(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಅಂದ್ರೆ ಇನ್ನೂ ಟೈಂ ಇದೆ ಅಲ್ವಾ?”
“ಟೈಂ ಇದೆ. ಆದರೆ ನಾವು ಪ್ರಿಪೇರ್ ಆಗಿರಬೇಕಲ್ವಾ?”
“ನೀನು ಏನು ಯೋಚನೆ ಮಾಡಿದ್ದೀಯ?”
“ನನ್ನ ಎಂ.ಎ. ಮುಗಿಯುತ್ತಿದ್ದ ಹಾಗೇ ಕೆಲಸಕ್ಕೆ ಸೇರಿ, ಆ ಊರಿಗೆ ನಮ್ಮ ಕುಟುಂಬಾನ್ನ ಕರೆದುಕೊಂಡು ಹೋಗ್ತೀನಿ.”
“ಕೆಲಸ ಸಿಗುವುದು ಅಷ್ಟು ಸುಲಭಾನಾ?”
“ಕೆಲಸ ಸಿಗದಿದ್ರೆ ಮನೆಯಲ್ಲಿ ಟ್ಯೂಷನ್ ಹೇಳ್ತೀನಿ. ಚಿಕ್ಕ ಮನೆ ಸಿಕ್ಕಿದರೂ ಸಾಕು……..”
“ನನಗೇನೋ ನೀನು ಈ ಮನೆ ಬಿಡಲ್ಲ ಅನ್ನಿಸ್ತಿದೆ……..”
“ಅದ್ಯಾಕೆ ಹಾಗೆ ಅನ್ನಿಸ್ತಿದೆ?”
“ನಿಮ್ಮ ನೀಲಾ ಆಂಟಿ ನಿನ್ನನ್ನು ಸೊಸೆ ಮಾಡಿಕೊಂಡರೆ?”
ಅವಳ ಮಾತು ಕೇಳಿ ವಾರುಣಿ ಜೋರಾಗಿ ನಕ್ಕಳು.
“ಯಾಕೆ ನಗ್ತಿದ್ದೀಯ?”
“ಒಂದು ವೇಳೆ ನೀಲಾ ಆಂಟಿ ಒಪ್ಪಿದರೂ ನಮ್ಮನೆಯಲ್ಲಿ ಒಪ್ಪಲ್ಲ.”
“ಯಾಕೆ?”
“ಜಾತಿ…. ಜಾತಿ ಪ್ರಶ್ನೆ?”
“ಈಗ ಮದುವೆಗೆ ಹೋಗಿ ಬಂದರಲ್ಲಾ ಆಗ ಜಾತಿ ಪ್ರಶ್ನೆ ಬರಲಿಲ್ವಾ?”
“ನಿನಗೆ ಗೊತ್ತಿಲ್ಲ ಕಣೆ. ಕೆಲವು ಸಲ ಜಾತಿ ಪ್ರಶ್ನೆ ಕಾಡಲ್ಲ. ‘ಬ್ರಾಹ್ಮಣ ಕಾಫಿ ಕ್ಲಬ್’ ಅಂದ ತಕ್ಷಣ ಯಾವ ಯೋಚನೆಯೂ ಇಲ್ಲದೆ ಅಲ್ಲಿ ಊಟ, ತಿಂಡಿ ಮಾಡ್ತಾರೆ. ಬ್ರಾಹ್ಮಣರಿಂದ ಅಡಿಗೆ ಮಾಡಿಸಿದ್ದೀವಿ ಅಂತ ಮದುವೆ ಮನೆಯಲ್ಲಿ ಹೇಳಿದ ತಕ್ಷಣ ಊಟ ಮಾಡ್ತಾರೆ. 90 ಪರ್ಸೆಂಟ್ ಜನರು ಹಾಗೇನೆ. ಆದರೆ ಸಂಬಂಧ ಬೆಳೆಸುವಾಗ ಜಾತಿಯ ಪ್ರಶ್ನೆ ಭೂತವಾಗಿ ಎದುರು ನಿಲ್ಲುತ್ತದೆ.”
“ನೀನೂ ಹಾಗೇ ಭಾವಿಸ್ತೀಯಾ?”
“ಗೊತ್ತಿಲ್ಲ. ಯಾಕೇಂದ್ರೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಪ್ಪ-ಅಮ್ಮ ದುಡಿಯುವ ಯಂತ್ರಗಳಾಗಿರುವುದು ನೋಡಿ ಮನಸ್ಸು ರೋಸಿ ಹೋಗಿದೆ. ಅಪ್ಪ ಅವರ ಕುಟುಂಬ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ನಾನು ಅವರನ್ನು ನೆಮ್ಮದಿಯಿಂದ ಇರುವ ಹಾಗೆ ನೋಡಿಕೊಳ್ಳಬೇಕು. ತಮ್ಮ-ತಂಗಿಯರನ್ನು ಸೆಟ್ಲ್ ಮಾಡಬೇಕು.”
“ಹಾಗಾದ್ರೆ ನೀನು ಮದುವೆ ಆಗೋದೇ ಇಲ್ವಾ?”
“ನನ್ನ ಪ್ರಿಯಾರಿಟಿ ನನ್ನ ಕುಟುಂಬ. ಮದುವೆಯಲ್ಲ……….”
“ಸಾರಿ ಕಣೆ……….. ಏನೇನೋ ಪ್ರಶ್ನೆ ಕೇಳಿ ಬೇಜಾರು ಮಾಡಿದೆ.”
“ಸಾರಿ ಯಾಕೆ ಕೇಳ್ತೀಯ? ನಾನು ನಿನ್ನ ಹತ್ತಿರ ತಾನೆ ಎಲ್ಲಾ ಹೇಳಿಕೊಳ್ಳುವುದು. ನಿನ್ನ ಹತ್ರ ಮಾತಾಡಿದರೆ ನನಗೂ ಸಮಾಧಾನ. ನಾನಿನ್ನು ಹೊರಡ್ತೀನಿ.”
“ಊಟ ಮಾಡಿಕೊಂಡು ಹೋಗೇ…..”
“ನಮ್ಮಮ್ಮ ಊಟಕ್ಕೆ ಕಾಯ್ತಿರ‍್ತಾರೆ ಕಣೆ………”
“ಆಯ್ತು ಹೋಗಿ ಬಾ……….”
ವಾರುಣಿ ಮನೆ ಕಡೆ ಹೆಜ್ಜೆ ಹಾಕಿದಳು. ಮನೆಯ ಗೇಟ್ ತೆಗೆಯುತ್ತಿದ್ದಂತೆ ಅವಳ ಕಣ್ಣುಗಳು ಮನೆಯನ್ನು ಅವಲೋಕಿಸಿದವು. ಮನೆ ಹಳೆಯದಾಗಿದ್ದರೂ ಎರಡು ವರ್ಷಗಳಿಗೊಮ್ಮೆ ಪೇಯಿಂಟ್ ಮಾಡಿಸುತ್ತಿದ್ದುದರಿಂದ ಚೆನ್ನಾಗೇ ಕಾಣುತ್ತಿತ್ತು.
ಮನೆಯ ಮುಂದಿದ್ದ ವಿಶಾಲವಾದ ಜಾಗ ವೆಹಿಕಲ್ ನಿಲ್ಲಿಸಲು ಅನುಕೂಲವಾಗಿತ್ತು. ಪಕ್ಕದಲ್ಲಿ ಅಮ್ಮ ಮಾಡಿದ್ದ ಪುಟ್ಟ ಕೈತೋಟ, ಕರಬೇವಿನ ಮರ, ಕೊತ್ತಂಬರಿ, ತುಳಸಿ, ಮಲ್ಲಿಗೆ, ಗುಲಾಬಿ ಗಿಡಗಳು. ಆ ಮನೆಮೇಲೆ ವರೂಗೆ ಒಂದು ತರಹ ಮೋಹ. ಅವಳು ಅಆಇಈ ಕಲಿತ ಮನೆ, ತರಗತಿಗೆ ಮೊದಲು ಬಂದಾಗ ಸಂಭ್ರಮಿಸಿದ ಮನೆ, ಅಪ್ಪನ ಹೆಗಲೇರಿ ಆಡಿದ ಮನೆ, ಅಮ್ಮನ ಕೈತುತ್ತು ತಿಂದ ಮನೆ, ಅಡಿಗೆ ಮನೆ ಕಿಟಕಿಯಿಂದ ಬೀದಿಯ ಗೇಟು ಕಾಣುತ್ತಿತ್ತು.
ಅಡಿಗೆ ಮನೆ ಅವಳಿಗಿಷ್ಟವಾದ ತಾಣಗಳಲ್ಲಿ ಒಂದು. ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದು ಅಡಿಗೆ ಮನೆಗೆ ಧಾವಿಸಿ ಅಮ್ಮನ ಸೆರಗಲ್ಲಿ ಮುಖ ಒರೆಸಿಕೊಂಡು, ಅಮ್ಮನ ಜೊತೆ ಅವಳಿಗೆ ಒತ್ತಿಕೊಂಡು ಕುಳಿತು ಕಾಫಿ ಹೀರುತ್ತಿದ್ದುದುಂಟು. ಆಗೆಲ್ಲಾ ಸೌದೆ ಒಲೆಯಲ್ಲಿ ಕಾಫಿ ಅಡಿಗೆ ಎಲ್ಲಾ ಮಾಡುತ್ತಿದ್ದರು. ಒಲೆಯ ಮುಂದೆ ಕುಳಿತು ಕಾಫಿ ಕುಡಿಯುತ್ತಿದ್ದ ಮಜವೇ ಬೇರೆ. ನಂತರ ಇಜ್ಜಲೊಲೆ ಕಾಲಿಟ್ಟಿತ್ತು. ಅನಂತರ ಸೀಮೆಎಣ್ಣೆ ಸ್ಟೌವ್. ಈಗ ಗ್ಯಾಸ್. ಅಮ್ಮ ಎಲ್ಲಾ ರೀತಿಯ ಒಲೆಗಳಲ್ಲೂ ಅಡಿಗೆ ಮಾಡಿರುವುದನ್ನು ನೋಡುತ್ತಾ ಬಂದಿದ್ದಾಳೆ. ಒಲೆ ಊದುತ್ತಾ ಕಣ್ಣು ಮೂಗಲ್ಲಿ ನೀರು ಸುರಿಸುತ್ತಾ ಒದ್ದಾಡಿದ ದಿನಗಳು ನೆನಪಿವೆ. ಇದ್ದಲೊಲೆಯಲ್ಲಿ ಬೀಸಣಿಗೆಯಿಂದ ಬೀಸುತ್ತಲೇ ಇರಬೇಕು. ಸೀಮೆಎಣ್ಣೆ ಸ್ಟೌವ್‌ನಲ್ಲಿ ಬತ್ತಿ ಹಾಕುವ ಒದ್ದಾಟ. ಬತ್ತಿ ಮೇಲೆಳೆಯುವುದು, ಕರಟಿರುವ ಭಾಗ ತೆಗೆಯುವುದು. ಸೀಮೆಎಣ್ಣೆಗಾಗಿ ಕ್ಯೂ ನಿಲ್ಲುತ್ತಿದ್ದುದೂ ನೆನಪಿದೆ.
ಈಗ ಮೂರು ಒಲೆಯಿರುವ ಒಂದು ಗ್ಯಾಸ್ ಸ್ವೌವ್. ಎರಡು ಒಲೆಗಳಿರುವ ಸ್ಟೌಟ್ ಇದೆ. ಸಿಲಿಂಡರ್‌ಗಳಿಗೆ ತೊಂದರೆಯಿಲ್ಲ. ಚಿಕ್ಕಪ್ಪಂದಿರ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್‌ಗಳಿವೆ. ಇಷ್ಟು ಮಂದಿಗೆ ಅಡಿಗೆ, ತಿಂಡಿ ಮಾಡಲು ಒಮ್ಮೊಮ್ಮೆ ಎರಡು ಒಲೆಗಳೂ ಸಾಕಾಗುವುದಿಲ್ಲ. ಚಪಾತಿಯೆಂದರೆ 40-45 ಚಪಾತಿ ಬೇಕು. ದೋಸೆಯೂ ಅಷ್ಟೆ. ಇದ್ದಿದ್ದರಲ್ಲಿ ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಮಾಡುವುದೇ ಸುಲಭ. ಉಪ್ಪಿಟ್ಟೆಂದರೆ ಮೂಗು ಮುರಿಯುವವರೇ ಹೆಚ್ಚು.
ಅಮ್ಮನಿಗೆ ಅಡಿಗೆ ಮನೆಯೇ ಸರ್ವಸ್ವ. ತಾಳ್ಮೆಯ ಮಹಾಮೂರ್ತಿ ಅವಳು. ಅಸಹಾಯಕತೆಯಿಂದ ಅವಳು ಕಣ್ಣೀರು ಸುರಿಸುವುದನ್ನು ವರು ನೋಡಿದ್ದಾಳೆ. ಯಾರೂ ಮನೆಗೆ ಖರ್ಚು ಮಾಡುವುದಿಲ್ಲವೆಂದು ದುಃಖ, ಗಂಡ ಮೂಕಬಸವನಂತೆ ಖರ್ಚು ಮಾಡುವುದನ್ನು ನೋಡಿ ಕೋಪ. ತನ್ನ ಕೈಲಿ ಏನೂ ಮಾಡಲಾಗುವುತ್ತಿಲ್ಲವೆಂಬ ಅಸಹಾಯಕತೆ. ಕಣ್ಣೀರ ರೂಪದಲ್ಲಿ ಕೆಳಗಿಳಿಯುತ್ತದೆ. ಯಾರೂ ನೋಡಬಾರದೆಂದು ಕದ್ದು ಮುಚ್ಚಿ ಸೆರಗಿನಿಂದ ಕಣ್ಣೀರು ಒರೆಸಿಕೊಳ್ಳುವುದನ್ನು ವರು ನೋಡಿದ್ದಾಳೆ.
ಶೋಭಾ ಚಿಕ್ಕಮ್ಮನದೂ ಒಂದು ರೀತಿಯಲ್ಲಿ ಅಸಹಾಯಕ ಸ್ಥಿತಿ. ಗಂಡ ಕೈ ತುಂಬಾ ಸಂಪಾದಿಸುತ್ತಿದ್ದರೂ ಕೊಂಚವೂ ಆರ್ಥಿಕ ಸ್ವಾತಂತ್ರ್ಯವಿಲ್ಲ. ತನ್ನಿಂದ ಶಕ್ಕು ಅಕ್ಕನಿಗೆ ಏನೂ ಸಹಾಯ ಮಾಡಲು ಆಗುವುದಿಲ್ಲವಲ್ಲಾ ಎಂದು ಬೇಸರ ಮಾಡಿಕೊಂಡಿರುವುದೂ ಉಂಟು. ಆದರೆ ಅಮ್ಮನಿಗಿಂತ ವಾಸಿ. ಜಾಣತನದಿಂದ ಕೆಲವು ಬದಲಾವಣೆ ತಂದಿದ್ದಾಳೆ.
ಸಾಮಾನ್ಯವಾಗಿ ಒಂದನೇ ತಾರೀಕು ಶ್ರೀನಿವಾಸರಾವ್ ಮಗಳನ್ನು ಕೂಡಿಸಿಕೊಂಡು ಸಾಮಾನಿನ ಲಿಸ್ಟ್ ಮಾಡಿಸುತ್ತಿದ್ದರು. ಎಲ್ಲರೂ ತಮಗೆ ಬೇಕಾದ ಸೋಪು, ಶ್ಯಾಂಪು, ಟೂತ್‌ಪೇಸ್ಟ್ ಹೆಸರು ಬರೆದು ಶೋಭಾ ಕೈಗೆ ಕೊಟ್ಟಿರುತ್ತಿದ್ದರು. ಆ ಸಲ ಶೋಭಾ ವರುಗೆ ಹೇಳಿದ್ದಳು. “ನೀನು ಡವ್‌ಶ್ಯಾಂಪು, ಡವ್‌ಸೋಪು 5, ಸೆನ್ಲೋಡೈನ್ ಟೂತ್‌ಪೇಸ್ಟ್ ಎರಡು ಬರಿ ಸಾಕು. ಪ್ಯಾರಚ್ಯೂಟ್ ಕೊಬ್ಬರಿಎಣ್ಣೆ ಎರಡು ಬಾಟಲ್ ಬರಿ.”
“ಯಾಕೆ ಚಿಕ್ಕಮ್ಮ?”
“ನಿಮ್ಮ ಚಿಕ್ಕಮ್ಮ, ಅತ್ತೆ ಇಬ್ಬರೂ ಸಂಪಾದಿಸುತ್ತಿದ್ದಾರೆ. ಅವರ ಫ್ಯಾಮಿಲಿಗೆ ಬೇಕಾದ ಸೋಪು, ಪೇಸ್ಟು, ಶ್ಯಾಂಪು ಅವರೇ ತೆಗೆದುಕೊಳ್ಳಲಿ ಬಿಡು.”
“ಬರೆಯಲಾ ಅಪ್ಪ?” ವರು ಕೇಳಿದ್ದಳು.
“ಭಾವ, ನಾನು ಅವರಿಗೆ ಉತ್ತರ ಕೊಡ್ತೀನಿ. ನೀವು ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಬೇಡಿ.”
ಒಂದನೆ ತಾರೀಕು ಸಾಯಂಕಾಲ ಮನೆಗೆ ಬಂದು ಕಾಫಿ ಕುಡಿದ ನಂತರ ಜಾನಕಿ ಕೇಳಿದ್ದಳು. “ವರು ಯಾಕೆ ನಮ್ಮ ಸೋಪುಗಳು, ಕೊಬ್ಬರಿಎಣ್ಣೆ, ಶಾಂಪೂ ಯಾವುದೂ ನಮ್ಮ ರೂಮ್‌ಗೆ ತಂದಿಟ್ಟಿಲ್ಲ?”
“ಚಿಕ್ಕಮ್ಮನ್ನ ಕೇಳಿ.”
ಅಷ್ಟರಲ್ಲಿ ಅಲ್ಲಿಗೆ ಬಂದ ಶೋಭಾ ಹೇಳಿದಳು. “ನೀವಿಬ್ಬರೂ ಕೈ ತುಂಬಾ ಸಂಪಾದಿಸ್ತೀರ. ನಿಮಗೆ ಬೇಕಾದ ಸೋಪು, ಶ್ಯಾಂಪು ನೀವೇ ತೆಗೆದುಕೊಳ್ಳಕ್ಕಾಗಲ್ವಾ? ಇನ್ಮೇಲೆ ಹೀಗೇನೇ.”
“ಏನಕ್ಕಾ ಹೀಗಂತೀರಾ? ನಾವೂ ಮನೆ ಖರ್ಚಿಗೆ ಹಣ ಕೊಡಲ್ವಾ?”
“ಈ ಪ್ರಶ್ನೆ ನೀನು ನಿನಗೇ ಹಾಕಿಕೋ. ಆಮೇಲೆ ನಮ್ಮನ್ನು ಪ್ರಶ್ನೆ ಮಾಡು…..”
ಜಾನಕಿಯಿಂದ ದೇವಕಿಗೆ ವಿಷಯ ತಲುಪಿತ್ತು. ಪುನಃ ಆ ಬಗ್ಗೆ ಪ್ರಶ್ನಿಸಿರಲಿಲ್ಲ.
“ನಾನು ಕೆಲಸಕ್ಕೆ ಸೇರಿ ಮೊದಲು ಅಮ್ಮ-ಅಪ್ಪನ್ನ ಈ ಕಷ್ಟದಿಂದ ಪಾರು ಮಾಡಬೇಕು” ಎಂದುಕೊಂಡಳು.
ಅವಳು ಒಳಗೆ ಬಂದಾಗ ಶಕುಂತಲಾ ಅನಾನಸ್ ಹೆಚ್ಚುತ್ತಾ ಕುಳಿತಿದ್ದರು.
“ಬಂದೆಯಾ? ತಟ್ಟೆ ಹಾಕಲಾ?”
“ನೀನೂ ಊಟ ಮಾಡಿಲ್ವಾ?”
“ಇಲ್ಲ ಕಣೆ. ನಿನಗೆ ಕಾಯ್ತಿದ್ದೆ……”
“ಅಕ್ಕಾ ನಾನು ಬಡಿಸ್ತೀನಿ. ನೀವು ಕೂತ್ಕೊಳ್ಳಿ.”
“ಅಮ್ಮ ಸಾರು ಮಾಡಿದ್ದೀಯಾ?”
“ಅನ್ನ, ಸಾರು, ಮೆಂತ್ಯದ ಗೊಜ್ಜು ಮಾಡಿದ್ದೀನಿ. ತಿಂಡಿ ಹೆವಿಯಾಯ್ತಲ್ವಾ?”
“ಸೂಪರ್. ನಿನ್ನ ಕೈ ಸಾರು ತಿಂದು ತುಂಬಾ ದಿನಗಳಾಗಿವೆ. ರಾತ್ರಿಗೆ ಚಪಾತಿಗೆ ಪೈನಾಪಲ್ ಗೊಜ್ಜು ಮಾಡ್ತೀಯಾ?”
“ಹೂಂ ಕಣೆ. ಏನಾದರೂ ಪಲ್ಯ ಮಾಡಲಾ?”
“ಬೇಡಮ್ಮ. ಗೊಜ್ಜೇ ಸಾಕು. ನಾನು ನಾಳೆ ತಿಂಡಿ ತಿಂದುಕೊಂಡು ಹೊರಡ್ತೀನಿ.”
“ಯಾಕೆ ನಾಡಿದ್ದು ಹೋದರಾಗಲ್ವಾ?”
“ಇಲ್ಲಮ್ಮ ಹೋಗಬೇಕು. ನಾಳೆ ನಾಲ್ಕು ಗಂಟೆಗೆ ಆಂಟೀನ್ನ ಚೆಕಪ್‌ಗೆ ಕರ‍್ಕೊಂಡು ಹೋಗಬೇಕು.”
“ಆಗಲಮ್ಮ. ಬೆಳಿಗ್ಗೆ ಇಡ್ಲಿ ಮಾಡ್ತೀನಿ….”
“ಏನಾದರೂ ಮಾಡು……….”
“ಅವರನ್ನು ಕೆಲಸದವಳು ಕರ‍್ಕೊಂಡು ಹೋಗಲ್ವಾ?”
“ಆಗವರು ಮಗಳನ್ನೂ ಕರ‍್ಕೊಂಡು ಹೋಗಬೇಕು. ನಾನು ಕರ‍್ಕೊಂಡು ಹೋದಾಗ ಮಲ್ಲಿ ಅವಳನ್ನು ನೋಡಿಕೊಳ್ತಾಳೆ.”
“ನೀನು ಹೇಳೋದೂ ಸರಿ…….”
“ಅಮ್ಮ ಒಂದು ಮಾತು..”
“ಏನಮ್ಮಾ?”
“ನೀನು ಕೊಂಚ ಜೋರಾಗಮ್ಮ. ಒಂದು ಸಣ್ಣ ಮನೆಯಲ್ಲಿ ಅಪ್ಪನಿಗೆ ಬರುವ ಪೆನ್ಷನ್‌ನಲ್ಲಿ ಗಂಜಿ ಕುಡಿದು ಬದುಕೋಣ. ನೀನು, ಅಪ್ಪ ಈ ವಯಸ್ಸಿನಲ್ಲೂ ಇಷ್ಟು ದುಡಿಯಬೇಕಾ?”
“ವರು………..”
“ಪ್ಲೀಸ್ ಅಮ್ಮ. ನೀನು, ಚಿಕ್ಕಮ್ಮ ಕತ್ತೆ ಚಾಕರಿ ಮಾಡ್ತೀರ. ಏನು ಲಾಭವಾಗಿದೆ ಹೇಳು….”
“ಇನ್ನು ಕೊಂಚ ದಿನ ತಾಳ್ಮೆಯಿಂದಿರು. ನಿನ್ನ ಓದು ಮುಗಿಯುವ ಹೊತ್ತಿಗೆ ನಾವು ಮನೆ ಬಿಡಲೇಬೇಕು. ಇಷ್ಟು ದಿನಗಳು ಒಟ್ಟಿಗೆ ಇದ್ದು ಈಗ ಬೇರೆಯಾಗೋದು ಚೆನ್ನಾಗಿರಲ್ಲ…….”
“ಸರಿಯಮ್ಮ” ಎಂದಳು ವಾರುಣಿ.
ರಾತ್ರಿ ಊಟಕ್ಕೆ ಕುಳಿತಾಗ ದೇವಕಿ ವ್ಯಂಗ್ಯವಾಗಿ ಹೇಳಿದಳು. “ಅತ್ತಿಗೆ ಮಗಳು ಬಂದಿದ್ದಾಳೇಂತ ಏನಾದ್ರೂ ಸ್ಪೆಷಲ್ ಅಡಿಗೆ ಮಾಡ್ತೀರ ಅಂದ್ಕೊಂಡಿದ್ದೆ. ಬರೀ ಅನ್ನ, ಸಾರು ಮಾಡಿದ್ದೀರಲ್ಲಾ?”
“ಅತ್ತೆ, ಅಮ್ಮ ನನ್ನ ಜೊತೆ ಮೈಸೂರಿಗೆ ಬರ‍್ತಿದ್ದಾರೆ. ನನಗೆ ಅವರು ಅಲ್ಲೇ ಸ್ಪೆಷಲ್ ಅಡಿಗೆ ಮಾಡಿಹಾಕ್ತಾರೆ ಬಿಡಿ.”
“ನಿಜ ಹೇಳ್ತಿದ್ದೀಯೇನೆ?”
“ಸುಳ್ಳು ಯಾಕೆ ಹೇಳಲಿ? ಅಮ್ಮನಿಗೂ ಯಾಕೋ ಆರೋಗ್ಯ ಮೊದಲಿನಂತಿಲ್ಲ. ಒಂದು ಸಲ ಕಂಪ್ಲೀಟ್ ಚೆಕಪ್ ಮಾಡಿಸೋಣಾಂತ.”
“ಇಲ್ಲೇ ಚೆಕಪ್ ಮಾಡಿಸಬಹುದಲ್ಲಾ?”
“ಚೆಕಪ್ ಮಾಡಿಸಬಹುದು. ಆದರೆ ಅಡಿಗೆ ಮನೆಯಿಂದ ಬಿಡುವೇ ಸಿಗ್ತಾ ಇಲ್ಲವಲ್ಲಾ? ಚೆಕಪ್ ಮಾಡಿಸಿ, ಔಷಧಿ ತೊಗೊಂಡು, ರೆಸ್ಟ್ ತೆಗೆದುಕೊಳ್ಳದಿದ್ರೆ ಏನು ಪ್ರಯೋಜನ?”
“ಭಾವಾನೂ ನಿಮ್ಮ ಜೊತೆ ಬರ‍್ತಾರಾ?”
“ಅವರಿರ‍್ತಾರೆ. ಶರು, ಶಂಕರಾನೂ ಇರ‍್ತಾರೆ. ನೀವೆಲ್ಲಾ ಅವರನ್ನು ನೋಡಿಕೊಳ್ಳಿ.”
“ಶೋಭಾ, ವರು ಹೇಳ್ತಿರೋದು ನಿಜಾನಾ?”
“ಹುಂ. ಮಧ್ಯಾಹ್ನವೇ ಹೇಳಿದಳು.”
“ನೀವು ಒಪ್ಪಿದ್ರಾ?”
“ನಾನು ಯಾಕೆ ಬೇಡ ಅನ್ನಲಿ? ಅಕ್ಕನ ಆರೋಗ್ಯಾನೂ ಮುಖ್ಯ ಅಲ್ಲವಾ? ನೀವು ಹೋಗೋದಾದರೆ ಹೋಗಿ ಅಕ್ಕ. ನೀವು ಹೋದರೆ ಏನೂ ತೊಂದರೆಯಾಗಲ್ಲ. ಅತ್ತಿಗೆ ಮಗಳ ಜೊತೆ ಬರ‍್ತಾರೇಂತ ಹೇಳಿದೆ.”
“ಅಕ್ಕ ಬಂದ್ರೆ ಸರಿಹೋಗಲ್ಲ……..” ದೇವಕಿ ಹೇಳಿದಳು.
“ನೀವಿಬ್ಬರೂ ಪೇಯಿಂಗ್ ಗೆಸ್ಟ್ಗಳ ತರಹ ಇದ್ರೆ ಅಕ್ಕ ಖಾಯಿಲೆ ಬೀಳದೆ ಏನ್ಮಾಡ್ತಾರೆ? ಇವತ್ತು ಅವರು, ನಾಳೆ ನಾನು ಇಬ್ಬರೂ ಮಲಗಿದರೆ ಏನ್ಮಾಡ್ತೀರಾ?”
“ನಾವೇನು ಮಾಡಬೇಕು ನೀವೇ ಹೇಳಿ.”
“ನಾಳೆಯಿಂದ ರಾತ್ರಿ ಚಪಾತಿ, ಪಲ್ಯ ಮಾಡುವ ಕೆಲಸ ನೀವಿಬ್ಬರೂ ವಹಿಸಿಕೊಳ್ಳಿ. ಅಕ್ಕ ಊರಿಗೆ ಹೋದ್ರೆ ಖಂಡಿತಾ ನಾನೂ ಇರಲ್ಲ………”
“ಪ್ಲೀಸ್ ಅತ್ತಿಗೆ ನೀವು ಹೋಗಬೇಡಿ. ನಾವಿಬ್ಬರೂ ರಾತ್ರಿ ಚಪಾತಿ ಮಾಡುವ ಜವಾಬ್ದಾರಿ ತೊಗೋತೀವಿ” ದೇವಕಿ ಬಂದು ಶಕುಂತಲಾಳನ್ನು ಕೇಳಿದಳು.
“ನನಗೇನು ಹೋಗಕ್ಕೆ ಇಷ್ಟಾನಾ ದೇವಕಿ? ನಾನು ಮಲಗಿದರೆ ಯಾರು ನೋಡ್ಕೋತಾರೆ ಹೇಳು. ವರೂಗೆ ಅದೇ ಯೋಚನೆ.”
“ವರು, ನಾವು ನೋಡ್ಕೋತೀವಿ. ನಾನೇ ಕರೆದುಕೊಂಡು ಹೋಗಿ ಚೆಕಪ್ ಮಾಡಿಸ್ತೀನಿ……….”
“ಆಗಲಿ ಅತ್ತೆ. ಅಮ್ಮ ಸುಧಾರಿಸಿಕೊಂಡರೆ ಸಾಕು” ಎಂದಳು ವರು ಗೆಲುವಿನ ನಗೆ ಬೀರುತ್ತಾ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43695
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
ಈ ಸಾರಿಯ ಕನಸೊಂದು ಶುರುವಾಗಿದೆ ಧಾರಾವಾಹಿ ಯಲ್ಲಿ ಬದುಕಿನಲ್ಲಿ .ಹಿರಿಯರ..ಸಂದಿಗ್ಧ ತೆಯ ತುಣುಕಿನ ಅನಾವರಣ.. ಇಂದಿನ ಮಕ್ಕಳ ದಾಷ್ಡಿಕತೆ.. ಅರಿವಾಗುತ್ತದೆ..
ನಮ್ಮ ಬದುಕಿನ ಕತೆಯೇ ಇಲ್ಲಿದೆ. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಕಾದಂಬರಿ.
ಸಹಜವಾದ, ಸರಳವಾದ ನಡೆನುಡಿಗಳಿಂದ ಕಥೆ ಚೆನ್ನಾಗಿ ಮೂಡಿಬಂದಿದೆ.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ
ಹಾಗೂ ಪ್ರತಿಕಂತನ್ನೂ ಓದಿ ಅಭಿಪ್ರಾಯ ತಿಳಿಸುತ್ತಿರುವ ಆತ್ಮೀಯರಿಗೆ. ವಂದನೆಗಳು.