ವಿಶೇಷ ದಿನ

ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ದೀಪಾವಳಿ

Share Button

ದೀಪದಿಂದ ದೀಪ ಹಚ್ಚಿ ಬೆಳಕಿನೆಡೆಗೆ ಬದುಕಿನ ಬಂಡಿಯನ್ನು ಎಳೆದೊಯ್ಯುವ ದ್ಯೋತಕವಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬದಂದು ಕಾರಣಾಂತರಗಳಿಂದ ದೂರ ದೂರ ಚದುರಿ ಹೋಗಿರುವ ಮನೆಮಂದಿ, ಸಂಬಂಧಿಕರು ಹಾಗೂ ಮಿತ್ರರು ಒಂದಡೆ ಸೇರಿ ಸಿಹಿ ಕಹಿ ಹಂಚಕೊಂಡು ಪಟಾಕಿಗಳನ್ನು ಸಿಡಿಸುವ ಹಬ್ಬ ಎಂದರೆ ತಪ್ಪಾಗಲಾರದು. ಎಣ್ಣೆ ಸ್ನಾನ ಮಾಡಿ ಪೂಜೆ ದೀಪಗಳ ಅಲಂಕಾರ, ಹೊಸ ಬಟ್ಟೆ, ತಳಿರು ತೋರಣಗಳಿಂದ ಸಿಂಗಾರವಾಗುವ ಮನೆಯಲ್ಲಿ ಗೋಪೂಜೆ, ಬಲೀಂದ್ರ ಪೂಜೆ ಹಾಗೂ ಲಕ್ಷ್ಮಿ ಪೂಜೆಗಳು ವೈಭವವಾಗಿ ನಡೆಯುವುದನ್ನು ನೋಡುವುದೇ ಒಂದು ಸೊಬಗು. ಆಧುನಿಕತೆಯ ಭರಾಟೆಯಲ್ಲಿ ಯುವ ಜನತೆ ತನ್ನ ಬಳಗದೊಂದಿಗೆ ಬೆರೆಯುವುದೇ ಕಷ್ಟ ಸಾಧ್ಯವಾಗಿದೆ. ವರ್ಷವಿಡೀ ಒಂದೇ ಸಮನೆ ದುಡಿಯುವ ತೋಳುಗಳು ಸಾಲು ಸಾಲಾಗಿ ಬರುವ ರಜೆಯ ಮಜಾವನ್ನು ಅನುಭವಿಸಲಷ್ಟೆ ಸಿದ್ದವಾದಂತಾಗಿರುವಾಗ ದೀಪಾವಳಿ ಮಾತ್ರ ಜೀವಂತಿಕೆಯ ಹಬ್ಬವಾಗಿ ಇನ್ನೂ ಉಳಿದು ಕೊಂಡಿದೆ.

ದೀಪದಿಂದ ದೀಪ ಹಚ್ಚಿ ಜಗತ್ತನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಬೇಕಾಬಿಟ್ಟಿ ಉದಾಸೀನದಿಂದ ಸಿಡಿಸಿದ ಪಟಾಕಿಯ ಕಿಡಿಯಿಂದಾಗಿ ಕಣ್ಣುಗಳು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದೂ ಇದೆ. ಆದರೂ ದೀಪಾವಳಿಯಂದು ಪಟಾಕಿಯ ಸದ್ದು ಕಿವಿಗೆ ಬೀಳದಿದ್ದರೆ ಏನನ್ನೋ ಕಳೆದುಕೊಂಡಂತಹ ಭಾವನೆ ನಮ್ಮ ಮನದಲ್ಲಿ ಮೂಡದಿರದು. ಜನ್ಮದಿನದಂದು ಕ್ಯಾಂಡಲ್ ಉರಿಸಿ ಆರಿಸುವ ಸಂಸ್ಕೃತಿಗೆ ಮಾರುಹೋಗಿರುವ ನಾವು ದೀಪದಿಂದ ದೀಪ ಹಚ್ಚಿ ಮನೆ-ಮನಗಳನ್ನು ಬೆಳಗಿಸುವ ನಮ್ಮತನವನ್ನು ಮರೆಯಲಿಕ್ಕಾಗುತ್ತದೆಯೇ? ನಮ್ಮ ಹಿರಿಯರು ಪ್ರೀತಿ-ಪ್ರೇಮ ಆತ್ಮೀಯತೆಯ ಸಂಕೇತವಾಗಿ ಆಚರಿಸುತ್ತಿದ್ದ ಹಬ್ಬದ ಮೆರುಗನ್ನು ಮತ್ತೆ ಕಣ್ಮುಂದೆ ತಂದುಕೊಂಡು ಆಚರಿಸುವಂತಾಗಬೇಕಾಗಿದೆ.

ನರಕ ಚತುರ್ದಶಿ ಎನಿಸಿರುವ ಆಶ್ವಯುಜ ಕೃಷ್ಣಚತುರ್ದಶಿ ಈ ಹಬ್ಬದ ಮೊದಲನೆಯದಿನ. ಸ್ವಾತಿ ನಕ್ಷತ್ರವಿದ್ದರೆ ಶುಭ, ಮೂಲತಃ ಮೃತ್ಯು ದೇವತೆಯೂ, ನರಕಾಧಿಪತಿಯೂ ಆದ ಯಮನನ್ನು ಪೂಜಿಸಿ, ನರಕದ ಶಿಕ್ಷೆಯಿಂದ ಪಾರುಮಾಡು ಎಂದು ಬೇಡುವ ದಿನವಾಗಿತ್ತು. ಆನಂತರ ಅದು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ್ದರಿಂದ ವಿಜಯೋತ್ಸವದ ದಿನವಾಯಿತು. ಆ ದಿನ ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನಮಾಡಿ ವ್ರತಿಯು ತನ್ನ ಪಾಪಗಳ ನಾಶಕ್ಕಾಗಿ ಪ್ರಾರ್ಥಿಸಿ ಯಮದೇವನಿಗೆ ತರ್ಪಣವನ್ನರ್ಪಿಸಿ, ನಕರಾಸುರನಿಗೆ ಒಂದು ದೀಪವನ್ನು ಹಚ್ಚಬೇಕು. ಸಂಜೆ ಮನೆಯ ಎಲ್ಲಾ ಭಾಗಗಳಿಗೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಬೇಕು.

ಮಾರನೆ ದಿನ ಅಮಾವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗಿದೆ. ಅಭ್ಯಂಜನ, ಪಿತೃಗಳಿಗೆ ತರ್ಪಣ. ಅನ್ನಸಂತರ್ಪಣೆ, ಹಗಲು ಉಪವಾಸ ಇವು ಮುಖ್ಯ ಕಾರ್ಯಗಳು. ಹಿಂದಿನ ರಾತ್ರಿಯಂತೆಯೇ ಈ ದಿನದ ರಾತ್ರಿಯಲ್ಲೂ ದೀಪಾಲಂಕರಣ ಮಾಡಬೇಕು. ವಿಶೇಷವಾಗಿ ಲಕ್ಷ್ಮಿಪೂಜೆ ಮಾಡುವ ದಿನ ಇದು. ವರ್ತಕರಿಗೆ ಪವಿತ್ರವಾದ ದಿನ. ತಮ್ಮ ಲೆಕ್ಕ – ಪುಸ್ತಕಗಳನ್ನು ಪೂಜಿಸಿ, ಹೊಸ ಲೆಕ್ಕಗಳನ್ನು ಪ್ರಾರಂಭಿಸುವರು. ಲಕ್ಷ್ಮಿ ಪೂಜೆ ಮಾಡಲು ಪ್ರದೋಷಕಾಲ ಅತ್ಯಂತ ಶುಭ, ಅಂದರೆ ಸೂರ್ಯಾಸ್ತವಾಗಿ 1 ಗಂಟೆ 36 ನಿಮಿಷಗಳವರೆಗೂ ಅಮಾವಾಸ್ಯೆ ಮುಂದುವರಿದಿರಬೇಕು. ಈ ವೇಳೆ ಲಕ್ಷ್ಮಿಪೂಜೆಗೆ ಅತ್ಯಂತ ಶುಭ.

ಮರುದಿನ ಬಲಿಪಾಡ್ಯಮಿ ಎಂದು ಕರೆಯಲ್ಪಡುವ ಕಾರ್ತಿಕ ಶುಕ್ಲ ಪಾಡ್ಯಮಿ ಹಿಂದೂ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ಮೂರೂವರೆ ಮುಹೂರ್ತಗಳಲ್ಲಿ ಅರ್ಧದಿವಸದ ಮುಹೂರ್ತ. ಪ್ರಬಲನಾದ ಅಸುರಚಕ್ರವರ್ತಿ ಬಲಿಯನ್ನು, ವಿಷ್ಣು, ವಾಮನಾವತಾರವನ್ನೆತ್ತಿ ಪಾತಾಳಕ್ಕೆ ತುಳಿದದ್ದು ಈ ದಿನದ ಕಥೆ. ತ್ರೇತಾಯುಗದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಿದ್ದು ಇದೇ ದಿನ. ದ್ವಾಪರಾಯುಗದಲ್ಲಿ ಪಾಂಡವರು ಅಜ್ಞಾತವಾಸ ಮುಗಿಸಿ, ಕೌರವರ ಕಣ್ಣಿಗೆ ಕಾಣಿಸಿಕೊಂಡಿದ್ದು ಈ ದಿನವೇ. ಈ ದಿನ ನೀಡಿದ ದಾನ ಅಕ್ಷಯ ಫಲಪ್ರದ ಎನಿಸಿದೆ. ಈ ದಿನವೇ ಪಾರ್ವತಿಯು, ಶಿವನೊಂದಿಗೆ ಪಗಡೆಯಾಟವಾಡಿ, ಶಿವನನ್ನು ಸೋಲಿಸಿದ ದಿನವಾಗಿದೆ.

ಬಲಿಪಾಡ್ಯಮಿ ದಿವಸ ಹಸು, ಎತ್ತುಗಳ ಪೂಜೆ, ಗೋವರ್ಧನ ಬೆಟ್ಟದ ಪೂಜೆ, ಕುಟುಂಬದ ಗಂಡಸರಿಗೆ, ಹೆಂಗಸರು ಮಾರ್ಗ ಪಾಲೀಕಂಕಣ ಕಟ್ಟಿ ಆರತಿಮಾಡುವುದು ಈ ದಿವಸದ ಮುಖ್ಯಕಾರ್ಯಗಳು. ಈ ದಿವಸ ವಿಕ್ರಮ ಸಂವತ್ಸರದ ಶಕ 2066 ರ ಪ್ರಾರಂಭದಿನ. ವಿಕ್ರಮ ಶಕೆಗೂ, ಕ್ರಿಸ್ತಶಕಕ್ಕೂ 57 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನಶಕೆಗೆ 135 ವರ್ಷಗಳ ವ್ಯತ್ಯಾಸವಿರುತ್ತದೆ. ಈ ದಿವಸ ವ್ಯಾಪಾರ, ಉದ್ಯೋಗ, ಅಭ್ಯಾಸ, ಗೃಹ ಪ್ರವೇಶ, ಶುಭ ಕಾರ್ಯಗಳನ್ನು ಮಾಡಬಹುದು. ನಂತರದ ಹಬ್ಬ ಕಾರ್ತಿಕ ಶುಕ್ಲ ದ್ವಿತೀಯ ಅಥವಾ ಭಾತೃದ್ವಿತೀಯ, ಯಮದ್ವಿತೀಯ. ಪುರಾಣ ಕಥೆಯ ಪ್ರಕಾರ ಮೃತ್ಯುವಿನ ಹಾಗೂ ನರಕದ ದೇವತೆ ಯಮ ಮತ್ತು ಯಮುನಾದೇವಿ ಇಬ್ಬರೂ ಸೋದರ-ಸೋದರಿಯರು. ಈ ದಿವಸದಂದು ಯಮುನಾದೇವಿ ಸೋದರ ಯಮನನ್ನು ತನ್ನ ಮನೆಗೆ ಕರೆದು ಹಬ್ಬದೂಟ ಉಣಿಸಿ, ಸತ್ಕರಿಸಿದ್ದರಿಂದ, ಸೋದರ-ಸೋದರಿಯವರ ಪುನರ್ಮಿಲನಕ್ಕೆ ಶ್ರೇಷ್ಠವಾದ ದಿನವೆನಿಸಿದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಆದ್ದರಿಂದ ಕಾರ್ತಿಕ ಶುಕ್ಲ ದ್ವಿತೀಯತಿಥಿಗೆ ಯಮ ದ್ವಿತೀಯವೆಂದು ಕರೆಯುತ್ತಾರೆ. ಇದೂ ದೀಪಾವಳಿ ಹಬ್ಬಕ್ಕೆ ಸೇರಿ ಒಟ್ಟು ನಾಲ್ಕು ದಿವಸ ಹಬ್ಬವನ್ನು ಆಚರಿಸುತ್ತಾರೆ.

ರಾಮಾಯಣದ ಸಮಯದಲ್ಲಿ ಶ್ರೀ ರಾಮಚಂದ್ರನು ರಾವಣನೊಂದಿಗೆ ಯುದ್ಧ ಮಾಡಿ ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳುತ್ತಾನೆ.. ಆಗ ಕತ್ತಲೆಯಲ್ಲಿ ಮುಳುಗಿದ್ದ ಅಯೋಧ್ಯೆಗೆ ಬೆಳಕು ಬಂದಂತಾಗುತ್ತದೆ. ಈ ಸಮಯವನ್ನು ಬೆಳಕಿನ ಹಬ್ಬ ದೀಪಾವಳಿಯನ್ನಾಗಿ ಕೆಲವರು ಆಚರಿಸುತ್ತಾರೆ.

ಅಮಾವಾಸ್ಯೆಯ ಹಿಂದಿನ ದಿನ ಅಂದ್ರೆ ಚತುರ್ದಶಿ ದಿನದಂದು ಶ್ರೀ ಕೃಷ್ಣ ಪರಮಾತ್ಮನು ರಕ್ಕಸನಾದ ನರಕಾಸುರನನ್ನು ಸಂಹರಿಸುತ್ತಾನೆ.. ಈ ದಿನವನ್ನೇ ದೀಪಾವಳಿಯನ್ನಾಗಿ ಆಚರಿಸಲಾಗುತ್ತಿದೆ ಎಂದೂ ಕೂಡ ಹೇಳಲಾಗುತ್ತದೆ.

ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಹಬ್ಬವನ್ನು ಬಹು ಮುಖ್ಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. 1620 ರಲ್ಲಿ ಸಿಕ್ಖರ ಆರನೆಯ ಗುರು ಆದಂಥ ಹರಗೋಬಿಂದ್ ಸಿಂಗ್ ರವರು ಗ್ವಾಲಿಯರ್ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸುತ್ತಾರೆ. ಕತ್ತಲೆ ಕೋಣೆಯಿಂದ ಮುಕ್ತರಾದ ಸಿಕ್ ರಾಜರುಗಳು ಆ ದಿನವನ್ನು ಬೆಳಕಿನ ಹಬ್ಬವನ್ನಾಗಿ ಆಚರಿಸಲು ಶುರು ಮಾಡಿದರು. ಅದೇ ಈಗ ದೀಪಾವಳಿಯಾಗಿದೆ ಎಂಬುದು ಒಂದು ಗಮನಾರ್ಹ ವಿಷಯ .

ಕ್ರಿ.ಪೂ 527 ಅಕ್ಟೋಬರ್ 15 ರ ದೀಪಾವಳಿಯ ಕಾರ್ತಿಕ ಚತಿರ್ದಶಿಯಂದು ಜೈನ ಧರ್ಮದ ಕಡೆಯ ತೀರ್ಥಂಕರ ಮಹಾವೀರರು ಪಾವಾಪುರಿಯಲ್ಲಿ ಮೋಕ್ಷ ಹೊಂದುತ್ತಾರೆ.. ಹೀಗಾಗಿ ಜೈನಧರ್ಮದಲ್ಲಿಯೂ ಈ ದಿನ ಮುಖ್ಯವಾಗಿ ಪರಿಗಣಿತವಾಗಿದೆ. ಹೀಗಾಗಿ ಜೈನ ಧರ್ಮದಲ್ಲಿ ಈ ದಿನವು ಮೋಕ್ಷದ ದಿನ ಎಂದು ಆಚರಿಸಲ್ಪಡುತ್ತದೆ.

ಕ್ರಿ.ಪೂ ಮೂರನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರು ನಿರ್ವಾಣ ಹೊಂದಿದ ಸಮಯದಲ್ಲಿ ದೇವತೆಗಳಲ್ಲಿ ಗಾಡಾಂಧಕಾರವು ಆವರಿಸಿತಂತೆ.. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ 16 ಗಣ-ಚರ್ಕವರ್ತಿ, 9 ಮಲ್ಲ ಮತ್ತು 9 ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಹೀಗಾಗಿ ಜೈನರಿಗೆ ಇದು ವರ್ಷದ ಪ್ರಾರಂಭ ಎಂದು ಭಾವಿಸಲಾಯ್ತು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ 3 ದಿನ ಆಚರಿಸುತ್ತಾರೆ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರುಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ, ಹೀಗಾಗಿ ದೀಪಾವಳಿ ಹಬ್ಬವು ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ. ಎಷ್ಟೇ ವರ್ಷಗಳಾದ್ರೂ ಈ ದಿನಗಳಲ್ಲೇ ದೀಪಾವಳಿ ಬರುತ್ತದೆ ಎಂಬುದು ಗಮನಾರ್ಹ. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ದೀಪಾವಳಿ ಹಬ್ಬವನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಕತ್ತಲೆ ಇರುವುದರಿಂದ ಕತ್ತಲೆಯ ಬಾಳಿಗೆ ಬೆಳಕು ಬರಲಿ ಎಂಬ ಉದ್ದೇಶದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ

ವೈಜ್ಞಾನಿಕವಾಗಿ ಹೇಳುವುದಾದರೆ ಪಟಾಕಿಗಳನ್ನು ಸುಡುವುದು ದೀಪಾವಳಿಯ ವಿಶೇಷ ಸಂಭ್ರಮ. ಇದರಲ್ಲೂ ಕೀಟ ಹಾಗೂ ರೋಗ ನಿವಾರಣೆಯ ಸೂತ್ರ ಅಡಗಿದೆ. ಪಟಾಕಿಯಲ್ಲಿ ಗಂಧಕವಿರುತ್ತದೆ. ಇದನ್ನು ಸುಟ್ಟಾಗ ಇದು ಗಂಧಕದ ಡಯಾಕ್ಸೈಡ್(ಸಲ್ಫರ್ ಡಯಾಕ್ಸೈಡ್) ಆಗಿ ಬದಲಾಗುತ್ತದೆ. ಇದಕ್ಕೆ ಕೀಟ ಹಾಗೂ ಶಿಲೀಂಧ್ರವನ್ನು ನಿಯಂತ್ರಿಸುವ ಶಕ್ತಿಯಿದೆ. ಒಂದು ಪ್ರದೇಶದಲ್ಲಿ, ಅದರಲ್ಲೂ ಹೊಲಗದ್ದೆಗಳ ಸುತ್ತಮುತ್ತ ಪಟಾಕಿ ಹೊಡೆದಾಗ, ಬೆಳೆಗಳ ಸಂರಕ್ಷಣೆಯಾಗುತ್ತದೆ.

ಸುಣ್ಣ ಕೂಡ ಒಂದು ಅತ್ಯುತ್ತಮ ಶಿಲೀಂಧ್ರ ನಾಶಕ. ವರ್ಷಕ್ಕೊಮ್ಮೆಯಾದರೂ ಹಬ್ಬದ ನೆಪದಿಂದ ಮನೆಯನ್ನು ಸ್ವಚ್ಛ ಮಾಡಿದಾಗ ಮನೆಯಲ್ಲಿ ಅಡಗಿರುವ ಜಿರಳೆ, ತಿಗಣೆ ಮುಂತಾದವುಗಳನ್ನು ಹೊರಹಾಕಿ ನಾಶ ಮಾಡಬಹುದು. ಅಲ್ಲದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಕೀಟಗಳ, ಅದರಲ್ಲೂ ಪಂತಂಗಗಳ ಚಟುವಟಿಕೆ ಅಧಿಕವಾಗಿರುತ್ತದೆ. ಸಾವಿರಾರು ಪತಂಗಗಳನ್ನು ಗದ್ದೆಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಕಾಣಬಹುದು. ದವಸಧಾನ್ಯಗಳು ಕೊಯಿಲಾಗಿರಲಿ ಅಥವಾ ಬೆಳೆಯಲ್ಲೇ ಇರಲಿ, ಈ ಕೀಟಗಳ ಬಾಧೆಗೆ ತುತ್ತಾಗುತ್ತವೆ. ಅನೇಕ ಕೀಟಗಳ ಸಂತಾನಾಭಿವೃದ್ಧಿಗೂ ದೀಪಗಳು ಘಾಸಿ ಮಾಡುವುದರಿಂದ ಬೆಳೆಗಳ ರಕ್ಷಣೆಯಾಗುತ್ತದೆ.

ಸರ್ವರಿಗೂ ಸರ್ವ ರೀತಿಯಲ್ಲೂ ಒಳಿತನ್ನುಂಟು ಮಾಡುವ ದೀಪಾವಳಿಯ ಆಚರಣೆಯಿಂದ ಮನ ಮುದುಗೊಳ್ಳುವುದಲ್ಲದೆ ಮನಸ್ಸಿನ ಕ್ಲೇಷಗಳೂ ದೂರವಾಗುವುದು. ದೀಪಾವಳಿ – ಹೆಸರೇ ಹೇಳುವಂತೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ… ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ. ಮನಸ್ಸಿನ ಕತ್ತಲೆಯನ್ನು ಬಡಿದೋಡಿಸಿ ಜ್ಞಾನದ ಬೆಳಕನ್ನು ನೀಡುವುದರ ದ್ಯೋತಕವಾದ ದೀಪಾವಳಿ ಹಬ್ಬವು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮ.ನ.ಲತಾಮೋಹನ್ ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *