(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಮ್ಮ ಪ್ರವಾಸ ಮುಗಿಯಲು ಇನ್ನೂ ಒಂದು ದಿನ ಬಾಕಿ ಇತ್ತು, ನಾವು ಕಾತುರದಿಂದ ನೋಡಲು ಕಾಯುತ್ತಿದ್ದ ‘ನೊಂಗ್ ನೂಚ್ ಬಟಾನಿಕಲ್ ಗಾರ್ಡನ್’. ಇದು ಕೇವಲ ಒಂದು ಸಸ್ಯೋದ್ಯಾನ ಮಾತ್ರವಲ್ಲ, ಆರುನೂರು ಎಕರೆಯಲ್ಲಿ ವಿಶಾಲವಾಗಿ ಹರಡಿರುವ ಒಂದು ಬೃಹತ್ ಪ್ರವಾಸೀ ತಾಣವಾಗಿದೆ. ಇಲ್ಲಿರುವ ಪ್ರಮುಖ ಆಕರ್ಷಣೆಗಳು – ಡೈನೋಸಾರ್ ವ್ಯಾಲಿ, ಫ್ರೆಂಚ್ ಗಾರ್ಡನ್, ಆರ್ಕಿಡ್ ಸಸ್ಯಗಳು, ಸ್ಟೋನ್ ಹೆಂಜ್ ಗಾರ್ಡನ್, ಸ್ಕೈವಾಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮೊದಲಿಗೆ ಡೈನೋಸಾರ್ ವ್ಯಾಲಿ ನೋಡಲು ಹೋದೆವು. ಇಲ್ಲಿ ನೂರಾರು ಬಗೆಯ ದೈತ್ಯಾಕಾರದ ಡೈನೋಸಾರ್ ಗಳು ಇದ್ದು. ಮಕ್ಕಳ ಅಚ್ಚುಮೆಚ್ಚಿನ ತಾಣವಾಗಿದೆ. ಮರಗಳ ಮರೆಯಲ್ಲಿದ್ದ ಡೈನೋಸಾರ್ ತನ್ನ ಕತ್ತನ್ನು ಆಚೆ ಈಚೆ ತಿರುಗಿಸುತ್ತಿತ್ತು, ಒಂದು ಜಿಂಕೆಯ ಮೇಲೆ ನೆಗೆಯುವ ಭಂಗಿಯಲ್ಲಿ ನಿಂತಿದ್ದ ಡೈನೋಸಾರ್ ಆಗಾಗ್ಗೆ ಘರ್ಜಿಸುತ್ತಿತ್ತು, ಆಹಾರವನ್ನು ಹುಡುಕಲು ಹಾರಾಡುತ್ತಿದ್ದ ಡೈನೋಸಾರ್ ರೆಕ್ಕೆ ಬಡಿಯುತ್ತಿತ್ತು. ಇವೆಲ್ಲಾ ರೊಬೋಟಿಕ್ಸ್ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಯಾದ ಜೀವಿಗಳು. ಒಂದು ಕ್ಷಣ ನಿಜವಾದ ಪ್ರಾಣಿಗಳೆಂದೇ ಭಾಸವಾಗುತ್ತಿತ್ತು. ಜುರಾಸಿಕ್ ಪಾರ್ಕ್ ನೋಡಿದಂತೆ ಭಾಸವಾಗುತ್ತಿತ್ತು. ಒಂದಾನೊಂದು ಕಾಲದಲ್ಲಿ ಈ ಭೂಮಿಯ ಮೇಲೆ ಡೈನೋಸಾರ್‌ಗಳದೇ ಸಾಮ್ರಾಜ್ಯ, ನೆಲದ ಮೇಲೆ ನಡೆಯುವ ಸಸ್ಯಾಹಾರಿಗಳಾದ ದೊಡ್ಡ ಗಾತ್ರದ ಡೈನೋಸಾರ್‌ಗಳು ನಿಧಾನವಾಗಿ ಸಾಗುತ್ತಾ ಮರದ ಮೇಲಿದ್ದ ಸೊಪ್ಪು ಸದೆಯನ್ನು ತಿನ್ನುತ್ತಿದ್ದವು. ಮಾಂಸಾಹರಿಗಳಾದ ತುಸು ಚಿಕ್ಕದಾದ ಡೈನೋಸಾರ್‌ಗಳು ತಮ್ಮ ಬೇಟೆಯನ್ನು ಹಿಡಿಯಲು ಚಂಗನೆ ನೆಗೆಯುತ್ತಾ ಘರ್ಜಿಸುತ್ತಾ ಸಾಗುತ್ತಿದ್ದವು. ನೀರಿನಲ್ಲಿ ಈಜುವ ಡೈನೋಸಾರ್‌ಗಳಿಗೆ ಮೀನುಗಳೇ ಆಹಾರ, ಇನ್ನು ಹಾರಾಡುವ ಡೈನೋಸಾರ್‌ಗಳು ತಮ್ಮ ಕಣ್ಣಿಗೆ ಬೀಳುವ ಎಲ್ಲಾ ಬಗೆಯ ಜೀವಿಗಳನ್ನೂ ಸ್ವಾಹಾ ಮಾಡುತ್ತಿದ್ದವು. ಹೀಗೆ ಸರ್ವವ್ಯಾಪಿಯಾಗಿದ್ದ ಈ ಪ್ರಾಣಿಗಳು ಇದ್ದಕ್ಕಿದ್ದಂತೆ ಮರೆಯಾಗಿದ್ದಾದರೂ ಹೇಗೆ ಎಂಬುದೇ ವಿಜ್ಞಾನಿಗಳಿಗೆ ಕಗ್ಗಂಟಾಗಿ ಉಳಿದಿದೆ. ಇಂದು ನಮ್ಮ ಮನೆಗಳ ಗೋಡೆಗಳ ಮೇಲೆ ಹರಿದಾಡುವ ಡೈನೋಸಾರ್‌ಗಳ ವಂಶಸ್ಥರಾದ ಹಲ್ಲಿಗಳು, ‘ನಮ್ಮ ಅಜ್ಜ ಮುತ್ತಜ್ಜ ಈಗ ಎಲ್ಲಿರುವರು ಹೇಳುವಿರಾ?’ ಎಂದು ಲೊಚ್ ಲೊಚ್ ಎನ್ನುತ್ತಿವೆ.
ಸಿಂಗಪೂರ್‌ನ ಅರ್ಕಿಡ್ ಉದ್ಯಾನವನ ನೋಡಲು ಮರೆಯಬೇಡ ಎಂದು ಗಿರಿಜಕ್ಕ ಸಾರಿ ಸಾರಿ ಹೇಳಿದ್ದಳು. ಆದರೆ ನಮ್ಮ ಪ್ರವಾಸದ ವೇಳಾಪಟ್ಟಿಯಲ್ಲಿ ಈ ಆರ್ಕಿಡ್‌ನ ಹೆಸರೇ ಇರಲಿಲ್ಲ. ನಾನು ಹೆಬ್ಬಾರ್ ರವರನ್ನು ಕೇಳಿದಾಗ, ಅವರು ಥೈಲ್ಯಾಂಡಿನಲ್ಲಿರುವ ಆರ್ಕಿಡ್ ಉದ್ಯಾನವನ ಇನ್ನೂ ಚೆನ್ನಾಗಿದೆ. ಅದನ್ನು ತೋರಿಸುತ್ತೇನೆ ಎಂದಾಗ ನಾನು ಅಸಹಾಯಕಳಾಗಿ ತಲೆ ಆಡಿಸಲೇ ಬೇಕಾಗಿತ್ತು. ಈಗ ನೊಂಗ್ ನೂಚ್ ತೋಟದಲ್ಲಿ ಆರ್ಕಿಡ್ ನೋಡುವ ಅವಕಾಶ ನಮಗೆ ಸಿಕ್ಕಿತ್ತು. ಈ ಉಷ್ಣವಲಯದ ತೋಟದಲ್ಲಿ ಹಲವು ಬಗೆಯ ಹೂಗಿಡಗಳನ್ನು ನೆಡಲಾಗಿತ್ತು. ಈ ಪುಷ್ಪೋದ್ಯಾನ ಕಣ್ಮನ ಸೆಳೆಯುವಂತಿತ್ತು. ಎಲ್ಲಾ ಗಿಡಗಳ ಹೆಸರುಗಳನ್ನು ಬರೆದು ಹಾಕಲಾಗಿತ್ತು. ನಾವು ಒಂದೊಂದೇ ಹೆಸರುಗಳನ್ನು ಓದುತ್ತಾ ಬಣ್ಣ ಬಣ್ಣದ ಹೂಗಳನ್ನು ಅರಳಿಸಿ ನಿಂತಿದ್ದ ಗಿಡಗಳನ್ನು ನೋಡುತ್ತಾ ಸಾಗಿದೆವು. ನಮ್ಮ ಮೊಬೈಲ್ ತುಂಬಾ ಈ ಹೂ ಗಳ ಫೋಟೋಗಳೇ. ಅಲ್ಲಿದ್ದ ಫಲಕವೊಂದರಲ್ಲಿ ‘ಆರ್ಕಿಡ್ ಮತ್ತು ಬ್ರೊಮೆಲಿಯಾಡ್’ ಎಂದು ಬರೆದಿತ್ತು. ನಮ್ಮ ಗೈಡ್ ‘ಮೇಡಂ ಆರ್ಕಿಡ್ ಗಿಡಗಳನ್ನು ನೋಡಿ’ ಎಂದಾಗ ಸಂಭ್ರಮದಿಂದ ಅತ್ತ ಕಡೆ ಹೆಜ್ಜೆ ಹಾಕಿದ್ದೆ. ಇಲ್ಲಿ ಸುಮಾರು 670ಕ್ಕೂ ಹೆಚ್ಚು ಪ್ರಬೇಧಗಳುಳ್ಳ ಆರ್ಕಿಡ್ ಗಳಿವೆ ಎಂದರೆ ನಂಬುವಿರಾ? ಸಾಮಾನ್ಯವಾಗಿ ಮಲೆನಾಡಿನ ಅರಣ್ಯಗಳಲ್ಲಿ ಬೆಳೆಯುವ ಈ ಸೀತಾಳೆ ಪುಷ್ಪಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಎತ್ತರದ ಮರಗಳ ಮೇಲೆ ತನ್ನ ಬೇರುಗಳನ್ನು ಮರದೊಳಗೆ ಇಳಿಸಿ, ಅಲ್ಲಿಂದಲೇ ತನಗೆ ಬೇಕಾದ ಪೋಷಕಾಂಶಗಳನ್ನು ಹೀರುತ್ತಾ ಚಿತ್ರ ವಿಚಿತ್ರವಾದ ಆಕಾರದ ಪುಷ್ಪಗಳನ್ನು ಅರಳಿಸುತ್ತಾ ಎಲ್ಲರ ಮನಸ್ಸನ್ನು ಸೆಳೆಯುವ ಗಿಡ ಇದು. ಹತ್ತರಿಂದ ಹದಿನೈದು ದಿನ ತನ್ನ ಅಂದ ಚೆಂದವನ್ನು ಉಳಿಸಿಕೊಳ್ಳುವ ಅಪರೂಪದ ಪುಷ್ಪ ಇದು. ಇಂದು ಆಧುನಿಕ ತಂತ್ರಜ್ಞಾನದ ಫಲವಾಗಿ ಹಲವು ಬಣ್ಣಗಳ ಆರ್ಕಿಡ್‌ಗಳು ಕಂಗೊಳಿಸುತ್ತಿವೆ. ಈ ಪುಷ್ಪಕೃಷಿಯು ಸಾಕಷ್ಟು ಆರ್ಥಿಕ ಲಾಭವನ್ನೂ ತಂದು ಕೊಡುವುದು. ಈ ತೋಟದಿಂದ ಆರ್ಕಿಡ್ ಪುಷ್ಪಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಅಲ್ಲಿದ್ದ ತೋಟದ ಮಾಲಿ ತಿಳಿಸಿದ. ಇಲ್ಲಿ ಆರ್ಕಿಡ್ ಪುಷ್ಪಗಳ ಒಂದು ನರ್ಸರಿಯೂ ಇದ್ದು, ಒಂದು ಸಂಶೋಧನಾ ಕೇಂದ್ರವೂ ಇದೆ.
ಮುಂದಿದ್ದ ತೋಟ ಮರಳುಗಾಡುಗಳಲ್ಲಿ ಬೆಳೆಯುವ ಕ್ಯಾಕ್ಟಸ್‌ಗಳದ್ದು. ಮರಗಳಷ್ಟು ಎತ್ತರ ಬೆಳೆದಿದ್ದ ಕ್ಯಾಕ್ಟಸ್ ಗಿಡಗಳನ್ನು ಅಚ್ಚರಿಯಾಗಿತ್ತು. ಅದರಲ್ಲಿ ಬಿಟ್ಟಿದ್ದ ಗುಲಾಬಿ ಹಾಗೂ ಕೆಂಪು ಬಣ್ಣದ ಹಣ್ಣುಗಳನ್ನು ನಾವು ಚಿಕ್ಕವರಿದ್ದಾಗ ತಿನ್ನುತ್ತಿದ್ದೆವು ಎಂದು ಮನೆಯವರು ಹೇಳಿದಾಗ ಕಣ್ಣರಳಿಸಿ ನೋಡಿದ್ದೆ, ಏಕೆಂದರೆ ಪಾಪಸ್ ಕಳ್ಳಿಯ ಗಿಡದ ತುಂಬಾ ಮುಳ್ಳುಗಳಿದ್ದವು. ಹಲವು ಬಗೆಯ ಕ್ಯಾಕ್ಟಸ್ ನೋಡುತ್ತಾ ಹೋದಾಗ ನಾವು ಮರಳುಗಾಡಿನಲ್ಲಿ ಇರುವ ಭಾವ ಮನದಲ್ಲಿ ಮೂಡಿತ್ತು. ‘ಮರಳುಗಾಡಿನಲ್ಲಿ ಬೆಳೆಯುವ ನಮಗೆ ಸದಾ ನೀರು ಸಿಗಲಾರದು, ಹಾಗಾಗಿ ಮಳೆಗಾಲದಲ್ಲಿ ಸಿಗುವ ಅಲ್ಪ ಸ್ವಲ್ಪ ನೀರನ್ನು ನಮ್ಮ ದಪ್ಪ ದಪ್ಪ ಎಲೆಗಳಲ್ಲಿ ಹೇಗೆ ನೀರನ್ನು ಸಂಗ್ರಹಿಸಿಡುತ್ತೇವೆ ನೋಡಿ ಅಕ್ಕಾ’ ಎಂದು ಕ್ಯಾಕ್ಟಸ್ ಹೇಳಿದಂತಿತ್ತು. ಹೌದು, ನಾವು ಪ್ರಕೃತಿಯಿಂದ ಕಲಿಯಬೇಕಾದ ಪಾಠಗಳು ಎಷ್ಟಿವೆ ಎಂದು ಲೆಕ್ಕ ಹಾಕುತ್ತಾ ಮುನ್ನೆಡೆದೆ.
ನಮ್ಮ ಮುಂದೆ ಬಾರೀ ಗಾತ್ರದ ಕಲ್ಲಿನ ಕಂಬಗಳನ್ನು ವೃತ್ತಾಕಾರದಲ್ಲಿ ನಿಲ್ಲಿಸಲಾಗಿತ್ತು. ಇದು ಏನು ಅಂತೀರಾ? ದಕ್ಷಿಣ ಇಂಗ್ಲೆಂಡಿನ ಅತ್ಯಂತ ನಿಗೂಢ ಮತ್ತು ಐತಿಹಾಸಿಕ ಸ್ಮಾರಕ, ‘ಸ್ಟೋನ್ ಹೆಂಜ್‌ನ’ ಪ್ರತಿರೂಪ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವ ಈ ಸ್ಮಾರಕವು ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇದನ್ನು ಏಕೆ ನಿರ್ಮಿಸಲಾಯಿತು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಬಹುಶಃ ಸೂರ್ಯ ಮತ್ತು ಚಂದ್ರನ ಚಲನೆಯನ್ನು ಗುರುತಿಸಲು ಬಳಸುತ್ತಿದ್ದ ಪ್ರಾಚೀನ ಕ್ಯಾಲೆಂಡರ್ ಆಗಿರಬಹುದು, ಪವಿತ್ರವಾದ ಪೂಜಾ ಸ್ಥಳವಾಗಿರಬಹುದು ಅಥವಾ ರೋಗಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿಯುಳ್ಳ ತಾಣವಾಗಿರಬಹುದು ಎಂದು ಊಹೆ ಮಾಡಲಾಗಿದೆ. ಕೆಲವರ ಪ್ರಕಾರ ಇದನ್ನು ಸ್ಮಶಾನವನ್ನಾಗಿ ಬಳಸುತ್ತಿರುವ ಸಾಧ್ಯತೆ ಇದೆ ಎಂದೂ ಹೇಳುತ್ತಾರೆ. ಇಂದಿಗೂ ಈ ಸ್ಮಾರಕವು ವಾಸ್ತುಶಿಲ್ಪದ ಅದ್ಭುತವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಅಷ್ಟೊಂದು ಭಾರವಾದ ಕಲ್ಲುಗಳನ್ನು ಅಷ್ಟು ದೂರದಿಂದ ಹೇಗೆ ತಂದರು ಮತ್ತು ಅವುಗಳನ್ನು ಹೇಗೆ ಜೋಡಿಸಿದರು ಎಂಬುದು ಅಚ್ಚರಿಯ ಸಂಗತಿಯಾಗಿದೆ. ಮತ್ತೊಂದು ಸ್ವಾರಸ್ಯಕರವಾದ ಸಂಗತಿಯೆಂದರೆ ನಮ್ಮ ಶಿವಮೊಗ್ಗಾ ಜಿಲ್ಲೆಯಲ್ಲಿರುವ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಕುಪ್ಪಳ್ಳಿಯಲ್ಲಿ ಕನ್ನಡದ ಖ್ಯಾತ ಕವಿ ಕುವೆಂಪುರವರ ಸಮಾಧಿಯ ಪ್ರವೇಶ ದ್ವಾರದಲ್ಲಿ ಇದೇ ರೀತಿ ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸಲಾಗಿದೆ.
ಈ ದೊಡ್ಡದಾದ ಉದ್ಯಾನವನದಲ್ಲಿ ನಡೆದೂ ನಡೆದೂ ಕಾಲುಗಳು ಪದ ಹೇಳುತ್ತಿದ್ದವು, ಆಗ ನಮ್ಮ ಗೈಡ್ ಒಂದು ಎಲೆಕ್ಟ್ರಿಕ್ ಕಾರಿನಲ್ಲಿ ನಮ್ಮನ್ನು ಹತ್ತಿಸಿ, ಮುಂದಿನ ನಿಲುಗಡೆಯಲ್ಲಿ ಇಳಿಯಲು ಹೇಳಿದರು. ಈ ಕಾರುಗಳು ನಾಲ್ಕಾರು ಕಡೆ ನಿಂತು ನಿಂತು ಹೊರಡುತ್ತದೆ, ನಾವು ಒಂದೆಡೆ ಇಳಿದು ಆ ಭಾಗದ ತೋಟವನ್ನು ನೋಡಿ ಮತ್ತೆ ಕಾರನ್ನು ಹತ್ತಿ ಮುಂದೆ ಸಾಗಬಹುದು. ನಾವು ಫ್ರಾನ್ಸ್ ನ ವರ್‌ಸೈಲ್ಸ್ ಅರಮನೆಯ ಮುಂದಿದ್ದ ಹೂದೋಟದ ಮಾದರಿ ಉದ್ಯಾನವನದ ಬಳಿ ಇಳಿದೆವು. ಹದಿನೇಳನೇ ಶತಮಾನದ ಯೂರೋಪಿಯನ್ ಶೈಲಿಯ ವಿನ್ಯಾಸವುಳ್ಳ ಆಕರ್ಷಕ ತೋಟ ಇದು. ಇದೊಂದು ಸುಂದರವಾದ ಹೂಗಿಡಗಳ ಸ್ವರ್ಗವೆಂದೇ ಹೇಳಬಹುದು. ಹಲವು ಬಗೆಯ ಅಲಂಕಾರಿಕ ಸಸ್ಯಗಳನ್ನು ವಿಭಿನ್ನ ಜಾಮಿತಿಯ ಆಕಾರಗಳಲ್ಲಿ ಕತ್ತರಿಸಲಾಗಿತ್ತು. ಹಲವು ಬಗೆಯ ಆಕರ್ಷಕ ಕುಂಡಗಳು, ರಾಜ ರಾಣಿಯರ ಮೂರ್ತಿಗಳೂ, ಕಾರಂಜಿಗಳೂ, ಪಗೋಡಾಗಳೂ ಈ ಗಿಡಗಳ ಮಧ್ಯೆ ರಾರಾಜಿಸುತ್ತಿದ್ದವು. ಫೋಟೋ ತೆಗೆಯಲು ಪ್ರಶಸ್ತವಾದ ಸ್ಥಳ ಇದು.
ನಮ್ಮ ತಂಡದಲ್ಲಿದ್ದ ಮೋಹನ್ ಹಾಗೂ ನನ್ನ ಪತಿ ಜಯಪ್ಪನವರು ‘ನಾವು ಇಲ್ಲಿಯೇ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತೇವೆ. ನೀವು ಹಿಂದಿರುಗುವಾಗ ನಿಮ್ಮ ಜೊತೆ ಬರುತ್ತೇವೆ’ ಎಂದು ಅಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತರು. ನಾವು ಮುಂದಿದ್ದ ತೋಟದ ಉಳಿದ ಭಾಗವನ್ನು ನೋಡುತ್ತಾ ಅಲ್ಲಿದ್ದ ‘ಸ್ಕೈವಾಕ್’ ಅಂದರೆ ಆರು ಕಿ.ಮೀ ಉದ್ದದ ಎತ್ತರವಾಧ ಸೇತುವೆಯನ್ನು ಹತ್ತಿ, ಇಡೀ ಉದ್ಯಾನವನದ ಸೊಬಗನ್ನು ಸವಿಯುತ್ತಾ ಮುಂದೆ ಸಾಗಿದೆವು. ಇನ್ನು ಸಾಕು, ಹಿಂದಿರುಗೋಣ ಎಂಬ ಅಭಿಪ್ರಾಯ ತಂಡದ ಸದಸ್ಯರಿಂದ ಬಂದಾಗ, ಅದೇ ಸೇತುವೆಯ ಮೇಲೆ ನಡೆಯುತ್ತಾ ಹಿಂದಿರುಗಿ ಬಂದೆವು. ಅರೇ, ಇದೇನಿದು? ನಾವು ಪ್ರವೇಶದ್ವಾರಕ್ಕೇ ಬಂದುಬಿಟ್ಟೆವಲ್ಲ, ನಮಗಾಗಿ ತೋಟದ ಮಧ್ಯೆ ಇಬ್ಬರು ಕಾದು ಕುಳಿತಿರುವರಲ್ಲ ಎಂದು ಒಂದು ಕ್ಷಣ ಗಾಬರಿಯಾಗಿತ್ತು. ನಮ್ಮ ಬಳಿ ಆ ದೇಶದ ಕರೆನ್ಸಿ ಹಾಕಿಸಿದ ಮೊಬೈಲಿರಲಿಲ್ಲ. ಆಗ, ಅಲ್ಲಿದ್ದ ಸ್ಥಳೀಯರ ಮೊಬೈಲಿನಿಂದ ನಮ್ಮ ಮ್ಯಾನೇಜರ್‌ಗೆ ಫೋನ್ ಮಾಡಿ, ‘ಇಬ್ಬರು ಸದಸ್ಯರು ಫ್ರೆಂಚ್ ಗಾರ್ಡನ್ ಸಮೀಪ ಉಳಿದಿದ್ದಾರೆ. ದಯಮಾಡಿ ಅವರನ್ನು ಕರೆತರುವ ವ್ಯವಸ್ಥೆ ಮಾಡಿ’ ಎಂದು ವಿನಂತಿಸಿಕೊಂಡೆವು. ಅವರು ಇಲೆಕ್ಟ್ರಿಕ್ ಕಾರು ಹತ್ತಿ ಆ ಕಡೆ ಹೋದರು, ಅಷ್ಟರಲ್ಲಿ ಮೋಹನ್ ಮತ್ತು ಜಯಪ್ಪನವರು ಮತ್ತೊಂದು ಕಾರಿನಲ್ಲಿ ನಾವಿದ್ದ ಸ್ಥಳಕ್ಕೆ ಬಂದಿಳಿದರು. ಸ್ವಲ್ಪ ಹೊತ್ತಿನಲ್ಲಿ ಮ್ಯಾನೇಜರ್ ಹಿಂದಿರುಗಿದರು, ನಮ್ಮ ತಂಡದ ಸದಸ್ಯರನ್ನೆಲ್ಲಾ ಒಟ್ಟಿಗೆ ನೋಡಿ ಸಮಾಧಾನದಿಂದ ಉಸಿರು ಬಿಟ್ಟರು.
ಈ ತೋಟದ ಅಂತ್ಯದಲ್ಲಿ ಆನೆಗಳ ಆಟೋಟಗಳು ನಡೆದಿದ್ದವು. ಫುಟ್ ಬಾಲ್ ಆಡುವ ಆನೆಗಳು, ಚಿತ್ರ ಬಿಡಿಸುತ್ತಿದ್ದ ಆನೆಗಳು, ಹಾಗೂ ತಮ್ಮ ಸೊಂಡಿಲನ್ನು ಆಡಿಸುತ್ತಾ ನೃತ್ಯ ಮಾಡುತ್ತಿದ್ದ ಆನೆಗಳನ್ನು ನೋಡಿದೆವು. ಮುಂದೆ ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ಗ್ಯಾಲರಿಯನ್ನು ನೋಡುತ್ತಾ ಸಾಗುವಾಗ ನನ್ನ ಯಜಮಾನರು ಈ ಕಾರುಗಳ ಹತ್ತು ಹಲವು ಫೋಟೋಗಳನ್ನು ತೆಗೆದರು. ಜೊತೆಗಾರರು, ‘ಜಯಪ್ಪನವರಿಗೆ ಸ್ಪೋಟ್ಸ್ ಕಾರು ಎಂದರೆ ತುಂಬಾ ಇಷ್ಟ ಅಂತ ಕಾಣುತ್ತೆ’ ಎಂದಾಗ, ನಾನು, ‘ಮೊಮ್ಮಗನಿಗೆ ಸ್ಪೋಟ್ಸ್ ಕಾರುಗಳು ಎಂದರೆ ಪಂಚಪ್ರಾಣ, ಹಾಗಾಗಿ ಅಷ್ಟೊಂದು ಫೋಟೋ ತೆಗೆಯುತ್ತಿದ್ದಾರೆ’ ಎಂದು ಹೇಳಿದೆ. ಅಂದಿನ ಕೊನೆಯ ಶೋ, ‘ಥೈಲ್ಯಾಂಡಿನ ಸಾಂಪ್ರದಾಯಿಕ ನೃತ್ಯ, ಚೆಂದದ ಪಾರಂಪರಿಕ ಪೋಷಾಕನ್ನು ಧರಿಸಿದ್ದ ಸ್ತ್ರೀಯರು ಮತ್ತು ಪುರುಷರು ಸೀತಾ ಸ್ವಯಂವರದ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದರು. ಈ ಅದ್ಭುತವಾದ ಪೌರಾಣಿಕ ನೃತ್ಯರೂಪಕವನ್ನು ನೋಡಿದ ನಾವೆಲ್ಲರೂ ಜೋರಾದ ಚಪ್ಪಾಳೆ ತಟ್ಟಿದೆವು.
(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45368

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ


