ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 10
ನೃಗೋಪಖ್ಯಾನ
ಕೃಷ್ಣಕುಮಾರ ಯದುವೀರರೆಲ್ಲಾ
ವಿಹಾರಕೆ ತೆರಳಿ ದಣಿವಾಗೆ
ಬಾಯಾರಿಕೆಯಲಿ ನೀರ ಹುಡುಕುತ
ಕಂಡ ಬಾವಿಯೊಂದರಲಿ ಇಣುಕಿ ನೋಡೆ
ಬಾವಿ ನೀರಲ್ಲದೆ ಒಣಗಿತ್ತು
ಅದರಡಿಯಲಿ ಒಂದು ಓತಿಕೇತವು
ಮೇಲಕ್ಕೆ ಬರಲು ಹವಣಿಸುತ್ತಿರೆ
ಕನಿಕರದಿಂದ ರಣವೀರರಾದ
ಪ್ರದ್ಯುಮ್ನ ಸಾಂಬ ಚಾರುಭಾನು ಅನಿರುದ್ಧರು
ಅದ ಅಲುಗಾಡಿಸಲೂ ಸಾಧ್ಯವಾಗದೆ
ನೂಲುಹಗ್ಗಗಳ ತಂದು ಅದಕೆ ಸುತ್ತಿ
ಎಳೆದಾಡಿದರೂ ಕದಲದಿರೆ
ಆಶ್ಚರ್ಯಕರ ವೃತ್ತಾಂತ ತಿಳಿದ ಕೃಷ್ಣ
ಅದರ ಬಾಲವನು ಎಡಗೈಯಿಂದೆತ್ತಿ
ಸುಲಭವಾಗಿ ಮೇಲಕೆ ತಂದನು
ಕೃಷ್ಣನ ಹಸ್ತ ಸೋಕಿದೊಡನೆ
ಆ ಪ್ರಾಣಿಯು ತನ್ನ ದೇಹವ ನೀಗಿ
ದಿವ್ಯ ಪುರುಷಾಕೃತಿಯಾಗಿ ತೋರೆ
ಕೃಷ್ಣನ ಮಾತಿಗೊಪ್ಪಿದಾಪುರುಷ
ತನ್ನ ಜನ್ಮವೃತ್ತಾಂತವನರುಹಿದ
ಇಕ್ಷಾಕು ಮಹಾರಾಜ ಪುತ್ರ
ನೃಗ ಮಹಾದಾನಿ
ಗೋದಾನ ಭೂದಾನ ಹಿರಣ್ಯದಾನ
ಅನ್ನದಾನಾದಿಗಳ ಯೋಗ್ಯರಿಗೆ ನೀಡಿ
ಶ್ರೀಹರಿಯ ಪ್ರೀತಿಗೆ ಪಾತ್ರನಾದವ
ಹೀಗಿರಲೊಮ್ಮೆ ಓರ್ವ ಬ್ರಾಹ್ಮಣನಿಗೆ
ದಾನ ಕೊಟ್ಟ ನೂರಾರು ಹಸುಗಳಲ್ಲಿ
ಒಂದು ಹಸು ಮಂದೆಯಿಂದ ಬೇರ್ಪಟ್ಟು
ನೃಗನ ಮತ್ತೊಂದು ಗೋವುಗಳ
ಮಂದೆಯಲಿ ಬೆರೆತುಹೋಯಿತು
ನಂತರದಿ ಬೇರೊಬ್ಬ ಬ್ರಾಹ್ಮಣಗೆ
ಆ ಮಂದೆಯ ದಾನಮಾಡೆ ಆ ವಿಪ್ರ
ಮನೆಗೆ ತನ್ನ ಮಂದಿಯೊಂದಿಗೆ ನಡೆಯುತಿರೆ
ಹಿಂದಿನ ದಿನ ದಾನ ಪಡೆದ ವಿಪ್ರ
ಈ ಮಂದೆಯಲ್ಲಿರ್ಪ ಒಂದು ಗೋವು
ತನ್ನದೆಂದು ವಾಜ್ಯ ತೆಗೆಯೆ
ತಿಳಿಯದೇ ಆದ ದೋಷವ ಕ್ಷಮಿಸಲು ಕೋರೆ
ಒಪ್ಪದ ಇಬ್ಬರೂ ಬ್ರಾಹ್ಮಣರು
ದತ್ತಾಪಹಾರ ಮಾಡಿದ
ಗೋವ ಸ್ವೀಕರಿಸದೆ ನಡೆದರು
ಕೆಲಕಾಲ ಕಳೆದ ನಂತರ
ನೃಗ ಮರಣಿಸೆ ಯಮಲೋಕದಿ
ಅವನ ಪುಣ್ಯ ಪಾಪ ಕರ್ಮವ ವಿಶ್ಲೇಷಿಸಿ
ಮೊದಲು ಪಾಪ ಫಲವನುಭವಿಸಲು ಸಿದ್ಧನಾಗೆ
ಭೂಮಿಗೆ ಬಿದ್ದ ನೃಗ ಅಸಹ್ಯ ಓತಿಕೇತ ಜನ್ಮವ ತಾಳಿ
ಅಪಾರ ದುಃಖವ ಅನುಭವಿಸಿ ಪುನಃಜನ್ಮಜ್ಞಾನವಿದ್ದವ
ವಿಮೋಚನಾ ಕಾಲವ ನಿರೀಕ್ಷಿಸುತಿರೆ
ಸಕಾಲದಿ ಕೃಷ್ಣ ಹಸ್ತಸ್ಪರ್ಶವಾಗಿ
ಆ ಜನ್ಮಬಂಧನಿವಾರಣೆಯಾಗಿ
ಪುಣ್ಯಫಲವನನುಭಿಸಲು
ಎಲ್ಲರ ಸಮಕ್ಷಮದಿ ಕೃಷ್ಣ ಸಮ್ಮತಿ ಪಡೆದು
ಭಕ್ತಿಯಿಂ ಭಗನ್ನಾಮೋಚ್ಛಾರ ಮಾಡುತ
ದಿವ್ಯ ವಿಮಾನವನ್ನೇರಿ ಪಯಣಿಸಿದನು
ಬ್ರಾಹ್ಮಣರಿಗಿತ್ತ ದಾನವ ಅಜ್ಞಾನದಿಂದಾಗಲೀ
ಪ್ರಮಾದದಿಂದಾಗಲೀ ಅಪಹರಿಸಿದವರಿಗೆ
ಹಿಂದಿನ ಮತ್ತು ಮುಂದಿನ ಹತ್ತು ತಲೆಮಾರುಗಳವರೆಗೆ
ತಾಪದಾಯಕವಾಗುವುದು
ಸಂವತ್ಸರಗಳ ಕಾಲ ಕುಂಭೀಪಾಕದ
ನರಕವಾಸ ತಪ್ಪದು
ಎಂದು ಶ್ರೀಕೃಷ್ಣ ಸಕಲರಿಗೂ ತಿಳಿಸಿದ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45313

-ಎಂ. ಆರ್. ಆನಂದ, ಮೈಸೂರು

