ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ?
ಕರೆದರು ಇಲ್ಲಾ ಹಾಲೂ ಬೆಲ್ಲ ಕಾಯಿಸಿ ಇಟ್ಟಿದ್ದೆ…
ಪಠ್ಯದಲ್ಲಿದ್ದ ಬೆಕ್ಕಿನ ಈ ಪದ್ಯವನ್ನು ಕಲಿತು ಹಾಡುತ್ತಾ, ರಾಣಿಯ ಅರಮನೆ ಹೇಗಿರಬಹುದು? ಎಂದು ಕುತೂಹಲದಿಂದ ಕಣ್ಣರಳಿಸಿ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ಚಿಕ್ಕಂದಿನ ಕಾಲವದು. ಮುದ್ದಾದ ಬೆಕ್ಕು ಹೆಚ್ಚಿನವರಿಗೆಲ್ಲಾ ಪ್ರಿಯ ಅಲ್ವೇ ? ಅಮೆರಿಕದಲ್ಲಿ ನೋಡಿದ ತೋಳ ಗಾತ್ರದ ಬೆಕ್ಕಿಗಿಂತ ನಮ್ಮೂರ ಸಾದಾ ಸೀದಾ ಬೆಕ್ಕೇ ಚೆನ್ನ ಎನ್ನಬಹುದು. ಸಾಕುಪ್ರಾಣಿಗಳಲ್ಲಿ ಅತೀ ಆರಾಮಜೀವಿಯೆಂದರೆ ಬೆಕ್ಕು ಎಂದು ನನ್ನ ಅಭಿಮತ. ಇನ್ನಿತರ ಪ್ರಾಣಿಗಳಿಗಾದರೆ ತಮ್ಮದೇ ಆದ ಜವಾಬ್ದಾರಿಗಳಿವೆ ಅಲ್ಲವೇ? ಉದಾಹರಣೆಗೆ ನಾಯಿಯನ್ನೇ ನೋಡಿ ಬೇಕಾದರೆ… ಮನೆ ಕಾಯಬೇಕು. ಕಳ್ಳರನ್ನು ಓಡಿಸಬೇಕು. ಯಾರನ್ನೇ ಕಾಣಲಿ, ಬೊಗಳಲೇ ಬೇಕು! ಮನೆಯೊಳಗೆ ಬರುವ ಹಾಗಿಲ್ಲ. ಸಂಕಲೆಯ ಬಂಧನದಲ್ಲಿ ಮನೆಯ ಹೊರಗೇ ಜೀವನ. ಹಸಿವಾದರೆ, ಮನೆಯವರಿಗೆ ಊಟ ಹಾಕಲು ಮರೆತರೆ ಬೊಬ್ಬೆ ಹಾಕಲೇ ಬೇಕು…ಇಲ್ಲವಾದರೆ ಗೋವಿಂದ! ಸದ್ಯಕ್ಕಿದು ಹಳ್ಳಿ ನಾಯಿಗಳಿಗೆ ಮಾತ್ರ ಸೀಮಿತ ಎನ್ನೋಣ.
ಅದೇ, ಬೆಕ್ಕಿನ ಅದೃಷ್ಟ ನೋಡಿ… ತನ್ನಿಷ್ಟದಂತೆ ಮನೆಯೊಳಗೆ ಬೇಕಾದಲ್ಲಿ ಸುಳಿದಾಡಬಹುದು. ಐಶಾರಾಮಿ ಸೋಫಾ, ಹಾಸಿಗೆಯಲ್ಲಿ ಮಾತ್ರವಲ್ಲ, ಮನೆಯ ಮಕ್ಕಳ, ದೊಡ್ಡವರ ಮಡಿಲಲ್ಲಿ ಮಲಗಲೂ ಅನುಮತಿಯಿದೆ. ಹಸಿವಾದಾಗ ಮನೆಯೊಡತಿಯ ಮುಂದೆ ಬಂದು ಒಂದೇ ಮಿಯಾಂನಲ್ಲಿ ಹಾಲು ತಿಂಡಿ ತಟ್ಟೆಯಲ್ಲಿ ಪ್ರತ್ಯಕ್ಷ! ಅದೂ ಬಹಳ ಪ್ರೀತಿಯಿಂದ! ರಾತ್ರಿ ವೇಳೆ ಮಾತ್ರ ಬೇಕೆಂದರೆ ಬೇಟೆ. ಇಲ್ಲವಾದರೆ ರಾತ್ರಿ ಹಗಲು ನಿದ್ರಾಲೋಕದಲ್ಲಿ ವಿಹಾರ! ತಾನೇ ಸ್ವತ: ತನ್ನ ಮೈಯನ್ನು ನೆಕ್ಕಿ ಫಳಫಳನೆ ಸ್ವಚ್ಛವಾಗಿ ಇರಿಸುವುದರಿಂದ ಎಲ್ಲರ ಮುದ್ದು. ಜನ್ಮತ: ಸ್ವತಂತ್ರ ಜೀವಿಯೆಂಬ ಹೆಗ್ಗಳಿಕೆಯ ಕಿರೀಟ ಇವುಗಳಿಗೆ. ಯಾವ ಮನೆಯಲ್ಲೂ ಜೀವನಪೂರ್ತಿ ನೆಲೆ ನಿಲ್ಲಬೇಕಾದ ನಿಯಮವಿಲ್ಲ. ಅಕ್ಕಪಕ್ಕದ ಹತ್ತಾರು ಮನೆಗಳ ದಿನ ನಿತ್ಯದ ಅತಿಥಿಯಾಗಿ ಸಂಚರಿಸುತ್ತಾ, ಕದ್ದು ಹಾಲು ಕುಡಿಯುವಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಮನೆಯೊಡತಿಯಿಂದ ಬೈಗಳಿನ ಜೊತೆಗೆ ಏಟನ್ನೂ ಬಹುಮಾನವಾಗಿ ಪಡೆಯಬೇಕಾದ ದುಸ್ಥಿತಿಯೂ ಇರುವುದೆನ್ನಿ.
ನನಗೆ ಚಿಕ್ಕಂದಿನಿಂದಲೂ ನಾಯಿಗಿಂತ ಬೆಕ್ಕಿನ ಮೇಲೆ ಪ್ರೀತಿ ಹೆಚ್ಚು. ಕೆಲವರಿಗೆ ಬೆಕ್ಕೆಂದರೆ ಮಾರುದೂರ. ಇದರ ಗುಟ್ಟೇನು ಎಂದು ಬುದ್ಧಿ ಬಂದ ಮೇಲೆ ಜಾಲಾಡಿದಾಗ ತಿಳಿಯಿತು….ಪಂಚಾಂಗದಲ್ಲಿ ನಕ್ಷತ್ರ ಪ್ರಕರಣ ಎಂಬ ವಿಭಾಗವಿದೆ. ಅದರಲ್ಲಿ, ಆಯಾಯ ಜನ್ಮ ನಕ್ಷತ್ರಕ್ಕೆ ಸಂಬಂಧಿಸಿದ ಕೆಲವು ವಿವರಗಳಿವೆ. ಅವುಗಳಲ್ಲಿ ಯಾವ ಪ್ರಾಣಿ ವೈರ ಎಂಬುದೂ ಒಂದು. ನನಗೆ ನಾಯಿ ವೈರವಿದೆ…ಅದಕ್ಕೇ ನನಗೆ ಬೆಕ್ಕಿನ ಮೇಲೆ ಹೆಚ್ಚು ಮಮತೆ ಎಂಬುದು ನನ್ನ ಅಂಬೋಣ! ಆದರೆ, ಪುಟ್ಟ ಪಟ್ಟಣದ ಸರಹದ್ದಿನ ಹಳ್ಳಿಯ ಚಹರೆಯಂತಹ ಪ್ರದೇಶದಲ್ಲಿರುವ ನಮ್ಮ ಮನೆಯ ಸುತ್ತುಮುತ್ತಲೂ ಓಡಾಡುವ ಬೆಕ್ಕುಗಳು ನಮ್ಮದಾಗಿರಲು ಹೇಗೆ ಸಾಧ್ಯ ಹೇಳಿ?
ಹೀಗಿರಲೊಮ್ಮೆ, ಮನೆ ಹತ್ತಿರದ ಆತ್ಮೀಯರೊಬ್ಬರು ತಮ್ಮ ಮನೆಯಲ್ಲಿರುವ ನಾಲ್ಕು ಬೆಕ್ಕಿನ ಮರಿಗಳಲ್ಲಿ ಎರಡನ್ನು (ಕಾಟ ತಡೆಯಲಾರದೆ??) ಚೀಲದಲ್ಲಿ ತುಂಬಿ ನೇರವಾಗಿ ನಮ್ಮ ಮನೆಯ ಪಡಸಾಲೆಯಲ್ಲಿ ಇಟ್ಟುಬಿಟ್ಟರು.. ನಮಗೆ ಬೇಡವೆಂದರೂ ಕೇಳದೆ, ತಾವೇನೋ ನಮಗೆ ಬಹಳ ದೊಡ್ಡ ಕಾಣಿಕೆಯನ್ನು ನೀಡಿರುವರು ಎಂಬ ತರಹ ನಗುತ್ತಾ ಹೊರಟೇ ಹೋದರು. ಆತ್ಮೀಯರಾಗಿದ್ದ ಅವರ ಬಳಿ ಏನೂ ಹೇಳಲಾಗದೆ ಪೆಚ್ಚು ಮೊಗ ಹೊತ್ತು, ಹಾಲು ಕುಡಿಯುತ್ತಿದ್ದ ಎಳೆ ಮರಿಗಳ ಆರೈಕೆಗೆ ಟೊಂಕ ಕಟ್ಟಿ ನಿಂತೆವು. ನಾನು ನೌಕರಿಗೆ ಹೋಗುತ್ತಿದ್ದ ಸಮಯವಾಗಿತ್ತದು. ನಮ್ಮವರು ನಿವೃತ್ತಿ ಹೊಂದಿ ಮನೆಯಲ್ಲೇ ಇದ್ದರೂ; ಬೆಕ್ಕೆಂದರೆ ಅಷ್ಟೇನೂ ಪ್ರೀತಿ ಇಲ್ಲದಿದ್ದರೂ ಅವುಗಳನ್ನು ನೋಡಿಕೊಳ್ಳಬೇಕಾದ ದು:ಸ್ಥಿತಿ!
ಕರ್ರಗಿನ ಬೆಕ್ಕಿನ ಮರಿಗಳ ಬೆಳವಣಿಗೆಯ ಸಕಲ ಜವಾಬ್ದಾರಿಯನ್ನೂ ಹೊತ್ತು, ಅತ್ಯಂತ ಕಾಳಜಿಯಿಂದ ಸಾಕುತ್ತಾ ಕೆಲವು ತಿಂಗಳುಗಳು ಕಳೆದವು…ಮರಿಗಳು ಮನೆಯ ತೋಟದಲ್ಲಿ ತಿರುಗಾಡುವ ಹಂತಕ್ಕೆ ಬಂದವು. ಒಂದು ದಿನ ಮರಿಗಳೆರಡೂ ನಾಪತ್ತೆ! ಎರಡು ದಿನ ಕಳೆದಾಗ ನೆರೆಮನೆಯಿಂದ ಬಂತೊಂದು ದೂರವಾಣಿ ಕರೆ. “ ನಿಮ್ಮ ಬೆಕ್ಕುಗಳು ನಮ್ಮ ಮನೆಗೆ ಬಂದು ತೊಂದರೆ ಕೊಡುತ್ತಿವೆ. ಎಷ್ಟು ಓಡಿಸಿದರೂ ಹೋಗುತ್ತಿಲ್ಲ. ಬೇಕಾದರೆ ಬಂದು ತೆಗೆದುಕೊಂಡು ಹೋಗಿ. ಇಲ್ಲವಾದರೆ ನಾವು ದೂರ ಬಿಟ್ಟು ಬರುತ್ತೇವೆ.” ನಾನು ಕೂಡಲೇ ಗೋಣಿ ಚೀಲವೊಂದನ್ನು ಹಿಡಿದು ಅವರ ಮನೆಗೆ ಹೊರಟೆ. ಅವುಗಳು ನನ್ನ ಗುರುತೇ ಇಲ್ಲದಂತೆ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದವು. ಅಂತೂ ಹೇಗೋ ಹರಸಾಹಸಪಟ್ಟು ಅವುಗಳನ್ನು ಹಿಡಿದು ತಂದು ಮನೆಯೊಳಗೆ ಕೂಡಿಹಾಕಲಾಯಿತು. ಆದರೆ ಅದು ಹೇಗೋ ಮರುದಿನ ಬೆಳಗ್ಗೆ ನಾಪತ್ತೆ. ಸ್ವಲ್ಪ ಹೊತ್ತಿನಲ್ಲಿ ಅದೇ ಮನೆಯಿಂದ ಕರೆ ಬಂತು. ಅವರ ಬೆದರಿಕೆಗೆ ಸೊಪ್ಪು ಹಾಕದೆ, ನೀವು ಬೇಕಾದ್ದು ಮಾಡಿ ಎಂದುತ್ತರಿಸಿ ನಿಟ್ಟುಸಿರುಬಿಟ್ಟೆವು.
ಹಲವು ದಿನಗಳು ಕಳೆದವು…. ಒಂದು ದಿನ ಬೆಳಗ್ಗೆ ಮನೆಯ ಗೇಟಿನ ಮುಂಭಾಗದಲ್ಲಿರುವ ಕಾರು ಶೆಡ್ಡಿನ ಒಳಗೆ ಬೆಕ್ಕೊಂದು ತನ್ನ ಎರಡು ಮರಿಗಳೊಡನೆ ತನ್ನ ಸ್ಥಾನ ಸ್ಥಾಪಿಸಿದ ಸುದ್ದಿ ನಮ್ಮವರಿಂದ ತಿಳಿಯಿತು. ಈಗಾಗಲೇ ಸಾಕಷ್ಟು ಅನುಭವ ಹೊಂದಿದ್ದ ನನಗೆ ಇದೊಂದು ಗಾಬರಿಯ ವಿಷಯವಾಗಿ ಕಾಡತೊಡಗಿತು. ನಾನು ಆ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲವೆನ್ನಿ. ಆದರೆ ಮರುದಿನ ಮನೆ ಮುಂದೆ ಸ್ವಲ್ಪ ಆಯಾಸಗೊಂಡಂತೆ ಕಾಣುವ ಹೆಣ್ಣು ಬೆಕ್ಕು ಕಾಲ ಬಳಿ ಸುಳಿದು ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ನಮ್ಮ ಪ್ರತಿಕ್ರಿಯೆಗೆ ಮುಖ ನೋಡತೊಡಗಿತು. ಎಷ್ಟು ಬೇಡವೆಂದರೂ ನನ್ನ ಮನಸ್ಸು ಕರಗಿ ನೀರಾಗಿ ಹರಿಯತೊಡಗಿತು! ಬೆಕ್ಕುಗಳ ಹೋಮ್ ಸ್ಟೇ ಆಗಿರುವ ನಮ್ಮ ಮನೆಯಲ್ಲಿ ಅವುಗಳಿಗಾಗಿ ವಿಶೇಷವಾದ ಬೆಕ್ಕಿನ ಬಿಸ್ಕೆಟ್ ಸದಾ ಸಿದ್ಧವಾಗಿರುವುದರಿಂದ ಅದನ್ನೇ ಅದಕ್ಕೆ ನೀಡಿ ಉಪಚರಿಸಲಾಯಿತು. ಅದನ್ನು ತಿಂದು ಹೋದ ಬೆಕ್ಕು ಮರುದಿನ ಬೆಳಗ್ಗೆ ತನ್ನ ಎರಡು ಪುಟ್ಟ ಮರಿಗಳೊಂದಿಗೆ ಮನೆ ಮುಂದೆ ಪ್ರತ್ಯಕ್ಷ! ಅವುಗಳೋ ಇನ್ನೂ ಹಾಲು ಕುಡಿಯುತ್ತಿರುವ ಕಂದಮ್ಮಗಳು. ಆರಾಮವಾಗಿ ಬಂದು ಮಲಗಿದ ಬೆಕ್ಕು ಮಕ್ಕಳಿಗೆ ಹಾಲೂಡಿಸತೊಡಗಿತು. ಹಿಂದಿನ ದಿನ ಬಂದು ಮನೆಯವರ ನಡವಳಿಕೆಯನ್ನು ಪರೀಕ್ಷಿಸಿ, ತನ್ನ ಮಕ್ಕಳು ಈ ಮನೆಯಲ್ಲಿ ಸುರಕ್ಷಿತವಾಗಿ ಬದುಕಬಲ್ಲವು ಎಂಬುದನ್ನು ದೃಢೀಕರಿಸಿಕೊಂಡು ಬಂದಿತ್ತು, ಆ ಬುದ್ಧಿವಂತ ಬೆಕ್ಕು! ಅಂತೂ ನಾವು ಅದರ ಪರೀಕ್ಷೆಯಲ್ಲಿ ಪಾಸಾಗಿದ್ದೆವು!
ದಿನಗಳು ಕಳೆದಂತೆ ಅದರ ಸಂಸಾರ ಸುಖವಾಗಿಯೇ ಸಾಗಿತ್ತು. ಈಗ ಮರಿಗಳು ಬೇರೆ ಆಹಾರವನ್ನು ತಿನ್ನಲು ಪ್ರಾರಂಭಿಸಿದ್ದವು. ತಾಯಿ ಮಕ್ಕಳಿಗೆ ಬೇಟೆಯಾಡಲು ಕಲಿಸುವುದನ್ನು ನೋಡಲು ಮೋಜೆನಿಸುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ತಾಯಿ ತನ್ನ ಮಕ್ಕಳನ್ನು ಬಳಿಗೆ ಬರಗೊಡದೆ ಕೋಪದಿಂದ ದೂರ ತಳ್ಳತೊಡಗಿತು. ಮತ್ತೆರಡು ದಿನಗಳಲ್ಲಿ ಮರಿಗಳಿಂದ ದೂರವಿದ್ದು ಅಲ್ಲಿಂದಲೇ ಅವುಗಳನ್ನು ಸ್ವಲ್ಪ ಹೊತ್ತು ಗಮನಿಸಿ ಹೋಗತೊಡಗಿತು. ಮುಂದೆ ನಿಧಾನವಾಗಿ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟಿತು. ನನಗಾಗ ಅಮೆರಿಕದ ಪೋಷಕರ ನೆನಪಾಗಿ ನಗು ಬಂತು. ಅಲ್ಲಿ ಮಕ್ಕಳು ಪ್ರೌಢಶಿಕ್ಷಣ ಕಲಿಯುವಾಗಲೇ ಪೋಷಕರಿಂದ ದೂರವಿದ್ದು, ಶಿಕ್ಷಣದ ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿ ಹಣ ಗಳಿಸುತ್ತಾ ಸ್ವತಂತ್ರವಾಗಿ ಬದುಕುವುದು ರೂಢಿ. ಇಲ್ಲಿ ತನ್ನ ಮಕ್ಕಳು ಇನ್ನು ಸ್ವತಂತ್ರವಾಗಿ ಜೀವಿಸಬಲ್ಲವೆಂಬ ವಿಶ್ವಾಸದಿಂದ ಅವುಗಳಿಂದ ದೂರ ಹೋಗಿತ್ತು… ಬುದ್ಧಿವಂತ ಮಾರ್ಜಾಲ!
ಈಗ ಮರಿಗಳೆರಡರ ಕಾನೂನುಬದ್ಧ ಪೋಷಕರಾದ ನಮಗೆ ಜವಾಬ್ದಾರಿ ಜಾಸ್ತಿಯಾಯಿತು. ಬೆಕ್ಕಿನ ಬಿಸ್ಕೆಟ್ ಪೊಟ್ಟಣಗಳು ಕೆ.ಜಿ.ಗಟ್ಟಲೆ ಮನೆಗೆ ಬರತೊಡಗಿದವು. ಜೊತೆಗೆ, ಫೋನ್ ಚಾರ್ಜರ್ ವಯರುಗಳು ಅವುಗಳ ಆಟಿಗೆಗಳಾಗಿ ಪರಿವರ್ತನೆಗೊಂಡು ಹಲವಾರು ತುಂಡುಗಳಾಗಿ ನಮ್ಮ ಮುಂದೆ ಕುಣಿಯಲಾರಂಭಿಸಿದವು! ಆದರೆ ಸ್ವಚ್ಛತೆಯ ಪಾಠವನ್ನು ಅಮ್ಮನಿಂದ ಬಹಳ ಚೆನ್ನಾಗಿಯೇ ಕಲಿತಿದ್ದರಿಂದ ಅದರ ಬಗ್ಗೆ ಏನೂ ದೂರುವಂತಿಲ್ಲ ಬಿಡಿ! ಮುದ್ದು ಮಕ್ಕಳಂತೆ ಆಟವಾಡುತ್ತಾ, ತಂಟೆ ಮಾಡುತ್ತಾ ಮನೆಯ ಸದಸ್ಯರಂತೆ ಬೆಳೆಯತೊಡಗಿದವು.
ಓಂದು ದಿನ, ಕೈತೋಟದ ಕಡೆಗೆ ತೆರೆದುಕೊಂಡಿದ್ದ ಅಡುಗೆ ಕೋಣೆ ಕಿಟಿಕಿಯ ಹಿಂದೆ ವಿಚಿತ್ರವಾದ ಹಿಸ್ ಸದ್ದು ಕೇಳತೊಡಗಿತು. ಜೊತೆಗೆ ಬೆಕ್ಕಿನ ಮರಿಗಳ ಕೂಗಾಟವೂ. ಏನಾಯ್ತೆಂದು ಓಡಿ ಹೋಗಿ ನೋಡಿದರೆ….!! ??? ದೇವಾ… ನಾಗರಹಾವೊಂದು ಹೆಡೆ ಎತ್ತಿ ಬುಸುಗುಡುತ್ತಾ ಮರಿಗಳ ಮೇಲೆ ಏರಿ ಬರಲು ಪ್ರಯತ್ನಿಸುತ್ತಿತ್ತು. ಇವುಗಳೆರಡೂ ಅದನ್ನು ಮುಂದುವರಿಯಲು ಬಿಡದೆ ಕಿರುಚುತ್ತಾ ಅಡ್ಡಗಟ್ಟುತ್ತಿದ್ದವು. ಹಾವೇನಾದರೂ ಮುಂದಕ್ಕೆ ಬಂದಿದ್ದರೆ, ಅಲ್ಲಿಂದ ಕೇವಲ ಹತ್ತು ಅಡಿ ದೂರದಲ್ಲಿರುವ ಮನೆಯ ಹಿಂಬಾಗಿಲಿಗೆ ಬಂದು ಒಳಗೆ ನುಗ್ಗುವ ಸಂಭವವಿತ್ತು! ಮರಿಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಊಹಿಸಲು ಈಗಲೂ ಭಯವಾಗುತ್ತದೆ. ಅಂತೂ, ಅಂದಿನಿಂದ ಅವುಗಳ ಮೇಲಿನ ಪ್ರೀತಿ ದ್ವಿಗುಣವಾಗಿ, ವಿಶೇಷ ಉಪಚಾರ ಪಡೆಯುವ ಭಾಗ್ಯ ಅವುಗಳದಾಯಿತು. ಅವುಗಳ ತಂಟೆ, ಪೀಕಲಾಟಿಗೆಗಳನ್ನು ಪ್ರೀತಿಯಿಂದ ಸಹಿಸುವಂತಾಯಿತು. ಕೆಲವು ತಿಂಗಳಿಗಳಲ್ಲಿ, ಬೆಕ್ಕುಗಳ ಸಹಜ ಸ್ವಭಾವದಂತೆ, ಮರಿಗಳು ದೊಡ್ಡದಾಗಿ ವಲಸೆ ಹೋಗಿಬಿಟ್ಟವು.
ಆದರೆ, ನಮ್ಮ ಮನೆಗೂ ಬೆಕ್ಕುಗಳಿಗೂ ಅದೇನೋ ಅವಿನಾಭಾವ ಸಂಬಂಧ ಇದ್ದಂತಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಮಾರ್ಜಾಲ ನಡಿಗೆ ಬಹಳ ಪ್ರಸಿದ್ಧಿ. ಸೊಂಟ ಬಳುಕಿಸುತ್ತಾ ನಡೆಯುವ ಈ ನಡಿಗೆಯಲ್ಲಿ ಅದೇನು ಅಷ್ಟು ಘನಾಂದಾರಿಕೆ ಇದೆ ಎಂದು ನನಗೆ ಅರ್ಥವೇ ಆಗಿರಲಿಲ್ಲ! ಆದರೆ, ಒಂದು ದಿನ ಬೆಳ್ಳಂಬೆಳಗ್ಗೆ ನಮ್ಮ ಮನೆಯ ಮುಂದೆ, ಏನೂ ತಿನ್ನದೆ ಬಡಕಲಾಗಿ, ಮೈತುಂಬಾ ಎಲುಬುಗಳೇ ಪ್ರಾಮುಖ್ಯತೆ ಪಡೆದು ಮೆರೆಯುತ್ತಿದ್ದ ಸಣ್ಣ ಬೆಕ್ಕಿನ ಮರಿಯೊಂದು ಮಿಯಾಂ ಮಿಯಾಂ ಎಂದು ಅತ್ತಿತ್ತ ನಡೆದಾಡುತ್ತಿತ್ತು, ಕಷ್ಟದಲ್ಲಿ. ಏನಾದರೂ ತಿನ್ನಲು ಸಿಗಬಹುದೆಂದು ಆಸೆಯಿಂದ ನಮ್ಮತ್ತ ನೋಡುತ್ತಿತ್ತು. ಅದರ ನಡಿಗೆಯನ್ನು ಗಮನವಿಟ್ಟು ನೋಡಿದಾಗ ಕ್ಯಾಟ್ ವಾಕ್ ನ ದರ್ಶನವಾಯ್ತು! ಬೇಡದ ಹೆಣ್ಣು ಬೆಕ್ಕಿನ ಮರಿಯನ್ನು ಯಾರೋ ಮನೆ ಗೇಟಿನ ಮುಂದೆ ಬಿಟ್ಟು ಹೋಗಿದ್ದು ಅರಿವಾಯಿತು. ಜೊತೆಗೆ, ದೇಹವನ್ನು ಬಲವಂತವಾಗಿ ಬಡಕಲು ಮಾಡಿಸಿಕೊಳ್ಳುವ ಸೌಂದರ್ಯ ರಾಣಿಯರ ಗೈರತ್ತೂ ಸೋಜಿಗವೆನಿಸಿತು. ಎರಡು ವರ್ಷಗಳ ಹಿಂದೆ ಬಂದ ಆ ಸೌಂದರ್ಯ ರಾಣಿಯು ಈಗ ನಮ್ಮ ಮನೆಯ “ಮಿಂಚು’ ಆಗಿ ನಲಿಯುತ್ತಿದ್ದಾಳೆ…ಅವಳ ಮಾಯೆಯಲ್ಲಿ ನಮ್ಮನ್ನು ಸಿಲುಕಿಸಿದ್ದಾಳೆ!
ಈ ಬೆಕ್ಕಿನ ಮೇಲೆ ನನ್ನ ಪತಿದೇವರಿಗೆ ಅಷ್ಟೇನೂ ಪ್ರೀತಿ ಇರಲಿಲ್ಲ….ಆಗಾಗ ಬೈಗಳೂ ತಿನ್ನುತ್ತಿತ್ತು. ಮನೆಯೊಳಗೆ ಬರಲು ಅದಕ್ಕೆ ಪರವಾನಿಗಿ ಇರಲಿಲ್ಲ. ಆದರೆ ಘಟನೆಯೊಂದು ಅವರ ನಿಲುವನ್ನು ಬದಲಿಸಲು ಕಾರಣವಾಯಿತು. ಒಂದು ರಾತ್ರಿ ಸುಮಾರು ಎಂಟು ಗಂಟೆ… ಎದುರಿನ ವರಾಂಡದಲ್ಲಿ ಶತಪಥ ಹಾಕುತ್ತಿದ್ದ ಬೆಕ್ಕು ಒಮ್ಮೆಲೇ ಅಲ್ಲೇ ಮೆಟ್ಟಲಿನ ಪಕ್ಕದಲ್ಲಿರುವ ಗಿಡದ ಬುಡವನ್ನು ತದೇಕಚಿತ್ತದಿಂದ ನೋಡುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ನಮ್ಮವರು ಅದನ್ನು ಗಮನಿಸಿ, ಅಲ್ಲಿಗೆ ಬೆಳಕು ಹಾಯಿಸಿ ನೋಡಿದಾಗ ಅತ್ಯಂತ ವಿಷಯುಕ್ತವಾದ ಕಪ್ಪಗಿನ ಹಾವೊಂದು ಮಲಗಿತ್ತು. ಕೂಡಲೇ ಅದನ್ನು ಅಲ್ಲಿಂದ ನಿವಾರಿಸಲಾಯಿತು. ಆದರೆ, ಆಗಬಹುದಾಗಿದ್ದ ಅಪಾಯವನ್ನು ಮಿಂಚು ಬೆಕ್ಕು ತಪ್ಪಿಸಿದ ಬಗ್ಗೆ ಬಹಳ ಅಭಿಮಾನದಿಂದ ಹೊಗಳಿದ್ದೇ ಹೊಗಳಿದ್ದು. ಆಮೇಲಿನಿಂದ ಸಂಚಾರಿ ಮಿಂಚುವಿಗೆ ಮನೆಯೊಳಗೆ ಬಂದಾಗ ರಾಜಾತಿಥ್ಯ!…ಸೋಫದ ಮೇಲೆಯೇ ಮಲಗಿ ಗಡದ್ದು ನಿದ್ದೆ ಮಾಡುತ್ತಿದೆ. ಒಂದೆರಡು ಗಂಟೆ ಅದು ಕಾಣದಿದ್ದರೆ ನಮ್ಮ ಕಣ್ಣುಗಳು ಹುಡುಕಾಟ ನಡೆಸುತ್ತವೆ. ಇಂತಹ ಪ್ರಾಣಿಗಳ ಸಹವಾಸವು ನಿವೃತ್ತ ಜೀವನದ ಏಕತಾನತೆಯನ್ನು ಮರೆಸಿ ಜೀವನೋತ್ಸಾಹವನ್ನು ತುಂಬುತ್ತವೆ ಎನ್ನಲಡ್ಡಿಯಿಲ್ಲ…. ನೀವೇನಂತೀರಿ?

ಶಂಕರಿ ಶರ್ಮ, ಪುತ್ತೂರು.


