ಮೈಸೂರು ಆಕಾಶವಾಣಿಗೆ 90ರ ಸಂಭ್ರಮ…

Share Button

“ಮೈಸೂರು ಆಕಾಶವಾಣಿ” ಯು ತನ್ನ ಮನೆಯಂಗಳದಲ್ಲೇ ಶುಕ್ರವಾರ “90 ನೇ” ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು. ಸವಿ ಸವಿ ನೆನಪಿನ ಚಿತ್ತಾರ ನೂರಾರು ಕೇಳುಗರ ಮನದಲ್ಲಿ ಮೂಡಿತು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಕೇಳುತ್ತಿದ್ದ ಅನೇಕ ಕೇಳುಗರು 90ರ ಸಂಭ್ರಮದಲ್ಲಿ ಆಕಾಶವಾಣಿಗೆ ಹೋದಾಗ ಅಲ್ಲಿನ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೂಡ ವರ್ಣಿಸಲಸದಳ ಅನುಭವ ನೀಡಿದವು.

ಬೆಳಿಗ್ಗೆ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಸೈಕಲ್ ಜಾಥಾ ಗೆ ಒಳ್ಳೆಯ ಸ್ಪಂದನೆ ಸಿಕ್ಕಿತು. ಒಂದು ಕಡೆ ಬಾಲ್ಯದ ದಿನದಲ್ಲಿ ಸೈಕಲ್ ಹೊಡೆಯುತ್ತಿದ್ದ ಆ ಕ್ಷಣಗಳು ನೆನಪಾದವು!. ಜೊತೆಗೆ ಗ್ರಾಮೀಣ ಪ್ರದೇಶದ ಒಡನಾಡಿಯಂತೆ ಇರುವ ಆಕಾಶವಾಣಿಯ ಜೊತೆಯಲ್ಲೇ ಬೆಳೆದ ನಮಗೆಲ್ಲ ರೇಡಿಯೋ ಹಿರಿಯಣ್ಣನಂತೆ ಕಂಡಿತು. 90ರ ಹುಟ್ಟುಹಬ್ಬ ಆಚರಿಸುವ ವಿಷಯವನ್ನು ಅನೇಕ ಬಾರಿ ರೇಡಿಯೋದಲ್ಲಿ ಪ್ರಸಾರ ಮಾಡಿದ್ದರ ಫಲವಾಗಿ ದೂರದ ಚಾಮರಾಜನಗರ, ಮಂಡ್ಯ, ಹಾಸನ, ಮಡಿಕೇರಿ, ಬೆಂಗಳೂರಿನಿಂದಲೂ ಕೂಡ
ಅನೇಕ ಕೇಳುಗರು, ಅಭಿಮಾನಿಗಳು, ಅಧಿಕಾರಿ- ಸಿಬ್ಬಂದಿ ವರ್ಗದವರು ಹತ್ತಿರವಾದರು. ಈ ಮೂಲಕ 90ರ ಸಂಭ್ರಮಕ್ಕೆ ಸಾಕ್ಷಿಯಾದರು!.

ಮನೆಯಲ್ಲಿ ಕುಳಿತು ಕಾರ್ಯಕ್ರಮಗಳ ಸವಿಯನ್ನು ಸವಿಯುತ್ತಿದ್ದ ಕೇಳುಗರಿಗೆಆಕಾಶವಾಣಿ ಆವರಣದಲ್ಲಿ ಧ್ವನಿಯ ಜೊತೆಗೆ ವ್ಯಕ್ತಿಯೂ ಕೂಡ ಕಂಡಾಗ ಅವರ ಜೊತೆಯಲ್ಲಿ ನಿಂತು ಫೋಟೋವನ್ನು ತೆಗೆಸಿಕೊಂಡಿದ್ದೇ ತೆಗೆಸಿಕೊಂಡಿದ್ದು. ಒಬ್ಬರು ಮತ್ತೊಬ್ಬರನ್ನು ಪರಿಚಯ
ಮಾಡಿಕೊಂಡು, ನೀವೇನಾ….. ನಿಮ್ಮ ಹೆಸರು ಆಕಾಶವಾಣಿಯಲ್ಲಿ ಕೇಳಿದ್ದೇನೆ……ಆಕಾಶವಾಣಿಯಲ್ಲಿ ಪ್ರಸಾರವಾಗುವ ಆ ಕಾರ್ಯಕ್ರಮ ನನಗಿಷ್ಟ….. ಆ ಕಾರ್ಯಕ್ರಮ ನಡೆಸಿಕೊಡುವವರು ಇವರೇ….. ನಮ್ಮದು ಈ ಹೆಸರು…. ಈ ಊರು….. ಎಂದಾಗ ಚಿಕ್ಕ ಗುಂಪು ದೊಡ್ಡಗುಂಪಾಯಿತು. ಈ ರೀತಿಯ ಅನುಭವ ಕೇಳುಗ ಸ್ನೇಹಿತರಲ್ಲೂ ಆಯಿತು. ಜೊತೆಗೆ ಆಕಾಶವಾಣಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲೂ ಕೂಡ ಏಕಕಾಲದಲ್ಲಿ ಮೂಡಿತು.

ವೇದಿಕೆಯ ಮುಖ್ಯ ಕಾರ್ಯಕ್ರಮಗಳನ್ನ ಆಕಾಶವಾಣಿ ನೇರವಾಗಿ ಪ್ರಸಾರ ಮಾಡಿದ್ದರ ಫಲವಾಗಿ ಮಧ್ಯಾಹ್ನದ ನಂತರ ಕೇಳುಗರ ಸಂಖ್ಯೆ ಹೆಚ್ಚಾಯಿತು. ರೇಡಿಯೋ ಕೇಳಿ ಕಾರ್ಯಕ್ರಮದ ವಿವರವನ್ನು ತಿಳಿದು ನಾವು ಬಂದಿದ್ದೇವೆ ಸರ್, ನಿಮ್ಮ ಹೆಸರು ಕೂಡ ಬಂದಿತ್ತು, ಮಳಿಗೆಯಲ್ಲಿ ನೀವು ಸಂಗ್ರಹಿಸಿರುವ ಆಕಾಶವಾಣಿಯ ಬಗೆಗಿನ ವಿವಿಧ ಲೇಖನಗಳು ಚಿತ್ರಗಳನ್ನು ಪ್ರದರ್ಶನ ಮಾಡಿರುವ ವಿಷಯವು ತಿಳಿದುದ್ದರಿಂದ ನಿಮ್ಮನ್ನು ನೋಡಲು ನಾನು ಬಂದಿದ್ದೇನೆ ಎಂದು ಅಭಿಮಾನದಿಂದ ಹೇಳಿದಾಗ ಎತ್ತಣದಿಂದೆತ್ತ ಸಂಬಂಧವಯ್ಯ ಎಂದು ನನ್ನ ಮನದಲ್ಲಿ ಮೂಡಿತು. ಇದುವರೆವಿಗೂ ಸಂಗ್ರಹಿಸಿದ ಆಕಾಶವಾಣಿಯ ಚಿತ್ರ- ಲೇಖನಗಳ ಬಗ್ಗೆ ಹೆಮ್ಮೆ ಎಂದೆನಿಸಿತು ನನಗೆ. ಆಕಾಶವಾಣಿಯಲ್ಲಿ ಅಪರಿಚಿತವಾಗಿ ಕೇಳಿಸುತ್ತಿದ್ದ ಊರಿನ ಹೆಸರು, ವ್ಯಕ್ತಿ ಹೆಸರು ಆಕಾಶವಾಣಿ ಆವರಣದಲ್ಲಿ ಚಿರಪರಿಚಿತವಾದವು!.

ಇನ್ನು ಕಟ್ಟಡವೆಲ್ಲ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು. ಜೊತೆಗೆ ಆಕರ್ಷಕ ಪೆಂಡಲ್ಗಳು ಮನ ಸೆಳೆದವು. ಆಕಾಶವಾಣಿಯ ಮುಂದೆಯೇ ವೇದಿಕೆ ಎಲ್ಲರ ಮನಸಳೆಯಿತು. ಸುತ್ತಲೂ ಕುಳಿತುಕೊಂಡು 90ರ ಸಂಭ್ರಮದ ವಿಶೇಷವಾಗಿ ನೇರವಾಗಿ ಕಾರ್ಯಕ್ರಮಗಳನ್ನು ಸವಿಯುವ
ಸೌಭಾಗ್ಯ ನಮ್ಮದಾಯಿತು. ಇದರಿಂದಾಗಿ ಆಕಾಶವಾಣಿ ನವ- ವಧುವಿನಂತೆ ಸಿಂಗಾರಗೊಂಡಿತ್ತು. ಅಲ್ಲಿಗೆ ಬಂದಿದ್ದ ಎಲ್ಲರೂ ಕೂಡ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆತು ಆಕಾಶವಾಣಿಯ ಹುಟ್ಟು ಹಬ್ಬದ ಆಚರಣೆಯಲ್ಲಿ ಒಂದಾದರು. ಇದಕ್ಕೂ ಮುಂಚೆ ಬೆಳಿಗ್ಗೆ ಸೈಕಲ್ ಜಾಥಾಗೆ ಮೈಸೂರಿನ ಅಪರ ಜಿಲ್ಲಾಧಿಕಾರಿ ಡಾ. ಬಿ ಶಿವರಾಜು ಚಾಲನೆ ನೀಡಿದರು. ಸೈಕಲ್ ಜಾಥಾ ವು ಕೆ ಆರ್ ವೃತ್ತ, ದೇವರಾಜ ಅರಸ್ ರಸ್ತೆ ಜೆ ಎಲ್ ಬಿ ರಸ್ತೆ, ಕೆಆರ್‌ಎಸ್ ರಸ್ತೆ ಮೂಲಕ ಆಕಾಶವಾಣಿ ಕಚೇರಿಯ ಆವರಣ ತಲುಪಿತು. ಬೆಳಿಗ್ಗೆ 10 ರ ನಂತರ ಆಕಾಶವಾಣಿಯ ಆವರಣದಲ್ಲಿ ವೇದಿಕೆಯ ಕಾರ್ಯಕ್ರಮಗಳು ಪ್ರಾರಂಭವಾದವು.

ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ ಕೆ ಸವಿತಾ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ವೇದಿಕೆಯ ಬಲಭಾಗದಲ್ಲಿದ್ದ ಮಳಿಗೆಗಳನ್ನು ಕೆ ಎಸ್ ಗುರುರಾಜ್ ಉದ್ಘಾಟಿಸಿದರು. ಬೆಳಿಗ್ಗೆ ಪ್ರಾರಂಭವಾದ ವಿವಿಧ ಕಾಲೇಜು ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನದವರೆಗೂ ಕೂಡ ಸಾಗಿತು. ಮಧ್ಯಾಹ್ನ ಊಟಕ್ಕೆ ಸ್ವಲ್ಪ ಬ್ರೀಕ್ ಸಿಕ್ಕಿತು ಆಕಾಶವಾಣಿಯ ಆಡಳಿತ ವಿಭಾಗದ ಕಟ್ಟಡದ ಮುಂಭಾಗದಲ್ಲಿದ್ದ ಮಳಿಗೆಯಲ್ಲಿ ಕಡಿಮೆ ದರದ ಸವಿ ಸವಿ ಭೋಜನ ಹಸಿದ ಹೊಟ್ಟೆಯನ್ನು ತುಂಬಿಸಿತು. ಅದರ ಪಕ್ಕದಲ್ಲಿ ಇದ್ದ ಆಕಾಶವಾಣಿಯ ಬಗೆಗಿನ ಚಿತ್ರಲೇಖನಗಳನ್ನು ನೋಡಿದರು ಫೋಟೋ ತೆಗೆದುಕೊಂಡರು ಸಂಭ್ರಮ ಪಟ್ಟರು.

ನಂತರ ಮತ್ತೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಜೆಯ ಗೋಧೂಳಿಯ ಸಮಯದಲ್ಲಿ ಮೈಸೂರು ಆಕಾಶವಾಣಿ 9೦ ಸಂಭ್ರಮಕ್ಕಾಗಿ “ನುಡಿನಾದ ಸಂಗಮ”- ಎಂಬ ಆಕರ್ಷಕ ಶೀರ್ಷಿಕೆಯ ಕಾರ್ಯಕ್ರಮವನ್ನು ಆಕಾಶವಾಣಿಯ ಸುದ್ದಿ ವಿಭಾಗದ ಮಹಾನಿರ್ದೇಶಕರಾದ ಡಾ ಪ್ರಜ್ಞಾ ಪಾಲೀವಾಲ್ ಗೌರ್ ಉದ್ಘಾಟಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಎಂ ವಿ ಗೋಪಾಲ ಸ್ವಾಮಿರವರ ಮನೆಯಾದ ವಿಠಲ ವಿಹಾರದಲ್ಲಿ ಆಕಾಶವಾಣಿಯ ಪ್ರಸಾರದ ಜನ್ಮತಾಳಿತು. ಏಕವ್ಯಕ್ತಿಯ ಈ ಶ್ರಮದಿಂದಾಗಿ ಸಾವಿರಾರು, ಲಕ್ಷಾಂತರ ವ್ಯಕ್ತಿಗಳ ಕರ್ಣಾನಂದವಾಯಿತು. ನೋಡಿ ಇಲ್ಲಿ
ಕೇಳುಗರೂ ಆಕಾಶವಾಣಿಯ ಆವರಣದಲ್ಲಿ ವೀಕ್ಷಕರಾದರು.

ನಮ್ಮ ದೇಶದ ಮೊದಲ ಬಾನುಲಿ (ರೇಡಿಯೋ) ಕೇಂದ್ರ ಸ್ಥಾಪನೆ ಯಾಗಿರುವುದು ಮೈಸೂರಿನಲ್ಲಿ!. ಇದೊಂದು ಹೆಮ್ಮೆಯ ವಿಷಯ. 1935 ರಲ್ಲಿ ರೇಡಿಯೋ ಅಲೆಅಲೆಯಾಗಿ ತೇಲಿಬಂತು!. ಆ ದ್ವನಿಯನ್ನು ಸ್ವತಹ ಮೈಸೂರಿನ ಮಹಾರಾಜರು ಕೂಡ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು, ಕೇಳಿಸಿಕೊಂಡರು. ರಾಷ್ಟ್ರಕವಿ ಕುವೆಂಪು ರವರ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಆಕಾಶವಾಣಿ ಎಂಬ ಪದವನ್ನು ಮೊಟ್ಟ ಮೊದಲು ಪ್ರಯೋಗಿಸಿದ್ದು ಕೂಡ ಕರ್ನಾಟಕದ ಹೆಮ್ಮೆ!.ಆಕಾಶವಾಣಿ ಪದವನ್ನು ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ಹಾಗೂ ಲೇಖಕರಾಗಿದ್ದ ನಾ ಕಸ್ತೂರಿ ಯವರು ಸೂಚಿಸಿದರು. 1943 ರಲ್ಲಿ ಕೇಂದ್ರ ಸರ್ಕಾರ ಇದನ್ನು ಮಾನ್ಯ ಮಾಡಿ “ಮೈಸೂರು ಆಕಾಶವಾಣಿ” ಎಂದು ನಾಮಕರಣ ಮಾಡಿತು. ಮುಂದೆ ಆಲ್ ಇಂಡಿಯಾ ರೇಡಿಯೋ 1956 ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರನ್ನು ಘೋಷಿಸಲಾಯಿತು. ಇನ್ನು ಮುಂದಿನದ್ದು ಇತಿಹಾಸ!!. ಅಂದಿನಿಂದ ಇಂದಿನವರೆಗೂ ಸಹ ನನ್ನ ನೆಚ್ಚಿನ “ಮೈಸೂರು ಆಕಾಶವಾಣಿಯು” ದಿನದಿಂದ ದಿನಕ್ಕೆ….. ತಿಂಗಳಿನಿಂದ ತಿಂಗಳಿಗೆ….. ವರ್ಷದಿಂದ ವರ್ಷಕ್ಕೆ…… ಆಬಾಲವೃದ್ಧರಾಗಿ ಒಂದಲ್ಲ ಒಂದು ರೀತಿಯ ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಕೇಳುಗರ ಮನೆ-ಮನ ತಲುಪಿ, ರೋಮಾಂಚನವನ್ನು ನೀಡಿದೆ.

ಮೈಸೂರು ಆಕಾಶವಾಣಿ

ಮೈಸೂರಿನ ಹೆಮ್ಮೆಯ ಬಾನುಲಿ ಕೇಂದ್ರ ಆಕಾಶವಾಣಿಯು ತನ್ನ ಕಾರ್ಯಕ್ರಮಗಳ ಗುಣಮಟ್ಟವನ್ನು ಸಹ ಬದಲಾವಣೆ ಮಾಡಿಕೊಳ್ಳುತ್ತಾ ಬಂತು. ಅದರಲ್ಲೂ ಎಫ್ ಎಂ ಶುರುವಾದಾಗಿನಿಂದ ಕಾರ್ಯಕ್ರಮದ ಗುಣಮಟ್ಟ ಮತ್ತಷ್ಟು ಹೆಚ್ಚಿತು. ಮತ್ತಷ್ಟು ದೂರದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಆಕಾಶವಾಣಿಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಸೊಗಸು!.

ಇಂದಿಗೂ ಕೂಡ ಆಕಾಶವಾಣಿ ತನ್ನ ದಿನಚರಿಯನ್ನ ಬೆಳಿಗ್ಗೆ 5:55 ರಿಂದ ಪ್ರಾರಂಭಿಸಿ ರಾತ್ರಿ 11.10 ರವರಿಗೆ ಒಂದಲ್ಲ ಒಂದು ರೀತಿಯ ಸಂಗ್ರಹ ಯೋಗ್ಯ ಮಾಹಿತಿಯನ್ನು ಪ್ರಸಾರ ಮಾಡುತ್ತದೆ. ಕಾರ್ಯಕ್ರಮವನ್ನು ಕೇಳುತ್ತಾ, ಕೇಳುತ್ತಾ ನಮ್ಮ ಇನ್ನಿತರ ಕೆಲಸಗಳನ್ನು ಮಾಡಲು ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗಿದೆ. “ಬಹುಜನ ಹಿತಾಯ:…. ಬಹುಜನ ಸುಖಾಯ:….”.ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಆಕಾಶವಾಣಿಯು ಅಂದಿಗೂ….ಇಂದಿಗೂ….. ಎಂದೆಂದಿಗೂ…… ಸಹ ನಿತ್ಯ ನೂತನ!. ಜಗದ ಜಗುಲಿ ಈ ಬಾನುಲಿ!.

ಆಕಾಶವಾಣಿಯ ಜೊತೆಗೆ ಸುಮಧುರ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಆಕಾಶವಾಣಿಯ ಕೇಳುಗರ ಬಳಗವಾದ “ಸಮುದ್ಯತಾ ಶ್ರೋತೃ ಸಂಘ” ದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ,ಸದಸ್ಯರೆಲ್ಲರೂ ಕೂಡ ಒಟ್ಟಾಗಿ ಡ್ರೆಸ್ ಕೋಡ್ ಮೂಲಕ ಸುದ್ದಿ ವಿಭಾಗದ ಮಹಾನಿರ್ದೇಶಕರನ್ನ ಭೇಟಿ ಮಾಡಿ ಸಂಘದ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಿದರು. ಇದೊಂದು ಮರೆಯಲಾಗದ ಸುದಿನ ನಮ್ಮ ಬಳಗಕ್ಕೆ ದಕ್ಕಿತು!. ಕಳೆದ 17 ವರ್ಷಗಳಿಂದಲೂ ಕೂಡ ಆಕಾಶವಾಣಿಯ ಜೊತೆಗೆ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮಗಳ ಮೂಲಕ ಸಾಧಕರನ್ನು ಸನ್ಮಾನಿಸಿದೆ. ಸಾಮಾಜಿಕ ಚಟುವಟಿಕೆಗಳನ್ನಹೆಚ್ಚಿಸಿದೆ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದೆ.

ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಎಲ್ಲರನ್ನ ಆಶೀರ್ವದಿಸಿ, ಆಕಾಶವಾಣಿಯ ಬಗ್ಗೆ ತಮ್ಮ ಮನದ ಮಾತುಗಳನ್ನ ಆಡಿದರು. ತಂದೆ ಹಿರಿಯ ವಿದ್ವಾಂಸರಾದ ಡಾ ಟಿ ವಿ ವೆಂಕಟಾಚಲ ಶಾಸ್ತ್ರಿ ಯಾದರೆ….ಮಗ ಆಕಾಶವಾಣಿಯ ಸಹಾಯಕ ನಿರ್ದೇಶಕ ಟಿ ವಿ ವಿದ್ಯಾಶಂಕರ್. ಇಬ್ಬರು ಸಹ ಒಂದೇ ವೇದಿಕೆಯಲ್ಲಿದ್ದುದೂ 90ರ ಸಂಭ್ರಮದ ವಿಶೇಷ!. ಇವರೊಟ್ಟಿಗೆ ಸಹಾಯಕ ಅಭಿಯಂತರ ಪಿ ಆನಂದನ್ ಇದ್ದರು. ಮುಖ್ಯ ಅತಿಥಿಯಾಗಿ ಮೈಸೂರು ಆಕಾಶವಾಣಿ ಉಪ ನಿರ್ದೇಶಕ, ಎಲ್ಲರ ಅಚ್ಚುಮೆಚ್ಚಿನ ಉಮೇಶ್ ಎಸ್ ಎಸ್ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ 90 ರ ಹುಟ್ಟು ಹಬ್ಬದ ಪ್ರಯುಕ್ತ……..ಮೈಸೂರು ಆಕಾಶವಾಣಿಯೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಂಡಿರುವ ಡಾ ಎಂ ವಿ ಗೋಪಾಲಸ್ವಾಮಿ ಕುಟುಂಬಸ್ಥರು, ಮತ್ತು ನಾ ಕಸ್ತೂರಿ ಕುಟುಂಬಸ್ಥರನ್ನು ನೋಡುವ ಸೌಭಾಗ್ಯವೂ ಕೂಡ ನಮ್ಮದಾಯಿತು.

ಇನ್ನು ಆಕಾಶವಾಣಿಯೊಂದಿಗೆ ತಾವು ಬೆಳೆದು ತಮ್ಮದೇ ಆದ ಶೈಲಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನ ನೀಡುತ್ತಾ ಕೇಳುಗರ ಮನಸೂರೆಗೊಂಡಿರುವ ಅನೇಕ ಸಾಧಕರನ್ನು ಕೂಡ ಪರಿಚಯಿಸಿತು. ಅವರಲ್ಲಿ ಡಾ ಆರ್ ವಿಶ್ವೇಶ್ವರನ್ (ಸಂಗೀತ), ಡಾ. ಮಣಿಕರ್ಣಿಕ (ವೈದ್ಯಕೀಯ), ಡಾ ಪಿ ಕೆ ರಾಜಶೇಖರ್ (ಜಾನಪದ), ಪ್ರೊಫೆಸರ್ ಸಿ ನಾಗಣ್ಣ (ಸಾಹಿತ್ಯ), ಡಾ ಶ್ರೀದೇವಿ ಅನ್ನಪೂರ್ಣ ಸಿಂಗ್ (ವಿಜ್ಞಾನ), ಡಾ ಪುಷ್ಪಾವತಿ (ಶಿಕ್ಷಣ), ಡಾ ಗಾಂಧಿದಾಸ್ (ಸಂಶೋಧನೆ), ರೆ ಫಾ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ (ಸಮಾಜ ಸೇವೆ), ಮಹೇಶ್ ಚಂದ್ರಗುರು (ಗ್ರಾಮೀಣ ಅಭಿವೃದ್ಧಿ), ಸೈಯದ್ ನಾಸಿರ್ ಅಹಮದ್ (ಕೃಷಿ), ಪಿ ರಮೇಶ್ (ಸಹಕಾರ), ಎನ್ ನಾಗೇಂದ್ರ (ನಾಟಕ), ಇವರೆಲ್ಲರನ್ನ ಗೌರವಹಿತವಾಗಿ ಸನ್ಮಾನಿಸಿದ್ದನ್ನ ಕಂಡು ಆಕಾಶವಾಣಿಯ ಬಗ್ಗೆ ಧನ್ಯತಾ ಭಾವ ಮೂಡಿತು. ಜೊತೆಗೆ ಅಂತಹ ಗಣ್ಯರನ್ನು ನಾವು ಮತ್ತೆ ನೋಡುವಂತಾಯಿತು.

ಇನ್ನು ಮುಖ್ಯವಾದ ವಿಷಯವೆಂದರೆ ಅಂತಹ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಸಮುದ್ಯತಾ ಶ್ರೋತೃ ಬಳಗವನ್ನು ಕೂಡ ಸನ್ಮಾನಿಸಿದ್ದು ಮತ್ತೊಂದು ವಿಶೇಷವಾಗಿತ್ತು. ನಮ್ಮ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ ಮತ್ತು ಕಾರ್ಯದರ್ಶಿ ಟಿ ಎನ್ ರಾಜೇಶ್ವರಿ ರವರು ಆಕಾಶವಾಣಿಯ ಗೌರವವನ್ನು ಸ್ವೀಕರಿಸಿದರು. ಈ ವೇದಿಕೆ ಕಾರ್ಯಕ್ರಮದ ನಂತರ ಲಕ್ಷ್ಮಿ ನಾಗರಾಜ್ ಅವರ ಶಾಸ್ತ್ರೀಯ ಮತ್ತು ಸುಗಮ ಸಂಗೀತದ ಕಚೇರಿ ಹಾಗೂ ಎಚ್ ಎಲ್ ಶಿವಶಂಕರ ಸ್ವಾಮಿ ಮತ್ತು ತಂಡದವರಿಂದ ಫ್ಯೂಷನ್ ಸಂಗೀತ ಕಾರ್ಯಕ್ರಮ ಮರೆಯಲಾಗದ ಅನುಭವ ನೀಡಿತು.

ಮೇಲೆ ಬೆಳದಿಂಗಳು, ತಂಪಾದ ಹಿತಕರವಾದ ವಾತಾವರಣ, ರಾತ್ರಿ 10 ಗಂಟೆ ಯಾಗುತ್ತಿದ್ದರೂ ಕೂಡ ವೀಕ್ಷಕ ಕೇಳುಗ ಕಾರ್ಯಕ್ರಮದ ಇಂಚಿಂಚನ್ನು ಸವಿದರು. ಇವೆಲ್ಲವನ್ನೂ ನಾವು ನೋಡಿದಾಗ 90ರ ಸಂಭ್ರಮ ನಿಜಕ್ಕೂ ಸಾರ್ಥಕ ಎಂದೆನಿಸಿತು!.

ಪ್ರಾರಂಭದಿಂದ ಇವತ್ತಿನವರೆಗೂ ಒಂದು ರೀತಿಯಲ್ಲಿ ಸಾರ್ಥಕ ತನ್ನ ಹೆಜ್ಜೆ ಗುರುತುಗಳನ್ನು ಉಳಿಸಿಕೊಂಡು ಹೋಗುತ್ತಿರುವ ಮೈಸೂರು ಆಕಾಶವಾಣಿಯು ಇನ್ನೂ ಒಂದು ದಶಕ ಪೂರೈಸಿದರೇ ಸಾಕು ನೂರರ ಹುಟ್ಟುಹಬ್ಬದ ಸಂಭ್ರಮ ಬರುತ್ತದೆ. ಆ ಅಮೃತಗಳಿಗೆ ನಾವೆಲ್ಲರೂ ಜಾತಕ
ಪಕ್ಷಿಯಂತೆ ಕಾಯೋಣ ಮತ್ತೆ ಮೈಸೂರು ಆಕಾಶವಾಣಿಯ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಮತ್ತೊಮ್ಮೆ, ಮಗದೊಮ್ಮೆ ನನ್ನ ನೆಚ್ಚಿನ ಮೈಸೂರು ಆಕಾಶವಾಣಿಗೆ 90 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ಮೈಸೂರು.

11 Responses

  1. ನಯನ ಬಜಕೂಡ್ಲು says:

    Nice

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ತುಂಬಾ ಧನ್ಯವಾದಗಳು ಮೇಡಂ

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ತುಂಬ ತುಂಬ ಧನ್ಯವಾದಗಳು ಮೇಡಂ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಥಾಂಕ್ಸ್ ಮೇಡಂ

  2. ಆಕಾಶವಾಣಿ ತ್ತೊಂಬತ್ತರ ಸಂಭ್ರಮ ಸಂಗ್ರಯೋಗ್ಯ ಲೇಖನ.. ಧನ್ಯವಾದಗಳು ಸಾರ್

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      90 ರ ಸಂಭ್ರಮ ಮರೆಯಲಾಗದ ದಿನ. ನೀವು ಬಂದಿದ್ದೀರಾ ಮೇಡಂ.

  3. ಶಂಕರಿ ಶರ್ಮ says:

    ಆಕಾಶವಾಣಿ ಮೈಸೂರು…ಇದರ 90ರ ಸಂಭ್ರಮದಲ್ಲಿ ಭಾಗವಹಿಸಿ, ಲೇಖನದ ಮೂಲಕ ಆ ದಿನದ ಕಾರ್ಯಕ್ರಮದ ವರದಿಯನ್ನು ಯಥಾವತ್ತಾಗಿ ಓದುಗರೊಡನೆ ಹಂಚಿಕೊಂಡಿರುವಿರಿ. ನಾವೂ ಸುಂದರ ಸಂಜೆಗೆ ಸಾಕ್ಷಿಯಾಗಿದ್ದಂತೆ ಭಾಸವಾಯಿತು…ಧನ್ಯವಾದಗಳು.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆವರೆಗೂ ಕೂಡ ಮಾಹಿತಿದಾಯಕವಾಗಿತ್ತು. ನಿಮ್ಮ ಪ್ರಾಮಾಣಿಕ ಅನಿಸಿಕೆಗೆ ಧನ್ಯವಾದಗಳು ಮೇಡಂ..

  4. ಪದ್ಮಾ ಆನಂದ್ says:

    ಸಂಭ್ರಮಾಚರಣೆಯ ವಿಸ್ತೃತ ವರದಿ ಹಲವಾರು ಮಾಹಿತಿಗಳನ್ನೂ ಒಳಗೊಂಡಂತೆ ಮುದ ನೀಡಿತು.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ನಮಗೆ ಪರಿಚಯ ಇರುವವರು ಅನೇಕರು ಬಂದಿದ್ದರು ಮೇಡಂ ತುಂಬಾ ಧನ್ಯವಾದಗಳು ಮೇಡಂ

  5. Nirmala G V says:

    ಆಕಾಶವಾಣಿಯ ಬಗ್ಗೆ ಅನೇಕ ವಿಷಯಗಳು ತಿಳಿಯಿತು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: