ಪ್ರವಾಸ

ಥೈಲ್ಯಾಂಡಿನ ಸಫಾರಿ ಪಾರ್ಕ್ : ಹೆಜ್ಜೆ 10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಥೈಲ್ಯಾಂಡಿನ ನಮ್ಮ ಎರಡನೆಯ ದಿನದ ಪ್ರವಾಸ ಸಫಾರಿ ಪಾರ್ಕ್ ನತ್ತ ಸಾಗಿತ್ತು. ಪ್ರವಾಸಿಗರನ್ನು ಆಕರ್ಷಿಸಲು ಈ ಪಾರ್ಕನ್ನು ಮನರಂಜನಾ ಕೇಂದ್ರವನ್ನಾಗಿಯೂ ಅಭಿವೃದ್ಧಿ ಪಡಿಸಿದ್ದಾರೆ. ಬ್ಯಾಂಕಾಕಿನಿಂದ 45 ಕಿ.ಮೀ. ದೂರದಲ್ಲಿರುವ ಈ ಸಫಾರಿಯು ಸುಮಾರು ಇನ್ನೂರು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ನಮ್ಮದೇ ವಾಹನದಲ್ಲಿ ಅಥವಾ ಪಾರ್ಕಿನ ಕೋಚಿನಲ್ಲಿ ನಲವತ್ತೈದು ನಿಮಿಷಗಳ ಕಾಲ ಈ ವನ್ಯಜೀವಿಗಳ ನೆಲೆಯಲ್ಲಿ ಕಳೆಯಬಹುದು. ನಾವು ಪಾರ್ಕಿನ ಕೋಚ್‌ನಲ್ಲಿ ಕುಳಿತು ಸಫಾರಿಯನ್ನು ನೋಡಲು ಹೊರಟೆವು. ಮೊದಲಿಗೆ ನಮಗೆ ಕಂಡ ವನ್ಯಜೀವಿಗಳು ತಮ್ಮ ಸುಂದರವಾದ ಕೋಡುಗಳನ್ನೂ ಹೆಮ್ಮೆಯಿಂದ ಪ್ರದರ್ಶಿಸುತ್ತಾ ನೆಗೆಯುತ್ತಿದ್ದ ಜಿಂಕೆಗಳು, ಅಲ್ಲಿಯೇ ಇದ್ದ ಕಾಡೆಮ್ಮೆಗಳು ತಮ್ಮ ತಲೆಯನ್ನು ಎತ್ತದೇ ಹುಲ್ಲು ಮೇಯುವುದರಲ್ಲಿ ಮಗ್ನ. ಮುಂದೆ ಸಾಗಿದಾಗ ಮರದ ಮೇಲಿದ್ದ ಚಿಗುರುಗಳನ್ನು ಕಿತ್ತು ತಿನ್ನುತ್ತಿದ್ದ ಉದ್ದ ಕತ್ತಿನ ಜಿರಾಫೆಗಳು. ಸ್ವಲ್ಪ ಹಣ ನೀಡಿದರೆ ನೀವೂ ಈ ಜಿರಾಫೆಗಳಿಗೆ ಹುಲ್ಲು ತಿನ್ನಿಸಬಹುದು. ಪಕ್ಕದಲ್ಲಿ ಹುಲ್ಲು ಮೇಯುತ್ತಿದ್ದ ಝೀಬ್ರಾಗಳನ್ನು ನೋಡಿ ಖುಷಿಯಾಯಿತು. ಇದರ ಬೆನ್ನ ಮೇಲೆ ಇಷ್ಟು ನೀಟಾಗಿ ಕಪ್ಪು ಗೀಟುಗಳನ್ನು ಎಳೆದವರಾರು ಅಂತ ಸೋಜಿಗವಾಗಿತ್ತು. ಮುಂದಿದ್ದ ಒಂದು ಕೆರೆಯಲ್ಲಿ ಸಾಕಷ್ಟು ಜಲಸಸ್ಯಗಳು ಬೆಳೆದಿದ್ದವು, ನೀರೇ ಕಾಣಿಸುತ್ತಿರಲಿಲ್ಲ, ಅಲ್ಲಿ ಬಗೆ ಬಗೆಯ ಬಾತುಕೋಳಿಗಳು ಇದ್ದು, ತಮ್ಮ ಆಹಾರವಾದ ಮೀನನ್ನು ಹಿಡಿಯಲು ಹರಸಾಹಸ ಮಾಡುತ್ತಿದ್ದವು. ಒಂದು ಕ್ರೇನ್‌ನ ತಲೆಯ ಮೇಲಿದ್ದ ಬಿಳಿಯ ಪುಚ್ಚ ಬೀಸಣಿಕೆಯಾಕಾರದಲ್ಲಿ ಇದ್ದು ಆಕರ್ಷಕವಾಗಿತ್ತು.

‘ಅಗೋ ಅಲ್ಲಿ ನೋಡಿ ನೀರಾನೆಗಳು’ ಎಂದು ಕೂಗಿದರು ನನ್ನ ಯಜಮಾನರು. ಆ ಕೆಸರು ನೀರಿನಲ್ಲಿ ಉರುಳಾಡುತ್ತಿದ್ದ ನೀರಾನೆಗಳನ್ನು ನೋಡಿ, ಇದರ ಮೈ ತೊಳೆಯಲು ಎಷ್ಟು ಸೋಪು ಬೇಕಾದೀತು ಎಂದು ಲೆಕ್ಕ ಹಾಕಿದಾಗ ನಗು ಬಂತು. ಅಲ್ಲೊಂದು ದೊಡ್ಡದಾದ ಬೇಲಿಯೊಳಗೆ ಹಲವು ಬಗೆಯ ಗಿಣಿಗಳು ಇದ್ದವು, ವರ್ಣರಂಜಿತ ಗಿಣಿಗಳನ್ನು ಕಂಡು ಮಕ್ಕಳ ಹಾಗೆ ಚಪ್ಪಾಳೆ ತಟ್ಟಿದೆವು. ಒಂದು ಗಿಣಿ ನಾವು ಹೇಳಿದ ಮಾತುಗಳನ್ನು ಪುನರುಚ್ಛರಿಸುತ್ತಿತ್ತು. ನಾವು,’ರಾಮ, ರಾಮ’ ಎಂದಾಗ ಅದೂ ‘ರಾಮ, ರಾಮ’ ಎಂದಿತು. ಅವರ ರಾಜನ ಹೆಸರೂ ರಾಮ ಎಂದೇ ಅಲ್ಲವೇ? ಅಲ್ಲೊಂದು ‘ಮೀರ್ ಕ್ಯಾಟ್’ ನೆಟ್ಟಗೆ ನಿಂತು ನಮ್ಮನ್ನು ತನ್ನ ಬಟ್ಟಲು ಕಣ್ಣುಗಳಿಂದ ನೋಡಿತ್ತು. ನಂತರ ತಟ್ಟನೆ ಓಡಿ ಹೋಗಿ ಭೂಮಿಯೊಳಗಿದ್ದ ತನ್ನ ಬಿಲ ಸೇರಿತ್ತು. ಮುಂದೆ ಕಾಡು ಕುದುರೆಗಳು ಕೆನೆಯುತ್ತಾ ತಮಗಾಗಿ ಇದ್ದ ಆವರಣದೊಳಗೇ ಓಡುತ್ತಿದ್ದವು. ಅಲ್ಲೊಂದು ಚಿಂಪಾಂಜಿ ನಮ್ಮನ್ನು ಕಂಡು ಹಲ್ಲು ಕಿರಿಯುತ್ತಿತ್ತು. ಆಗ ಅಲ್ಲಿಗೆ ಓಡುತ್ತಾ ಬಂದ ಕಾಂಗರೂ ತನ್ನ ಮರಿಗಳನ್ನು ಜೋಪಾನ ಮಾಡಲು ಹೊಟ್ಟೆಯ ಕೆಳಗಿದ್ದ ಚೀಲದೊಳಗೆ ಕೂರಿಸಿಕೊಂಡಿತ್ತು. ಪ್ರಕೃತಿಯ ವಿಸ್ಮಯಗಳನ್ನು ನೋಡಿ ಆನಂದಿಸುತ್ತಾ ಮುಂದೆ ಸಾಗಿದೆವು.

ನಮ್ಮ ವಾಹನ ಒಂದು ದೊಡ್ಡದಾದ ಆವರಣದೊಳಗೆ ಹೋಗುತ್ತಿದ್ದಂತೆ ನಾವೆಲ್ಲಾ ಗಾಬರಿಯಿಂದ ಮುದುಡಿ ಕುಳಿತೆವು. ಕಾರಣ ನಾವು ಸಫಾರಿಯೊಳಗೆ ಪಯಣಿಸುತ್ತಿದ್ದ ವಾಹನ ತೆರೆದ ಮೇಲ್ಭಾಗದ ಕೋಚ್ ಆಗಿತ್ತು. ಅಲ್ಲಿ ಹುಲಿ, ಸಿಂಹ, ಚಿರತೆ, ಕರಡಿ ಮುಂತಾದ ಕ್ರೂರ ಮೃಗಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಾ ಕುಳಿತಿದ್ದವು. ಯಾವ ಪ್ರಾಣಿಯಾದರೂ ಒಮ್ಮೆ ಜಿಗಿದರೆ ಸಾಕು, ನಮ್ಮ ಮೇಲೆ ಎರಗಬಹುದಿತ್ತು. ಅಬ್ಬಾ, ಈ ಕ್ರೂರ ಮೃಗಗಳಿದ್ದ ಆವರಣಗಳನ್ನು ದಾಟಿದ ಮೇಲೆಯೇ ನಾವು ಸಲೀಸಾಗಿ ಉಸಿರಾಡಿದ್ದು. ಆದರೆ ಹೊತ್ತು ಹೊತ್ತಿಗೆ ಸರಿಯಾಗಿ ಊಟ ಹಾಕುವ ಮಂದಿ ಇರುವಾಗ, ಈ ವನ್ಯಜೀವಿಗಳು ಬೇಟೆಯಾಡುವುದನ್ನೇ ಮರೆತಿದ್ದವೇನೋ? ನಾವು ಮಧ್ಯಾಹ್ನದ ಊಟ ಸಫಾರಿಯಲ್ಲಿದ್ದ ರೆಸ್ಟೊರಾಂಟಿನಲ್ಲಿಯೇ ಮುಗಿಸಿ ಮೆರೈನ್ ಪಾರ್ಕಿನತ್ತ ಹೊರಟೆವು. ಅಲ್ಲಿ ನಮಗಾಗಿ ಕಾದಿತ್ತು ಭರಪೂರ ಮನರಂಜನೆ.

ನಾವು ಮೊದಲಿಗೆ ನೋಡಿದ್ದು ‘ಒರಾಂಗುಟನ್ ಬಾಕ್ಸಿಂಗ್ ಶೋ’ ಇದೊಂದು ಜನಪ್ರಿಯ ಹಾಗೂ ಎಲ್ಲರನ್ನೂ ನಕ್ಕು ನಗಿಸುವ ಪ್ರದರ್ಶನ. ಬಾಕ್ಸಿಂಗ್ ಗ್ಲೌಸ್‌ಗಳನ್ನು ಧರಿಸಿದ ಒರಾಂಗುಟನ್‌ಗಳು ಬಾಕ್ಸಿಂಗ್ ಮಾಡುವುದನ್ನು ನೋಡುವುದೇ ಚೆಂದ. ಒಂದು ಒರಾಂಗುಟನ್ ಮುಂದೆ ಬಂದರೆ ಮತ್ತೊಂದು ಹಿಂದೆ ಸರಿಯುತ್ತಿತ್ತು, ಅಂತೂ ಇಂತೂ ಅವು ತರಬೇತಿದಾರರ ಸಂಜ್ಞೆಯಂತೆ ಬಾಕ್ಸಿಂಗ್ ಆರಂಭಿಸಿದಾಗ ಎರಡೇ ಹೊಡೆತಕ್ಕೆ ಒಂದು ಒರಾಂಗುಟನ್ ಅಲ್ಲಿಂದ ಕಾಲು ಕಿತ್ತಿತ್ತು. ಆಗ ಅಲ್ಲಿಯೇ ಉಳಿದಿದ್ದ ಒರಾಂಗುಟನ್ ತನ್ನ ತರಬೇತುದಾರನೊಂದಿಗೇ ಬಾಕ್ಸಿಂಗ್ ಮಾಡತೊಡಗಿತ್ತು. ಅವನು ಅಲ್ಲಿಂದ ಕಾಲುಕಿತ್ತ. ಎಲ್ಲರಿಗೂ ನಕ್ಕೂ ನಕ್ಕೂ ಸಾಕಾಯಿತು. ಮತ್ತೊಂದು ಶೊ ಆರಂಭವಾಯಿತು. ಸಂಗೀತ ವಾದ್ಯಗಳನ್ನು ವೇದಿಕೆಯ ಮೇಲೆ ತಂದಿಟ್ಟರು. ಒರಾಂಗುಟನ್‌ಗಳು ಪಿಯಾನೋ ನುಡಿಸುವುದನ್ನು ಕಂಡು ನಾವೆಲ್ಲಾ ಜೋರಾಗಿ ಚಪ್ಪಾಳೆ ಹಾಕಿದೆವು. ಒಂದೆರೆಡು ಕಪಿಗಳು ತಬಲ ಬಾರಿಸಿದವು. ನಂತರದಲ್ಲಿ ಅದು ಹಿಂದಿ ಹಾಡೊಂದನ್ನು ನುಡಿಸಿದಾಗ ಪ್ರೇಕ್ಷಕರು ವಿಸಲ್ ಹಾಕುತ್ತಾ ಕುಣಿದಾಡಿದರು. ಸಂಗೀತ ವಾದ್ಯಗಳನ್ನು ನುಡಿಸುವ ಒರಾಂಗುಟನ್‌ಗಳನ್ನು ಕಂಡು ಅಚ್ಚರಿಯಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಮರಿಗಳೆರೆಡು ಸಂಗೀತದ ತಾಳಕ್ಕೆ ತಕ್ಕಂತೆ ನೃತ್ಯವನ್ನೂ ಮಾಡಿದವು. ಇನ್ನು ತಡವೇಕೆ? ಪ್ರೇಕ್ಷಕರ ತಂಡದಲ್ಲಿದ್ದ ತರುಣರು ಎದ್ದು ನಿಂತು ಕುಣಿಯತೊಡಗಿದರು. ಹೀಗಿತ್ತು ಮಂಗನಿಂದ ಬಂದ ಮಾನವನ ಮನರಂಜನೆ.

ನಂತರದಲ್ಲಿ ನಾವು ನೋಡಿದ ಶೋ ‘ಸೀ ಲಯನ್ ಶೋ’ ಈ ಪ್ರಾಣಿಗಳ ತುಂಟಾಟ ಹಾಗೂ ಬುದ್ದಿವಂತಿಕೆಯನ್ನು ನೋಡುವುದೇ ಒಂದು ಮೋಜು. ನೀರಿನಲ್ಲಿ ಚೆಂಡಾಟವನ್ನು ಆಡುತ್ತಾ ಆಡುತ್ತಾ ಪ್ರೇಕ್ಷಕರ ಮೇಲೆಲ್ಲಾ ನೀರು ಎರಚುವ ಸಮುದ್ರ ಸಿಂಹಗಳು ತಮ್ಮ ತರಬೇತುದಾರರು ಕರೆದಾಗ ಮೇಲೆ ಮೇಲಕ್ಕೆ ಜಿಗಿಯುತ್ತಿದ್ದವು. ಸಮುದ್ರದಲ್ಲಿ ವಾಸಿಸುವ ಈ ಮೀನಿನ ಜಾತಿಯ ಪ್ರಾಣಿಗಳಿಗೆ ಅದು ಹೇಗೆ ಸಮುದ್ರ ಸಿಂಹ ಎಂದು ಹೆಸರು ಬಂತೋ ನಾ ಬೇರೆ ಕಾಣೆ. ಆದರೆ ಈ ತಿಂಡಿಪೋತ ಸೀ ಲಯನ್‌ಗಳಿಗೆ ಪ್ರತಿ ಆಟದ ನಂತರ ಮೀನುಗಳನ್ನು ಬಾಯಿಗಿಡಬೇಕಿತ್ತು. ತರಬೇತುದಾರರು ಮೀನನ್ನು ಕೊಡದಿದ್ದರೆ ಅವು ಮುನಿಸಿಕೊಂಡು ಆಟವಾಡುತ್ತಲೇ ಇರಲಿಲ್ಲ.

ನಮ್ಮ ಮುಂದಿನ ಶೋ-ಅತ್ಯಂತ ಬುದ್ದಿಯಿರುವ ಪ್ರಾಣಿಗಳಾದ ‘ಡಾಲ್ಫಿನ್’ ಗಳದು. ಮೀನಿನಂತೆ ಕಂಡರೂ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ಅಪರೂಪದ ಪ್ರಾಣಿ ಇದು. ತರಬೇತುದಾರರು ಸಿಗ್ನಲ್ ಕೊಟ್ಟ ತಕ್ಷಣ ನೀರಿನಿಂದ ಮೇಲೆ ಜಿಗಿದು ರಿಂಗ್‌ಗಳೊಳಗೆ ತೂರುವುದು, ತರಬೇತುದಾರರನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ವೇಗವಾಗಿ ಈಜುವುದು ಮುಂತಾದ ಆಟಗಳಿಂದ ನಮ್ಮನ್ನೆಲ್ಲಾ ರಂಜಿಸಿದವು. ತಮ್ಮ ಮೂಗಿನ ಮೇಲೆ ಚೆಂಡನ್ನು ಉರುಳಾಡಿಸುತ್ತಾ ಫುಟ್ ಬಾಲ್ ಆಡುವುದನ್ನು ಕಂಡು ನಾವು ಮೂಗಿನ ಮೇಲೆ ಬೆರಳಿಟ್ಟುಕೊಂಡೆವು. ತನ್ನ ಬಾಲದಿಂದ ನೀರನ್ನು ಚಿಮ್ಮಿಸಿ, ಪ್ರೇಕ್ಷಕರ ಮೈಮೇಲೆಲ್ಲಾ ನೀರ ಹನಿಗಳು ಬಿದ್ದಾಗ ಅವರ ಸಂಭ್ರಮವನ್ನು ನೋಡಬೇಕು. ಸಂಗಿತಕ್ಕೆ ಹೆಜ್ಜೆ ಹಾಕುವ ಡಾಲ್ಫಿನ್‌ಗಳನ್ನು ಕಂಡು ನಮಗೆ ಖುಷಿಯೋ ಖುಷಿ. ಈ ಕೊಳದ ಮೇಲೊಂದು ಗುಲಾಬಿ ಬಣ್ಣದ ಚೆಂಡನ್ನು ಕಟ್ಟಲಾಗಿತ್ತು. ಸಿಗ್ನಲ್ ಬಂದ ತಲ್ಷಣ ಡಾಲ್ಫಿನ್ ಮೇಲಕ್ಕೆ ಹಾರಿ ಅದನ್ನು ಹೊಡೆಯುವುದನ್ನು ಕಂಡು ನಾವು ಜೋರಾದ ಚಪ್ಪಾಳೆ ತಟ್ಟಿದವು. ಡಾಲ್ಫಿನ್‌ಗಳು ತಮಗೆ ತರಬೇತು ನೀಡಿದ ಹುಡುಗಿಯರ ಕೆನ್ನೆಗೆ ಮುತ್ತಿಕ್ಕುವುದನ್ನು ಕಂಡು ಬೆರಗಾದೆವು.

ಇನ್ನು ಥೈಲ್ಯಾಂಡ್ ಅಂದ ಮೇಲೆ ಆನೆಗಳ ಶೋ ಇರದಿದ್ದರೆ ಹೇಗೆ? ನಾಲ್ಕಾರು ಆನೆಗಳು ವೇದಿಕೆಯ ಸುತ್ತ ನಿಂತು ಹಲವು ಬಗೆಯ ಸರ್ಕಸ್ ಮಾಡಿದವು. ಎರಡು ಕಾಲಿನ ಮೇಲೆ ನಿಲ್ಲುವ ಆನೆಗಳು, ಪುಟ್ಟದಾದ ಸ್ಟೂಲಿನ ಮೇಲೆ ನಾಲ್ಕೂ ಕಾಲುಗಳನ್ನು ಇಟ್ಟು ಕೂರುವ ಯತ್ನ ಮಾಡುವ ದೈತ್ಯಾಕಾರದ ಆನೆಗಳು, ಒಂದರ ಬಾಲವನ್ನು ಮತ್ತೊಂದು ಹಿಡಿದು ಇಡೀ ವೇದಿಕೆಯ ತುಂಬಾ ಓಡುವುದು, ಮಾವುತನನ್ನು ಸೊಂಡಿಲ ಮೇಲೆ ಕೂರಿಸಿಕೊಂಡು ಸುತ್ತುವ ಆನೆಗಳು, ಮತ್ತೆ ಸೈಕಲ್ ತುಳಿಯುವ ಆನೆಗಳು, ಚೆಂಡಾಡುವ ಆನೆಗಳು ಮುಂತಾದ ಆಟಗಳನ್ನು ನೋಡಿ ನನಗೆ ನಮ್ಮೂರಿನ ಸರ್ಕಸ್ ನೋಡಿದ ಅನುಭವ. ನಮ್ಮೂರಿನ ಸರ್ಕಸ್‌ಗಳಲ್ಲಿ ಆನೆಗಳಿಂದಲೇ ಗಣಪತಿಯ ಪೂಜೆಯನ್ನೂ ಮಾಡಿಸುವುದನ್ನು ನಾವು ಕಂಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಪ್ರಿಯರು, ‘ವನ್ಯ ಜೀವಿಗಳಿಗೆ ಹಿಂಸೆ ನೀಡಿ, ಇಂತಹ ಪ್ರದರ್ಶನಗಳಿಗೆ ಬಳಸಬಾರದೆಂದು ಕಾನೂನು ತಂದಿದ್ದಾರೆ.’ ಹಾಗಾಗಿ ನಮ್ಮ ಸರ್ಕಸ್‌ಗಳಲ್ಲಿ ಆನೆ, ಕರಡಿ, ಸಿಂಹ, ಹುಲಿಗಳ ಆಟೋಟಗಳು ಬಂದ್ ಆಗಿವೆ. ಹಾಗಾಗಿ ಈ ವನ್ಯ ಜೀವಿಗಳ ಆಟಗಳನ್ನು ನೋಡಲು ಥೈಲ್ಯಾಂಡಿಗೇ ಭೇಟಿ ನೋಡಬೇಕೇನೋ?

ನಮ್ಮ ದೇಗುಲಗಳಲ್ಲಿ ಆನೆಗಳು ತಮ್ಮ ಸೊಂಡಿಲನ್ನು ಭಕ್ತರ ತಲೆಯ ಮೇಲಿಟ್ಟು ಆಶೀರ್ವಾದ ಮಾಡುವುದನ್ನು ನೋಡಿದ್ದೇವಲ್ಲವೇ? ಈ ಆನೆಗಳು ಬಾಳೆಹಣ್ಣು ಕೊಟ್ಟರೆ ಸೀದಾ ತಮ್ಮ ಬಾಯೊಳಗೆ ಹಾಕುತ್ತವೆ, ಆದರೆ ರೂಪಾಯಿ ನೋಟು ಕೊಟ್ಟರೆ ಅದನ್ನು ಮಾವುತನಿಗೆ ನೀಡಿ ಭಕ್ತರ ತಲೆಯ ಮೇಲೆ ಸೊಂಡಿಲನ್ನು ಇಟ್ಟು ಆಶೀರ್ವಾದ ಮಾಡುವ ಪರಿ ನಿಜವಾಗಿಯೂ ಅದ್ಭುತವೇ ಅಲ್ಲವೇ?

ಸಫಾರಿ ವರ್ಲ್ಡ್ನ ಮೆರೈನ್ ಪಾರ್ಕಿನಲ್ಲಿ ಇರುವ ‘ಜಂಗಲ್ ಕ್ರೂಸ್’ನ ಬಳಿ ದೊಡ್ಡ ಕ್ಯೂ ಇತ್ತು. ಆದರೆ ನಮ್ಮ ಬಳಿ ಟಿಕೆಟ್ ಇದ್ದುದರಿಂದ ನಮಗೆ ತಕ್ಷಣವೇ ದೋಣಿಗಳು ದೊರೆತವು. ಅತ್ಯಂತ ಜನಪ್ರಿಯವಾಗಿರುವ ಈ ದೋಣಿವಿಹಾರ ಕೃತಕವಾಗಿ ನಿರ್ಮಿಸಲಾದ ದಟ್ಟ ಅಡವಿಯ ಮೂಲಕ ನೀರಿನಲ್ಲಿ ಸಾಗುವ ದೋಣಿ. ದೋಣಿಯಲ್ಲಿ ಸಾಗುವಾಗ ನಮ್ಮ ಅಕ್ಕಪಕ್ಕದಲ್ಲಿ ಆಫ್ರಿಕಾ ಮತ್ತು ಏಷ್ಯಾದ ದಟ್ಟವಾದ ಕಾಡುಗಳನ್ನು ಕಂಡೆವು. ಅಲ್ಲಿ ಬೆಳೆದಿದ್ದ ಗಿಡ ಮರಗಳ ರೆಂಬೆ ಕೊಂಬೆಗಳ ಮಧ್ಯೆ ನಿಂತಿದ್ದ ಅಪರೂಪದ ಪ್ರಾಣಿಗಳು ನಮ್ಮನ್ನು ಕಣ್ಣರಳಿಸಿ ನೋಡುತ್ತಿದ್ದವು. ಆ ಕಾಡುಗಳ ಮಧ್ಯೆ ಇದ್ದ ಜಲಪಾತಗಳ ಪಕ್ಕದಲ್ಲಿ ಡೈನಾಸರ್‌ಗಳೂ ನಿಂತಿದ್ದವು. ಗೊರಿಲ್ಲಾಗಳು ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದವು. ನಾವು ಸಾಗುತ್ತಿದ್ದ ಕಾಲುವೆಯಲ್ಲಿ ನೀರಾಟವಾಡುತ್ತಿದ್ದ ಆನೆಗಳು ತಮ್ಮ ಸೊಂಡಿಲಿನಿಂದ ನೀರನ್ನು ಮೈಮೇಲೆ ಎರಚಿಕೊಳ್ಳುತ್ತಿದ್ದವು. ಅವುಗಳ ಪಕ್ಕದಲ್ಲಿಯೇ ಸಾಗುತ್ತಿದ್ದ ನಮ್ಮ ಮೈಮೇಲೂ ನೀರು ಚಿಮ್ಮಿ ನಮ್ಮ ಬಟ್ಟೆ ಒದ್ದೆಯಾಗಿತ್ತು. ಆಗೊಂದು ಮೊಸಳೆ ನೀರಿನಿಂದ ಮೇಲೆ ಬಂದು ತನ್ನ ಬಾಯನ್ನು ತೆರೆದು ಹರಿತವಾದ ತನ್ನ ಕೋರೆದಾಡುಗಳನ್ನು ಪ್ರದರ್ಶಿಸಿದಾಗ ಒಂದು ಕ್ಷಣ ಬೆಚ್ಚಿಬಿದ್ದೆವು. ಇವೆಲ್ಲಾ ಅನಿಮ್ಯಾಟ್ರಿಕ್ಸ್ ತಂತ್ರಜ್ಞಾನದ ಫಲ. ರೋಬೋಟಿಕ್ ಪ್ರಾಣಿಗಳು ನಮ್ಮ ಮುಂದೆ ಚಲಿಸುವುದನ್ನು ನೋಡಿದಾಗ ಒಂದು ಕ್ಷಣ ಗಾಬರಿಯೋ ಗಾಬರಿ. ಈ ‘ಜಂಗಲ್ ಕ್ರೂಸನ್ನು’ ಪ್ರವಾಸಿಗರಿಗೆ ಸಾಹಸಮಯ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ದೋಣಿ ವಿಹಾರದ ಸಮಯದಲ್ಲಿ ಮರೈನ್ ಪಾರ್ಕಿನಲ್ಲಿರುವ ಬಿಳೀ ಹುಲಿಗಳು ಮತ್ತು ಇತರೆ ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಲಭ್ಯ. ಈ ಬಿಳಿ ಹುಲಿಗಳು ರೋಬೋಟ್ಸ್ ಎಂದು ಹತ್ತಿರ ಹೋದೀರಿ ಜೋಕೆ. ಎಚ್ಚರ, ಅವು ನಿಜವಾದ ವನ್ಯಪ್ರಾಣಿಗಳು. ದೋಣಿವಿಹಾರದ ಸಮಯದಲ್ಲಿ ಫೋನ್ ಅಥವಾ ಕ್ಯಾಮೆರಾ ಒದ್ದೆಯಾಗದಂತೆ ಜಾಗರೂಕತೆ ವಹಿಸಿ.

ಇನ್ನು ಸಾಹಸಮಯವಾದ ಎರಡು ಶೋಗಳು ನಮಗಾಗಿ ಕಾದಿದ್ದವು – ‘ಕೌಬಾಯ್ ಸ್ಟಂಟ್ ಶೋ’ ಮತ್ತು ‘ಸ್ಪೈವಾರ್’. ಕೌಬಾಯ್ ಸ್ಟಂಟ್ ಶೋ ಗೆ ಹೋಗೋಣ ಬನ್ನಿ. ಇದು ನಮ್ಮನ್ನೆಲ್ಲಾ ಅಮೆರಿಕಾದ ಪುರಾತನವಾದ ಪಶ್ಚಿಮ ಭಾಗಕ್ಕೆ ಕರೆದೊಯ್ಯುವುದು. (ವೈಲ್ಡ್ ವೆಸ್ಟ್). ಕೌಬಾಯ್ ಟೋಪಿ ಹಾಕಿದ್ದ ಯುವಕರು ಕುದುರೆ ಸವಾರಿ ಮಾಡುತ್ತಾ ಮಾಡುವ ಸಾಹಸಗಳು ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು. ಅವರು ಎತ್ತರದಿಂದ ನೆಲಕ್ಕೆ ಜಿಗಿಯುವುದು, ಬೆಂಕಿಯೊಂದಿಗೆ ಸರಸವಾಡುವುದು ರೋಮಾಂಚಕಾರಿಯಾಗಿದ್ದವು. ಮಧ್ಯೆ ಮಧ್ಯೆ ಬರುವ ಹಾಸ್ಯ ಸನ್ನಿವೇಶಗಳು ನಮ್ಮನ್ನು ನಗೆಗಡಲಲ್ಲಿ ತೇಲಿಸಿದ್ದವು. ಕೌಬಾಯ್‌ಗಳು ಅನ್ಯಾಯವನ್ನು ಮೆಟ್ಟಿ ನಿಂತು ದುಷ್ಟರನ್ನು ಶಿಕ್ಷಿಸುವುದು ಈ ಎಲ್ಲಾ ಶೋಗಳ ಮೂಲ ಕಥೆ. ಹೀರೋ ಮತ್ತು ವಿಲನ್ ನಡುವೆ ನಡೆಯುವ ಫೈಟಿಂಗ್‌ಗಳು, ದಷ್ಟಪುಷ್ಟನಾಗಿದ್ದ ವಿಲನ್‌ನದೇ ಮೇಲುಗೈ ಎಂಬ ಘಟ್ಟ ಬರುವಷ್ಟರಲ್ಲೇ ನಮ್ಮ ಕೌಬಾಯ್ ಪುಟಿದೆದ್ದು ವಿಲನ್‌ನನ್ನು ಸದೆ ಬಡಿದಾಗ ಪ್ರೇಕ್ಷಕರಿಂದ ಜೋರಾದ ಕರತಾಡನ. ಶೋನಲ್ಲಿ ಬಳಸುವ ಬಂದೂಕಿನ ಶಬ್ದ, ಗುಂಡಿನ ಚಕಮಕಿ ಹಾಗೂ ಕುದುರೆ ಸವಾರಿ ದೃಶ್ಯಗಳು ನಮ್ಮನ್ನು ವೈಲ್ಸ್ ವೆಸ್ಟ್ ಗೇ ಕರೆದೊಯ್ದಿದ್ದವು.


ಅಂದಿನ ಕೊನೆಯ ಶೋ ‘ಸ್ಪೈವಾರ್’. ಇದು ಮೆರೈನ್ ಪಾರ್ಕ್ ನ ಅತ್ಯಂತ ವಿಶೇಷವಾದ ಪ್ರದರ್ಶನ. ಒಂದು ರೋಚಕವಾದ ‘ಆಕ್ಷನ್ ಮೂವಿ’ಯನ್ನು ನೋಡಿದ ಅನುಭವವಾಗುತ್ತದೆ. ಈ ಶೋನ ಕಥಾವಸ್ತು-ಒಬ್ಬ ಸ್ಪೈ ಕೇಡಿಗಳ ಅಡಗುದಾಣಕ್ಕೆ ನುಗ್ಗಿ ಜಗತ್ತನ್ನು ಅವರ ಕಪಿಮುಷ್ಟಿಯಿಂದ ಹೇಗೆ ಸಂರಕ್ಷಿಸುತ್ತಾನೆ ಎಂಬುದು. ಇಲ್ಲಿ ಜೇಮ್ಸ್ ಬಾಂಡ್ ಶೈಲಿಯ ಸಾಹಸಗಳನ್ನು ನೋಡಿದ ಅನುಭವವಾಗಿತ್ತು. ವೇಗವಾಗಿ ಚಲಿಸುವ ಜೆಟ್‌ಸ್ಕೀಗಳ ಚೇಸಿಂಗ್, ಪಿಸ್ತೂಲುಗಳಿಂದ ಹಾರುವ ಗುಂಡಿನ ಚಕಮಕಿ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದಿದ್ದವು. ಆಗಸದ ಎತ್ತರಕ್ಕೇರಿ ಅಲ್ಲಿಂದ ನೆಲಕ್ಕೆ ಜಿಗಿಯುವ ಸಾಹಸಿಗಳು, ನೀರಿನಲ್ಲಿ ನಡೆಯುವ ಮಾಂತ್ರಿಕರು ನಮ್ಮನ್ನು ಬೆರಗುಗೊಳಿಸಿದ್ದವು. ನೈಜವಾಗಿ ಕಾಣಿಸುವ ಬಾಂಬ್ ಸ್ಫೋಟಗಳು ಮತ್ತು ಬೆಂಕಿಯ ದೃಶ್ಯಗಳು ನಮ್ಮಲ್ಲಿ ಆತಂಕ ಹುಟ್ಟಿಸಿದ್ದವು. ಗ್ಯಾಲರಿಯ ಮುಂದಿನ ಸಾಲಿನಲ್ಲಿ ಕುಳಿತಿದ್ದ ನಮಗೆ ಬೆಂಕಿಯ ಬಿಸಿ ತಾಗಿತ್ತು, ನೀರಿನ ತುಂತುರು ಹನಿಗಳು ಮುಖದ ಮೇಲೆ ಸಿಡಿದಿದ್ದವು. ಈ ಶೋ ನೋಡಿದ ಮೇಲೆ ನಾವು ನಮ ಲಾಡ್ಜಿಗೆ ಹಿಂತಿರುಗಿ ಹೊರಟೆವು.

ಅಂದು ನಾವು ನೋಡಿದ ದೃಶ್ಯಗಳನ್ನು ಮೆಲುಕು ಹಾಕುತ್ತಾ ಸಾಗಿದೆವು. ಹಲವು ಬಗೆಯ ವನ್ಯಜೀವಿಗಳನ್ನು ನೋಡಿ ಆನಂದಿಸಿದ್ದೆವು, ಪ್ರಾಣಿಗಳನ್ನು ಪಳಗಿಸಿ ಹಲವು ಬಗೆಯ ಆಟ ಆಡಿಸಿದ್ದನ್ನು ನೋಡಿದ್ದೆವು, ದೋಣಿವಿಹಾರ ಮಾಡುತ್ತಾ ಪುರಾತನ ಯುಗಕ್ಕೆ ಹೋಗಿ ಡೈನಾಸರ್ ನಂತಹ ಪ್ರಾಣಿಗಳನ್ನೂ ಕಂಡಿದ್ದೆವು, ಜೇಮ್ಸ್ ಬಾಂಡ್ ನಂತೆ ಹೋರಾಡುವ ಸಾಹಸಿಗಳನ್ನು ಕಂಡು ಚಪ್ಪಾಳೆ ತಟ್ಟಿದ್ದೆವು. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲೆಂದೇ ಇಷ್ಟೊಂದು ಬಗೆಯ ಮನರಂಜನಾ ಕೇಂದ್ರಗಳನ್ನು ತೆರೆದಿರುವ ಸರ್ಕಾರದ ಪ್ರಯತ್ನವನ್ನು ಅಭಿನಂದಿಸೋಣ ಬನ್ನಿ.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45347

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *