ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…)

3. ಗಂಗಾನದಿಯ ಡಾಲ್ಫಿನ್ :
ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ ಕಾಯಿದೆಯ ಪ್ರಕಾರ ಇದನ್ನು ರಕ್ಷಿಸಲಾಗಿದೆ. ಡಾಲ್ಫಿನ್ ಒಂದು ಸ್ತನಿ. ನೀರಿನಲ್ಲಿ ವಾಸಮಾಡುವುದಕ್ಕೆ ಇದರ ದೇಹ ಮಾರ್ಪಾಡಾಗಿದೆ. ಗಂಗೆಯ ಡಾಲ್ಫಿನ್ ಅಳಿವಿನಂಚಿನಲ್ಲಿದೆ. ಇದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ. ನಮ್ಮ ದೇಶದ ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಘೋಷಿಸಲಾಗಿದೆ. ಇದರ ಶಾಸ್ತ್ರೀಯ ಹೆಸರು ಪ್ಲಾಟನಿಸ್ಟ ಗ್ಯಾಂಜೆಟಿಕ ಗ್ಯಾಂಜೆಟಿಕ (Platanista gangetica gangetica) ಹೆಣ್ಣು ಡಾಲ್ಫಿನ್ ಸ್ವಲ್ಪ ದೊಡ್ಡದು, 2.5 ಮೀ ಇರುತ್ತದೆ. ಗಂಡು 2.1 ಮೀನಷ್ಟು ಇರುತ್ತದೆ.
ಈ ಡಾಲ್ಫಿನ್‌ನ ದೇಹ ಗಟ್ಟಿಯಾಗಿದ್ದು ಬಾಗಿ, ಬಗ್ಗಿಸಬಹುದಾಗಿದೆ. ಈಜಲು ಅನುಕೂಲವಾಗುವಂತೆ ಕೈಕಾಲುಗಳು ಈಜುರೆಕ್ಕೆಗಳಂತಿವೆ. ದೇಹದ ಮೇಲ್ಭಾಗದಲ್ಲಿ ತ್ರಿಕೋಣಾಕಾರದಲ್ಲಿ ಒಂದು ಈಜುರೆಕ್ಕೆಯಿದೆ. ದೇಹ ನುಣುಪಾಗಿದ್ದು ಚರ್ಮದ ಮೇಲೆ ಕೂದಲು ಇಲ್ಲ. ವಯಸ್ಕ ಡಾಲ್ಫಿನ್ ಬಣ್ಣ ಬೂದು ಮಿಶ್ರಿತ ಕಂದು. ಕಣ್ಣಿನಲ್ಲಿ ಮಸೂರ ಇಲ್ಲ. ಮಾನವ ಡಾಲ್ಫಿನ್ ಸಂಘರ್ಷ ಮತ್ತು ನದಿಗಳ ಮಾಲಿನ್ಯ ಇದಕ್ಕೆ ಕಷ್ಟವನ್ನು ತಂದೊಡ್ಡಿದೆ! ಇದರ ದೇಹದ ಕೊಬ್ಬಿಗಾಗಿ ನಡೆಸುವ ಹತ್ಯೆಯಿಂದ ಡಾಲ್ಫಿನ್ ಸಂಖ್ಯೆ ಕ್ಷೀಣಿಸುತ್ತಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣವೂ ಕಾರಣ.

ಗಂಗಾನದಿಯ ಡಾಲ್ಫಿನ್ :

4.ಹಂಗುಲ್-ಕಾಶ್ಮೀರದ ಜಿಂಕೆ :
ಕೆಂಪು ಬಣ್ಣದ ಸುಂದರ ಜಿಂಕೆ ಹಂಗುಲ್. ತೀವ್ರವಾದ ಅಳಿವಿನಂಚಿನಲ್ಲಿರುವ ಪ್ರಾಣಿ. ಕಾಶ್ಮೀರದ ಕಾಡುಗಳಲ್ಲಿ ಮತ್ತು ಎತ್ತರದ ಕಣಿವೆ, ಪರ್ವತಗಳಲ್ಲಿ ಕಾಣಸಿಗುತ್ತದೆ. ಹಿಮಾಚಲ ಪ್ರದೇಶದ ಉತ್ತರ ಚಂಬಾ ಜಿಲ್ಲೆಯಲ್ಲೂ ಇರುತ್ತದೆ. ವೈಜ್ಞಾನಿಕ ಹೆಸರು ಸರ್ವಸ್ ಎಲಾಫಸ್ ಹಂಗ್ಲು (Cervus elaphus hanglu)) ಹಂಗುಲ್ ಒಂದು ದೊಡ್ಡ ಜಿಂಕೆ. ಮೂತಿ ಉದ್ದವಾಗಿ ಚೂಪಾಗಿದೆ. ಉದ್ದ ಸುಮಾರು 250 ಸೆಂ.ಮೀ. ಇರುತ್ತದೆ. ಎತ್ತರ 120-140 ಸೆಂ.ಮೀ. ಇರುತ್ತದೆ. ಗಂಡು ಜಿಂಕೆಯ ತೂಕ 200-300 ಕೆ.ಜಿ. ಇದ್ದು, ಹೆಣ್ಣು ಜಿಂಕೆ 100-150 ಕೆ.ಜಿ. ತೂಗುತ್ತದೆ. ಹಂಗುಲ್ ಕಾಶ್ಮೀರ ರಾಜ್ಯದ ವನ್ಯಮೃಗ ಎಂದು ಕರೆಯಲಾಗುತ್ತದೆ. ಹಂಗುಲ್ ಜಿಂಕೆಗೆ ಹುಲ್ಲು, ಬಿದಿರು, ಗಿಡಗಳ ಸೊಪ್ಪು, ಹಣ್ಣು, ಕಾಯಿ ಇವುಗಳೆಲ್ಲ ಪ್ರಮುಖ ಆಹಾರ. ಮಾನವನ ಚಟುವಟಿಕೆ, ಅರಣ್ಯ ನಾಶ, ಜಾನುವಾರುಗಳು ಮೇವಿಗಾಗಿ ಇವುಗಳಿಗೆ ನೀಡುವ ಪೈಪೋಟಿ, ಇವುಗಳಿಂದ ಆಹಾರವು ಸಿಗದೆ ಹಂಗುಲ್ ಜಿಂಕೆಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಕಾಶ್ಮೀರ ಅರಣ್ಯ ಇಲಾಖೆಯ 2017 ನೇ ಇಸವಿಯ ಗಣತಿಯ ಪ್ರಕಾರ ಇವುಗಳ ಸಂಖ್ಯೆ 197 ಮಾತ್ರ.

ಹಂಗುಲ್-ಕಾಶ್ಮೀರದ ಜಿಂಕೆ

5 .ಭಾರತದ ಒಂಟಿ ಕೊಂಬಿನ ಘೇಂಡಾಮೃಗ :
ನಮ್ಮ ದೇಶದ ಘೇಂಡಾಮೃಗಕ್ಕೆ ಒಂದೇ ಕೊಂಬಿರುವುದು. ಇತ್ತೀಚಿನವರೆಗೂ ಅಳಿವಿನಂಚಿನಲ್ಲಿದೆ ಎಂದೇ ಗುರುತಿಸಲಾಗಿತ್ತು. ಆದರೆ ಈಗ ಸಂಖ್ಯೆ ಮತ್ತು ಉಳಿವಿನಲ್ಲಿ ಅಪಾಯಕ್ಕೀಡಾಗ ಬಹುದಾದ ಪ್ರಾಣಿ ಎಂದು ಗುರುತಿಸಲಾಗಿದೆ. ಸಂಖ್ಯೆ 370 ರ ಹತ್ತಿರ ಇದೆ. ಇದು ನಮ್ಮ ದೇಶದ ಈಶಾನ್ಯ ಭಾಗದಲ್ಲಿ ಮತ್ತು ನೇಪಾಳದಲ್ಲಿ ಕಾಣಸಿಗುತ್ತದೆ. ಹುಲ್ಲುಗಾವಲಿನಲ್ಲಿರುತ್ತದೆ. ಅದೂ ಆನೆಯ ಎತ್ತರದ ಹುಲ್ಲು ಮತ್ತು ಇತರ ಹುಲ್ಲುಗಳ ಮಧ್ಯೆ ಇದು ಇರುವುದನ್ನು ಗುರುತಿಸುವುದೇ ಕಷ್ಟ. ಹುಲ್ಲಿನ ಮಧ್ಯೆ ಕೊಳವೆಯಾಕಾರದಲ್ಲಿ ದಾರಿಗಳನ್ನು ಮಾಡಿಕೊಂಡಿರುತ್ತದೆ. ಎತ್ತರದ ಹುಲ್ಲನ್ನು ತನ್ನ ಚಾಚಿರುವ ತುಟಿಗಳ ಸಹಾಯದಿಂದ ಹಿಡಿದು ತಿನ್ನುತ್ತದೆ. ಮೇಯುವ ಪ್ರಾಣಿ. ಇದಲ್ಲದೆ ಹಣ್ಣುಗಳು, ಎಲೆಗಳು, ಬೆಳೆಗಳನ್ನು ತಿನ್ನುತ್ತದೆ. ನೀರಿನ ಹತ್ತಿರ ತಂಪಾಗಿರುವುದರಿಂದ ಅನೇಕ ವೇಳೆ ನೀರಿನ ಸುತ್ತಮುತ್ತ ಇರುತ್ತದೆ. ನೀರಿನಲ್ಲಿರುವ ಗಿಡಗಳನ್ನೂ ತಿನ್ನಬಹುದು. ಘೇಂಡಾಮೃಗದ ವಾಸನಾ ಮತ್ತು ಕೇಳುವ ಸಾಮರ್ಥ್ಯ ಸೂಕ್ಷ್ಮವಾಗಿರುತ್ತದೆ. ಬಹಳ ಚುರುಕಾಗಿ ಚಲಿಸಬಲ್ಲುದು. ಕೋಪ ಬಂದರೆ ಅಟ್ಟಿಸಿಕೊಂಡು ಬರುತ್ತದೆ. ನೆಗೆಯಬಲ್ಲುದು. ಘೇಂಡಾಮೃಗ ದೊಡ್ಡ ಗಾತ್ರದ ಪ್ರಾಣಿ. ಗಂಡು 2200 ಕೆ.ಜಿ.ಯಷ್ಟು ತೂಕ ಮತ್ತು ಹೆಣ್ಣು 1600 ಕೆ.ಜಿ.ಯಷ್ಟು ತೂಕವಿರುತ್ತದೆ. ಗಂಡಿನ ಎತ್ತರ 1.6 ಮೀ – 1.9 ಮೀ ಮತ್ತು ಹೆಣ್ಣಿನ ಎತ್ತರ 1.5- 1.7 ಮೀ.ಗಳು. ಮೈಬಣ್ಣ ಬೂದು ಮಿಶ್ರಿತ ಕಂದು. ಬಹಳ ದಪ್ಪ ಚರ್ಮ. ಚರ್ಮದಲ್ಲಿ ಮಡಿಕೆಗಳಿದ್ದು ರಕ್ಷಾಕವಚ ತೋರಿದಂತೆ ಕಾಣುತ್ತದೆ. ಘೇಂಡಾಮೃಗಕ್ಕೆ ಮುಳುವಾಗಿರುವುದು ಅದರ ಕೊಂಬು. ಇದು ಮೂತಿಯ ತುದಿಯಲ್ಲಿದೆ. ನಮ್ಮ ದೇಶದ ಘೇಂಡಾಮೃಗಕ್ಕೆ ಒಂದೇ ಕೊಂಬಿರುವುದು. ಕೊಂಬು ಕೂದಲಿನಿಂದ ಆಗಿದ್ದು ಗಟ್ಟಿಯಾಗಿರುತ್ತದೆ. ಇದರಲ್ಲಿ ಔಷಧೀಯ ಗುಣಗಳಿವೆ ಎಂದುಕೆಲವರು ನಂಬುತ್ತಾರೆ. ಇದು ಶುದ್ಧ ಸುಳ್ಳು. ವಿಶೇಷವಾಗಿ ಸಾಂಪ್ರದಾಯಿಕ ಔಷಧಿ ತಯಾರಿಸಲು ಚೀನಾದವರು ಬಳಸುತ್ತಾರೆ. ಇದಲ್ಲದೆ ತೈವಾನ್, ಹಾಂಗ್‌ಕಾಂಗ್, ಸಿಂಗಾಪುರಗಳಿಂದಲೂ ಬೇಡಿಕೆಯಿದೆ. ಉತ್ತರ ಆಫ್ರಿಕ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಕತ್ತಿಯ ಹಿಡಿಗೆ ಕೊಂಬನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ. ನಮ್ಮ ದೇಶದಲ್ಲಿ ಅಸ್ಸಾಂನಲ್ಲಿ ಹೆಚ್ಚಾಗಿ ಕಂಡುಬರುವ ಘೇಂಡಾಮೃಗ ಕಾಜಿರಂಗ ಅಭಯಾರಣ್ಯದಲ್ಲಿದೆ. ಇದರ ವಾಸಸ್ಥಳಗಳು ಬೇರೆಯಾಗಿ ಚದುರಿ ಹೋಗಿವೆ. ಒಟ್ಟು 20,000 ಕಿ.ಮೀ. ವ್ಯಾಪ್ತಿ ಮಾತ್ರ ಉಳಿದಿದೆ! ಶತ್ರುಗಳು ಯಾವುವೂ ಇಲ್ಲ. ಆದರೆ ಚಿಕ್ಕ ಮರಿಗಳನ್ನು ಹುಲಿ ಕೊಲ್ಲಬಹುದು.

ಭಾರತದ ಒಂಟಿ ಕೊಂಬಿನ ಘೇಂಡಾಮೃಗ

6.ದೋಲ್ : ಭಾರತದಲ್ಲಿ ಕಾಣಬರುವ ಕಾಡುಗಳಲ್ಲಿ ವಾಸಿಸುವ ನಾಯಿಯೇ ದೋಲ್ ಅಥವಾ ಸೀಳುನಾಯಿ. ಕೆಂಪುನಾಯಿ ಅಥವಾ ಬೇಟೆನಾಯಿ ಎಂದೂ ಕರೆಯುತ್ತಾರೆ. ಕು‌ಆನ್ ಆಲ್‌ಪೈನಸ್ (Cuon alpinu) ಎನ್ನುವುದು ಪ್ರಾಣಿ ವಿಜ್ಞಾನದ ಹೆಸರು. ಅಳಿವಿನಂಚಿನಲ್ಲಿದೆ ಎಂದು ಐಯುಸಿ‌ಎನ್‌ನ ಕೆಂಪುಪಟ್ಟಿಯಲ್ಲಿದೆ. ಸುಮಾರು 2500 ನಾಯಿಗಳು ಮಾತ್ರ ಇಂದು ಇವೆ. ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿದೆ. ಇದಲ್ಲದೆ ಮುದುಮಲೈ ಮತ್ತು ಭಾರತದ ಇನ್ನೂ ಹಲವು ಅಭಯಾರಣ್ಯಗಳಲ್ಲಿ ಕಾಣಸಿಗುತ್ತವೆ. ಗುಂಪಿನಲ್ಲಿ ವಾಸಿಸುವ ಪ್ರಾಣಿ, ಸಾಧಾರಣವಾಗಿ ಹನ್ನೆರಡು ಇರಬಹುದು. ಒಟ್ಟಾಗಿ ಸೇರಿ ಬೇಟೆಯಾಡುತ್ತವೆ. ಹಗಲು ಹೊತ್ತಿನಲ್ಲಿಯೇ ಬೇಟೆಯಾಡುವುದು, ಜಿಂಕೆ ಮತ್ತು ಇದೇ ರೀತಿಯ ಪ್ರಾಣಿಗಳೇ ಬೇಟೆ ನಾಯಿಗಳ ಆಹಾರ. ಬೇಟೆಯಲ್ಲಿ ಮೊದಲು ಹೊಟ್ಟೆ ಮತ್ತು ತೊಡೆಗಳನ್ನು ಸೀಳಿ ಬೇಟೆಯನ್ನು ಸಾಯಿಸಿಬಿಡುತ್ತವೆ. ಇವುಗಳ ಜೊತೆ ಬೇಟೆಯಲ್ಲಿ ಪೈಪೋಟಿ ನೀಡುವ ಪ್ರಾಣಿಗಳು ಹುಲಿ ಮತ್ತು ಚಿರತೆ ಗುಂಪಿನಲ್ಲಿ ಮರಿಹಾಕುವ ಕೆಲವು ಹೆಣ್ಣುಗಳು ಇರುತ್ತವೆ.

ದೋಲ್ ಸಂತತಿ ವಿನಾಶದ ಅಂಚಿಗೆ ತಲುಪಲು ಕೆಲವು ಕಾರಣಗಳಿವೆ. ಕಾಡಿನ ನಾಶದಿಂದ ಇವುಗಳ ವಾಸಸ್ಥಳದ ನಾಶವಾಗುತ್ತಿದೆ. ಇದರಿಂದ ಬೇಟೆಯೂ ಕಡಿಮೆಯಾಗಿದೆ. ಇತರ ಪ್ರಾಣಿಗಳೊಡನೆ ಸ್ಪರ್ಧೆ. ಇದಲ್ಲದೆ ಕಾಡಿಗೆ ದನಕರುಗಳು ಬರುತ್ತವೆ. ಊರಿನ ನಾಯಿಗಳು ಬರುತ್ತವೆ. ಕಾಡಿನ ನಾಯಿಗಳಿಗೆ ಕಾಯಿಲೆ ತರುತ್ತವೆ. ಹೆಣ್ಣು ದೋಲ್ 10-17 ಕೆ.ಜಿ. ಇರುತ್ತದೆ. ಗಂಡು 15 ರಿಂದ 21 ಕೆ.ಜಿ. ತೂಗುತ್ತದೆ. ಮೈಬಣ್ಣ ಕೆಂಪು ಮಿಶ್ರಿತ ಕಂದು. ಬಾಲವೂ ದಪ್ಪಗಿರುತ್ತದೆ. ತುಂಬಾ ಕೂದಲಿರುತ್ತದೆ. ಒಮ್ಮೊಮ್ಮೆ ಈ ನಾಯಿಗಳು ಸಿಳ್ಳೆ ಹಾಕುವ ಹಾಗೆ ಕೂಗುತ್ತವೆ. ಹೆಣ್ಣು 4-6 ಮರಿಗಳನ್ನು ಒಮ್ಮೆಗೆ ಹಾಕುತ್ತದೆ. ಬೇಟೆ ನಾಯಿ ಜೋರಾಗಿ ಓಡಬಲ್ಲುದು. ಗಂಟೆಗೆ 45 ಮೈಲಿ ವೇಗದಲ್ಲಿ ಓಡಬಲ್ಲುದು. ನಮ್ಮ ಕರ್ನಾಟಕದ ಕೃಪಾಕರ್ – ಸೇನಾನಿಯವರು ಬೇಟೆ ನಾಯಿಯ ಜೀವನದ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಿದ್ದಾರೆ. (2006). ಇದನ್ನು ಜಗತ್ಪ್ರಸಿದ್ಧ ಟಿ.ವಿ. ವಾಹಿನಿಯಾದ ನ್ಯಾಷನಲ್ ಜಿಯೋಗ್ರಾಫಿಕ್ ಪ್ರಸಾರ ಮಾಡಿತು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಸಂದಿವೆ. ಜಪಾನಿನ ವನ್ಯಜೀವಿ ಫಿಲಂ ಫೆಸ್ಟಿವಲ್ (2007) ಅತ್ಯುತ್ತಮ ಸಾಕ್ಷ್ಯಚಿತ್ರವೆಂದು ಸಿಂಗಾಪುರದ ಏಷ್ಯನ್ ಟೆಲಿವಿಷನ್ (2007) ಮತ್ತು ನಮ್ಮ ದೇಶದ ಪರಿಸರದ ಫಿಲಂ ಫೆಸ್ಟಿವಲ್, ವಾತಾವರಣ (2007) ಅತ್ಯುತ್ತಮ ಚಿತ್ರ ಎಂದು ಗುರುತಿಸಿವೆ.

ದೋಲ್ ಅಥವಾ ಸೀಳುನಾಯಿ

7. ನೀಲಗಿರಿ ಆಡು :
ಪರ್ವತ, ಬೆಟ್ಟಗಳಲ್ಲಿ ವಾಸಿಸುವ ಗೊರಸುಳ್ಳ ಪ್ರಾಣಿ. ಭಾರತದಲ್ಲಿ ಮಾತ್ರ ಕಾಣಬರುತ್ತದೆ. ನೀಲಗಿರಿಯ ಪರ್ವತಗಳಲ್ಲಿದೆ. ಪಶ್ಚಿಮ ಘಟ್ಟ ಹಾಗೂ ಪೂರ್ವಘಟ್ಟಗಳ ದಕ್ಷಿಣ ಭಾಗದಲ್ಲಿ ಇರುತ್ತದೆ. ಈ ಸ್ಥಳ ತಮಿಳುನಾಡು ಮತ್ತು ಕೇರಳದಲ್ಲಿದೆ. ನೀಲಗಿರಿ ಆಡು ತಮಿಳುನಾಡಿನ ರಾಜ್ಯ ಮೃಗ. ತಮಿಳಿನಲ್ಲಿ ‘ವಾರೈ‌ಆಡು’ ಎಂದು ಕರೆಯುತ್ತಾರೆ. ವಾರೈ ಅಂದರೆ ಕಡಿದಾದ ಬೆಟ್ಟಗಳು, ಕಲ್ಲುಬಂಡೆಗಳು ಅಥವಾ ಪ್ರಪಾತ. ಇದನ್ನು ಸಲೀಸಾಗಿ ಹತ್ತುವುದರಿಂದ ಪ್ರಪಾತದಲ್ಲಿರುವ ಆಡು ಎಂದೇ ಹೆಸರು. ಮಜಬೂತಾಗಿರುವ ನೀಲಗಿರಿ ತ್ಹಾರ್ ಅಥವಾ ಆಡಿನ ಮೈಮೇಲೆ ಒರಟಾದ ಕೂದಲಿದೆ. ಚೂಪಾದ ಕೂದಲಿನ ಕುತ್ತಿಗೆಯ ಮೇಲಿರುತ್ತದೆ. ಗಂಡು ಹೆಣ್ಣಿಗಿಂತ ದೊಡ್ಡದು. ಬಣ್ಣವೂ ಗಾಢ. ಎರಡರಲ್ಲಿಯೂ ಬಾಗಿದ ಕೊಂಬುಗಳಿವೆ. ಗಂಡಿನಲ್ಲಿ 40 ಸೆಂ.ಮೀ. ಮತ್ತು ಹೆಣ್ಣಿನಲ್ಲಿ 30 ಸೆಂ.ಮೀ. ಉದ್ದ ಇರುತ್ತದೆ. ಗಂಡು ನೀಲಗಿರಿ ಆಡು 100 ಕೆ.ಜಿ. ತೂಕ ಇರುತ್ತದೆ. ಭುಜದವರೆಗಿನ ಎತ್ತರ 100 ಸೆಂ.ಮೀ. ವಯಸ್ಕ ಗಂಡಿನ ಬೆನ್ನಿನ ಮೇಲೆ ಒಂದು ತಿಳಿಬೂದು ಬಣ್ಣದ ಜಾಗವಿರುತ್ತದೆ. ಇದನ್ನು ಜೀನುಬೆನ್ನು ಎನ್ನುತ್ತಾರೆ.

ನೀಲಗಿರಿ ಆಡಿನ ಆವಾಸಸ್ಥಾನ ಬೆಟ್ಟಗಳ ಮೇಲಿನ ಹುಲ್ಲುಗಾವಲು. ಇವು ವಾಸಿಸುವ ಎತ್ತರ 1200-2600 ಮೀ. ಈ ಎತ್ತರದಲ್ಲಿ ‘ಅಲ್ಲಲ್ಲೇ ಚಿಕ್ಕ ಕಾಡುಗಳು (ಶೋಲಾ) ಇರುತ್ತವೆ. ಅಲ್ಲಲ್ಲೇ ಮಧ್ಯದಲ್ಲಿ ಹುಲ್ಲುಗಾವಲೂ ಇರುತ್ತದೆ. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಸುಮಾರು ನೂರು ನೀಲಗಿರಿ ಆಡುಗಳು ಮಾತ್ರ ಇದ್ದುವು. ಇವುಗಳ ವ್ಯಾಪ್ತಿ 400 ಕಿ.ಮೀ.. ಈಗ ಸಂಖ್ಯೆ ಸ್ವಲ್ಪ ಸುಧಾರಿಸಿ ಸುಮಾರು 4000 ದಷ್ಟು ಇವೆ. ಕೇರಳದ ಎರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿ, 2014 ರಲ್ಲಿ ಕೇರಳದ ವ್ಯವಸಾಯ ಮತ್ತು ಅರಣ್ಯ ವಿಭಾಗ ನಡೆಸಿದ ಗಣತಿಯಲ್ಲಿ 894 ಆಡುಗಳಿವೆ. ನೀಲಗಿರಿ ಬೆಟ್ಟಗಳು, ಆನಮಲೈ ಬೆಟ್ಟ, ಪಳನಿ ಬೆಟ್ಟ ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನದಲ್ಲಿಯೂ ನೀಲಗಿರಿ ಆಡುಗಳು ಕಂಡುಬರುತ್ತವೆ. ನೀಲಗಿರಿ ಆಡುಗಳ ಸಂಖ್ಯೆ ಕ್ಷೀಣಿಸುವುದಕ್ಕೆ ಅವುಗಳ ಕಳ್ಳಬೇಟೆ ಮತ್ತು ಆವಾಸಸ್ಥಾನದ ನಾಶ ಕಾರಣ. ಆದ್ದರಿಂದ ವಿನಾಶದ ಅಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲಾಗಿದೆ.

8.ಏಷ್ಯಾದ ಸಿಂಹ :
ಭಾರತದ ಸಿಂಹ ಅಳಿವಿನಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ಒಂದು ಕಾಲದಲ್ಲಿ ಏಷ್ಯಾದ ಸಿಂಹ ಪಶ್ಚಿಮ ಏಷ್ಯಾ, ಮಧ್ಯಪೂರ್ವದೇಶಗಳು ಮತ್ತು ಉತ್ತರ ಭಾರತದಲ್ಲಿ ಕಾಣಬರುತ್ತಿದೆ. ಆದರೆ ಈಗ ಭಾರತದ ಗುಜರಾತ್‌ನ ಗಿರ್ ಪ್ರದೇಶದಲ್ಲಿ ಮಾತ್ರ ಉಳಿದುಕೊಂಡಿವೆ. ಗಿರ್ ರಕ್ಷಿತ ಅರಣ್ಯ ಮತ್ತು ಹತ್ತಿರದ ಸ್ಥಳಗಳಲ್ಲಿ ಮಾತ್ರ ಕಾಣಬರುತ್ತವೆ. ಇದರ ಸಂಖ್ಯೆ ಬಹಳವಾಗಿ ಕ್ಷೀಣಿಸಿತ್ತು. ಈಗ ಸ್ವಲ್ಪ ಸುಧಾರಿಸಿದೆ. 2015 ರಲ್ಲಿ 513 ಸಿಂಹಗಳಿದ್ದುವು. 2020 ರಲ್ಲಿ ಇದು 674 ಕ್ಕೆ ಏರಿಕೆಯಾಗಿದೆ. ಸಿಂಹ ಬಹಳ ಬಲಶಾಲಿ ಮಾಂಸಾಹಾರಿ ಪ್ರಾಣಿ. ಕಥೆಗಳಲ್ಲಿ ‘ಕಾಡಿನ ರಾಜ’ ಎಂದೇ ಕರೆಸಿಕೊಳ್ಳುತ್ತದೆ. ಇದರ ವೈಜ್ಞಾನಿಕ ಹೆಸರು ಪ್ಯಾಂಥೇರ್ ಲಿಯೋ ಪರ್ಸಿಕ (Pಚಿಟಿಣheಡಿಚಿ ಟeo ಠಿeಡಿsiಛಿಚಿ) ಇದರ ಆಹಾರ ಕಾಡಿನಲ್ಲಿರುವ ದೊಡ್ಡ ಸಸ್ಯಾಹಾರಿ ಪ್ರಾಣಿಗಳಾದ ಕಾಡುಹಂದಿ, ಕಾಡೆಮ್ಮೆ, ಕಡವೆ ಮತ್ತು ಜಿಂಕೆಗಳು. ಗಂಭೀರವಾಗಿರುವ ಪ್ರಾಣಿ. ಇದನ್ನು ಕೆಣಕದೆ ಇದ್ದರೆ ತಂಟೆಗೆ ಬರುವುದಿಲ್ಲ. ಇದರ ವಾಸಕ್ಕೆ ಕಾಡಿನಲ್ಲಿರುವ ಹುಲ್ಲುಗಾವಲುಗಳು ಬೇಕು. ಇವು ಈಗ ಪಾಲಾಗಿ ಹೋಗಿ ಆವಾಸಸ್ಥಾನದ ಕೊರತೆಯು ಸಿಂಹಗಳನ್ನು ಕಾಡುತ್ತಿದೆ. ಗಿರ್ ಅರಣ್ಯದೊಳಗೇ ಮೂರು ಮುಖ್ಯ ರಸ್ತೆಗಳಿವೆ. ಮೂರು ದೇವಸ್ಥಾನಗಳಿವೆ. ಇಲ್ಲಿ ಜನರು ಸೇರುತ್ತಾರೆ. ಇದಲ್ಲದೆ ದನಕರುಗಳು ಮೇಯಲು ಕಾಡಿಗೆ ಬರುತ್ತವೆ. ‘ಗಿರ್’ ಅರಣ್ಯದಲ್ಲಿ ಹುಲ್ಲುಗಾವಲನ್ನು ರಕ್ಷಿಸಬೇಕು. ಇಲ್ಲಿ ಮರಗಳನ್ನು ನೆಟ್ಟು ಕಾಡನ್ನು ಸೃಷ್ಟಿಸಬಾರದು. ಸಿಂಹಕ್ಕೆ ವಾಸ ಮಾಡಲು ಒಣ ಎಲೆ ಉದುರುವ ಕಾಡು, ಮುಳ್ಳುಗಿಡಗಳ ಕಾಡು ಮತ್ತು ಸವನ್ನಾ (ಮಧ್ಯೆ ಮರ ಇರುವ ಹುಲ್ಲುಗಾವಲು) ಬೇಕಾಗಿದೆ.

ಭಾರತದ ಸಿಂಹ ಒಂದೇ ಉಪಸಮುದಾಯಕ್ಕೆ ಸೇರಿದ್ದು, ಇದು ಆತಂಕಕಾರಿ ವಿಷಯವಾಗಿದೆ. ಯಾವುದಾದರೂ ಸಾಂಕ್ರಾಮಿಕ ಖಾಯಿಲೆ ಬಂದರೆ, ಕಾಳ್ಗಿಚ್ಚು ಹರಡಿದರೆ ಇಡೀ ಸಮುದಾಯವೇ ನಿರ್ನಾಮ ಆಗಿಬಿಡಬಹುದು. ಇದಲ್ಲದೆ ಕಳ್ಳಬೇಟೆ ಕೂಡ ಒಂದು ಆತಂಕ.

ಸಿಂಹಭವ್ಯವಾದ ದೊಡ್ಡ ಪ್ರಾಣಿ. ಗಂಡು ಸಿಂಹದ ತೂಕ 160-190 ಕೆ.ಜಿ. ಹೆಣ್ಣಿನ ತೂಕ 110-120 ಕೆ.ಜಿ. ಇರುತ್ತದೆ. ಗಂಡಿಗೆ ಕತ್ತು ಮತ್ತು ಮುಖದಲ್ಲಿ ಕೇಸರವಿರುತ್ತದೆ. ಸಿಂಹದ ಇನ್ನೊಂದು ಹೆಸರು ಕೇಸರಿ. ಭುಜದವರೆಗಿನ ಎತ್ತರ 3.5 ಅಡಿಗಳು. ಬಾಲವನ್ನೂ ಸೇರಿಸಿ 2.92 ಮೀ.ನಷ್ಟು ಇರುತ್ತದೆ. ಆಫ್ರಿಕಾ ದೇಶದಲ್ಲಿಯೂ ಸಿಂಹ ವಾಸಿಸುತ್ತದೆ. ಆದರೆ ಇದು ಸ್ವಲ್ಪ ಭಿನ್ನ. ಭಾರತದಲ್ಲಿರುವ ಸಿಂಹದ ಕಿವಿಗಳು ಯಾವಾಗಲೂ ಕಾಣುತ್ತವೆ. ಆಫ್ರಿಕಾ ದೇಶದ ಸಿಂಹದಲ್ಲಿ ಕೇಸರ ಇದನ್ನು ಮುಚ್ಚಿರುತ್ತದೆ. ಭಾರತದ ಸಿಂಹದಲ್ಲಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಒಂದು ಚರ್ಮದ ಮಡಿಕೆ ಉದ್ದಕ್ಕೂ ಇರುತ್ತದೆ.

(ಮುಂದುವರಿಯುವುದು..)

ಡಾ.ಎಸ್.ಸುಧಾ, ಮೈಸೂರು

4 Responses

  1. ತುಂಬಾ.. ಮಾಹಿತಿಯನ್ನು… ಕೊಡುತ್ತಿರುವ…ಲೇಖನ… ಧನ್ಯವಾದಗಳು… ಸುಧಾಮೇಡಂ.

    • sudha says:

      ನಮಸ್ಕಾರ. ಧನ್ಯವಾದಗಳು ನಾಗರತ್ನ. ನಾವು ಈ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ಇವು ಅಳಿದು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಈ ಲೇಖನ.

  2. ನಯನ ಬಜಕೂಡ್ಲು says:

    ಕಾಳಜಿಯಿಂದ ಕೂಡಿದ ಮಾಹಿತಿಪೂರ್ಣ ಲೇಖನ

  3. ಆಶಾ ನೂಜಿ says:

    ಚೆನ್ನಾಗಿ ಬರೆದಿರುವಿರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: