ಗ್ರೀಕರ ತಾತ್ತ್ವಿಕ ಚಿಂತನೆಗಳನ್ನು ರೋಮನ್ ಭಾಷೆಯಲ್ಲಿ ಅದರಲ್ಲೂ ಕಾವ್ಯರೂಪದಲ್ಲಿ ಜನರಿಗೆ ಮುಟ್ಟಿಸಿದ ಮಹತ್ವದ ಚಿಂತಕ ಟೈಟಸ್ ಲುಕ್ರೀಶಸ್ ಕಾರಸ್. ಈತನ ಕಾಲಮಾನ ಶಕಪೂರ್ವ ಒಂದನೇ ಶತಮಾನ. ಇನ್ನೋರ್ವ ತತ್ತ್ವ ಮೀಮಾಂಸಕನಾದ ಎಪಿಕ್ಟೆಟಸ್‌ನ ಸಮಕಾಲೀನನೀತ. ಈ ಇಬ್ಬರೂ ಇವರಿಗಿಂತ ಹಿಂದೆ ಬಾಳಿ ಬದುಕಿದ್ದ ಎಪಿಕ್ಯೂರಸ್‌ನ ಚಿಂತನೆಗಳಿಂದ ಪ್ರಭಾವಿತರು. ಅದರಲ್ಲೂ ಲುಕ್ರೀಶಸನು ಈ ಎಪಿಕ್ಯೂರಿಯನ್ ಆಲೋಚನೆಗಳನ್ನು ಲ್ಯಾಟಿನ್ ಭಾಷೆಯಲ್ಲಿ ಪ್ರಚುರಪಡಿಸಿದನು. ಎಪಿಕ್ಟೆಟಸ್ ಸಹ ತನ್ನ ಹರಿತವಾದ ಮತ್ತು ವಿಶಿಷ್ಟವಾದ ಚಿಂತನೆಗಳಿಂದ ಹೆಸರಾದವನು. ಇವನ ಜೀವನ, ಸಾಧನೆ ಮತ್ತು ಕೃತಿಗಳನ್ನು ಕುರಿತು ಸುಭಾಷ್ ರಾಜಮಾನೆಯವರು ‘ಆರದಿರಲಿ ಬೆಳಕು’ ಎಂಬ ತಮ್ಮ ಕನ್ನಡಾನುವಾದದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯನ್ನು ನಾನು ಪರಿಚಯಿಸುವಾಗ ಆಕಸ್ಮಿಕವೆಂಬಂತೆ ಲುಕ್ರೀಶಸನು ಗೊತ್ತಾದನು. ಹಾಗಾಗಿ ಇವನ ಚಿಂತನೆಗಳನ್ನು ಕುರಿತಂತೆ ಈ ಬರೆಹದಲ್ಲಿ ಮಾತಾಡಲು ಹೊರಟಿರುವೆ.
ಲುಕ್ರೀಶಸ್‌ನ ಏಕೈಕ ಹೊತ್ತಗೆಯ ಹೆಸರು De rerum natura ಅಂದರೆ ‘ವಸ್ತುಗಳ ಸ್ವಭಾವ.’ ನಾವು ಯಾವುದನ್ನು ಇಂದು ಕಲೆ, ಸಾಹಿತ್ಯ, ವಿಜ್ಞಾನ ಎಂದು ಜ್ಞಾನವನ್ನು ವಿಭಜಿಸಿ ಅಧ್ಯಯನಕ್ಕೆ ಅನುಕೂಲಕ್ಕೆಂದು ಸಮರ್ಥಿಸಿಕೊಳ್ಳುತ್ತಿದ್ದೇವೆಯೋ ಅದನ್ನು ಈತ ಒಪ್ಪುವುದಿಲ್ಲ. ಭೌತಶಾಸ್ತ್ರದ ತತ್ತ್ವಶಾಸ್ತ್ರವನ್ನು ಅರ್ಥ ಮಾಡಿಸುವುದು ಇವನ ಆಶಯ. ಈ ಪುಸ್ತಕದಲ್ಲಿ ಆರು ಭಾಗಗಳಿವೆ. ತನ್ನ ಚಿಂತನೆಗಳನ್ನು ಕಲಾತ್ಮಕವಾಗಿ ಅಂದರೆ ಸಂಕೇತ, ರೂಪಕ, ಪ್ರತಿಮೆಗಳ ಮೂಲಕವಾಗಿ ಮುಂದಿಡುವುದು ಇವನ ಶೈಲಿ. ಭೌತವಿಜ್ಞಾನ, ಆತ್ಮವಿಜ್ಞಾನ, ಇಂದ್ರಿಯಾನುಭವ ಜ್ಞಾನ, ಬ್ರಹ್ಮಾಂಡ ವಿಜ್ಞಾನ ಮತ್ತು ಮಾನವ ಸಮಾಜದ ವಿಕಾಸಶಾಸ್ತ್ರ ಎಂಬುದಾಗಿ ವಿಭಜಿಸಿಕೊಂಡು ಈತ ಪುಸ್ತಕ ಬರೆದರೂ ಅಂತಿಮವಾಗಿ ಇವೆಲ್ಲವೂ ಬೇರೆ ಬೇರೆಯಲ್ಲ; ಒಂದೇ ಅಖಂಡದ ಮೂಲ ಎಂದು ಪ್ರತಿಪಾದಿಸುತ್ತಾನೆ. ನಮ್ಮ ಗುರುಕುಲ ವಿದ್ಯಾಭ್ಯಾಸ ಸಹ ಹೀಗೆಯೇ ಇತ್ತೆಂಬುದನ್ನು ನೆನಪಿಸಿಕೊಳ್ಳಬೇಕು. ನಗರಜೀವನದಿಂದ ದೂರವಾಗಿ ಅರಣ್ಯದ ಬಳಿ ಕುಟೀರಗಳನ್ನು ಸ್ಥಾಪಿಸಿಕೊಂಡು, ಗುರುವಾದವರು ತಮ್ಮ ಶಿಷ್ಯರಿಗೆ ಜೀವನಪಾಠವನ್ನು ಹೇಳಿಕೊಡುತ್ತಿದ್ದರು. ಥಿಯರಿಯ ಜೊತೆಗೆ ಪ್ರಾಕ್ಟೀಕಲ್ಲು ಕಡ್ಡಾಯವಾಗಿತ್ತು. ನಿಸರ್ಗದ ಎಲ್ಲ ಆಗುಹೋಗುಗಳನ್ನು ಬಲ್ಲವರಾಗಿದ್ದರು. ಎಲ್ಲ ಬಗೆಯ ಕೆಲಸಗಳನ್ನು ಮಾಡುವ ಕೌಶಲವನ್ನು ಗಳಿಸುತ್ತಿದ್ದರು. ಈಗಿನ ಬಹುತೇಕ ಮಕ್ಕಳಿಗೆ ಹೂವಿನ ಹೆಸರುಗಳು ಗೊತ್ತಿಲ್ಲ; ಹಣ್ಣಿನ ಉಪಯೋಗಗಳು ತಿಳಿದಿಲ್ಲ; ಮರಗಿಡಗಳನ್ನು ಗುರುತಿಸುವ ಜ್ಞಾನವಿಲ್ಲ, ಅಡುಗೆ ಮಾಡಲು ಬರುವುದಿಲ್ಲ; ಕರೆಂಟಿಲ್ಲದಿದ್ದರೆ ಜೀವಿಸಲೇ ಗೊತ್ತಿಲ್ಲ! ಲುಕ್ರೀಶಸ್‌ನ ಬಹುತೇಕ ಚಿಂತನೆಗಳ ಮೂಲ ಎಪಿಕ್ಯೂರಸ್‌ನ ಫಿಲಾಸಫಿ. ಇದರ ಪ್ರಮುಖಾಂಶಗಳೆಂದರೆ: ವಿಶ್ವವು ಅಣುಗಳಿಂದ ನಿರ್ಮಿತ. ಎಲ್ಲ ಘಟನೆಗಳೂ ಪ್ರಕೃತಿಯ ನಿಯಮಗಳ ಪ್ರಕಾರವೇ ನಡೆಯುವುವು. ಜೀವನದ ಗುರಿಯೇನೆಂದರೆ, ದುಃಖ ಪಡದೇ ಸಂತಸದಿಂದಿರುವುದು (Pleasure as Absence of Pain) ಅದರಲ್ಲೂ ಅಣುಗಳನ್ನು ಕುರಿತ ಇವನ ಚಿಂತನೆಗಳೇ ಮುಂದೆ ಭೌತಶಾಸ್ತ್ರದ ಅಭಿವೃದ್ಧಿಗೆ ಪೂರಕವಾದವು.
ಎಪಿಕ್ಯೂರಿಯನ್‌ಗಳು ದೈವವಿರೋಧಿಗಳಲ್ಲ. ಇವರೆಲ್ಲ ದೈವಪರವಾದವರು. ಅವರ ಪ್ರಕಾರ ದೈವವೆಂದರೆ, ವಿಶ್ವದ ನಿಯಾಮಕ ಶಕ್ತಿ. ಇದೆಂದೂ ಜೀವಿಗಳ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಲುಕ್ರೀಶಸ್ ಹೇಳಿದನು. ಹಾಗಾಗಿ ದೈವವೆಂಬುದು ಭಯಪಡಿಸುವ ಸಂಗತಿ ಎಂಬುದನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ ಎನ್ನುವನು. ಮುಂದುವರೆದು, ಮರಣದ ಭಯವೇ ಮನುಷ್ಯನ ದುಃಖಕ್ಕೆ ಮೂಲ ಕಾರಣ ಎನ್ನುವ ಈತ, ಮರಣದ ನಂತರ ಯಾವುದೇ ಜೀವನವಿಲ್ಲವೆಂದೂ ದೇಹದೊಂದಿಗೆ ಆತ್ಮವೂ ನಾಶವಾಗುತ್ತದೆಂದೂ ಹೇಳಿದ. ಭಾರತೀಯ ಚಿಂತನೆಗೆ ತದ್ವಿರುದ್ಧವಾದುದು ಇದು. ಆತ್ಮಕ್ಕೆ ಸಾವಿಲ್ಲ ಎಂಬುದು ನಮ್ಮ ಪೂರ್ವಿಕರ ಆಲೋಚನೆ. ಇಂದ್ರಿಯಾನುಭವವನ್ನೇ ಜ್ಞಾನದ ಮೂಲವೆಂದು ಪರಿಗಣಿಸುವ ಈತನು ನಮ್ಮ ಪಂಚೇಂದ್ರಿಯಗಳ ಅನುಭವವು ನಿಜವಾದುದೇ ಆದರೂ ಅವುಗಳ ಮೂಲ ಪ್ರಕೃತಿಯಲ್ಲೇ ಭ್ರಮೆ ಅಡಗಿದೆ ಎಂಬ ಗೊಂದಲದ ಹೇಳಿಕೆ ನೀಡುವನು. ಅಂದರೆ ನಮ್ಮ ಅನುಭವವೂ ಸತ್ಯ; ಅದರಂತೆ, ಅದರ ಅಂತರಾಳದಲ್ಲಿ ಹುದುಗಿದ ಭ್ರಮೆಯೂ ಸತ್ಯ. ನಿಜ ಮತ್ತು ನಿಜವಲ್ಲದುದು ಎರಡೂ ಒಟ್ಟಿಗೆ ಇರುವುದರಿಂದಲೇ ನಮ್ಮ ಚಿಂತನೆಯ ಬೆಳವು! ಸಿಂಪಲ್ಲಾಗಿ ಹೇಳುವುದಾದರೆ ಕತ್ತಲೆ ಇರುವುದರಿಂದಲೇ ಬೆಳಕಿನ ಅನುಭವವು. ಸತ್ಯವು ಇರುವುದರಿಂದಲೇ ಸುಳ್ಳಿಗೆ ಜಾಗವು!! ಹಾಗಾಗಿ ಲುಕ್ರೀಶಸನು ತರ್ಕಾಧಾರಿತ ತತ್ತ್ವಜ್ಞಾನಿ.
ಪ್ರಾರಂಭದಲ್ಲಿ ಮನುಕುಲದ್ದು ಅರಣ್ಯ ಜೀವನ. ನಂತರವೇ ಕುಟುಂಬ, ಸಮಾಜ, ಭಾಷೆ, ನೀತಿ ನಿಯಮ, ಕಾನೂನು-ಕಟ್ಟಳೆಗಳು ಹುಟ್ಟಿಕೊಂಡದ್ದು. ಇಂಥಲ್ಲಿ ನಾಗರಿಕತೆ ಬೆಳೆಯುವಾಗ ದೈವಗಳೇನೂ ಸಹಾಯ ಮಾಡಿಲ್ಲ. ಒಳಿತನ್ನು ಮಾಡಲೆಂದೇ ದೈವನಂಬುಗೆ. ನೀತಿಯುತವಾಗಿ ಬಾಳುವಾಗ ಈ ನಂಬುಗೆಯ ಅಗತ್ಯವೂ ಬರದು. ನೀತಿಮೌಲ್ಯಗಳನ್ನು ಪಾಲಿಸಲೆಂದೇ ನಮ್ಮ ಪೂರ್ವಜರು ಇವನ್ನು ಎಳೆದು ತಂದದ್ದು ಎನ್ನುವನು. ವ್ಯಕ್ತಿಯು ರಾಜಕೀಯ ಜೀವನದಿಂದ ದೂರವಿದ್ದು, ಸ್ನೇಹ ಮತ್ತು ಶಾಂತಿಯನ್ನು ಉತ್ತೇಜಿಸಿ, ಸಂತಸದಿಂದ ಬಾಳುವಂಥ ವಾತಾವರಣ ನಿರ್ಮಾಣವಾಗಬೇಕು ಎನ್ನುತ್ತಾನೆ. ಹಾಗೆ ನೋಡಿದರೆ ‘ಮನುಷ್ಯನು ಮೂಲತಃ ರಾಜಕೀಯ ಜೀವಿ’ ಎಂದ ಅರಿಸ್ಟಾಟಲನ ಮಾತು ಇದಕ್ಕೆ ವಿರುದ್ಧ! ರಾಜಕೀಯ ಎಂದ ಮಾತ್ರಕೇ ಕೇವಲ ‘ಪಾಲಿಟಿಕ್ಸು’ ಎಂದಂದುಕೊಳ್ಳಬಾರದು. ‘ರಾಗಿ ಬೀಸೋ ರಂಗನಿಗೆ ರಾಜನ ಚಿಂತೆಯೇಕೆ?’ ಎಂಬ ನಮ್ಮ ಗಾದೆಯನ್ನಿಲ್ಲಿ ನೆನಪಿಸಿಕೊಳ್ಳಬಹುದು. ಅಂದರೆ ಸಾಮಾನ್ಯರು ರಾಜ್ಯದ ರಾಜಕೀಯದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೇ ತಂತಮ್ಮ ಉಸಾಬರಿಯನ್ನು ನೋಡಿಕೊಳ್ಳುವುದೇ ಸರಿ ಎಂಬ ಆಶಯ.
ಲುಕ್ರೀಶಸ್‌ನ ನಂತರ ಕಾಣಿಸಿಕೊಂಡ ಎಲ್ಲ ಗ್ರೀಕ್ ತತ್ತ್ವಜ್ಞಾನಿಗಳು ರಾಜಕಾರಣ ಎಂಬುದಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟು, ಅದು ಅಧಿಕಾರ ಹೊಂದುವ ಮತ್ತು ನಡೆಸುವ ಉಮೇದು ಎಂದು ಅರ್ಥೈಸಿದ್ದಾರೆ. ಒಂದಲ್ಲ ಒಂದು ವಿಧವಾದ ದುರ್ಬಲರನ್ನು ಹುಡುಕಿ, ತಮ್ಮ ಅಧಿಕಾರವನ್ನು ಹೇರುವ ಮತ್ತು ಚಲಾಯಿಸುವ ಗುಣವು ಮನುಷ್ಯನ ರಕ್ತದಲ್ಲೇ ಬಂದುಬಿಟ್ಟಿದೆ ಎಂದು ವ್ಯಾಖ್ಯಾನಿಸುತ್ತಾರೆ. ಒಂದೊಮ್ಮೆ ಪಾಠ ಹೇಳುವ ಗುರುವು ಸಹ ತಮ್ಮ ಶಿಷ್ಯರ ಮೇಲೆ ಅಧಿಕಾರ ಚಲಾಯಿಸುವರು. ಹಾಗಾಗಿ, ಎಲ್ಲ ಸಂದರ್ಭಗಳಲ್ಲೂ ಅಧಿಕಾರ ಚಲಾಯಿಸುವುದು ಎಂಬುದು ನೆಗಟೀವೇ ಆಗಿರುವುದಿಲ್ಲ. ಹೀಗೆ ಅಧಿಕಾರ ಚಲಾಯಿಸದಿದ್ದರೆ ಅರಾಜಕತೆ ಏರ್ಪಟ್ಟು, ಸಮಾಜದಲ್ಲಿ ಗೊಂದಲವುಂಟಾಗಿ ಕಾನೂನು ಅವ್ಯವಸ್ಥೆಯುಂಟಾಗುವುದು ಸಹಜ. ಹಾಗಾಗಿ ಒಂದಲ್ಲ ಒಂದು ವಿಧವಾದ ಶಕ್ತಿಯ ರಾಜಕಾರಣವೋ, ಜ್ಞಾನದ ರಾಜಕಾರಣವೋ ಧರ್ಮದ ರಾಜಕಾರಣವೋ ಸಂಸ್ಥಾಪಿತವಾಗಿಯೇ ಇರುತ್ತದೆ. ಇದು ಮನುಕುಲಕ್ಕೆ ಇಷ್ಟ ಕೂಡ. ನನ್ನ ಮಾತನ್ನು ಕೇಳುವವರು ನನಗೆ ಸ್ನೇಹಿತರು ಮತ್ತು ಅವರು ಒಳ್ಳೆಯವರು ಎಂದೂ ನನ್ನ ಮಾತನ್ನು ಕೇಳದವರು ನನ್ನ ಶತ್ರುಗಳು, ವಿರೋಧಿಗಳು ಎಂದೂ ಸರಳವಾಗಿ ವರ್ಗೀಕರಿಸಿ ಬಿಡುತ್ತೇವೆ. ನನ್ನ ಅಧೀನದಲ್ಲಿ ಇದ್ದರಷ್ಟೇ ಸರಿ; ನನ್ನನ್ನು ಪ್ರಶ್ನಿಸುವವರದು ಯಾವಾಗಲೂ ತಪ್ಪು ಎಂದೇ ಮನುಜರ ಮನೋಧರ್ಮ. ಇದಕ್ಕಾಗಿಯೇ ರಾಜಧರ್ಮವು ನಶಿಸುತ್ತಾ, ಪ್ರಜಾಧರ್ಮ ಮುನ್ನೆಲೆಗೆ ಬಂದಿದ್ದು. ಪ್ರಜಾಸತ್ತಾತ್ಮಕ ಎಂದರೆ ಪ್ರಶ್ನಿಸುವವರಿಗೂ ಪ್ರೀತಿ ಗೌರವಗಳು ದೊರೆಯುವಂಥ ವಾತಾವರಣ. ಪ್ರಜೆಗಳಿಂದ ಆರಿಸಿ ಬಂದ ಪ್ರಜಾಪ್ರತಿನಿಧಿಯೊಬ್ಬರು ತಮಗೆ ಎದುರಾಳಿಯಾಗಿದ್ದ ಅಭ್ಯರ್ಥಿಗಳ ಪರವಾಗಿಯೂ ಕ್ಷೇತ್ರದ ಮಂದಿ ಮತ ಚಲಾಯಿಸಿದ್ದಾರೆಂಬುದನ್ನು ನೆನಪಿಸಿಕೊಳ್ಳಬೇಕು. ಮತ್ತು ಇದು ಅವರ ವಿನಯ ವಿವೇಕಗಳನ್ನು ಹೆಚ್ಚಿಸಲು ಸಹಕಾರಿಯಾಗಿರಬೇಕು. ‘ಪ್ರಜಾಧರ್ಮದಲ್ಲಿ ಬಹುಮತಕ್ಕೆ ಬೆಲೆ’ ಎಂಬುದು ಸರ್ವವೇದ್ಯ. ಅಧಿಕಾರ ಬೇರೆ; ಸರ್ವಾಧಿಕಾರ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳದವರು ಯೋಗ್ಯ ಜನಪ್ರತಿನಿಧಿಯಾಗಲಾರರು. ಇರಲಿ. ಈತನು ರಾಜಕೀಯವನ್ನು ದೂರವಿಡಬೇಕು ಎಂದಂತೆ, ಧರ್ಮವನ್ನೂ ದೂರ ಸರಿಸಿ ಬದುಕಿ ಎಂದುಬಿಡುತ್ತಾನೆ. ಇಲ್ಲಿ ಅವನ ಪ್ರಕಾರ ಮತಧರ್ಮಗಳು. ಜೀವನಕ್ಕೆ ಇದರ ಅಗತ್ಯವಿಲ್ಲ. ಅಗತ್ಯವಿದೆ ಎಂದುಕೊಂಡವರು ನೀತಿಯನ್ನು ಅನುಸರಿಸಬಹುದು. ಈತನ ನೈತಿಕತೆಯ ಕೇಂದ್ರವು ಸರಳಜೀವನವನ್ನು ಆಧರಿಸಿದೆ. ಅತಿಯಾದ ಆಸೆಗಳನ್ನು ಹೊಂದದೇ ಇದ್ದರೆ ಸರಳತೆ ತಂತಾನೇ ಪ್ರಾಪ್ತ.
ಮತಧರ್ಮಗಳು ಮಾನವರಲ್ಲಿ ಭೀತಿಯನ್ನುಂಟುಮಾಡಿ, ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳುತ್ತದೆ. ನಮ್ಮನ್ನಾಳುವವರು ಬಳಸಿಕೊಳ್ಳುತ್ತಾರೆ, ಅಭಿಮಾನಿಗಳು ಉದಾತ್ತವೆಂದು ತಿಳಿಯುತ್ತಾರೆ ಆದರೆ ತತ್ತ್ವಜ್ಞಾನಿಗಳಿಗೆ ಮಾತ್ರ ಇದು ಹಾಸ್ಯಾಸ್ಪದ ಎಂದು ಹೇಳಿಕೆ ಕೊಡುವನು. ಪ್ರಕೃತಿಯನ್ನು ಅರಿಯಲು ಯಾವ ಮಾಧ್ಯಮವೂ ಬೇಡ; ಗಮನಿಸಿದರೆ ಸಾಕು ಎನ್ನುವನು. ನಿಸರ್ಗವು ಯಾವಾಗಲೂ ಒಂದರಿಂದ ಇನ್ನೊಂದನ್ನು ಸರಿಪಡಿಸುವಂಥ ಮಾರ್ಗವನ್ನು ಅನುಸರಿಸುವುದು. ಸೃಷ್ಟಿಯು ತನ್ನದೇ ಆದ ನಿಯಮಗಳನ್ನು ಅನುಸರಿಸುತ್ತದೆ. ಮರಗಳು ಬೆಳೆಯಲು ಮಣ್ಣು ಬೇಕು; ಆಗಸವಲ್ಲ. ಅದೇ ರೀತಿ ಮೋಡಗಳು ಕಡಲಿನಲ್ಲಿ ತೇಲುವುದಿಲ್ಲ, ಅವಕ್ಕೆ ಆಗಸ ಬೇಕು. ಕಲ್ಲಿನಲ್ಲಿ ರಸ ಒಸರುವುದಿಲ್ಲ ಮತ್ತು ಸಸ್ಯಗಳಲ್ಲಿ ಕೆಂಪುರಕ್ತವಿಲ್ಲ. ಹೀಗೆ ನಾವು ನಮ್ಮ ಗಮನಿಸುವ ಅನುಭವದಿಂದಲೇ ಜಗತ್ತನ್ನು ಅರ್ಥ ಮಾಡಿಕೊಳ್ಳಬಹುದು. ಅಲ್ಪತೃಪ್ತಿಯಿದ್ದರೆ ಯಾವ ಕೊರತೆಯೂ ಕಾಡುವುದಿಲ್ಲ. ಕಷ್ಟ ಬಂದಾಗಲೇ ಮನುಷ್ಯರ ನಿಜವಾದ ಮುಖ ಗೊತ್ತಾಗುವುದು; ಉಳಿದಂತೆ ಎಲ್ಲರದೂ ಮುಖವಾಡಗಳೇ. ಎಲ್ಲದರಿಂದ ಬಿಡುಗಡೆ ಸಿಗುವುದರಿಂದಾಗಿ ಸಾವಿಗೆ ಹೆದರಬೇಕಾಗಿಲ್ಲ. ಈತನ ಚಿಂತನೆಯ ತುಣುಕುಗಳಿವು.
ಹೀಗೆ ಲುಕ್ರೀಶಸನು ಆ ಕಾಲಕ್ಕೇ ಕ್ರಾಂತಿಕಾರಕ ಎನ್ನಬಹುದಾದ ಮಾತುಗಳನ್ನು ಆಡಿದ್ದಾನೆ. ಕೆಲವೊಂದು ವಿವಾದಾಸ್ಪದ, ಇನ್ನು ಕೆಲವೊಂದು ಅರ್ಧಂಬರ್ಧ ಹಾಸ್ಯಾಸ್ಪದ ಎಂದು ನಾವೀಗ ದೂರಬಹುದು. ಆದರೆ ಈತನ ಚಿಂತನೆಗಳು ಪುನರುಜ್ಜೀವನ ಕಾಲದ ಆವಿಷ್ಕಾರಗಳಿಗೆ ಇಂಬಾದವು. ಜಡವೂ ನೀರಸವೂ ಆದ ತತ್ತ್ವಶಾಸ್ತ್ರವನ್ನು ಕಾವ್ಯಾತ್ಮಕವಾಗಿ ನಿರೂಪಿಸುವುದನ್ನು ರೂಢಿ ಮಾಡಿದನು. ಮುಖ್ಯವಾಗಿ ಮನುಷ್ಯ, ಮತಧರ್ಮ, ರಾಜಕೀಯ, ಸಾಮಾಜಿಕ ನಂಬಿಕೆಗಳಿಗಿಂತಲೂ ಪ್ರಕೃತಿ ಪ್ರಧಾನ, ಮುಖ್ಯ ಎಂದು ಪ್ರತಿಪಾದಿಸಿ, ವೈಜ್ಞಾನಿಕ ಮಾರ್ಗದತ್ತ ಬೆರಳು ತೋರಿದ್ದು ಮನನೀಯ.
ಈಗಾಗಲೇ ಎಲ್ಲವನೂ ಹೇಳಲಾಗಿದೆ ಮತ್ತು ಬರೆಯಲಾಗಿದೆ ಎಂಬುದು ಗೊತ್ತಾಗುವುದೇ ನಾವು ಅಧ್ಯಯನನಿರತರಾದಾಗ ಮತ್ತು ಮುಖ್ಯವಾಗಿ ವಿನಯ ವಿವೇಕಗಳನ್ನು ರೂಢಿಸಿಕೊಂಡು ಸುಮ್ಮನಿದ್ದು ಗಮನಿಸಿದಾಗ ಎಂಬ ಪಾಠವನ್ನು ಲುಕ್ರೀಶಸ್‌ನಿಂದ ಕಲಿತುಕೊಳ್ಳಬೇಕು. ಗ್ರೀಕರ ಚಿಂತನೆಗಳನ್ನು ನಮ್ಮ ದಾರ್ಶನಿಕರ ಮೂಸೆಯಲ್ಲಿಟ್ಟು ಪರಿಭಾವಿಸಿದಾಗ ಎರಡು ಅಪೂರ್ಣಗಳು ಪೂರ್ಣಗೊಳ್ಳುವ ಪವಾಡವನ್ನು ಕಾಣಬೇಕು.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

