(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
¨ರಾಮ್‌ವರ್ಮ ಲೈಬ್ರರಿಯಲ್ಲಿದ್ದ ಪುಸ್ತಕಗಳು, ಅವರು ಕೆಲವು ಪದ್ಯಗಳ ಬಗ್ಗೆ, ಡ್ರಾಮಾಗಳ ಬಗ್ಗೆ ಬರೆದಿಟ್ಟಿದ್ದ ಅಭಿಪ್ರಾಯಗಳು ರಾಗಿಣಿಗೆ, ವಾರುಣಿಗೆ ಬಹಳ ಸಹಾಯವಾದವು. ಕಷ್ಟಪಟ್ಟು ಓದುವ ಹುಡುಗಿಯರಾಗಿದ್ದರಿಂದ, ಬುದ್ಧಿವಂತರೆಂದು ಗುರುತಿಸಿಕೊಳ್ಳಲು ಕಷ್ಟವಾಗಲಿಲ್ಲ. ಸಾಮಾನ್ಯವಾಗಿ ಭಾನುವಾರಗಳಲ್ಲಿ ರಾಗಿಣಿ ಚಂದ್ರಾ ಆಂಟಿ ಮನೆಗೆ ಬರುತ್ತಿದ್ದಳು. ಇಬ್ಬರೂ ಒಟ್ಟಿಗೆ ವರ್ಕ್ ಮಾಡುತ್ತಿದ್ದರು.
ಒಂದು ಭಾನುವಾರ ಚಂದ್ರಾ ಕೇಳಿದರು. “ನಿಮ್ಮಿಬ್ಬರಿಗೂ ಮೂವಿ ನೋಡುವ ಅಭ್ಯಾಸವಿಲ್ಲವಾ?”
“ನಾನು ತುಂಬಾ ಸಿನಿಮಾ ನೋಡ್ತಿದ್ದೆ. ಇಲ್ಲಿಗೆ ಬಂದ ಮೇಲೆ ಎಲ್ಲಾ ಅಭ್ಯಾಸ ನಿಂತುಹೋಗಿದೆ.”
“ನೀನು ವರು?”
“ಮನೆಯವರ ಜೊತೆ ಹೋಗ್ತಿರಲಿಲ್ಲ. ನಾನು ಮಾನಸ ಯಾವಾಗಲಾದರೂ ಹೋಗ್ತಿದ್ವಿ……..”
“ನಿನ್ನ ತಂಗಿ ತಮ್ಮ…….”
“ದೇವಕಿ ಅತ್ತೆ ಏನಾದರೂ ಕೆಲಸ ಹೇಳಿದರೆ ಸಿನಿಮಾಕ್ಕೆ ಕರ‍್ಕೊಂಡು ಹೋಗಬೇಕೂಂತ ಕಂಡಿಷನ್ಸ್ ಹಾಕ್ತಾರೆ. ಅವರು ಕರೆದುಕೊಂಡು ಹೋಗ್ತಾರೆ.”
“ಈ ಊರಲ್ಲಿ ನೀವಿಬ್ಬರೇ ಹೋಗಕ್ಕಾಗಲಾ?”
“ಆಗಲ್ಲ” ಎಂದಳು ರಾಗಿಣಿ.
“ಯಾಕಮ್ಮ?”
“ಆಂಟಿ, ನೀವು ಬಂದರೆ ನಾವೂ ಹೋಗ್ತೀವಿ. ಶಾರದಾಗೆ ಟಿ.ವಿ. ನೋಡಿ ಅಭ್ಯಾಸವಿರೋದ್ರಿಂದ ಸಿನಿಮಾ ನೋಡ್ತಾಳೆ………”
“ನನಗೆ ಅಭ್ಯಾಸ ತಪ್ಪಿಹೋಗಿದೆ. ಅದೂ ಅಲ್ಲದೆ ನನಗೆ ಹೊರಗೆ ಹೋಗುವ ಅಭ್ಯ್ಯಾಸ ತಪ್ಪಿ ಹೋಗಿದೆ. ಯಾಕೋ ಹೊರಗೆ ಹೋಗಕ್ಕೆ ಮನಸ್ಸೇ ಬರಲ್ಲ……”
“ಯಾಕೆ ಈ ತರಹ ಶಿಕ್ಷೆ ಕೊಟ್ಟುಕೊಳ್ತಿದ್ದೀರ? ನೀವು ಏನು ಅಪರಾಧ ಮಾಡಿದ್ದೀರಾ? ಜನರಿಂದ ಮುಖ ಮರೆಸಿಕೊಂಡು ಇರುವಂಥಹದ್ದು ಏನಾಗಿದೆ?”
“ಹಾಗಲ್ಲ…….”
“ಕಾಲ ಕಳೆದಂತೆ ಜನರು ಹಳೆಯದನ್ನು ಮರೆಯುತ್ತಾರೆ. ಹೊಸ ವಿಷಯದ ಬಗ್ಗೆ ಮಾತಾಡ್ತಾರೆ. ಒಂದು ವೇಳೆ ನಿಮ್ಮ ಪರಿಚಿತರೇ ಸಿಕ್ಕಿದ್ರೂಂತಾನೇ ಇಟ್ಕೊಳ್ಳಿ. ಅವರು ನಿಮ್ಮ ಆತ್ಮಚರಿತ್ರೆ ಬರೆಯುತ್ತಾರಾ?”
“ಕೂಲ್ ಡೌನ್ ರಾಗಿಣಿ. ಆಗಲಿ ಇವತ್ತು ಫಸ್ಟ್ಶೋಗೆ ಹೋಗೋಣ. ಯಾವ ಸಿನಿಮಾ ಹೇಳು. ಟಿಕೆಟ್ಸ್ ಬುಕ್ ಮಾಡ್ತೀನಿ.”
ರಾಗಿಣಿ ಒಂದು ಕನ್ನಡ ಸಿನಿಮಾ ಬುಕ್ ಮಾಡಿದಳು.
“ಯಾವ ಫಿಲಂ?”
“ಕಾಂತಾರಾಂತ……..”
“ಓ.ಕೆ. ಅದು ಚೆನ್ನಾಗಿದೇಂತ ನನಗೆ ಗೊತ್ತು. ನಾನು ಕಾರ್ ತರಲು ಡ್ರೈವರ್‌ಗೆ ಹೇಳ್ತೀನಿ. ಈ ಸಲದ ಸಿನಿಮಾ ಖರ್ಚು ನನ್ನದು.”
“ಇಲ್ಲ ಆಂಟಿ. ಈ ಸಲ ನಾನು ಕೊಡ್ತೀನಿ. ಮುಂದಿನ ಸಲ ನೀವು ಕರೆದುಕೊಂಡು ಹೋಗಿ.”
ಸಾಯಂಕಾಲ ನಾಲ್ವರೂ ಸಿನಿಮಾ ನೋಡಿದರು. ಡ್ರೈವರ್ ಕೈಯಲ್ಲಿ ಚಂದ್ರ ಆಂಟಿ ತಮ್ಮ ಚಪಾತಿ, ಪಲ್ಯ ಕಳಿಸಿದರು.
“ಆಂಟಿ ಮುಂದಿನ ಸಲ ಮ್ಯಾಟ್ನೀಗೆ ಹೋಗಿ, ಸಾಯಂಕಾಲ ಬರುವಾಗ ಹೋಟೆಲ್‌ಗೆ ಹೋಗಿ ತಿಂದು ಬರೋಣ.”
“ಡಿಮ್ಯಾಂಡ್ ಜಾಸ್ತಿಯಾಗಿದೆ ರಾಗಿಣಿ ದೇವಿಯದು…….”
“ಆಂಟಿ ನಾನು ಕ್ಲಬ್, ಪಬ್‌ಗೆ ಹೋಗ್ತಿದ್ದೀವಿ ಅಂತಿದ್ದೀನಾ? ನಮ್ಮಂತಹ ಮಧ್ಯಮವರ್ಗದವರ ಮನರಂಜನೆ ಇಷ್ಟೇ ತಾನೆ? ಸಿನಿಮಾ ನೋಡೋದು. ಹೋಟೆಲ್‌ಗೆ ಹೋಗಿ ಮಸಾಲದೋಸೆ, ಜಾಮೂನು ತಿನ್ನೋದು…. ನಮಗೆ ಸಂತೋಷ ಕೊಡುವ ವಿಚಾರಗಳು.”
“ನೀನು ಮಧ್ಯಮವರ್ಗದವಳಾ?”
“ಹೌದು. ನನ್ನ ಕಥೇನ್ನ ವರು ಹೇಳ್ತಾಳೆ…….ಕೇಳಿ”
“ಆಂಟಿ, ಆ ವಿಚಾರ ಬಿಡಿ. ನಾವು ಹೊರಗೆ ಹೋಗ್ತಾ ಇದ್ದಿದ್ದೇ ಅಪರೂಪ. ಹೊರಗೆ ಹೋದರೆ ಮಸಾಲದೋಸೆ, ಜಾಮೂನು ಮಾತ್ರ ತಿನ್ನುತ್ತಿದ್ವಿ. ಬೇರೆ ತಿಂಡಿಗಳ ಹೆಸರೇ ಗೊತ್ತಿರಲಿಲ್ಲ. ಹೋಟೆಲ್‌ಗಳಲ್ಲಿ ಉದ್ದಿನವಡೆ ಮಾರ‍್ತಾರೆ ಅನ್ನುವುದೇ ಗೊತ್ತಿರಲಿಲ್ಲ.”
“ಹೌದು ಆಂಟಿ. ನಮ್ಮನೆಗಳಲ್ಲಿ ಶ್ರಾದ್ಧದದಿನ ಉದ್ದಿನವಡೆ ಮಾಡೋದಲ್ವಾ? ಒಂದು ಸಲ ಹೋಟೆಲ್‌ನಲ್ಲಿ ನಮ್ಮ ತಂದೆ ಉದ್ದಿನವಡೆ ಕೊಡಿಸಿದಾಗ ನಾನು ಅವರನ್ನು “ಹೋಟೆಲ್‌ವರು ತಿಥಿ ಮಾಡ್ತಾರಾಂತ ಕೇಳಿದ್ನಂತೆ” ರಾಗಿಣಿ ಹೇಳಿದಳು.
“ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ ಹೋಟೆಲ್‌ಗಳಿರಲಿಲ್ಲ. ಬೆಳಿಗ್ಗೆ ತಿಂಡಿ ಮಾಡ್ತಿರಲಿಲ್ಲ. ಅಡಿಗೆ ಮಾಡೋರು. ಅನ್ನ, ಹುಳಿ, ಸಾರು, ತೊವ್ವೆ, ಮಜ್ಜಿಗೆಹುಳಿ ಇತ್ಯಾದಿ. ನಾವು ಮೂರು ಹೊತ್ತು ಅದೇ ತಿನ್ನುತ್ತಿದ್ದೆವು. ಬೆಳಿಗ್ಗೆ ಒಂದು ಸಲ ಕಾಫಿ, ಸಾಯಂಕಾಲ ಕಾಫಿ ಅಷ್ಟೆ. ಮಡಿ ಹೆಂಗಸರು ಮನೆಯಲ್ಲಿದ್ರೆ ಅವರು ಅವಲಕ್ಕಿ ಮೊಸರೋ, ಚಟ್ನಿಪುಡಿ ಅವಲಕ್ಕಿ ತಿನ್ನೋರು. ಮಕ್ಕಳಿಗೆ ರುಚಿಗೆ ಕೊಡೋರು.”
“ತಿಂಡಿ?”
“ಅಪರೂಪವಾಗಿ ಸಾಯಂಕಾಲದ ಹೊತ್ತು ತಿಂಡಿ ಮಾಡ್ತಿದ್ರು. ಇಡ್ಲಿ, ದೋಸೆ, ರೊಟ್ಟಿ, ಉಪ್ಪಿಟ್ಟು. ಇಷ್ಟೇ ವೆರೈಟಿಗಳು ಗೊತ್ತಿದ್ದಿದ್ದು.”
“ಹೌದಾ?”
“ಅಕ್ಕಿತರಿ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ರವೆ ಉಪ್ಪಿಟ್ಟು ಮಾಡ್ತಿದ್ರು. ಈರುಳ್ಳಿ, ಟೊಮ್ಯಾಟೋ ಹಾಕದ ಉಪ್ಪಿಟ್ಟು……..”
“ಚಪಾತಿ, ಪೂರಿ, ಪರೋಟ………ಪೂರಿ……….”
“ಆ ಹೆಸರೇ ಗೊತ್ತಿರಲಿಲ್ಲ. ಶ್ರೀಮಂತರ ಮನೆಗಳಲ್ಲಿ ಮಾಡ್ತಿದ್ರೂಂತ ಕಾಣತ್ತೆ…… ಇನ್ನು ವಾಂಗಿಭಾತ್, ಬಿಸಿಬೇಳೆಭಾತ್, ಚಿತ್ರಾನ್ನಗಳ ಮುಖ ನೋಡ್ತಿದ್ದಿದ್ದು ಹಬ್ಬಗಳಲ್ಲಿ ಮಾತ್ರ……” ಚಂದ್ರಾ ಆಂಟಿ ಹೇಳಿದರು.
“ಆದರೆ ಈಗ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಕಲಸನ್ನ, ಸಾಯಂಕಾಲ ಮತ್ತೇನಾದ್ರೂ ಬಾಯಿಚಪಲಕ್ಕೆ, ರಾತ್ರಿ ಚಪಾತಿ……. ಆಹಾರ ಪದ್ಧತಿಯೇ ಬದಲಾಗಿ ಹೋಗಿದೆ ಆಂಟಿ….” ವರು ಹೇಳಿದಳು.
“ತುಂಬಾ ತಿಂಡಿಗಳ ಹೆಸರೇ ನಮಗೆ ಗೊತ್ತಿಲ್ಲ. ಇನ್ನು ನೂರೆಂಟು ತರಹ ಪಲಾವ್‌ಗಳು, ಘೀರೈಸ್, ಫ್ರೈಡ್‌ರೈಸ್ ಎಂಥಹದ್ದೋ ರೈಸ್‌ಗಳು…. ನಿಜವಾಗಿ ಬೇಜಾರು…….” ರಾಗಿಣಿ ನುಡಿದಳು.
“ಬದಲಾಗ್ತಿರುವ ಜೀವನಶೈಲಿಗೆ ಹೊಂದುಕೊಳ್ಳಲೇಬೇಕು. ಹಾಗೇ ಹೊಂದುಕೊಳ್ತಿದ್ದೇವೆ” ಬದಲಾವಣೆಯೇ ಬದುಕಲ್ವಾ?”
ಚಂದ್ರಾ ಆಂಟಿ ಸಮಾಧಾನ ಮಾಡುವಂತೆ ಹೇಳಿದರು.
“ಆಂಟಿ, ಎಲ್ಲಾ ಬದಲಾಗ್ತಿದೆ. ನಾವೂ ಬದಲಾಗೋಣ. ಆದರೆ ಹಾಗೆ ಬದಲಾಗುವಾಗ ನಮ್ಮ ತನ ಬಿಟ್ಟುಕೊಡುವುದು ಬೇಡ. ನಮ್ಮ ಭಾವನೆಗಳು, ಆಲೋಚನೆಗಳು, ಸ್ವಭಾವ, ನಮ್ಮ ಗುರಿ ಬೇರೆಯವರಿಗೋಸ್ಕರ ಬದಲಾಗಬಾರದು” ರಾಗಿಣಿ ಹೇಳಿದಳು.
“ವೆಲ್‌ಸೆಡ್” ಎಂದರು ಚಂದ್ರಾವತಿ.
ಆ ಸೆಮಿಸ್ಟರ್ ಮುಗಿಯಿತು. ಎಂಟು-ಹತ್ತು ದಿನಗಳು ಬಿಡುವು ಸಿಕ್ಕಿತು. ರಾಗಿಣಿ ವರುವನ್ನು ತಮ್ಮ ಊರಿಗೆ ಆಹ್ವಾನಿಸಿದಳು.
“ಇಲ್ಲ ರಾಗಿಣಿ, ನನಗೆ ಮನೆಯಲ್ಲಿ ಕೆಲವು ಕೆಲಸಗಳಿವೆ. ಹೋಗಲೇಬೇಕು.”
“ಏನು ಕೆಲಸ?”
“ನಮ್ಮ ದೊಡ್ಡ ಅತ್ತೆ ಮಗಳ ಜೊತೆ ಬೆಂಗಳೂರಿಗೆ ಹೋಗಿದ್ದಾರಂತೆ. ಅವರಿಂದ ನಮ್ಮನೆ ಶಾಂತಿ ಹಾಳಾಗುತ್ತದೆ. ನಾನಿದ್ದರೆ ಕಂಟ್ರೋಲ್ ಮಾಡ್ತೀನಿ.”
“ಹಾಗಿದ್ರೆ ಹೋಗು ತಾಯಿ. ನಿನ್ನನ್ನು ತಡೆಯಲ್ಲ” ಎಂದಳು ರಾಗಿಣಿ.
“ವರು ನೀನು ಹತ್ತು ದಿನ ಬೆಂಗಳೂರಿನಲ್ಲೇ ಇರಬೇಕಾ?”
“ಯಾಕೆ ಆಂಟಿ?”
“ನಾಲ್ಕು ದಿನ ಮೊದಲು ಬಂದ್ರೆ ಟೂರ್ ಹೋಗೋಣ. ರಾಗಿಣಿ ನೀನೂ ಬರಬೇಕು.”
“ನೀವು ಪ್ಲಾನ್ ಮಾಡಿ ಆಂಟಿ ಹೋಗಿ ಬರೋಣ” ಎಂದಳು ರಾಗಿಣಿ.
ಮರುದಿನ ರಾಗಿಣಿ ಮಡಿಕೇರಿ ಕಡೆಯ ಬಸ್ ಹತ್ತಿದಳು. ವಾರುಣಿ ಬೆಂಗಳೂರಿಗೆ ಹೊರಟಳು. ಅವಳು ಮನೆ ತಲುಪಿದಾಗ ಅವಳಮ್ಮ, ಶೋಭಾ ಆಂಟಿ ಅಡಿಗೆ ಮನೆಯಲ್ಲಿದ್ದರು.
“ತಿಂಡಿ ತಿನ್ನುತ್ತೀಯಾ?”
“ಬೇಡಮ್ಮ. ತಿಂಡಿ ತಿಂದುಕೊಂಡೇ ಹೊರಟಿದ್ದೀನಿ. ಕಾಫಿ ಕೊಡು ಸಾಕು.”
ಶಕುಂತಲ ಕಾಫಿ ತಂದರು.
“ಏನಮ್ಮ ಮನೆ ಇಷ್ಟು ಶಾಂತವಾಗಿದೆ? ಅತ್ತೆ ಊರಿಗೆ ಹೋದ್ರಾ?”
“ಅವರೆಲ್ಲಿ ಹೋಗ್ತಾರೆ? ತಂಗೀನ್ನ, ಜಾನಕೀನ್ನ ಕರ‍್ಕೊಂಡು ಅದ್ಯಾವುದೋ ದೇವಸ್ಥಾನಕ್ಕೆ ಹೋಗಿದ್ದಾರೆ.”
“ಸುಮಾನೂ ಹೋಗಿದ್ದಾಳಾ?”
“ಹುಂ.”
“ಅವರು ಈಗ ಬಂದಿರೋದು ಯಾಕೆ?”
“ಸುಮಾನ್ನ ಡಾಕ್ಟರ್‌ಗೆ ತೋರಿಸೋಕೆ.”
“ಅವಳಿಗೇನಾಗಿದೆ?”
“ತುಂಬಾ ದಪ್ಪ ಆಗಿದ್ದಾಳೆ. ತುಂಬಾ ಸುಸ್ತು ಅಂತರ‍್ತಾಳೆ. ಕೂತ ಜಾಗದಿಂದ ಏಳೋದೇ ಕಷ್ಟ…..”
“ಯಾವ ಡಾಕ್ಟರ್‌ಗೆ ತೋರಿಸಿದ್ರು?”
“ನಮಗೇ ಹೇಳ್ತಿದ್ದಾರೆ. ನಾವೂ ಸುಮ್ಮನಿದ್ದೇವೆ” ಎಂದರು ಶೋಭಾ.
“ವರು, ಶರು ಇವತ್ತು ಬರೋದು ಲೇಟಾಗತ್ತೆ. ಶಂಕರೂ ಬಂದ ಮೇಲೆ ಊಟ ಹಾಕು. ನಿಮ್ಮಪ್ಪ ಸೀತಾರಾಮರಾಯರ ಮನೆ ಮದುವೆಗೆ ಹೋಗಿದ್ದಾರೆ. ನೀನೂ ಊಟ ಮಾಡು………”
“ನೀವಿಬ್ಬರೂ ಎಲ್ಲಿಗೆ ಹೊರಟಿದ್ದೀರಾ?”
“ಸುಮಾನ ಜಾತಕ ತೋರಿಸಕ್ಕೆ ಗಂಗಾಧರಶಾಸ್ತ್ರಿಗಳ ಮನೆಗೆ ಹೊರಟಿದ್ದೇವೆ. ‘ಅವಳ ಮದುವೆ ಯಾವಾಗಾಗತ್ತೆ ಕೇಳ್ಕೊಂಡು ಬಾ’ ಅಂದಿದ್ದಾರೆ ಅತ್ತಿಗೆ.”
“ಆಗಲೀಮ್ಮ” ಎಂದಳು ವರು.
ಶಂಕರ 12-30ಗೆ ಬಂದು ಊಟ ಮಾಡಿ ‘ನಾಟಕ ಪ್ರಾಕ್ಟೀಸ್’ ಮಾಡಲು ಸ್ನೇಹಿತನ ಮನೆಗೆ ಹೋದ. ವರು ಸ್ಟೋರ್‌ರೂಂನಲ್ಲಿದ್ದ ಬೀರು ಕ್ಲೀನ್ ಮಾಡುತ್ತಿದ್ದಳು.
ಸಿಟಿಯಿಂದ ಬಂದ ಜಾನಕಿ ಬೃಂದಾವನದಲ್ಲಿ ಇಟ್ಟಿದ್ದ ಕೀ ತೆಗೆದು ಒಳಗೆ ಬಂದಳು.
ಎಲ್ಲರೂ ಊಟದ ಮನೆಯಲ್ಲಿ ಕುಳಿತು ಊಟ ಮಾಡಿದರು.
“ಅಮ್ಮಾ ವರು ಊರಿಗೆ ಬಂದಿಲ್ಲಾಂತ ಕಾಣತ್ತೆ.”
“ಸಾಯಂಕಾಲ ಇಳೀತಾಳೇನೋ ಮಹಾರಾಣಿ.”
“ನೋಡು ದೇವಕಿ ಈಗಲೇ ಹೇಳಿದ್ದೇನೆ. ನೀವಿಬ್ಬರೂ ರಾತ್ರಿ ಚಪಾತಿ ಮಾಡಕ್ಕೆ ಹೋಗಬೇಡಿ. ಹೊರಗೆ ದುಡಿದು ಬರುವವರು ನೀವು ಯಾಕೆ ಅಡಿಗೆ ಮನೆಕೆಲಸ ಮಾಡಬೇಕು?”
“ಅಕ್ಕ ಬೆಳಿಗ್ಗೆಯಿಂದ ಅವರು ಕೆಲಸ ಮಾಡರ‍್ತಾರಲ್ವಾ?”
“ಶಕ್ಕು ಸಂಸಾರ 4ಜನ, ಶೋಭಾದು 3ಜನ ಅವರೇ 7 ಜನ ಇದ್ದಾರೆ. ಅವರು ಕೆಲಸ ಮಾಡಲೇ ಬೇಕು.”
“ವರು ಸುಮ್ಮನಿರಲ್ಲ ಅತ್ತಿಗೆ.”
“ಅವಳ ಬಾಯಿ ನಾನು ಮುಚ್ಚಿಸ್ತೇನೆ. ನೀವು ಸುಮ್ಮನಿರಿ.”
ಅವರು ಊಟ ಮುಗಿಸಿ ತಟ್ಟೆಗಳನ್ನು ತೊಳೆದರು. ಸುಮ ಟೇಬಲ್ ಕ್ಲೀನ್ ಮಾಡಿದಳು. ಅವರು ಹೊರಗೆ ಹೋಗುವವರೆಗೂ ವರು ಕಾಣಿಸಿಕೊಳ್ಳಲಿಲ್ಲ.
ಸುಮಾರು ಎರಡೂವರೆಗೆ ಶಕುಂತಲ ಶೋಭಾ, ಶರು ಬಂದರು. ವರು ಅವರಿಗೆ ಬಡಿಸಿದಳು.
“ನೀನು ಯಾವಾಗ ಬಂದೆ ವರು?” ಪಾರ್ವತಿ ಆಶ್ಚರ್ಯದಿಂದ ಕೇಳಿದರು.
“ಅವಳು ಬೆಳಿಗ್ಗೇನೆ ಬಂದಳು.”
“ಓ ನಿಮ್ಮ ಜೊತೆ ಶಾಸ್ತ್ರಿಗಳ ಮನೆಗೆ ಬಂದಿದ್ದಳಾ?”
“ಇಲ್ಲವಲ್ಲಾ. ಅವಳು ಮನೆಯಲ್ಲೇ ಇದ್ದಳು.”
“ಏನೋಪ್ಪ, ನಾವು ಬಂದಾಗ ಅವಳು ಇರಲಿಲ್ಲ ಎಲ್ಲಿಗೆ ಹೋಗಿದ್ದಳೋ ಏನೋ?”
“ನಾನು ಸ್ಟೋರ್ ರೂಮ್‌ನಲ್ಲಿದ್ದೆ. ನೀವು ದೇವಕಿ ಅತ್ತೆಗೆ, ಜಾನಕಿ ಚಿಕ್ಕಮ್ಮಂಗೆ ಬುದ್ಧಿ ಹೇಳುವಾಗ ನಾನು ಅಲ್ಲೇ ಇದ್ದೆ. ಎಲ್ಲಾ ಕೇಳಿಸಿಕೊಂಡೆ.”
“ನಾನೇನು ಬುದ್ಧಿ ಹೇಳಿದೇಮ್ಮಾ?”
“ರಾತ್ರಿ ಹೊತ್ತು ನೀವು ಚಪಾತಿ ಮಾಡಬೇಡಿ. ನೀವು ಹೊರಗೆ ದುಡಿದು ಬರುವವರು…….”
“ಹಾಗಲ್ಲಮ್ಮ…….”
“ನನಗೆ ಉತ್ತರ ಕೊಡಿ. ನಮ್ಮಮ್ಮ, ಶೋಭ ಚಿಕ್ಕಮ್ಮ ಬಿಟ್ಟಿ ಬಿದ್ದಿದ್ದಾರಾ? ಅಮ್ಮ ನೀವು ಈ ಮನೆಗೆ ಎಷ್ಟು ಬಾಡಿಗೆ ಕೊಡ್ತಿದ್ದೀರಾ?”
“ಹನ್ನೆರಡು ಸಾವಿರ ಯಾಕಮ್ಮಾ?”
“ಈ ತಿಂಗಳು ಮನೆ ಖಾಲಿ ಮಾಡಿ. ಒಂದು ಚಿಕ್ಕ ಮನೆಗೆ ಹೋಗೋಣ. ನೆಮ್ಮದಿಯಿಂದ ಇರಬಹುದು. ಶೋಭಾ ಚಿಕ್ಕಮ್ಮ ನೀವೂ ಯೋಚನೆ ಮಾಡಿ.”
“ಅಕ್ಕ ಏನೋ ಹೇಳಿದರೆ ನೀನ್ಯಾಕೆ ಬೇಜಾರು ಮಾಡಿಕೊಳ್ತೀಯಾ ವರು?” ದೇವಕಿ ಕೇಳಿದಳು.
“ಅವರು ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿದ್ರಿ ತಾನೆ? ನೀವುಗಳು ದುಡಿಯುತ್ತಿದ್ದೀರಾ ನಿಜ. ಇಷ್ಟು ವರ್ಷಗಳಲ್ಲಿ ಬಾಡಿಗೆ ಕೊಟ್ಟಿದ್ದೀರಾ? ದಿನಸಿ ತರಿಸಿದ್ದೀರಾ? ಅಥವಾ ಮನೆ ಸಂಪೂರ್ಣ ನಿಭಾಯಿಸಿದ್ದೀರಾ? ವಾಷಿಂಗ್ ಮಿಷನ್‌ಗೆ ಬಟ್ಟೆ ಹಾಕಕ್ಕೂ ಒಳಗೆ ಬರಲ್ಲ. ಹಾಸ್ಟೆಲ್‌ನಲ್ಲಿ ಇರುವಂತೆ ಇದ್ದೀರಾ?”
“ವರು ಸುಮ್ಮನಿರು.”
ಅಷ್ಟು ಹೊತ್ತಿಗೆ ದೇವಕಿ ಗಂಡ, ವರು ಅಪ್ಪ ವಾಪಸ್ ಬಂದರು.
“ಏನು ಗಲಾಟೆ?” ರಾವ್ ಕೇಳಿದರು.
ಶೋಭಾ ಭಾವನಿಗೆ ಹೇಳಿದಳು.
“ಅಕ್ಕ ಶೋಭಾ ಹೇಳ್ತಿರೋದು ನಿಜಾನಾ?” ರಾವ್ ಕೇಳಿದರು.
“ಅವಳು ಏನೋ ಹೇಳ್ತಾಳೇಂದ್ರೆ ನೀನು ನಂಬ್ತೀಯಲ್ಲಾ? ನಾನು ಹಾಗೆಲ್ಲಾ ಏನೂ ಹೇಳಲಿಲ್ಲಪ್ಪ……”
ಶೋಭಾ ಸುಮಳ ತಲೆಯ ಮೇಲೆ ಅವರ ಕೈಯಿಟ್ಟು ಹೇಳಿದಳು. “ಅತ್ತಿಗೆ ನಿಮ್ಮ ಮಗಳ ಮೇಲೆ ಆಣೆ ಮಾಡಿ ಹೇಳಿ.”
“ಅಷ್ಟೇ ತಾನೆ……..”
“ಅಮ್ಮ ನನ್ನ ಮೇಲೆ ಆಣೆ ಮಾಡಿ ಸುಳ್ಳು ಹೇಳಿದರೆ ನಾನು ಸತ್ತು ಹೋಗ್ತೀನಿ. ಮಾವ ಅಮ್ಮ ಹೇಳಿದ್ದು ನಿಜ. ನಾನೇ ಹೇಳ್ತಿದ್ದೀನಿ ಕೇಳಿ………”
“ಅಕ್ಕ ನೀನು ಬರುವವರೆಗೂ ಜಾನಕಿ, ದೇವಕಿ ರಾತ್ರಿ ಚಪಾತಿ ಮಾಡ್ತಾ ಇದ್ರು. ನೀನು ಯಾಕೆ ಇಲ್ಲದ್ದು ಹೇಳಿ ಅವರ ತಲೆ ಕೆಡಿಸ್ತೀಯ? ನಾಳೆ ನಾನೇ ಕಾರ್ ಬುಕ್ ಮಾಡಿಕೊಡ್ತೇನೆ. ಊರಿಗೆ ಹೋಗು.”
“ಏನೋ ಸ್ವಂತ ಅಕ್ಕಂಗೇ ಹೀಗಂತಿದ್ದೀಯ?”
“ನನಗೆ ನಮ್ಮನೆ ಶಾಂತಿ ಮುಖ್ಯ ಅಕ್ಕ. ಇನ್ನು ಒಂದು, ಒಂದೂವರೆ ವರ್ಷಗಳಲ್ಲಿ ನಾವು ಬೇರೆ ಆಗಲೇಬೇಕು. ಅದುವರೆಗೂ ನೆಮ್ಮದಿಯಿಂದ ಇರಕ್ಕೆ ಬಿಡು. ನಿನಗೆ ಕೈ ಮುಗೀತೀನಿ. ವರು ಬಾಮ್ಮ” ರಾವ್ ಮಗಳ ಜೊತೆ ತಮ್ಮ ರೂಂಗೆ ನಡೆದರು.
“ನೋಡೇ ದೇವಕಿ ಹೇಗಂತಾನೆ? ನಮ್ಮ ಸುಮನ್ನ ತೋರಿಸಕ್ಕೆ ನಾವು ಬಂದಿರೋದು. ಆ ಕೆಲಸವಾಗದೆ ಹೇಗೆ ಹೋಗಲಿ?”
“ಯಾಕೆ ಈ ಊರಲ್ಲಿ ತೋರಿಸಬೇಕು? ಮೈಸೂರಿನಲ್ಲಿ ಡಾಕ್ಟರ್‌ಗಳು ಇಲ್ವಾ?” ಜಾನಕಿ ಕೇಳಿದಳು.
“ಹಾಗಲ್ಲ……..”
“ಅತ್ತಿಗೆ, ಸುಮಾಗೆ ಏನೂ ಆಗಿಲ್ಲ. ನಿಮ್ಮ ಅತಿ ಮುದ್ದು ಅವಳನ್ನು ಹಾಳು ಮಾಡಿದೆ. ಅವಳನ್ನು ಬಾಳೆಹಣ್ಣಿನ ಗುಡಾಣದಲ್ಲಿ ಬೆಳೆಸ್ತಿದ್ದೀರ. ಅವಳ ಕೈಯಲ್ಲಿ ಒಂದು ಕೆಲಸ ಮಾಡಿಸಲ್ಲ. ತುಪ್ಪ, ಹಾಲು, ಮೊಸರು ಹಾಕಿ ಅವಳನ್ನು ಸಾಕ್ತಿದ್ದೀರ. ಅವಳಿಗೆ ಸೋಮಾರಿತನ ಅನ್ನುವ ಖಾಯಿಲೆ ಅಂಟಿದೆ. ಮದುವೆಯಾಗಿ ಹೋಗೋಳೂಂತ ಉಪಚಾರ ಮಾಡ್ತೀರ. ಆದರೆ ವರು, ಶರು, ನಿಮ್ಮನೆಗೆ ಬಂದ್ರೆ ಅವರಿಗೆ ಕೆಲಸ ಹೇಳ್ತೀರ. ನಿಮ್ಮ ಮಗಳ ಕೈಯಲ್ಲಿ ಕೆಲಸ ಮಾಡಿಸಿ, ಸರಿಹೋಗ್ತಾಳೆ.”
“ನೋಡೇ ದೇವಕಿ ಈ ಶೋಭಾ ಏನಂತಿದ್ದಾಳೆ…..?”
“ಚಿಕ್ಕತ್ತಿಗೆ ಸರಿಯಾಗೇ ಹೇಳ್ತಿದ್ದಾರೆ. ನೀವು ಬಂದ್ರೆ ಮನೆ ಶಾಂತಿಹಾಳು.”
“ಏನೇ ಹೀಗಂತಿದ್ದೀಯಾ? ನಿಮ್ಮ ಅತ್ತಿಗೆಯರು ಊರಿಗೆ ಹೋಗಿದ್ದಾಗ ನಾನು ಬಂದು ಸಹಾಯಮಾಡಲಿಲ್ವಾ?”
“ಏನು ಸಹಾಯ ಮಾಡಿದ್ರಿ? ಸಾಮಾನು ತರಿಸಿ, ಪುಡಿಗಳನ್ನು ಮಾಡಿ ಉಳಿದಿದ್ದೆಲ್ಲಾ ತುಂಬಿಕೊಂಡು ಕಾರಲ್ಲಿ ಮೈಸೂರಿಗೆ ಹೋದ್ರಿ. ಎಲ್ಲಾ ಡಬ್ಬಗಳೂ ಖಾಲಿ ಖಾಲಿ. ಇದನ್ನು ಸಹಾಯ ಅಂತಾರಾ?” ಜಾನಕಿ ಕೇಳಿದಳು.
“ಜಾನಕಿ, ದೇವಕಿ ಮಾತು ನಿಲ್ಲಿಸಿ. ಮಾತು ಆಡ್ತಾ ಇದ್ರೆ ಬೆಳೆಯುತ್ತಾನೇ ಹೋಗತ್ತೆ. ಅತ್ತಿಗೆ ನೀವು ನಿಮ್ಮ ವಯಸ್ಸಿಗೆ ತಕ್ಕಂತೆ ಇದ್ದರೆ ನಿಮಗೂ ಒಳ್ಳೆಯದು. ನಮಗೂ ಒಳ್ಳೆಯದು.”
“ಶಕ್ಕು ನನ್ನಿಂದ ತಪ್ಪಾಗಿದೆ. ಸುಮೀನ್ನ ಈ ಊರಿನಲ್ಲಿ ಡಾಕ್ಟರ್‌ಗೆ ತೋರಿಸಿ ಕರೆದುಕೊಂಡು ಹೋಗ್ತೀನಿ. ಅದಕ್ಕೆ ಅವಕಾಶ ಕೊಡು.”
“ಆಗಲಿ ಅತ್ತಿಗೆ ಹಾಗೇ ಮಾಡಿ” ಎಂದರು ಶಕುಂತಲಾ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43783
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು