ಪುಸ್ತಕ-ನೋಟ

ಪುಸ್ತಕ ನೋಟ : ನೋಟಿನ ನಂಟು

Share Button

ಪುಸ್ತಕ : ನೋಟಿನ ನಂಟು
ಲೇಖಕರು : ಶ್ರೀ ರಘುಪತಿ ತಾಮ್ಹನ್ ಕರ್
ಪ್ರಕಾಶಕರು : ಕವಿತಾ ಪ್ರಕಾಶನ, ಮೈಸೂರು
ಪುಟಗಳು : 136
ಬೆಲೆ : ರೂ.150/-

ಎರಡು ದಶಕಗಳ ಹಿಂದೆ, ನಮಗೆ ಲಕ್ಷ್ಮಿಯ ಸ್ವರೂಪವಾದ ಹಣ ಮತ್ತು ಹಣದ ಮೂರ್ತರೂಪವಾದ ‘ನೋಟಿನ ನಂಟು’ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ವಾಸ್ತವ ಚಿತ್ರಣವಿತ್ತು. ಇತ್ತೀಚಿನ ದಿನಗಳಲ್ಲಿ ವಿವಿಧ ರೂಪದ ನಗದುರಹಿತ ಡಿಜಿಟಲ್ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತಿರುವುದರಿಂದ, ಬಹುತೇಕ ಕಡೆ ‘ನೋಟು’ ಇಲ್ಲದೇ ವ್ಯವಹರಿಸಲು ಸಾಧ್ಯವಾಗುತ್ತಿದೆಯಾದರೂ, ನಾವೆಲ್ಲಾ ಈಗಲೂ ಸ್ವಲ್ಪಮಟ್ಟಿಗೆ ನೋಟಿನ ನಂಟಿನಲ್ಲಿಯೇ ಇದ್ದೇವೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶ್ರೀ ರಘುಪತಿ ರಘುಪತಿ ತಾಮ್ಹನ್ ಕರ್ ಅವರು ತಮ್ಮ ವೃತ್ತಿಜೀವನದಲ್ಲಿ ತಾವು ಕಂಡ ಅಥವಾ ಸೃಷ್ಟಿಸಿದ ಹಲವಾರು ವಿಚಾರಗಳಿಗೆ , ತಿಳಿಹಾಸ್ಯ ಶೈಲಿಯಲ್ಲಿ ಅಕ್ಷರ ರೂಪ ಕೊಟ್ಟು ‘ನೋಟಿನ ನಂಟು’ ಪುಸ್ತಕವನ್ನು ಓದುಗರ ಕೈಯಲ್ಲಿ ಇರಿಸಿದ್ದಾರೆ.

ಆರಂಭದಲ್ಲಿ ಲಘುದಾಟಿಯ ಲಹರಿ ಶೈಲಿಯ ‘ಮಹಾಲಕ್ಷ್ಮಿ ಯೋಗ, ಸಕ್ಕರೆ ಹಂಚಿದ ತಂದೆ’ ,’ನೋಟಿನ ಏಣಿ’, ‘ಬಸ್ ಖರೀದಿಸುವಷ್ಟು ಟಿಕೆಟ್ ಸಂಗ್ರಹ’ ಬರಹಗಳು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಾ, ಲೇಖಕರ ವಿಶಿಷ್ಟ ಹವ್ಯಾಸಗಳ ಬಗ್ಗೆಯೂ ಬೆಳಕು ಚೆಲ್ಲುತ್ತವೆ. ‘ಕಟ್ಟು ಬುತ್ತಿ ಮುಂದೆ ಉಣಲು’ ಬರಹವು ಭಾವನೆಗಳ ಲೇಪನದೊಂದಿಗೆ ಹಂಚಿ ಉಣ್ಣುವ ಸವಿಯನ್ನು ತಿಳಿಸುತ್ತದೆ.

ಈಗ ಮಧ್ಯವಯಸ್ಸು ದಾಟಿರುವ ಬಹುತೇಕ ಹಾಲಿ-ನಿವೃತ್ತ ಉದ್ಯೋಗಸ್ಥರು ಕೆಲವು ವರ್ಷಗಳ ಮೊದಲು ತಮ್ಮ ಸಂಬಳದ ‘ಡಿಮಾಂಡ್ ಡ್ರಾಫ್ಟ್’ ಅನ್ನು ಬ್ಯಾಂಕ್ ನ ‘ಪೇ ಇನ್ ಸ್ಲಿಪ್’ ಜೊತೆ ಕೌಂಟರ್ ನಲ್ಲಿ ಕೊಟ್ಟು, ಟೋಕನ್ ಪಡೆದು, ಸರದಿಯಲ್ಲಿ ಕಾದು ‘ನಗದು’ ಪಡೆದವರೇ. ಹಾಗಾಗಿ ಝಣ ಝಣ ಎಣಿಸುವ ಹಣದ ಬಗ್ಗೆ ಬ್ಯಾಂಕ್ ನ ಕಾರ್ಯವೈಖರಿಯನ್ನು ಸ್ವಲ್ಪವಾದರೂ ಕಣ್ಣಾರೆ ಕಂಡವರು. ತಮಗೆ ಹಣದ ಅವಶ್ಯಕತೆ, ಸಮಯಾಭಾವ ಇದ್ದಾಗ ಕೌಂಟರ್ ನಲ್ಲಿರುವ ಕ್ಯಾಶಿಯರ್ ‘ಬಲು ನಿಧಾನಿ’ ಎಂದು ಬಯ್ದುಕೊಂಡವರು. ಇಂತಹ ವರ್ಗದವರಿಗೆ , ತನ್ನಿಂತಾನೇ ನೆನಪಿನ ಸುರುಳಿಯನ್ನು ತೆರೆದಿಟ್ಟು , ಮುಖದಲ್ಲಿ ಮಂದಹಾಸ ಮೂಡಿಸುವ ಸೊಗಸಾದ ಬರಹಗಳು ಇಲ್ಲಿವೆ. ಉದಾಹರಣೆಗೆ : ‘ಹಣ ಎಣಿಸಲು ಜುಮ್ಮೆನ್ನಿವುದೀ ಮನ’. ಆಗ ಹಣ ಎಣಿಸುವವರ ಮನದಲ್ಲಿ ಡರ್ ( ಹಿಂದಿ ಭಾಷೆಯ ‘ಭಯ’) ಇತ್ತು, ಈಗಿನ ಹಣ ಎಣಿಸುವ ಯಂತ್ರವೂ ‘ಡರ್’ ಎಂದು ಭಯಪಡಿಸುವ ಸದ್ದು ಮಾಡುತ್ತಾ ನಡುಗುತ್ತದೆ ಎಂಬುದು ಲೇಖಕರ ಸೊಗಸಾದ ಪದಲಾಲಿತ್ಯ! ಬ್ಯಾಂಕ್ ಉದ್ಯೋಗಿಗಳು ಹಣವನ್ನು ನಿರ್ವಹಿಸುವಾಗ ಇರಬೇಕಾದ ಸೂಕ್ಷ್ಮತೆ, ಬದ್ಧತೆ, ಜಾಗರೂಕತೆ ಇತ್ಯಾದಿ ಸಾಮಾನ್ಯ ಗ್ರಾಹಕರಿಗೆ ನಿಲುಕದ ವಿಚಾರಗಳು. ಈ ಪುಸ್ತಕದಲ್ಲಿ ಬ್ಯಾಂಕ್ ನ ಕಾರ್ಯನಿರ್ವಹಣೆಯ ಹಲವಾರು ಮಜಲುಗಳನ್ನು ಚಿತ್ರಿಸಿದ್ದಾರೆ.

‘ಬ್ಯಾಂಕಿನ ಲಾಂಛನವಾಗಿ ನಾಯಿ’ ಬರಹವು ನಗುವಿನ ಅಲೆ ಹೊಮ್ಮಿಸಿದರೆ, ‘ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್’ , ‘ಸಾಲ ಪಡೆದು ಎಂಜಿನಿಯರ್ ಆದ ಗೌಂಡಿ’ ಮುಂತಾದ ಬರಹಗಳು ಲೇಖಕರು ತಮ್ಮ ವೃತ್ತಿಯ ಜೊತೆಗೆ ಅಳವಡಿಸಿಕೊಂಡ ಸಾಮಾಜಿಕ ಕಳಕಳಿಯನ್ನೂ ತೋರಿಸುತ್ತವೆ.

ಹಲವಾರು ಬಡ ವಿದ್ಯಾರ್ಥಿಗಳಿಗೆ, ಕುಶಲ ಕರ್ಮಿಗಳಿಗೆ, ಕೃಷಿಕರಿಗೆ , ಅವಿದ್ಯಾವಂತರಿಗೆ ತಮಗೆ ಅನ್ವಯವಾಗುವಂತಹ ಆರ್ಥಿಕ ಸಹಾಯ ಬ್ಯಾಂಕ್ ಸಾಲರೂಪದಲ್ಲಿ ಲಭ್ಯವಿದೆ ಎಂಬ ಮಾಹಿತಿ ಗೊತ್ತಿರುವುದಿಲ್ಲ. ಈ ನಿಟ್ಟಿನಲ್ಲಿ, ಬ್ಯಾಂಕ್ ಮ್ಯಾನೇಜರ್ ಒಬ್ಬರು ತನ್ನ ವೃತ್ತಿಪರತೆಯೊಂದಿಗೆ, ಸಾಮಾಜಿಕ ಕಳಕಳಿಯನ್ನೂ, ಸಮಯ ಪ್ರಜ್ಞೆಯನ್ನೂ ಜೋಡಿಸಿಕೊಂಡರೆ ಅತ್ಯುಪಯುಕ್ತವಾದ ಕೆಲಸವನ್ನು ಮಾಡಬಹುದು ಎಂಬುದಕ್ಕೆ ‘ಸಾಲದಿಂದ ಮುಕ್ತಿ ಪಡೆದ ಹಗೇವು ಗಣಪ’, ‘ಬ್ಯಾಂಕ್ ನಿಂದ ಕೆರೆ ಹೂಳೆತ್ತುವಿಕೆ‘ ಮೊದಲಾದ ಬರಹಗಳಲ್ಲಿ ನಿದರ್ಶನಗಳನ್ನು ಕಾಣುತ್ತೇವೆ.

ಇನ್ನು ಬ್ಯಾಂಕ್ ಮ್ಯಾನೇಜರ್ ಹುದ್ದೆಯ ಆಳ-ವಿಸ್ತಾರ, ಕಾರ್ಯ ವೈವಿಧ್ಯತೆ, ವೃತ್ತಿರಂಜನೆ, ವರ್ಗಾವಣೆ, ಸ್ಥಳೀಯ ಜನರೊಂದಿಗೆ ಹಬ್ಬಗಳ ಆಚರಣೆ, ಕೆಲಸದಲ್ಲಿ ಸಿಗುವ ಆತ್ಮತೃಪ್ತಿ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡ ಲೇಖನಗಳನ್ನು ಓದಿಯೇ ಸಂತೋಷಿಸಬೇಕು. ಜೊತೆಗೆ ಕೆಲವು ಪುಟಗಳಲ್ಲಿ ಕಾಣಿಸಿಕೊಂಡ ಕಚಗುಳಿಯಿಡುವಂತಹ ಹಾಸ್ಯ ಪ್ರಸಂಗಗಳು, ಚುಟುಕು ಕವನಗಳು ಇತ್ಯಾದಿ ಓದುಗರಿಗೆ ಮುದ ಕೊಡುತ್ತವೆ. ‘ನೋಟಿನ ನಂಟು’ ಪುಸ್ತಕದ ವೈಶಿಷ್ಟವೇನೆಂದರೆ, ಹೆಚ್ಚಿನ ಬರಹಗಳು 1-4 ಪುಟಗಳ ಮಿತಿಯಲ್ಲಿರುವ ಬಿಡಿ ಬರಹಗಳು. ಹಾಗಾಗಿ ಪುಸ್ತಕದ ಆರಂಭದಿಂದ ಅನುಕ್ರಮಣಿಕೆಯಾಗಿ ಓದಲೇಬೇಕಿಂದಿಲ್ಲ. ಓದುಗರ ಆಯ್ಕೆಗೆ ತಕ್ಕಂತೆ ಓದಿದರೂ ಓದಿನ ಸ್ವಾರಸ್ಯಕ್ಕೆ ಧಕ್ಕೆಯಾಗುವುದಿಲ್ಲ .

ತಮ್ಮ ವೃತ್ತಿಜೀವನದ ವಿಶೇಷ ಅನುಭವಗಳನ್ನು ರಸವತ್ತಾಗಿ ಅಕ್ಷರಗಳ ಮೂಲಕ ನಮಗೂ ತಿಳಿಯಪಡಿಸಿದ ಶ್ರೀ ರಘುಪತಿ ತಾಮ್ಹನ್ ಕರ್ ಅವರಿಗೆ ಧನ್ಯವಾದಗಳು.

-ಹೇಮಮಾಲಾ.ಬಿ. ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *