ಆಧುನಿಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ. ಉನ್ನತ ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ, ಅಂತರರಾಷ್ಟ್ರೀಯ ವ್ಯಾಪಾರ, ಐ. ಟಿ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಪಾರ ಬೇಡಿಕೆಯನ್ನು ಹೊಂದಿದೆ. ಬಹು ಭಾಷೆಗಳನ್ನಾಡುವ ಭಾರತದಂತಹ ದೇಶದಲ್ಲಿ ಇಂಗ್ಲೀಷ್ ಒಂದು ಸಂಪರ್ಕ ಭಾಷೆಯಾಗಿದೆ. ಜಾಗತಿಕ ಮಟ್ಟದಲ್ಲೂ ವಿವಿಧ ಭಾಗಗಳ ಜನರನ್ನು ಒಗ್ಗೂಡಿಸುವ ಸೇತುವೆಯಾಗಿದೆ. ವಿದ್ಯಾರ್ಥಿಗಳ ವೃತ್ತಿ ಬದುಕಿಗೆ ಮತ್ತು ಉದ್ಯೋಗದಲ್ಲಿ ಬೆಳೆಯಲು ಇಂಗ್ಲೀಷ್ ಭಾಷೆಯು ಸಹಕಾರಿಯಾಗಿದೆ. ಯುವ ಜನತೆಯ ಕನಸುಗಳನ್ನು ನನಸಾಗಿಸಲು ಮತ್ತು ಹೊಸ ಹೊಸ ಅವಕಾಶಗಳನ್ನು ಸಾಧಿಸಲು ಇಂಗ್ಲೀಷ್ ಭಾಷೆಯು ಸಹಾಯ ಮಾಡುತ್ತದೆ. ಇಂಗ್ಲೀಷ್ ಕಲಿಕೆಯು ಇಂದಿನ ಕಾಲದಲ್ಲಿ ಅತೀ ಅಗತ್ಯವಾಗಿದೆ ಎಂಬುದನ್ನು ನಾವು ಶಾಪಿಂಗ್ ಮಾಲ್‌ಗಳಿಗೆ ಹೋದಾಗ, ಸೂಪರ್ ಮಾರ್ಕೆಟ್‌ಗಳಲ್ಲಿ ಇನ್ನಿತರ ಆಧುನಿಕ ಸ್ಟೋರ್‌ಗಳಿಗೆ ಹೋದಾಗ ಕಾಣಬಹುದು. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಮ್ಮಲ್ಲಿ ಹೆಚ್ಚಾಗಿ ಇಂಗ್ಲೀಷ್‌ನಲ್ಲಿಯೇ ವ್ಯವಹರಿಸುತ್ತಾರೆ. ವಿಶೇಷವಾಗಿ ನಾವು ಹೊರ ರಾಜ್ಯಗಳಿಗೆ ಹೋದಾಗ ಅಥವಾ ವಿವಿಧ ಹಿನ್ನಲೆಯ ಜನರೊಂದಿಗೆ ವ್ಯವಹರಿಸುವಾಗ ಇಂಗ್ಲೀಷ್ ಭಾಷೆಯ ಅಗತ್ಯತೆ ಇದೆ.
ನಮ್ಮ ದೈನಂದಿನ ಬದುಕಿನಲ್ಲಿ ಇಂಗ್ಲೀಷ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ನಾವೆಲ್ಲರೂ ಮಾತನಾಡುವಾಗ ಹೆಚ್ಚಾಗಿ ನಡುನಡುವೆ ಅನೇಕ ಇಂಗ್ಲೀಷ್ ಪದಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲೂ ಕೆಲವೊಂದು ಆಂಗ್ಲ ಪದಗಳನ್ನು ಬಳಕೆ ಮಾಡುವಾಗ, ಅದಕ್ಕೆ ಹೆಚ್ಚು ಒತ್ತು ಕೊಟ್ಟು ಮಾತಾನಾಡುವುದನ್ನು ನಾವು ಗಮನಿಸಿರುತ್ತೇವೆ. ಉದಾಹರಣೆಗೆ, ಸೀ……ನಿಯರ್, (Senior) ಡೀ………ಪ್, (Deep) ವರ‍್ರಿ………ರಿ, (Very), ಸ್ಟ್ರಾಂ………..ಗ್(Strong) ಫಾ………ಸ್ಟ್(Fast) ಶಾರ್…………ಟ್.(Short) ಹೈ…………ಟ್, (Height), ಫ್ಯಾ……….ಟ್ (Fat) ಬ್ಲಾ…………ಕ್(Black) ವೈ………ಟ್(White) ಇತ್ಯಾದಿ. ಆದರೆ ನಿಜಕ್ಕೂ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಮಾಡುವಾಗ ಹೀಗೆ ಒತ್ತಿ ಹೇಳಬೇಕೆಂದಿಲ್ಲ. ಆದರೆ ನಾವೆಲ್ಲರೂ ಒತ್ತಿ ಹೇಳುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಉದ್ದವಾಗಿ ಮತ್ತು ಭಾವಪೂರ್ಣವಾಗಿ ಹೇಳುವುದು ಪರಿಪಾಠವಾಗಿದೆ. ಇದಕ್ಕೆ ಮುಖ್ಯ ಕಾರಣ ಉಚ್ಚಾರಣ ಶೈಲಿ ಅಥವಾ ಮಾತೃಭಾಷೆಯ ಪ್ರಭಾವ . ಹೆಚ್ಚಿನವರು ತಮ್ಮ ತಾಯಿಭಾಷೆಯ ಧಾಟಿಯನ್ನು ಸಹಜವಾಗಿ ಇಂಗ್ಲೀಷ್ ಮಾತನಾಡುವಾಗ ಬಳಸುತ್ತಾರೆ. ತಮಿಳು, ತೆಲುಗು, ಹಿಂದಿ, ಮುಂತಾದ ಭಾಷೆಗಳಲ್ಲಿ ಮಾತನಾಡುವಾಗಲೂ ಶಬ್ದದ ಏರಿಳಿತ, ಪದಗಳನ್ನು ಒತ್ತಿ ಹೇಳುವ ಪರಿಯನ್ನು ಕಾಣಬಹುದು. ಜನರು ಸ್ವಾಭಾವಿಕವಾಗಿಯೇ ಈ ಶೈಲಿಗೆ ಹೊಂದಿಕೊಂಡಿದ್ದು, ಅವರಿಗೆ ಅಭ್ಯಾಸವಾಗಿರುತ್ತದೆ ಹಾಗೂ ಅವರ ಗಮನಕ್ಕೆ ಬರುವುದಿಲ್ಲ. ಅಂತೆಯೇ ಕೆಲವೊಂದು ಪದಗಳನ್ನು ಮಾತೃಭಾಷೆಯ ಶೈಲಿಯಲ್ಲೇ ಉಚ್ಛರಿಸುತ್ತಾರೆ. ತಾವು ಆಡುವ ಮಾತುಗಳು ಕೇಳುವವರಿಗೆ ಸರಿಯಾಗಿ ಅರ್ಥವಾಗಲಿ ಎಂಬ ಕಾರಣದಿಂದಲೂ, ಒತ್ತಿ ಹೇಳಿದರೆ ಜನರು ಗಮನ ಕೊಡುತ್ತಾರೆ ಎಂದೂ ಕೆಲವು ಶಬ್ದಗಳನ್ನು ದೀರ್ಘವಾಗಿ ಹೇಳುತ್ತಾರೆ.
ಹಲವು ಬಾರಿ ಬೇರೆಯವರ ಬಗ್ಗೆ ಗಾಸಿಪ್ ಮಾತನಾಡುವಾಗಲೂ ನಕಾರಾತ್ಮಕ ಪದಗಳಿಗೆ ಹೆಚ್ಚು ಒತ್ತು ಕೊಡುವುದುಂಟು. ಉದಾಹರಣೆಗೆ, “ಅವನು ಕಲಿಯುವುದರಲ್ಲಿ ತುಂಬಾ ವೀ………..ಕ್” (Weak) “ಅವರು ತುಂಬಾ ಪುವ…..ರ್(Poor) ಇತ್ಯಾದಿ ಪದಗಳನ್ನು ಎಳೆದು ಹೇಳುವುದು ವ್ಯಕ್ತಿಯ ನಕಾರಾತ್ಮಕ ಮನೋಭಾವನೆಯನ್ನು ಸೂಚಿಸುತ್ತದೆ. ಹೀಗೆ ಇತರರನ್ನು ಕೀಳಾಗಿ ಮಾತನಾಡುವುದು, ಕೇಳುವವರ ಮನಸ್ಸಿಗೂ ನೋವುಂಟು ಮಾಡಬಹುದು. ಆದ್ದರಿಂದ ಇಂಥಾ ಶಬ್ದಗಳ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳಿತು. ಸಂದರ್ಭಕ್ಕನುಸಾರವಾಗಿ, ಜಾಗರೂಕತೆಯಿಂದ ಮಾತನಾಡುವುದೇ ಉತ್ತಮ ಸಂವಹನ ವಿಧಾನವಾಗಿದೆ. ಸರಳವಾಗಿಯೇ ಮಾತನಾಡಿದರೂ ಅರ್ಥ ಸ್ಪಷ್ಟವಾಗಿಯೇ ತಲುಪುತ್ತದೆ. ಅನಗತ್ಯ ಒತ್ತು, ಉದ್ದಕ್ಕೆ ಎಳೆಯದೆ ಸಹಜ ಮಾತು ಭಾಷೆಯನ್ನು ಹೆಚ್ಚು ಸೊಗಸಾಗಿಸುತ್ತದೆ. ಭಾರತೀಯರ ಮಾತಿನ ಶೈಲಿಯಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಲು ಕೆಲವು ಪದಗಳಿಗೆ ಒತ್ತಡ ನೀಡುವುದು ಸಹಜ. ಸಂತೋಷ, ಆಶ್ಚರ್ಯ, ಕೋಪ ಅಥವಾ ಉತ್ಸಾಹವನ್ನು ವ್ಯಕ್ತ ಪಡಿಸಲು ಈ ರೀತಿಯ ಉಚ್ಛಾರಣೆ ಸಾಮಾನ್ಯ.
ಇನ್ನು, ನಾನು ಗಮನಿಸಿದಂತೆ ಗ್ರಾಮೀಣ ಹಿನ್ನಲೆಯಿಂದ ಬಂದ ವಿದ್ಯಾರ್ಥಿಗಳು ಬೇರೆಯವರಂತೆ ಇಂಗ್ಲೀಷ್ ಮಾತಾನಾಡಲು ಹಿಂಜರಿಯುತ್ತಾರೆ. ಆತ್ಮವಿಶ್ವಾಸದ ಕೊರತೆ, ಭಯದಿಂದಾಗಿ ಒಮ್ಮೆಲೆ ಸರಿಯಾದ ಪದಗಳು ಸಿಗದೇ ಇರುವುದು ಅಥವಾ ಮರೆತು ಹೋಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಹಲವು ಸಂದರ್ಭಗಳಲ್ಲಿ ವ್ಯಕ್ತಿಯು ಎಷ್ಟೇ ಚುರುಕಾಗಿರಲೀ, ಅಥವಾ ಜ್ಞಾನಿಯಾಗಿರಲೀ ನಿರರ್ಗಳವಾಗಿ ಇಂಗ್ಲೀಷ್ ಮಾತಾನಾಡಲು ಸ್ವಲ್ಪ ತಡಕಾಡುತ್ತಾರೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಉನ್ನತ ಹುದ್ದೆಯಲ್ಲಿದ್ದ ಗಣ್ಯ ವ್ಯಕ್ತಿಯೊಬ್ಬರು ಅತಿಥಿಗಳಾಗಿ ಆಗಮಿಸಿದ್ದರು. ತನ್ನ ಭಾಷಣವನ್ನು ಇಂಗ್ಲೀಷ್‌ನಲ್ಲಿಯೇ ಆರಂಭಿಸಿದ ಅವರು, ಕೆಲವೊಂದು ಪದಗಳನ್ನು ತಪ್ಪಾಗಿ ಬಳಸಿದರು. ನನಗೆ ನಿರಾಶೆಯೂ, ಆಶ್ಚರ್ಯವೂ ಉಂಟಾಯಿತು. ಯಾಕೆಂದರೆ ಅವರೊಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯೂ ಆಗಿದ್ದರು. ಬಹುಶ: ದೊಡ್ಡ ಸಭೆಯಲ್ಲಿ ಮಾತನಾಡುವ ಒತ್ತಡವೂ ಇರಬಹುದೆಂದು ಅಂದುಕೊಂಡೆ. ಆದರೂ ಇಲ್ಲಿ ತಿಳಿಯಬೇಕಾದ ಅಂಶವೆಂದರೆ, ಇಂಗ್ಲೀಷ್ ನಮ್ಮ ಮೂಲ ಭಾಷೆ ಅಲ್ಲ. ಇಲ್ಲಿ ಪರ್ಫೆಕ್ಷನ್ ಅನ್ನುವುದು ಮಿಥ್ಯ. ಜನರಿಗೆ ಅರ್ಥವಾಗುವಂತೆ ಮಾತನಾಡುವುದು ಮುಖ್ಯ. ವ್ಯಾಕರಣ ಅಥವಾ ಉಚ್ಚಾರಣೆ ತಪ್ಪಾದರೂ, ಆತ್ಮ ವಿಶ್ವಾಸದಿಂದ, ಧೈರ್ಯದಿಂದ ಮಾತನಾಡುವುದು ಅವಶ್ಯ. ಹೆಚ್ಚಿನ ಜನರು ಇಂಗ್ಲೀಷ್ ಮಾತನಾಡುವ ಮೊದಲು ತಮ್ಮ ಮಾತೃಭಾಷೆಯಲ್ಲಿ ಯೋಚಿಸಿ, ನಂತರ ಅದನ್ನು ಇಂಗ್ಲೀಷ್‌ಗೆ ಅನುವಾದಿಸಿ, ಮಾತನಾಡಲು ಪಯತ್ನಿಸಿದಾಗ, ಶಬ್ದಗಳು ಸಿಗದೆ ತಡವರಿಸುತ್ತಾರೆ. ಇಂಥಹಾ ಸಂದರ್ಭಗಳಲ್ಲಿ ಮುಜುಗರ ಪಡದೆ, ತಡವರಿಸುವುದು ಕಲಿಕೆಯ ಸಹಜ ಪ್ರಕ್ರಿಯೆ ಎಂದುಕೊಂಡು, ನಿರಂತರ ಅಭ್ಯಾಸ, ಆತ್ಮ ವಿಶ್ವಾಸ ಮತ್ತು ಆದಷ್ಟು ಇಂಗ್ಲೀಷ್‌ನಲ್ಲಿಯೇ ಯೋಚಿಸಿ ಮಾತನಾಡುವುದನ್ನು ಅಭ್ಯಸಿಸಬೇಕು. ಇನ್ನು ಪಾಶ್ಚಾತ್ಯ ದೇಶಗಳಲ್ಲಿ, ಹೆಚ್ಚಿನ ಜನ ನಾಯಕರು, ರಾಜಕಾರಣಿಗಳು ಯಾವುದೇ ಸಭೆ, ಸಮಾರಂಭಗಳಲ್ಲಿ ಸಿದ್ದ ಭಾಷಣವನ್ನು ಓದುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದು ಶಿಸ್ತು ಹಾಗೂ ಸಮಯ ಪರಿಪಾಲನೆಯ ಉದ್ದೇಶವೂ ಆಗಿದೆ. ಒಂದು ವಿಧದಲ್ಲಿ ಈ ಅಭ್ಯಾಸ ಒಳ್ಳೆಯದೆಂದು ಅನಿಸುತ್ತದೆ. ಜನರಿಗೆ ಅರ್ಥವಾಗುವಂತೆ ಸಂದೇಶ ತಲುಪಿಸಲು ಅತ್ಯಂತ ಉತ್ತಮ ವಿಧಾನವೂ ಹೌದು.
ಇಂಗ್ಲೀಷ್ ಭಾಷೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಬೇರೆ ಬೇರೆ ಪ್ರಾಂತ್ಯದ ಜನರನ್ನು ಸಂಪರ್ಕ ಸಾಧಿಸಲು ಇರುವ ಬಲವಾದ ಮಾಧ್ಯಮವೇ ಈ ಭಾಷೆ. ಜಾಗತಿಕ ಸಂವಹನ ಭಾಷೆಯಾದ ಇಂಗ್ಲೀಷ್ ಭಾಷೆಯು ಪ್ರತಿಯೊಬ್ಬನ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ಯಶಸ್ಸಿಗೆ ಕೀಲಿ ಕೈ ಎಂದೇ ಹೇಳಬಹುದು. ಸರಳವಾಗಿ, ಸ್ಪಷ್ಟವಾಗಿ, ಅರ್ಥವಾಗುವ ರೀತಿಯಲ್ಲಿ, ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ, ಬಳಸಿದರೆ ಈ ಭಾಷೆಯು ಎಲ್ಲರ ಮನ ಗೆಲ್ಲಬಲ್ಲುದು. ಇಂಗ್ಲೀಷ್ ಸಂವಹನ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ತಪ್ಪುಗಳಾದರೂ ಪರವಾಗಿಲ್ಲ, ಮಾತನಾಡಲು ಪ್ರಯತ್ನಿಸುವ ಮೂಲಕ ಜನರು ಪರಿಪೂರ್ಣತೆಯನ್ನು ಸಾಧಿಸುತ್ತಿದ್ದಾರೆ. ಯಾವುದೇ ಭಾಷೆಯಲ್ಲಿ ಸಂವಹನ ಮಾಡಿದರೂ, ಪದಗಳ ಬಳಕೆ ಮತ್ತು ಅವುಗಳನ್ನು ಹೇಗೆ ಉಚ್ಛರಿಸುತ್ತೇವೆ ಎಂಬುದರ ಮೇಲೆ ಗಮನವಿರಬೇಕು. ಇಂಗ್ಲೀಷ್ ಭಾಷೆಯಲ್ಲಿ ಪರಿಪೂರ್ಣತೆ ಸಾಧಿಸದಿದ್ದರೂ, ನಾವಾಡುವ ಮಾತುಗಳು ಪರಿಣಾಮಕಾರಿಯಾಗಿದ್ದರೆ ಸಾಕು. ಸರಳ, ಸ್ಪಷ್ಟ ಮತ್ತು ಗೌರವಯುತ ಮಾತುಗಳು ಉತ್ತಮ ಸಂವಹನದ ಲಕ್ಷಣವಾಗಿದೆಯಲ್ಲದೆ, ಶಾಶ್ವತ ಸಂಬಂಧಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ.

–ಶೈಲಾರಾಣಿ ಬೋಳಾರ್, ಮಂಗಳೂರು

