ಗಿಡಗಳ ನೆಟ್ಟು ಪೋಷಿಸಿ ಪೊರೆಯುತ
ಪರಿಸರ ರಕ್ಷಣೆ ಮಾಡೋಣ
ತಡೆಯುತ ನಮ್ಮಯ ಸುತ್ತಲ ಮಲಿನವ
ಶುದ್ಧದಿ ನಾವು ಬಾಳೋಣ//೧//
ಹಸಿರೇ ಉಸಿರು ಎಂಬುವ ತತ್ವವ
ನಂಬಿ ದಿನವೂ ಸಾಗೋಣ
ಭೂಮಿಯ ಒಡಲಿಗೆ ಕೇಡನು ಬಗೆಯದೆ
ಜೀವ ಜಾಲವ ಉಳಿಸೋಣ//೨//
ಪ್ಲಾಸ್ಟಿಕ್ ಎನ್ನುವ ಘನವಾದ ತ್ಯಾಜ್ಯವ
ಬಳಸದೆ ಬದುಕನು ಸಾಗಿಸುವ
ಪರಿಸರದಲ್ಲಿ ಹೊಗೆಯನು ಹರಡುವ
ವಾಯು ಮಾಲಿನ್ಯವ ತಡೆಯೋಣ//೩//
ಅನುದಿನ ನಮಗೆ ಪರಿಸರ ದಿನವು
ಎಂಬುದ ಜನರಿಗೆ ಅರುಹೋಣ
ವನಗಳ ಬೆಳೆಸಲು ನೀರನು ಉಳಿಸಲು
ಶಾಂತಿಯುಬದುಕಲಿ ಎನ್ನೋಣ//೪//
ಎಲೆಗಳು ಹಸಿರನು ಹೂಗಳು ಗಂಧವ
ಸೂಸಲು ಹಿತವು ಧರೆಯಲ್ಲಿ
ಸೊಂಪಿನ ಕಾಯ್ಗಳ ಮಾಗಿದ ಫಲಗಳ
ಕಾಣಲು ಪಾವನ ಇಳೆಯಲ್ಲಿ//೫//
ನೆಟ್ಟಿಹ ಗಿಡಕೆ ನೀರು ಗೊಬ್ಬರ
ಹಾಕುತ ಸಂಪದ ಕಾಣೋಣ
ಸೊಂಪಲಿ ಬೆಳೆದ ಗಿಡಮರದಿಂದ
ಬಾಳಿನ ಸೊಗವನು ಪಡೆಯೋಣ//೬//

–ಶುಭಲಕ್ಷ್ಮಿ ಆರ್ ನಾಯಕ


ಬಹಳ ಸೂಕ್ತ ಕವನ.
ಪರಿಸರ ಸಂರಕ್ಷಣೆ ತುರ್ತು ಅಗತ್ಯ.
ಮುಂದಿನ ಪೀಳಿಗೆಗೆ ನಾವು ಕೊಡಬೇಕಾದ ಆಸ್ತಿ
ಪರಿಸರ ಪ್ರಜ್ಞೆ ಬೆಳೆಸುವ ಕವನ..ಚೆನ್ನಾಗಿ ದೆ ಮೇಡಂ
ಉತ್ತಮ ಕವನ
ಪರಿಸರ ಕಾಳಜಿಯ ಹೊಂದಿರುವ ಕವನ ಲಯಬದ್ದವಾಗಿಯೂ ಸರಳವಾಗಿಯೂ ಹೆಣೆಯಲ್ಪಟ್ಠಿದೇ.
ಸಾರ್ವಕಾಲಿಕ ಸತ್ಯದ ಅರಿವನ್ನು ಮೂಡಿಸುತ್ತಾ, ಪರಿಸರ ರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಸುವ ಸುಂದರ ಕವನ!