“ಕರಾಗ್ರೇ ವಸತೇ ಲಕ್ಷ್ಮಿ…” ಹೇಳಿ ಕೈಗಳನ್ನು ಕಣ್ಣಿಗೊತ್ತಿಕೊಂಡು ಮಂಚದಿಂದ ಕೆಳಗಿಳಿದ ಲಹರಿ ಆರಾಮವಾಗಿ ಮಲಗಿದ್ದ ಗಂಡನತ್ತ ನೋಡಿ ನಿಟ್ಟುಸಿರುಬಿಟ್ಟಳು. ಎಂಥಹ ನೆಮ್ಮದಿಯ ಬದುಕು ಈ ಗಂಡಸರದ್ದು?’ ಎನ್ನಿಸಿತು.” ಅವಳು ಮುಖತೊಳೆದು ಗೀಸರ್ ಆನ್ ಮಾಡಿ ಅಡಿಗೆ ಮನೆ ಪ್ರವೇಶಿಸಿ ಹಾಲು, ನೀರು ಕಾಯಲಿಟ್ಟು ಫಿಲ್ಟರ್‌ಗೆ ಪುಡಿ ಹಾಕಿದಳು. ರಾತ್ರಿಯೇ ಹೆಚ್ಚಿಟ್ಟಿದ್ದ ತರಕಾರಿಗಳನ್ನು ಹೊರಗೆ ತೆಗೆದು ತೊಳೆದಿಟ್ಟಳು. ಕಾದ ಹಾಲು ಇಳಿಸಿ ಕುಕ್ಕರ್ ಏರಿಸಿದಳು. ಕುದಿಯುತ್ತಿದ್ದ ನೀರು ಫಿಲ್ಟರ್‌ಗೆ ಸುರಿದು ಅನ್ನಕ್ಕಿಟ್ಟಳು. ಚಪಾತಿ ಹಿಟ್ಟು ಕಲಿಸಿಟ್ಟು ಬೇಯಿಸಿಟ್ಟಿದ್ದ ಅವರೆಕಾಳು ತೆಗೆದು ಉಸಲಿ ಮಾಡಿದಳು. ಅಷ್ಟರಲ್ಲಿ ಪ್ರಸಾದ್ ‘ಕಾಫಿ’ ಎಂದು ಕೂಗಿದ.
ಲಹರಿ ಕಾಫಿ ಕೊಟ್ಟು ಮಲ್ಲಿಯನ್ನು ಕೂಗಿದಳು.
ಬಾಗಿಲಿಗೆ ನೀರು ಹಾಕುತ್ತಿದ್ದ ಮಲ್ಲಿ ರಂಗೋಲೆ ಬಟ್ಟಲು ಹಿಡಿದು ಒಳಗೆ ಬಂದಳು.
“ಅಕ್ಕಾ ನಂಗೂ ಕಾಫಿ ಕೊಟ್ಟುಬಿಡಿ.”
ಸ್ಟೌವ್ ಹತ್ತಿರ ಇದೆ ತೊಗೋ ಕುಕ್ಕರ್ ಕೂಗುತ್ತಲೂ ಆರಿಸು. ನಾನು ಸ್ನಾನ ಮಾಡಿಕೊಂಡು ಬರ‍್ತೀನಿ.
“ಪೇಪರ್ ಬಂದಿಲ್ವಾ?”
“ನೆನ್ನೇನೇ ಪೇಪರ್ ಕೊಡೋವ್ರು ಏಳಿದ್ರಲ್ಲಾ…! ಮೂರು ದಿನ ಇರಾಕಿಲ್ಲ ನೀವು ಬೇರೆ ವ್ಯವಸ್ಥೆ ಮಾಡ್ಕಳೀಂತ ನೀನು ಪೇಪರ್ ಎಸರು ಬರ‍್ಕೊಟ್ಟಿದ್ದಿದ್ರೆ ನಾನೇ ತರ‍್ತಿದ್ದೆ.”
“ಲಹರಿ ಇವಳಿಗೆ ದುಡ್ಡುಕೊಟ್ಟು ಪೇಪರ್ ಹೆಸ್ರು ಬರ‍್ಕೊಡು.”
“ಅಕ್ಕ ಸ್ನಾನಕ್ಕೋಗವ್ರೆ ನೀವೇ ಬರ‍್ಕೊಡಿ. ಅಂಗೆ ಮೂರು ದಿನದ ಪೇಪರ್ ದುಡ್ಡು ಕೊಡಿ.”
ಅವನು ಬರೆದುಕೊಟ್ಟು ಸ್ನಾನಕ್ಕೆ ಹೋದ. ಸ್ನಾನ ಮಾಡಿ ಬಂದ ಲಹರಿ ದೇವರದೀಪ ಹಚ್ಚಿ ಅಡಿಗೆ ಮನೆ ಪ್ರವೇಶಿಸಿದಳು. ಅಷ್ಟರಲ್ಲಿ ದಿಯಾ, ದಿಶಾ ಎದ್ದು ಬಂದರು. ಅವರಿಗೆ ಹಾರ್ಲಿಕ್ಸ್ ಕೊಟ್ಟು ಕುಕ್ಕರ್ ಇಳಿಸಿದಳು. ಅನ್ನ ಆರಲು ಹಾಕಿ, ಒಂದು ಕಡೆ ಹುಳಿ ಮಾಡಲಿಟ್ಟು, ಮತ್ತೊಂದು ಕಡೆ ಅವರೆಕಾಳು ಒಗ್ಗರಣೆ ಹಾಕಿದಳು.
ಮಲ್ಲಿ ಮಕ್ಕಳು ರೆಡಿಯಾಗಲು ಸಹಾಯ ಮಾಡುತ್ತಿದ್ದುದರಿಂದ ಅವರ ಬಗ್ಗೆ ಯೋಚನೆ ಇರಲಿಲ್ಲ. ದಿಯಾ ಏಳನೇ ತರಗತಿಯಲ್ಲಿದ್ದಳು. ದಿಶಾ ನಾಲ್ಕನೇ ತರಗತಿಯಲ್ಲಿದ್ದಳು. ಇಬ್ಬರು ಒಂದೇ ಶಾಲೆಗೆ ಹೋಗುತ್ತಿದ್ದರು. ಕಂಪನಿಗೆ ಹೋಗುವಾಗ ಪ್ರಸಾದ್ ಅವರನ್ನು ಡ್ರಾಪ್ ಮಾಡುತ್ತಿದ್ದ. ಸಾಯಂಕಾಲ ಮಲ್ಲಿಯ ಗಂಡ ಆಟೋದಲ್ಲಿ ಮಕ್ಕಳನ್ನು ಕರೆತರುತ್ತಿದ್ದ.
ಅವಳು ಚಪಾತಿ, ಪಲ್ಯ ನಾಲ್ಕು ಡಬ್ಬಿಗಳಿಗೆ ಹಾಕಿ ಮೊಸರನ್ನು ಕಲೆಸಿ ಕೆಳಗಿನ ಡಬ್ಬಿಗಳಿಗೆ ಹಾಕಿದಳು. ನಂತರ ಚಪಾತಿ ಮಾಡಿ ಹಾಟ್‌ಕೇಸ್‌ಗೆ ಹಾಕಿ ಪಲ್ಯ ಸಣ್ಣ ಪಾತ್ರೆಗೆ ಬಗ್ಗಿಸಿ ಡೈನಿಂಗ್ ಟೇಬಲ್ ಮೇಲಿಟ್ಟು ತಾನು ರೆಡಿಯಾಗಲು ಹೋದಳು.
ಲಹರಿ ಬ್ಯಾಂಕ್ ಉದ್ಯೋಗಿ. ಅವಳ ಬ್ಯಾಂಕ್ ವಿಜಯನಗರದಲ್ಲಿತ್ತು. ಲಹರಿ ಇದ್ದಿದ್ದು ಆರ್‌ಪಿಸಿ ಲೇಔಟ್‌ನಲ್ಲಿ. ಸಾಮಾನ್ಯವಾಗಿ ಬ್ಯಾಂಕ್‌ಗೆ ಅವಳು, ಅನಿತಾ ಆಟೋ ಮಾಡಿಕೊಂಡು ಹೋಗುತ್ತಿದ್ದರು.
ಅವಳು ರೆಡಿಯಾಗಿ ಹೊರಗೆ ಬಂದಾಗ ಮಕ್ಕಳು ತಿಂಡಿ ತಿಂದಾಗಿತ್ತು. ಪ್ರಸಾದ್ ಪೇಪರ್ ನೋಡುತ್ತಾ ಚಪಾತಿ ತಿನ್ನುತ್ತಿದ್ದ ಡೈನಿಂಗ್ ಟೇಬಲ್ ಮೇಲೆ ಟಿಫನ್ ಕ್ಯಾರಿಯರ್ ಸಿದ್ಧವಿದ್ದವು.
ವಾಷಿಂಗ್ ಮಿಷನ್‌ಗೆ ಬಟ್ಟೆ ಹಾಕುತ್ತಿದ್ದ ಮಲ್ಲಿ ಹೊರಗೆ ಬಂದು ಹೇಳಿದಳು. “ಅಕ್ಕ ಒಂದು ಚಪಾತಿಯಾದರೂ ತಿನ್ನಿ. ಕೆಲ್ಸ ಮಾಡಾಕೆ ಸಕ್ತಿ ಬ್ಯಾಡ್ವಾ?”
ಕಲ್ಲುಗುಂಡಿನಂತೆ ಕೂತಿದ್ದ ಗಂಡನನ್ನೊಮ್ಮೆ ನೋಡಿ ಆತುರಾತುರವಾಗಿ ಒಂದು ಚಪಾತಿ, ಪಲ್ಯ ತಿಂದಳು. ಮಲ್ಲಿ ಹಾಲು ತಂದಿಟ್ಟಳು.
“ಮಲ್ಲಿ ಇಡ್ಲಿಗೆ ಹಾಕಿದೀನಿ…….”
“ಸರಿ. ಸಾಯಂಕಾಲ ಬಂದು ಕಾಯಿ ತುರಿದು ತರಕಾರಿ ಎಚ್ಕೋಡ್ತೀನಿ. ಇಡ್ಲಿ ಹಿಟ್ಟು ಗ್ರೈಂಡ್ ಮಾಡಿಟ್ಟು ಕೆಲಸ ಮಾಡ್ಕೋತೀನಿ.”
ಗಂಡ ಮಕ್ಕಳು ಬೈ ಹೇಳಿ ಕಾರು ಹತ್ತಿದರು.
ಅವಳು ಹೊರಗೆ ಬರುವ ಹೊತ್ತಿಗೆ ಅನಿತಾ ಆಟೋದಲ್ಲಿ ಬಂದಳು. ಗೆಳತಿಯ ಮುಖ ನೋಡಿ ಅನಿತಾ ಕೇಳಿದಳು.
“ನಿನ್ನ ಗಂಡ ಇಂಜಿನಿಯರ್ ಅಲ್ವಾ?”
“ಹೌದು.”
“ಅವರು ನಿನಗೆ ಮನೆ ಕೆಲಸದಲ್ಲಿ ತುಂಬಾ…. ಸಹಾಯ ಮಾಡ್ತಾರಾ?”
“ಹುಂ ಮಾಡ್ತಾರೆ.”
“ಏನು ಮಾಡ್ತಾರೆ?”
“ಅವರ ಕೆಲಸವೆಲ್ಲಾ ಅವರೇ ಮಾಡಿಕೊಳ್ತಾರೆ. ಯಾರೂ ಎಬ್ಬಿಸದಿದ್ದರೂ ಎದ್ದು ರೆಡಿಯಾಗ್ತಾರೆ. ನಾನು ಮಾಡಿದ ತಿಂಡಿ, ಅಡಿಗೆ ಖಾಲಿ ಮಾಡ್ತಾರೆ. ಮನೆಗೆ ತರಿಸುವ ಪೇಪರ್‌ಗೆ ನ್ಯಾಯ ಒದಗಿಸ್ತಾರೆ. ಮಕ್ಕಳನ್ನು ಸ್ಕೂಲ್‌ಗೆ ಬಿಡ್ತಾರೆ.”
“ಇದೇನು ಸಹಾಯ ಮಾಡುವ ರೀತಿ?”
“ಆಕ್ಷೇಪಣೆ ಮಾಡದೆ ಊಟ, ತಿಂಡಿ ಮಾಡಿದರೆ ಅದು ಪುಣ್ಯ ಅಂದುಕೋ. ಕೆಲವು ಗಂಡಸರು ಕೂತಿದ್ದು ನಿಂತಿದ್ದಕ್ಕೆ ತಪ್ಪು ತೆಗೆಯುತ್ತಾರೆ. ಅವರಿಗೆ ಕಂಪೇರ್ ಮಾಡಿದರೆ ಪ್ರಸಾದ್ ಸಾವಿರ ಪಾಲು ಬೆಟರ್.”
“ನೀನೂ ಸಂಪಾದಿಸ್ತಿದ್ದೀಯ. ನೀನು ಅವರ ಭಾರ ಹಂಚಿಕೊಂಡಿರುವಾಗ ಅವರು ನಿನ್ನ ಹೊರೆ ಕಡಿಮೆ ಮಾಡಬೇಕಲ್ವಾ?”
“ಆ ತರಹ ಗಂಡಸರು ಅಪರೂಪ ಕಣೆ. ನೀನು ಮದುವೆಯಾಗು, ನಿನಗೆ ಅರ್ಥವಾಗತ್ತೆ.”
“ಈ ವಯಸ್ಸಿನಲ್ಲಿ ನನ್ನ ಯಾರು ಮದುವೆಯಾಗ್ತಾರೆ?”
“ನನಗೆ ನಮ್ಮನೆಯಲ್ಲಿ ೨೧ ವರ್ಷಕ್ಕೇ ಮದುವೆ ಮಾಡಿದರು. ನಿನಗೆ ನನ್ನ ವಯಸ್ಸಿರಬಹುದು. ೩೨ ವರ್ಷಕ್ಕೂ ಮದುವೆ ಆಗಬಹುದು.”
“ಬೇಡ ತಾಯಿ. ನನಗೆ ನಿನ್ನಷ್ಟು ತಾಳ್ಮೆಯಿಲ್ಲ. ೨೦ ವರ್ಷದ ಮೇಲೆ ಮದುವೆಯಾದ್ರೆ ಮಕ್ಕಳು ಬೇಡ ಅನ್ನಿಸತ್ತೆ. ಜವಾಬ್ದಾರಿ ಅನ್ನಿಸತ್ತೆ.”
“ನಿನ್ನ ಮಾಧವ ಏನಂತಿದ್ದಾನೆ?”
“ನಿನಗೋಸ್ಕರ ಬಾಂಬೆ ಬಿಟ್ಟು ಬರ‍್ತೀನಿ. ನಿನಗೆ ಮಕ್ಕಳು ಬೇಡಾಂದ್ರೆ ನನಗೂ ಬೇಡ. ಇನ್ನು ಕಾಯಿಸಬೇಡ” ಅಂತಿದ್ದಾನೆ.
“ಅವರು ಹೇಳ್ತಿರೋದು ಸರಿಯಾಗಿದೆ ಕಣೆ. ಬೇಗ ಮದುವೆಯಾಗು.”
“ಆಗ ಪಿ.ಜಿ. ಬಿಟ್ಟು ಮನೆ ಮಾಡಬೇಕು. ಇಬ್ಬರೂ ದುಡಿಯಕ್ಕೆ ಹೋಗಬೇಕು. ಮನೆಯಲ್ಲಿ ಮಾಡರ‍್ಯಾರು? ಮಾಧವ ನಿನ್ನ ಗಂಡನ ಹಾಗೆ ಸಹಾಯ ಮಾಡದಿದ್ರೆ ನಾನು ಹೇಗೆ ನಿಭಾಯಿಸಲಿ?”
“ಕೈಗೊಬ್ಬ, ಕಾಲಿಗೊಬ್ಬ ಕೆಲಸದವರನ್ನು ಇಟ್ಟುಕೋ……..”
“ಲಹರಿ ನಿನ್ನ ಗಂಡನಿಗೆ ಕೈ ತುಂಬಾ ಸಂಬಳ ಬರುತ್ತದಲ್ವಾ? ನೀನು ಯಾಕೆ ಕೆಲಸ ಮಾಡಬೇಕು?”
“ಮನೆ ಸಾಲ ತೀರಿಸಬೇಡವಾ? ಮಕ್ಕಳನ್ನು ಓದಿಸಬೇಡವಾ? ಮದುವೆ ಮಾಡೋದು ಬೇಡವಾ? ಬೆಂಗಳೂರಿನಲ್ಲಿ ಒಬ್ಬರ ಸಂಪಾದನೆಯಿಂದ ಜೀವನ ನಡೆಸೋದು ಕಷ್ಟ ಕಣೆ.
“ನಿಮ್ಮತ್ತೆ ಮನೆ ಆಸ್ತಿ ಏನೂ ಇಲ್ವಾ?”
“ನಮ್ಮ ಮಾವ ತೀರ್ಥಹಳ್ಳಿಯ ಯಾವುದೋ ದೇವಸ್ಥಾನದಲ್ಲಿ ಪುರೋಹಿತರಾಗಿದ್ರು. ಆ ಮೇಲೆ ಮನೆಯಲ್ಲಿ ಅಂಗಡಿ ಇಟ್ಟರಂತೆ. ಇಬ್ಬರು ಗಂಡು ಮಕ್ಕಳನ್ನು ಓದಿಸಿದ್ರು. ಪ್ರಸಾದ್, ಅವರಣ್ಣ ಪ್ರತಾಪ್. ಇಬ್ಬರೂ ಓದಿರುವುದು ಸರ್ಕಾರಿ ಶಾಲೆಯಲ್ಲಿ. ‘ಪ್ರಸಾದ್ ಮೈಸೂರಿನಲ್ಲಿ ಅನಾಥಾಲಯದಲ್ಲಿದ್ದುಕೊಂಡು ಬಿ.ಇ. ಓದಿದ್ರಂತೆ. ಅವರಣ್ಣ-ಅತ್ತಿಗೆ ಇಬ್ಬರೂ ತೀರ್ಥಹಳ್ಳಿಯ ಹತ್ತಿರ ಹೈಸ್ಕೂಲು ಟೀಚರ್ಸ್. ಇಬ್ಬರು ಮಕ್ಕಳಿದ್ದಾರೆ. ದೊಡ್ಡವನು ಎಸ್.ಎಸ್.ಎಲ್.ಸಿ., ಮಗಳು ನಮ್ಮ ದಿಯಾ ಜೊತೆ.”
“ಅವರೆಲ್ಲರೂ ಒಳ್ಳೆಯವರಾ?”
“ತುಂಬಾ ಒಳ್ಳೆಯವರು. ಮಕ್ಕಳು, ಮೊಮ್ಮಕ್ಕಳೂಂದ್ರೆ ಪ್ರಾಣ. ನಮ್ಮತ್ತೆ-ಮಾವ ಸೊಸೆಯರನ್ನು ತಮ್ಮ ಮಕ್ಕಳೂಂತ ನೋಡಿಕೊಳ್ತಾರೆ.”
“ಹೌದಾ?”
“ಮಕ್ಕಳಿಗೆ ರಜಾ ಬರ‍್ತಿರುವ ಹಾಗೆ ಅವರೇ ಬರ‍್ತಾರೆ. ಅಥವಾ ನಾವೇ ಹೋಗ್ತೀವಿ. ಮೊಮ್ಮಕ್ಕಳ ಕೈಲಿ ನಯವಾಗಿ ಕೆಲಸ ಮಾಡಿಸ್ತಾರೆ.”
“ನಾಳೆ ನೀವೂ ಓದಿ ಕೆಲಸಕ್ಕೆ ಸೇರಬೇಕಲ್ಲವಾ? ಮನೆ ಕೆಲಸ ಕಲಿಯದಿದ್ದರೆ ಹೇಗೆ ಅಂತಾರೆ.”
“ಸೂಪರ್ ಕಣೆ.”
“ನೀನು ಮದುವೆಯಾಗಿ ಬೇರೆ ಮನೆಗೆ ಹೋಗುವವಳು. ಅದಕ್ಕೆ ಕೆಲಸ ಕಲೀಂತ ನಮ್ಮತ್ತೆ ಯಾವತ್ತೂ ಹೇಳಲ್ಲ. ಹೆಣ್ಣು ಮಕ್ಕಳು ಅವರ ಕಾಲಿನ ಮೇಲೆ ಅವರು ನಿಲ್ಲಬೇಕು” ಅಂತಾರೆ.
ನಿಮ್ಮತ್ತೆ ತಮ್ಮ ಮಕ್ಕಳಿಗೆ “ನೀವು ಹೆಂಡತಿಯರಿಗೆ ಮನೆಕೆಲಸದಲ್ಲಿ ಸಹಾಯ ಮಾಡೀಂತ ಹೇಳಲ್ವಾ?”
“ನಾನಾಗಲಿ, ನನ್ನ ಓರಗಿತ್ತಿ ಲಲಿತಾ ಆಗಲಿ ಅವರ ಹತ್ರ ಏನೂ ಹೇಳಲ್ಲ. ಪ್ರಸಾದ್ ಮನೆಕೆಲಸದಲ್ಲಿ ಸಹಾಯ ಮಾಡದಿರಬಹುದು. ಅವರಿಗೆ ಸಂಸಾರದ ಮೇಲೆ ಪ್ರೀತಿ ಇದೆ ಕಣೆ.”
“ಭಾನುವಾರ ಪ್ರಸಾದ್ ನಿನ್ನನ್ನು ಎಲ್ಲಿಗಾದರೂ ಕರ‍್ಕೊಂಡು ಹೋಗ್ತಾರಾ?”
“ಸಾಮಾನ್ಯವಾಗಿ ಭಾನುವಾರ ಬೆಳಿಗ್ಗೆ ನಾನು ತಿಂಡಿ ಮಾಡಲ್ಲ. ಬೆಳಿಗ್ಗೆ ಕಾಫಿ ಮಾಡಿ ಮಲಗಿಬಿಡ್ತೇನೆ. ಮಲ್ಲಿಗೂ ಲೇಟಾಗಿ ಬರುವುದಕ್ಕೆ ಹೇಳ್ತೀನಿ. ಪ್ರಸಾದ್ ಮಕ್ಕಳನ್ನು ಲಾಲ್‌ಬಾಗ್‌ಗೋ, ಕಬ್ಬನ್‌ಪಾರ್ಕ್ಗೋ ಕರ‍್ಕೊಂಡು ಹೋಗಿ ಅಲ್ಲಿ ಗಂಟಾನುಗಟ್ಟಲೆ ಓಡಾಡಿ ತಿಂಡಿ ತಿಂದು ನನಗೂ ತಿಂಡಿ ತರ‍್ತಾರೆ.”
“ಭಾನುವಾರ ನಿನಗೆ ಸಂಪೂರ್ಣ ರೆಸ್ಟಾ?”
“ಎಲ್ಲಿ ರೆಸ್ಟ್? ಯೂನಿಫಾರಂಗಳನ್ನು ಒಗೆಸಿ ಇಸ್ತ್ರಿಗೆ ಕಳುಹಿಸಬೇಕು. ಪ್ರಸಾದ್ ಬಟ್ಟೆ, ನನ್ನ ಸೀರೆಗಳನ್ನು ವಾಷ್‌ಮಾಡಿ ಐರನ್‌ಗೆ ಕಳಿಸಬೇಕು. ಸಾಮಾನುಗಳು ಏನಿದೆ ಏನಿಲ್ಲ ನೋಡಬೇಕು. ಪುಡಿಗಳನ್ನು ಮಾಡಬೇಕು. ಸೋಮವಾರಕ್ಕೆ ತರಕಾರಿ ತರಬೇಕು. ಮನೆ ಧೂಳು ತೆಗೆಯಬೇಕು. ಈ ಮಧ್ಯೆ ಮಧ್ಯಾಹ್ನಕ್ಕೆ ಸಿಂಪಲ್ಲಾಗಿ ಅಡಿಗೆ ಮಾಡಬೇಕು.”
“ನೀನು ಹೊರಗೆ ಹೋಗಲ್ವಾ?”
“ತಿಂಗಳಲ್ಲಿ ೨ ಭಾನುವಾರ ನಮ್ಮ ಫ್ಯಾಮಿಲಿ ಹೊರಗೆ ಹೋಗ್ತೀವಿ. ಸಿನಿಮಾಗೆ ಹೋಗಿ ರಾತ್ರಿ ಊಟ ಮಾಡಿಕೊಂಡು ಬರ‍್ತೀವಿ. ಹಬ್ಬಗಿಬ್ಬ ಇದ್ರೆ ಶಾಪಿಂಗ್ ಮಾಡಲು ಹೋಗ್ತೀವಿ. ಮಕ್ಕಳ ಹುಟ್ಟಿದ ಹಬ್ಬದ ದಿನ ಮನೆಯಲ್ಲಿ ಅವರ ಫ್ರೆಂಡ್‌ನ ಕರೆದು ಸೆಲಬ್ರೇಟ್ ಮಾಡ್ತೀವಿ…….. ಇನ್ನೇನು ಬೇಕು?”
“ಪ್ರಸಾದ್ ನಿನ್ನ ಪ್ರೀತಿಸ್ತಾರಾ?”
“ಪ್ರೀತಿ ಇಲ್ಲದೆ ನಾವು ಒಟ್ಟಿಗೆ ಇರಲು ಸಾಧ್ಯಾನಾ?”
“ಹಾಗಲ್ಲ ಕಣೆ.”
“ನಿನ್ನ ಪ್ರಶ್ನೆಗಳನ್ನು ನಿಲ್ಲಿಸು ತಾಯಿ. ಬ್ಯಾಂಕ್ ಬಂತು……..”
ಅವರು ಆಟೋದಿಂದ ಇಳಿಯುವ ಹೊತ್ತಿಗೆ ಸರಿಯಾಗಿ ನಿರ್ಮಲಾ ಗಂಡನ ಬೈಕ್‌ನಿಂದ ಇಳಿದಳು.
“ಹಾಯ್………”
“ಹಾಯ್, ಏನೇ ಇಷ್ಟು ಬೇಗ ಬಂದಿದ್ದೀಯಾ?”
“ರಾಜೇಶ್‌ಗೆ ಎಕ್ಸಾಮ್ ಡ್ಯೂಟಿಯಿದೆ. ಅದಕ್ಕೆ ಬೇಗ ಹೊರೆಟೆವು.”
“ಓ……..”
“ನಾನು ಸಾಯಂಕಾಲ ನಿಮ್ಮ ಜೊತೆ ಬರ‍್ತೀನಿ.”
“ಓ.ಕೆ. ಅಷ್ಟೇನಾ?”
“ನಾಳೆ ಮಧ್ಯಾಹ್ನಕ್ಕೆ ಡಬ್ಬಿ ತರಬೇಡಿ. ನಾನು ಹೋಟೆಲ್ ಅಮೃತಾದಲ್ಲಿ ಊಟ ಕೊಡಿಸ್ತೀನಿ.”
“ನಾಳೆ ಏನು ವಿಶೇಷ?”
“ನಮ್ಮ ಮದುವೆಯಾಗಿ 15 ವರ್ಷ. ನಾಳೆ ರಾತ್ರಿ ಹೊರಗೆ ಊಟಕ್ಕೆ ಹೋಗ್ತೀವಿ. ಮಧ್ಯಾಹ್ನ ನಿಮ್ಮ ಜೊತೆ ಊಟ.”
“ಕಂಗ್ರಾಟ್ಸ್ ಇನ್ ಅಡ್ವಾನ್ಸ್.”
“ನಾಳೇನೂ ಹೇಳಬೇಕು……..”
ಮೂವರೂ ಬ್ಯಾಂಕ್ ಪ್ರವೇಶಿಸಿ ತಮ್ಮ ಕೆಲಸಗಳಲ್ಲಿ ಮುಳುಗಿದರು.
ಸಾಯಂಕಾಲ ನಿರ್ಮಲಾ ಅವರ ಜೊತೆ ಆಟೋ ಹತ್ತಿದಳು.
“ನಿಮ್ಮಿ ನಿನ್ನ ಗಂಡ ನಿನಗೆ ಮನೆ ಕೆಲಸದಲ್ಲಿ ಸಹಾಯ ಮಾಡ್ತಾರಾ?”
“ಅದು ಬುದ್ಧು ಕಣೇ. ತಾನಾಗಿ ತಾನು ತಿಳಿದುಕೊಂಡು ಮಾಡಲ್ಲ. ನಾನಾಗಿ ನಾನೇ ಕೇಳಿದ್ರೆ ಮಾಡ್ತಾನೆ.”
“ನೀನು ಹೇಳದೆ ಬಿಡ್ತೀಯಾ?”
“ನೋಡೇ ಕೆಲವು ಕೆಲಸಗಳನ್ನು ನಾವೇ ಮಾಡಬೇಕು. ಅವನು ಮಾಡುವಂತಹ ಕೆಲಸ ಅವನ ಕೈಲಿ ಮಾಡಿಸ್ತೀನಿ” ಎಂದಳು ನಗುತ್ತಾ.
“ಯಾಕೆ ನಗುತ್ತೀಯಾ?”
“ಪ್ರತಿದಿನ ನಮ್ಮನೆಗೆ ಒಬ್ಬಳು ಮಲ್ಲಿಗೆ ಹೂವು ತಂದುಕೊಡ್ತಾಳೆ. ನಾನು ದೇವರಿಗೆ ಹಾಕಿ ಟೇಬಲ್ಮೇಲೆ ಇಟ್ಟರ‍್ತೀನಿ. ನಮ್ಮ ಬುದ್ದು ತಾನಾಗಿ ತಾನೇ ತಿಳಿದುಕೊಂಡು ಹೂವು ಮುಡಿಸಿದ್ರೆ ಕೇಳು. ನಾನು ಹೇಳಿದರೆ ಮುಡಿಸ್ತಾನೆ. ಅದರಲ್ಲೇನು ಸ್ವಾರಸ್ಯ ಇರುತ್ತೆ ಹೇಳು.”
“ನಿನ್ನ ಗಂಡ ನಿನ್ನ ತುಂಬಾ ಪ್ರೀತಿಸ್ತಾರಾ?”
“ಏನು ಪ್ರಶ್ನೇನೇ ನಿನ್ನದು?”
“ಹಾಗಲ್ಲ ಕಣೆ. ಅವರು ಯಾವಾಗಲೂ ನಿನ್ನ ಜೊತೆ ಇರ‍್ತಾರಾ?”
“ಅವನು ಪ್ರೀತಿಸ್ತಾನೇಂತ ಗೊತ್ತಿದೆ. ಅದಕ್ಕೋಸ್ಕರ ಅವನು ಮೂರು ಹೊತ್ತೂ ತಬ್ಬಿಕೊಂಡು ಕೂತಿರುವುದಕ್ಕಾಗತ್ತಾ? ನೀನೂ ಮದುವೆಯಾಗು ಅರ್ಥವಾಗತ್ತೆ.”
“ಅವಳಿಗೆ ಮದುವೆಯಾಗಕ್ಕೆ ಭಯವಂತೆ ಕಣೆ. ಮಾಧವ ಇವಳಿಗೋಸ್ಕರ ಕಾಯ್ತಾ ಕೂತಿದ್ದಾನೆ. ಇವಳಿಗೆ ನೂರೆಂಟು ಸಂದೇಹಗಳು………”
“ಯಾಕೆ?”
“ಕಾಲ್ ಮಾಡಿ ಹೇಳ್ತೀನಿ. ನೀನು ಬುದ್ಧಿವಂತನಾದರೆ ಈ ಹುಚ್ಚೀನ್ನ ಮದುವೆಯಾಗಬೇಡಾಂತ ಹೇಳ್ತೀನಿ.”
“ಅವನ ಫೋನ್ ನಂಬರ್ ಕೊಡು. ಈ ಹುಚ್ಚೀನ್ನ ಮದುವೆಯಾಗಬೇಡಾಂತ ಹೇಳ್ತೀನಿ.”
“ಯಾಕೆ?”
“ನಿನ್ನ ಪ್ರಶ್ನೆಗಳಿಗೆ ಉತ್ತರ ಹೇಳುವಷ್ಟರಲ್ಲಿ ಅವನ ಆಯಸ್ಸು ಮುಗಿದುಹೋಗತ್ತೆ…… ಅದಕ್ಕೆ……”
“ಹೋಗೇ………”
“ನಾನು ಇಳಿಯಲೇ ಬೇಕು. ನಾಳೆ ಮಧ್ಯಾಹ್ನ ಊಟಕ್ಕೆ ಹೋಗೋಣ. ಮರೆಯಬೇಡಿ.”
ಇಬ್ಬರೂ ಕೈ ಬೀಸಿದರು.
“ಲಹರಿ ನಾಳೆ ಶನಿವಾರ ಪ್ರಸಾದ್‌ಗೆ ರಜಾ ಅಲ್ವಾ?”
“ಹುಂ. ಅದಕ್ಕೆ ಅವರೇ ಪೇರೆಂಟ್ಸ್ ಮೀಟಿಂಗ್‌ಗೆ ಹೋಗ್ತಾರೆ. ಮಧ್ಯಾಹ್ನ ಮಕ್ಕಳನ್ನು ಊಟಕ್ಕೆ ಕರೆದುಕೊಂಡು ಹೋಗಿ ಅಂತ ಹೇಳ್ತೀನಿ. ಬೆಳಿಗ್ಗೆ ಉಪ್ಪಿಟ್ಟು ಮಾಡಿದರಾಯ್ತು.”
ರಾತ್ರಿ ಊಟ ಮಾಡುವಾಗ ಪ್ರಸಾದ್ ಪೇರೆಂಟ್ಸ್ ಮೀಟಿಂಗ್ ಮುಗಿಸಿಕೊಂಡು ಮಕ್ಕಳ ಜೊತೆ ಊಟಕ್ಕೆ ಹೋಗುವುದಾಗಿ ಹೇಳಿದ.
(ಮುಂದುವರಿಯುವುದು)

–ಸಿ.ಎನ್.ಮುಕ್ತಾ, ಮೈಸೂರು

