಸು ದುರ್ಬಲವಾಗುತ್ತದೆ. ಸಾಮಾನ್ಯವಾಗಿ ಅಂತಹವರು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಒಳಗಾದವರು ಏನೇನೂ ಊಹಿಸಿಕೊಂಡು ಸಾಯುವ ನಿರ್ಧಾರ ಮಾಡುತ್ತಾರೆ. ನನ್ನ ಕಥಾನಾಯಕಿಗೂ ಹಾಗೆ ಅನ್ನಿಸುವ ಸಾಧ್ಯತೆಗಳಿದ್ದವು.

ಆದರೆ ಕಥೆ ಬೀರಿದ ಪರಿಣಾಮ ಮಾತ್ರ ಆಶ್ಚಯಕರ. ಕೆಲವು ಪತ್ರಗಳು ನಂತರವೂ ಬಂದವು. ನನ್ನ ಪರಿಚಿತರೇ ಒಬ್ಬರು ನನಗೆ ಗಂಡು ಹುಡುಕಿದ್ದರು! ಆತ ಕೇವಲ 5 ಅಡಿ ಇದ್ದನಂತೆ!
ಅಮ್ಮನಿಗೆ ನನ್ನ ಕಥಾ ಪುರಾಣ ಹೇಳಿ ಬಿದ್ದು ಬಿದ್ದು ನಕ್ಕೆ. ಹೇಗಿದೆ ನನ್ನ ಅನುಭವ? ನಿಮ್ಮ ಅಭಿಪ್ರಾಯ ತಿಳಿಸಿ.

ಸಿ.ಎನ್.ಮುಕ್ತಾ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *