ಕಾದಂಬರಿ: ನೆರಳು…ಕಿರಣ 37
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಎಲ್ಲವೂ ಸುಸೂತ್ರವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಯಾರೂ ಊಹಿಸಲಾಗದ ಘಟನೆಯೊಂದು ನಡೆದುಬಿಟ್ಟಿತು. ಸೀತತ್ತೆ, ಮಾವ ಇಬ್ಬರಿಗೂ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗಿದೆ ಶ್ರೀನಿವಾಸನನ್ನು ಕೂಡಲೇ ಇಲ್ಲಿಗೆ ಕಳುಹಿಸಿಕೊಡಿ. ಅವರ ಜೊತೆಯಲ್ಲಿ ಒಬ್ಬರ್‍ಯಾರಾದರೂ ಬರಲಿ. ಎಂಬ ತುರ್ತು ಸಂದೇಶ ಕೇಶವಯ್ಯನವರ ಮನೆಗೆ ಬಂದಿತು. ಅದನ್ನು ಕೇಳಿದ ಕೇಶವಯ್ಯನವರು ಅವರ ಮನೆಗೆ ಸುದ್ಧಿ ತಿಳಿಸಲು ನನಗೇ ಹೇಳಿದ್ದಾರೆಂದರೆ ಆಗಬಾರದ್ದು ಏನೋ ಆಗಿರಬಹುದು ಎನ್ನಿಸಿತು. ರಾಮಣ್ಣನವರ ಮಗ ಮಧುವನ್ನು ಕರೆದುಕೊಂಡು ಶ್ರೀನಿವಾಸನ ಬಳಿಗೆ ಬಂದರು. ಫೋನಿನಲ್ಲಿ ತಾವು ಕೇಳಿದ ಸುದ್ಧಿಯನ್ನು ಅವನಿಗೆ ಹೇಳಿ ಧೈರ್ಯತುಂಬಿ ನಂಜುಂಡನನ್ನು ಕರೆದುಕೊಂಡು ತಕ್ಷಣ ಹೊರಡಲು ಏರ್ಪಾಡು ಮಾಡಿ ಕಳುಹಿಸಿಕೊಟ್ಟರು.
ಹೊರಟ ಇಬ್ಬರೂ ಸುಖವಾಗಿ ತಲುಪಿದೆವು, ಇಲ್ಲಿನ ಸುದ್ಧಿ ಸಮಾಚಾ ರಕ್ಕೆ ತಿಳಿಸುತ್ತೇವೆ, ಗಾಭರಿಯಾಗಬೇಡಿ ಎಂದಷ್ಟೇ ಹೇಳಿದರು. ಇತ್ತಲಿಂದ ಫೋನ್ ಮಾಡಿ ವಿಚಾರಿಸಿಕೊಳ್ಳುವ ಸೌಕರ್ಯವಿಲ್ಲದ್ದರಿಂದ ಬೆಳಗಿನಿಂದ ಸಂಜೆಯವರೆಗೆ ಫೋನಿನ ಕರೆಗಾಗಿ ಜಾತಕ ಪಕ್ಷಿಯಂತೆ ಮನೆಯಲ್ಲಿದ್ದವರೆಲ್ಲ ಕಾಯುವುದಷ್ಟಕ್ಕೇ ಸೀಮಿತವಾಯಿತು. ಕೇಶವಯ್ಯನವರು, ಮತ್ತು ಮಧು ತಮ್ಮ ಕೆಲಸಕಾರ್ಯಗಳ ನಡುವೆ ಹೇಗಾದರೂ ಬಿಡುವು ಮಾಡಿಕೊಂಡು ಒಮ್ಮೆ ಜೋಯಿಸರ ಮನೆಗೆ ಬಂದು ಸಾಂತ್ವನ ಹೇಳಿ ಹೋಗುತ್ತಿದ್ದರು. ಅಂತೂ ಇಂತೂ ಒಂದೆರಡು ದಿನಗಳ ನಂತರ ಹಿಂದಿರುಗಿ ಬರುತ್ತಿದ್ದೇವೆ ಎಂಬ ಸುದ್ಧಿ ಬಂತು. ಭಾಗ್ಯಳು ಹಿರಿಯಜ್ಜ, ಅತ್ತೆ ಮಾವನವರ ಬಗ್ಗೆ ವಿಚಾರಿಸಿದ್ದಕ್ಕೆ ಹಾ ..ಪರವಾಗಿಲ್ಲ ಎಂದಷ್ಟೇ ಉತ್ತರ ಬಂದಿತು.
ಇತ್ತ ನಂಜುಂಡನೊಡಗೂಡಿ ಕಾಶಿಗೆ ತಲುಪಿದ ಶ್ರೀನಿವಾಸ ಕಂಡದ್ದು ಸಂಸ್ಕಾರಕ್ಕೆ ಸಿದ್ಧವಾಗಿ ಅವನಿಗೋಸ್ಕರ ಕಾಯುತ್ತಿದ್ದ ಜೋಯಿಸರು ಮತ್ತು ಸೀತಮ್ಮನವರ ಕಳೇಬರಗಳು. ಇದೆಲ್ಲ ಹೇಗಾಯಿತೆಂದು ವಿಚಾರಿಸಲಾಗಿ ಹೊರಡುವ ಹಿಂದಿನ ದಿನ ಗಂಗಾನದಿಯ ಸ್ನಾನಘಟ್ಟದಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ನೀರಿಗೆ ಬಿದ್ದ ಸೀತಮ್ಮನವರನ್ನು ರಕ್ಷಿಸಲು ಧಾವಿಸಿದ ಜೋಯಿಸರೂ ಆಯತಪ್ಪಿ ನೀರೊಳಕ್ಕೆ ಬಿದ್ದರು. ತಕ್ಷಣವೇ ಅಲ್ಲಿದ್ದವರು ನೆರವಿಗೆ ಒದಗಿದರಾದರೂ ಇಬ್ಬರನ್ನೂ ಪ್ರಾಣಾಪಾಯದಿಂದ ಕಾಪಾಡಲಾಗಲಿಲ್ಲ. ಇದನ್ನು ಕಣ್ಣಾರೆ ಕಂಡ ಹಿರಿಯಜ್ಜನವರು ದಿಗ್ಭ್ರಾಂತರಾಗಿ ಕೆಳಗುರುಳಿದರು. ಈ ಘಟನೆಯ ಆಘಾತದಿಂದ ಅವರೂ ದೇಹಾಂತ್ಯರಾದರು. ಅವರಿವರಿಂದ ಸಹಾಯ ಪಡೆದು ಇಬ್ಬರ ದೇಹಗಳನ್ನು ಆತನಿಗಾಗಿ ಕಾಯ್ದಿರಿಸಿದ್ದರು. ಹೀಗೆ ಸಂಕ್ಷಿಪ್ತವಾಗಿ ಎಲ್ಲವನ್ನೂ ವಿವರಿಸಿದರು. ಅದನ್ನು ಆಲಿಸಿದ ಶ್ರೀನಿವಾಸನ ಮನಸ್ಸು ಮೂಕವಾಗಿ ರೋಧಿಸಿತು. ಹಿರಿಯಜ್ಜನ ಇಚ್ಛೆಯೇನೋ ಅದೇ ಆಗಿತ್ತು, ಅದು ಪೂರೈಸಿತ್ತು. ಆದರೆ ತನ್ನ ಹೆತ್ತವರ ಅಂತ್ಯವು ಈ ರೀತೀಯಾಗಿ ಆದದ್ದು ಅವನಿಗೆ ಭರಿಸಲಾಗದ ದುಃಖವಾಯಿತು. “ಅಯ್ಯೋ ನಾನೇ ಅವರನ್ನು ಒತ್ತಾಯ ಮಾಡಿ ಇಲ್ಲಿಗೆ ಕಳುಹಿಸಿದೆ. ಒಂದು ರೀತಿಯಲ್ಲಿ ನಾನೇ ಅವರು ಹೀಗಾಗಿದ್ದಕ್ಕೆ ಕಾರಣವಾದೆ” ಎಂದು ಪರಿಪರಿಯಾಗಿ ದುಃಖಿಸಿದ.
“ನೀನೊಬ್ಬನೇ ಕಾರಣವಲ್ಲ, ನಾವು ಅವರನ್ನು ಹೊರಡಿಸಿಕೊಂಡು ಬರಲಿಲ್ಲವೇ, ಅವರಿಗೆ ಭೂಮಿಯ ಋಣ ಇಲ್ಲಿ ಮುಗಿದಿತ್ತೆಂದು ಕಾಣುತ್ತದೆ. ಅದಕ್ಕೆ ನಾವೆಲ್ಲರೂ ನಿಮಿತ್ತರಾದೆವು.” ಎಂದು ದುಃಖತಪ್ತರಾದ ಒಬ್ಬರಿನ್ನೊಬ್ಬರನ್ನು ಸಮಾಧಾನ ಮಾಡಿಕೊಳ್ಳುತ್ತಾ ಮುಂದಿನ ಧಾರ್ಮಿಕ ಕೆಲಸಗಳನ್ನು ಪೂರ್ತಿಮಾಡಿ ಹಿಂದಿರುಗಲು ನಿರ್ಧರಿಸಿದರು.
ಪ್ರತಿಯೊಂದು ಗಳಿಗೆಯನ್ನೂ ಯುಗದಂತೆ ನೂಕುತ್ತಾ ಭಾಗ್ಯ ಮತ್ತು ನಾರಣಪ್ಪ, ಲಕ್ಷ್ಮೀ ಮತ್ತು ಭಟ್ಟರು ಯಾವ ಕೆಲಸದಲ್ಲೂ ಆಸಕ್ತಿಯಿಲ್ಲದಂತೆ ಕಳೆಯುತ್ತಿದ್ದರು. ಊಟ ತಿಂಡಿಗಳ ಬಗ್ಗೆಯೂ ಗಮನವಿರಲಿಲ್ಲ. ಭಗವಂತನಲ್ಲಿ ಒಳ್ಳೆಯ ಸುದ್ಧಿಗಾಗಿ ಮೊರೆಯಿಡುವುದಷ್ಟೇ ಅವರ ಪಾಲಿಗೆ ಉಳಿದಿತ್ತು. ಹೀಗೇ ಒಂದು ವಾರ ಕಳೆದಮೇಲೆ ಒಂದುದಿನ ಬೆಳಗ್ಗೆಯೇ ಯಾತ್ರೆಗೆ ಕರೆದೊಯ್ದಿದ್ದ ವಾಹನ ಮನೆಯ ಮುಂದೆ ಪ್ರತ್ಯಕ್ಷವಾಯಿತು. ಸದ್ದಿನಿಂದಲೇ ಎಚ್ಚೆತ್ತ ಎಲ್ಲರೂ ಮುಂಭಾಗಿಲಿನ ಹೊರಗೆ ಬಂದರು. ಒಬ್ಬೊಬ್ಬರೇ ಗಾಡಿಯಿಂದ ಇಳಿದರು. ಯಾರ ಮುಖದಲ್ಲೂ ನಗುವಿರಲಿಲ್ಲ. ಎಲ್ಲರೂ ಕೆಳಗಿಳಿದರೂ ಜೋಯಿಸರು, ಸೀತಮ್ಮನವರ ಸುಳಿವೇ ಇಲ್ಲ. ಭಾಗ್ಯ “ ಅತ್ತೆ ಮಾವನವರು ಎಲ್ಲಿ? ಅವರಿಗಿನ್ನೂ ಆರೋಗ್ಯ ಸುಧಾರಿಸಿಲ್ಲವೇ? ಆಸ್ಪತ್ರೆಗೆ ಸೇರಿಸಿ ಬಂದಿರಾ?” ಎಂದು ಆತಂಕದಿಂದ ಶ್ರೀನಿವಾಸನನ್ನು ಕೇಳಿದಳು.
ಶ್ರೀನಿವಾಸನ ನಿಸ್ತೇಜವಾಗಿದ್ದ ಮುಖ, ಕೆಂಪಡರಿದ ಕಣ್ಣುಗಳು, ಕೇಶಮುಂಡನ ಮಾಡಿಸಿಕೊಂಡಿದ್ದ ತಲೆ, ಸೋತುಹೋದ ದೇಹಾಕೃತಿಯನ್ನು ಗಮನಿಸಿದ ಲಕ್ಷ್ಮಿ ಮನಸ್ಸಿನಲ್ಲೇ ಏನಾಗಿರಬಹುದೆಂದು ಊಹಿಸಿಕೊಂಡಂತೆ ಮಗಳ ಕೈಯನ್ನು ಹಿಡಿದು ಪಕ್ಕಕ್ಕೆ ಸರಿಸಿ ಗೇಟನ್ನು ವಿಶಾಲವಾಗಿ ತೆರೆದು ಬಂದವರನ್ನು ಒಳಗೆ ಬರಲು ಅನುವು ಮಾಡಿಕೊಟ್ಟಳು. ಅವರ ಕೈಯಲ್ಲಿದ್ದ ಚೀಲವನ್ನು ತೆಗೆದು ಪಕ್ಕಕ್ಕಿರಿಸಿ ತಾನೇ ಕೈಕಾಲುಗಳಿಗೆ ನೀರುಕೊಟ್ಟು ಹೊರ ಅಂಗಳದಲ್ಲಿ ಕುಳಿತು ಸುಧಾರಿಸಿಕೊಳ್ಳಲು ಹೇಳಿದಳು.
ಯಾತ್ರೆಗೆ ಇವರಜೊತೆಗೆ ಹೋಗಿದ್ದ ಅತ್ತೆಯ ಅತ್ತಿಗೆ, ಹಿರಿಯಜ್ಜನ ಸೊಸೆ ಕಾಣಿಸಲಿಲ್ಲ. “ಅವರೆಲ್ಲಿ ಹೋದರು? ಅತ್ತೆ ಮಾವನ ಜೊತೆಯಲ್ಲಿದ್ದಾರಾ?” ಎಂದು ಗಂಡನನ್ನು ಮತ್ತೆ ಮತ್ತೆ ಪ್ರಶ್ನಿಸತೊಡಗಿದಳು ಭಾಗ್ಯ. ಅವಳಿಗೆಲ್ಲವೂ ಅಯೋಮಯವಾಗಿ ಕಾಣಿಸುತ್ತಿತ್ತು. ತನ್ನ ಹೆಂಡತಿಯ ಯಾವ ಪ್ರಶ್ನೆಗೂ ಸೊಲ್ಲೆತ್ತದೆ ನಿಸ್ಸಯಾಯಕನಾಗಿ, ಮೌನಿಯಾಗಿ ಕುಳಿತಿದ್ದ ಶ್ರೀನಿವಾಸನನ್ನು ನೋಡಿ ಸೀತಮ್ಮನವರ ಅಣ್ಣನ ಮಗನಿಗೆ ಅಯ್ಯೋ ಎನ್ನಿಸಿ ಆತನೇ ಹೋದಲ್ಲಿ ನಡೆದ ಅವಘಡದ ವಿವರಗಳನ್ನು ಚಾಚೂ ತಪ್ಪದಂತೆ ಹೇಳಿದನು. ಇಬ್ಬರನ್ನು ಅಡುಗೆಯವರ ಜೊತೆಮಾಡಿ ಊರಿಗೆ ಕಳುಹಿಸಿದೆವು. ಉಳಿದವರು ಇಲ್ಲಿಗೆ ಬಂದೆವು ಎಂದು ಹೇಳಿದನು.
ಅದನ್ನು ಕೇಳಿದ ಭಾಗ್ಯಳ ರೋಧನ ಮುಗಿಲು ಮುಟ್ಟಿತು. ನಾರಣಪ್ಪನ ಅವಸ್ಥೆಯಂತೂ ಹೇಳಲಾರದಂತಾಯಿತು. ಭಟ್ಟರು ಏನೂ ತೋಚದೆ ಗರಬಡಿದವರಂತೆ ನಿಂತರು. ಇದ್ದುದರಲ್ಲಿ ಲಕ್ಷ್ಮಿಯೇ ಧೈರ್ಯ ತಂದುಕೊಂಡು ಹುಚ್ಚಿಯಂತೆ ಪ್ರಲಾಪಿಸುತ್ತಿದ್ದ ಭಾಗ್ಯಳನ್ನು ಎದೆಗಾನಿಸಿಕೊಂಡು ಸಮಾಧಾನ ಪಡಿಸುತ್ತಾ ಭಟ್ಟರಿಗೆ, ನಾರಣಪ್ಪನವರಿಗೆ “ನೀವುಗಳೇ ಹೀಗೆ ಕಂಗೆಟ್ಟರೆ ಮಕ್ಕಳ ಪಾಡೇನು? ಆಗಿದ್ದನ್ನು ಸರಿಪಡಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಇವರೆಲ್ಲ ನೊಂದು ಬೆಂದು ಬಸವಳಿದು ಬಂದಿದ್ದಾರೆ. ಅವರೆಲ್ಲರಿಗೂ ಮನಸ್ಸಿಗೆ, ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿದೆ. ಸ್ನಾನಕ್ಕೆ, ಊಟಕ್ಕೆ ಸಿದ್ಧಪಡಿಸಿ ಹೋಗಿ” ಎಂದು ಮುಂದಿನ ಕೆಲಸಗಳನ್ನು ಮಾಡಲು ಕಳುಹಿಸಿದಳು.
ಅಷ್ಟರಲ್ಲಿ ನಂಜುಂಡನಿಂದ ಸಮಾಚಾರ ತಿಳಿದು ಕೇಶವಯ್ಯನವರು, ಭಾವನಾ, ಸುಬ್ಬು, ಲಕ್ಷ್ಮಿಯ ಮಾವ ರಾಮಣ್ಣನವರು ತಮ್ಮ ಕುಟುಂದವರೊಡನೆ ಧಾವಿಸಿ ಬಂದರು. ಯಾರಿಂದ ಹೇಗೆ ವಿಷಯ ತಿಳಿಯಿತೋ ಜೋಯಿಸರ ದೊಡ್ಡಪ್ಪನವರೂ ಬಂದರು. ಅವರು “ಅಯ್ಯೋ ಎಂತಹ ಅನಾಹುತವಾಯಿತು. ವಯಸ್ಸಿನಲ್ಲಿ ಹಿರಿಯನಾದ ನಾನಿನ್ನೂ ಇದ್ದೇನೆ. ನನ್ನ ಕಣ್ಮುಂದಿನ ವೆಂಕೂ, ಸೀತಮ್ಮ.” ಎಂದು ತಾರಕ ಸ್ವರದಲ್ಲಿ ಗೋಳಾಡುತ್ತಾ ಶ್ರೀನಿವಾಸನ ಮುಂದೆಯೇ ಕುಳಿತುಬಿಟ್ಟರು. ಹಾಗೆಯೇ “ಶೀನಾ ನೀನು ಪ್ರತಿಯೊಂದಕ್ಕೂ ಘಳಿಗೆ, ನಕ್ಷತ್ರ ನೋಡೋನು, ಅಪ್ಪ ಅಮ್ಮನನ್ನು ಯಾತ್ರೆಗೆ ಕಳುಹಿಸಿಕೊಡುವಾಗ ಏಕೆ ಈ ಎಚ್ಚರಿಕೆ ವಹಿಸಲಿಲ್ಲ. ನಿನ್ನ ಅಮ್ಮನಿಗೆ ಗಿಣಿಗೆ ಹೇಳಿದಂತೆ ಹೇಳಿದ್ದೆ ನೀನು ಮದುವೆಯಾಗುವಾಗ ಹುಡುಗಿಯ ಜಾತಕವನ್ನು ಸರಿಯಾಗಿ ಪರಿಶೀಲಿಸಿದ್ದೀರೋ ಇಲ್ಲವೋ ಎಂದು. ನಾನು ಬೇರೆ ಕಡೆಯಲ್ಲೊಂದು ಸಾರಿ ತೋರಿಸಿಕೊಂಡು ಬರುತ್ತೇನೆ, ಏನಾದರೂ ದೋಷವಿದ್ದರೆ ಪರಿಹಾರ ಮಾಡಿಕೊಳ್ಳಬಹುದು ಎಂದು. ನನ್ನ ಮಾತಿಗೆ ನೀನು ಸೊಪ್ಪು ಹಾಕಲಿಲ್ಲ. ಈಗ ನೋಡು ಖಾಯಿಲೆ ಕಸಾಲೆಯಿಲ್ಲದೆ ಗುಂಡುಕಲ್ಲಿನಂತ್ತಿದ್ದವರು ಅದೂ ಈರೀತಿ ಹೋಗಿಬಿಟ್ಟರು. ಅಲ್ಲದೆ ತಮ್ಮ ಯಾವ ವಂಶೋದ್ಧಾರಕನನ್ನೂ ಕಣ್ಣಿಂದ ಕಾಣದೆ. ಇದನ್ನು ನೋಡಬೇಕಾಯಿತಲ್ಲಾ.” ಎಂದು ಹಲುಬುತ್ತಿದ್ದರು. ಇವರನ್ನು ಹೀಗೇ ಮುಂದುವರಿಯಲು ಬಿಟ್ಟರೆ ನಾಲಿಗೆ ಸಡಿಲಬಿಟ್ಟು ಎಲ್ಲೆಲ್ಲಿಗೋ ಒಯ್ಯತ್ತಾರೆಂದು ಅಲ್ಲಿದ್ದ ಕೇಶವಯ್ಯನವರು “ದಯವಿಟ್ಟು ಹೀಗೆಲ್ಲಾ ಮಾತನಾಡಿ ಆ ಮಕ್ಕಳನ್ನು ಮತ್ತಷ್ಟು ಧೃತಿಗೆಡಿಸಬೇಡಿ. ಈಗ ಆಗಿರುವುದೇ ಸಾಕಾಗಿದೆ. ಅವರಿಗೆ ಧೈರ್ಯ ಹೇಳುವುದನ್ನು ಬಿಟ್ಟು ಹಿರಿಯರಾದ ನೀವೇ ಇಂತಹ ಸಮಯದಲ್ಲಿ ಇದೆಲ್ಲಾ ತರವಲ್ಲ” ಎಂದರು.
“ಶೀನಿ ನೋಡೋ ಈ ಕೇಶವ ನನ್ನ ಬಾಯಿ ಮುಚ್ಚಿಸೋಕೆ ಬರ್‍ತಾನೆ, ನಾನು ಹೇಳಿದ್ದರಲ್ಲಿ ತಪ್ಪೇನಿದೆಯೋ?” ಎಂದು ಪ್ರಶ್ನಿಸಿದರು.
ಶ್ರೀನಿವಾಸ ಅವರ ಮಾತುಗಳಿಗೆ ಏನೂ ಉತ್ತರಿಸದೆ ಬರೀ ಕೈಯೆತ್ತಿ ಮುಗಿದು ಕುಳಿತ ಸ್ಥಳದಿಂದ ಎದ್ದು ಒಳಕ್ಕೆ ಹೋಗಿಬಿಟ್ಟ.
ಅವನ ವರ್ತನೆಯಿಂದ ಅಸಮಾಧಾನವಾದ ಜೋಯಿಸರ ದೊಡ್ಡಪ್ಪ ದುರ್ದಾನ ತೆಗದುಕೊಂಡವರಂತೆ ಮೇಲೆದ್ದು ಬುಸುಗುಟ್ಟುತ್ತಾ ಮನೆಯಿಂದಾಚೆ ನಡೆದುಬಿಟ್ಟರು. ಬಂದಿದ್ದವರೆಲ್ಲ ಮನೆ ಮಂದಿಯನ್ನು ತಮಗೆ ತಿಳಿದ ರೀತಿಯಲ್ಲಿ ಸಮಾಧಾನ ಪಡಿಸಿ ತೆರಳಿದರು.
ಲಕ್ಮಿಯ ಆದೇಶದಂತೆ ಭಟ್ಟರು, ನಾರಣಪ್ಪನವರು ಸ್ನಾನಕ್ಕೆ, ಊಟಕ್ಕೆ ಸಿದ್ಧತೆ ಮಾಡಿ ಬಂದವರನ್ನು ಕರೆದರು. ಅವರೆಲ್ಲರಿಗೂ ಆಯಾಸ ಪರಿಹಾರಕ್ಕೊಂದು ಆಸರೆ ಬೇಕಾಗಿತ್ತು. ಹೆಚ್ಚು ಉಪಚಾರ ಹೇಳಿಸಿಕೊಳ್ಳದೆ ಸ್ನಾನ ಮುಗಿಸಿ ಸೇರಿದಷ್ಟು ಆಹಾರ ಸೇವಿಸಿ ಮಲಗಿದರು. ಮಾರನೆಯ ದಿನ ಭಾರವಾದ ಮನಸ್ಸಿನಿಂದ ತಮ್ಮೂರಿಗೆ ಹಿಂದಿರುಗಿದರು.
ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬಂತೆ ಶ್ರೀನಿವಾಸ ದಂಪತಿಗಳೂ ದಿನಕಳೆದಂತೆ ಹಿರಿಯರ ಅಗಲಿಕೆಯ ದುಃಖದಿಂದ ಹೊರಬರತೊಡಗಿದರು. ದೇವಸ್ಥಾನದ ಸೇವಾಕಾರ್ಯಕ್ಕೆ ಜೋಯಿಸರ ಸ್ಥಾನದಲ್ಲಿ ಶ್ರೀನಿವಾಸನನ್ನೇ ಮಂಡಲಿಯವರು ನೇಮಿಸಿಕೊಂಡರು. ಅದನ್ನೊಪ್ಪಿಕೊಂಡ ಶ್ರೀನಿವಾಸ ಅಲ್ಲಿಯ ಪೂಜೆ, ಜಮೀನಿನ ಮೇಲ್ವಿಚಾರಣೆ, ಸಮಯ ದೊರೆತಾಗ ತನ್ನ ಸಂಗೀತಸಾಧನೆ, ಕಚೇರಿಗಳು ನಡೆದಾಗ ಅದರಲ್ಲಿ ತೊಡಗುವುದು, ಹೀಗೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡು ಹೊರಗಿನ ಪೂಜೆಗಳಿಗೆ ಹೋಗುವುದನ್ನು ಬಿಟ್ಟುಬಿಟ್ಟ. ಆದಷ್ಟೂ ಮನೆಯಲ್ಲಿ ಇರತೊಡಗಿದ. ಭಾಗ್ಯಳೂ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಳು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದರೂ ಹಿಂದಿನಂತೆ ಲವಲವಿಕೆ, ಚೈತನ್ಯ, ನಗೆಚಟಾಕಿಗಳು ದಂಪತಿಗಳ ನಡುವೆ ಇಲ್ಲವಾಗಿತ್ತು. ನಾರಣಪ್ಪನಂತೂ ಭಾಗ್ಯಮ್ಮ, ಶ್ರೀನಿವಾಸರನ್ನು ಒಂದರೆಗಳಿಗೆ ಬಿಡದಂತೆ ಹೊತ್ತುಹೊತ್ತಿಗೆ ಅವರ ಅಗತ್ಯಗಳನ್ನು ಬೇಡವೆಂದರೂ ಕೇಳದೆ ಪೂರೈಸುತ್ತಿದ್ದರು. ಮನೆಗೆ ಬಂದಿದ್ದ ಲಕ್ಷ್ಮಿ ಮತ್ತು ಭಟ್ಟರನ್ನು ಹಿಂದಿರುಗಿ ಹೋಗಲು ನಾರಣಪ್ಪನವರು ಆಸ್ಪದವನ್ನೇ ಕೊಡಲಿಲ್ಲ. ಶ್ರೀನಿವಾಸನಂತೂ ಅವರ ಮನೆಯನ್ನು ರಾಮಣ್ಣನವರ ಮಗನ ಸುಪರ್ದಿಗೆ ಬಿಟ್ಟುಕೊಟ್ಟು ಇಲ್ಲಿಯೇ ತಮ್ಮೊಡನೆ ಇದ್ದಬಿಡಿರೆಂದು ಹಕ್ಕೊತ್ತಾಯ ಮಾಡಿದ. ಕೇಶವಯ್ಯನವರ ಅಭಿಪ್ರಾಯವೂ ಅದೇ ಆಗಿತ್ತು. ದಿಕ್ಕು ತೋಚದೆ ಭಟ್ಟರು ಲಕ್ಷ್ಮಿಯ ಅಭಿಪ್ರಾಯವನ್ನು ಕೇಳಿದರು.
“ಈ ಸಮಯದಲ್ಲಿ ಮಕ್ಕಳನ್ನು ಕೈಬಿಟ್ಟುಹೋದರೆ ಏನಾದರೂ ಅನಾಹುತವಾದೀತು. ನಮಗಿನ್ನೇನು ಎಲ್ಲಿದ್ದರೂ ಆದೀತು. ಮನೆಯಕಡೆ ತೊಂದರೆಯಿಲ್ಲ. ನನ್ನ ಮಾವನ ಮಗನ ಸಂಸಾರ ಅಲ್ಲಿಯೇ ನೆಲೆಸಿದೆ. ಇನ್ನು ಅಂಗಡಿಯ ವ್ಯವಹಾರವನ್ನು ನಿಮಗಿಂತ ಚೆನ್ನಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾನೆ. ಅದರಿಂದ ಬರುವ ಲಾಭಾಂಶವನ್ನು ನಿರ್ವಂಚನೆಯಿಂದ ಕೊಡುತ್ತಿದ್ದಾನೆ. ನಮ್ಮೊಡನೆ ಸಂಬಂಧವೂ ಉಳಿದಿದೆ. ನಮ್ಮ ಸ್ವತ್ತಿಗೆ ರಕ್ಷಣೆಯೂ ಸಿಕ್ಕಿದೆ. ಆಗಾಗ್ಗೆ ಹೋಗಿಬಂದು ಮಾಡುತ್ತಿರೋಣ. ಉಳಿದ ಮಕ್ಕಳಿಗೂ ಈ ಮನೆ ಹೊಸತೇನಲ್ಲ. ಅವರುಗಳೂ ಬಂದು ಹೋಗಬಹುದು. ನಾವು ಈ ಮಕ್ಕಳಿಗೆ ಅನಾಥಪ್ರಜ್ಞೆ ಉಂಟಾಗದಂತೆ ನಿಭಾಯಿಸೋಣ” ಎಂದಳು ಲಕ್ಷ್ಮಿ.
ಹೆಂಡತಿಯ ಮಾತಿನಲ್ಲಿದ್ದ ಸತ್ಯಾಸತ್ಯತೆಯನ್ನು, ಖಚಿತತೆಯನ್ನು ಕಂಡು ಭಟ್ಟರು ಅಳಿಯನ ಕೋರಿಕೆಗೆ ಸಮ್ಮತಿ ಸೂಚಿಸಿದರು.
ಹೀಗೇ ಮತ್ತಾರು ತಿಂಗಳುಗಳು ಕಳೆದವು. ಭಾಗ್ಯಳಲ್ಲಿ ತಾಯಿಯಾಗುವ ಸೂಚನೆಗಳು ಕಂಡುಬರತೊಡಗಿದವು. ವೈದ್ಯರ ಸಲಹೆಯ ಮೇರೆಗೆ ಲಕ್ಷ್ಮಮ್ಮನವರು ಮಗಳ ಉಪಚಾರಕ್ಕೆ ಟೊಂಕಕಟ್ಟಿ ನಿಂತರು. ಇದಕ್ಕಾಗಿಯೇ ಬಹಳ ವರ್ಷಗಳಿಂದಲೂ ಕಾತುರದಿಂದ ನಿರೀಕ್ಷಿಸುತ್ತಿದ್ದ ತನ್ನ ಹೆತ್ತವರ ನೆನಪು ಮಾಡಿಕೊಂಡ ಶ್ರೀನಿವಾಸನ ಮನಸ್ಸು ಆಗಾಗ ಆರ್ದ್ರವಾಗುತ್ತಿತ್ತು. ಅದರ ನಡುವೆಯೇ ಭಾಗ್ಯಳನ್ನು ತನಗೆಷ್ಟು ಸಾಧ್ಯವೋ ಅಷ್ಟು ರೀತಿಯಲ್ಲಿ ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಿದ್ದ. ಅವಳು ಒಂಟಿಯಾಗಿದ್ದು ಅನ್ಯಮನಸ್ಕಳಾಗದಂತೆ ಹಾಡು, ಪ್ರಸಂಗ, ಕಥೆಗಳನ್ನು ಹೇಳಿ ರಂಜಿಸುತ್ತಿದ್ದ.
ಬಾಗ್ಯಳಿಗಂತೂ ತನ್ನ ಗಂಡನ ಅಕ್ಕರೆ, ಅಭಿಮಾನ, ಪ್ರೀತಿಯನ್ನು ಕಂಡು ಮೂಕವಿಸ್ಮಿತಳಾದಳು. ಹಾಗೇ ಹೆತ್ತವರಿಗಿಂತ ಹೆಚ್ಚಾಗಿದ್ದ ಅತ್ತೆ ಮಾವನವರ ನೆನಪು ಒತ್ತರಿಸಿ ಬರುತ್ತಿತ್ತು. ಅವರಿಬ್ಬರೂ ಯಾವುದಕ್ಕಾಗಿ ಹಂಬಲಿಸುತ್ತಿದ್ದರೋ ಅದು ನೆರವೇರುವ ಸಮಯದಲ್ಲಿ ಅವರೇ ಕಣ್ಮರೆಯಾದರು. ಹೀಗೇಕೆ ಭಗವಂತಾ ಎಂದು ಹಲುಬುತ್ತಿದ್ದಳು.
ಕಾಲಕಾಲಕ್ಕೆ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯುತ್ತಾ, ಅದರಂತೆ ಅನುಸರಿಸುತ್ತಾ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ ಭಾಗ್ಯ ಒಂದು ಶುಭ ಮುಹೂರ್ತದಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮನೀಡಿ ತಾಯಿಯಾದಳು. ಬಂಗಾರದ ಪುತ್ಥಳಿಯಂತಿದ್ದ ಮಗುವನ್ನು ನೋಡಿದ ದಂಪತಿಗಳ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಮಗುವನ್ನು ನೋಡಿದ ಬಂಧು ಬಾಂಧವರು, ಆತ್ಮೀಯರೆಲ್ಲರೂ ತಮಗೆ ತಿಳಿದ ರೀತಿಯಲ್ಲಿ ಹೋಲಿಕೆ ಮಾಡಿ ಹೊಗಳಿ ಶುಭ ಹಾರೈಸಿದರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36275
–ಬಿ.ಆರ್.ನಾಗರತ್ನ, ಮೈಸೂರು
ಕಳೆದು ಕೊಂಡ ನೋವಿನ ನಿವಾರಣೆಗೆ ಹೊಸ ಜೀವ ಬರುವ ಸಂತಸ ನೋವನ್ನು ನಿವಾರಿಸಲು ಇರುವ ಮದ್ದಿನಂತೆ. ಸುಂದರವಾದ ಕಥೆ
ಧನ್ಯವಾದಗಳು ನಯನ ಮೇಡಂ