ಏನಿದು, ಜೀವನದ ಕುರಿತಾಗಿ ವ್ಯಾಖ್ಯಾನ ನೀಡ ಹೊರಟಿದ್ದಾರೆಯೇ? – ಎಂದು ಹುಬ್ಬೇರಿಸಬೇಡಿ. ಜೀವನದ ಕುರಿತು ನನ್ನ ಮಸ್ತಕದಲ್ಲಿ ಮೂಡಿ ಬಂದ, ಕಾಡಿದ ಕೆಲವು ಚಿಂತನಗಳು, ಚಿಂತೆಗಳು, ಅವುಗಳಿಂದ ಉಂಟಾದ ಮಂಥನಗಳಿಗೆ ಅಕ್ಷರ ರೂಪ ಕೊಡುವ ಪಯತ್ನವಿದಷ್ಟೇ.
ಜೀವನ ಎಂಬುದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಪ್ರಾಣಿ ಮತ್ತು ಸಸ್ಯರಾಶಿಗಳೆರಡರಿಂದಲೂ ಈ ಲೋಕದಲ್ಲಿ ಉಂಟಾದ ಕೋಟಿ ಕೋಟಿ ಜೀವರಾಶಿಯಲ್ಲಿ ನಾವೊಂದು ಅಣುವಿನೊಂದು ಅಂಶ ಎನ್ನಬಹುದೇನೋ? ಹಾಗೆಂದು ಹೇಗೋ ಒಂದೆಡೆ ಬಿದ್ದು ನಶಿಸಿಹೋಗಿಬಿಡಬಹುದೆಂದು ಕೊಂಡರದು ಅಸಾಧ್ಯ.
ಹಾಗೆಯೇ ಒಬ್ಬ ಮನುಷ್ಯನ ನೂರು ವರುಷಗಳ ಜೀವನವೂ ಸುದೀರ್ಘವಾದ, ಅಗಾಧವಾದ ಪ್ರಯಾಣವೆಂದೂ ಅರ್ಥೈಸಬಹುದು. ಗುರುಹಿರಿಯರು ಹೇಳಿರುವಂತೆ ಭವಸಾಗರ ಎಂದೂ ಬಣ್ಣಿಸಬಹುದು. ಭವಸಾಗರವನ್ನು ಈಜಿ ಮುಕ್ತಿ ಅಥವಾ ಮೋಕ್ಷ ಎಂಬ ದಡ ಸೇರುವುದೆಂದರದೊಂದು ಅತ್ಯದ್ಭುತ ಸಾಹಸವೆಂದೂ ಪರಿಗಣಿಸಬಹುದು.
ಹೀಗೆ ಜೀವನವನ್ನು ಅವರವರ ಭಾವಕ್ಕೆ, ಅವರವರ ಭಕುತಿಗನುಗುಣವಾಗಿ ಸ್ವೀಕರಿಸಿ ಬಾಳಿದರೂ, ಅನುಸರಿಸಿ ಬದುಕಿದರೂ, ಅವರವರ ಮಟ್ಟಿಗೆ ಅದೊಂದು ಅಪೂರ್ವವಾದ ಸಾಹಸಮಯವಾದ ಸಮೃದ್ಧವಾದ ಬಾಳಪಯಣವೇ ಹೌದು. ಅದನ್ನು ಯೋಚಿಸಿದಾಗಲಷ್ಟೇ ನಮಗೆ ಈ ಪ್ರಪಂಚದ ಯಾವುದೊಂದು ಅಣುವನ್ನೂ ತೃಣಸಮಾನವಾಗಿ, ಹಗುರವಾಗಿ ಸ್ವೀಕರಿಸಬಾರದೆಂಬ ಅಂಶ ಮನವರಿಕೆಯಾಗುತ್ತದೆ.
ಒಬ್ಬ ಮನುಷ್ಯನ ಒಂದು ಕೈಯ ಐದು ಬೆರಳುಗಳೂ ಸಹ ಸಮವಿಲ್ಲದಿರುವಾಗ, ಇನ್ನು ಒಂದೊಂದು ಅಣುವೂ ಎಷ್ಟೆಷ್ಟು ಭಿನ್ನ, ವಿಭಿನ್ನ ಗುಣಾವಗುಣಗಳನ್ನು ಹೊಂದಿರಬಹುದು ಎಂಬ ಯೋಚನೆ ಮಸ್ತಕದಲ್ಲುದಯಿಸಿದಾಗ ಎಂಥಹಾ ವೈವಿಧ್ಯಮಯ ಲೋಕದಲ್ಲಿ ನಾವಿದ್ದೀವಿ ಎಂಬ ಅರಿವುಂಟಾಗುತ್ತದೆ. ತೃಣಸಮಾನವಾದ ಅಣುವು ನಾವಾದರೂ, ನಮ್ಮ ನಮ್ಮಲ್ಲಿರುವ ವಿಶಿಷ್ಟ, ವಿಶೇಷ, ವಿಭಿನ್ನ ಗುಣಗಳನ್ನೂ, ಇರಬೇಕಾದ ಸಾಮ್ಯಗುಣಗಳನ್ನೂ ಸಮತೋಲನ ಮಾಡಿಕೊಂಡು ಜೀವನವನ್ನು ನಡೆಸಿದಾಗಲಷ್ಟೇ ಹಿರಿಯರೆಂದ ಭವಸಾಗರದ ಈಜುವಿಕೆಯೊಂದು ಅರ್ಥಪೂರ್ಣ ಪಯಣವೆಂದು ಗುರುತಿಸಲ್ಪಡುತ್ತದೆ.
ಜೀವನದ ಬಾಲ್ಯ, ಯೌವನ, ಗೃಹಸ್ಥ, ವಾನಪ್ರಸ್ಥ ಎಂಬ ಸ್ಥಿತಿಯ ಸಮಯಗಳಲ್ಲಿ ನಮ್ಮ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೇ ಕರ್ತವ್ಯಪರತೆಯೆಡೆಗೆ ಸಾಗುವ ಅಗತ್ಯತೆ ಬಹಳವಾಗಿದೆ.
ಬಾಲ್ಯವಂತೂ ನಮ್ಮ ಕೈಯಲ್ಲಿರುವಿದಿಲ್ಲ. ಪಾಲಕರ ಅಂಕೆಯಲ್ಲಿ ಅವರು ನೀಡುವ ಸಂಸ್ಕಾರ, ಸವಲತ್ತುಗಳನ್ನಷ್ಟೇ ನಾವು ರೂಢಿಸಿಕೊಳ್ಳುತ್ತಾ ಬೆಳೆಯಬೇಕಾಗುತ್ತದೆ. ಯಾವ ತಂದೆ ತಾಯಿಯೂ ತಮ್ಮ ಮಕ್ಕಳಿಗೆ ಕಡಿಮೆ ನೀಡಬೇಕೆಂಬ ಭಾವದಲ್ಲಿಲ್ಲದಿದ್ದರೂ ಅವರವರ ಪರಿಸ್ಥಿತಿಗೆ, ಯೋಗ್ಯತೆಗೆ, ಅನುಭವಕ್ಕೆ, ಬುದ್ಧಿಮತ್ತೆಗೆ ತಕ್ಕಂತೆ ಮಕ್ಕಳನ್ನು ಬೆಳೆಸುತ್ತಾರೆ. ಆದಾಗ್ಯೂ ಬಾಲ್ಯದಲ್ಲೂ ಒಂದು ಜೀವ, ತನ್ನ ಬಾಲ್ಯಲೀಲೆಗಳಿಂದ ಸುತ್ತಲಿರುವ ಜನರನ್ನು ಸುಖಮಯವಾಗಿಟ್ಟುಕೊಳ್ಳಬಹುದೆನ್ನುವುದು ಸಹಜ ಕ್ರಿಯೆ.
ಆದರೆ ಯೌವನಾವಸ್ಥೆಯೊಂದು ಪ್ರಮುಖವಾದ ಕಾಲಘಟ್ಟ. ವ್ಯಕ್ತಿಯ ಬುದ್ಧಿ ವಿಕಸನಗೊಂಡಿರುತ್ತದೆ. ʼನಮ್ಮ ಅಪ್ಪ, ಅಮ್ಮ ಹೇಳಿಕೊಟ್ಟದ್ದಿಷ್ಟೇʼ ಎನ್ನುವ ಪಲಾಯನವಾದವನ್ನು ಬಿಟ್ಟು ತೆರೆದ ಕಣ್ಣುಗಳಿಂದ ವಿಶ್ವವನ್ನು ನೋಡುತ್ತಾ, ತೆರೆದ ಕಿವಿಗಳಿಂದ ಅನುಭವಗಳನ್ನು ಆಸ್ವಾದಿಸುತ್ತಾ, ತೆರೆದ ಮನದಿಂದ ಈ ಲೋಕಕ್ಕೆ, ಸ್ವಂತಕ್ಕೆ ಒಳ್ಳೆಯದೆನಿಸುವ ವಿಷಯಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಬಾಳ ಬಂಡಿ ಸರಾಗವೆನಿಸುತ್ತದೆ. ಈ ವಯೋಮಾನದಲ್ಲಿ ನೈತಿಕತೆ, ಹೃದಯವಂತಿಕೆ, ಸಾಮಾಜಿಕ ಬದ್ಧತೆ, ಕರ್ತವ್ಯಪರತೆ, ಜವಾಬ್ದಾರಿಯುತ ನಡುವಳಿಕೆ ಮುಂತಾದ ಸದ್ಗುಣಗಳನ್ನು ರೂಢಿಸಿಕೊಂಡರೆ ಎಂದೆಂದಿಗೂ ಸಮಾಜಕ್ಕೆ ಹೊರೆಯಾಗದಂತೆ, ಕಳಂಕತರದಂತೆ, ಕಂಟಕವಾಗದಂತೆ ಜೀವನ ಸಾಗುತ್ತದೆ.
ಮುಂದೆ ಗೃಹಸ್ಥಾವಸ್ಥೆಯೊಂದು ಗುರುತರವಾದ, ಆದರೆ ಅಷ್ಟೇ ಆನಂದಮಯವಾದ ಜೀವನದ ಕಾಲಮಾನವಾಗಿರುತ್ತದೆ. ನಮ್ಮವರನ್ನು ಪ್ರೀತಿಸುತ್ತಾ, ಕಾಳಜಿತೋರುತ್ತಾ, ಅವರ ಭಾವನೆಗಳಿಗೆ ಸ್ಪಂದಿಸುವ, ಪ್ರತಿಸ್ಫಂದಿಸುವ ಸುಂದರ ಸಮಯ. ಹೀಗೆ ಮೊಗೆ ಮೊಗೆದು ಸುಖ ಸಂತಸಗಳನ್ನು ನೀಡುತ್ತಾ ಸಾಗಿದಾಗ ಅದೃಷ್ಟವಿದ್ದರೆ, ಪ್ರತಿಫಲವಾಗಿ ಅವರಿಂದಲೂ ಪ್ರೀತಿ, ಕಾಳಜಿ ದೊರಕಿದರಂತೂ ಜೀವನ ಹಂಸತೂಲಿಕಾತಲ್ಪವಾಗಿ ಬಿಡುವುದು.
ಆದರೆ ಅದು ಅಷ್ಟೇ ಆಗಿಬಿಟ್ಟರೆ ಸಾಲದು. ಅಲ್ಲದೇ ಅಷ್ಟೇ ಆಗುವುದೂ ಇಲ್ಲ. ಹಲವಾರು ಎಡರು ತೊಡರುಗಳು, ದುಃಖ ದುಮ್ಮಾನಗಳೂ ಕಠಿಣವಾದ ಪರಿಸ್ಥಿತಿಗಳೂ, ಅತ್ತ ದರಿ, ಇತ್ತ ಪುಲಿ ಎಂಬಂತ ಸ್ಥಿತಿಗತಿಗಳೂ ಎದುರಾಗುತ್ತವೆ. ನಮ್ಮ ನೈತಿಕತೆಯನ್ನು ಒರೆಯಿಟ್ಟು ನೋಡುವ ಸನ್ನಿವೇಶಗಳೂ ಎದುರಾಗುತ್ತವೆ. ಅನಾದಿ ಕಾಲದಿಂದಲೂ ನಂಬಿಕೊಂಡು, ನಡೆಸಿಕೊಂಡು ಬಂದ ಆಚಾರ ವಿಚಾರಗಳೂ ಬುಡಮೇಲಾಗುವ ಸನ್ನಿವೇಶಗಳೂ, ಸ್ವಾರ್ಥ, ನಿಸ್ವಾರ್ಥಗಳ ಮಧ್ಯೆ ತೂಯ್ದಾಡುವ ತ್ರಿಶಂಕು ಸ್ಥಿತಿಗಳೂ ಎದುರಾಗುತ್ತವೆ. ಈಗಲೇ ನಮ್ಮತನವನ್ನು ಉಳಿಸಿಕೊಂಡು ಸಮಾಜಮುಖಿಯಾಗಿ ಬದುಕನ್ನು ಸಾಗಿಸುವ ಪರೀಕ್ಷೆಯಲ್ಲಿ ಗೆದ್ದು, ಜೈಸಿ ಮುನ್ನಡೆದರೆ ಮನಸ್ಸು ಪರಿಪಕ್ವಗೊಳ್ಳುವುದು. ಬುದ್ಧಿ ತೀಕ್ಣವಾಗುವುದು. ಜೀವನ ಗೆಲುವಿನತ್ತ ಸಾಗುತ್ತಿದೆ ಎಂಬ ಆತ್ಮತೃಪ್ತಿಯೆಡೆಗೆ ಚಲಿಸಿ ನೆಮ್ಮದಿಯನ್ನು ಅರಸುವುದು.
ಒಂದೊಂದೇ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಗಿದಾಗ ಸಾರ್ಥಕತೆ ಎಂಬ ದಡ ಹತ್ತಿರದಲ್ಲೇ ಗೋಚರವಾಗತೊಡಗುವುದು.
ಈಗ ಹೋಗಬೇಕಿರುವುದು ವಾನಪ್ರಸ್ಥಾಶ್ರಮದ ಮನಸ್ಥಿತಿಗೆ. ಮನಸ್ಸನ್ನು ಪಾರಮಾರ್ಥಿಕದೆಡೆಗೆ ಕೇಂದ್ರೀಕರಿಸಿ ಹೊಸ ಚಿಗುರುಗಳಿಗೆ ಅವಕಾಶಗಳನ್ನು ಮಾಡಿಕೊಟ್ಟು, ಅನುಭವಗಳನ್ನು ಹಿಗ್ಗಿಸಿಕೊಳ್ಳುತ್ತಾ, ಒಳೊಳ್ಳೆಯ ಹವ್ಯಾಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುತ್ತಾ, ಇನ್ನೊಬ್ಬರಿಂದ, ಅದು ಯಾರೇ ಆಗಿರಲಿ, ಬಯಸುವುದನ್ನು, ಎದುರುನೋಡುವುದನ್ನು ಕಮ್ಮಿ ಮಾಡಿಕೊಳ್ಳುತ್ತಾ, ಕೊಡುವುದರಲ್ಲಿ, ಸಹಾಯಹಸ್ತ ಚಾಚುವುದರಲ್ಲಿ, ಸಹಕರಿಸುವುದರಲ್ಲಿ ಮನಸ್ಸನು ಮನ್ನಡೆಸಿದರೆ ಜೀವನ ಸಂಜೀವನವೆನಿಸುವುದು. ಅಗತ್ಯವಿದ್ದಾಗ ಮಾತ್ರ, ಕೇಳಿಸಿಕೊಳ್ಳುವ ಕಿವಿಗಳಿದ್ದಾಗ, ಮಾತ್ರ ನಮ್ಮ ಅನುಭವದ ರಸಾಮೃತನವನ್ನು ಇಷ್ಟಿಷ್ಟೇ, ತೀರ್ಥದಂತೆ ನೀಡುತ್ತಾ (ಜಾಸ್ತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತನ್ನು ಗಮನದಲ್ಲಿರಿಸಿಕೊಂಡು) ವಾನಪ್ರಸ್ಥಾಶ್ರಮವನ್ನೂ ಸಹ್ಯವಾಗಿಸಿಕೊಂಡಾಗ ಮಾತ್ರ ಜೀವನದ ಭವಸಾಗರವನ್ನು ಈಜಿ ದಡ ಸೇರಬಲ್ಲೆವೇನೋ ಎಂಬ ಭಾವ ಮನದಲ್ಲಿ ಉದಯಿಸಿದಾಗ ಅದಕ್ಕೆ ಅಕ್ಷರ ರೂಪವನ್ನೇನೋ ನೀಡಿದಾಯಿತಷ್ಟೇ, ಇನ್ನು ಅದನ್ನು ಅನುಷ್ಟಾನಕ್ಕೆ ತರಬೇಕಲ್ಲವೇ, ಇಲ್ಲದಿದ್ದರೆ ನೀವೆಲ್ಲರೂ ʼಆಚಾರ ಹೇಳೋಕೆ, ಬದನೇಕಾಯಿ ತಿನ್ನೋಕೆʼ ಎಂದೆನ್ನದೆ ಬಿಡುತ್ತೀರಾ?

-ಪದ್ಮಾ ಆನಂದ್, ಮೈಸೂರು

