(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದ್ಯಪಾನದ ಸುತ್ತ ; ಬಂಧನಗಳ ಹುತ್ತ
ಈ ಮದ್ಯಪಾನದ ಅನಾಹುತಗಳಿಗೆ ಯಾವುದೇ ವರ್ಗ, ಲಿಂಗಭೇದಗಳಿಲ್ಲ. ವಿದ್ಯಾವಂತರದೊಂದು ಕುಡುಕುತನವಾದರೆ, ಗ್ರಾಮೀಣರದೊಂದು ಕುಡುಕುಸ್ವಭಾವ. ‘ಹೆಂಡ ಸಾರಾಯಿ ಸಹವಾಸ; ಹೆಂಡತಿ ಮಕ್ಕಳ ಉಪವಾಸ’ ಎಂಬ ಸ್ಲೋಗನ್ನನ್ನು ಸಾರ್ವಜನಿಕವಾಗಿ ಬರೆಸಿ, ಜಾಗೃತಿ ಮೂಡಿಸುವ ಪ್ರಯತ್ನ ಬಹಳ ಹಿಂದೆ ನಡೆದಿತ್ತು. ಈಗ ಅದು ‘ಕುಡಿದು ವಾಹನ ಚಲಾಯಿಸಬೇಡಿ’ ಎಂಬಲ್ಲಿಗೆ ಬಂದು ನಿಂತಿದೆ. ಡ್ರಂಕ್ ಅ್ಯಂಡ್ ಡ್ರೈವ್ ಕೇಸುಗಳದೇ ದೊಡ್ಡ ತಲೆಬೇನೆ. ರಾತ್ರಿವೇಳೆಯಲ್ಲಿ ಇಂಥ ಕುಡುಕ ಚಾಲಕರನ್ನು ಪತ್ತೆ ಹಚ್ಚಿ, ದಂಡ ಕಟ್ಟಿಸುವಲ್ಲಿ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿರುತ್ತಾರೆ. ಏಕೆಂದರೆ ಬಹುತೇಕ ಅಪಘಾತಗಳಿಗೆ ಈ ಕುಡಿತವೇ ಕಾರಣ. ಅದರಲ್ಲೂ ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರನೇಕರು ಲಾರಿಯನ್ನೂ ಲಾರಿ ಡ್ರೈವರುಗಳನ್ನೂ ಹೀನಾಮಾನ ಬಯ್ಯುತ್ತಿದ್ದರು. ಎಲ್ಲರೂ ಕುಡಿದೇ ಲಾರಿ ಓಡಿಸುತ್ತಾರೆಂದು ನಂಬಿದ್ದರು. ಕುಡಿಯದಿದ್ದರೆ ಸ್ಟಿಯರಿಂಗ್ ಹಿಡಿಯಲೇ ಆಗುವುದಿಲ್ಲ ಎಂಬಂಥ ನಿರಾಧಾರ ಉತ್ಪ್ರೇಕ್ಷಿತ ಸುಳ್ಳನ್ನು ನನ್ನ ತಲೆಗೆ ತುಂಬಿದ್ದರು. ಹಾಗಾಗಿ ನಾನು ಚಿಕ್ಕಂದಿನಲ್ಲಿ ಎಲ್ಲ ಬಗೆಯ ಚಾಲಕರನ್ನೂ ಭಯಭೀತ ಸ್ಥಿತಿಯಲ್ಲಿ ನೋಡುತ್ತಾ, ಅವರನ್ನು ಕಂಡರೆ ಹೆದರಿಕೊಳ್ಳುತ್ತಿದ್ದೆ. ಅದಕೇ ಏನೋ ‘ದೊಡ್ಡವನಾದ ಮೇಲೆ ನೀನೇನು ಆಗುವೆ?’ ಎಂದು ಯಾರಾದರೂ ಕೇಳಿದರೆ ಯಾವ ಕಾರಣಕ್ಕೂ ನಾನು ಡ್ರೈವರ್, ಪೊಲೀಸ್ ಎಂದೆಲ್ಲಾ ಹೇಳುತ್ತಿರಲಿಲ್ಲ. ‘ವರವ ಕೊಡು ಚಾಮುಂಡಿ, ಕುಡುಕನಲ್ಲದ ಗಂಡನ’ ಎಂಬ ಪ್ರಾರ್ಥನೆಯನ್ನು ಕೆಲವರು ಕಾಲೇಜಿನಲ್ಲಿ ಬರೆಯುವಾಗ ‘ಡ್ರೈ – ವರ’ ಎಂದು ಸಹಿ ಮಾಡುವ ಜಾಗದಲ್ಲಿ ಬರೆದು ತಮಾಷೆ ಮಾಡುತ್ತಿದ್ದರು! ಮಹಿಳಾ ಶಿಕ್ಷಣ, ಉದ್ಯೋಗಗಳು ಹೆಚ್ಚಾಗುತ್ತಿದ್ದಂತೆ ಮಹಿಳಾ ಸ್ವಾತಂತ್ರ್ಯದ ಅಡಿಯಲ್ಲಿ ಕೆಲವರು, ಪುರುಷರನ್ನು ಎಲ್ಲ ರೀತಿಯಲ್ಲೂ ಅನುಕರಿಸಲು ಹೋಗಿ, ಕುಡುಕರಾಗಿದ್ದೂ ಉಂಟು! ‘ಹೆಣ್ಣಿನ ಬಹು ದೊಡ್ಡ ಬಯಕೆಯೆಂದರೆ ತಾನು ಗಂಡಿನಂತಾದರೆ ಸಾಕು ಎನ್ನುವುದು’ ಎಂದೊಬ್ಬ ಚಿಂತಕ ವ್ಯಂಗ್ಯ ಮಾಡಿದ್ದಾರೆ. ಹಣ, ಸಮಯ, ಸ್ನೇಹಿತೆಯರು ದೊರಕಿದಾಗ ಸಹಜವಾಗಿಯೇ ಇಂಥದೊಂದು ಕಿಕ್ಕೇರಿಸಿಕೊಳ್ಳುವ ಅಡ್ಡದಾರಿಗಳು ಆಹ್ವಾನಿಸುತ್ತವೇನೋ? ಗೊತ್ತಿಲ್ಲ! ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡುಮಕ್ಕಳಿಗೂ ಅನ್ವಯಿಸುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಾದವಳು ಧೂಮಪಾನ, ಮದ್ಯಪಾನಗಳ ಚಟಕ್ಕೆ ಬಿದ್ದರೆ ಅಂಥವರನ್ನು ಹೀನಾಯವಾಗಿ ನೋಡುತ್ತಾರೆ. ಮರ್ಯಾದಸ್ಥರಲ್ಲವೆಂದು ತೀರ್ಮಾನಿಸುತ್ತಾರೆ. ಹುಟ್ಟುವ ಮಗುವಿನ ಮೇಲೆ ದುಷ್ಪರಿಣಾಮ ಬೀರುವುದೆಂದು ವೈದ್ಯರು ಎಚ್ಚರಿಸುತ್ತಲೇ ಇರುತ್ತಾರೆ. ‘ನಂಜುಂಡಿ ಕಲ್ಯಾಣ’ ಸಿನಿಮಾದಲ್ಲಿನ ಮಾಲಾಶ್ರೀ ಅಭಿನಯದ ಹಾಡು ‘ಒಳಗೆ ಸೇರಿದರೆ ಗುಂಡು; ಹುಡುಗಿ ಆಗುವಳು ಗಂಡು’ ಎಂಬ ಸಾಲುಗಳು ಇಂಥಲ್ಲಿ ನೆನಪಾಗುತ್ತದೆ. ಮದ್ಯಪಾನವನ್ನು ವೈಭವೀಕರಿಸಿಯೋ ಅದರ ಅನಾಹುತಗಳನ್ನು ಎಚ್ಚರಿಸಿಯೋ ಇರುವಂಥ ಹಾಡು ಮತ್ತು ಸಿನಿಮಾಗಳು ಸಾಕಷ್ಟು ತೆರೆ ಕಂಡಿವೆ. ‘ಜೀವ್ನ ಖಾಲಿ ಬಾಟ್ಲು; ಕುಡಿಯೋ ಮುಂಚೆ ಅಲ್ಲಾಡ್ಸು’ ಎಂಬ ಚಿತ್ರಗೀತೆಯಂತೂ ಕುಡುಕರ ಸಮೂಹಗೀತೆಯೇ ಆಗಿದೆ. ಇಂಥ ಚಲನಚಿತ್ರಗಳಿಂದ ಯಾರ‍್ಯಾರಿಗೆ ಏನೇನು ಬೇಕೋ ಅದನ್ನು ಆಯ್ದುಕೊಳ್ಳುತ್ತಾರೆ. ಐಟಂ ಸಾಂಗ್ ಎಂದು ಕರೆಸಿಕೊಳ್ಳುವ ಇಂಥವು ಮಾಸ್ ಸಿನಿಮಾದ ಹೆಗ್ಗುರುತು. ಮೊದಲೆಲ್ಲಾ ನರ್ತಕಿಯರನ್ನು ಕುಣಿಸಿ, ಕುಡಿಸಿ, ಹಾಡು ಮುಗಿಸುತ್ತಿದ್ದರು. ಆನಂತರ, ಪ್ರೇಕ್ಷಕ ದೊರೆಗಳಿಗೆ ಇನ್ನೂ ಹೆಚ್ಚಿನದೇನೋ ಕೊಡಬೇಕೆಂಬ ಉಮೇದು ಬಲವಾಗಿ, ಹಿರೋಯಿನ್ನುಗಳನ್ನೇ ಕುಣಿಸುವ ಆಲೋಚನೆ ಚಾಲ್ತಿಗೆ ಬಂತು. ಇಂಥವರಿಗೆ ಕೋಟಿ ಕೋಟಿ ಕೊಟ್ಟು ಕುಣಿಸಿದರೆ, ನೋಡುಗರಿಂದಲೂ ಕೋಟಿ ಕೋಟಿ ಬಾಚಬಹುದು ಎಂಬ ಶುದ್ಧ ವ್ಯಾಪಾರೋದ್ಯಮ. ಸಿನಿಮಾ ಎಂಬುದು ಮಾಧ್ಯಮವಾಗಿ ಅಲ್ಲಿಯೇ ನಿಲ್ಲದೇ ಉದ್ಯಮವಾದದ್ದು ಇಂಥಲ್ಲಿಯೇ. ನಗರಗಳಲ್ಲಿ ಎಗ್ಗುಸಿಗ್ಗಿಲ್ಲದೇ ಇಂಥ ಅನಾಚಾರಗಳನ್ನು ಕೈಗೊಳ್ಳುವ ಹೆಣ್ಣುಮಕ್ಕಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಗಂಡಿನ ಸಮಕ್ಕೂ ಸೇದುವ, ಕುಡಿಯುವ ಐಟೀಬೀಟಿ ಹೆಣ್ಣುಮಕ್ಕಳಿಗೇನೂ ಬರವಿಲ್ಲ. ಎಲ್ಲರೂ ಅಲ್ಲದಿದ್ದರೂ ಬಹುಸಂಖ್ಯಾತರಾಗುತ್ತಿರುವುದು ಶೋಚನೀಯ. ನಿಕೋಟಿನ್ ಮತ್ತು ಆಲ್ಕೋಹಾಲ್ ಎಂಬವು ಸಂಭ್ರಮದ, ಸಡಗರದ, ಫ್ಯಾಷನ್ನಿನ, ಆಧುನಿಕತೆಯ, ಮೋಜುಮಸ್ತಿಯ ಒಂದಂಗವಾಗಿರುವುದು ದುರಂತವೇ ಸರಿ. ಇವಿಲ್ಲದಿದ್ದರೆ ಬದುಕೇ ಇಲ್ಲ ಎಂದುಕೊಂಡಿರುವವರೇ ಬಹುತೇಕರು. ‘ಪಾರ್ಟಿ ಎಂದರೆ ಇವೆಲ್ಲಾ ಇದ್ದರೇನೇ’ ಎಂಬ ಭಾವ ಸರ್ವವ್ಯಾಪಿ. ನಗರಗಳು ಮಾತ್ರವಲ್ಲ, ಗ್ರಾಮೀಣ ಭಾಗದಲ್ಲೂ ತೀರಾ ಬಡತನದ ಗಂಡ ಹೆಂಡತಿಯರೂ ಕುಡಿದು ಬಡಿದಾಡುವ ದೃಶ್ಯಗಳು ಸರ್ವೇ ಸಾಮಾನ್ಯ. ಅಂತೂ ‘ಮದಿರೆಯ ದಾಸದಾಸಿಯರೇ ಎಲ್ಲ; ದಾಸದಾಸಿಯರಾಗದವರು ಇಲ್ಲವೇ ಇಲ್ಲ!’ ಎಂಬಷ್ಟರಮಟ್ಟಿಗೆ ಇವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಅಚ್ಚರಿಯಿಲ್ಲ!
ನಮ್ಮ ಕುಟುಂಬಮಿತ್ರರ ಬೀಗಿತಿಯೊಬ್ಬರು ಈ ದೇಶದಲ್ಲಿದ್ದಾಗ ಮಾಮೂಲಿಯಂತಿದ್ದು, ತಮ್ಮ ಮಕ್ಕಳಿರುವ ವಿದೇಶಕ್ಕೆ ಹೋದಾಗ ಸಮಾ ಕುಡಿದು ಚಿತ್ ಆಗುತ್ತಾರೆ! ಇವರು ಕುಡಿಯಲೆಂದೇ ಅಲ್ಲಿಂದ ಇಲ್ಲಿಗೆ ಬರುತ್ತಾರೆಂದು ಅವರ ಮಕ್ಕಳು ಬೇಸರಿಸುವಷ್ಟು! ಇದೆಂಥ ವಿಲಕ್ಷಣವೆಂದು ನಮಗನ್ನಿಸಬಹುದು. ಆದರೆ ಬದುಕಿನ ಕೊನೆಗಾಲದಲ್ಲಿರುವ ಇಂಥವರಿಗೆ ‘ಜೀವನಪೂರ್ತ ನಾವು ಕುಡಿಯದೇ ತಪ್ಪು ಮಾಡಿದೆವೇನೋ?’ ಎಂದೆನಿಸಿ, ಇದೀಗ ಸಾಯುವ ಕಡೆಗಾಲದಲ್ಲಿ ಕುಡಿಯದ ಅಷ್ಟೂ ದಿವಸಗಳ ತಮ್ಮ ಪಾಲನ್ನು ಕುಡಿದು ಮುಗಿಸುವ ಹುನ್ನಾರದಲ್ಲಿರಬೇಕು ಎಂದು ನಾನು ಆಲೋಚಿಸುತ್ತಿದ್ದೇನೆ. ಇನ್ನು ಕೆಲವರಂತೂ ‘ಕುಡಿಯದೇ ನಮಗಿಂತ ನೀವೊಂದು ಐದೋ ಹತ್ತೋ ವರುಷ ಹೆಚ್ಚು ಬದುಕಬಹುದು; ಅಷ್ಟಕ್ಕೇಕೆ ಈ ಸಂನ್ಯಾಸ, ವನವಾಸ’ ಎಂದು ಹೀಗಳೆದು ಜರಿಯುತ್ತಿರುತ್ತಾರೆ. ಆಲ್ಕೋಹಾಲ್ ಎಂಬುದು ಅವುಷಧ. ಅದನ್ನು ಸ್ವಲ್ಪಮಟ್ಟಿಗೆ ಮಾತ್ರ ಸೇವಿಸಿದರೆ ದೇಹಕ್ಕದು ಟಾನಿಕ್ಕಾಗುತ್ತದೆಂದು ಒಬ್ಬ ಮದ್ಯಪಾನಿಗಳು ನನಗೆ ಸಲಹೆ ನೀಡಿದ್ದರು. ‘ಹಿಂದಿನ ಕಾಲದಲ್ಲಿ ಬಾಣಂತಿಯರಿಗೆ ಬಿಸ್ಕತ್ ಬ್ರಾಂದಿಯನ್ನು ಸ್ವಲ್ಪ ಕುಡಿಸುತ್ತಿದ್ದರು. ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಆಗಬಾರದೆಂದು; ಈಗಲೂ ನೀವು ಸೇವಿಸುವ ಕೆಮ್ಮಿನ ಸಿರಪ್ಪಿನಲ್ಲಿ ಆಲ್ಕೋಹಾಲ್ ಇರುತ್ತದೆ’ ಎಂದೂ ನನಗೆ ಪರಿಪರಿಯಾಗಿ ತಿಳಿ ಹೇಳಿ ಕುಡಿಸಲು ಹಾತೊರೆದಿದ್ದರು. ಅಪರೂಪಕ್ಕೆ ಕುಡಿಯುವವರು, ದಿನವೂ ಕುಡಿಯುವವರು, ವಿದೇಶಕ್ಕೆ ಮತ್ತು ಹೊರ ಪ್ರವಾಸಕ್ಕೆ ಹೋಗುವಾಗ ಮಾತ್ರ ಕುಡಿಯುವವರು, ಒಬ್ಬರೇ ಕುಳಿತು ಕುಡಿಯುವವರು, ಕೆಲವೊಂದು ಆಯ್ದ ಆತ್ಮೀಯರೊಂದಿಗೆ ಮಾತ್ರ ಕುಡಿಯುವವರು, ಸ್ತ್ರೀಯರ ಪಾರ್ಟಿಯಲ್ಲಿ ಮಾತ್ರ ಕುಡಿಯುವವರು ಹೀಗೆ ಹಲವು ವಿಧಗಳು. ಇಂಥಲ್ಲಿ ಕುಡುಕರ ಸ್ವಭಾವವೇ ವಿಚಿತ್ರ. ‘ಆದಷ್ಟೂ ಕುಡಿಯುವವರ ಸಂಖ್ಯೆಯನ್ನು ಹೆಚ್ಚು ಮಾಡುವುದೇ ತಮ್ಮ ಕುಡಿತದ ಧ್ಯೇಯ’ ಎಂಬಂಥ ವಿಚಿತ್ರ ಮೆಂಟಾಲಿಟಿ ಇವರದು. ಯಾರಾದರೂ ಇನ್ನೂ ಮದುವೆ ಆಗದಿದ್ದರೆ ಏನಾದರೂ ಮಾಡಿ, ಹೇಗಾದರೂ ಮಾಡಿ, ಮದುವೆ ಮಾಡಿ, ಮಜಾ ತೆಗೆದುಕೊಳ್ಳುವಂತೆ ಇದು! ಹೇಗಾದರೂ ಮಾಡಿ ಅವರಿಗೆ ಕುಡಿಸಬೇಕು; ನಮ್ಮ ಸರೌಂಡಿಗೆ ಸೇರಿಸಿಕೊಂಡು ಬಿಡಬೇಕು ಎಂಬ ಹಿಡನ್ ಅಜೆಂಡಾ. ನೀವು ಬದುಕಿದ್ದು ವೇಸ್ಟು ಎಂದೇ ಇವರು ಪದೇ ಪದೇ ಹೇಳಿ ಅವರಲ್ಲಿ ಕೀಳರಿಮೆ ತುಂಬುವಲ್ಲಿ ಸಿದ್ಧಹಸ್ತರು. ‘ನಾವೊಂದು ದಿನ ಅವರಿಗೆ ಕುಡಿಸಿದರೆ, ನಮ್ಮಲ್ಲಿ ದುಡ್ಡು ಇಲ್ಲದಿದ್ದ ಹೊತ್ತಲ್ಲಿ ಇಂಥವರಿಂದ ಕುಡಿಸಿಸಿ ಕೊಳ್ಳಬಹುದು’ ಎಂಬ ದೂರಗಾಮೀ ಯೋಚನೆ ಮತ್ತು ಯೋಜನೆಯಿದು!
ಚುನಾವಣೆಗಳಿಗೂ ಲಿಕ್ಕರಿಗೂ ಇರುವ ನಂಟು ಜಗಜ್ಜಾಹೀರು. ನೋಟಿಗೆ ವೋಟು ಎಂಬುದರ ಜೊತೆಗೆ ಎಣ್ಣೆ ಕೊಟ್ಟು ಮತ ಪಡೆಯುವ ಹುನ್ನಾರ ಹಲವರದು. ಸೆಕೆಂಡ್ಸ್ ಮದ್ಯ ಅಂದರೆ ತೆರಿಗೆ ವಂಚಿತ ಲಿಕ್ಕರು ಇಲ್ಲಿ ಹಂಚಲ್ಪಟ್ಟು, ಪವಿತ್ರವಾದ ಮತದಾನವನ್ನು ಕೀಳುಗೈಯುವ ಉಮೇದು ಹಲವು ಉಮೇದುವಾರರದು. ಎಲೆಕ್ಷನ್ನು ಇನ್ನೂ ಕೆಲವು ತಿಂಗಳಿದೆ ಎನ್ನುವಾಗಲೇ ಚುನಾವಣಾ ಆಯೋಗವು ಕಟ್ಟುನಿಟ್ಟಿನ ನೀತಿಸಂಹಿತೆಯನ್ನು ಜಾರಿ ಮಾಡುತ್ತದಾದರೂ ಅದು ಹೇಗೋ ಕಳ್ಳಮಾರ್ಗದಲ್ಲಿ ಹೆಂಡವನ್ನು ಸಾಗಿಸಿ, ಹಂಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಖದೀಮರು ಇಲ್ಲದಿಲ್ಲ. ಮತದಾರರು ಇಂಥ ಆಮಿಷಕ್ಕೆ ಒಳಗಾಗದೇ ಇರುವತನಕ ಈ ಭ್ರಷ್ಟತೆ ತಪ್ಪಿದ್ದಲ್ಲ. ಕಾನೂನಿಗಿಂತ ಹೃದಯಪರಿವರ್ತನೆಯೇ ಶಾಶ್ವತ ಮತ್ತು ಸತ್ಯ. ಚುನಾವಣಾ ಕೆಲಸ ಮಾಡುವ ನಮ್ಮಂಥ ಸರ್ಕಾರಿ ಸಿಬ್ಬಂದಿಗಳಿಗೆ ಎಲೆಕ್ಷನ್ನಿನ ಹಿಂದಿನ ದಿನ ಮತ್ತು ಆ ದಿನದಂದು ಈ ಕುಡುಕರ ತೊಡಕು ತೊಂದರೆ ಅಷ್ಟಿಷ್ಟಲ್ಲ! ಕಾನೂನನ್ನು ಪಾಲಿಸದ ಇಂಥ ಘಾತುಕರನ್ನು ಪೊಲೀಸರು ವಿಚಾರಿಸಿಕೊಳ್ಳದೇ ಹೋದ ಪಕ್ಷದಲ್ಲಿ ಚುನಾವಣಾ ಕಾರ್ಯ ಮಾಡಲೇ ಆಗದು ಎಂಬಷ್ಟರಮಟ್ಟಿಗೆ! ಹಲವೊಮ್ಮೆ ಕಲಬೆರಕೆ ಮದ್ಯವನ್ನು ಪೂರೈಸಿ, ಅದರ ಸೇವನೆಯಿಂದ ದುಷ್ಪರಿಣಾಮಗಳಾಗಿರುವುದೂ ಇದೆ. ಅಂತೂ ಚುನಾವಣೆಗೂ ಮದ್ಯಸೇವನೆಗೂ ನಿಕಟ ನೆಟ್‌ವರ್ಕು! ಈಗಲೂ ‘ಅವರ ಉಪದ್ವ್ಯಾಪ ನಿಮಗೇಕೆ? ಸುಮ್ನಿರಿ. ಜಗತ್ತಿಗೇ ಉಪದೇಶ ಮಾಡಬೇಡಿ!’ ಎಂದು ನೀವು ಹೇಳಬಹುದು. ಹಾಗಾಗಿ ಇವರ ಸುದ್ದಿಯನ್ನು ಇಲ್ಲಿಗೇ ಬರಕಾಸ್ತು ಮಾಡುತ್ತಿದ್ದೇನೆ. ಆದರೆ ಮದ್ಯಪಾನಿಗಳ ಕುಹಕವೆಂದರೆ, ಎಂಥೆಂಥ ಬ್ರಾಂಡುಗಳು ಇವೆ ಎಂಬುದಾದರೂ ನಿಮಗೆ ಗೊತ್ತೇ? ಎಂಬುದು. ಇದರತ್ತ ಕುತೂಹಲಮಾತ್ರದಿಂದಲೇ ಗಮನಿಸುವುದಾದರೆ, ಟೀಚರ್ಸ್ ಸ್ಕಾಚ್ ವಿಸ್ಕಿ, ಡಾಕ್ಟರ್ಸ್ ಸ್ಪೆಷಲ್, ಎಂಜಿನಿಯರ್, ಅಡ್ವೊಕೇಟ್ ವಿಸ್ಕಿ, ಆಫೀಸರ್ಸ್ ಚಾಯ್ಸ್, ಡೈರೆಕ್ಟರ್ ಸ್ಪೆಷಲ್, ವ್ಯಾಟ್ 69, ಬ್ಲಾಕ್ ಕರೆಂಟ್, ಜಾಕ್ ಡೇನಿಯಲ್ಸ್, ಇಂಪಿರಿಯಲ್ ಬ್ಲೂ, ಮ್ಯಾಕ್ ಡೊವೆಲ್ಸ್ ನಂ ಒನ್……….ಅಬ್ಬಬ್ಬಾ! ಮೂಗಿನ ಮೇಲೆ ಬೆರಳಲ್ಲ; ಮುಖ ಮುಚ್ಚಿಕೊಳ್ಳುವಷ್ಟು ಸಂಕೋಚವಾಯಿತು ನನಗೆ. ಟೀಚರ್ಸು, ಡಾಕ್ಟರು, ಎಂಜಿನಿಯರು, ಅಡ್ವೊಕೇಟು, ಆಫೀಸರ್ಸು, ಡೈರೆಕ್ಟರು ಯಾರನ್ನೂ ಇವರು ಬಿಟ್ಟಿಲ್ಲ!! ಟೀಚರ್ಸ್ ಬ್ರಾಂಡಿನ ಘೋಷವಾಕ್ಯವಿದು: ‘ಎವ್ವೆರಿ ಸಿಪ್ ಹಿಟ್ಸ್ ದ ರೈಟ್ ನೋಟ್!’ ಇಂಥ ಸೃಜನಾತ್ಮಕತೆಯನ್ನು ಹುಟ್ಟು ಹಾಕುವ ಮದ್ಯಪಾನವು ಗಂಡುಪ್ರಾಣಿಗಳಿಗೆ ಹೆಣ್ಣು ಮತ್ತು ಹೆಂಡ ಎರಡೂ ಭಾರೀ ಪ್ರಿಯವಾದವು. ಇದನ್ನು ರಸಿಕತೆಯ ಮಾನದಂಡ ಎಂದುಕೊಳ್ಳುತ್ತಾರೆಯೇ ವಿನಾ ಮಾನವು ದಂಡವಾದೀತು ಎಂದು ನೊಂದುಕೊಳ್ಳುವುದಿಲ್ಲ! ನನ್ನೊಬ್ಬ ಸ್ನೇಹಿತರು ಒಮ್ಮೆ ಕೇಳುತ್ತಾ ಹೇಳಿದ್ದರು: ‘ನಾವು ನಿಮ್ಮಷ್ಟು ಮಡಿವಂತರಲ್ಲ; ಬಿಯರು ಕುಡಿಯುವಷ್ಟು ಕೆಟ್ಟಿದ್ದೇವೆ’ ಎಂದು. ಅಟಲೀಸ್ಟು ಬಿಯರನ್ನು ಕುಡಿಯುವಷ್ಟಾದರೂ ಕೆಡಬೇಕು ಎಂದೇ ಇನ್ನೊಬ್ಬರು ನನಗೆ ಬೋಧನೆ ಮಾಡಿದ್ದರು. ‘ಆಲ್ಕೋಹಾಲೀಗ ಕಾಮನ್ನು; ಡ್ರಗ್ಸಿಗೆ ಅಡಿಕ್ಟಾಗಬಾರದಷ್ಟೇ’ ಎಂಬುದು ಕೆಲವರ ಸಮಜಾಯಿಷಿ ಮತ್ತು ಸಮಾಧಾನ. ಏಕೆಂದರೆ ಆಲ್ಕೋಹಾಲಿನ ಸೇವನೆಯು ಸಮಾಜದಲ್ಲಿ ಅಂತಸ್ತು ಮತ್ತು ಅಧಿಕಾರದ ಅನಿವಾರ್ಯ ಭಾಗವಾಗಿದೆ ಎಂದೇ ಹಲವರ ಅಭಿಪ್ರಾಯ. ಜೊತೆಗೆ ಮಾದಕ ದ್ರವ್ಯಗಳ ದಾಸರಾಗಬಾರದು; ಕುಡಿಯುವುದು ಜೀವನದ ಸಹಜತೆ. ಕಾಫಿ ಮತ್ತು ಟೀ ಕುಡಿದರೆ ಮತ್ತು ಕುಡಿಯಲು ಕೊಟ್ಟರೆ ಯಾರಿಗೆ ಏನೂ ಅನಿಸುವುದಿಲ್ಲವೋ ಹಾಗೆಯೇ ಆಲ್ಕೋಹಾಲು ಕೂಡ. ನೀವದನ್ನು ಇಲ್ಲದ ಭ್ರಮೆಯಿಂದ ನೋಡಿ, ಅದಕ್ಕೊಂದು ಕರಾಳತೆಯನ್ನು ಅಂಟಿಸಿ, ವ್ಯರ್ಥಾಲಾಪ ಮಾಡುತ್ತೀರಿ ಎಂದೇ ಕೆಲವು ಪ್ರಗತಿಪರರು ಎನಿಸಿಕೊಂಡವರ ತರಾಟೆ.
ಒಟ್ಟಿನಲ್ಲಿ ಮದ್ಯಪಾನವು ತರುವ, ತಂದಿರುವ ಮತ್ತು ವ್ಯಕ್ತಪಡಿಸುವ ಹಲವು ನೂರು ಸಾವಿರಾರು ವಾದ ವಿವಾದ ಸಂವಾದಗಳು ಯಾವತ್ತಿಗೂ ನಿರಂತರ ಚರ್ಚೆಯ ಸಂಗತಿ. ಕುಡಿಯುವವರು ಅದನ್ನು ಸಮರ್ಥಿಸಿಕೊಳ್ಳುತ್ತಾ, ಕುಡಿಯದವರು ಅದನ್ನು ತೀವ್ರವಾಗಿ ವಿರೋಧಿಸುತ್ತಾ (ಅಂಥವರು ಈಗ ಕಡಮೆಯಾಗುತ್ತಿದ್ದಾರೆ!) ಹಿಂದೆ ಮುಂದೆ ಬಯ್ಯುತ್ತಾ ಆಡಿಕೊಳ್ಳುತ್ತಾ ಹಂಗಿಸುತ್ತಾ ಕೀಳರಿಮೆಯನ್ನೂ ಮೇಲರಿಮೆಯನ್ನೂ ಹೊಂದುತ್ತಾ ಜೀವನ ಸಾಗಿಸುತ್ತಿದ್ದಾರೆ. ನನಗಾಗುವ ಅಚ್ಚರಿಯೆಂದರೆ ಕುಡಿತ ಕೆಟ್ಟದ್ದೆಂದು ಗೊತ್ತಿದ್ದೂ ಇವರು ಅದನ್ನು ಗಮನಕ್ಕೇ ತಂದುಕೊಳ್ಳದೇ ಆರಾಮವಾಗಿ ಕುಡಿಯುತ್ತಾ ಇರುತ್ತಾರಲ್ಲ! ಎಂದು. ಯಾರದೋ ಸಾವಿನ ಸಮಾಚಾರ ಬಂದಾಗ ಅವರಿಗೆ ಏನಾಗಿತ್ತು? ಎಂದರೆ ತೀರಾ ಅಸಡ್ಡೆಯಿಂದ ‘ತುಂಬಾ ಕುಡಿಯುತ್ತಿದ್ದರು; ಹಾಗಾಗಿ ಹೋಗಿಬಿಟ್ಟರು’ ಎಂದು ನಿರ್ಲಿಪ್ತವಾಗಿ ಹೇಳುತ್ತಾರೆ. ಅಂದು ರಾತ್ರಿಯೇ ಸತ್ತವರ ಹೆಸರಿನಲ್ಲಿ ಶೋಕಾಚರಣೆ ಮಾಡಲು ಪಾರ್ಟಿ ಇಟ್ಟುಕೊಳ್ಳುತ್ತಾರೆ. ಒಟ್ಟಿನಲ್ಲಿ ಲೋಕದಲ್ಲಿ ಸುಖಕ್ಕೂ ದುಃಖಕ್ಕೂ ಜೊತೆಯಾಗುವ ಏಕೈಕ ಸ್ನೇಹಿತ ಯಾರಾದರೂ ಇದ್ದರೆ ಅದು ಮದ್ಯಪಾನ ಎಂದು ಕುಡಿಯದೇ ಹೇಳಬಹುದು; ಕುಡಿದರೆ ಇನ್ನೂ ಚೆನ್ನಾದ ಅನುಭವದಿಂದ ಹೇಳಬಹುದು! ಹೆಂಡ ಕುಡುಕರಿಗೆ ಜಯವಾಗಲಿ; ನಮ್ಮಂಥ ನೀರು, ಎಳನೀರು ಕುಡುಕರಿಗೆ ಯಾವತ್ತೂ ಅವರ ಬಗ್ಗೆ ಭಯವಿರಲಿ!!
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43775
(ಮುಗಿಯಿತು)

ಡಾ. ಹೆಚ್ ಎನ್ ಮಂಜುರಾಜ್ , ಹೊಳೆನರಸೀಪುರ