ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಗ್ಗೆ ತಿಂಡಿ ತಿಂದುಕೊಂಡು ವರು ಹತ್ತುಗಂಟೆಗೆ ಮನೆ ಬಿಟ್ಟಳು. ಅವಳು ಮೈಸೂರು ತಲುಪಿದಾಗ ಒಂದು ಗಂಟೆ. ಚಂದ್ರಾವತಿ ಅವಳಿಗಾಗಿ ಕಾಯುತ್ತಿದ್ದರು. ಊಟ ಬಂತು. ಅವರ ತಮ್ಮ ಊಟ ತಂದವರು ಹೇಳಿದರು. “ಅಕ್ಕ ನಿನ್ನ ಬೈಕ್ ತಂದುಕೊಡಲಾ?”
“ನಿಮ್ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟಾನಾ?”
“ಸಧ್ಯಕ್ಕೆ ಊಟಕ್ಕೆ ಬರುವವರು ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೆ ಮುಂದೆ ಒಂದು ರೂಮು ಕಟ್ಟಿಸೋಣಾಂತಿದ್ದೇನೆ.”
“ಒಳ್ಳೆಯದು ಕಟ್ಟಿಸು. ಬೈಕ್ ತಂದುಕೊಡು. ವರು ನಿನಗೆ ಬೈಕ್ ಓಡಿಸಕ್ಕೆ ಬರುತ್ತದಾ?”
“ನಾನು, ಮಾನಸ ಬೈಕ್‌ನಲ್ಲಿ ಓಡಾಡ್ತಿದ್ವಿ ಆಂಟಿ. ಅವಳು ಬೈಕ್ ತರೋಳು. ನಾನೂ ಲೈಸನ್ಸ್ ಮಾಡಿಸಿಕೊಂಡಿದ್ದೆ.”
“ಹಾಗಾದ್ರೆ ಬೈಕ್ ಸರ್ವೀಸ್‌ಗೆ ಕೊಟ್ಟು, ಇವಳಿಗೆ ಲೈಸೆನ್ಸ್ ಮಾಡಿಸಿಕೊಡು. ಕಾಲೇಜ್‌ಗೆ ಇವಳು ಬೈಕ್‌ನಲ್ಲೇ ಓಡಾಡಬಹುದು” ಅವರು ತಮ್ಮನಿಗೆ ಹೇಳಿದರು.
“ಆಂಟಿ ನನಗೆ ತುಂಬಾ…… ಸಂಕೋಚವಾಗತ್ತೆ…..”
“ನನಗೆ ಮಗನೋ, ಮಗಳೋ ಇದ್ದಿದ್ದರೆ ನಾನು ಮಾಡ್ತಿರಲಿಲ್ವಾ? ನೀನೂ ನನ್ನ ಮಗಳ ಹಾಗೆ ಯೋಚಸಿ ತಲೆಕೆಡಿಸಿಕೊಳ್ಳಬೇಡ. ನೀನು ನಮ್ಮ ಮನೆಯಲ್ಲಿ ಇರುವುದಕ್ಕೆ ಶುರು ಮಾಡಿದಾಗಲಿಂದ ನನಗೆ ಒಂದು ತರಹ ನೆಮ್ಮದಿ ಸಿಕ್ಕಿದೆ. ಅದಕ್ಕೆ ಬೆಲೆ ಕಟ್ಟಕ್ಕಾಗಲ್ಲ.”
ಬೈಕ್ ರೆಡಿಯಾದ ಮೇಲೆ ವಾರುಣಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಂಡಳು. ವಾರದಲ್ಲಿ ಲೈಸೆನ್ಸ್ ಬಂತು.
ಸಿAಧು, ಕೃತಿಕಾ ಮೊದಲಿನಷ್ಟು ವರು ಜೊತೆ ಸೇರುತ್ತಿರಲಿಲ್ಲ. ರಾಗಿಣಿಯೇ ವರೂಗೆ ಆತ್ಮೀಯಳಾದಳು. ಇಬ್ಬರೂ ಮಧ್ಯಾಹ್ನ ಒಟ್ಟಿಗೆ ಊಟ ಮಾಡುತ್ತಿದ್ದರು.

“ರಾಗಿಣಿ, ಒಂದು ವಿಚಾರ ಹೇಳಲಾ……?”
“ಏನು?”
“ಯಾರೋ ಒಬ್ಬ ನಿನ್ನನ್ನು ಫಾಲೋ ಮಾಡ್ತಿದಾನೆ ಅನ್ನಿಸ್ತಿದೆ…….”
“ನಿಜ. ಅವನ ಹೆಸರು ರೋಹಿತ್ ಆಚಾರ್ಯ. ಅವನ ತಂದೆ ಪ್ರಖ್ಯಾತ ಸಂಗೀತಗಾರರು. ತಾಯಿ ಗಮಕ ಹಾಡ್ತಾರೆ. ಇವನು ಒಬ್ಬನೇ ಮಗ……..”
“ನಿನಗೆ ಈ ವಿವರಗಳನ್ನು ಯಾರು ಹೇಳಿದರು?”
“ಎಕನಾಮಿಕ್ಸ್ ಎಂ.ಎ.ನಲ್ಲಿ ನನ್ನ ಪರಿಚಯದವನಿದ್ದಾನೆ. ತೇಜಸ್ವಿ ಕಾರಿಯಪ್ಪಾಂತ……”
“ಹೌದಾ?”
“ಹುಂ ಆ ಆಚಾರ್‌ಗೆ ಈ ವಾರದಲ್ಲಿ ಉತ್ತರ ಕೊಡ್ತೀನಿ.”
“ಅವನು ಪ್ರಪೋಸ್ ಮಾಡಿದ್ದಾನಾ?”
“ದಿನಾ ಕಾಲ್ ಮಾಡ್ತಾನೆ. ನಾನೇ ರಿಸೀವ್ ಮಾಡ್ತಿಲ್ಲ.”
“ಹೌದಾ?”
“ನಾಳೆ ಮಧ್ಯಾಹ್ನ ನಮ್ಮನೆಗೆ ಹೋಗೋಣ. ನೀನು ಊಟ ತರಬೇಡ………”
“ನೋಡೋಣ. ನನಗೆ ಇಷ್ಟವಾದ ಅಡಿಗೆ ಕಳಿಸಿದ್ರೆ ತರಲೇ ಬೇಕಾಗತ್ತೆ.”
“ಸರಿ. ನಿನ್ನಿಷ್ಟ…….”
ಮರುದಿನ ವಾಂಗಿಭಾತ್ ಕಳಿಸಿದ್ದರು. ಆದ್ದರಿಂದ ವರು ಡಬ್ಬಿ ಭರ್ತಿ ಮಾಡಿಕೊಂಡಳು. ತಿಂಡಿಗೆ ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಕಳಿಸಿದಾಗ ಅದನ್ನೇ ತಿಂದು ಊಟಕ್ಕೂ ಅದನ್ನೇ ತರುತ್ತಿದ್ದಳು. ಸಾಮಾನ್ಯವಾಗಿ ದೋಸೆ ಮಾಡಿದ್ದೆ ದಿನ, ಒಂದು ಡಬ್ಬಿ ವಾಂಗಿಭಾತ್, ರೊಟ್ಟಿ ಮಾಡಿದ ದಿನ ಒಂದು ಡಬ್ಬಿ ಪುಳಿಯೋಗರೆ ಕಳಿಸುತ್ತಿದ್ದರು.
ರಾಗಿಣಿ ಅನ್ನ, ಸಾಂಬಾರ್ ಮಾಡಿದ್ದಳು. ಇಬ್ಬರೂ ಊಟ ಮಾಡಿದರು.
“ಮಧ್ಯಾಹ್ನ ಏನು ಕ್ಲಾಸ್ ಇದೆ?”
“ದಿ ಗ್ರೇಟ್ ತಾಂಡವ ಮೂರ್ತಿ ಪೇಪರ್ ಪ್ರೆಸೆಂಟೇಷನ್….”
“ಹಾಗಾದ್ರೆ ಹೋಗೋದು ಬೇಡ.”
“ಪ್ರಸಾದ್ ಸರ್ ಸುಮ್ಮನಿರ‍್ತಾರಾ?”
“ಹೋದ ತಿಂಗಳು ಕೇಶವ್ ಪೇಪರ್ ಪ್ರೆಸೆಂಟ್ ಮಾಡುವ ದಿನ ನಾನು ನೀನು, ಚಂದ್ರು, ಪೃಥ್ವಿ ಮಾತ್ರ ಹಾಜರಾಗಿದ್ವಿ. ಇದೇ ಪ್ರಸಾದ್ ಸರ್ ಬರದೇ ಇದ್ದವರಿಗೆ ಏನು ಪನಿಷ್‌ಮೆಂಟ್ ಕೊಟ್ರು?” ರಾಗಿಣಿ ಕೇಳಿದಳು.
“ಹಾಗಾದ್ರೆ ನೀನು ಆಚಾರ್ ಜೊತೆ ಮಾತಾಡು.”
ರಾಗಿಣಿ ಸ್ಪೀಕರ್ ಆನ್ ಮಾಡಿದಳು.

“ಹಲೋ…….”
“ನಾನು ರಾಗಿಣಿ..”
“ಗೊತ್ತಾಯಿತು. ಸಂತೋಷಕ್ಕೆ ಮಾತಾಡಕ್ಕಾಗ್ತಿಲ್ಲ.”
“ಯಾಕೆ ಅಷ್ಟೊಂದು ಸಲ ಕಾಲ್ ಮಾಡ್ತೀರಾ? ನಾನು ಕಾಲ್ ರಿಸೀವ್ ಮಾಡದೆ ಇದ್ದಾಗ ‘ನನಗೆ ನಿಮ್ಮ ಜೊತೆ ಮಾತನಾಡಕ್ಕೆ ಇಷ್ಟವಿಲ್ಲಾಂತ’ ನಿಮಗೆ ಅರ್ಥವಾಗಲಿಲ್ವಾ?”
“ನಾನು ನಿನ್ನನ್ನು ತುಂಬಾ ಪ್ರೀತಿಸ್ತೀನಿ ರಾಗಿಣಿ. “ನಿನ್ನ ವಿಚಾರಗಳನ್ನು ಕಲೆಕ್ಟ್ ಮಾಡಿಕೊಂಡು ಅಪ್ಪಂಗೆ ಹೇಳಿದ್ದೀನಿ. ತೇಜಸ್ವಿ ನಿನ್ನ ಜಾತಕ ತಂದುಕೊಟ್ಟಿದ್ದ………”
“ಜಾತಕಾನಾ?”
“ತೇಜಸ್ವಿ ನಿನ್ನ ಜಾತಕ ತಂದುಕೊಟ್ಟಿದ್ದಾನೆ. ಗೋತ್ರ-ನಕ್ಷತ್ರ ಎಲ್ಲಾ ಕೂಡುತ್ತದೆ. ನನ್ನ ವಿಚಾರ ತೇಜಸ್ವಿ ಹೇಳಿದ್ದಾನಲ್ವಾ?”
“ಹುಂ ಹೇಳಿದ್ದಾನೆ. ನನ್ನದು ಕೆಲವು ಕಂಡಿಷನ್ಸ್ಗಳಿವೆ. ಅದಕ್ಕೆ ನಿಮ್ಮನೇಲಿ ಒಪ್ತಾರಾ?”
“ಏನು ಕಂಡೀಷನ್ಸ್?”,
“ನಾನು ನೀವಂದುಕೊಂಡಷ್ಟು ಶ್ರೀಮಂತೆ ಅಲ್ಲ. ನಾನು ಎಸ್.ಎಸ್.ಎಲ್.ಸಿ ಓದುವಾಗ ನಮ್ಮ ತಂದೆ ಮನೆ ಬಿಟ್ಟು ಹೋದರು. ನಮ್ಮ ತಾಯಿ ಸೋಮವಾರ ಪೇಟೆಯ ಇಗ್ಗುತಪ್ಪ ಗೋಲ್ಡ್ ಎಷ್ಟೇಟ್ ಮಾಲೀಕರಾದ ಅಯ್ಯಪ್ಪನವರ ಮನೆಯಲ್ಲಿ ಅಡಿಗೆಮಾಡ್ತಾ ನನ್ನನ್ನೂ ನನ್ನ ತಮ್ಮ ರಾಜೂನ್ನ ಸಾಕ್ತಾ ಇದ್ದಾರೆ. ಮದುವೆಯ ನಂತರ ಅವರು ನನ್ನ ಜೊತೆ ಇರ‍್ತಾರೆ….”
“ನಮ್ಮ ತಂದೆ ಒಪ್ಪಲ್ಲಾಂತ ಕಾಣತ್ತೆ.”
“ಹಾಗಾದ್ರೆ ನನಗೂ ಈ ಸಂಬಂಧದಲ್ಲಿ ಆಸಕ್ತಿ ಇಲ್ಲ” ಅವಳು ಕಾಲ್ ಕಟ್ ಮಾಡಿದಳು.

ಅವರ ಸಂಭಾಷಣೆ ಕೇಳಿ ವರು ಬಿದ್ದೂ ಬಿದ್ದೂ ನಕ್ಕಳು.
“ಯಾಕೆ ನಗ್ತಿದ್ದೀಯಾ?”
“ಸುಳ್ಳಿನ ಮೂಟೆ ಉರುಳಿಸಿ ಅವನ ಬಾಯಿ ಮುಚ್ಚಿಸಿದೆಯಲ್ಲಾ…?”
“ವರು ನಾನು ಹೇಳಿದ್ರಲ್ಲಿ ಒಂದಕ್ಷರವೂ ಸುಳ್ಳಿಲ್ಲ…”
“ತಮಾಷೆ ಮಾಡ್ತಿದ್ದೀಯಾ?”
“ಇಂತಹ ವಿಚಾರದಲ್ಲಿ ಯಾರಾದರೂ ಸುಳ್ಳು ಹೇಳ್ತಾರಾ? ನನ್ನ ಬಟ್ಟೆ ಬರೆ, ನನ್ನ ಓಡಾಟ, ಇಂಗ್ಲೀಷ್ ಮಾತು… ಎಲ್ಲಾ ನೋಡಿ ನಿನಗೆ ನಾನು ಶ್ರೀಮಂತೆ ಅನ್ನಿಸಿರಬಹುದು. ನಮ್ಮ ತಂದೆ ಡ್ರೈವರ್, ಅಮ್ಮ ಅಡುಗೆಯವರು. ನಮ್ಮ ತಂದೆ ಕುಡಿತ, ಇಸ್ಟೀಟ್ ದಾಸರಾಗಿದ್ದರು. ಅಯ್ಯಪ್ಪನವರು ಕೈ ತುಂಬಾ ಸಂಬಳ ಕೊಟ್ಟರೂ ಮನೆ ನಡೆಸುವುದು ಕಷ್ಟವಾಗಿತ್ತು. ಆಗ ಅಮ್ಮನ್ನ ಅಡುಗೆ ಕೆಲಸಕ್ಕೆ ಸೇರಿಸಿಕೊಂಡರು. ಅಯ್ಯಪ್ಪನವರ ಹೆಂಡತಿ ಕಾವೇರಿ ತುಂಬಾ… ಒಳ್ಳೆಯವರು. ಅವರು ನಾನ್‌ವೆಜ್ ತಿನ್ನುತ್ತಿರಲಿಲ್ಲ. ನಾನ್‌ವೆಜ್ ತಯಾರಿಸಲು ಬೇರೆ ಅಡಿಗೆಮನೆ, ಬೇರೆ ಅಡುಗೆಯವರಿದ್ದರು. ಅವರ ಮನೆಯವರಿಗೆ ಅಮ್ಮನ ಅಡುಗೆ ತುಂಬಾ ಇಷ್ಟವಿತ್ತು. ಅವರು ಅಮ್ಮನ್ನ ಸ್ವಂತ ತಂಗಿ ತರಹ ಈಗಲೂ ನೋಡಿಕೊಳ್ತಾರೆ. ಅಮ್ಮನಿಗೆ ಅವರೇ ಡ್ರೈವಿಂಗ್ ಕಲಿಸಿದ್ದರು.

ಕಾವೇರಿಯಮ್ಮನಿಗೆ 3 ಮಕ್ಕಳು. ಅವರು ಮೂರನೇ ಮಗುವಿನ ಪ್ರೆಗ್ನಿನ್ಸಿಯಲ್ಲಿ ಒಂದು ದಿನ ಹೊಟ್ಟೆನೋವು ಕಾಣಿಸಿತಂತೆ. ಅಯ್ಯಪ್ಪ ಊರಿನಲ್ಲಿರಲಿಲ್ಲ. ಡ್ರೈವರ್ ಮನೆಗೆ ಹೊರಟುಹೋಗಿದ್ದ. ಆಗೆಲ್ಲಾ ಮೊಬೈಲ್ ಇರಲಿಲ್ಲ. ಜೋರು ಮಳೆ ಇರ‍್ತಿತ್ತಂತೆ. ಡಾಕ್ಟರ್‌ಗೆ ಆಗಿದ್ದ ಲ್ಯಾಂಡ್‌ಲೈನ್‌ ನಿಂದ ಫೋನ್ ಮಾಡಿದ್ದಾರೆ. ಕನೆಕ್ಟ್ ಆಗಲಿಲ್ಲವಂತೆ. ಅಮ್ಮ ಧೈರ್ಯಮಾಡಿ ಅಜ್ಜಿ ಹತ್ತಿರ ನನ್ನ, ನನ್ನ ತಮ್ಮನನ್ನು ಬಿಟ್ಟು, ಸೋಮವಾರ ಪೇಟೆಗೆ ಕಾರು ಡ್ರೆöÊವ್ ಮಾಡಿಕೊಂಡು ಕಾವೇರಮ್ಮನ್ನ ಕರೆದುಕೊಂಡು ಹೋದರಂತೆ. ಅಮ್ಮನಿಂದ ಅವತ್ತು ತಾಯಿ-ಮಗು ಪ್ರಾಣ ಉಳಿಯಿತಂತೆ. ಅಂದಿನಿಂದ ಅಯ್ಯಪ್ಪ ದಂಪತಿಗಳು ನಮ್ಮ ಕುಟುಂಬದ ಜವಾಬ್ದಾರಿ ತೆಗೆದುಕೊಂಡರು.”
“ಹೌದಾ?”
“ಈ ಮನೆ ಅವರದು. ರಜಗಳಲ್ಲಿ ಮೈಸೂರಿಗೆ ಬರಬೇಕೆನ್ನಿಸಿದಾಗ ಕಾವೇರಮ್ಮ ಅಮ್ಮನ ಜೊತೆ ಇರ‍್ತಾರೆ. ಅವರ ಮಕ್ಕಳು ಕಲ್ಪನಾ, ಚಂದನ ಇಬ್ಬರೂ ಅಮೇರಿಕಾದಲ್ಲಿದ್ದಾರೆ. ಮುದ್ದಿನ ಮಗ ಮುತ್ತಣ್ಣ ಅಯ್ಯಪ್ಪ, ಕೊಡಗಿನಲ್ಲಿದ್ದಾನೆ. ಈಗ ಅವನು ಹೈಸ್ಕೂಲ್‌ನಲ್ಲಿದ್ದಾನೆ. ಅವರೆಲ್ಲಾ ಇಲ್ಲಿಗೆ ರ‍್ತಾರೆ. ನನ್ನನ್ನು ಅವರ ಮಗಳ ತರಹ ನೋಡಿಕೊಳ್ತಾರೆ. ಬೇಜವಾಬ್ದಾರಿ ತಂದೆಯರು ಇರುವವರೆಗೂ ನಮ್ಮಂತಹವರ ಗೋಳು ತಪ್ಪಲ್ಲ ಕಣೆ. ಅಮ್ಮ ಅಡುಗೆ ಮಾಡ್ತಾ ಜೀವನ ಸವೆಸಬೇಕಾ? ಅನ್ನಿಸತ್ತೆ. ನಾನು ಆದಷ್ಟು ಬೇಗ ಕೆಲಸಕ್ಕೆ ಸೇರಿ ಅಮ್ಮನ್ನ, ತಮ್ಮನ್ನ ನೋಡಿಕೊಳ್ಳಬೇಕು. ಅದೇ ನನ್ನ ಮುಂದಿರುವ ಗುರಿ.”

“ನನ್ನ ಕಥೆ ನಿನ್ನದರಷ್ಟು ಹೋಪ್ಲೆಸ್ ಆಗಿಲ್ಲ. ಆದರೆ ನಮ್ಮ ತಂದೆ-ತಾಯಿಯರ ಒಳ್ಳೆಯತನವನ್ನು ಅಪ್ಪನ ತಮ್ಮಂದಿರು ಅಕ್ಕ-ತಂಗಿ ತುಂಬಾ ದುರುಪಯೋಗ ಪಡಿಸಿಕೊಳ್ತಿದ್ದಾರೆ ಕಣೆ.”
“ಏನೇ ಹಾಗಂದ್ರೆ?”
ವಾರಿಣಿ ತಮ್ಮ ಮನೆ ಕಥೆ ಹೇಳಿದಳು. “ಪಾರ್ವತಿ ಅತ್ತೆ ತನ್ನನ್ನು ಸೊಸೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಆದ್ರೆ ನಾನೇ ಅಪ್ಪನಿಗೆ, ಅತ್ತೆಗೆ ಖಡಾಖಂಡಿತವಾಗಿ ಹೇಳಿದ್ದೀನಿ.”
“ನಿನಗೆ ತಂದೆಯ ಪ್ರೀತಿ ಯಥೇಚ್ಛವಾಗಿ ಸಿಕ್ಕಿರೋದ್ರಿಂದ ನೀನು ಒಂದು ರೀತಿಯಲ್ಲಿ ಅದೃಷ್ಟವಂತೆ. ನಮಗೆ ನಮ್ಮ ತಂದೆ ಬದುಕಿದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ. ಒಂದೊಂದು ಸಲ ಭವಿಷ್ಯದ ಬಗ್ಗೆ ಚಿಂತೆಯಾಗತ್ತೆ. ಏನೇನೋ ಪ್ರಶ್ನೆಗಳು ಕಾಡುತ್ತವೆ.”
“ಪ್ರಶ್ನೆಗಳಾ?”
“ಹೌದು. ಅಪ್ಪ ವಾಪಸ್ಸು ಬಂದು ನಮ್ಮ ಜೊತೆ ಇರಲು ಬಯಸಿದ್ರೆ ಏನ್ಮಾಡೋದು? ಅವರಿಗೆ ವಯಸ್ಸಾಗಿರೋದ್ರಿಂದ ಅಮ್ಮ ಕರಗಿ ಬಿಡ್ತಾರೆ. ಜೊತೆಗೆ ಗಂಡ ಅನ್ನುವ ಮಮಕಾರ ಬೇರೆ.”
“ಆ ರೀತಿ ಯೋಚನೆ ಮಾಡ್ತೀಯ? ನಿಮ್ಮ ತಂದೆ ಹಾಗೆ ಬರೋದಿದ್ದಿದ್ರೆ ಇಷ್ಟು ಹೊತ್ತಿಗೆ ಬಂದಿರೋರು.”
“ಕೈ, ಕಾಲು ಗಟ್ಟಿಯಿರುವಾಗ ಯಾರೂ ನೆನಪಾಗಿರಲ್ಲ ಕಣೆ. ಕೈ ಕಾಲು ಸೋತುಹೋದಾಗ ಹೆಂಡ್ತಿ-ಮಕ್ಕಳ ಮೇಲೆ ಪ್ರೀತಿ ಉಕ್ಕಿಹರಿಯುತ್ತದೆ. ಆಗ ಬರ‍್ತಾರೆ.”
“ರಾಗಿಣಿ ನೀನು ಇಲ್ಲದ್ದೆಲ್ಲಾ ಯೋಚಿಸಿ ತಲೆಕೆಡಿಸಿಕೊಳ್ಳಬೇಡ. ನಿಮ್ಮ ತಾಯಿ ತೀರ್ಮಾನ ತೆಗೆದುಕೊಳ್ತಾರೆ. ಹೇಗೂ ಕಾವೇರಿಯಮ್ಮನ ಆಶ್ರಯ ಅವರಿಗಿದೆ. ನೀನು, ನಿನ್ನ ತಮ್ಮನ್ನ ಕರೆದುಕೊಂಡು ಬಂದು ಓದಿಸು.
“ಸರಿ ಕಣೆ.”
“ನಾಳೆ ಆ ಆಚಾರ್ ಬಂದು ‘ನಮ್ಮನೆಯಲ್ಲಿ ಒಪ್ಪಿದ್ದಾರೆ’ ಅಂದ್ರೆ ಏನು ಮಾಡ್ತೀಯಾ?”
“ಬೆನ್ನು ಮೂಳೆ ಇಲ್ಲ. ನಿನಗೆ ತೆಪ್ಪಗಿರು” ಅಂತೀನಿ. ಅವನಿಗೆ ಪ್ರೀತಿ ಬಗ್ಗೆ ಏನು ಗೊತ್ತಿದೆ? ಒಂದು ಹುಡುಗಿ ಇಷ್ಟವಾದರೆ ಅವಳ ಹತ್ತಿರ ಬಂದು ಧೈರ್ಯವಾಗಿ ಹೇಳಬೇಕು. ಜಾತಿ, ಜಾತಕ ನೋಡಿ ಆಮೇಲೆ ಪ್ರೀತಿಸ್ತಾನೆ ಮುಠ್ಠಾಳ.”
ವರು ಮಾತಾಡಲಿಲ್ಲ.

“ಪ್ರೀತಿ ಅನ್ನುವುದು ಒಂದು ಅನುಭೂತಿ. ಹೃದಯಗಳನ್ನು ಬೆಸೆಯುವ ಅನುಬಂಧ. ಪ್ರೀತಿ ಮಾಯೆ ಅಂತಾರೆ. ಆದರೆ ಅದು ನಂಬಿಕೆಯ ಛಾಯೆ. ಒಬ್ಬ ವ್ಯಕ್ತಿಯನ್ನು ಮೊದಲ ಸಲ ನೋಡಿದೊಡನೆ ಇವನು ನನ್ನವನು ಅನ್ನಿಸಬೇಕು. ಅವನಿಗಾಗಿ ಹೃದಯ ಹಂಬಲಿಸಬೇಕು. ಅವನು ಕಣ್ಣೆದುರಿಗೆ ಇರಲಿ ಇಲ್ಲದಿರಲಿ ಮನಸ್ಸು ಅವನ ಬಗ್ಗೆ ಯೋಚಿಸಬೇಕು. ಅವನ ಬಗ್ಗೆ ಕನಸು ಕಾಣಬೇಕು. ಅವನ ಒಳಿತಿಗಾಗಿ ಮನಸ್ಸು ಹಂಬಲಿಸಬೇಕು. ಅದೇ ನಿಜವಾದ ಪ್ರೀತಿ……”
“ಕವಿಯಾಗ್ತಿದ್ದೀಯ…….”
“ಯಾಕಾಗಬಾರದು? ಸಾಕು ಇನ್ನು ಈ ವಿಷಯ. ನಿನ್ನ ಮುಂದಿನ ಆಲೋಚನೆ ಏನು?”
“ಆಗಲೇ ಹೇಳಿದೆನಲ್ಲಾ…….. ಮದುವೆ ಬಗ್ಗೆ ಇನ್ನು ಕೆಲವು ವರ್ಷಗಳು ಯೋಚನೆ ಮಾಡಲ್ಲ…….”
ರಾಗಿಣಿ ಮಾಡಿದ ಟೀ ಕುಡಿದು ವರು ಹೊರಟಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43724
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

5 Comments on “ಕನಸೊಂದು ಶುರುವಾಗಿದೆ: ಪುಟ 11

  1. ಕನಸೊಂದು ಧಾರಾವಾಹಿ..ಸರಾಗವಾಗಿ ಓದಿಸಿಕೊಂಡುಹೋಯಿತು… ಈಗಿನ ಹುಡುಗಿ ಯರಲ್ಲೂ ಪ್ರಬುದ್ಧ ರಾಗಿ ಯೋಚನೆ ಮಾಡುವವರ ಇದ್ದಾರೆ.. ಎನಿಸಿತು ಮೇಡಂ..

  2. ಕಾದಂಬರಿ ಪ್ರಕಟಿಸುತ್ತಿರುವುದರ ಜೊತೆ ಜೊತೆಗೆ ಬಾಲಿದ್ದೀಪ ದರ್ಶನ ಮಾಡಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ ಹಾಗೂ ಪ್ರತಿಕಂತನ್ನೂ ಓದಿ ಅಭಿಪ್ರಾಯ ತಿಳಿಸುತ್ತಿರುವ ಆತ್ಮೀಯರಿಗೆ ಪ್ರೀತಿಯ ನಮನಗಳು.

  3. ಆತ್ಯಂತ ಆಸಕ್ತಿದಾಯಕವಾಗಿರುವ ಸುಂದರ ಕಥಾಹಂದರ ತುಂಬಾ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *