ಪರಾಗ

ನೀಳ್ಗತೆ : ಪ್ರೀತಿ ಇಲ್ಲದ ಮೇಲೆ….ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬೆಳಿಗ್ಗೆ ತಿಂಡಿ ತಿನ್ನುವಾಗ ಕೆಂಗೇರಿಯ ಬಳಿ ಇದ್ದ ಆಶ್ರಮದವರು ಫೋನ್ ಮಾಡಿದರು.
“ಲಹರಿ ಇವತ್ತು ಅಪ್ಪ-ಅಮ್ಮನ ಮ್ಯಾರೇಜ್ ಆನಿವರ್ಸರಿ.”
“ನಾನು ಬೆಳಿಗ್ಗೆ ವಿಷ್ ಮಾಡ್ದೆ.”
“ನಾನೂ ವಿಷ್ ಮಾಡ್ದೆ. ನಮ್ಮಿಬ್ಬರಲ್ಲಿ ಒಬ್ಬರು ಕೆಂಗೇರಿ ಹತ್ತಿರ ಇರುವ ಅನಾಥಾಶ್ರಮಕ್ಕೆ ಹೋಗಬೇಕಲ್ವಾ? ಹಾಗೇ ಆ ಮಕ್ಕಳಿಗೆ ನೋಟ್‌ಬುಕ್ಸ್, ಪೆನ್ನು ಕೊಡಬೇಕು.”
“ಹೌದೂರಿ.”
“ಪೇರೆಂಟ್ಸ್ ಮೀಟಿಂಗ್ ಯಾವಾಗ ಮುಗಿಯುತ್ತದೆಯೋ ಏನೋ ನೀನೇ ಹೋಗಿಬಾ.”
ಅವಳು ಒಪ್ಪಿದಳು. ಅಷ್ಟರಲ್ಲಿ ಅನಿತಾ ಕಾಲ್ ಮಾಡಿದಳು.
“ನನಗೆ ಕಾಯಬೇಡ ನೀನು ಬೇರೆ ಆಟೋಲಿ ಹೊರಡು.”
“ಯಾಕೆ?”
“ಬಂದು ಹೇಳ್ತೀನಿ.”

ಅವಳು ಆಟೋ ಹತ್ತಿ ಕುಳಿತಳು. ಅವಳಿಗೆ ಗಂಡನ ಮೇಲೆ ಸಿಟ್ಟು ಬಂತು. “ಪೇರೆಂಟ್ಸ್ ಮೀಟಿಂಗ್ ನಂತರ ಮಕ್ಕಳನ್ನೂ ಕರೆದುಕೊಂಡು ಅನಾಥಾಲಯಕ್ಕೆ ಹೋಗಿ ಅಲ್ಲೇ ಮಕ್ಕಳ ಜೊತೆ ಊಟ ಮಾಡಬಹುದಿತ್ತಲ್ಲವೆ? ಅನಾಥಾಲಯದ ಮಕ್ಕಳಿಗೆ ಅದನ್ನು ನಡೆಸುತ್ತಿರುವ ಹಿರಿಯಣ್ಣನವರಿಗೂ ಖುಷಿಯಾಗುತ್ತಿತ್ತು. ಆದರೆ ಹೇಳುವರ‍್ಯಾರು? ಹೇಳಿದರೆ ಸಿಟ್ಟು ಕೋಪ.”
ತಕ್ಷಣ ಅವಳಿಗೆ ಮಲ್ಲಿ ಹೇಳುವ ಮಾತು ನೆನಪಾಯಿತು. “ಅಕ್ಕಾ ನಾನು ಹೀಗೇಳ್ತೀನೀಂತ ಬೇಜಾರು ಮಾಡ್ಕೋಬೇಡಿ. ನೀವೂ ದುಡೀತೀರಾ ನಾನೂ ದುಡೀತೀನಿ. ನಿಮ್ಮದು ಓದಿರುವವರ ಕೆಲಸ. ನನ್ನದು ಓದದವರ ಕೆಲಸ, ಅದುಬಿಡಿ. ಅವರವರು ಕೇಳ್ಕೊಂಡು ಬಂದಿದ್ದು ಅವರಿಗೆ.”
“ನೀನು ಏನು ಹೇಳ್ತಿದ್ದೀಯಾ?”
“ನಮ್ಮ ಕೊರಗು ಮಾತ್ರ ಒಂದೇ. ನನ್ನ ಗಂಡ ನನ್ನನ್ನು ಪ್ರೀತಿಸಬಹುದು. ಪ್ರಸಾದಣ್ಣನೂ ನಿಮ್ಮನ್ನು ಪ್ರೀತಿಸಬಹುದು. ಆದರೆ ನಾವು ನಮ್ಮ ಮನೆಗಳಿಗೆ ಈ ಪಾಟಿ ದುಡಿದ್ರೂ ಅವರು ಯಾಕೆ ಜವಾಬ್ದಾರಿ ಹಂಚ್ಕೊಳಲ್ಲ? ಯಾಕೆ ಪ್ರೀತಿ ತೋರಿಸಲ್ಲ?”
“ನೀನು ಏನೇನೋ ಪ್ರಶ್ನೆ ಕೇಳಿ ನನ್ನ ತಲೆ ತಿನ್ನಬೇಡ” ಎಂದು ಲಹರಿ ಅವಳ ಬಾಯಿ ಮುಚ್ಚಿಸಿದ್ದಳು. ತಕ್ಷಣ ಅವಳಿಗೆ ಅತ್ತೆ ಆಗಾಗ ಹೇಳುವ ಮಾತುಗಳು ನೆನಪಾದವು.
“ಬದುಕು ಬಡಿಸಿದ ಬಾಳೆಲೆಯಂತೆ ಕೆಲವರಿಗೆ ಬರಿ ಅನ್ನ ಸಾರು ಸಿಗಬಹುದು. ಕೆಲವರಿಗೆ ಮೃಷ್ಟಾನ್ನ ಭೋಜನ ಸಿಗಬಹುದು. ನಾವು ಅದನ್ನೇ ಸಂತೋಷದಿಂದ ಸ್ವೀಕರಿಸಬೇಕು. ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳ್ಮಾಡಿಕೊಳ್ಳಬಾರದು.”
ಅತ್ತೆಯ ಮಾತುಗಳು ನೆನಪಾದೊಡನೆ ಮನಸ್ಸಿಗೆ ಸಮಾಧಾನವಾಯಿತು. “ಅತ್ತೆ-ಮಾವನಿಗಾಗಿ ನಾನು ಇಷ್ಟೂ ಮಾಡದಿದ್ದರೆ ಹೇಗೆ? ಆದರೂ ಬದಲಾವಣೆಯಿಲ್ಲದ ಈ ದಿನಚರಿ ನನ್ನ ತಾಳ್ಮೆ ಕೆಡಿಸದಿದ್ದರೆ ನನ್ನ ಪುಣ್ಯ” ಎಂದುಕೊಂಡಳು.

ಅವಳು ಬ್ಯಾಂಕ್ ತಲುಪಿದ ಕಾಲು ಗಂಟೆಯ ನಂತರ ಅನಿತಾ ಬಂದಳು.
“ಯಾಕೆ ಲೇಟು?”
“ಬೆಳಿಗ್ಗೆಯಿಂದ ನಮ್ಮ ಪಿ.ಜೀಲಿ ನೀರಿಲ್ಲ. ಸಾಕಾಯ್ತು.”
“ಅದಕ್ಕೆ ಹೇಳೋದು ಮದುವೆ ಆಗಿ ಮನೆ ಮಾಡೂಂತ.”
“ನಿಮ್ಮಿ ಇವತ್ತು ರಜ ಹಾಕಿದ್ದಾಳೆ. ನಾನು ಡಬ್ಬಿ ತಂದಿಲ್ಲ……..”
“ನಾನೂ ತಂದಿಲ್ಲ. ಹೊರಗೆ ಊಟ ಮಾಡಿದರಾಯ್ತು.”
“ಯಾಕೋ ಇವತ್ತು ಬೇಜಾರು ಕಣೆ. ಲೇಟಾಗಿ ಬಂದಿರುವುದರಿಂದ ಪರ‍್ಮಿಷನ್ ಕೇಳುವಂತಿಲ್ಲ.”
“ನಾನು ಮಧ್ಯಾಹ್ನ ಪರ‍್ಮಿಷನ್ ಕೇಳ್ತಿದ್ದೀನಿ.”
“ಯಾಕೆ?”
ಲಹರಿ ಹೇಳಿದಳು.
“ತಾಯಿ ಊಟ ಆದಮೇಲೆ ಹೋಗು. ಜಿಪುಣತನ ಮಾಡದೆ ಆಟೋದಲ್ಲಿ ಹೋಗಿ ಉದ್ಧಾರವಾಗು……..”
“ಆಗಲಿ ಕಣೆ.”
ಲಹರಿ ತನ್ನ ಕೆಲಸದಲ್ಲಿ ಮುಳುಗಿದಳು. ನಂತರ ಮ್ಯಾನೇಜರ್ ಬಳಿ ಪರ‍್ಮೀಷನ್ ಕೇಳಿದಳು.
ರಾಮಚಂದ್ರಯ್ಯ ನಗುತ್ತಾ ಹೇಳಿದರು. “ಅಪರೂಪಕ್ಕೆ ನೀನು ಪರ‍್ಮಿಷನ್ ಕೇಳುವಾಗ ನಾನು ಹೇಗಮ್ಮ ಆಗಲ್ಲ ಅನ್ನಲಿ? ಹೋಗು…. ತೊಂದರೆಯಿಲ್ಲ.”
“ಥ್ಯಾಂಕ್ಯು ಸರ್.”

ಒಂದು ಗಂಟೆಗೆ ಅನಿತಾ ಬಂದು ಕರೆದಳು.
“ಬಾರೆ. ಬೆಳಿಗ್ಗೆ ಬ್ರೆಡ್ ತಿಂದು ಬಂದಿದ್ದೆ ಹಸಿವಾಗ್ತಿದೆ. ಅವಳು ಚಿಕ್ಕ ಪರ್ಸ್ ತೆಗೆದುಕೊಂಡು ಹೊರಟಳು. ವ್ಯಾನಿಟಿಬ್ಯಾಗ್ ಅವಳ ಟೇಬಲ್ ಮೇಲೇ ಉಳಿಯಿತು.”
ಇಬ್ಬರೂ ಊಟ ಮಾಡಿದರು. ಲಹರಿ ಪೇ ಮಾಡಿ ಚಿಲ್ಲರೆ ಪರ್ಸ್ ಗೆ ಸೇರಿಸಿದಳು. ಅವರು ಹೊರಗೆ ಬಂದಾಗ ಆಟೋ ರಂಗಪ್ಪ ಕಾಣಿಸಿದ.
“ಏನು ರಂಗಪ್ಪ ಈ ಕಡೆ ಬಂದಿದ್ದೀರಿ?”
“ಕೆಂಗೇರಿಯಿಂದ ಒಬ್ರು ಬಂದ್ರು ಮೇಡಂ. ಅವರನ್ನು ಬಿಡಕ್ಕೆ ಬಂದಿದ್ದೆ.”
“ಹೌದಾ? ಲಹರಿ ನೀನು ರಂಗಪ್ಪನ ಆಟೋದಲ್ಲೇ ಕೆಂಗೇರಿಗೆ ಹೋಗೇ.”
ಲಹರಿ ಹಿಂದೆ ಮುಂದೆ ನೋಡದೆ ಆಟೋ ಹತ್ತಿದಳು.


ಪೇರೆಂಟ್ಸ್ ಮೀಟಿಂಗ್ ಅಟೆಂಡ್ ಮಾಡಿ ಪ್ರಸಾದ್ ಮಕ್ಕಳ ಜೊತೆ ಹೋಟೆಲ್‌ನಲ್ಲಿ ಊಟ ಮಾಡಿದ. ನಂತರ ಮಕ್ಕಳ ಜೊತೆ ಇಂಗ್ಲೀಷ್ ಮೂವಿ ನೋಡಿ ಮನೆಗೆ ಬಂದ. ಸಿನಿಮಾ ಪ್ರಾಣಿಗಳ ಕುರಿತದ್ದಾಗಿದ್ದರಿಂದ ಮಕ್ಕಳಿಗೂ ಇಷ್ಟವಾಗಿತ್ತು.
ಅವರು ಮನೆಗೆ ಬಂದಾಗ ಏಳು ಗಂಟೆ. ಮನೆಯ ಒಳಗೆ ದೀಪವಿರಲಿಲ್ಲ.
“ಅಮ್ಮಾ ಬಂದಿಲ್ಲಾಂತ ಕಾಣತ್ತೆ.
ಅಷ್ಟರಲ್ಲಿ ಮಲ್ಲಿ ಬಂದಳು. “ನಾನಾಗಲೇ ಎರಡು ಸಲ ಬಂದು ಹೋದೆ. ಅಕ್ಕ ಬಂದಿಲ್ಲ. ಫೋನ್ ಮಾಡಿದ್ರೆ ಒಂದೆರಡು ಸಲ ರಿಂಗಾಯಿತು…. ಯಾರೂ ಎತ್ತಲಿಲ್ಲ.”
ಪ್ರಸಾದ್ ಲಹರಿ ಫೋನ್‌ಗೆ ಕಾಲ್ ಮಾಡಿದ. “ನಾಟ್‌ರೀಚಬಲ್” ಎಂದು ಬಂತು. ತಕ್ಷಣ ಕೆಂಗೇರಿಯ ಅನಾಥಾಲಯಕ್ಕೆ ಫೋನ್ ಮಾಡಿದ.
“ಸರ್ ಮೇಡಂ ಬರಲೇ ಇಲ್ಲ. ಅವರಿಗೆ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಮಕ್ಕಳು ಹಸಿದಿರಬಾರದೂಂತ ಊಟ ಹಾಕಿ, ನೀವು ಹೇಳಿದ್ದಂತೆ ಪ್ರತಿಯೊಬ್ಬರಿಗೂ ಒಂದೊಂದು ಡಜನ್ ೨೦೦ ಪುಟಗಳ ನೋಟ್‌ಬುಕ್ಸ್ ಕೊಟ್ಟೆವು.”
“ಒಳ್ಳೆಯದು. ಲಹರಿ ಇನ್ನೂ ಮನೆಗೆ ಬಂದಿಲ್ಲ. ನಾನು ಆಮೇಲೆ ಕಾಲ್ ಮಾಡ್ತೀವಿ.”
“ಅಪ್ಪಾ ಅಮ್ಮಾ ಯಾಕೆ ಬಂದಿಲ್ಲ?” ದಿಶಾ ಅಳುತ್ತಾ ಕೇಳಿದಳು.
“ಗೊತ್ತಿಲ್ಲ ಮರಿ. ನನಗೂ ಗಾಬರಿಯಾಗ್ತಿದೆ” ಅವನ ಕಂಠ ಗದ್ಗದಿತವಾಗಿದ್ದನ್ನು ಮಲ್ಲಿ ಗಮನಿಸಿದಳು.
“ಮಲ್ಲಿ ನಿನಗೆ ಲಹರಿ ಫ್ರೆಂಡ್ಸ್ ನಂಬರ್ ಗೊತ್ತಿದೆಯಾ?”
“ಅನಿತಕ್ಕಂದು ಆ ಕ್ಯಾಲೆಂಡರ್ ಮೇಲಿದೆ. ಫೋನ್ ಮಾಡಿ”
ಮಲ್ಲಿ ಕ್ಯಾಲೆಂಡರ್ ತಂದುಕೊಟ್ಟಳು.

ಅವನು ಅನಿತಾಗೆ ಕಾಲ್ ಮಾಡಿದ. ಅವಳು ಗಾಬರಿಯಿಂದ ಬಂದಳು. “ಲಹರಿ ಬಂದಿಲ್ವಾ? ಅವಳು ಆಟೋದಲ್ಲಿ ಕೆಂಗೇರಿಗೆ ಹೊರಟಳು. ನಾನೇ ಆಟೋ ಹತ್ತಿಸಿದೆ.”
“ಹೌದಾ?”
“ಓಹ್ ಮೈ ಗಾಡ್, ಆಕ್ಸಿಡೆಂಟ್ ಆಗಿರಬಹುದಾ?”
“ಪ್ಲೀಸ್ ಹಾಗೆಲ್ಲಾ ಹೇಳಬೇಡಿ. ನನ್ನ ಲಹರಿಗೆ ಏನೂ ಆಗಿರಲ್ಲ”
ಅವನು ಕರ್ಚೀಪ್‌ನಲ್ಲಿ ಮುಖ ಒರೆಸಿಕೊಂಡು ಹೇಳಿದ.
“ಅಪ್ಪ, ಅಮ್ಮ ಬರಲ್ವಾ?”
“ಬರ‍್ತಾಳೆ ಪುಟ್ಟಾ. ನನಗೆ ತಲೆಕೆಟ್ಟಂತಾಗಿದೆ. ನಾನು ಒಳಗಿರ‍್ತೀನಿ.”
ಅವನು ರೂಮ್‌ಗೆ ಹೋದ.

ಅನಿತಾ ಮಕ್ಕಳ ಜೊತೆ ಹೊರಗಡೆ ಕಟ್ಟೆಯ ಮೇಲೆ ಕುಳಿತಳು. ಅವಳಿಗೂ ಆತಂಕವಾಗಿತ್ತು. ಪ್ರಸಾದ್ ಸಂಕಟಪಡುವುದು ಕಂಡು ಆಶ್ಚರ್ಯವಾಗಿತ್ತು.
“ಹೆಂಗಸರು ಅತ್ತು ಹಗುರವಾಗ್ತಾರೆ. ಗಂಡಸರಿಗೆ ಅಳಕ್ಕೂ ಆಗಲ್ಲ, ಅನುಭವಿಸಕ್ಕೂ ಆಗಲ್ಲ. ಒಂದು ತರಹ ಸಂಕಟ” ಎಂದುಕೊಂಡಳು.
ಎಂಟೂವರೆಗೆ ಲಹರಿ ಆಟೋದಲ್ಲಿ ಬಂದಿಳಿದಳು.
ಮಕ್ಕಳು “ಅಮ್ಮಾ” ಎಂದು ಅವಳನ್ನಪ್ಪಿದರು.
“ಎಲ್ಲಿಗೆ ಹೋಗಿದ್ದೆ ಲಹರಿ?”
“ಅದೊಂದು ದೊಡ್ಡ ಕಥೆ. ಇರು ನಾನು ವಾಷ್‌ರೂಮ್‌ಗೆ ಹೋಗಿ ಬರ‍್ತೀನಿ.”
ಅವಳು ಮುಖ ತೊಳೆದು ಬಂದು ಡೈನಿಂಗ್ ಟೇಬಲ್ ಮೇಲಿದ್ದ ಜಗ್‌ನಿಂದ ನೀರು ಕುಡಿದಳು.

ಒಳಗಿನಿಂದ ಧಾವಿಸಿದ ಪ್ರಸಾದ್ ಅವಳನ್ನಪ್ಪಿ ಕೇಳಿದ. “ಲಹರಿ ಯಾಕೆ ಹೀಗೆ ಮಾಡ್ದೆ? ಎಲ್ಲಿಗೆ ಹೋಗಿದ್ದೆ? ನಮಗೆಲ್ಲಾ ಎಷ್ಟು ಗಾಬರಿಯಾಗಿತ್ತು ಗೊತ್ತಾ?” ಅವನ ಕಣ್ಣುಗಳು ತುಂಬಿ ಬಂದಿದ್ದವು.
“ನಾನು ಬೇಕೂಂತ ಮಾಡಲಿಲ್ಲ. ಫೋನ್ ಬ್ಯಾಂಕ್‌ನಲ್ಲೇ ಉಳಿದು ಬಿಡ್ತು.”
“ನೀನಿಲ್ಲದೆ ನಾನು ಹೇಗಿರಲು ಸಾಧ್ಯ ಲಹರಿ? ನಿನಗೇನಾಯಿತೋ, ಆಕ್ಸಿಡೆಂಟ್ ಆಯಿತೇನೋ ಅಥವಾ ಯಾರಾದ್ರೂ ಏನಾದ್ರೂ ತೊಂದ್ರೆ ಮಾಡಿದ್ರೇನೋ ಅನ್ನುವ ಯೋಚನೆಯಲ್ಲಿ ನಾನು ಸತ್ತುಹೋಗಿದ್ದೆ. “ಪ್ಲೀಸ್ ಇನ್ಯಾವತ್ತೂ ಹೀಗೆ ಮಾಡಬೇಡ” ಅವನು ಅವಳ ಮಾತು ಕೇಳಿಸಿಕೊಳ್ಳದೆ ಬಡಬಡಿಸಿದ.
ತನಗಾಗಿ ಹಂಬಲಿಸುವ ಗಂಡನನ್ನು ನೋಡಿ ಅವಳ ಎದೆ ತುಂಬಿ ಬಂತು. ಅವಳು ಅವನ ತಲೆಯನ್ನು ತನ್ನ ಎದೆಗೊತ್ತಿ ಸಂತೈಸಿದಳು.
ಮಲ್ಲಿ “ಅನಿತಾಕ್ಕ ನನ್ನ ಗಂಡ ಫೋನ್ ಮಾಡ್ತಿದ್ದಾನೆ ಬರ‍್ತೀನಿ” ಎಂದಳು.

ಅನಿತಾ ಮಕ್ಕಳನ್ನು ಎದುರಿನ ರಸ್ತೆಗೆ ಕರೆದೊಯ್ದು ಪಾನಿಪೂರಿ ಕೊಡಿಸಿದಳು. ಅವಳಿಗೆ ಏನೂ ತಿನ್ನಬೇಕೆನ್ನಿಸಲಿಲ್ಲ. ಮಾತಾಡುವ ಸ್ಥಿತಿಯಲ್ಲೂ ಅವಳಿರಲಿಲ್ಲ. ಮಾಧವನಿಗೆ ಮೆಸೇಜ್ ಮಾಡಿದಳು. “ಮುಂದಿನವಾರ ಬಾ ಆದಷ್ಟು ಬೇಗ ಮದುವೆಯಾಗೋಣ.”
ತನ್ನ ಮಡಿಲಲ್ಲಿ ತಲೆಯಿಟ್ಟು ಹಾಯಾಗಿ ಮಲಗಿದ್ದ ಗಂಡನ ತಲೆಗೂದಲಲ್ಲಿ ಕೈ ಆಡಿಸುತ್ತಾ ಲಹರಿ ಉಸುರಿದಳು. “ಸಾರಿ ಪ್ರಸಾದ್, ಆಟೋ ಕೆಟ್ಟು ಹೋಗಿ ಒಂದು ಟೆಂಪೋನಲ್ಲಿ ಕೆಂಗೇರಿಗೆ ಹೊರಟೆ. ನಿದ್ರೆ ಬಂದುಬಿಡ್ತು. ಕಣ್ಣು ಬಿಟ್ಟಾಗ ಚನ್ನಪಟ್ಟಣದಲ್ಲಿದ್ದೆ. ಫೋನ್ ಇರಲಿಲ್ಲ. ಪರಿಚಿತರೊಬ್ಬರ ಸಹಾಯದಿಂದ ಮನೆ ತಲುಪಿದೆ.”
ಅವನು ಮುಗುಳ್ನಕ್ಕು ಅವಳ ಕೈ ಹಿಡಿದು ತುಟಿಗೆ ಒತ್ತಿಕೊಂಡ. ಆ ಕ್ಷಣ ಇಬ್ಬರಿಗೂ ಆಪ್ಯಾಯಮಾನವಾಗಿತ್ತು.

(ಮುಂದುವರಿಯುವುದು)

ಸಿ.ಎನ್.ಮುಕ್ತಾ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *