’ಅಯ್ಯೋ, ಅಮ್ಮಾ’ ಎಂದು ಪ್ರಸವ ವೇದನೆಯಿಂದ ಕಪ್ಪೆಯೊಂದು ನರಳಾಡುತ್ತಿತ್ತು. ಸುಡುಬಿಸಿಲಿನ ಬೇಗೆ. ಆಗ ಅಲ್ಲಿಗೆ ಸರಸರನೆ ಹರಿದು ಬಂದ ಸರ್ಪವೊಂದು ತಾಯಿಯಾಗಲಿದ್ದ ಕಪ್ಪೆಗೆ ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡಲು ತನ್ನ ಹೆಡೆ ಬಿಚ್ಚಿ ನಿಂತಿತ್ತು. ಸನಾತನ ಧರ್ಮದ ಪ್ರಚಾರಕ್ಕಾಗಿ ಲೋಕಸಂಚಾರ ಮಾಡುತ್ತಾ ಶೃಂಗೇರಿಗೆ ಬಂದ ಶಂಕರರಿಗೆ, ತುಂಗೆಯ ದಡದಲ್ಲಿ ಈ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು. ಆಜನ್ಮವೈರಿಗಳಾದ ಹಾವು ಮತ್ತು ಕಪ್ಪೆಯ ಸಾಮರಸ್ಯದ ಈ ಅಪೂರ್ವ ದೃಶ್ಯವನ್ನು ಕಂಡ ಶಂಕರರು, ‘ಇದೊಂದು ಪವಿತ್ರ ಕ್ಷೇತ್ರವೆಂದು ಅರಿತು ಸುಮಾರು ಹನ್ನೆರೆಡು ವರ್ಷಗಳ ಕಾಲ ಅಲ್ಲಿಯೇ ತಮ್ಮ ಸಾಧನೆಯನ್ನು ಮುಂದುವರೆಸಿದರು. ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ವೇದ ಉಪನಿಷತ್ತುಗಳನ್ನು ಪಸರಿಸಲು ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು – ದಕ್ಷಿಣದಲ್ಲಿ ಶೃಂಗೇರಿ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕಾ ಶಾರದಾ ಪೀಠ ಹಾಗೂ ಉತ್ತರದಲ್ಲಿ ಬದರಿಕಾಶ್ರಮ ಜ್ಯೋತಿರ್ಪೀಠ. ಎಂಟನೆಯ ಶತಮಾನದಲ್ಲಿ ಅಂದರೆ ಹದಿಮೂರು ಶತಮಾನಗಳ ಹಿಂದೆ ಶಂಕರರು ಅದ್ವೈತ ಸಿದ್ಧಾಂತವನ್ನು ಪಸರಿಸಲು ಇಡೀ ಭರತವರ್ಷದಲ್ಲಿ ಸಂಚರಿಸುತ್ತಾ ಹಿಂದೂಗಳನ್ನು ಒಗ್ಗೂಡಿಸುವ ಯತ್ನದಲ್ಲಿ ಸಫಲರಾದರು.
ನಾವು ಹೊರನಾಡಿನ ಅನ್ನಪೂರ್ಣೆಯ ದರ್ಶನ ಮಾಡಿ ಶೃಂಗೇರಿಯ ಶಾರದಾಂಬೆಯನ್ನು ನೋಡಲು ಹೊರಟೆವು. ಮೊಮ್ಮಗಳಾದ ಪೂಜಾ ಮೂರು ವರ್ಷದವಳಾಗಿದ್ದಾಗ ಅಕ್ಷರಾಭ್ಯಾಸ ಮಾಡಿಸಲು ಅವಳನ್ನು ಇಲ್ಲಿಗೆ ಕರೆತಂದಿದ್ದೆವು. ಅವಳ ಮನದಲ್ಲಿ ಆನೆಗೆ ಬಾಳೆಹಣ್ಣು ತಿನ್ನಿಸಿದ್ದು ಹಾಗೂ ಮೀನಿಗೆ ಮಂಡಕ್ಕಿ ಹಾಕಿದ್ದ ನೆನಪು ಇನ್ನೂ ಹಚ್ಚ ಹಸಿರಾಗಿತ್ತು. ಉಳಿದದ್ದೆಲ್ಲಾ ಅವಳ ಮನಃಪಟಲದಿಂದ ಮರೆಯಾಗಿದ್ದವು. ಅವಳಿಗೆ ಶೃಂಗೇರಿಯ ಪೂರ್ವ ಇತಿಹಾಸದ ಪರಿಚಯ ಮಾಡಿಸಿದೆವು, ‘ನಮ್ಮ ಮಹಾಕಾವ್ಯ ರಾಮಾಯಣದಲ್ಲಿ ದಶರಥ ಮಹಾರಾಜನು ಪುತ್ರಕಾಮೇಷ್ಠಿ ಯಾಗವನ್ನು ಮಾಡಿದಾಗ ಶ್ರೀರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನವಾದ ಸಂಗತಿ ಎಲ್ಲರಿಗೂ ಗೊತ್ತಿದೆಯಲ್ವಾ?. ಈ ಯಾಗವನ್ನು ಮಹಾರಾಜನ ಕೈಲಿ ಸಾಂಗವಾಗಿ ಮಾಡಿಸಿದವರೇ ಋಷ್ಯಶೃಂಗ ಮಹರ್ಷಿಗಳು. ಋಷ್ಯಶೃಂಗ ಮಹರ್ಷಿಗಳು ದೀರ್ಘಕಾಲ ತಪಸ್ಸು ಮಾಡಿದ ಸ್ಥಳ ಇದು. ಹಾಗಾಗಿ ಈ ಪವಿತ್ರ ಕ್ಷೇತ್ರವು ‘ಋಷ್ಯಶೃಂಗಗಿರಿ’ ಎಂದೇ ಪ್ರಸಿದ್ಧಿಯಾಯಿತು. ಕಾಲ ಕ್ರಮೇಣ ಶೃಂಗೇರಿಯೆಂದು ಕರೆಯಲ್ಪಟ್ಟಿತು. ಋಷ್ಯಶೃಂಗರ ದೇಗುಲವನ್ನು ಶೃಂಗೇರಿಯಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಕಿಗ್ಗಾ ಎಂಬ ಗ್ರಾಮದಲ್ಲಿ ನಿರ್ಮಿಸಲಾಗಿದೆ.’
ಶೃಂಗೇರಿ ಶಾರದಾಂಬೆಯ ದೇಗುಲದ ಭವ್ಯವಾದ ರಾಜಗೋಪುರ ಅತ್ಯಂತ ಆಕರ್ಷಕವಾಗಿದೆ. 1200 ವರ್ಷಗಳ ಇತಿಹಾಸವುಳ್ಳ ಈ ಶ್ರೀಕ್ಷೇತ್ರಕ್ಕೆ ರಾಜಾಶ್ರಯವೂ ದೊರೆಯಿತು. ವಿಜಯನಗರ ಸಾಮ್ರಾಜ್ಯದ ಕತೃವಾದ ವಿದ್ಯಾರಣ್ಯರು ಹದಿನಾಲ್ಕನೇ ಶತಮಾನದಲ್ಲಿ ಶೃಂಗೇರಿ ಶಾರದಾ ಪೀಠದ ಹನ್ನೆರಡನೇ ಜಗದ್ಗುರುಗಳಾಗಿದ್ದರು. ಮೈಸೂರಿನ ದೊರೆಗಳು, ಹೈದರ್ ಆಲಿ, ಟಿಪ್ಪು ಸುಲ್ತಾನ್, ಹೈದರಾಬಾದಿನ ನಿಜಾಮರು, ಪೇಶ್ವೆ ಅರಸು, ಕೆಳದಿ ನಾಯಕರು, ಟ್ರಾವಂಕೂರಿನ ರಾಜರು ಮುಂತಾದವರು ಶಾರದೆಯ ಭಕ್ತರಾಗಿದ್ದು ದೇವಿಗೆ ಅತ್ಯಮೂಲ್ಯ ಕಾಣಿಕೆಗಳನ್ನು ನೀಡಿದರು. ಶಂಕರರು ಚಂದನದ ಕಟ್ಟಿಗೆಯಲ್ಲಿ ಶಾರದೆಯ ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಿದ್ದರೆ, ನಂತರದಲ್ಲಿ ಬಂದ ವಿಜಯನಗರದ ಅರಸರು ಶಾರದೆಯ ಮೂರ್ತಿಯನ್ನು ಅಪ್ಪಟ ಚಿನ್ನದಲ್ಲಿ ಮಾಡಿಸಿದರು. ಶಾರದೆಯು ಚಕ್ರಪೀಠದಲ್ಲಿ ಆಸೀನಳಾಗಿರುವ ಮೂರ್ತಿ ಆಗಿದ್ದು, ಅವಳ ಹಸ್ತದಲ್ಲಿರುವ ಗಿಳಿ ಜಪಮಾಲೆ ಹಿಡಿದ ಭಂಗಿಯಲ್ಲಿದೆ. ಈ ದೇಗುಲದ ಸಂಕೀರ್ಣದಲ್ಲಿ – ಶ್ರೀ ತೋರಣ ಗಣಪತಿ, ಶ್ರೀ ಆದಿ ಶಂಕರಾಚಾರ್ಯರು ಮುಂತಾದ ದೇಗುಲಗಳೂ ಇವೆ.
ಜ್ಞಾನದೀವಿಗೆಯನ್ನು ನಾಡಿನ ಉದ್ದಗಲಕ್ಕೂ ಬೆಳಗಿದ ಶಂಕರರು ವಿದ್ಯಾದೇವತೆಯಾದ ಶಾರದೆಯ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿದರು. ವಿದ್ಯೆಯ ಅಧಿದೇವತೆಯಾದ ಶಾರದೆಯ ದೇಗುಲದ ಪೂರ್ವ ಇತಿಹಾಸವನ್ನು ಕೇಳೋಣ ಬನ್ನಿ, ‘ಆದಿ ಶಂಕರಾಚಾರ್ಯರು ವಿದ್ವಾಂಸರಾದ ಮಂಡನಮಿಶ್ರರ ಜೊತೆ ನಡೆಸಿದ ಸಂವಾದವು ಭಾರತೀಯ ದರ್ಶನಶಾಸ್ತ್ರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಸಂವಾದವು ಅದ್ವೆತ ಸಿದ್ಧಾಂತ ಮತ್ತು ಕರ್ಮ ಮೀಮಾಂಸೆ ಎಂಬ ಎರಡು ವಿಚಾರಧಾರೆಗಳ ಅನುಯಾಯಿಗಳ ನಡುವೆ ನಡೆದ ಸಂವಾದ. ಮಂಡನಮಿಶ್ರರ ಪತ್ನಿ ವಿದುಷಿ ಉಭಯಭಾರತಿ ಇವರಿಬ್ಬರ ಚರ್ಚೆಗೆ ತೀರ್ಪುಗಾರ್ತಿಯಾಗಿದ್ದರು. ಹಲವು ದಿನಗಳ ಕಾಲ ಸಂವಾದ ನಡೆದಿತ್ತು. ಕೊನೆಗೆ ಮಂಡನಮಿಶ್ರರು ಸೋಲುವ ಸ್ಥಿತಿ ಬಂದಾಗ ಅವರ ಅರ್ಧಾಂಗಿಯಾದ ಉಭಯಭಾರತಿಯು, ಬಾಲಸನ್ಯಾಸಿಯಾಗಿದ್ದ ಶಂಕರರಿಗೆ ಕಾಮಶಾಸ್ತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಆಗ ಶಂಕರರು ಸ್ವಲ್ಪ ಸಮಯಾವಕಾಶವನ್ನು ಕೇಳಿ, ಪರಕಾಯ ಪ್ರವೇಶ (ಮೃತರಾಜನ ದೇಹದಲ್ಲಿ) ಮಾಡಿ ಜ್ಞಾನವನ್ನು ಪಡೆದು, ಮರಳಿ ಬಂದು ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ನೀಡುವರು. ಸೋಲನ್ನು ಒಪ್ಪಿಕೊಂಡ ಮಂಡನಮಿಶ್ರರು ‘ಸುರೇಶಾಚಾರ್ಯ’ ಎಂಬ ಹೆಸರಿನಿಂದ ಶಂಕರರ ಶಿಷ್ಯರಾಗುವರು. ಶೃಂಗೇರಿಯ ಶಾರದಾಪೀಠದ ಪ್ರಥಮ ಪೀಠಾಧಿಪತಿಯಾಗುವರು. ಉಭಯಭಾರತಿಯವರ ವಿದ್ವತ್ತಿಗೆ ಮನಸೋತ ಶಂಕರರು, ಸರಸ್ವತಿಯ ಅವತಾರವೆಂದೇ ಪ್ರಸಿದ್ಧರಾಗಿದ್ದ ಉಭಯಭಾರತಿಯವರ ಜ್ಞಾನದ ಸ್ಮರಣೆಗಾಗಿ ಶಾರದೆಯ ದೇಗುಲವನ್ನು ನಿರ್ಮಿಸದರೆಂಬ ಐತಿಹ್ಯವೂ ಇದೆ.
ಇಲ್ಲಿ ಶುಕ್ರವಾರದ ಪೂಜೆಗೆ ವಿಶೇಷ ಪ್ರಾಮುಖ್ಯತೆ. ವೀಣಾಪಾಣಿಯಾಗಿದ್ದ ದೇವಿಗೆ ಭಕ್ತಿಯಿಂದ ವಂದಿಸಿ ಹೊರಬಂದಾಗ ಮಕ್ಕಳ ಚಿಲಿಪಿಲಿ ಸದ್ದು ಕೇಳಿ ಬಂದಿತ್ತು. ದೇಗುಲದ ಎದುರಿಗಿದ್ದ ಮಂಟಪದಲ್ಲಿ ಮಕ್ಕಳ ಅಕ್ಷರಾಭ್ಯಾಸ ನಡೆದಿತ್ತು. ವಿದ್ಯೆಯ ಅಧಿದೇವತೆಯಾದ ಶಾರದೆಯ ಆಶೀರ್ವಾದ ಮಕ್ಕಳಿಗೆ ದೊರೆತರೆ ಅವರ ವಿದ್ಯಾಭ್ಯಾಸ ಸುಗಮವಾಗಿ ಸಾಗುತ್ತೆ ಎಂಬುದು ಹೆತ್ತವರ ನಂಬಿಕೆ. ಹಾಗಾಗಿ ನೂರಾರು ಜನರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲೆಂದೇ ಇಲ್ಲಿಗೆ ಆಗಮಿಸುತ್ತಾರೆ. ಇನ್ನು ಮಠದ ಆನೆಗಳಿಗೆ ಬಾಳೆಹಣ್ಣು ಕೊಡದೆ ಮುಂದೆ ಸಾಗುವುದಾದರೂ ಹೇಗೆ? ವಿಭೂತಿ, ಚಂದನಗಳಿಂದ ಅಲಂಕೃತವಾದ ಆನೆಗಳು ದುಡ್ಡುಕೊಟ್ಟವರಿಗೆ ತಮ್ಮ ಸೊಂಡಿಲಿನಿಂದ ಆಶೀರ್ವಾದ ಮಾಡುತ್ತಾ, ಬಾಳೆಹಣ್ಣನ್ನು ಸವಿಯುತ್ತಿದ್ದವು. ಪೂಜಾ ಸಂಭ್ರಮದಿಂದ ಆನೆಗೆ ಹತ್ತರ ನೋಟನ್ನು ಕೊಟ್ಟು, ಅದು ಸೊಂಡಿಲನ್ನು ಅವಳ ತಲೆಯ ಮೇಲಿಟ್ಟಾಗ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಮುಂದೆ ಸಾಗಿದಳು. ಪಕ್ಕದಲ್ಲಿದ್ದ ಯಾಗಮಂಟಪದಲ್ಲಿ ವಿಶೇಷವಾದ ಯಜ್ಞ ನಡೆಯುತ್ತಿತ್ತು, ಹಲವು ವಿಪ್ರರು ವೇದಗಳನ್ನು ಘಂಟಾಘೋಷವಾಗಿ ಪಠಿಸುತ್ತಿದ್ದರು.
ಶಾರದಾಂಬೆಯ ದೇಗುಲದ ಪಕ್ಕದಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯವಿದೆ. ಹದಿನಾಲ್ಕನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲದ ಶಿಲ್ಪಕಲೆ ಅದ್ಭುತವಾಗಿದ್ದು, ಇದು ದ್ರಾವಿಡ ಹಾಗೂ ಹೊಯ್ಸಳರ ವಾಸ್ತುಶಿಲ್ಪದ ಶೈಲಿಯಲ್ಲಿದೆ.. ಈ ದೇಗುಲದ ಶಿಖರ ವಿಶೇಷವಾಗಿದೆ, ಇಡೀ ದೇಗುಲವೇ ಭಾರತೀಯ ಶಿಲ್ಪಕಲೆಯ ವೈಶಿಷ್ಟ್ಯವನ್ನು ಸಾರುವಂತಿದೆ. ಸುಂದರವಾದ ಕಲಾತ್ಮಕ ಅಲಂಕಾರಿಕ ಕೆತ್ತನೆಗಳಿಂದ ಕೂಡಿದ ಈ ದೇಗುಲ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದ ಮಹತ್ವವನ್ನು ಸಾರುತ್ತಿವೆ. ವಿದ್ಯಾಶಂಕರ ದೇಗುಲವನ್ನು ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರದ ಅರಸರಿಂದ ನಿರ್ಮಿಸಲಾಯಿತು ಎಂಬ ಶಾಸನಗಳು ದೊರೆತಿವೆ. ದೇಗುಲವು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾದ ಎತ್ತರದ ಸ್ತಂಭದ ಮೇಲೆ ನಿಂತಿದೆ. ಪಶ್ಚಿಮಭಾಗದಲ್ಲಿ ಗರ್ಭಗುಡಿಯಿದ್ದು ಒಂದು ಕಡೆ ವಿದ್ಯಾ ಗಣಪತಿ ಹಾಗೂ ಇನ್ನೊಂದು ಬದಿಯಲ್ಲಿ ದುರ್ಗೆಯ ಪ್ರತಿಮೆ ಇದೆ. ಸ್ವತಃ ಶಿವನೇ ಶಂಕರರಿಗೆ ಕರುಣಿಸಿದ ಸ್ಫಟಿಕದ ಚಂದ್ರಮೌಳೇಶ್ವ್ವರ ಲಿಂಗವನ್ನು ಇಲ್ಲಿ ಪೂಜಿಸಲಾಗುತ್ತದೆ. ನಾನು ಪೂಜಾಳಿಗೆ ಆ ದೇಗುಲದೊಳಗಿರುವ ಹನ್ನೆರಡು ಸ್ತಂಭಗಳ ಮೇಲೆ ಹನ್ನೆರಡು ರಾಶಿಚಕ್ರಗಳ ಚಿಹ್ನೆಗಳನ್ನು ಕೆತ್ತಿರುವುದನ್ನು ತೋರಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ಸ್ತಂಭಗಳ ಮೇಲೆ ರವಿಯ ಕಿರಣಗಳು ಆಯಾ ತಿಂಗಳಿನಲ್ಲಿ ಕರಾರುವಾಕ್ಕಾಗಿ ಬೀಳುವುವು. ಇದು ಖಗೋಳಶಾಸ್ತ್ರಜ್ಞರಿಗೆ ಒಂದು ಸವಾಲಿನಂತಿದೆ. ಈ ದೇಗುಲದಲ್ಲಿ ಮತ್ತೊಂದು ವೈಶಿಷ್ಟ್ಯ ನಮ್ಮ ಗಮನ ಸೆಳೆಯುತ್ತದೆ-ಕಲ್ಲಿನ ಉಂಗುರಗಳ ಸರಪಳಿಗಳು ಹಾಗೂ ಘರ್ಜಿಸುವ ಸಿಂಹದ ಬಾಯಿಯೊಳಗೆ ಉರುಳಾಡುವ ಕಲ್ಲಿನ ಚೆಂಡುಗಳು, ಅದನ್ನು ನೀವೂ ತಿರುಗಿಸಬಹುದು. ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಸ್ಮರಿಸುತ್ತಾ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ತುಂಗಾ ನದಿಯತ್ತ ಸಾಗಿದೆವು. ತುಂಗಾನದಿಯ ದಡದಲ್ಲಿರುವ ‘ಕಪ್ಪೆ ಶಂಕರ’ ದೇಗುಲವನ್ನು ಅಚ್ಚರಿಯಿಂದ ಗಮನಿಸಿದೆವು. ಕೈಲಿದ್ದ ಮಂಡಕ್ಕಿ ಹಿಡಿದು ನದಿಯಲ್ಲಿ ನಮಗಾಗಿ ಕಾಯುತ್ತಿದ್ದ ಮೀನುಗಳ ಕಡೆಗೆ ನಮ್ಮ ಹೆಜ್ಜೆ. ದೊಡ್ಡ ಗಾತ್ರದ ಮೀನುಗಳು, ಯಾತ್ರಿಗಳು ಎರಚುವ ಮಂಡಕ್ಕಿಗಾಗಿ ಕಾಯುತ್ತಾ ದಡದ ಹತ್ತಿರವೇ ಓಡಾಡುತ್ತಿದ್ದವು. ಮೀನುಗಳನ್ನು ಮಂಡಕ್ಕಿ ದಾಸರನ್ನಾಗಿ ಮಾಡಿದ ನಮ್ಮಂತಹ ಹುಚ್ಚುಕೋಡಿಗಳನ್ನು ನೆನೆದು ನಕ್ಕೆವು. ಮಂಡಕ್ಕಿ ಎರಚುದರಲ್ಲಿ ಮೈಮರೆತ ಪೂಜಾಳನ್ನು ಎಬ್ಬಿಸಿ ತುಂಗಾ ಸೇತುವೆಯ ಆಚೆಯಿರುವ ನರಸಿಂಹವನಕ್ಕೆ ಹೋಗೋಣ ಎಂದೆ.
ತುಂಗಾಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಲಾವಣ್ಯವತಿಯಾದ ತುಂಗೆಯ ಚೆಲುವನ್ನು ಸವಿಯುತ್ತಾ ಸಾಗಿದೆವು. ದ್ದಕ್ಕಿದ್ದಂತೆ ನೀರಿನ ತುಂತುರು ಹನಿಗಳ ಸ್ಪರ್ಶ, ಅರೇ ಇದೇನಿದು? ನರಸಿಂಹವನದಲ್ಲಿದ್ದ ಕಂಗು, ತೆಂಗು, ಬಾಳೆಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹನಿಸುತ್ತಿದ್ದರು, ಆ ನೀರಿನ ಚಿಲುಮೆ ನಮ್ಮ ಮೈಮನಸ್ಸನ್ನು ಮುದಗೊಳಿಸಿತ್ತು. ಇದು ಪ್ರಶಾಂತವಾದ ಪರಿಸರದಲ್ಲಿರುವ ಶೃಂಗೇರಿ ಜಗದ್ಗುರುಗಳ ನಿವಾಸ. ಆದಿ ಶಂಕರರ ಕಾಲದಿಂದಲೂ ಜ್ಞಾನ ಸಾಧನೆಯ ಕೇಂದ್ರವಾಗಿದೆ. ಈಗಲೂ ವೇದ ಉಪನಿಷತ್ತುಗಳನ್ನು ಬೋಧಿಸುವ ಶಾಲೆ ಇಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆ ‘ನರಸಿಂಹ ದೇಗುಲ’ ಹಾಗಾಗಿ ನರಸಿಂಹವನ ಎಂಬ ಹೆಸರು. ಹಿಂದಿನ ಜಗದ್ಗುರುಗಳ ಸಮಾಧಿ ಮಂದಿರಗಳೂ ಇದ್ದು, ಅಲ್ಲಲ್ಲಿ ಕೆಲವು ಸಂತರು ಪದ್ಮಾಸನ ಹಾಕಿ ಧ್ಯಾನದಲ್ಲಿ ನಿರತರಾಗಿದ್ದರು. ನಾನೂ ನಾಲ್ಕುಘಳಿಗೆ ಜಪ ಮಾಡುತ್ತಾ ಕುಳಿತೆ.
ಅಲ್ಲೊಂದು ಜಿಂಕೆವನವೂ ಇದ್ದು, ಜಿಂಕೆಗಳು ಆ ಹಸಿರಿನ ಮಧ್ಯೆ ಜಿಗಿದಾಡುತ್ತಿದ್ದವು. ಹೊತ್ತು ನೆತ್ತಿಯ ಮೇಲೇರಿತ್ತು, ಹಸಿವಾಗತೊಡಗಿತ್ತು. ಪ್ರಸಾದ ನಿಲಯದ ಕಡೆ ಹೊರಟೆವು. ಅಲ್ಲಿನ ಶಿಸ್ತು, ಸ್ವಚ್ಛತೆ ಕಂಡು ಖುಷಿಯಾಯಿತು. ನಾವು ಪ್ರಸಾದ ಸ್ವೀಕರಿಸಿ ದೇಗುಲದ ಮುಖ್ಯದ್ವಾರದ ಬಳಿ ಬಂದಾಗ ‘ಶಂಕರಗಿರಿಯನ್ನು ನೋಡಲು ಮರೆಯದಿರಿ’ ಎಂಬ ಪ್ರಕಟಣೆ ನೋಡಿದೆವು. ದೇಗುಲದಿಂದ ಕೇವಲ ಎರಡು ಕಿ.ಮೀ ದೂರದಲ್ಲಿದ್ದ ‘ಶಂಕರಗಿರಿಯನ್ನು’ ಕಣ್ತುಂಬಿಕೊಳ್ಳಲು ಹೊರಟೆವು. ಶಂಕರಗಿರಿಯನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ, ಸುಸಜ್ಜಿತವಾದ ವಾಹನ ನಿಲುಗಡೆ, ಗಿರಿಯನ್ನೇರಿ ಶಂಕರರ ದರ್ಶನ ಪಡೆಯಲು ಎಸ್ಕಲೇರ‍್ಸ್ ಹಾಗೂ ಲಿಫ್ಟ್ ವ್ಯವಸ್ಥೆ, ಸಂಜೆ ಹೊತ್ತು ಸಂಗೀತ ಕಾರಂಜಿಯೂ ಇದ್ದು ಯಾತ್ರಿಗಳ ಮನಸ್ಸಿಗೆ ಮುದ ನೀಡುವುದು. ನಮಗೆ ಮಾರ್ಗದರ್ಶನ ಮಾಡಲು ಹೆಜ್ಜೆ ಹೆಜ್ಜೆಗೂ ಸಹಾಯಕ್ಕೆ ಬರುವ ಸಿಬ್ಬಂದಿ. ಎಲ್ಲೆಡೆಯೂ ಸ್ವಚ್ಛವಾದ ಪರಿಸರ, ಸುತ್ತಲೂ ಹಸಿರುಟ್ಟ ಬೆಟ್ಟಗಳ ಸಾಲು ಯಾತ್ರಿಗಳ ಮನದಲ್ಲಿ ಉಲ್ಲಾಸ ಮೂಡಿಸುವುದು. ಶಂಕರಗಿರಿಯ ಮೇಲೇರಿದಾಗ ನಮ್ಮ ಸನಾತನ ಧರ್ಮದ ಮೇರುಪರ್ವತದಂತಿರುವ ಶಂಕರರ ವಿಗ್ರಹ ನಕ್ಷತ್ರದಂತೆ ಕಂಗೊಳಿಸುತ್ತಿದೆ. ಈ ಆವರಣದ ನಾಲ್ಕು ದಿಕ್ಕುಗಳಲ್ಲಿ ಶಂಕರರ ಮೊದಲ ಶಿಷ್ಯರಾದ ನಾಲ್ಕು ಆಚಾರ್ಯರ ಮೂರ್ತಿಗಳೂ ಪ್ರತಿಷ್ಠಾಪಿಸಲ್ಪಟ್ಟಿವೆ. ದಕ್ಷಿಣದಲ್ಲಿರುವ ಶೃಂಗೇರಿಯ ಮೊದಲ ಆಚಾರ್ಯರು – ಶ್ರೀ ಸುರೇಶ್ವರಾಚಾರ್ಯರು, ಪಶ್ಚಿಮದಲ್ಲಿ ದ್ವಾರಕಾ ಪೀಠದ ಮೊದಲ ಗುರು ಶ್ರೀ ಪದ್ಮಪಾದಾಚಾರ್ಯರು, ಪೂರ್ವದಲ್ಲಿ ಶ್ರೀ ಹಸ್ತಮಲಕಾಚಾರ್ಯರು ಪುರಿ ಸಂಸ್ಥಾನದ ಆಚಾರ್ಯರು ಮತ್ತು ಉತ್ತರದಲ್ಲಿ ಬದರಿಕಾಶ್ರಮದ ಮೊದಲ ಆಚಾರ್ಯರು ಶ್ರೀ ತೋತಕಾಚಾರ್ಯರರು. ಈ ವಿಗ್ರಹಗಳ ಅಡಿಯಲ್ಲಿ ಈ ಎಲ್ಲಾ ಆಚಾರ್ಯರ ವಿವರಗಳನ್ನು ಶಿಲೆಯಲ್ಲಿ ಕೆತ್ತಲಾಗಿದೆ.
‘ನಮಃ ಶಂಕರಾಯ, ನಮಃ ಶಂಕರಾಯ’ ಎಂಬ ಭಜನೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು ವಿಜಯಪುರದ ಮಹಿಳಾ ಸಂಘದ ಸದಸ್ಯರು. ಎಲ್ಲರೂ ಅರಿಶಿಣ ಬಣ್ಣದ ಸೀರೆಯುಟ್ಟು ತಾಳ ಹಾಕುತ್ತಾ ಭಜನೆ ಹಾಡುವುದರಲ್ಲಿ ತಲ್ಲೀನರಾಗಿದ್ದರು. ಶೃಂಗೇರಿಯ ಶಂಕರಗಿರಿಯಲ್ಲಿರುವ ಆದಿ ಶಂಕರರ ವಿಗ್ರಹದ ಮುಂದೆ ಕಣ್ಣು ಮುಚ್ಚಿ ತನ್ಮಯರಾಗಿ ಭಜನೆ ಮಾಡುತ್ತಿದ್ದವರನ್ನು ನೋಡುತ್ತಾ ನಿಂತೆವು. ಈಗ ನಾವು ನಿಂತಿರುವುದು ಎಲ್ಲಿ ಗೊತ್ತೆ, ಆದಿಗುರು ಶಂಕರರು ತಪಗೈದ ಪುಣ್ಯ ಕ್ಷೇತ್ರದಲ್ಲಿ. ಶೃಂಗೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಂಕರಗಿರಿ ಒಂದು ಅದ್ಭುತವಾದ ಸ್ಥಳ. ಪಶ್ಚಿಮ ಘಟ್ಟದ ಮಡಿಲಲ್ಲಿರುವ ಈ ಗಿರಿಯ ಮೇಲೆ 32 ಅಡಿ ಎತ್ತರವಿರುವ ಏಕಶಿಲಾ ಮೂರ್ತಿಯಿದು. ಶ್ರೀ ಶ್ರೀ ಭಾರತೀಪುರ ಮಹಾಸ್ವಾಮಿಗಳು ಸನ್ಯಾಸ ಸ್ವೀಕರಿಸಿ ಐವತ್ತು ವರ್ಷಗಳು ಸಂದ ಅಂದರೆ ಸುವರ್ಣ ಸಂಭ್ರಮದ ಸ್ಮರಣಾರ್ಥ ಆದಿಗುರು ಶಂಕರರಿಗೆ ಸಲ್ಲಿಸಿರುವ ಭಕ್ತಿಪೂರ್ವಕ ಸ್ಮಾರಕ ಇದು.
ಇಲ್ಲಿ ಮಕ್ಕಳು ಖುಷಿಯಿಂದ ಚಿಟ್ಟೆಗಳ ಹಾಗೆ ಹಾರಾಡುತ್ತಿದ್ದುದ ಕಂಡೆ, ಯೌವ್ವನದ ಹೊಸ್ತಿಲಲ್ಲಿದ್ದವರು ಮೊಬ್ಯಲಿನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ತರುಣರು ಪ್ರಕೃತಿ ಸೌಂದರ್ಯವನ್ನು ಸವಿಯುದರಲ್ಲಿ ಮಗ್ನರಾಗಿದ್ದರು. ಹಿರಿಯರು ಶಂಕರರಂತಹ ಅದ್ಭುತ ಜ್ಞಾನಯೋಗಿಗಳ ಕೊಡುಗೆಯನ್ನು ಸ್ಮರಿಸುತ್ತಿದ್ದರು.
ನಮ್ಮ ಕಾರಿನ ಚಾಲಕ ‘ಮಲ್ಲಯ್ಯನ ಬೆಟ್ಟಕ್ಕೆ ಹೋಗೋಣ’ ಎಂದಾಗ ಅಚ್ಚರಿಯಾಗಿತ್ತು. ನಾವು ಹಲವಾರು ಬಾರಿ ಶಾರದೆಯ ದರ್ಶನಕ್ಕಾಗಿ ಶೃಂಗೇರಿಗೆ ಬಂದಿದ್ದರೂ ಊರಿನ ಮಧ್ಯಭಾಗದಲ್ಲಿರುವ ಮಲ್ಲಯ್ಯನ ಬೆಟ್ಟಕ್ಕೆ ಹೋಗಿರಲಿಲ್ಲ. ಈ ದೇಗುಲವನ್ನು ತಲುಪಲು ಸುಮಾರು 120 ಮೆಟ್ಟಿಲುಗಳನ್ನು ಏರಬೇಕಾಗಬಹುದು. ಈ ಶಿವಲಿಂಗವನ್ನು ಕಶ್ಯಪ ಋಷಿಯ ಮಗ ವಿಭಾಂಡಕನು ಪೂಜಿಸಿದ್ದನೆಂಬ ಪ್ರತೀತಿಯಿದೆ. ಮಲಹಾನಿಕರೇಶ್ವರ ದೇಗುಲವು ಶಿವನಿಗೆ ಸಮರ್ಪಿತವಾದ ದೇಗುಲ. ಮಲಹಾನಿಕರೇಶ್ವರ ಎಂದರೆ ಆತ್ಮದ ಕಲ್ಮಶಗಳನ್ನು ನಾಶಮಾಡುವವನು ಎಂದರ್ಥ. ದೇಹದ ಹಾಗೂ ಮನಸ್ಸಿನ ಕಲ್ಮಶಗಳ ಬಗ್ಗೆ ಕೇಳಿದ್ದೆ ಆದರೆ ಆತ್ಮದ ಕಲ್ಮಶಗಳ ಬಗ್ಗೆ ಮೊದಲ ಬಾರಿ ಕೇಳಿದೆ. ಇರಲಿ, ದೇವರನ್ನು ಸ್ಮರಿಸಿದರೆ ಎಲ್ಲಾ ಪಾಪಗಳೂ ಪರಿಹಾರವಾಗುವದರಲ್ಲಿ ಸಂದೇಹವೇಕೆ?
ಮಲ್ಲಯ್ಯನಬೆಟ್ಟದಿಂದ ನಾವು ಕೇವಲ ಹತ್ತು ಕಿ,ಮೀ ದೂರದಲ್ಲಿದ್ದ ಕಿಗ್ಗಾಕ್ಕೆ ಹೊರಟೆವು. ಋಷ್ಯಶೃಂಗರ ದರ್ಶನ ಮಾಡಿ ಸಮೀಪದಲ್ಲಿರುವ (5 ಕಿ.ಮೀ.) ಸಿರಿಮನೆ ಜಲಪಾತದ ಸೊಬಗನ್ನು ಸವಿಯಲು ಹೊರಟೆವು. ವರ್ಷವಿಡೀ ನಲವತ್ತು ಅಡಿ ಎತ್ತರದಿಂದ ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿ ಇದು. ಮಳೆಗಾಲದಲ್ಲಿ ಆರ್ಭಟಿಸುವ ಈ ಜಲಪಾತ ದೂರದಲ್ಲಿ ನಿಂತು ನೋಡುವ ಹಿರಿಯರ ಮೇಲೆಯೂ ನೀರು ಎರಚಿ ಸಂಭ್ರಮಿಸುವಳು. ಬೇಸಿಗೆಯಲ್ಲಿ ತುಸು ಕೃಶಳಾಗಿ ಕಾಣುವ ಸಿರಿಮನೆ ಜಲಪಾತ, ತನ್ನ ಮಡಿಲಲ್ಲಿ ಜಲಕ್ರೀಡೆಯಾಡಲು ಎಲ್ಲರನ್ನೂ ಕೈಬೀಸಿ ಕರೆಯುವಳು. ಸ್ವಲ್ಪ ಜಾಗ್ರತೆಯಿಂದ ಸಾಗಿ ಜಲಪಾತದಡಿ ಬೆನ್ನು ಕೊಟ್ಟು ಕುಳಿತರೆ ಸ್ವರ್ಗಕ್ಕೆ ಮೂರೇ ಗೇಣು. ಜಲಪಾತದ ಮಂಜುಳಗಾನ ಆಲಿಸುತ್ತಾ, ಸುತ್ತಲೂ ಹರಡಿರುವ ಹಚ್ಚ ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಕುಳಿತಾಗ, ‘ಅಬ್ಬಾ ಎಂತಹ ಚೆಲುವಿನ ಬೀಡು ನಮ್ಮ ಮಲೆನಾಡು’ ಎಂಬ ಭಾವ.
ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

