ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಗೆಳೆಯನ ಮಾತುಗಳಿಂದ ಬಾಲಕೃಷ್ಣನಿಗೆ ಎದ್ದು ಕುಣಿಯುವಂತಾಯಿತು. ಆದರೂ ಮನೆಯಲ್ಲಿ ವಿಷಯ ತಿಳಿಸಿ ಮುಂದಿನ ಹೆಜ್ಜೆ ಇರಿಸುವುದೆಂದು ನಿರ್ಧರಿಸಿದ. ಅವನ ಹೆತ್ತವರು ಸಿದ್ಧಾರ್ಥನಿಗೆ ಅಪರಿಚಿತರೇನೂ ಅಲ್ಲ. ಅವರಿಗೆ ಇವನು ಬೇಜವಾಬ್ದಾರಿಯ ಹುಡುಗ, ಮೈಬಗ್ಗಿಸಿ ಕೆಲಸ ಮಾಡುವವನಲ್ಲ, ಎಲ್ಲವೂ ಆಳುಕಾಳುಗಳ ಮೇಲೇ ಬಿಡುತ್ತಾನೆ. ನಮಗಿಂತ ಹೆಚ್ಚಾಗಿಯೇ ಹೊಲ ಗದ್ದೆ, ಜೊತೆಗೆ ಸ್ವಲ್ಪ ತೋಟವೂ ಇದ್ದರೂ ಉತ್ಪನ್ನದ ಆದಾಯ ಹೇಳಿಕೊಳ್ಳುವಷ್ಟಿಲ್ಲ. ಈಗಲೂ ಮುದಿವಯಸ್ಸಿನಲ್ಲಿ ಅವರಪ್ಪನು ಮಗನಿಗಿಂತ ಹೆಚ್ಚಿಗೆ ಕೆಲಸ ಮಾಡುತ್ತಾನೆ. ಹಿರಿಯ ಮಗಳ ಮದುವೆಮಾಡಿದ್ದಾನೆ. ಮತ್ತೊಬ್ಬ ಮಗಳಿದ್ದಾಳೆ. ಹಾಗೆ ಹೀಗೆಂದು ಆಗಾಗ್ಗೆ ಮನೆಯಲ್ಲಿ ಆಕ್ಷೇಪಣೆಯ ಮಾತುಗಳನ್ನಾಡುತ್ತಿದ್ದುದು ಕಿವಿಯ ಮೇಲೆ ಬೀಳುತ್ತಿತ್ತು. ನನ್ನ ಗೆಳೆಯನೇನೋ ತನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಸಂದೇಹವಿಲ್ಲ. ಆದರೆ ತಂದೆ ತಾಯಿಗಳು ಈ ಪ್ರಸ್ತಾಪಕ್ಕೆ ಒಪ್ಪುತ್ತಾರೋ ಇಲ್ಲವೋ ಸಂದಿಗ್ಧತೆಯಲ್ಲಿ ಮೈಮರೆತಿರುವಾಗ ಗೆಳೆಯನ ಕರೆ ಎಚ್ಚರಿಸಿತ್ತು. ಏನೂ ಹೇಳಲಾಗದೆ ಸುಮ್ಮನೆ ಅವನ ಮುಖವನ್ನು ದೃಷ್ಟಿಸಿದ.

“ಅಬ್ಬಾ ಅಂತೂ ನನ್ನ ಕಡೆಗೆ ತಿರುಗಿ ನೋಡಿದೆಯಲ್ಲಾ ! ನಾನು ಹೇಳಿದ್ದೇನಾದರೂ ತಪ್ಪಾಗಿದ್ದರೆ ಕ್ಷಮಿಸು. ಅವಸರವೇನಿಲ್ಲ. ನೀನೇ ಈಗ ಸಮಸ್ಯೆ ಹೇಳಿಕೊಂಡಿದ್ದಕ್ಕೆ ನಾನೂ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿದ್ದುದನ್ನು ಹೇಳಿಕೊಂಡೆ. ಕಾಕತಾಳೀಯವಾಗಿದೆ. ಯೋಚಿಸು. ನಾನಿನ್ನು ಹೊರಡುತ್ತೇನೆ. ನಮ್ಮಪ್ಪ ಮೈಸೂರಿನ ಮಂಡಿಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೋಗಿದ್ದಾರೆ. ನಾನು ಜಮೀನಿನ ಕಡೆ ಹೋಗಬೇಕು. ಮನೆಯಲ್ಲಿ ಎಲ್ಲರನ್ನೂ ಕೇಳಿದೆನೆಂದು ಹೇಳು” ಎಂದು ಅಲ್ಲಿಂದ ನಡೆದುಹೋದ ಸಿದ್ಧಾರ್ಥ.

ಗೆಳೆಯ ಅತ್ತ ಹೋದಮೇಲೆ ಬಾಲಕೃಷ್ಣ “ಕಿಲಾಡಿ ಬಡ್ಡೀಮಗ ಸಿದ್ಧಾರ್ಥ, ಒಂದು ದಿನವೂ ನನಗೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗೇನೋ ಬೇಜವಾಬ್ದಾರಿಯಿರಬಹುದು. ಸಂಸಾರದ ನೊಗ ಹೆಗಲಿಗೇರಿದರೆ ತಂತಾನೇ ಸರಿಹೋಗ್ತಾನೆ. ಮೈಗಳ್ಳನಿರಬಹುದು, ಆದರೆ ಯಾವುದೇ ದುಶ್ಚಟಗಳಿಲ್ಲ, ಮನೆಯಲ್ಲಿ ಇವನ ಮಾತು ತೆಗೆದು ಹಾಕಲಾರರು. ಮೊದಲು ಈ ವಿಷಯವನ್ನು ನನ್ನ ತಂಗಿಯ ಬಳಿ ಪ್ರಸ್ತಾಪಿಸಬೇಕು. ಆಕೆಯ ಪ್ರತಿಕ್ರಿಯೆಯನ್ನು ನೋಡಿಕೊಂಡು ಸಕರಾತ್ಮಕವಾಗಿದ್ದರೆ ಮುಂದಿನ ಹೆಜ್ಜೆಯಿಡಬೇಕು. ಇಲ್ಲದಿದ್ದರೆ ಅಷ್ಟಕ್ಕೇ ಗಪ್‌ಚುಪ್ ಆಗಿಬಿಡುವುದು. ಎಲ್ಲವೂ ಸರಿಹೋದರೆ ಅಪ್ಪನ ಕರ್ತವ್ಯವೂ ಮುಗಿದಂತಾಗುತ್ತದೆ, ತಂಗಿಯ ಆಸೆಯು ಪೂರ್ತಿಯಾದಂತಾಗುತ್ತದೆ. ಹೀಗೆ ಆಲೋಚಿಸುತ್ತ ತಾನು ಮಾಡುತ್ತಿದ್ದ ಕೆಲಸ ಯಾವ ಹಂತದಲ್ಲಿದೆ ಎಂದು ನೋಡಲು ಅತ್ತ ನಡೆದ.

ಅಷ್ಟರಲ್ಲಿ ತಂಗಿ ಭಾರ್ಗವಿಯು ಕಿರಿಯ ತಂಗಿ ಭಾಗ್ಯಳೊಡನೆ ಹೊಲದ ಕಡೆಗೇ ಬರುತ್ತಿರುವುದು ಕಾಣಿಸಿತು. ಇಬ್ಬರ ಕೈಯಲ್ಲೂ ಒಂದೊಂದು ವೈರ್‌ಬುಟ್ಟಿಗಳಿದ್ದವು. ಓಹೋ ಮಧ್ಯಾನ್ಹದ ಬುತ್ತಿಯನ್ನು ಇವರೇ ತಂದಿದ್ದಾರೆ. ಆಗಲೇ ಊಟದ ಸಮಯವಾಗಿಹೋಯಿತೇ? ಎಂದು ಕೈಗಡಿಯಾರದತ್ತ ನೋಟಬೀರಿದ. ಮಧ್ಯಾನ್ಹ ಒಂದೂವರೆಯಾಗಿತ್ತು. ಹೌದು ಇವರುಗಳ್ಯಾಕೆ ಬುತ್ತಿ ತಂದರು. ಯಾವಾಗಲೂ ಈ ಕೆಲಸ ಮಾಡುತ್ತಿದ್ದ ನಾಗನಿಗೇನಾಯಿತು? ಓಹೋ ! ನನ್ನ ಮರೆವಿಗಿಷ್ಟು. ಅವನ ಮನೆಯಲ್ಲಿ ಇವತ್ತು ಏನೋ ಕಾರ್ಯವಿದೆಯೆಂದು ಹೇಳಿಹೋಗಿದ್ದ. ಒಳ್ಳೆಯದೇ ಆಯ್ತು. ನನ್ನ ಗೆಳೆಯ ಹೇಳಿದ್ದನ್ನು ತಂಗಿಗೆ ತಲುಪಿಸಿ ಅವಳ ಅಭಿಪ್ರಾಯವನ್ನು ಕೇಳಲು ಇದಕ್ಕಿಂತ ಒಳ್ಳೆಯ ಪ್ರಶಸ್ತವಾದ ಸನ್ನಿವೇಶ ಯಾವುದಿದೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂAಡು ಅದೇ ಕಲ್ಲುಬೆಂಚನ ಮೇಲೆ ಕುಳಿತುಕೊಂಡ ಬಾಲಕೃಷ್ಣ.

ತಂಗಿಯೊಡನೆ ಬುಟ್ಟಿಗಳನ್ನಿಡಿದುಕೊಂಡು ನೇರವಾಗಿ ಅವನು ಕುಳಿತಿದ್ದ ಸ್ಥಳಕ್ಕೇ ಬಂದಳು ಭಾರ್ಗವಿ. “ಹೊತ್ತಾಯಿತೇ ಬಾಲಣ್ಣಾ?”ಎಂದಳು.
“ಇಲ್ಲ” ಎನ್ನುತ್ತಲೇ ಸಮೀಪದಲ್ಲಿದ್ದ ಬೋರ್‌ವೆಲ್ಲಿನ ನಲ್ಲಿಯಲ್ಲಿ ಕೈಕಾಲು ತೊಳೆದುಕೊಂಡು ಬಂದ ಬಾಲು.
ಮನೆಯಿಂದ ತಂದಿದ್ದ ಹಳೆಯ ಮಂದಲಿಗೆಯನ್ನು ಹಾಸಿ ಅದರ ಮೇಲೆ ತಟ್ಟೆಯಿಟ್ಟು ಬೆಂಚಿನ ಮೇಲೆ ನೀರು ತುಂಬಿಟ್ಟು ಊಟ ಬಡಿಸಿದಳು. ಬೆರಕೆ ಮೊಳಕೆಕಾಳುಗಳ ಸಾರು, ಮುದ್ದೆ, ಅನ್ನ ನೆಂಚಿಕೊಳ್ಳಲು ಸುಟ್ಟ ಹುರುಳಿ ಹಪ್ಪಳ, ಮಾವಿನ ಕಾಯಿ ಉಪ್ಪಿನಕಾಯಿ, ಬೆರೆಸಿದ ಮಜ್ಜಿಗೆ. ಸಂತೃಪ್ತಿಯಿಂದ ಊಟ ಮಾಡಿದ ಬಾಲು. “ಭಾರ್ಗವಿ ಏನೇ ಹೇಳು, ಅಮ್ಮನ ಕೈ ರುಚಿಯೇ ರುಚಿ. ಎಷ್ಟು ಅಚ್ಚುಕಟ್ಟಾಗಿ ಅಡುಗೆ ಮಾಡುತ್ತಾರೆ.” ಎಂದು ತಾರೀಫು ಮಾಡಿದ.

“ಹ್ಹೆ ..ಹ್ಹೆ.. ಅಣ್ಣಾ ಇವತ್ತು ಅಕ್ಕ ಅಡುಗೆ ಮಾಡಿದ್ದಾಳೆ ಗೊತ್ತಾ?” ಎಂದಳು ಭಾಗ್ಯ.
“ಓ ! ಹೌದೇ ಅಮ್ಮನ ಕೈಯ ರುಚಿಯಂತೆಯೇ ಇದೆ. ಭೇಷ್. ಕಲಿತವಳಾದರೂ ಮನೆಗೆಲಸದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದೀಯಾ. ನಿನ್ನನ್ನು ಕಟ್ಟಿಕೊಳ್ಳುವವನು ಪುಣ್ಯ ಮಾಡಿರುತ್ತಾನೆ” ಎಂದು ತಂಗಿಯನ್ನು ಬಾಯಿತುಂಬ ಪ್ರಶಂಸೆ ಮಾಡಿದ ಬಾಲು.
“ಅದೇನು ಮಹಾ ಬ್ರಹ್ಮವಿದ್ಯೆಯಾ ಬಾಲಣ್ಣ. ಮಾಡುವ ಕೆಲಸದಲ್ಲಿ ಆಸಕ್ತಿಯಿದ್ದರೆ ಅಯಿತು. ಇದರ ಜೊತೆಗೆ ನನ್ನಾಸೆಯ ಕಲಿಕೆಯೂ ಮುಖ್ಯವಲ್ಲವೇ? ನಮ್ಮಪ್ಪ ಅಮ್ಮನಂತೂ ತಮ್ಮ ಜವಾಬ್ದಾರಿಯ ಕಾರಣ ಮುಂದಿಟ್ಟುಕೊಂಡು ಬೇಗ ಕನ್ಯಾಸೆರೆ ಬಿಡಿಸಿಕೊಳ್ಳಲು ಸಿದ್ಧವಾಗಿದ್ದಾರೆ. ಅವರು ಹೇಳಿದ್ದು ನೀನೇ ಕೇಳಿಸಿಕೊಂಡೆಯಲ್ಲಾ.” ಎಂದು ಒಂದು ನಿರಾಸೆಯ ನಿಟ್ಟುಸಿರುಬಿಟ್ಟಳು ಭಾರ್ಗವಿ.
ಅವಳ ಮಾತನ್ನು ಕೇಳಿ ಬಾಲು “ಅಷ್ಟೊಂದು ನಿರಾಶಳಾಗಬೇಡ. ದೇವರು ಏನಾದರೊಂದು ಮಾರ್ಗ ತೋರಿಸುತ್ತಾನೆ. ನೀನಂದುಕೊಂಡಂಗೆ ನಿನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವ ಇಚ್ಛೆಗೆ ಪ್ರೋತ್ಸಾಹ ಕೊಡುವವನು ಸಿಗಬಹುದು” ಎಂದ.

“ಹೂಂ.. ನೀನೊಬ್ಬ ಕಮ್ಮಿ ಇದ್ದೆ ನನ್ನನ್ನು ಚುಡಾಯಿಸಲು, ಹಣೆಯಲ್ಲಿ ಬರೆದಹಾಗೆ ಆಗುತ್ತೆ ಬಿಡು. ಬೆರಕೆ ಸೊಪ್ಪು, ಪೂಜೆಗೆ ಹೂವು ತರಲು ಹೇಳಿದ್ದಾರೆ ಅಮ್ಮ. ಹಾಗೇ ಒಂದು ಸುತ್ತು ಜಮೀನಿನಲ್ಲಿ ಅಡ್ಡಾಡಿಕೊಳ್ಳುತ್ತಾ ಕಿತ್ತು ತರುತ್ತೇವೆ” ಎಂದು ಎದ್ದಳು. ಭಾರ್ಗವಿಯ ಕೈ ಹಿಡಿದು ಕೂಡಿಸುತ್ತ ಬಾಲಕೃಷ್ಣ ಭಾಗ್ಯಳ ಕಡೆ ತಿರುಗಿ “ಪುಟ್ಟೀ ಅಲ್ಲಿ ಗಂಗಮ್ಮ ಕೆಲಸ ಮಾಡುತ್ತಿದ್ದಾಳೆ ಅವಳ ಬಳಿ ಹೋಗಿ ನಾನು ಹೇಳಿದ ಅಂತ ಹೇಳು ಅವಳು ಬೇಕಾದಷ್ಟು ಬೆರಕೆ ಸೊಪ್ಪು ಕಿತ್ತುಕೊಡುತ್ತಾಳೆ. ಅಲ್ಲಿಯೇ ಹತ್ತಿರದಲ್ಲಿ ಹೂವಿನ ಗಿಡಗಳಿವೆ. ಕಣಗಲೆ, ಸೇವಂತಿಗೆ, ಚಿಟ್ಟಗುಲಾಬಿ, ದಾಸವಾಳ ಎಲ್ಲಾ ಇವೆ. ಆಕೆಗೇ ಬಿಡಿಸಿಕೊಡಲು ಹೇಳು. ತಂದುಕೊಡುತ್ತಾಳೆ. ತೊಗೋ ಬುಟ್ಟಿ, ಹಿಡಿ ಈ ವಸ್ತ್ರ ಹೂವಿಗೆ. ಕೆಳಗಡೆ ಸೊಪ್ಪಿಟ್ಟು ಮೇಲ್ಗಡೆ ವಸ್ತ್ರದಲ್ಲಿ ಕಟ್ಟಿ ಹೂಗಳನ್ನಿಟ್ಟುಕೊಂಡು ತಾ. ಜೋಪಾನ.” ಎಂದು ಹೇಳಿ ಅವಳನ್ನು ಅಲ್ಲಿಂದ ಕಳುಹಿಸಿದ. ಅವಳಿಗೂ ಅದೇ ಬೇಕಾಗಿತ್ತು. ಚಂಗನೆದ್ದು ಬುಟ್ಟಿ ವಸ್ತ್ರ ತೆಗೆದುಕೊಂಡು “ಗಂಗಮ್ಮಾ..ಗಂಗಮ್ಮಾ” ಎಂದು ಕೂಗುತ್ತಾ ಅವಳಿದ್ದ ದಿಕ್ಕಿಗೆ ಹೋದಳು,

ಭಾಗ್ಯಳು ಅತ್ತ ಹೋದಮೇಲೆ ಕೆಲ ಹೊತ್ತಿಗೆ ಮುಂಚೆ ತನ್ನ ಹಾಗೂ ಬಾಲ್ಯದ ಗೆಳೆಯ ಸಿದ್ಧಾರ್ಥನ ನಡುವೆ ನಡೆದ ಮಾತುಕತೆಯನ್ನು ಚಾಚೂ ತಪ್ಪದೆ ಭಾರ್ಗವಿಗೆ ಹೇಳಿದ ಬಾಲು. ಸೋದರನ ಮಾತುಗಳನ್ನು ಕೇಳಿ ಒಂದರೆಕ್ಷಣ ಶಾಕ್ ಆದವಳಂತೆ ತಬ್ಬಿಬ್ಬಾದಳು ಭಾರ್ಗವಿ. ಇದೇನು ಕನಸೋ ನನಸೋ ತಿಳಿಯದಂತಾಯಿತು. ಅಣ್ಣನ ಗೆಳೆಯನೇನು ಆಕೆಗೆ ಅಪರಿಚಿತನಲ್ಲ. ಚಿಕ್ಕ ವಯಸ್ಸಿನಿಂದ ಕಂಡವನೇ. ಅಲ್ಲದೆ ಎರಡೂ ಕುಟುಂಬಗಳೊಡನೆ ಆತ್ಮೀಯ ಒಡನಾಟವಿದೆ. ಆತನ ಅಕ್ಕ ಮತ್ತು ತಂಗಿಯರು ತನಗೆ ಪರಿಚಯವಿದ್ದವರೇ. ಅವರ ಮನೆಯ ಹಿರಿಯರ ಬಗ್ಗೆ ಗೌರವಾದರಗಳಿದ್ದವು. ಆದರೆ ಆತನು ತನ್ನ ಬಗ್ಗೆ ಈ ರೀತಿಯ ಭಾವನೆ ಇಟ್ಟುಕೊಂಡಿದ್ದ ಎಂಬುದು ಊಹಿಸಲೂ ಆಗದ ಸಂಗತಿಯಾಗಿತ್ತು. ಏನೇ ಆಗಲಿ ನನ್ನಾಸೆಗೆ ನೀರೆರೆಯಲು ಒಪ್ಪಿದ್ದಾನೆ. ಮಿಗಿಲಾಗಿ ನನ್ನನ್ನು ಇಷ್ಟಪಡುತ್ತಿದ್ದಾನೆ. ನಾವು ಬೇರೆಯವರನ್ನು ಇಷ್ಟಪಡುವುದಕ್ಕಿಂತ ನಮ್ಮನ್ನು ಇಷ್ಟಪಡುವವರನ್ನು ಕೈ ಹಿಡಿಯುವುದರಲ್ಲಿ ಹಿತವಿದೆ. ಎಲ್ಲವೂ ಸರಿಹೋದರೆ ಸರಿ. ಅದರೆ ನಮ್ಮ ಮನೆಯವರು ಇದಕ್ಕೆ ಏನೆನ್ನುತ್ತಾರೋ? ಅವನಿಗೆ ಹುಡುಗುಬುದ್ಧಿ, ಜವಾಬ್ದಾರಿಯಲ್ಲ, ಸೋಮಾರಿ, ಉಡಾಫೆಯ ಮನುಷ್ಯ ಎಂಬೆಲ್ಲ ಗುಣವಾಚಕಗಳು ಸಿದ್ಧಾರ್ಥನ ಬಗ್ಗೆ ಉದುರುತ್ತಿದ್ದುದನ್ನು ಕೇಳಿದ್ದಳು. ತಾನು ಬಯಸಿದಂತೆ ಭಾಗ್ಯ ತನ್ನ ಕಾಲಬಳಿಗೆ ಬಂದಿದೆ. ಎಣ್ಣೆಬಂದಾಗ ಕಣ್ಣುಮುಚ್ಚಿಕೊಂಡಂತಾಗಬಾರದು. ಏನು ಮಾಡುವುದು. “ಬಾಲಣ್ಣಾ ಸ್ವಲ್ಪ ಯೋಚಿಸಿ ಹೇಳುತ್ತೇನೆ, ಆಗಬಹುದೇ? ನಾನು ಅಭಿಪ್ರಾಯ ಹೇಳುವವರೆಗೂ ಬೇರೆ ಯಾರಿಗೂ ವಿಷಯ ಬಾಯಿಬಿಡಬೇಡ ಆಯಿತೇ?” ಎಂದಳು ಭಾರ್ಗವಿ.

“ಓ..ಅವಸರವೇನಿಲ್ಲ, ನಿಧಾನವಾಗಿ ಆಲೋಚಿಸಿ ನಿರ್ಧಾರ ತಿಳಿಸು. ಇದು ನಿನ್ನ ಭವಿಷ್ಯದ ಬದುಕಿನ ಪ್ರಶ್ನೆ.” ಎಂದ. ಅಷ್ಟೊತ್ತಿಗೆ ಭಾಗ್ಯ ಗಂಗಮ್ಮನೊಡನೆ ಅಲ್ಲಿಗೆ ಆಗಮಿಸಿದಳು. ಭಾರ್ಗವಿ ತಾನು ಅಣ್ಣನಿಗೆಂದು ತಂದಿದ್ದ ಬುತ್ತಿಯಲ್ಲಿ ಮಿಕ್ಕುದನ್ನು ಒಂದು ಮುತ್ತುಗದ ಎಲೆಯಲ್ಲಿ ಬಡಿಸಿ ಗಂಗಮ್ಮನಿಗೆ ಇತ್ತಳು. ಎಲ್ಲ ಮುಗಿದಮೇಲೆ ಖಾಲಿ ಪಾತ್ರೆಗಳನ್ನು ನಲ್ಲಿ ನೀರಿನಲ್ಲಿ ತೊಳೆದುಕೊಂಡು ಬುಟ್ಟಿಯಲ್ಲಿಟ್ಟು ತಂಗಿಯ ಜೊತೆ ಮನೆಯ ಕಡೆ ಹೊರಟಳು. ಮನೆ ತಲುಪಿ ತನ್ನ ರೂಮಿಗೆ ಬಂದ ಭಾರ್ಗವಿಯ ಕಣ್ಣಮುಂದೆ ಸಿದ್ಧಾರ್ಥನ ನಿಲುವು ಬಂದು ನಿಂತಂತಾಯಿತು. ಏನೊ ನೆನಪಿಸಿಕೊಂಡವಳಂತೆ ಇತ್ತೀಚೆಗೆ ಎರಡೂ ಕುಟುಂಬಕ್ಕೆ ಪರಿಚಯವಿದ್ದವರ ಮನೆಯ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಅಣ್ಣ ಅವರಿಬ್ಬರೂ ಒಟ್ಟಿಗಿರುವ ಒಂದು ಫೋಟೋ ತೆಗೆದಿದ್ದ. ಹಾ ! ನೆನಪಿಗೆ ಬಂದು ತನ್ನ ಮೊಬೈಲನ್ನು ತೆಗೆದು ಆ ಭಾವಚಿತ್ರವನ್ನು ಹುಡುಕಿದಳು. ಅವನನ್ನು ಹಿಂದೆಂದೂ ನೋಡೇ ಇಲ್ಲವೇನೋ ಎಂಬಂತೆ ತೀಕ್ಷವಾಗಿ ನೋಡಿದಳು.

ಅವನೇನು ತುಂಬ ಎತ್ತರವಿಲ್ಲದಿದ್ದರೂ ಕುಳ್ಳನಂತೂ ಅಲ್ಲ. ಲಕ್ಷಣವಾದ ಮುಖಚರ್ಯೆ, ಒಳ್ಳೆಯ ಬಣ್ಣ, ತಲೆಯಲ್ಲಿ ದಟ್ಟವಾದ ಕೂದಲನ್ನು ಒಪ್ಪವಾಗಿ ಬಾಚಿಕೊಂಡಿದ್ದ. ಮೂಗಿನ ಕೆಳಗೆ ಚಿಗುರುಮೀಸೆ. ತುಟಿಯಲ್ಲಿ ಕಂಡೂಕಾಣದಂತೆ ಒಂದು ಕಿರುನಗೆ, ಒಟ್ಟಾರೆ ಸೊಗಸುಗಾರ ಪುಟ್ಟಸ್ವಾಮಿಯಂತೆ ಕಂಡುಬಂದ. ಭಾರ್ಗವಿಗೆ ತನ್ನನ್ನು ಒಮ್ಮೆ ನೋಡಿಕೊಳ್ಳಬೇಕೆನಿಸಿತು. ಮೊಬೈಲನ್ನು ಆಫ್‌ಮಾಡಿ ಎದುರಿಗಿದ್ದ ನಿಲುವುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಪರಿಶೀಲಿಸಿದಳು. ತನ್ನ ಬಗ್ಗೆ ಮನೆಯವರು, ಬಂಧುಬಳಗದವರು, ಮಿಗಿಲಾಗಿ ತನ್ನ ಗೆಳತಿಯರು ಹೇಳುತ್ತಿದ್ದ ಮಾತುಗಳು ನೆನಪಾದವು. “ನಮ್ಮ ಭಾರ್ಗವಿಗೇನು ಕಮ್ಮಿ, ಸುರಸುಂದರಿಯರ ಸಾಲಿಗೆ ಸೇರದಿದ್ದರೂ ಚೆಲುವೆಯರ ಸಾಲಿನಲ್ಲಿ ನಿಲ್ಲುವಂಥವಳು. ಓದುವುದರಲ್ಲೂ ಸೈ, ಮನೆಗೆಲಸದಲ್ಲೂ ಸೈ, ಗುಣದಲ್ಲಿ ಅಪರಂಜಿ,” ಎಂಬ ಮಾತುಗಳನ್ನು ಹತ್ತಾರು ಬಾರಿ ಕೇಳಿದ್ದಳು. ಎಲ್ಲವೂ ಸರಿ, ಆದರೆ ಈ ಮಹಾರಾಯ ಸಿದ್ಧಾರ್ಥನ ಮಾತುಗಳನ್ನು ಹೇಗೆ ಪೂರ್ತಿಯಾಗಿ ನಂಬುವುದು. ಅವನನ್ನು ಒಂದು ಬಾರಿ ಭೇಟಿಮಾಡಿ ಮಾತನಾಡಿದರೆ ಒಳ್ಳೆಯದು ಎನ್ನಿಸಿತು. ಅವನೇನು ಅಪರಿಚಿತನಲ್ಲ, ಫೋನ್ ಮಾಡಿ ನೋಡಲೇ? ಬೇಡ, ಬಾಲಣ್ಣನನ್ನು ಕೇಳಿ ನೊಡೋಣ. ಬರೀ ಓದಿಸುವುದಷ್ಟೇ ಅಲ್ಲ, ಮುಂದಕ್ಕೆ ಕೆಲಸಕ್ಕೆ ಸೇರುವುದರಲ್ಲೂ ಸಹಕಾರ ಕೊಡಬೇಕು. ಸಹೃದಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಎಂದೆಲ್ಲ ಲೆಕ್ಕಾಚಾರ ಹಾಕುತ್ತಿದ್ದವಳಿಗೆ ಮನೆಯ ಹೊರಗಡೆ ವಾಹನವೊಂದು ಬಂದುನಿಂತ ಸದ್ದಾಯಿತು. ತಂದೆ ಮತ್ತು ಅಣ್ಣನ ಧ್ವನಿಗಳು ಕೇಳಿಬಂದವು. ಗಡಿಯಾರದತ್ತ ಕಣ್ಣು ಹಾಯಿಸಿದಳು. ಸಂಜೆ ಆರು ಗಂಟೆ. ಅಯ್ಯೋ ಈ ತಾಕಲಾಟದಲ್ಲಿ ಮುಳುಗಿದ್ದವಳಿಗೆ ಹೊತ್ತಾಗಿದ್ದೇ ತಿಳಿಯಲಿಲ್ಲ.

“ಅಮ್ಮಾ ಭಾರ್ಗವಿ ಎಲ್ಲಿ?” ಪ್ರಶ್ನೆ ಅಣ್ಣನಿಂದ ಬಂತು.
“ಅದೇನೋಪ್ಪ ನಿನಗೆ ಊಟಕೊಟ್ಟು ಮನೆಗೆ ಬಂದಮೇಲೆ ತನ್ನ ರೂಮಿಗೆ ಹೋದವಳು ಹೊರಗೇ ಬಂದಿಲ್ಲ. ಓದುತ್ತಿದ್ದಾಳೋ, ಮಲಗಿದ್ದಾಳೋ ಕಾಣೆ” ಎಂದಿದ್ದು ತಾಯಿಯ ಧ್ವನಿ.
“ಈ ಹೊತ್ತಿನಲ್ಲಿ ಎಂದೂ ಮಲಗುವವಳಲ್ಲ ನನ್ನ ಮಗಳು. ಹುಷಾರಾಗಿದ್ದಾಳೆ ತಾನೇ? ಕೇಳಬೇಕಿತ್ತಲ್ಲವಾ?” ಇದು ಅಪ್ಪನ ಕಾಳಜಿಭರಿತ ಆಕ್ಷೇಪದ ಧ್ವನಿ ಇನ್ನು ಇಲ್ಲಿದ್ದರೆ ಉಳಿಗಾಲವಿಲ್ಲ ಎಂದುಕೊAಡು ಸದ್ದಾಗದಂತೆ ರೂಮಿನಿಂದ ಹೊರಕ್ಕೆ ಬಂದಳು ಭಾರ್ಗವಿ.
ಅಪ್ಪ ಮಗ ಇಬ್ಬರೂ ಹಾಲಿನಲ್ಲಿದ್ದ ಸೊಫಾದ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತ ಆ ದಿವಸದ ವ್ಯವಹಾರದ ಬಗ್ಗೆ ಚರ್ಚಿಸುತ್ತಿದ್ದರು. ಕಳ್ಳಹೆಜ್ಜೆ ಇಡುತ್ತಲೇ ಒಳನಡೆದ ಭಾರ್ಗವಿ ಅಮ್ಮ ತಯಾರಿಸಿದ್ದ ಟೀ ಸೋಸಿ ಲೋಟಗಳಿಗೆ ತುಂಬಿಸಿ ಇಬ್ಬರಿಗೂ ತಂದುಕೊಟ್ಟಳು.
“ಯಾಕಮ್ಮಾ ಮೈಗೆ ಹುಷಾರಿಲ್ಲವೇ?” ಎಂದು ಕಕ್ಕುಲಾತಿಯಿಂದ ಮಗಳನ್ನು ವಿಚಾರಿಸಿದರು ಮಲ್ಲಪ್ಪ.
ತಂದೆಯ ಮಾತಿನಲ್ಲಿ ತುಂಬಿದ್ದ ವಾತ್ಸಲ್ಯ ಕಂಡು ಭಾರ್ಗವಿಯ ಮನಸ್ಸು ಆರ್ದ್ರವಾಯಿತು. “ಇಲ್ಲಪ್ಪಾ ಚೆನ್ನಾಗಿದ್ದೀನಿ, ಯಾವುದೋ ಪುಸ್ತಕ ಓದುತ್ತಿದ್ದೆ. ಟೈಂ ಆಗಿದ್ದೇ ಗೊತ್ತಾಗಲಿಲ್ಲ” ಎಂದುತ್ತರಿಸಿದಳು.
“ಆಯಿತು..ಬಾ ಇಲ್ಲಿ ಕುಳಿತುಕೋ”ಎಂದರು ತಂದೆ. ಭಾರ್ಗವಿ ಅಣ್ಣನ ಕಡೆಗೆ ನೋಡಿದಳು. ಬಾಲು ತನಗೇನೂ ತಿಳಿಯದು ಎಂದು ತಲೆಯಲ್ಲಾಡಿಸಿದ. ಮುಂದೇನು ಹೇಳುತ್ತಾರೋ, ಇದ್ಯಾವುದಕ್ಕೆ ಪೀಠಿಕೆಯೋ, ಬೆಳಗ್ಗೆ ನಡೆದ ವಿಚಾರಗಳ ಮುಂದುವರೆದ ಭಾಗವೋ ತಿಳಿಯದೆ ತಂದೆಗೆ ಎದುರಾಗಿದ್ದ ಕುರ್ಚಿಯ ಮೇಲೆ ಗಂಭೀರವಾಗಿ ಕುಳಿತಳು.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45308

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *