ಬೆಳಕು-ಬಳ್ಳಿ

ಕೆಮಿಸ್ಟ್ರಿ ಹೊಂದುತ್ತಿಲ್ಲ!

Share Button

ಎಂದೂ ಇಷ್ಟೊಂದು ಏಕಾಂಗಿಯಾಗಿರಲಿಲ್ಲ,
ಬಾಯಲ್ಲಿ ನಾಲ್ಕು ಸಾಲುಗಳಾದರೂ ಮಧುರಾಂಕಣದಂತೆ ಓಡಾಡುತ್ತಿದ್ದವು.
ಅಧಮಪಕ್ಷ, ಅರಗೈಯಷ್ಟು ನೆರಳಾದರೂ
ನನ್ನ ಬೆನ್ನಹಿಂದೆ ಜೊತೆಯಾಗಿ ನಡೆಯುತ್ತಿತ್ತು.
ಹೊಟ್ಟೆಯೊಳಗೆ ಕವಿತೆಯೊಂದು,
ಕಂದನಂತೆ ಕಾಲಿಡುತ್ತಾ ತುಳಿಯುತ್ತಿದ್ದ ಭಾಸ!

ಎಂದೂ ಇಷ್ಟೊಂದು ದಾರಿದ್ರ್ಯ ಕಾಡಿರಲಿಲ್ಲ,
ಚಿಲ್ಲರೆಗಾಗಿ ಬ್ಯಾಗಲ್ಲಿ ಕೈಹಾಕಿದರೆ,
ಕ್ಯಾಪಿಲ್ಲದ ಪೆನ್ನು ಕಣ್ಣೀರು ತರುವಂತೆ ಸಹಿ ಮಾಡುತ್ತಿತ್ತು.
ಕಸದ ಕಾಗದದ ತುಣುಕನ್ನು ಕೊಡವಿದರೂ,
ಪುಂಜುಗಟ್ಟಲೆ ಪದಚಿತ್ರಗಳು ಮಡಿಲಲ್ಲಿ ಮುತ್ತಿನಂತೆ ಉದುರುತ್ತಿದ್ದವು.
ಮೇಜಿನ ಮೇಲೆ ಬೋರಲಿಸಿದ ಪುಸ್ತಕ,
ಸೆರಗಿನಡಿ ಕಂದನಿಗೆ ಹಾಲುಣಿಸುವ ತಾಯಿಯ ವಾತ್ಸಲ್ಯವಾಗಿತ್ತು.
ಎತ್ತ ನೋಡಿದರೂ ಒಂದು ಮಾನವೀಯ ಸ್ಪರ್ಶ,
ಗಾಳಿಯಲ್ಲಿ ಕರಗಿ ಬಂದು ಕೆನ್ನೆ ಸವರಿದ ಅನುಭೂತಿ.

ಆದರೆ, ಇಂದು…
ಎಂದೂ ಕಾಣದ ಇಂಥ ಪರಕೀಯತೆ,
ಯಾರೋ ಅರಿವಿಲ್ಲದ ನಾಡಿಗೆ ಬಿದ್ದ ವಲಸೆಗಾರನಂತೆ ದಿಗಿಲು.
ಕವಿ ಸಮಯವನ್ನು ಕಾಲಸರ್ಪವೇ ಕಚ್ಚಿದಂತಾಗಿದೆ!

ಸಂದರ್ಭಗಳು ಬದಲಾದಾಗಲೆಲ್ಲಾ ಸ್ಪಂದನೆಗಳೂ ಬಣ್ಣ ಬದಲಿಸಬಹುದು,
ಅಭಿವ್ಯಕ್ತಿಗಳು ಅದೆಷ್ಟು ರೂಪಗಳನ್ನು ಬೇಕಾದರೂ ತಾಳಬಹುದು.
ಆದರೆ ಇದೇನಿದು ವಿಪರ್ಯಾಸ?
ಒಂದು ಕಿರೀಟಕ್ಕಾಗಿ, ಗಂಡಪೆಂಡಾರಕ್ಕಾಗಿ, ಶಾಲುಗಳಿಗಾಗಿ—
ಸಂಕಟಗಳ ಮಹಾಪೂರವೇ ಹರಿಯುತ್ತಿದೆ.
ಕತ್ತಿಗಳು ಮತ್ತು ಈಟಿಗಳು ಗಾಳಿಯಲ್ಲಿ ತೂರುತ್ತಿವೆ,
ಸೆಲ್ಫಿಯ ಸಂಭ್ರಮವೇ ಸಾಹಿತ್ಯದ ಪೀಠವನ್ನೇರುತ್ತಿದೆ!

ನನ್ನಿಂದ ನನ್ನನ್ನೇ ಬರಿದು ಮಾಡಿಕೊಂಡು,
ಇನ್ಯಾವುದೋ ಶೂನ್ಯಕ್ಕೆ ಎಸೆದುಬಿಟ್ಟಂತೊಂದು ಭಾವ.
ಅಲ್ಲಿರುವ ನನಗೂ,
ಇಲ್ಲಿರುವ ನನಗೂ— ಕೆಮಿಸ್ಟ್ರಿ ಹೊಂದುತ್ತಿಲ್ಲ!

ಈ ಎರಡು ದೂರಗಳನ್ನು ಬೆಸೆಯುವ ನದಿಯೊಂದು ಹುಟ್ಟಬೇಕಿದೆ.
ಕಣ್ಣ ಮುಂದೆ ಮರುಭೂಮಿ ಮಾತ್ರ ಕಾಣಿಸುತ್ತಿದೆ.
ಆ ಮರುಭೂಮಿಯ ದಡದಲ್ಲಿ, ತೇವ ತಟ್ಟದೆ ತೇಲುತ್ತಿರುವ ಆ ನದಿಯ ಹೆಸರು—
ತೀರವೋ ಅಥವಾ ವಿರಾಮವೋ? ತಿಳಿಯದಾಗಿದೆ!

ತೆಲುಗು ಮೂಲ : ಕೊಂಡೇಪೂಡಿ ನಿರ್ಮಲ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀಮೋಹನ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *