ಲಹರಿ

ಹಾವು ಮತ್ತು ನಾನು.

Share Button

ನನ್ನ ಅಪ್ಪ ಅಮ್ಮ ನನಗೆ ಇಟ್ಟಿರುವ ಹೆಸರು ನಾಗರತ್ನ ಎಂದು. ಆದರೆ ಹಾವುಗಳೆಂದರೆ ನನಗೆ ಚಿಕ್ಕಂದಿನಿಂದಲೂ ಬಹಳ ಭಯ. ತಿಳಿದವರು ಹೇಳುತ್ತಾರೆ ಎಲ್ಲ ಹಾವುಗಳೂ ವಿಷಕಾರಿಗಳಲ್ಲ ಎಂದು. ಬರಿಯ ನಾಲ್ಕು ಜಾತಿಯ ಹಾವುಗಳಲ್ಲಿ ಮಾತ್ರ ವಿಷಯುಕ್ತ ದಂತಗಳಿರುತ್ತವಂತೆ. ಆದರೆ ಅದನ್ನು ಕಂಡುಹಿಡಿಯುವುದು ಹೇಗೆ? ಇದು ನನ್ನ ಕಣ್ಮುಂದೆ ಹರಿದಾಡುವ ಪ್ರಶ್ನೆ.

ನೆಲಮಂಗಲ ತಾಲೂಕಿನ ಸಮೀಪದಲ್ಲಿ ನನ್ನ ತಾತನವರ ಊರು ಸೊಂಡೇಕೊಪ್ಪ. ಅವರು ಕಟ್ಟಿಸಿದ ಹೆಂಚಿನ ಮನೆ. ಅದಾಗಲೇ ಸಾಕಷ್ಟು ಹಳೆಯದಾಗಿತ್ತು. ಮನೆಯ ಹಿಂದುಗಡೆಯಲ್ಲಿ ವಿಸ್ತಾರವಾಗಿ ಇದ್ದ ಹಿತ್ತಲು. ಕೆರೆಯ ಅಂಗಳದಿಂದ ಬಹಳ ಸಮೀಪವೇ ಇತ್ತು. ಮಳೆಗಾಲದಲ್ಲಿ ಕೆರೆಗೆ ನೀರು ತುಂಬಿದಾಗ ನಮ್ಮ ಮನೆಯ ಹಿತ್ತಲಿಗೂ ತಲುಪುತ್ತಿತ್ತು. ಹೊಸನೀರಿನ ಜೊತೆಜೊತೆಗೇ ಹರಿದಾಡುವ ಸರೀಸೃಪಗಳೂ ಭೇಟಿಕೊಡುತ್ತಿದ್ದವು. ಆಗೆಲ್ಲ ಮನೆಯೊಳಗಡೆ ಟಾಯ್ಲೆಟ್ ಕಟ್ಟಿಸುವುದು ರೂಢಿಯಲ್ಲಿರಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿ ಗೂಡಿನಂತಿರುತ್ತಿತ್ತು. ರಾತ್ರಿಹೊತ್ತಿನಲ್ಲಿ ಯಾರಾದರೂ ಅಲ್ಲಿಗೆ ಹೋಗಬೇಕಾದರೆ ಲಾಟೀನಿನ ಬೆಳಕಿನೊಡನೆ ಓಡಾಡುತ್ತಿದ್ದರು. ಅಗ ನನಗೆ ಗುಂಡಿಗೆ ಬಾಯಿಗೆ ಬಂದಂತಾಗುತ್ತಿತ್ತು. ಮನೆಗೂ ಟಾಯಿಲೆಟ್ಟಿಗೂ ಮಧ್ಯೆ ತೆಂಗಿನಮರಗಳು, ಗಿಡಗಂಟಿಗಳು ಬೆಳೆದಿದ್ದವು. ಕೈಯಲ್ಲಿ ಲಾಟೀನು ಇದ್ದರೂ ಇದ್ದಬದ್ದ ದೇವರುಗಳನ್ನೆಲ್ಲ ನೆನೆಪಿಸಿಕೊಳ್ಳುತ್ತಾ ಹೋಗಿ ಬರಬೇಕಾಗುತ್ತಿತ್ತು. ನಾನು ನಮ್ಮೂರಿಗೆ ಹಿಂದಿರುಗಿ ಬರುವವರೆಗೆ ಲೂಸ್‌ಮೋಷನ್ ಆಗದಿದ್ದರೆ ಸಾಕಪ್ಪಾ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆ.

ನಮ್ಮ ತಾತನವರ ಮನೆಗೆ ಹೊಂದಿಕೊಂಡಂತೆ ಅವರ ತಮ್ಮನ ಮನೆಯೂ ಇತ್ತು. ಅವರಿಬ್ಬರಿಗೂ ತುಂಬ ಧೈರ್ಯ. ಹಾವೇನಾದರೂ ಅವರ ಕಣ್ಣಿಗೆ ಬಿದ್ದರೆ ಅದು ಯಮಪುರಿಗೇ ಖಾಯಂ ರವಾನೆಯಾಗುತ್ತಿತ್ತು. ಕುಕ್ಕರುಗಾಲಿನಲ್ಲಿ ಕುಳಿತುಕೊಂಡೇ ಹೊಡೆದು ಹಾಕುತ್ತಿದ್ದರು. ಯಾವ ಆತಂಕ, ಭಾವೋದ್ವೇಗವೂ ಇರುತ್ತಿರಲಿಲ್ಲ. ಅವರಿಬ್ಬರ ಶೌರ್ಯದ ಬಗ್ಗೆ ನನಗೆ ಹೆಮ್ಮೆಯಾಗುತ್ತಿತ್ತು.
ನಾನು ಓದಿದ್ದು ತುಮಕೂರಿನಲ್ಲಿ. ನಾವು ಶಾಲೆಗೆ ಹೋಗುವ ದಾರಿಯಲ್ಲಿ ತೋಟವಿತ್ತು. ಅಲ್ಲಿ ಮಾವು, ಸೀಬೆ, ಹಲಸು, ಬೇಲ, ನೇರಳೆ, ನೆಲ್ಲಿ ಇತ್ಯಾದಿ ಮರಗಳಿದ್ದವು. ತೋಟದ ಬೇಲಿಯತ್ತ ನಾವು ಹೋಗುವಾಗ ಒಂದು ಕಣ್ಣಿರುತ್ತಿತ್ತು. ಕಾವಲುಗಾರನ ಕಣ್ಣು ತಪ್ಪಿಸಿ ಹಣ್ಣುಗಳನ್ನು ಕದಿಯುವುದು ನಮ್ಮ ಹವ್ಯಾಸಗಳಲ್ಲೊಂದು. ನಮ್ಮ ಗುಂಪಿನಲ್ಲಿ ಸ್ವಲ್ಪ ಬಲವಾಗಿರುವವರನ್ನು ಮರಕ್ಕೆ ಹತ್ತಿಸಿ ಹಣ್ಣುಗಳು ಮತ್ತು ದೋರೆಗಾಯಿಗಳನ್ನು ಕೀಳಿಸುವುದು, ಬೇಲಿಯಲ್ಲಿ ಸ್ವಲ್ಪ ಜಾಗ ಮಾಡಿಕೊಂಡು ಅದರೊಳಗೆ ನುಸುಳಿಕೊಂಡು ಹೋಗಿ ಕೆಳಗೆ ಬಿದ್ದ ಹಣ್ಣು ಕಾಯಿಗಳನ್ನು ಆರಿಸಿಕೊಳ್ಳುವುದು. ಅವನ್ನು ಆಚೆಗೆ ಇರುವವರಿಗೆ ತಲುಪುವಂತೆ ಎಸೆಯುವುದು. ಅದನ್ನು ಬೇಲಿಯಿಂದ ಹೊರಕ್ಕೆ ಸಾಗಿಸಿದ ನಂತರ ಎಲ್ಲರೂ ಹಂಚಿಕೊಳ್ಳುವುದು.

ಹೀಗೊಮ್ಮೆ ತೋತಾಪುರಿ ಮಾವಿನಕಾಯಿಯ ಕಾಲ. ಕೆಳಗೆ ಬಿದ್ದಿದ್ದವನ್ನು ಹೆಕ್ಕಿಕೊಳ್ಳಲು ಬೇಲಿಯ ಸಂದಿನಲ್ಲಿ ತೂರಿಹೋಗಿದ್ದ ನಾನು ಕೈಗೆ ಸಿಕ್ಕ ಮಾವಿನಕಾಯಿಗಳನ್ನು ಹೊರಗಿನ ಸ್ನೇಹಿತೆಯರಿಗೆ ಎಸೆಯುತ್ತಿದ್ದೆ. ನನಗೆ ಬಹಳ ಸಮೀಪದಲ್ಲಿ ಬುಸ್ಸೆಂಬ ಶಬ್ಧ ಕೇಳಿಬಂತು. ಅತ್ತಿತ್ತ ಕಣ್ಣಾಡಿಸಿದೆ. ಸ್ವಲ್ಪ ದೂರದಲ್ಲಿ ಸುರುಳಿ ಸುತ್ತಿಕೊಂಡಿದ್ದ ಹಾವೊಂದು ತಲೆ ಎತ್ತಿತ್ತು. ಸದ್ದು ಮಾಡಿದರೆ ಕೆಟ್ಟೆನು ಎಂದು ಬಂದ ದಾರಿಯಲ್ಲಿ ಹಿಮ್ಮುಖವಾಗಿ ಸರಿಯುತ್ತ ಬೇಲಿದಾಟಿ ಹೊರಕ್ಕೆ ಬಂದೆ. ನನ್ನ ಪಟಾಲಮ್ಮಿನವರು ಏಕೇ ಇನ್ನು ಬಹಳಷ್ಟು ಆ ಕಡೆ ಬಿದ್ದಿದ್ದವು. ಎಂದು ಪ್ರಶ್ನಿಸಿದರು. ನಾನು ಏದುಸಿರು ಬಿಡುತ್ತ ಹಾವಿನ ದಿಕ್ಕಿಗೆ ಕೈ ತೋರಿಸಿದೆ. ಹಣಿಕಿ ಹಾಕಿದವರೇ ಕೈಕೈ ಹಿಡಿದುಕೊಂಡು ಓಟಕಿತ್ತೆವು. ಶಾಲೆ ಸಮೀಪಿಸುವವರೆಗೂ ನಿಲ್ಲಲಿಲ್ಲ. ಅಂದಿನಿಂದ ಆ ದಾರಿಯ ಕಡೆಗೆ ತಲೆ ಹಾಕಲಿಲ್ಲ.

ಆಗೆಲ್ಲ ಹಾವಡಿಗರು ಬುಟ್ಟಿಯಲ್ಲಿ ಹಾವುಗಳನ್ನು ಇಟ್ಟುಕೊಂಡು ಮನೆಮುಂದೆ ತರುತ್ತಿದ್ದರು. ಪುಂಗಿ ಊದಿ ಅದನ್ನು ಆಟವಾಡಿಸಿ ಜನರನ್ನು ರಂಜಿಸಿ ಮತ್ತೆ ಹಾವನ್ನು ಬುಟ್ಟಿಯಲ್ಲಿ ಇರಿಸಿ ಜನರಿಂದ ಬೇಡಿ ದವಸ ಧಾನ್ಯ, ಹಣವನ್ನು ದಾನವಾಗಿ ಸ್ವೀಕರಿಸಿ ಹೋಗುತ್ತಿದ್ದರು. ಹಾವಡಿಗರು ಅದನ್ನು ಹಗ್ಗ ಹಿಡಿದಂತೆ ಕತ್ತಿನ ಸುತ್ತ ಹಾಕಿಕೊಂಡು ತೋರಿಸುತ್ತಿದ್ದರು. ಅವರ ಪುಟ್ಟಪುಟ್ಟ ಮಕ್ಕಳೂ ಸಲೀಸಾಗಿ ಹಾವನ್ನು ಕೈಯಿಂದ ಎತ್ತಿಕೊಳ್ಳುತ್ತಿದ್ದರು. ನಮ್ಮ ಗೆಳೆಯರು ಕೆಲವರು “ಅದು ಹಲ್ಲುಕಿತ್ತ ಹಾವು ಕಣೇ, ಏನೂ ಮಾಡಲ್ಲಾ” ಎನ್ನುತ್ತಿದ್ದರು. ಆದರೆ ನಾನು ಮಾತ್ರ ಭಯದಿಂದ ಅದರ ಸ್ಪರ್ಶಮಾಡುತ್ತಿರಲಿಲ್ಲ. ಮನಸ್ಸಿನಲ್ಲಿ ಅದರ ಹಲ್ಲು ಹೇಗಿರುತ್ತದೆ? ಅದನ್ನು ಹೇಗೆ ಕೀಳುತ್ತಾರೆ? ಎಂದು ಆಲೋಚಿಸುತ್ತಿದ್ದೆ. ಒಮ್ಮೆ ಒಬ್ಬ ಹಾವಾಡಿಗನನ್ನು “ವಿಷದ ಹಲ್ಲು ಇರುತ್ತದೆ. ಅದನ್ನು ಕಿತ್ತು ಹಾಕುತ್ತಾರೆ ಎನ್ನುತ್ತಾರೆ ಅದ್ಹೇಗೆ? ನನಗೂ ತೋರಿಸುತ್ತೀರಾ?” ಎಂದು ಪ್ರಶ್ನಿಸಿದ್ದೆ. ಅತನು ನನ್ನನ್ನು ವಿಚಿತ್ರ ಪ್ರಾಣಿ ನೋಡುವಂತೆ ನೋಡಿ “ಮಗೂ ಹಾಗೆಲ್ಲ ನೀವು ಅಲ್ಲಿಗೆ ಬರಬಾರದು.” ಎಂದು ಗದರಿಸಿದ್ದ. ನಮ್ಮಮ್ಮ ನಾನು ಪ್ರಶ್ನಿಸುವುದನ್ನು ಕೇಳಿ “ನೀನು ಮುಂದೇನು ಆಗಿಬಿಡುತ್ತೀಯೋ ಕಾಣೆ” ಎಂದು ಬಯ್ದಿದ್ದರು.

ವರ್ಷಗಳುರುಳಿದಂತೆ ಓದುತ್ತಾ ಹಾವುಗಳ ಬಗ್ಗೆ ವಿಚಾರಗಳು ತಿಳಿವಿಗೆ ಬಂದಿದ್ದರೂ ಅವುಗಳ ಬಗ್ಗೆ ಇದ್ದ ಭಯ ಮಾತ್ರ ಕಡಿಮೆಯಾಗಲೇ ಇಲ್ಲ. ಮಳೆಗಾಲದಲ್ಲಿ ನೀರುನಿಂತ ಕಡೆ ದಾಟುವಾಗ, ಪೊದೆ ಕುರುಚಲು ಗಿಡಗಳಿರುವ ಕಡೆ ನಡೆದಾಡುವಾಗ ಎಚ್ಚರಿಕೆಯಿಂದ ಒಡಾಡುತ್ತಿದ್ದೆ. ಎಲ್ಲಿಯದರೂ ಸರಕ್ ಎಂದು ಶಬ್ಧವಾದರೆ ಮನಸ್ಸಿನಲ್ಲಿ ಭಯ ಮೂಡುತ್ತಿತ್ತು.

ಮದುವೆಯಗಿ ಗೃಹಿಣಿಯಾಗಿ ನಾನು ಹೋಗಿದ್ದು ದೂರದ ಗುಲ್ಬರ್ಗಾಕ್ಕೆ ಅದೂ 1973 ರಲ್ಲಿ. ನಾವು ವಾಸವಿದ್ದ ಮನೆಯ ಎದುರುಗಡೆಯ ಮನೆಯಲ್ಲಿ ವಾಚ್‌ಮನ್ ಕುಟುಂಬವೊಂದಿತ್ತು. ಆತನ ಹೆಂಡತಿ ಆಗೀಗ ನಮ್ಮ ಮನೆಯ ಮುಂದೆ ಒಡಾಡುತ್ತಿದ್ದರೂ ನನಗೆ ವೈಯಕ್ತಿಕವಾಗಿ ಪರಿಚಯವಾಗಿರಲಿಲ್ಲ. ಒಂದು ಸಂಜೆಯ ಹೊತ್ತು ಆಕೆ ಅತ್ತಿತ್ತ ಅಡ್ಡಾಡುತ್ತಾ ಏನೋ ಹುಡುಕಾಡುತ್ತಿದ್ದಳು ಎನ್ನಿಸಿತು. ಎನು ಎಂದು ಪ್ರಶ್ನಿಸಿದೆ. ಆಕೆ “ಆವೊಚ್ಚಿಂದಿ ಎಕ್ಕಡ ಪೊಯಿನೋ ಏಮೋ” ಎಂದಳು. ಅವಳ ಮಾತಿನಿಂದ ನಾನು ಹಾವು ಬಂದಿದೆ, ಎಲ್ಲಿ ಹೋಯಿತೋ ಏನೋ ಗೊತ್ತಿಲ್ಲ. ಕೋಲಿಗಾಗಿ ಹುಡಕಾಡುತ್ತಿದ್ದಾಳೆ ಎನ್ನಿಸಿತು. ನಮ್ಮ ಮನೆಯಲ್ಲಿದ್ದ ಧೂಳು ಹೊಡೆಯುವ ಬಿದಿರಿನ ಕೋಲನ್ನು ಅವಳಿಗೆ ಕೊಟ್ಟೆ. “ನೀನೆ ಹೊಡೆಯವುದಾದರೆ ಹೊಡಿ, ಇಲ್ಲವಾದರೆ ನಿನ್ನ ಗಂಡನನ್ನು ಕರಿ” ಎಂದೆ. ಆಕೆಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಅವಳು ಮತ್ತೆ “ಆವೊಚ್ಚಿಂದಿ ನಾ ನೀಳ್ಳು ತಾಗಿ ಪೋಯಿಂದಿ” ಎಂದಳು. ನಾನು ಏನು ಜನ ಇವರು “ಹಾವು ಎಲ್ಲಿಯಾದರೂ ನೀರು ಕುಡಿಯಲು ಬರುವುದುಂಟೇ? ಹುಡುಗಾಟಕ್ಕೂ ಒಂದು ಮಿತಿ ಬೇಡವೇ” ಎಂದುಕೊಂಡೆ. ಅದೇ ಸಮಯಕ್ಕೆ ನನ್ನವರು ಕಚೇರಿಯಿಂದ ಮನೆಗೆ ಬಂದು ನಾನು ಕೋಲು ಹಿಡಿದು ವಾಚ್‌ಮನ್ ಹೆಂಡತಿಯ ಬಳಿ ನಿಂತದ್ದು ಕಂಡು “ಏನು ವಿಷಯ?” ಎಂದು ಕೇಳಿದರು. ನಾನು ಹೇಳಿದ್ದನ್ನು ಕೇಳಿ ನಕ್ಕುಬಿಟ್ಟರು. “ಆಕೆ ತೆಲುಗಿನಲ್ಲಿ ಆವು ಎಂದದ್ದು ಹಸುವಿಗೆ. ಅದು ಬಂದು ಆಕೆ ಬಕೀಟಿನಲ್ಲಿಟ್ಟಿದ್ದ ನೀರನ್ನು ಕುಡಿದು ಖಾಲಿಮಾಡಿದೆ ಅಷ್ಟೇ” ಎಂದರು. ಭಾಷಾ ಸಮಸ್ಯೆ ನನಗೆ ಹಾವಾಗಿ ತೋರಿತ್ತು.

ಕೆಲವು ವರ್ಷಗಳ ನಂತರ ನನ್ನವರಿಗೆ ರಾಯಚೂರು ಬಳಿಯ ‘ಯರಮರಸ್’ ಎಂಬ ಕಡೆಗೆ ವರ್ಗಾವಣೆಯಾಯಿತು. ಅದೊಂದು ಕ್ಯಾಂಪ್. ಊರಿನಿಂದ 6 ಕಿಲೋಮೀಟರ್ ದೂರದಲ್ಲಿ ಕಟ್ಟಿದ್ದ ಮನೆಗಳು, ಕಚೇರಿಗಳು ಎಲ್ಲವೂ ಒಂದೇ ಕಡೆ ಇದ್ದವು. ನಮಗೆ ಒಂದು ಸರ್ಕಾರಿ ಕ್ವಾರ್ಟರ್ಸ್ ಕೊಟ್ಟಿದ್ದರು. ಅದು ತುಂಬ ಹಳೆಯದಾಗಿತ್ತು. ಕ್ಯಾಂಪಿನ ಸುತ್ತಲೂ ಹೊಲಗಳು, ಬಯಲು. ಅಲ್ಲಿ ಹೇರಳವಾಗಿ ಇಲಿಗಳು ಓಡಾಡುತ್ತಿದ್ದವು. ಅವುಗಳನ್ನು ಹಿಡಿದು ತಿನ್ನಲು ಹಾವುಗಳ ಸಂಚಾರ ಸಾಮಾನ್ಯವಾಗಿತ್ತು. ಬಹುತೇಕ ಎಲ್ಲರ ಬಾಯಲ್ಲೂ ನಾಗರಹಾವುಗಳ ಬಗ್ಗೆಯೇ ಕೇಳುತ್ತಿದ್ದೆವು. ನಾನಂತೂ ಹಳೆಯ ಬಾಗಿಲು, ಕಿಟಕಿಗಳನ್ನು ನೋಡಿಯೇ ಅವುಗಳ ಭದ್ರತೆಯ ಬಗ್ಗೆ ನಂಬಿಕೆಯೇ ಹೋಗಿತ್ತು. ನಮ್ಮವರು ಆಫೀಸಿಗೆ ಹೋದಾಗಲೆಲ್ಲ ನನ್ನ ಪುಟ್ಟ ಮಗನನ್ನು ಕೆಳಗಡೆ ಬಿಡದೆ ಎತ್ತಿಕೊಂಡೇ ಕೆಲಸಗಳನ್ನು ಬೇಗನೆ ಮಾಡಿ ಮುಗಿಸಿ ಬಾಗಿಲುಗಳನ್ನು ಹಾಕಿ ಮುಂದಿನ ರೂಮುಗಳಲ್ಲಿ ಇರುತ್ತಿದ್ದೆ. ನನ್ನ ಭಯವನ್ನು ಹೇಳಿಕೊಳ್ಳಲು ನಾಚಿಕೆಯಾಗಿ ಸುಮ್ಮನಿರುತ್ತಿದ್ದೆ. ನಮ್ಮ ಮನೆಯ ಹಿಂದೆ ಹೊಂದಿಕೊಂಡಂತೆಯೇ ಒಂದು ವಾಚ್‌ಮನ್ ಕೊಠಡಿಯಿತ್ತು. ಅಲ್ಲೊಬ್ಬ ಆಜಾನುಬಾಹು ವಾಸವಿದ್ದ. ನಮ್ಮ ಮನೆಯೊಳಗಿನಿಂದ ಕೂಗಿದರೆ ಸಾಕು ಅವನು “ಕ್ಯಾ ಮಾಜೀ” ಎಂದು ಓಡಿಬರುತ್ತಿದ್ದ. ಅವನ ಭರವಸೆಯೇ ನನಗೆ ಧೈರ್ಯವಾಗಿತ್ತು.

ಒಮ್ಮೆ ನನ್ನ ಮಗನನ್ನು ಹಿಂದಿನ ಅಂಗಳದಲ್ಲಿ ನನ್ನ ಕಣ್ಗಾವಲಿನಲ್ಲಿರುವಂತೆ ಮಲಗಿಸಿ ನಾನು ಬಟ್ಟೆಗಳನ್ನು ಒಗೆಯಲೆಂದು ಬಕೀಟಿನಿಂದ ಬಟ್ಟೆಗಳನ್ನು ಒಗೆಯುವ ಕಲ್ಲಿನ ಮೇಲೆ ಹಾಕುತ್ತಿದ್ದೆ. ಅಲ್ಲಿ ನಾಗಪ್ಪ ಒಗೆಯುವ ಕಲ್ಲಿನ ಮೇಲೆ ಠೀವಿಯಿಂದ ಅತ್ತಿತ್ತ ನೋಡುತ್ತಿದ್ದಾನೆ. ಎದ್ದೆನೋ ಬಿದ್ದೆನೋ ಎಂದು ಬಕೆಟ್ಟು ಬಿಟ್ಟು ಮಗನನ್ನು ಎತ್ತಿಕೊಂಡು ಮನೆಯಿಂದ ಹೊರಗಡೆ ಬಂದು ವಾಚ್‌ಮನ್ ಕೂಗಿ ಕರೆದೆ. ಆತ ನನ್ನ ಆತಂಕಭರಿತ ಕೂಗನ್ನು ಕೇಳಿಸಿಕೊಂಡು ಕೈಯಲ್ಲೊಂದು ಬೆತ್ತದೊಡನೆ “ಕ್ಯಾ ಹುವಾ ಮಾಜೀ” ಎಂದು ಓಡಿಬಂದ. ನಾನು ಬಟ್ಟೆ ಒಗೆಯುವ ಕಲ್ಲಿನ ಕಡೆ ಕೈ ತೋರಿದೆ. ಅವನ ಬೀವಿಯೂ ಬಂದಳು ನಾನು ಅವಳ ಹಿಂದೆ ನಿಂತು ನೋಡಿದರೆ ಹಾವು ಮಂಗಮಾಯ. ಅಲ್ಲೇ ಗೋಡೆಯೊಳಗೊಂದು ಪೊಟರೆಯಿತ್ತು. ಅದರೊಳಕ್ಕೆ ಸೇರಿಬಿಟ್ಟಿದೆ. ಆತ ತಡಮಾಡದೆ ಅಲ್ಲೇ ಬಿದ್ದಿದ್ದ ಸೌದೆಯ ನಾಲ್ಕಾರು ಸಣ್ಣ ಚೂರುಗಳನ್ನು ತೆಗೆದುಕೊಂಡು ಗೋಡೆ ಬದಿಯಲ್ಲಿ ಇಟ್ಟು ಸೀಮೆಯೆಣ್ಣೆ ಹಾಕಿ ಬೆಂಕಿ ಹಚ್ಚಿದ. ಅದು ಪಸರಿಸಿ ಉರಿಯುತ್ತಿದ್ದಂತೆ ಬಿಸಿತಾಗುತ್ತಿದ್ದಂತೆ ಪೊಟರೆಯೊಳಗಿಂದ ಸರ್ ಎಂದು ಹಾವು ಹೊರಬಿದ್ದಿತು. ಅಷ್ಟು ಹೊತ್ತಿಗೆ ಬಾಯಿಯಿಂದ ಬಾಯಿಗೆ ಸುದ್ಧಿ ಹರಡಿ ಅಫೀಸಿನಿಂದ ನನ್ನವರೂ ಜೊತೆಗೆ ಹಲವರು ಬಂದು ಜಮಾಯಿಸಿದರು. ವಾಚ್‌ಮನ್ ಮಾತ್ರ ಏಕಾಗ್ರಚಿತ್ತದಿಂದ ಹಾವಿನ ಹೆಡೆಯ ಮೇಲೇ ದೊಣ್ಣೆಯಿಂದ ಬಾರಿಸಿ ಅದನ್ನು ಯಮಪುರಿಗೆ ಕಳುಹಿಸಿದ. ನಾನು ನಿಟ್ಟಿಸಿರು ಬಿಟ್ಟೆ. ಆದರೆ ಜನ ಬಿಡುತ್ತಾರೆಯೇ. ಯಾರೋ ಒಬ್ಬರು “ನಾಗಪ್ಪನನ್ನು ಕೊಲ್ಲಬಾರದು. ಮನೆಯಲ್ಲಿ ಪುಟ್ಟ ಮಗು ಬೇರೆ ಇದೆ. ಅಪಾಯ. ಏನು ಮಾಡುವುದು, ಅದಕ್ಕೆ ಪರಿಹಾರವೆಂದರೆ ಹಾವಿನ ಬಾಯಿಗೆ ಒಂದು ನಾಣ್ಯವನ್ನಿಟ್ಟು ಕಟ್ಟಿಗೆಯಿಂದ ಸುಟ್ಟು ಸಂಸ್ಕಾರ ಮಾಡಿಬಿಡಿ” ಎಂದು ಸೂಚಿಸಿದರು. ಅದನ್ನು ಮಾಡಿದ್ದಾಯಿತು.

ನಮ್ಮವರು ಸರ್ವೇ ಕೆಲಸಕ್ಕೆಂದು ಬೇರೆ ಊರಿಗೆ ಹತ್ತು ಹನ್ನೆರಡು ದಿವಸಗಳು ಹೋಗಬೇಕಾಗುತ್ತಿತ್ತು. ಆಗ ಮನೆಯಲ್ಲಿ ನಾನೊಬ್ಬಳೇ. ಅಕ್ಕಪಕ್ಕದ ಮನೆಯ ಹುಡುಗರನ್ನು ಸೇರಿಸಿಕೊಂಡು ಬೆಳಗಿನಿಂದ ಸಂಜೆಯವರೆಗೆ ಹೇಗೊ ಕಾಲ ಹಾಕುತ್ತಿದ್ದೆ. ಸಂಜೆಯಾದಮೇಲೆ ಹಿತ್ತಲುಕಡೆಗೆ ಹೋಗುವುದಿರಲಿ, ಅತ್ತ ಕಡೆ ತಿರುಗಿಯೂ ನೊಡುತ್ತಿರಲಿಲ್ಲ. ನನ್ನ ಭಯ, ಆತಂಕಗಳನ್ನು ಕಂಡು ನೆರೆಯವರು ತಮ್ಮ ಯಾರಾದರೊಬ್ಬ ಮಕ್ಕಳನ್ನು ರಾತ್ರಿ ನನ್ನ ಜೊತೆಗಿರಲು ಕಳುಹಿಸುತ್ತಿದ್ದರು. ಆಗಿಂದಾಗ್ಗೆ ನಮ್ಮ ಊರಿನಿಂದಲೂ ಯಾರಾದರೊಬ್ಬರು ಕೆಲವು ದಿನ ನಮ್ಮೊಡನಿರಲು ಬರುತ್ತಿದ್ದರು. ಹೀಗೊಮ್ಮೆ ನನ್ನ ಎರಡನೆಯ ತಮ್ಮ ಬಂದಿದ್ದ. ನನ್ನವರು ಅಫೀಸಿನ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಹೋಗುವ ಮೊದಲು ನನ್ನ ತಮ್ಮನಿಗೆ ಅಲ್ಲಿನ ವಾತಾವರಣ, ಹಾವುಗಳ ಓಡಾಟ ಎಲ್ಲವನ್ನು ಮುಂದಾಗಿ ತಿಳಿಸಿ ಎಚ್ಚರವಾಗಿರಲು ಹೇಳಿ ಹೋದರು. ಒಂದೆರಡು ದಿನ ಆಗಿರಬಹುದು. ರಾತ್ರಿ ನನ್ನ ತಮ್ಮ ಊಟಮಾಡಿದ ನಂತರ ಹಿಂದುಗಡೆಯ ಅಂಗಳದಲ್ಲಿ ಓಡಾಡುತ್ತಿದ್ದ. ಇದ್ದಕ್ಕಿದ್ದಂತೆ “ಅಕ್ಕಾ ನೋಡಲ್ಲಿ ಹಾವು” ಎಂದು ಕೂಗಿದ. ನಾನು ತಮಾಷೆ ಮಾಡುತ್ತಿದ್ದಾನೆ ಎಂದು “ಇಂತಹ ವಿಷಯದಲ್ಲಿ ಹುಡುಗಾಟ ಆಡಬೇಡ” ಎಂದೆ. ಅದಕ್ಕವನು “ಇಲ್ಲಕ್ಕಾ ನಿಜವಾಗಿ ಹಾವು ಬಂದಿದೆ” ಎಂದ. ನಮ್ಮ ಮಾತಿನ ಸಪ್ಪಳ ಮತ್ತು ವಾಸನೆಯಿಂದ ಅದು ಅಂಗಳದ ಕಡೆಗೆ ಹೋಗದೆ ಅಲ್ಲಿ ದೂದಲ್ಲಿಟ್ಟಿದ್ದ ಖಾಲಿ ಡಬ್ಬವೊಂದರ ಕಡೆ ಹೋಗುತ್ತಿತ್ತು. ನಾನು ಅವನ ಕೈ ಹಿಡಿದುಕೊಂಡೇ ಅದನ್ನು ನೋಡಿದೆ. ಖಾಲಿಯಾಗಿದ್ದ ಎಣ್ಣೆ ಡಬ್ಬದ ಕಡೆಗೆ ಹೋಗುತ್ತಿದ್ದುದನ್ನು ಕಂಡೆ. “ನೊಡುತ್ತಿರು, ನೀನಿಲ್ಲೇ ಇರು, ನಾನೀಗಲೇ ವಾಚ್‌ಮನ್ ಕರೆಯುತ್ತೇನೆ” ಎಂದು ತಡಮಾಡದೆ ನನ್ನ ಮಗನನ್ನು ಎತ್ತಿಕೊಂಡು ಅವನ ಮನೆಯ ಹತ್ತಿರವೇ ಹೋಗಿ ವಿಷಯ ತಿಳಿಸಿದೆ. ಅವನು ಕೂಡಲೇ “ಚಲೋ ಮಾಜೀ” ಎನ್ನುತ್ತಾ ನನಗಿಂತ ಮೊದಲೇ ನಮ್ಮ ಅಂಗಳಕ್ಕೆ ಬಂದ. ಅಷ್ಟರೊಳಗೆ ಹಾವು ಪೂರ್ತಿಯಾಗಿ ಡಬ್ಬದೊಳಗೆ ಸೇರಿತ್ತು. ವಾಚ್ಮನ್ “ ಅರೆ ಸುವ್ವರ್ ಕೆ ಬಚ್ಚೆ, ಕ್ಯಾ ತುಂ ಇಸ್ ಘರಮೇ ಗುಸ್ಕರ್ ಆತಾಹೈ, ಮಾದರಚೋದ್” ಎಂಬ ಬೈಗುಳಗಳ ಸರಮಾಲೆಯೊಂದಿಗೆ ಡಬ್ಬದ ಅತ್ತ ಇತ್ತ ಎರಡು ಸೈಜ್‌ಗಲ್ಲುಗಳನ್ನು ಜೋಡಿಸಿಟ್ಟ. ನಂತರ ಕುಳಿತುಕೊಂಡೇ ಡಬ್ಬವನ್ನು ಕೋಲಿನಿಂದ ಉರುಳಿಸಿದ. ಹೊರಗೆ ತಲೆ ಹಾಕುತ್ತಿದ್ದಂತೆಯೇ ಅದನ್ನು ಹೊಡೆದು ಸಾಯಿಸಿದ. ಯಥಾಪ್ರಕಾರ ಸಂಸ್ಕಾರ ಮಾಡಿದೆವು. ಮಾರನೆಯ ದಿನ ವಾಚ್ಮನ್ ನಾಗದಾಳಿಯ ಕೆಲವು ಸಸಿಗಳನ್ನು ತಂದು ಅಲ್ಲೊಂದು ಇಲ್ಲೊಂದು ಹೂಳಿ “ದೇಖೋ ಮಾಜೀ, ಈ ಸಸಿಗಳಿಗೆ ನೀರುಹಾಕಿ ಬೆಳೆಸಿ, ಕಿಸೀ ಸಾಂಪ್ ನಜರ್ ನಹೀ ಆತಾ” ಎಂದು ನನಗೆ ಮಾನಸಿಕ ಧೈರ್ಯ ಹೇಳಿ ಹೋದ. ಅದಾದ ನಂತರ ನಾಗದಾಳಿಯ ಪ್ರಭಾವವೋ, ಅಥವಾ ಇಲ್ಲಿಗೆ ಬಂದರೆ ನೇರ ಯಮಪುರಿಗೆ ಟಿಕೆಟ್ ಎಂದು ತಿಳಿಯಿತೋ ನನ್ನ ಕಣ್ಣಿಗಂತೂ ಮತ್ತೆ ಬೀಳಲಿಲ್ಲ.

ನಂತರ ನಾವು ಮೈಸೂರಿಗೆ ಬಂದುಬಿಟ್ಟೆವು. ಕೆಲವು ವರ್ಷಗಳು ನಮ್ಮವರು ಮೈಸೂರಿನಲ್ಲೇ ಕೆಲಸ ಮಾಡಿದ ನಂತರ ಅವರಿಗೆ ಭಡ್ತಿಸಿಕ್ಕಿ ಭೀಮರಾಯನಗುಡಿ ಎಂಬ ಕಡೆಗೆ ವರ್ಗಾವಣೆಯಾಯಿತು. ಆದರೆ ನಮ್ಮ ಮಗನ ವಿದ್ಯಾಭ್ಯಾಸ, ನಮ್ಮ ಅತ್ತೆ ಮಾವನವರ ಜವಾಬ್ದಾರಿಯಿಂದ ನಮ್ಮವರೊಬ್ಬರೇ ಅಲ್ಲಿಗೆ ಹೋಗಿ ಸರ್ವೀಸ್ ಮಾಡಿದರು. ನಮ್ಮ ಮಾವನವರು ತೀರಿಹೋದ ನಂತರ ಅತ್ತೆಯವರನ್ನು ನೋಡಿಕೊಳ್ಳುವ ಕೆಲಸ ನನ್ನ ಆದ್ಯತೆಯಾಗಿತ್ತು. ಹೀಗಾಗಿ ಸಮಯ ಹೊಂದಿಸಿಕೊಂಡು ಯಾವಾಗಲಾದರೂ ಒಂದು ತಿಂಗಳು ನಾನು ಅಥವಾ ನಮ್ಮತ್ತೆಯವರೋ ನಮ್ಮವರಿದ್ದ ಭೀಮರಾಯನಗುಡಿ ಕ್ಯಾಂಪಿಗೆ ಹೊಗಿ ಬರುತ್ತಿದ್ದೆವು. ಅಲ್ಲಿಯೂ ಸರ್ಕಾರಿ ಕ್ವಾರ್ಟರ್ಸ್ ಇತ್ತು. ಆದರೆ ಅದು ಬಹಳ ವಿಶಾಲವಾದ ಜಾಗದ ಮಧ್ಯೆ ಇತ್ತು. ಹಿಂದೆ ಮುಂದೆ ಖಾಲಿ ಜಾಗದಲ್ಲಿ ದೊಡ್ಡದೊಡ್ಡ ಮರಗಳಿದ್ದವು. ಬೆಳಕು ಸರಿಯಾಗಿ ಬಾರದೆ ಮಬ್ಬು ಮಬ್ಬಾಗಿರುತ್ತಿತ್ತು. ಹೀಗಾಗಿ ಮನೆಯೊಳಗೆ ಯಾವಾಗಲೂ ಲೈಟ್ ಉರಿಯುತ್ತಿತ್ತು. ರಾತ್ರಿ ಕಾಲದಲ್ಲಂತೂ ಎಷ್ಟು ದೊಡ್ಡ ಕ್ಯಾಂಡಲಿನ ಬಲ್ಬು ಹಾಕಿದರೂ ಬೆಳಕು ಕಡಿಮೆಯೇ. ಜೊತೆಗೆ ಗ್ರಾಮೀಣ ಬಾಗವಾದ್ದರಿಂದ ಕರೆಂಟು ಹಲವಾರು ಬಾರಿ ಹೋಗಿ ಬರುತ್ತಿತ್ತು. ಅಕ್ಕಪಕ್ಕದಲ್ಲಿ ಹುಲ್ಲು ಬೆಳೆದಿದ್ದು ಸಮೀಪದಲ್ಲಿಯೇ ಹೊಲಗಳೂ ಇದ್ದವು. ಹೀಗಾಗಿ ಹಾವುಗಳ ಭಯ ಜೀವಂತವಾಗಿತ್ತು. ನಾನಲ್ಲಿಗೆ ಹೋದಾಗ ಒಂದು ಘಟನೆ ನಡೆಯಿತು.

ಒಮ್ಮೆ ನಾನಲ್ಲಿಗೆ ಹೋಗಿದ್ದಾಗ ಅಲ್ಲಿನ ಕೆಲಸದಾಕೆ ಬೆಳಗಿನ ಹೊತ್ತು ಕಸಗುಡಿಸಲು ಒಳಗಿನ ರೂಮಿಗೆ ಹೋದವಳು ಒಂದೇ ನಿಮಿಷಕ್ಕೆ “ಬಾಯಾರೇ, ನೀವಿಟ್ಟಿದ್ದ ಪೆಟಾರಿಯ ಮೇಲೆ ಕರಿಯ ನಾಗಪ್ಪ ಕುಂತವ್ನೆ. ನಾನು ಜರಾ ಮುಂದೆಹೋದ ತಕ್ಷಣ ಸರ‍್ರಂತ ಮೇಲಿಂದ ಬಿತ್ತು.” ಎಂದು ಬೊಬ್ಬೆ ಹೊಡೆಯುತ್ತಾ ಬಂದಳು ನನಗೆ ಮೊದಲೇ ಭಯ. ಏನು ಮಾಡಬೇಕಂತ ತೋಚದೆ ಸರಿಯಾಗಿ ಪರೀಕ್ಷಿಸಬೇಕೆಂದು ಎಮರ್ಜೆನ್ಸಿ ಲೈಟ್ ಕೈಯಲ್ಲಿ ಹಿಡಿದು ಕೋಣೆಯೊಳಗೆ ಹೋಗೋಣವೆನ್ನುವಷ್ಟರಲ್ಲಿ ಹಿಂದಿನಿಂದ ಕೆಲಸದವಳ ಕೂಗು “ಬಾಯಾರೇ, ಮೈಮೇಲೆ ಖಬರೈತೇನ್ರೀ, ಅದು ಕರಿಬಣ್ಣದ ನಾಗಪ್ಪ. ನಾನು ಸರೀ ನೋಡೀನ್ರೀ.” ಎಂದು ನನ್ನನ್ನು ತಡೆದದ್ದಲ್ಲದೆ ಕ್ಯಾಂಪಿನ ಮೇಸ್ತ್ರಿಗೆ ಹೇಳಿ ಕ್ಯಾಂಪ್ ಆಫೀಸರಿಗೆ ಸುದ್ಧಿ ತಲುಪಿಸಿದಳು. ಆತ ಬಂದವನೇ “ಬಾಯಾರೇ ಹೆದರಕೋಬ್ಯಾಡ್ರೀ, ಸಾಯಾಬ್ರು ಬೇರೆ ಇನಸ್ಪೆಕ್ಷನ್‌ಗೆ ಹೋಗಿದ್ದಾರೆ, ನಾವು ಇದ್ದೀವಿ. ಹಾವು ಹಿಡಿಯೋವ್ನು ಇದ್ದಾನೆ ಕರೆತರುತ್ತೇನೆ.” ಎಂದು ತನ್ನ ಮೊಟಾರ್ ಸೈಕಲ್ ಹತ್ತಿ ಹೋಗೇ ಬಿಟ್ಟ. ಜೊತೆಗೆ ನಾನು ಬೆಳಗಿನ ನಾಷ್ಟಾ ಮಾಡಿದ್ದೀನೋ ಇಲ್ಲವೋ ಎಂಬ ಬಗ್ಗೆ ಕಾಳಜಿ ಬೇರೆ. “ಬಾಯಾರೆ ಮುಂಜಾನೆ ಫಳಾರ ಮುಗಿಸಿದ್ದೀರೋ ಇಲ್ರೋ, ಪಕ್ಕದ ಬೀದಿಯಲ್ಲಿರೋ ದೇವಣ್ಣನ ಮೆಸ್ಸಿನಿಂದ ಮಂಡಕ್ಕಿ ಒಗ್ಗರಣೆ, ಮಿರ್ಚಿಬಜಿ ತರಿಸಿಕೊಡಲೇನ್ರೀ” ಎಂದು ಅನುಕಂಪದಿಂದ ಕೇಳಿದ. ಅಲ್ಲಿ ಒಗ್ಗರಣೆ ಖಾರವನ್ನು ನೆನೆಸಿಕೊಂಡರೇ ಭಯ. ಇನ್ನು ದೇವಣ್ಣನ ಮೆಸ್ಸು ! ಯಾವಾಗಲೂ ಅವನ ಬಾಯಿತುಂಬ ಝರದಾಪಾನ್ ಅಗಿಯುತ್ತಾ ಆಗಾಗ ಎರಡು ಬೆರಳು ಬಾಯಿಗಿಟ್ಟು ಪಿಚಕ್ಕನೆ ಉಗುಳುತ್ತಾ ಇರುವ ಹಾಗೂ ಉಬ್ಬೆಗೆ ಹಾಕಿದರೂ ಬೆಳ್ಳಗಾಗದ ಸ್ಥಿತಿಯಲ್ಲಿನ ಪಾಯಿಜಾಮಾ ಶರಟು, ಕುರುಚಲು ಗಡ್ಡ, ತಲೆಯಮೇಲೆ ಬೆಳೆದಿದ್ದ ಪೊದೆಯಂತಹ ಕೂದಲು ಅದರ ಮೇಲೊಂದು ಅಡ್ಡಪಟ್ಟಿಯಂತಹ ಪಟ್ಟಿ ಕಟ್ಟುತ್ತಿದ್ದ. ಅವನ ಆಕೃತಿ ಕಣ್ಮುಂದೆ ಬಂತು, ಒಮ್ಮೊಮ್ಮೆ ನಮ್ಮವರ ಜೊತೆಯಾಗಿ ಅವನ ಮೆಸ್ಸಿನ ಮುಂದೆ ಹಾದು ಹೋಗುವಾಗ ಅವನು ನಮ್ಮವರಿಗೆ ಸಲಾಮುಹಾಕುತ್ತಾ “ಬಾಯಾರೇ ನಮ್ಮೂರು ಹೆಂಗನ್ನಿಸಿತು? ಬರ‍್ರೆಲಾ ಸ್ಪೆಷಲ್ ಚಾ ಮಾಡ್ತೀನಿ” ಎಂದು ಆಹ್ವಾನವಿತ್ತಿದ್ದ. ಅದನ್ನು ನೆನೆಸಿಕೊಂಡು “ಬ್ಯಾಡ್ರೀ ಸಾಹೇಬರು ಆಫೀಸಿಗೆ ಹೊರಡುವಾಗಲೇ ಅವರ ಜೋಡೀ ತಿಂಡಿ ಆಗಿದೆ” ಎಂದು ಕ್ಯಾಂಪ್ ಮೇಸ್ತ್ರಿಗೆ ಹೇಳಿದೆ.

ಅಷ್ಟೊತ್ತಿಗೆ ನೆರೆಮನೆಯವರಾದ ಗೀತಾಬಾಯಿ ಭಕ್ಕರಿ, ಸೊಪ್ಪಿನ ಪಲ್ಯ, ಗುರೆಳ್ಳುಪುಡಿ, ಮೊಸರು ಎಲ್ಲವನ್ನೂ ತಂದಳು. “ವೈನೀ ನೀವು ಹತ್ತು ಹೊಡೆಯೋಕೆ ಮುಂಚೆ ಏನೂ ಹೊಟ್ಟೆಗೆ ಹಾಕಿಕೊಳ್ಳೋಲ್ಲ ಅಂತ ಗೊತ್ತಾದರೀ. ಅದಕ್ಕೇ ಒಂದಿಷ್ಟು ರೊಟ್ಟಿ ತಂದೀನ್ರೀ. ಇನ್ನು ಆ ಕರಿನಾಗಪ್ಪನ್ನ ಹಿಡಿದುಕೊಂಡು ಹೋಗೋವರೆಗೂ ಎಷ್ಟೊತ್ತಾಗತದೋ ಏನೊ. ಅಂತವರೆಗೂ ಹಂಗೇ ಇರಿತೀರೇನ್ರೀ. ನಾಷ್ಟ ಮಾಡಿ ಬನ್ರೀ” ಎಂದಳು. ಮೆಸ್ಸಿನ ಒಗ್ಗರಣೆ ನೆನೆಸಿಕೊಂಡು ಸುಳ್ಳುಸುಳ್ಳೇ ನಾಷ್ಟಾ ಆಗಿದೆಯೆಂದಿದ್ದೆ, ಈಗ ಬಿಗುಮಾನ ಬಿಟ್ಟು ಗೀತ ತಂದಿದ್ದ ರೊಟ್ಟಿ ಪಲ್ಲೆ ಸವಿದೆ. ನೀರು ಕುಡಿದು ಸಮಾಧಾನವಾದ ಮೇಲೆ ಈ ಪ್ರಕರಣ ಬೇಗನೇ ಮುಗಿಸಪ್ಪಾ ದೇವರೇ ಎಂದು ಪ್ರಾರ್ಥಿಸಿದೆ, ಹೊರಗಡೆಯಿದ್ದ ದೀವಾನದ ಮೇಲೆ ಆಸೀನಳಾದೆ. ಅಷ್ಟೊತ್ತಿಗೆ ನಮ್ಮ ಮನೆಗೆ ಹಾವು ಬಂದ ಸುದ್ಧಿ ಕ್ಯಾಂಪಿನಲ್ಲೆಲ್ಲ ಹರಡಿ ಸಾಕಷ್ಟು ಮಂದಿ ಜಮಾಯಿಸಿದ್ದರು.

ಸುಮಾರು ಹನ್ನೊಂದರ ಸಮಯ. ಹೊರಗೆ ಗಾಡಿಸದ್ದು ಕೇಳಿ “ಹಾ ! ಬಂದಾಂತ ಕಾಣಿಸುತ್ತೆ, ಎಲ್ಲರೂ ಸರಿದು ದೂರ ನಿಲ್ರೀ” ಎಂದು ಬಂದವನನ್ನು ಕರೆತಂದ. “ಹುಸೇನಪ್ಪಾ ಬಾ.. ಬಾ.. ನಿನಗೇ ಕಾಯುತ್ತಿದ್ದೆವು.” ಎಂದು ಮರ್ಯಾದೆಯಿಂದ ಆಹ್ವಾನಿಸಿದರು. “ಏ ಎಲ್ಲಾ ದೂರ ಸರರ‍್ರೀ. ನೀವೆಲ್ಲ ಹಿಂಗೆ ಗದ್ದಲ ಮಾಡಿದರೆ ನಾನು ಹೊಳ್ಳಿ ಹೊಂಟುಬಿಡ್ತೀನಿ” ಎಂದು ದೊಡ್ಡ ದನಿಯಲ್ಲಿ ಆವಾಜ್ ಹಾಕಿ ಮನೆಯೊಳಗೆ ಬಂದ. ಅವನನ್ನು ನೋಡಿದೆ. ಸೊಣಕಲು ಸೀಗೇಕಾಯಿಯಂತೆ ಇದ್ದ, ಅವನ ಮೈಮೇಲೆ ಕಪ್ಪುಬಣ್ಣದ ನೆಟ್‌ಬನಿಯನ್ ತೊಟ್ಟಿದ್ದ. ಸೊಂಟಕ್ಕೊಂದು ಲುಂಗಿ ಸುತ್ತಿದ್ದ. ಕೊರಳಲ್ಲಿ ಮತ್ತು ಎರಡೂ ರೆಟ್ಟೆಗಳಲ್ಲಿ ತಾಯಿತಗಳಿದ್ದವು. ಬಾಯಲ್ಲಿ ರೂಢಿಯಂತೆ ಝರದಾ, ಬಲಗೈಯಲ್ಲೊಂದು ‘ವಿ’ ಆಕಾರದ ಕೋಲಿತ್ತು. ಬೆಳಗ್ಗೆಯೇ ಪರಮಾತ್ಮನನ್ನು ಏರಿಸಿದ್ದನೆಂಬುದು ಗೊತ್ತಾಗುತ್ತಿತ್ತು ಅಥವಾ ಹಿಂದಿನ ರಾತ್ರಿಯದ್ದು ಇನ್ನೂ ಪೂರ್ತಿ ಇಳಿದಿರಲಿಲ್ಲವೋ. ಇವನು ಹಾವು ಹಿಡೀತನಾ? ಎಂಬ ಸಂದೇಹ ಮೂಡಿತು. “ ಅಬೇ..ಯಾವಕೋಣೆಯಲ್ಲಿದೆ ತೋರಿಸು ಬರ‍್ರೋ” ಎಂದಬ್ಬರಿಸಿದ. ಅಲ್ಲೆ ನಿಂತಿದ್ದ ಮನೆಗೆಲಸದ ಹೆಣ್ಣುಮಗಳು “ ಅದೇ ಕೋಣ್ಯಾಗೇ ಹುಸೇನಪ್ಪಾ” ಎಂದು ದೂರದಿಂದಲೇ ಕೈಮಾಡಿ ತೋರಿಸಿದಳು. ಒಂದು ದೊಡ್ಡ ಟಾರ್ಚ್ ಹಿಡಿದು ತಾನು ತಂದಿದ್ದ ‘ವಿ’ಆಕಾರದ ಕೋಲಿನೊಂದಿಗೆ ಒಳಗೆ ಹೋದ. ಬಾಗಿಲು ಹಾಕಿಕೊಂಡ. ಹೋಗೋಕೆ ಮುಂಚೆ “ಮುಂಚೇನೇ ಹೇಳ್ತೀನಿ ಯಾರೂ ಸದ್ದು ಗದ್ದಲ ಮಾಡಬಾರದು. ಕರಿನಾಗಪ್ಪ ಬಾಳ ದುಷ್ಟಾ ಅದಾನ. ಜರಾ ಯಾಮಾರಿದ್ರೂ ಜೀವಕ್ಕೆ ಅಪಾಯ “ ಎಂದು ಹೇಳಿದ.

ಹೊರಗೆ ಕಾಯುತ್ತಿದ್ದ ನಮಗೆಲ್ಲ ಆತಂಕದ ಕ್ಷಣಗಳು. ಕ್ಯಾಂಪಿನ ಮೇಸ್ತ್ರಿ ಸ್ವಲ್ಪ ಧೈರ್ಯ ವಹಿಸಿ “ಹುಸೇನಪ್ಪಾ ಮಿಲಗಯಾ ಕ್ಯಾ?” ಎಂದು ಕೋಣೆಯ ಬಾಗಿಲ ಹತ್ತಿರ ನಿಂತೂ ಕೂಗಿದ. ಮರುಕ್ಷಣವೇ ಒಳಗಿನಿಂದ ನಗುವಿನ ಅಟ್ಟಹಾಸ ಕೇಳಿಬಂತು. ಈ ಜನ ಯಾತಕ್ಕೆ ನಗುತ್ತಾರೋ ಗೊತ್ತಾಗದು ಎಂದುಕೊಂಡೆ. ಹೊರಗಡೆ ಬಂದ ಹುಸೇನಪ್ಪ “ಏ ದೇಖೋ ಮೇಸ್ತ್ರಿಭಾಯ್, ಮಾಜೀ, ಕರಿನಾಗಪ್ಪಾ ಹ್ಯಾಂಗ ನ್ಯಾತಾಡಕ್ಕತ್ಯಾನೆ” ಎಂದು ತನ್ನ ಕೋಲಿನ ಮೇಲೆ ನೇತಾಡುತ್ತಿದ್ದ ಕರಿಬಣ್ಣದ ಲಂಗದ ಉದ್ದನೆಯ ಲಾಡಿಗಳನ್ನು ಎತ್ತಿ ತೋರಿದ. ಅದನ್ನು ಕಂಡ ಕೂಡಲೇ ಟೈಲರ್ ಕೆಲಸ ಮಾಡುತ್ತಿದ್ದ ಸುಮಿತ್ರಾಬಾಯಿ “ಅಯ್ಯೋ ಇವು ನಾನೇ ಹೊಲಿದ ಲಾಡಿಗಳು. ಅವನ್ನು ಅಳತೆಗೆ ಸರಿಯಾಗಿ ಕತ್ತರಿಸುವ ಮೊದಲೇ ಇಲ್ಲಿಗೆ ಹ್ಯಂಗ ಬಂದವು? ಬಹುಶಃ ನಮ್ಮ ಉಡಾಳರದ್ದೇ ಈ ಕೆಲಸ” ಎಂದಳು. “ವೈನಿ ಹೇಳ್ರೆಲಾ ಅವು ಒಂದಕ್ಕೊಂದು ಕಟ್ಟಿಕೊಂಡು ರೈಲಾಟ ಆಡುತ್ತಿದ್ದವು. ಇಲ್ಲಿಗೆ ಬಂದು ಇಲ್ಲೇ ಬಿಟ್ಟು ಹೋಗ್ಯಾರೆ. ಕತ್ತಲೆ ಕೋಣೆಯಲ್ಲಿ ಕೆಲಸದವಳಿಗೆ ಅದೇ ಕರಿನಾಗಪ್ಪನಂತೆ ಕಂಡಿವೆ” ನಿಜ ತಿಳಿದ ಮೇಲೆ ಎಲ್ಲರೂ ನಕ್ಕೋತಾ ಸರಿದು ಹೋದರು. ಅಂತೂ ನೆಮ್ಮದಿಯಾಯಿತು. ಅದಕ್ಕಾಗಿ ಓಡಾಡಿದ ಕ್ಯಾಂಪಿನ ಮೇಸ್ತ್ರಿ, ಹುಸೇನಪ್ಪ ಎಲ್ಲರಿಗೂ ಚಾ ಕುಡಿಯಲು ಇನಾಮು ಕೊಟ್ಟು ಥ್ಯಾಂಕ್ಸ್ ಹೇಳಿದ್ದಾಯಿತು. ಬೆಳಗ್ಗೆ 9-30 ಕ್ಕೆ ಪ್ರಾರಂಭವಾದ ಈ ಪ್ರಹಸನ ಮುಗಿದಾಗ 12-30ಗೆ ಮುಗಿಯಿತು. ನಮ್ಮವರು ಇನ್ ಸ್ಪೆಕ್ಷನ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ನನ್ನಿಂದ ಸಂಗತಿ ಕೇಳಿ ಅವರು ಕಾಳಿಂಗಮರ್ದನದ ರಿಹರ್ಸಲ್ ತುಂಬ ಚೆನ್ನಾಗಿದೆ ಎಂದು ನಕ್ಕರು.

ನಂತರ ನನ್ನವರು ಕೃಷ್ಣಾಪುರ, ಚೆನ್ನರಾಯಪಟ್ಟಣ, ಗೊರೂರು ಕಡೆಗಳಲ್ಲಿ ಕೆಲಸ ಮಾಡಿ ಕೊನೆಗೆ ಮೈಸೂರಿಗೆ ಬಂದು ಸೇವಾನಿವೃತ್ತರಾದರು. ನಮ್ಮ ಮನೆಯಲ್ಲಿ ನಾವಿದ್ದೆವು. ಬೇರೆ ಊರುಗಳಲ್ಲಿ ನಮ್ಮವರು ನೋಡಿದ್ದ ಹಾವುಗಳ ಪ್ರಸಂಗಗಳನ್ನು ಹೇಳುತ್ತಿದ್ದರು. ಆದರೆ ನಾನು ಅವುಗಳನ್ನು ಪ್ರತ್ಯಕ್ಷವಾಗಿ ನೋಡಿದವಳಲ್ಲ. ನಮ್ಮವರು ಹಾವುಗಳಿಗೂ ನಮ್ಮನ್ನು ಕಂಡರೆ ಭಯವಿರುತ್ತದೆ. ಆದ್ದರಿಂದ ಗದ್ದಲ. ಜನಗಳ ಓಡಾಟ ಇರುವ ಕಡೆಗಳಲ್ಲಿ ಅವು ಸಾಮಾನ್ಯವಾಗಿ ಬರುವುದಿಲ್ಲ ಎಂದು ಹೇಳಿದರು.

ಕೆಲವು ವರ್ಷಗಳ ನಂತರ ಈ ನಂಬಿಕೆಯನ್ನು ಬುಡಮೇಲು ಮಾಡುವಂತಹ ಘಟನೆಯೊಂದು ನಮ್ಮ ಮನೆಯ ಮುಂದಿನ ರಸ್ತೆಯಲ್ಲೇ ನಡೆಯಿತು. ನಮ್ಮ ಮನೆಗೂ ಪಕ್ಕದ ಮನೆಗೂ ಕಾಂಪೌಂಡು ಮಾತ್ರ ಮಧ್ಯದಲ್ಲಿತ್ತು. ಅವರ ಮನೆಯಲ್ಲಿ ಬರಿಯ ಹೆಣ್ಣುಮಕ್ಕಳೇ ಇದ್ದರು. ಒಬ್ಬರು ವೃದ್ಧಾಪ್ಯದವರು ಇದ್ದರು. ನಮ್ಮ ಕಾಂಪೌಂಡಿನೊಳಗೆ ನಾನು ನಮ್ಮವರು ಮಾತನಾಡುತ್ತ ನಿಂತಿದ್ದೆವು. ಸುಮಾರು 6-45ರ ಸಮಯ. ನಮ್ಮ ಮನೆಯ ಮುಂದಿನ ರಸ್ತೆ ದಾಟಿದರೆ ಸಣ್ಣದೊಂದು ಪಾರ್ಕಿನಿಂದ ಒಂದು ಭರ್ಜರಿಯಾದ ಹಾವೊಂದು ರಸ್ತೆಯಲ್ಲೇ ಹೊರಟಿತ್ತು. ಅದನ್ನು ನೋಡಿ ನಾನು ಬೆಚ್ಚಿಬಿದ್ದೆ. ನನ್ನವರು ಸದ್ದುಮಾಡಬೇಡ ಅದೆತ್ತ ಕಡೆ ಹೋಗುತ್ತದೆ ನೋಡೋಣವೆಂದು ಕಾಯ್ದೆವು. ಅದು ತಕ್ಷಣ ಪಕ್ಕಕ್ಕೆ ತಿರುಗಿ ಪಕ್ಕದ ಮನೆಯ ಗೇಟಿನತ್ತ ಹೊರಟಿತು. ಸರಸರನೆ ಹರಿಯುತ್ತಾ ಕಬ್ಬಣದ ಗೇಟಿನ ಅಡಿಯಲ್ಲಿ ನುಗ್ಗಿ ಒಳಹೋಯಿತು. ಅಷ್ಟನ್ನು ನೋಡಿದವರೇ ಪಕ್ಕದ ಮನೆಯವರನ್ನು ಕೂಗಿ ಹೀಗೊಂದು ಹಾವು ಕಾಂಪೌಂಡಿನೊಳಕ್ಕೆ ನುಗ್ಗಿದೆ. ನೀವು ಮುಂದಿನ ಬಾಗಿಲು ತೆರೆದು ತಕ್ಷಣ ಹೊರಬರಬೇಡಿ ಎಂದು ಎಚ್ಚರಿಸಿದೆವು. ಅವರ ಮನೆಯ ಕಾಂಪೌಂಡಿನೊಳಗೆ ಅಲ್ಲಲ್ಲಿ ಕೆಲವು ವಸ್ತುಗಳಿದ್ದವು. ನಮಗೆ ಅದೆಲ್ಲಿ ಯಾವುದರೊಳಗೆ ಸೇರಿಕೊಂಡಿತೋ ಎಂಬ ಅನುಮಾನ. ಶುರುವಾಯಿತು. ಹಾವು ಹಿಡಿಯುವವರ ನಂಬರಿನ ಹುಡುಕಾಟ. ಅವರು ಸಿಕ್ಕರೂ ಬರಬೇಕಾದರೆ ಸಾಕಷ್ಟು ಸಮಯ ಬೇಕು. ಹಾಗಾಗಿ ನಾವಿಬ್ಬರೂ ಮತ್ತು ಪಕ್ಕದ ಮನೆಯವರು ಹಿಂದಿನ ಬಾಗಿಲಿನಿಂದ ಹೊರಬಂದು ನಮ್ಮೊಡನೆ ಸೇರಿಕೊಂಡರು. ಆ ವ್ಯಕ್ತಿ ಬರುವವರೆಗೂ ಕಾವಲು ಕಾಯುತ್ತಾ ಅತ್ತಿತ್ತ ಕಣ್ಣಾಡಿಸುತ್ತಲೇ ಇದ್ದೆವು. ರಾತ್ರಿಯಾಗಿದ್ದರಿಂದ ಲೈಟುಬೆಳಕಿನಲ್ಲಿ ಹುಡುಕಾಟ. ಬಂದ ಎಕ್ಸ್ಪರ್ಟ್ ಮನೆಯ ಹೊರಗಡೆಯಿದ್ದ ಸಾಮಾನುಗಳನ್ನೆಲ್ಲ ಶೋಧಿಸಿದ. ಸುತ್ತಮುತ್ತಲ ಕಿಂಡಿಗಳನ್ನೂ ಟಾರ್ಚ್ ಹಾಕಿನೋಡಿದ. ಎಲ್ಲೂ ಕಾಣಿಸಲಿಲ್ಲ. ಒಳಗೆ ನುಗ್ಗಿದ್ದನ್ನು ನೋಡಿದೆವು. ಹೊರಗೆ ಯಾವರೀತಿ ಹೋಯಿತೋ ತಿಳಿಯಲೇ ಇಲ್ಲ. ಆ ವ್ಯಕ್ತಿ ಹೇಳಿದ್ದಿಷ್ಟು “ಸಾಮಾನ್ಯವಾಗಿ ಹಾವು ಒಂದೇ ಕಡೆ ನಿಲ್ಲುವುದಿಲ್ಲ. ಅವಕಾಶ ಸಿಕ್ಕಿದ್ದೆಡೆಗೆ ಹರಿದು ಹೋಗಿರಬೇಕು. ಇಲ್ಲಂತೂ ಇಲ್ಲ” ಅಷ್ಟು ಖಾತರಿಯಾಗುವಷ್ಟರಲ್ಲಿ ರಾತ್ರಿ 10-00 ಗಂಟೆಯಾಗಿತ್ತು. ಏನೂ ಪ್ರಯೋಜನವಾಗದಿದ್ದರೂ ಬಂದವನಿಗೆ ಹಣ ಕೊಟ್ಟು ಕಳುಹಿದರು. ನಮಗೆ ಅಷ್ಟು ಹೊತ್ತೂ ಆ ಜಾಗದಿಂದ ಕದಲದೆ ಸೆಂಟ್ರಿ ಡ್ಯೂಟಿ ಮಾಡಿ ಕಾಲು ನೋಯಲು ಪ್ರಾರಂಭವಾಗಿತ್ತು. ವ್ಯರ್ಥ ಹುಡುಕಾಟವಾದರೂ ಸಿಗಲಿಲ್ಲವೆಂಬ ಸಂಗತಿಯಿಂದ ಹಾವಿನ ಭಯ ಮಾತ್ರ ಮನದಲ್ಲೇ ಉಳಿಯಿತು. ಹೊರಗಡೆ ಓಡಾಡುವಾಗಲೆಲ್ಲ ರಾತ್ರಿಯ ಕಾಲದಲ್ಲಿ ಅತ್ತಿತ್ತ ಎಚ್ಚರಿಕೆಯಿಂದ ಪರೀಕ್ಷಿಸಿಯೇ ಹೊರಡುವಂತಾಗಿದೆ.

ಬಿ.ಆರ್.ನಾಗರತ್ನ. ಮೈಸೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *