ಬೇಡಾ ಅಂತ ಬಡ್ಕೊಂಡೇ, ಆದ್ರೂ ನಿಂಗೆ ನನ್ನ ಮಾತೂಂದ್ರೆ ಅಲಕ್ಷ, ಅಷ್ಟು ಗಾಳಿ ನೆರಳು ಕೊಡ್ತಾಯಿದ್ದ ಮನೆಯ ಮುಂದಿದ್ದ ಹೊಂಗೆ ಮರಾನ ಕಡಿಸಿಬಿಟ್ಟೆ, ನಿಂಗೆ ಸ್ವಲ್ಪಾನೂ ಬುದ್ಧಿಯಿಲ್ಲ, ಈಗ ನೋಡು ಚಿಗುರಲೇ ಇಲ್ಲ, ಏನು ಮಾಡೋದು? ಅದು ಚಿಗುರಲ್ಲ, ಇನ್ನು ಚಿಗುರಲ್ಲ, ಹೋಯ್ತು ಬಿಡು, ಇನ್ನು ನೆರಳೂ ಇಲ್ಲ, ಶುದ್ಧವಾದ ಗಾಳಿನೂ ಇಲ್ಲ, ಇಬ್ರುಗೂ ಸಾಯೋ ಕಾಲದಲ್ಲಿ ಸಿಲಿಂಡರ್ ಆಕ್ಸಿಜನ್ನೇ ಗತಿ, ಎಲ್ಲಾ ನಿನ್ನ ಮೂರ್ಖತನದಿಂದ . . . .
ರೀ ಸಾಕು ನಿಮ್ಮ ಪ್ರಲಾಪಾನಾ, ಯಾಕೋ ದಿನೇ ದಿನೇ ಜಾಸ್ತಿನೇ ಆಗ್ತಾ ಇದೆ, ತೊಂದರೆಯಾದದಕ್ಕೆ ತಾನೇ ಕಡಿಸಿದ್ದು, ಅದೂ ನಿಮ್ಮನ್ನು ಕೇಳಿಯೇ ಕಡಿಸಿದ್ದು. ಆಗ ಮಾತ್ರ ಏನಾದ್ರೂ ಮಾಡ್ಕೋ, ನಿನ್ನಿಷ್ಟ – ಅಂದು ಬಿಟ್ಟು, ಈಗ ಮಾತ್ರ ನನ್ನೊಬ್ಬಳ ಮೇಲೆ ಗೂಬೆ ಕೂರ್ಸಿದ್ರೆ ನಾನು ಸುಮ್ನೆ ಇರಲ್ಲಾ. . .
ಹುಂ, ಯಾಕೆ ಸುಮ್ನೆ ಇರ್ತಿ ಹೇಳು? ಮುಂಚೆಯಿಂದ ನಾನೇ ಸರಿ, ನನ್ನಿಂದ್ಲೇ ಎಲ್ಲಾ ಅನ್ನೋ ಅಹಂ ನಿಂಗೆ, ನಿನ್ನ ಮಾತನ್ನ ನೆಚ್ಚಿಕೊಂಡು, ನನ್ ಹೆಂಡ್ತಿ ತುಂಬಾ ಜಾಣೆ, ಅವಳಿಗೆಲ್ಲಾ ಗೊತ್ತು ಅಂತ ʼಹುಂʼ ಅಂದೆ, ಆದ್ರೆ ಈಗೇನಾಗಿಹೋಯ್ತು, ಛೇ . .
ಜಗಳವಾಡುತ್ತಲೇ ಸ್ಕೂಟರ್ ತೆಗೆದುಕೊಂಡು ʼಬುರ್ʼ ಅಂತ ತಂಗಿಯ ಮನೆಯ ಕಡೆ ಹೊರಟರು ಪರಶಿವಮೂರ್ತಿಗಳು.
ಇತ್ತ ಸ್ಸೊರ್ರ, ಬಸ್ಸ ಎಂದು ಕಣ್ಣು ಮೂಗುಗಳಿಂದ ಹರಿಯ ಹತ್ತಿದ ಗಂಗೆ ಯಮುನೆಯರ ಪ್ರವಾಹವನ್ನು ಸೀರೆಯ ಸೆರಗಿನಿಂದಲೇ ತಿಕ್ಕಿ ತಿಕ್ಕಿ ಒರೆಸಿಕೊಂಡು, ಅರ್ಧ ಲೋಟಾ ಕಾಫಿ ಬಿಸಿ ಮಾಡಿ ತೆಗೆದುಕೊಂಡು ಬಂದು ಸೋಫಾದ ಮೇಲೆ ʼಧಬಕ್ʼ ಎಂದು ಕುಳಿತುಕೊಂಡು ಸ್ವಗತ ಎಂಬಂತೆ ಹೇಳಿಕೊಳ್ಳುತ್ತಾ ಮಧ್ಯೆ ಮಧ್ಯೆ ಕಾಫಿ ಗುಟುಕುರಿಸಿಕೊಳ್ಳಹತ್ತಿದರು ಗಿರಿಜಮ್ಮ.
ಅಲ್ಲಾ ನಾನೇನು ಆ ಹೊಂಗೆ ಮರಾನ ಚಿಗುರ ಬೇಡಾಂತ ಹೇಳಿದ್ನಾ, ಏನೋ ನಂದೊಬ್ಬಳದೇ ತಪ್ಪು ಅನ್ನೋಹಂಗೆ ಆಡ್ತಾರೆ, ಹೌದು, ನಂಗೂ ಗೊತ್ತು, ಅವರಿಗೆ ಆ ಹೊಂಗೆ ಮರದಲ್ಲಿ ಜೀವಾನೇ ಇದೆ ಅಂತ. ಆಗ ನಾವು ತುಮಕೂರಿನಲ್ಲಿ ಇವರ ಕೆಲಸದ ನಿಮಿತ್ತ ಇರೋವಾಗ, ಈ ಮೈಸೂರು ಮನೆಯ ಬಾಡಿಗೆಯವರು ಬಿಟ್ಟು ಹೋದರು. ಹೊಸಾ ಬಾಡಿಗೆಯವರು ಬರುವ ಮುಂಚೆ ಸುಣ್ಣ ಬಣ್ಣ ಮಾಡಿಸಲು ಬಂದ ಇವರು ತಮ್ಮ ಅಮ್ಮನ ಹೆಸರಿನಲ್ಲಿ ಈ ಹೊಂಗೆ ಮರಾನಾ ಮನೆ ಮುಂದೆ ನೆಟ್ಟು ಬಂದರು. ಸೂರ್ಯದೇವ ಬಿಸಿಲು ಕೊಟ್ಟ, ವರುಣ ದೇವ ಮಳೆ ಕೊಟ್ಟ. ತಾನೇ ತಾನಾಗಿ ಬೆಳೆದುಕೊಂಡ ಈ ಹೊಂಗೆ ಮರ, ನಾವು ರಿಟೈರ್ ಆಗಿ ಮಕ್ಕಳಿಬ್ಬರೂ ತಂತಮ್ಮ ಕಾಲಮೇಲೆ ನಿಂತು ತಂತಮ್ಮ ದಾರಿ ಕಂಡುಕೊಂಡಾಗ ಹುಟ್ಟಿದೂರಿನ ಮೋಹ ಬಿಡಲಾರದೆ ಇಲ್ಲಿ ಬಂದು ನೆಲೆಸುವಾಗ, ಎಷ್ಟು ಚೆನ್ನಾಗಿ ಹರವಾಗಿ ಹರಡಿಕೊಂಡಿತ್ತು. ಹಸಿರೆಲೆಯಿಂದ ಸಮೃದ್ಧವಾದ ಅದರ ರೆಂಬೆ ಕೊಂಬೆಗಳು ನಮ್ಮ ಮೂವತ್ತು ಮತ್ತು ನಲವತ್ತು ಅಡಿ ಸೈಟಿನಲ್ಲಿರುವ ಮನೆಯ ಪೂರ್ತಿ ಆ ಕೊನೆಯಿಂದ ಈ ಕೊನೆಯವರೆಗೆ ಹಸಿರುವಾಣಿ ಚಪ್ಪರ ಹಾಕಿದಂತೆ ಹರಡಿಕೊಂಡಿದ್ದನ್ನು ನೋಡಿ – ನೋಡೇ ನಮಗೆ ನೆರಳು, ಶುದ್ಧವಾದ ಗಾಳಿ ನೀಡಲು ನಮ್ಮ ಅಮ್ಮನ ಹೆಸರಲ್ಲಿ ನೆಟ್ಟ ಹೊಂಗೆ ಮರ ಎಷ್ಟು ಚೆನ್ನಾಗಿ ಬೆಳೆದಿದೆ, ನಮ್ಮನ್ನ ಕಾಪಾಡಲು ನಮ್ಮ ಅಮ್ಮಾನೇ ಈ ರೂಪದಲ್ಲಿ ಇಲ್ಲಿದ್ದಾಳೆ ಅಂತ ಇವರು ಸಂಭ್ರಮಿಸಿದಾಗ ನಾನೂ ಸಂತಸಪಟ್ಟಿದ್ದೇ ತಾನೇ . .
ಕೈಯಲ್ಲಿದ್ದ ಲೋಟದೊಳಗಿದ್ದ ಕಾಫಿ ಮುಗಿದರೂ ಗಿರಿಜಮ್ಮನವರ ಸ್ವಗತ ಅವ್ಯಾಹತವಾಗಿ ಸಾಗಿತ್ತು. ಈ ನಡುವೆ ಅವರಿಗೆ ಹಾಗೇ ಆಗಿತ್ತು. ಎಪ್ಪತ್ತೊಂದು ವರುಷಗಳಾಗಿದ್ದ ವಯೋಸಹಜ ದೌರ್ಬಲ್ಯಕ್ಕೋ, ಇನ್ನೇನು ಕಾರಣಕ್ಕೋ ಗೊತ್ತಿಲ್ಲ, ಸಣ್ಣ ಸಣ್ಣ ದುಃಖ ದುಮ್ಮಾನಗಳಿಗೂ, ಸುಖ ಸಂತೋಷಗಳಿಗೂ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅಲ್ಲದೇ ತಾವೂ ಒಳಗೊಳಗೇ ತುಂಬಾ ಅನುಭವಿಸುತ್ತಿದ್ದರು. ಮದುವೆಯಾಗಿ ಮುಂದಿನ ವರ್ಷಕ್ಕೆ ಅರ್ಧ ಶತಕ ಬಾರಿಸುವವರಿದ್ದರೂ ಇಬ್ಬರೂ ಸಣ್ಣ ಸಣ್ಣ ವಿಚಾರಗಳಿಗೂ ಜಗಳವಾಡುವುದೂ, ಮುನಿಸು ಮರೆತು ಮತ್ತೆ ಬೆರೆಯುವುದೂ ದಿನೇ ದಿನೇ ಜಾಸ್ತಿಯಾಗುತಿತ್ತು. ಅವರುಗಳು ಜೋರು ಜೋರಾಗಿ ಜಗಳವಾಡುವುದು ನೋಡಿ ಮೊದ ಮೊದಲು ಅಕ್ಕಪಕ್ಕದ ಮನೆಯವರುಗಳು ಇದೇನಪ್ಪಾ ಈ ವಯಸ್ಸಿನಲ್ಲಿ ಹೀಗೆ ಜಗಳವಾಡುತ್ತಾರೆ ಎಂದು ಕೊಳ್ಳುತ್ತಿದ್ದವರು, ಜಗಳವಾದ ಅರ್ಧ ಗಂಟೆಯಲ್ಲೇ ತಮ್ಮ ತಮ್ಮಲ್ಲೇ ಸಮಾಧಾನ ಹೊಂದಿ ಅಚ್ಚುಕಟ್ಟಾಗಿ ಅಲಂಕರಿಸಿಕೊಂಡು ಹೊರಗೆ ಊಟಕ್ಕೋ, ಖರೀದಿಗೋ, ಸಭೆ ಸಮಾರಂಭಗಳಿಗೋ, ಬಂಧು ಭಾಂದವರ, ಸ್ನೇಹಿತರ ಮನೆಗೋ, ಮನೆಯ ಮುಂದಿನ ಹೊಂಗೆಯ ಮರದ ನೆರಳಲ್ಲಿ ಹಾಯಾಗಿ ನಿಂತಿದ್ದ ಕಾರಿನೊಳಗೆ ತೂರಿ ಹೊರಡುತ್ತಿದ್ದ ಪರಿಯ ಕಂಡು, ಎಲ್ಲರೂ – ಅಯ್ಯೋ ಇವರ ಜಗಳವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ನಾವು ಮೂರ್ಖರು – ಎಂದು ಸುಮ್ಮನಾಗಿ ಬಿಟ್ಟರು.
ದಿನಾ ದಿನಾ ಸಣ್ಣ ಪುಟ್ಟದ್ದಕ್ಕೆಲ್ಲಾ ಜಗಳವಾಡುವುದ ಬಿಟ್ಟರೆ ಇಬ್ಬರದೂ ಅನೋನ್ಯ ದಾಂಪತ್ಯ. ಒಳ್ಳೆ ಸರ್ಕಾರೀ ನೌಕರಿಯಲ್ಲಿದ್ದ ಪರಶಿವಮೂರ್ತಿಯವರಿಗೆ ಕೈ ತುಂಬಾ ಪಿಂಚಣಿ ಬರುತಿತ್ತು. ಕೆಳಗಿನ ಮನೆಯನ್ನು ಬಾಡಿಗೆಗೆ ನೀಡಿ ಮೇಲಿನ ಮನೆಯಲ್ಲಿ ಇವರು ಇದ್ದರು. ಅಕ್ಕಪಕ್ಕದವರೊಂದಿಗೆ ಸೌಜನ್ಯಪೂರ್ಣ ನಡುವಳಿಕೆ, ಕಷ್ಟದಲ್ಲಿದ್ದವರಿಗೆ ಸಹಾಯಮಾಡುವ ಗುಣ, ಮನೆಯಲ್ಲಿ ನಡೆಸುತ್ತಿದ್ದ ಹಬ್ಬ ಹರಿದಿನಗಳು, ಮನೆಗೆ ಬರುವ ಬಂದುಗಳುಗೆ, ಸ್ನೇಹಿತರಿಗೆ ಮಾಡುತ್ತಿದ್ದ ಊಟೋಪಚಾರಗಳು, ಹೀಗೆ ಯಾವ ಕೊರತೆ ಇಲ್ಲದಂತೆ ಜೀವನ ಸಾಗಿಸುತ್ತಿದ್ದವರು ಎಪ್ಪತ್ತಾರಾದ ವಯೋವೃದ್ಧ ಪರಶಿವಮೂರ್ತಿಗಳು ಮತ್ತು ಅವರ ಪತ್ನಿ ಗಿರಿಜಮ್ಮ ದಂಪತಿ. ಗಿರಿಜಮ್ಮ, ʼಶಿವೂ ಶಿವೂʼ ಎನ್ನುತ್ತಾ ರಾಯರ ಕೈಗೆ ಬಾಯಿಗೆ ಸೇವೆ ಮಾಡುತ್ತಾ ಮನೆಯ ಸಮಸ್ತ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸುತ್ತಿದ್ದರೆ, ರಾಯರು – ಗಿರೀ, ಗಿರೀ ಎನ್ನುತ್ತಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಎಲ್ಲದಕ್ಕೂ ʼನೀನು ಹೇಳಿದಂತೆʼ ಎಂದು ಇದ್ದರೂ ಸಣ್ಣ ಪುಟ್ಟ ವಿಚಾರಗಳಿಗೆ ನಿತ್ಯ ಜಗಳ ತಪ್ಪುತ್ತಿರಲಿಲ್ಲ.
ಮೊದಲಿನಿಂದಲೂ ಅವರದ್ದು ಅದೇ ಸ್ವಭಾವ. ತೀರಾ ತುರ್ತು ಪರಿಸ್ಥಿತಿ ಎಂದಾಗ ಎಷ್ಟು ಕಮ್ಮಿ ಸಾಧ್ಯವೋ ಅಷ್ಟು ಕೆಲಸ ಮಾಡಿ, ಉಳಿದ ಕೆಲಸಗಳನ್ನು ಆಮೇಲೆ ಮಾಡಿಕೊಂಡರಾದೀತೆಂದು ಹೇಳಿ ಸುಮ್ಮನಾಗುವುದು ಪರಶಿವಮೂರ್ತಿಯವರ ಸ್ವಭಾವ. ಆ, ʼಆಮೇಲೆʼ ಮತ್ತೆ ಬರುತ್ತಲೇ ಇರಲಿಲ್ಲ. ಆದರೆ ಗಿರಿಜಮ್ಮನವರದ್ದು ಹಾಗಲ್ಲ. ಎಲ್ಲದಕ್ಕೂ ಲೆಕ್ಕಾಚಾರ, ಮುಂದೆ ಬರುವ ಖರ್ಚುವೆಚ್ಚಗಳ ಕುರಿತಾಗಿ ಉಳಿತಾಯ ಮಾಡಬೇಕು, ದುಂದುವೆಚ್ಚ ಸಲ್ಲದು, ಮಾಡುವ ಕೆಲಗಳನ್ನೆಲ್ಲಾ ಮುಂಚಿತವಾಗಿಯೇ ಯೋಚನೆ ಮಾಡಿ, ಯೋಜನೆಗಳನ್ನು ಹಾಕಿಕೊಂಡು ಅದರಂತೆ ನಡೆಯುವುದು, ಮುಂದಿನ ದಿನಗಳಲ್ಲಿ ಬೇಕಾಗುತ್ತದೆಂದು ವಸ್ತುಗಳನ್ನು ಜೋಪಾನ ಮಾಡುವುದು ಹೀಗೆ ವಿಭಿನ್ನ ವ್ಯಕ್ತಿತ್ವ. ಇಬ್ಬರಲ್ಲೂ ಇದ್ದ ದೊಡ್ಡ ಕಂದಕ ಎಂದರೆ ಗಿರಿಜಮ್ಮ ಅತ್ಯಂತ ಸೂಕ್ಷ್ಮ ಮನಸ್ಸಿನ, ಯಾವುದನ್ನೂ ಮರೆಯದ ಸ್ವಭಾವದವರಾದರೆ, ರಾಯರದ್ದು, ಸೂಕ್ಷ್ಮತೆಯ ಗಂಧವೇ ಇಲ್ಲದಂತೆ, ಬಾಯಿಗೆ ಬಂದದನ್ನು ಫಟ್ ಅಂತ, ಅದರಿಂದಾಗುವ ಪರಿಣಾಮಗಳ ಯೋಚನೆಯೇ ಇಲ್ಲದಂತೆ ಮಾತನಾಡಿಬಿಡುವ ಗುಣ. ಅಲ್ಲದೆ ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳದ ಗುಣ. ಹಾಗಾಗಿಯೇ ನಿತ್ಯದ ಜಗಳ ನಿಲ್ಲುತ್ತಲೇ ಇರಲಿಲ್ಲ. ಇಬ್ಬರಿಗೂ ಒಬ್ಬರ ಕುರಿತು ಇನ್ನೊಬ್ಬರಿಗೆ ಅಗಾಧವಾದ ಪ್ರೀತಿ, ಬಿಟ್ಟಿರಲಾಗದ ಅನುಬಂಧ. ರೋಸಿ ಹೋಗಿ ಒಮೊಮ್ಮೆ ಗಿರಿಜಮ್ಮನವರೇ ಗೊಣಗಿಕೊಳ್ಳುತ್ತಿದ್ದರು – ಏನು ಪ್ರೀತಿನೋ, ಏನು ಅನುಬಂಧಾನೋ ಇಷ್ಟು ವರ್ಷವಾದರೂ ಸದಾ ನಾವು ಕಿತ್ತಾಡುವುದು ನೋಡಿದರೆ ಏನು ಜೀವನಾನೋ ಅನ್ನಿಸಿ ಬಿಡುತ್ತದೆ – ಅಂದು. ಆದರದು ತುಟಿಯಂಚಿನ ಮಾತುಗಳು ಮಾತ್ರ ಆಗಿದ್ದವು.
ಈಗ ನಡೆದದ್ದು ಇಷ್ಟೇ. ಪ್ರತೀ ವರುಷ ಛಳಿಗಾಲದಲ್ಲಿ ಮನೆಯ ಮುಂದಿದ್ದ ಹೊಂಗೆಯ ಮರದ ಎಲೆಗಳೆಲ್ಲಾ ರಾಶಿ ರಾಶಿಯಾಗಿ ಉದುರಿ ಹೋಗುತ್ತಿದ್ದವು. ನೆಲವೆಲ್ಲಾ ಕಸದಮಯ. ಮನೆಯೆಲ್ಲಾ ಒಣಹವೆಯ ಧೂಳಕಣಗಳು. ಧೂಳನ್ನೇನೋ ಕೆಲಸದ ನಿಂಗಮ್ಮನೊಡಗೂಡಿ ಗಿರಿಜಮ್ಮನವರು ತಾವೇ ನಿಭಾಯಿಸುತ್ತಿದ್ದರೂ ಮನೆಯ ಮುಂದೆ ಬೀಳುವ ಎಲೆಗಳ ರಾಶಿಯನ್ನು ಗುಡಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕಾಲು, ಸೊಂಟ ಸಹಕಾರ ನೀಡುತ್ತಿರಲಿಲ್ಲ ಈ ಮನೆಗೆ ಬಂದ ಹೊಸದರಲ್ಲಿ ಬೆಳಿಗ್ಗೆ ವೇಳೆ ಬರುತ್ತಿದ್ದ ಯುವಕೋರ್ವನನ್ನು ತಾವೂ ಗೊತ್ತು ಮಾಡಿಕೊಂಡಿದ್ದರು. ಆ ಯುವಕ ಒಂದು ಮನೆಗೆ ತಿಂಗಳಿಗೆ ಇಂತಿಷ್ಟು ಎಂದು ಹಣ ತೆಗೆದುಕೊಂಡು ವರ್ಷಪೂರ್ತಿ ದಿನಾ ತಪ್ಪಿಸದಂತೆ ಬೆಳಗಿನ ಝಾವಕ್ಕೇ ಬಂದು ಗುಡಿಸಿಕೊಂಡು ಹೋಗುತ್ತಿದ್ದ. ಎಲೆಗಳುದುರುವ ಕಾಲ ಬಂದಾಗ ಅದನ್ನೆಲ್ಲಾ ಸ್ವಚ್ಛವಾಗಿ ಗುಡಿಸಿಕೊಂಡು ಒಂದು ಗೋಣೀಚೀಲದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ.
ಆದರೆ ಈ ವರ್ಷದ ಆರಂಭದಲ್ಲೇ ಬಂದ ಆ ಯುವಕ ತಾನು ಇನ್ನು ಮುಂದೆ ಬರಲು ಸಾಧ್ಯವಿಲ್ಲವೆಂದು ಹೇಳಿ ಬಿಟ್ಟ. ಬೇರೆ ಯಾರೂ ಆ ರೀತಿಯವರು ಸಿಕ್ಕಿರಲಿಲ್ಲ.
ಗ್ರೀಷ್ಮ ಋತು ಬಂದೊಡನೆ ಎಲೆಗಳು ಒಂದೇ ಸಮನೆ ಉದುರ ತೊಡಗಿದವು. ಮನೆಯ ಮುಂದೆ ಅಗಾಧವಾದ ಒಣಎಲೆಗಳ ಕಸದ ರಾಶಿ ಇಕ್ಕಟ್ಟಾಗ ತೊಡಗಿತು. ಕೆಳಗೆ ಬಾಡಿಗೆಗೆ ಇದ್ದ ಮನೆಯವರು ಗೇಟಿನ ಮುಂದೆ ಮಾತ್ರ ಸ್ವಲ್ಪ ಗುಡಿಸಿಕೊಂಡು ಸುಮ್ಮನಾಗುತ್ತಿದ್ದರು. ಗಿರಿಜಮ್ಮನವರಿಗೆ ಏನೂ ಮಾಡಲು ತೋಚಲಿಲ್ಲ. ಯೋಚಿಸಿದರು, ಪ್ರತೀ ವರುಷ ಎಲೆಗಳೆಲ್ಲ ಉದುರಿದ ಒಂದು ವಾರದಲ್ಲೇ ಮರದ ತುಂಬೆಲ್ಲಾ ಮೊದಲಿಗೆ ಎಳೆಗೆಂಪು ಬಣ್ಣದ ಚಿಗುರೊಡೆದು, ನಂತರದಿ ತಿಳಿಹಸಿರು ಬಣ್ಣದ ಚಿಕ್ಕ ಚಿಕ್ಕ ಎಲೆಗಳಾಗಿ ವಾರ ತುಂಬಿದಂತೆ ಗಾಢ ಹಸಿರ ಹೊಚ್ಚ ಹೊಸ ಎಲೆಗಳು ಮರದ ಎಲ್ಲಡೆಯಲ್ಲಿ ಕಿಕ್ಕಿರಿದಂತೆ ಅಡರಿ ಆ ಕೊನೆಯಿಂದ ಈ ಕೊನೆಯವರೆಗೂ ಕೆಳಗೆ ಸೂರ್ಯನ ರಶ್ಮಿಯೂ ಬೀಳದಂತೆ ಸಮೃದ್ಧವಾಗಿ ತುಂಬಿ ಕಂಗೊಳಿಸುತ್ತಿದ್ದುದನ್ನು ನೋಡಿದ್ದ ಗಿರಿಜಮ್ಮನವರು ಕೆಲಸದ ನಿಂಗಮ್ಮನ ಮಗನನ್ನು ಕರೆಸಿ, ಮರದ ದೊಡ್ಡ ದೊಡ್ಡ ಕಾಂಡಗಳನ್ನು ಬಿಟ್ಟು ರೆಂಬೆ ಕೊಂಬೆಗಳನ್ನೆಲ್ಲಾ ಕಡಿಸಿ ಬಿಟ್ಟರು. ಹೇಗೂ ಉದುರುವ ಎಲೆಗಳು ತಾನೇ ಎನಿಸಿ, ತಾವೇ ಒಂದೇ ದಿವಸ ತೆಗೆಸಿ ದುಡ್ಡು ಕೊಟ್ಟು ಸ್ವಚ್ಛ ಮಾಡಿಸಿಬಿಟ್ಟರು. – ಶಿವೂ ಹೀಗೆ ಮಾಡೋಣ ಅಂತಿದೀನಿ, ನೀವೇನಂತೀರಿ? – ಎಂದು ಕೇಳಿಯೂ ಇದ್ದರು. ಎಂದಿನಂತೆ ಪರಶಿವಮೂರ್ತಿಯವರು – ನಿನಗೆ ಹೇಗೆ ಸರಿ ಅನ್ನಿಸುತ್ತೆ ಹಾಗೆ ಮಾಡು ಗಿರೀ – ಎಂದಿದ್ದರು.
ಆದರೆ, ನಂತರದ ದಿನಗಳಲ್ಲಿ, ಒಂದು ವಾರ, ಹತ್ತು ದಿನ, ಹದಿನೈದು ದಿನಗಳಾದರೂ ಒಂದೂ ಎಲೆ ಚಿಗುರೊಡೆಯಲಿಲ್ಲ, ಆಗ ಇಬ್ಬರಲ್ಲೂ ಪ್ರಾರಂಭವಾಯಿತು ತಳಮಳ.
ಗಿರಿಜಮ್ಮನವರು – ಅಯ್ಯೋ, ನಾನು ತಪ್ಪು ಮಾಡಿಬಿಟ್ಟೆ – ಎಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಾ ನೋಯುತ್ತಾ ನವೆಯುತ್ತಿದ್ದರೆ, ಪರಶಿವಮೂರ್ತಿಯವರು ಮನೆಯ ಮುಂದಿನ ಮರವನ್ನು ದಿಟ್ಟಿಸಿದಾಗಲೆಲಲ್ಲಾ ಹೆಂಡತಿಯನ್ನು ಹಳಿಯ ತೊಡಗಿದರು, ಇಂದೂ ಮತ್ತೊಮ್ಮೆ ಅದರ ಪುನರಾವರ್ತನೆ ಆಯಿತು.
ಆಚೆ ಬಂದ ಪರಶಿವಮೂರ್ತಿಯವರಿಗೆ ಅದೇನನ್ನಿಸಿತೋ ತಿಳಯದು, ತಂಗಿಯ ಮನೆಗೂ ಹೋಗದೆ ಸ್ಕೂಟರಿನಲ್ಲಿ ದೂರದ ಕಾರಂಜಿ ಕೆರೆಯ ಉದ್ಯಾನವನಕ್ಕೆ ಹೋಗಿ ಒಂದು ಮರದ ನೆರಳಿನಲ್ಲಿ ಕುಳಿತು ದೀರ್ಘವಾಗಿ ಯೋಚಿಸಿದರು. ಯಾಕೋ ತುಂಬಾ ಖೇದವೆನಿಸಿತು. ಮನೆಗೆ ಬಂದವರೇ ಹೆಂಡತಿಯೊಡನೆ ಮಾತಿಗಿಳಿದರು. ಮಾತುಕತೆಯಾಡಿ ಪರಿಸ್ಥಿತಿಯನ್ನು ತಿಳಿಮಾಡುವ ಮನಸ್ಸಿನಿಂದ ಬಂದಿದ್ದರೂ ಇಬ್ಬರೂ ಹಿಂದಿನ ಹಲವು ವರುಷಗಳಿಂದ ಮಡುಗಟ್ಟುದ್ದ ನಿರಾಶೆ, ಅಸಹನೆಗಳನ್ನೆಲ್ಲಾ ಹೊರಹಾಕುತ್ತಾ ವಾದ ಮಾಡ ತೊಡಗಿದರು.
ಗಿರಿಜಮ್ಮಾ ಅಲವತ್ತುಕೊಂಡರು – ಶಿವೂ, ಶಿವೂ ನಿಮ್ಮಿಂದ ನನಗೆ ಒಂದಷ್ಟು ಸೂಕ್ಷ್ಮತೆ, ನನ್ನರಿವಿಗೆ ಬರುವಂತ ಮುಷ್ಠಿ ಪ್ರೀತಿ, ಬೊಗಸೆ ಅಭಿಮಾನ ಬೇಕು ಶಿವು, ಅದಿಲ್ಲದೆ ಬದುಕುವುದು ನನಗೆ ನಿರರ್ಥಕ ಬಾಳು ಎನಿಸಿಬಿಟ್ಟಿದೆ – ಎನ್ನುತ್ತಾ ಮನದಲ್ಲಿ ಅದುಮಿಟ್ಟಿದ್ದ ನೋವುಗಳನ್ನೆಲ್ಲಾ ಹೊರಹಾಕಿದರು.
ಪರಶಿವ ಮೂರ್ತಿಯವರಿಗೂ ಯಾಕೋ ತಿಳಿಯದು ಜ್ಞಾನೋದಯವಾದಂತೆನಿಸಿತು. ಎಲ್ಲವನ್ನೂ ಮೊದಲ ಬಾರಿಗೆ, ಮೊದಲಬಾರಿಗೆ ಕಿವಿಗೊಟ್ಟು ಆಲಿಸಿದರು, ತುದಿನಾಲಿಗೆಗೆ ಬಂದ ಮಾತುಗಳಿಗೆ ಕಡಿವಾಣ ಹಾಕಿದರು. ಕಿವಿಗೆ ಬಿದ್ದ ಮಾತುಗಳಿಗೆ ಪ್ರತಿಕ್ರಿಯೆಯಾಗಿ ತುದಿನಾಲಿಗೆಯ ಮಾತುಗಳು ಹೊರಬಾರದ್ದರಿಂದ ಅವು ತಲೆಗಿಳಿದು, ಅಲ್ಲಿ ಅದು ಮಥಿಸಿ, ಹೃದಯಕ್ಕಿಳಿಯಿತು. ಹೃದಯಕ್ಕಿಳಿದ ಬಾಳಗೆಳತಿಯ ಆಸೆಗಳು ಅಂತರಾಳಕ್ಕಿಳಿಯಿತು. ಅಂತರಾಳ ಹೇಳಿತು – ಶಿವೂ ಇಷ್ಟೇ, ಇಷ್ಟೇ ಚಿಕ್ಕ ಚಿಕ್ಕ ಆಸೆಗಳು ನಿನ್ನ ಗಿರಿಯದು. ನೀನು ಮನಸ್ಸು ಮಾಡು, ಈ ಬಾಳ ಸಂಜೆಯಲ್ಲಾದರೂ ನಿನ್ನ ಗಿರಿಯ ಚಿಕ್ಕ ಚಿಕ್ಕ ಆಸೆಗಳನ್ನು ಪೂರೈಸು, ಸಾಧ್ಯವಾಗದ, ಬೆಟ್ಟ ಕಡಿಯುವ, ನೆಲ ಕೊರೆದು ನೀರು ಬರಿಸುವ ಆಸೆಗಳಲ್ಲ ಶಿವು, ನಿನ್ನ ಗಿರಿಯದ್ದು, ಏಳು, ಎದ್ದೇಳು, ಪೂರೈಸುವ ಸಂಕಲ್ಪವನ್ನು ತೊಡು, ಅದನ್ನು ಅವಳಲ್ಲಿ ನಿವೇದನೆ ಮಾಡು, ಬಾಳು ಬಂಗಾರ ಮಾಡಿಕೋ – ಎಂದಿತು.
ಮಂದ ತಲೆ ಹೌದಲ್ಲವಾ? ಎಂದಿತು. ಎದ್ದು ಬಂದು ಗಿರಿಜೆಯ ಪಕ್ಕದಲ್ಲಿ ಕುಳಿತು ಅವರ ಅಂಗೈಯನ್ನು ತಮ್ಮ ಕೈಯಲ್ಲಿಟ್ಟು ಮತ್ತೊಂದು ಕೈಯಿಂದ ಅದನ್ನು ಒತ್ತಿ ಹಿಡಿದು ಮನದಲ್ಲಿ ಮೂಡಿದ ಭಾವನೆಗಳಿಗೆ ದನಿ ನೀಡಿದರು. ಮನದಾಳದಿಂದ ಕ್ಷಮಾಪಣೆ ಕೇಳಿದರು. ಮುಂದಿನ ದಿನಗಳಲ್ಲಿ ಮಾಗಿದ ಮನದ, ಪರಿಪಕ್ಷ ಪ್ರೀತಿಯ, ಅನುರಾಗದ ಹೊಳೆಯ ಶುದ್ದವಾದ ಪ್ರೇಮಮಯ ಸಂಸಾರದ ವಾಗ್ದಾನ ಮಾಡಿದರು.
ಗಿರಿಜಮ್ಮನವರು ತಮ್ಮನ್ನು ತಾವೇ ಚಿವುಟಿಕೊಂಡರು. ಏಕೆಂದರೆ ಬಂಡೆಗಲ್ಲಲ್ಲಿ ಬೆಳೆ ಬೆಳೆಯಲು ಸಾಧ್ಯವೇ, ಒನಕೆ ಚಿಗುರಲು ಸಾಧ್ಯವೇ, ಎಂದೆನಿಸಿತ್ತು. ಚಿವುಟಿದಾಗ ನೋವಾಯಿತು. ಭಗವಂತನ ದಯೆಯೊಂದಿದ್ದರೆ ಅಸಾಧ್ಯವಾದುದೂ ಸಾಧ್ಯವಾಗುವುದು ಎಂದೆನಿಸಿತು ಅವರಿಗೆ. ಶಾಂತ ಮನದ ನಿದ್ರೆ ಇಬ್ಬರನ್ನೂ ಆವರಿಸಿತು.
ಗಾಢ ನಿದ್ರೆಯಲ್ಲಿದ್ದ ಗಿರಿಜಮ್ಮನವರಿಗೆ ಕಿಟಕಿಯಾಚೆಯಿಂದ ಎಳೆದನಿಯ ʼಕುಹೂ, ಕುಹೂʼ ಕೇಳಿಸಿತು. ಅರುಣ ತನ್ನ ರಥವೇರಿ ಭೂಮಿತಾಯಿಗೆ ಕುಂಕುಮ ರಂಗಿನ ಸೀರೆಯ ಉಡುಗೊರೆಯ ಸಮರ್ಪಿಸುತ್ತಿದ್ದ. ಕಿಟಕಿಯಡೆಯಿಂದ ತಣ್ಣಗಿನ ಗಾಳಿ ಬೀಸಿದಂತಾಗಿ ದೂರಹೋದಂತೆನಿಸಿತು. ದೂರ ಹೋಗಲು ಬಿಡಬಾರದೆಂಬ ಸಂಕಲ್ಪ ತೊಟ್ಟ ಗಿರಿಜಮ್ಮನವರು ಎದ್ದು ಬಂದು ಮುಂಬಾಗಿಲ ತೆಗೆದರು. ಎರಡು ಪುಟ್ಟದೆಂದರೆ ಪುಟ್ಟ ಮರಿಕೋಗಿಲೆಗಳು ಹೊಂಗೆಯ ಮರದ ಟೊಂಗೆಯ ಮೇಲೆ ಕುಳಿತು ಪಿಕಗಾನ ಆರಂಭಿಸಿತ್ತು. ಏಕೆಂದರೆ ಹೊಂಗೆಯ ಮರದ ಟೊಂಗೆ ಟೊಂಗೆಗಳಲ್ಲಿ ಚಿಗುರು ಪಲ್ಲವಿಸ ತೊಡಗಿತ್ತು.
ನನ್ನ ಶಿವು, ತಮಗೆ ಉಂಟಾಗಿದ್ದ ನೋವು ನಿರಾಶೆಗಳನ್ನೆಲ್ಲಾ ನನ್ನ ಮೇಲೆ ತೋರಿಸಿ ಹಗುರಾಗುತ್ತಿದ್ದರು, ನನ್ನ ಮನದಲ್ಲಿ ಮಡುಗಟ್ಟಿದ್ದ ತಪ್ಪಿತಸ್ಥ ಭಾವವು ಅದಕ್ಕೆ ಶಿವು ತೊಡಿಸಿದ್ದ ಉಕ್ಕಿನಂಥಹ ಕಠಿಣವಾದ ಅಂಗಿ, ಎಲ್ಲವೂ ಗಟ್ಟಿಯಾದ ಮಂಜಿನಗಡ್ಡೆಯಾದಂತೆನಿ ಬಿಟ್ಟಿತ್ತು. ಶಿವು ಮಾಡಿದ ವಾಗ್ದಾನದ ಅರುಣರಾಗಕ್ಕದು ಮಂಜಾಗಿ, ನೀರಾಗಿ ಕರಗಿ ಜುಳುಜುಳು ನಿನಾದದೊಂದಿಗೆ ಹರಿಯತೊಡಗಿದ ನದಿಯಾದ ಭಾವಾನುಭವ ಮನದಲ್ಲಿ ಮೂಡಿ ಮನಸ್ಸು ವಯಸ್ಸು ಎರಡೂ ಇಪ್ಪತ್ತು ವರುಷಗಳಷ್ಟು ಚಿಕ್ಕದಾದಂತೆನಿಸಿತು.
ಚಿಗುರೆಯ ಉತ್ಸಾಹದಿ ಒಳಗೋಡಿದ ಗಿರಿಜಮ್ಮನವರು ತಲೆಸ್ನಾನ ಮಾಡಿ ಹಸಿರು ಸೀರೆಯನ್ನುಟ್ಟು ಮನೆಯ ಮುಂದೆ ಗುಡಿಸಿ, ಸಾರಿಸಿ, ಬಣ್ಣದ ರಂಗೋಲಿ ಬಿಡಿಸ ತೊಡಗಿದರು.
ಎದ್ದು ಬಂದ ಪರಶಿವಮೂರ್ತಿಯವರು ಬಾಗಿಲಿಗೊರಗಿ ನಿಂತು ಹೆಂಡತಿಯ ಸಡಗರವ ಕಂಡು ಉಲಿದರು – ಈ ವಯಸ್ಸಿನಲ್ಲಿ ನಿಗಿಷ್ಟೊಂದು ಉತ್ಸಾಹವೇ ಗಿರಿ?
ಗಿರಿಜಮ್ಮ ಹೊಂಗೆಯ ಮರದೆಡೆಗೆ ಬೆಟ್ಟು ಮಾಡಿ ಅದು ಚಿಗುರ ತೊಡಗಿರುವುದ ತೋರಿಸಿ, ಹೇಳಿದರು
ವಸಂತನಾಗಮನವಾದಾಗ ಪ್ರಕೃತಿ ಹಸಿರು ಎಲೆಗಳಿಂದ ಪಲ್ಲವಿಸಿ ಬಣ್ಣ ಬಣ್ಣದ ಹೂವುಗಳನರಳಿಸಿ, ರಂಗು ರಂಗಾದ ಸಿಹಿ ಹುಳಿಗಳ ಹಣ್ಣುಗಳನ್ನು ನೀಡದಿರಲು ಸಾಧ್ಯವೇ ಶಿವೂ, ನಿಮ್ಮ ಅಮ್ಮನ ಹೆಸರಲ್ಲಿ ನೆಟ್ಟ ಹೊಂಗೆ ಮರ ಚಿಗುರಿದೆ ನೋಡಿ ಶಿವೂ, ಹಾಗೆಯೇ ಉತ್ಸಾಹಕ್ಕೆ, ಹುರುಪಿಗೆ, ಹುಮ್ಮಸ್ಸಿಗೆ ವಯಸ್ಸಿನ ಹಂಗೇಕೆ ಶಿವೂ, ಅದಕ್ಕೆ ಪ್ರೀತಿ ಸಿಂಚನದ ತುಂತುರು ಮಳೆ ಹನಿಸಿದರಾಯಿತು, ತನ್ನ ಫಲವನ್ನದು ನೀಡಿಯೇ ತೀರುತ್ತದೆ, ಹುಣಸೇಮರ ಮುಪ್ಪಾದರೇನು ಅದರ ಹುಳಿ ಮುಪ್ಪೇ, ಮಾವಿನ ಮರ ಮುದಿಯಾದರೇನು ಅದರ ಹಣ್ಣಿನ ಸವಿಗೆ ಮುಪ್ಪೇ – ಎಂದು ಹೇಳುತ್ತಾ ಬಣ್ಣದ ರಂಗೋಲಿಯ ಕೊನೆಯ ಚುಕ್ಕೆಯನು ಸೇರಿಸಿ ಗೆರೆ ಎಳೆದು ಎದ್ದು ಬಂದು ಪರಶಿವಮೂರ್ತಿಗಳ ಕೈಗೆ ಕೈ ಜೋಡಿಸಿದರು.
ವಸಂತನಾಗಮನವಾಗಿತ್ತು, ಜಗತ್ತಿಗೆ, ಹೊಂಗೆಮರಕ್ಕೆ ಹಾಗೂ ಪರಶಿವ, ಗಿರಿಜೆಯರ ಮನಕ್ಕೆ ಮಿಲನಕ್ಕೆ ವಸಂತನಾಗಮನದ ಸ್ಪರ್ಶವಾಗಿತ್ತು.

–ಪದ್ಮಾ ಆನಂದ್, ಮೈಸೂರು

