ತ್ರೇತಾಯುಗದಲ್ಲಿ ಅಯೋಧ್ಯೆಯಿಂದ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟ ರಾಮನ ಹೆಜ್ಜೆ ಗುರುತು ಭಾರತವರ್ಷದೆಲ್ಲೆಡೆ ಮೂಡಿರುವುದು ಸೋಜಿಗದ ಸಂಗತಿಯಲ್ಲವೇ? ವಿಷ್ಣುವಿನ ಅವತಾರವಾದ ಶ್ರೀರಾಮನ ಸ್ನಾನ ಸಂಧ್ಯಾವಂದನೆಗಳಿಗೆ ಅವಶ್ಯಕವಾದ ನೀರು ಬೇಕಲ್ಲ. ರಾಮನು ತನ್ನ ಬಾಣಗಳಿಂದಲೇ ಭೂದೇವಿಯ ಒಡಲೊಳಗಿಂದ ಚಿಮ್ಮಿಸುವನು ಗಂಗೆಯನ್ನು. ರಾಮನನ್ನು ಕಂಡ ಶಿವನು ಆ ಪವಿತ್ರ ಕ್ಷೇತ್ರದಲ್ಲಿ ಉದ್ಭವ ಮೂರ್ತಿಯಾಗಿ ಒಡಮೂಡುವನು. ರಾಮನಿಂದ ಪೂಜಿಸಲ್ಪಟ್ಟ ಶಿವಲಿಂಗವು ರಾಮೇಶ್ವರನೆಂದು ಪ್ರಖ್ಯಾತಿಯಾಗುವುದು. ಈ ಸಂಗತಿ ಕಾಲ್ಪನಿಕವೋ ಅಥವಾ ವಾಸ್ತವವೋ ತಿಳಿಯದು. ಆದರೆ ಹಲವು ದೇಗುಲಗಳ ಪೌರಾಣಿಕ ಹಿನ್ನೆಲೆ ಇದು.
ಈಗ ನಾವು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿಯ ತೀರ್ಥರಾಮೇಶ್ವರ ದೇಗುಲಕ್ಕೆ ಹೋಗೋಣ ಬನ್ನಿ. ಬಯಲುಸೀಮೆಯವಳಾದ ನನಗೆ, 1982 ರಲ್ಲಿ ಚಿತ್ರದುರ್ಗದಿಂದ ಶಿವಮೊಗ್ಗಾಕ್ಕೆ ವರ್ಗಾವಣೆಯಾದಾಗ ಈ ದೇಗುಲಕ್ಕೆ ಹೋಗುವ ಸೌಭಾಗ್ಯ ದೊರೆತಿತ್ತು. ಸಮಯ ದೊರೆತಾಗಲೆಲ್ಲಾ ಬಂಧು ಬಾಂಧವರನ್ನು ಕರೆದುಕೊಂಡು ಈ ದೇಗುಲಕ್ಕೆ ಹೋಗುತ್ತಿದ್ದೆವು. ನನಗೆ ಈ ದೇವಾಲಯ ವಿಶೇಷವಾದ ಅನುಭವ ನೀಡಿತ್ತು. ದೇಗುಲದ ಸುತ್ತಲೂ ಹಚ್ಚ ಹಸಿರು ಹೊದ್ದ ಬೆಟ್ಟ ಗುಡ್ಡಗಳು ನನ್ನಲ್ಲಿ ಉತ್ಸಾಹ ಲವಲವಿಕೆಯನ್ನು ಮೂಡಿಸಿದ್ದವು. ಬೆಟ್ಟದ ಮೇಲಿದ್ದ ದೇಗುಲ ತಲುಪಲು ಸುಮಾರು 270 ಮೆಟ್ಟಿಲುಗಳನ್ನು ಹತ್ತಬೇಕಿತ್ತು. ದೇಗುಲದ ಪ್ರವೇಶ ದ್ವಾರದಲ್ಲಿತ್ತು ಒಂದು ಮಂಟಪ, ಈ ಮಂಟಪದ ಮೇಲ್ಭಾಗದಲ್ಲಿ ತನ್ನ ವಾಹನವಾದ ಮೊಸಳೆಯ ಮೇಲೆ ಆಸೀನಳಾಗಿದ್ದಳು ಗಂಗಾಮಾತೆ. ಅಲ್ಲಿದ್ದ ಬಸವನ ಬಾಯಿಂದ ಗಂಗೆಯು ಚಿಮ್ಮುತ್ತಿದ್ದಳು. ಭಕ್ತರೆಲ್ಲರೂ ಆ ಪವಿತ್ರವಾದ ಜಲವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡು ರಾಮೇಶ್ವರನ ದರ್ಶನಕ್ಕೆ ತೆರಳುತ್ತಿದ್ದರು. ಪ್ರಧಾನ ಅರ್ಚಕರು, ‘ಈ ಕೊಳದ ನೀರು ಕಾಶಿಯಿಂದ ಹರಿದು ಬರುವುದೆಂಬ ಪ್ರತೀತಿಯಿದೆ. ಈ ನೀರು ಹಲವು ಗಿಡ ಮರಗಳ ನಡುವಿನಿಂದ ಹರಿದು ಬರುವುದರಿಂದ ಔಷಧೀಯ ಗುಣಗಳನ್ನು ಹೊಂದಿದೆ. ಈ ನೀರಿಗೆ ಚರ್ಮರೋಗಗಳನ್ನು ವಾಸಿ ಮಾಡುವ ಶಕ್ತಿಯೂ ಇದ್ದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಈ ಕೊಳದ ನೀರು ಮಳೆಗಾಲದಲ್ಲಿ ಉಕ್ಕಿ ಹರಿಯುವುದೂ ಇಲ್ಲ, ಬೇಸಿಗೆಯಲ್ಲಿ ಬತ್ತುವುದೂ ಇಲ್ಲ, ಎಲ್ಲಾ ಕಾಲದಲ್ಲೂ ನೀರಿನ ಮಟ್ಟ ಒಂದೇ ಆಗಿರುವುದು.’ ಎಂದು ಹೇಳಿದಾಗ ಬೆರಗಾಗುವ ಸರದಿ ನಮ್ಮದಾಗಿತ್ತು. ಕೊಳದಲ್ಲಿದ್ದ ನೀರು ಶುಭ್ರವಾಗಿತ್ತು. ಪೂಜಾರಿಯೊಬ್ಬರು, ಪುಟ್ಟ ಪುಟ್ಟ ಕೊಡಗಳಿಗೆ ಹಗ್ಗ ಕಟ್ಟಿ ನೀರನ್ನು ಸೇದಿ ಭಕ್ತರ ಬೊಗಸೆಗಳಿಗೆ ಸುರಿಯುತ್ತಿದ್ದರು. ಅಷ್ಟೊಂದು ಮೆಟ್ಟ್ಡಿಲುಗಳನ್ನು ಏರಿ ಬಂದ ನಮಗೆ ದಣಿವಾಗಿತ್ತು, ನೀರಡಿಕೆಯಾಗಿತ್ತು. ನೀರನ್ನು ಬೊಗಸೆಯಲ್ಲಿ ತುಂಬಿಸಿ ಕುಡಿದೆವು. ನೀರು ಎಳನೀರಿನಂತೆ ಸವಿಯಾಗಿತ್ತು. ದಣಿವಾರಿಸಿಕೊಂಡು ದೇಗುಲದತ್ತ ಹೆಜ್ಜೆ ಹಾಕಿದೆವು.
ಹಸಿರಿನ ಮಧ್ಯೆ ಕಂಗೊಳಿಸುತ್ತಿದ್ದ ಸುಂದರವಾದ ದೇವಾಲಯ. ದೇವಾಲಯದ ಗರ್ಭಗುಡಿಯಲ್ಲಿ ಉದ್ಭವ ಮೂರ್ತಿಯಾಗಿ ಹೊಮ್ಮಿದ ಶಿವಲಿಂಗಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಿದ್ದ ಅರ್ಚಕರು. ಈ ಶಿವಲಿಂಗವನ್ನು ಮೊದಲಿಗೆ ಶ್ರೀರಾಮನು ಪೂಜಿಸಿದ್ದುದರಿಂದ ರಾಮೇಶ್ವರನೆಂಬ ನಾಮಧೇಯ. ಅಲ್ಲಿ ಮತ್ತೊಂದ ವಿಶೇಷ ಸಂಗತಿಯೂ ಮನಸೆಳೆದಿತ್ತು. ಸಾಮಾನ್ಯವಾಗಿ ಗರ್ಭಗುಡಿಯ ಮುಂದಿನ ಹಜಾರದಲ್ಲಿ ಶಿವನ ವಾಹನವಾದ ನಂದಿಯ ವಿಗ್ರಹ ಪ್ರತಿಷ್ಠಾಪನೆಯಾಗಿರುವುದನ್ನು ನಾವು ಕಾಣುತ್ತೇವೆ. ಆದರಿಲ್ಲಿ ಒಂದಲ್ಲ ಎರಡು ನಂದಿಯ ವಿಗ್ರಹಗಳು ಗರ್ಭಗುಡಿಯಲ್ಲಿದ್ದ ಶಿವನ ಮುಂದೆಯೇ ಪ್ರತಿಷ್ಠಾಪಿಸಲ್ಪಟ್ಟಿದ್ದವು. ಅವುಗಳಿಗೆ, ‘ಭೋಗನಂದಿ ಹಾಗೂ ಯೋಗನಂದಿ’ ಎಂಬ ನಾಮಕರಣವನ್ನೂ ಮಾಡಲಾಗಿದೆ. ಹಾಗೆಯೇ ‘ವೈರಾಗ್ಯ ನಂದಿ ಹಾಗೂ ವೈಭೋಗ ನಂದಿ’ ಎಂಬ ಹೆಸರೂ ಚಾಲ್ತಿಯಲ್ಲಿದೆ. ಸಹನೆಯ ಪ್ರತೀಕವಾದ ನಂದಿ ವಿಗ್ರಹಗಳು ತಮ್ಮ ಒಡೆಯನಿಗಾಗಿ ಕಾಯುತ್ತಾ ಕುಳಿತಿದ್ದವು. ನಾವು ಪೂಜೆಯಲ್ಲಿ ಪಾಲ್ಗೊಂಡು, ಮಂಗಳಾರತಿಯನ್ನೂ, ಪ್ರಸಾದವನ್ನು ತೆಗೆದುಕೊಂಡು ಹೊರಬಂದೆವು.
ದೇಗುಲದ ಎಡಭಾಗದಲ್ಲಿ ಮತ್ತೊಂದು ಅಪರೂಪವಾದ ಗುಡಿ ಇತ್ತು, ಅದೇ ಚತುರ್ಮುಖ ಬ್ರಹ್ಮನ ಗುಡಿ. ಅರೇ ಇದೇನಿದು, ಸಾಮಾನ್ಯವಾಗಿ ಸೃಷ್ಟಿಗೆ ಕಾರಣ ಕರ್ತನಾದ ಬ್ರಹ್ಮನ ಗುಡಿ ಕಾಣಸಿಗುವುದೇ ಇಲ್ಲವಲ್ಲ ಎಂದು ಅಚ್ಚರಿಯಿಂದ ಒಳಗೆ ಕಾಲಿಟ್ಟೆವು. ಬ್ರಹ್ಮನ ವಿಗ್ರಹದ ಮುಂಭಾಗದಲ್ಲಿ ಮೂರು ಮುಖಗಳಿದ್ದು, ನಾಲ್ಕನೆಯ ಮುಖ ವಿಗ್ರಹದ ಹಿಂಬದಿಯಲ್ಲಿ ಇತ್ತು. ಅಲ್ಲೊಂದು ಕನ್ನಡಿಯಿದ್ದುದರಿಂದ, ಭಕ್ತರಿಗೆ ನಾಲ್ಕನೆಯ ಮುಖದ ದರ್ಶನವೂ ಲಭ್ಯ. ಅರ್ಚಕರು ಬ್ರಹ್ಮನ ಪೌರಾಣಿಕ ಹಿನ್ನೆಲೆಯನ್ನು ಸ್ವಾರಸ್ಯಕರವಾಗಿ ಬಣ್ಣಿಸುತ್ತಿದ್ದರು, ‘ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಮೇಲು ಎಂಬುದರ ವಾಗ್ವಾದ ನಡೆಯುತ್ತಿತ್ತು. ಆಗ ಅಲ್ಲಿಗೆ ಬಂದ ಪರಶಿವನು, ಅವರ ವಾದಕ್ಕೆ ಮಂಗಳ ಹಾಡಲು ಒಂದು ಸವಾಲನ್ನು ಒಡ್ಡುತ್ತಾನೆ. ಶಿವನು ಒಂದು ಜ್ಯೋತಿಯ ರೂಪ ತಾಳುತ್ತಾನೆ ಹಾಗೂ ಈ ಜ್ಯೋತಿಯ ಆದಿಯನ್ನು ಹಾಗೂ ಅಂತ್ಯವನ್ನು ಮುಟ್ಟಿ ಬನ್ನಿ ಎಂದು ಸವಾಲೆಸೆಯುತ್ತಾನೆ. ಬ್ರಹ್ಮನು ಹಂಸಪಕ್ಷಿಯ ರೂಪತಾಳಿ ಆಗಸದಲ್ಲಿ ಹಾರುತ್ತಾ ಜ್ಯೋತಿಯ ತುದಿಯನ್ನು ಕಾಣಲು ಸ್ವರ್ಗಲೋಕದತ್ತ ಧಾವಿಸುವನು. ವಿಷ್ಣುವು ವರಾಹದ ರೂಪತಾಳಿ ಭೂಮಿಯನ್ನು ತನ್ನ ಕೋರೆದಾಡುಗಳಿಂದ ಅಗೆಯುತ್ತಾ ಪಾತಾಳಕ್ಕೆ ಧುಮುಕುವನು. ಆದರೆ ಇಬ್ಬರಿಗೂ ಜ್ಯೋತಿಯ ಆದಿ ಅಂತ್ಯಗಳು ಗೋಚರವಾಗುದೇ ಇಲ್ಲ. ವಿಷ್ಣುವು ಹಿಂತಿರುಗಿ ಬಂದು ತನಗೆ ಈ ಪರಂಜ್ಯೋತಿಯ ಆದಿಯು ಗೋಚರಿಸಲೇಯಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವನು. ಆದರೆ ಬ್ರಹ್ಮನು ತಾನು ಗೆದ್ದೆನೆಂದು ಬಿಂಬಿಸಿಕೊಳ್ಳಲು, ಆ ಮಹಾಜ್ಯೋತಿಯ ಅಂತ್ಯವನ್ನು ಕಂಡೆನೆಂದು ಸುಳ್ಳಾಡುತ್ತಾನೆ. ಬ್ರಹ್ಮನ ಮಾತುಗಳನ್ನು ಕೇಳಿದ ಶಿವನು, ‘ನೀನು ಸುಳ್ಳಾಡಿದೆ. ಇನ್ನು ಮುಂದೆ ಈ ಭೂಲೋಕದಲ್ಲಿ ನಿನಗೆ ಯಾರೂ ಪೂಜೆ ಸಲ್ಲಿಸದಿರಲಿ’ ಎಂದು ಶಪಿಸುತ್ತಾನೆ. ಅಂದಿನಿಂದ ಸೃಷ್ಟಿಕರ್ತನಾದ ಬ್ರಹ್ಮದೇವರ ಗುಡಿಗಳು ಕಾಣಬರುವುದೇ ಇಲ್ಲ.’
ಇನ್ನು ಶಿವನ ಮೂರ್ತಿ ಇದ್ದ ಮೇಲೆ ಅವನ ಸತಿ ಪಾರ್ವತಿಯ ಮೂರ್ತಿಯೂ ಇರಲೇ ಬೇಕಲ್ಲ. ಇನ್ನು ವಿಘ್ನಗಳನ್ನೆಲ್ಲಾ ನಿವಾರಿಸುವ ಗಣಪನ ಮೂರ್ತಿಯೂ ಅಲ್ಲಿತ್ತು. ಎಲ್ಲಾ ದೇವಾನುದೇವತೆಗಳಿಗೆ ಭಕ್ತಿಯಿಂದ ವಂದಿಸಿ ಅಲ್ಲಿಂದ ಹೊರಟೆವು. ಈ ದೇಗುಲದ ಇತಿಹಾಸವನ್ನು ಅಲ್ಲಿದ್ದ ಅರ್ಚಕರು ಹೇಳಲು ಆರಂಭಿಸಿದರು, ‘1339 ರಲ್ಲಿ ವಿಜಯನಗರದ ಅರಸರು ಈ ದೇಗುಲದ ನಿರ್ಮಾಣ ಮಾಡಿದರು. ನಂತರದಲ್ಲಿ ಬಹುಮನಿ ಸುಲ್ತಾನರ ದಾಳಿಗೆ ತುತ್ತಾದ ದೇಗುಲವನ್ನು ಪುನರುಜ್ಜೀವಗೊಳಿಸಿದವರು ಮೈಸೂರಿನ ಮಹಾರಾಜರು. ಈಗ ಈ ದೇಗುಲವು ಮುಜರಾಯಿ ಇಲಾಖೆಗೆ ಸೇರಿದೆ. ವರ್ಷದಲ್ಲಿ ಒಮ್ಮೆ ರಾಮೇಶ್ವರ ಸ್ವಾಮಿಯ ಜಾತ್ರಾಮಹೋತ್ಸವವನ್ನು ವೈಭವದಿಂದ ಆಚರಿಸುವರು. ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದು ಬರುವುದು. ಈ ಜಾತ್ರೆಯಲ್ಲಿ ಪಾಲ್ಗೊಂಡರೆ ತಮ್ಮ ಮನೋಕಾಮನೆಗಳೆಲ್ಲಾ ಈಡೇರುವವು ಎಂಬ ನಂಬಿಕೆಯೂ ಇದೆ. ಈ ದೇಗುಲದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ದರ್ಶನ ಪಡೆಯುವ ಸೌಭಾಗ್ಯ ಅಂದು ನಮ್ಮದಾಗಿತ್ತು. ‘ಹರ ನಮಃ ಪಾರ್ವತೀ ಪತಿ ಹರಹರ ಮಹಾದೇವ್, ಶಿವ ನಮಃ ಪಾರ್ವತೀ ಪತಿ ಹರಹರ ಮಹಾದೇವ್, ಎಂಬ ಜಯಘೋಷ ಮಾರ್ದನಿಸುತ್ತಿತ್ತು.
ಈ ನಿಸರ್ಗದ ಮಡಿಲಲ್ಲಿದ್ದ ದೇಗುಲದ ಹಿಂಬಾಗದಲ್ಲಿರುವ ಬೆಟ್ಟದ ಬುಡದಲ್ಲಿದ್ದ ಫಲಕವೊಂದು ನಮ್ಮ ಗಮನ ಸೆಳೆದಿತ್ತು. ‘ಕರಡಿ, ಚಿರತೆ ಮುಂತಾದ ಕಾಡುಮೃಗಗಳಿವೆ, ಬೆಟ್ಟ ಹತ್ತಬೇಡಿ’. ಆಗೊಂದು ಆಲೋಚನೆ ಮನದಲ್ಲಿ ಸುಳಿದಿತ್ತು-ಯಾರು ಕಾಡುಮೃಗಗಳು, ಪ್ರಕೃತಿಯನ್ನೂ ಕಾಡಿನಲ್ಲಿರುವ ಮೃಗಗಳನ್ನೂ ವಿನಾಶದ ಅಂಚಿಗೆ ತಂದು ನಿಲ್ಲಿಸಿರುವ ಸ್ವಾರ್ಥಿಯಾದ ಮಾನವನೇ ಅಥವಾ ಆಹಾರವನ್ನು ಅರಸುತ್ತಾ ಆಗಾಗ್ಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಚಿರತೆ ಕರಡಿಗಳೆಂಬ ಪ್ರಾಣಿಗಳೇ? ಸನಾತನ ಧರ್ಮದಲ್ಲಿ ಮಾನವನಿಗೆ ನಿಸರ್ಗದ ಮಡಿಲಲ್ಲಿ ಬದುಕುವ ಎಲ್ಲಾ ಪಶುಪಕ್ಷಿಗಳೊಂದಿಗೆ ಸಾಮರಸ್ಯದಿಂದ ಬಾಳುವ ಸಂದೇಶವನ್ನೂ ನೀಡಿದ್ದರು. ಆದರೆ ದುರಾಸೆಗೆ ತುತ್ತಾದ ಮನುಜನು ತನ್ನ ವೈಭೋಗದ ಜೀವನಕ್ಕಾಗಿ ಎಲ್ಲದರ ಮಾರಣಹೋಮ ಮಾಡುತ್ತಿರುವನು ಅಲ್ಲವೇ? ಬೆಟ್ಟಗಳ ಮೇಲೆ ಹಾಗೂ ನದೀ ತೀರದಲ್ಲಿರುವ ದೇಗುಲಗಳು ಮತ್ತೆ ಮತ್ತೆ ಹೇಳುತ್ತಿವೆ, ‘ಹೇ ಮಾನವನೇ, ಪ್ರಕೃತಿಯನ್ನು ಸಂರಕ್ಷಿಸು. ನಿಲ್ಲು, ಎಲ್ಲರೊಂದಿಗೆ ಸಹಬಾಳ್ವೆ ನಡೆಸು,.’

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ