(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 9
ಬೆಳಗಿನ ಕಾರ್ಯಕ್ರಮ ಮತ್ತು ಉಪಹಾರದ ನಂತರ ನಮ್ಮ ಪ್ರಯಾಣ ದಕ್ಷಿಣ ದಿಕ್ಕಿಗೆ.. ಜರ್ಮನಿಯ ಬ್ಲಾಕ್ ಫಾರೆಸ್ಟ್ ಕಡೆಗೆ. ನೈರುತ್ಯ ಜರ್ಮನಿ ಯಿಂದ ಪ್ರಾರಂಭವಾಗುವ ಈ ಪ್ರದೇಶ, ದಟ್ಟ ನಿತ್ಯ ಹರಿದ್ವರ್ಣ ಕಾಡಿಗೆ ಪ್ರಸಿದ್ಧವಾಗಿದೆ. ನೆಲಕ್ಕೆ ಸೂರ್ಯನ ಬಿಸಿಲು ತಾಗದಂತೆ ಇರುವ ದಟ್ಟ ಅರಣ್ಯ ಪ್ರದೇಶ ಆಗಿರುವುದರಿಂದ ಇದನ್ನು ಬ್ಲಾಕ್ ಫಾರೆಸ್ಟ್ ಎಂದು ಕರೆಯುತ್ತಾರೆ. 6000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಈ ಪ್ರದೇಶದ ಪ್ರಾಕೃತಿಕ ಸೌಂದರ್ಯ ಮನಸೂರಗೊಳ್ಳುತ್ತದೆ. ಫೆಲ್ಡ್ ಬರ್ಗ್ 1493 ಮೀಟರ್ ಎತ್ತರದಲ್ಲಿದ್ದು ಅತ್ಯ೦ತ ಎತ್ತರದ ಪ್ರದೇಶವಾಗಿದೆ. ಕ್ರಿ ಶ 1700 ರಲ್ಲಿ ಈ ಪ್ರದೇಶ ಗುರುತಿಸಲ್ಪಟ್ಟಿತು. ಎಲ್ಲೆಲ್ಲೂ ಹಸಿರೇ ಹಸಿರು. ಪೋಸ್ಟರ್ ಚಿತ್ರಗಳಲ್ಲಿರುವಂತೆ ಕಾಣುವ ಹಳ್ಳಿ, ಮನೆ, ಬೆಟ್ಟ, ಗುಡ್ಡಗಳು, ಹಸಿರು ಹುಲ್ಲಿನ ಹಾಸು. ಬ್ಲಾಕ್ ಫಾರೆಸ್ಟ್ ಕೇಕ್ ಮತ್ತು ಕೂಕೂ ಗಡಿಯಾರ ಗಳು ಇಲ್ಲಿಯ ಜನಪ್ರಿಯ ವಸ್ತುಗಳಾಗಿವೆ.
ನಮ್ಮ ಗೈಡ್ ನಿಶಾದ್ ಹೇಳಿದಂತೆ ದಕ್ಷಿಣಕ್ಕೆ ಹೋದಂತೆಲ್ಲ ಹವಾಮಾನ ಮತ್ತು ಹೊರಗಿನ ಭೌಗೋಳಿಕ ಮೇಲ್ಮೈನಲ್ಲಿ ಗಣನೀಯ ಬದಲಾವಣೆ ಇತ್ತು. ಅದರಂತೆ ಹವಾಮಾನದಲ್ಲಿ ತಂಪು ಗಾಳಿ ಹೆಚ್ಚಾಗಿ, ಮಳೆ ವಾತಾವರಣ ಕಂಡುಬಂದಿದ್ದು ತು೦ತುರು ಮಳೆ ಪ್ರಾರಂಭವಾಗಿದ್ದಲ್ಲದೆ, ಹೊರಗಿನ ದೃಶ್ಯ ನಯನ ಮನೋಹರವಾಗಿತ್ತು. ಮಧ್ಯಾಹ್ನದವರೆಗೂ ಪ್ರಯಾಣ ಮಾಡಿ ಮಧ್ಯಾಹ್ನ ಬ್ಲಾಕ್ ಫಾರೆಸ್ಟ್ ಏರಿಯಾದ ಒಂದು ಸರ್ದಾರ್ಜಿಯ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನದ ಊಟ ಮುಗಿಯಿತು. ಅದಾಗಲೇ ನಾವು ಊಹಿಸಿಕೊಂಡಂತೆ ಎಲ್ಲಿ ನೋಡಿದರೂ ಹಸಿರೇ ಹಸಿರು. ನನ್ನ ತ೦ಗಿ, ನಮ್ಮಲ್ಲಿ ಹ್ಯಾಟ್ಸನ್ ಕರ್ಡ್ಸ್ ಜಾಹಿರಾತಿನಲ್ಲಿ ಬರುವ ಚಿತ್ರದ೦ತೆ ಇದೆ ಎ೦ದು ಕುಣಿದಾಡುತ್ತಾ ಫೋಟೋಗಳನ್ನು ತೆಗೆದಿದ್ದೆ ತೆಗೆದದ್ದು. ಎಷ್ಟು ಬೇಕೋ ಅಷ್ಟು ಫೋಟೋಗಳನ್ನು ತೆಗೆದುಕೊಂಡು ಪ್ರಯಾಣ ಮುಂದುವರಿಸಿದೆವು. ಮಧ್ಯದಲ್ಲಿ ಒಂದು ಚಿಕ್ಕ ಹಳ್ಳಿಯ ತರಹ ಇದ್ದ ಜಾಗ. ಅಲ್ಲಿ ಸುಂದರವಾದ ಕೆರೆ ಮತ್ತು ಕೆಲವು ಅಂಗಡಿಗಳು. ಯಾರಾದರೂ ಕೂಕೂ ಕ್ಲಾಕ್ ಖರೀದಿಸುವವರಿದ್ದರೆ ಆ ಅಂಗಡಿಗಳಲ್ಲಿ ಖರೀದಿಸಬಹುದೆಂದು ತಿಳಿಸಿದರು. ಅಲ್ಲಿ ಒಳ್ಳೆಯ ಗುಣಮಟ್ಟದ ಕೂಕೂ ಗಡಿಯಾರಗಳು ಕಡಿಮೆ ಬೆಲೆಯಲ್ಲಿ ಸಿಗುವುದಾಗಿ ತಿಳಿಸಿದರು. ಅಲ್ಲಿ ಆರ್ಡರ್ ಕೊಟ್ಟು ಅಡ್ರೆಸ್ ಕೊಟ್ಟರೆ ಅಂಗಡಿಯವರೇ ಕೊರಿಯರ್ ನಲ್ಲಿ ನಮ್ಮ ಊರಿನ ಅಡ್ರೆಸ್ ಗೆ ಕಳುಹಿಸುವುದಾಗಿ ತಿಳಿಸಿದರು. ಅದರ೦ತೆ ಕೆಲವರು ಖರೀದಿಸಿದರು. ನಾವು ಆ ಅ೦ಗಡಿಗಳಲ್ಲಿ ವಿ೦ಡೋ ಶಾಪಿ೦ಗ್ ಮಾಡಿ ನಿಸರ್ಗ ಸೌ೦ದರ್ಯ ನೋಡಲು ಕೆರೆಯ ಕಡೆಗೆ ಹೋದೆವು.
ಇಲ್ಲಿಂದ ನಾವು ರೈನ್ ಫಾಲ್ಸ್ ಕಡೆಗೆ ಹೊರಟೆವು. ದಾರಿಯಲ್ಲಿ ಜರ್ಮನಿ ಮತ್ತು ಸ್ವಿಟ್ಝರ್ಲ್ಯಾಂಡ್ ಗಡಿಭಾಗದಲ್ಲಿ ಟ್ಯಾಕ್ಸ್ ರಿಫಂಡ್ ವ್ಯವಸ್ಥೆಇದ್ದು ಕೂಕೂ ಗಡಿಯಾರ ಮತ್ತು ಇನ್ನಿತರೆ ಸಾಮಾನು ತೆಗೆದುಕೊಂಡವರು ಅಲ್ಲಿ ಟ್ಯಾಕ್ಸ್ ರಿಫಂಡ್ ಕ್ಲೈಮ್ ಮಾಡಿಕೊಂಡು, ಪ್ರಯಾಣ ಮು೦ದುವರೆಸಿದೆವು. ಇದು ಪಶ್ಚಿಮದ ಅತ್ಯಂತ ದೊಡ್ಡ ಮತ್ತು ರಮಣೀಯ ಜಲಪಾತವಾಗಿದೆ. 150 ಮೀಟರ್ ಆಗಲ, 23 ಮೀಟರ್ ಎತ್ತರದ ಈ ಜಲಪಾತ ಯೂರೋಪ್ ನ ಅತ್ಯಂತ ಬಿರುಸಿನ ರೈನ್ ನದಿಯ ಜಲಪಾತ. ಉತ್ತರದ ಜರ್ಮನಿ ಮತ್ತು ಸ್ವಿಟ್ಜರ್ಲೆ೦ಡ್ ಗಳ ಗಡಿ ಭಾಗದಲ್ಲಿದೆ. ಇದು 14,000 ದಿಂದ 17,000 ವರ್ಷಗಳ ಹಿಂದೆ ಈ ಜಲಪಾತ ಆಗಿರಬಹುದೆ೦ಬ ನ೦ಬಿಕೆ ಅಲ್ಲಿ ಬೋಟಿಂಗ್ ಕೂಡ ಇದ್ದಿದ್ದರಿಂದ ಒಬ್ಬೊಬ್ಬರಿಗೆ 10 ಯೂರೋ ಖರ್ಚು ಮಾಡಿ ಬೋಟಿ೦ಗ್ ಗೆ ಹೋದೆವು. ಬೋಟ್ ನವನು ಜಲಪಾತದ ಬುಡದವರೆಗೂ ಕರೆದುಕೊ೦ಡು ಹೋಗಿ ನಮಗೆ ಒ೦ದು ಅಭೂತ ಪೂರ್ವ ಅನುಭವ ಕೊಟ್ಟನು. ನ೦ತರ ಸುಮಾರು ಒಂದು ಗಂಟೆ ಪ್ರಯಾಣಿಸಿ ಜೂರಿಚ್ ನಗರ ತಲುಪಿದೆವು. ದರ್ಬಾರ್ ಹೋಟೆಲ್ ನಲ್ಲಿ ಊಟ ಮುಗಿಸಿ, ರಾಡಿಸನ್ ಹೋಟೆಲ್ ನಲ್ಲಿ ವಾಸ್ತವ್ಯಕ್ಕೆ ಹೋಗಿ ವಿಶ್ರಾಂತಿ ಪಡೆದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44709
–ಟಿ.ವಿ.ಬಿ.ರಾಜನ್ , ಬೆಂಗಳೂರು


