(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಎಲಿಫೆಂಟ್ ಕೇವ್’ : ಗೊವಾ ಗಜಾ (Goa Gajah)
‘ತೀರ್ಥ ಎಂಪುಲ್ ‘ ದೇವಾಲಯದಿಂದ ಹೊರಟು ಉಬುದ್ ಬಳಿ ಇರುವ ‘ಎಲಿಫೆಂಟ್ ಕೇವ್’ ಎಂಬಲ್ಲಿಗೆ ತಲಪಿದೆವು. ಸ್ಥಳೀಯ ಭಾಷೆಯಲ್ಲಿ ಇದನ್ನು ‘ಗೊವಾ ಗಜಾ’ ಎನ್ನುತ್ತಾರೆ. ಇಲ್ಲಿರುವ ದೇವಾಲಯ ಸಂಕೀರ್ಣವನ್ನು 9 ನೇ ಶತಮಾನದಲ್ಲಿ ಧ್ಯಾನ ಮಂದಿರವಾಗಿ ನಿರ್ಮಿಸಲಾಯಿತೆಂದೂ, ಕಾಲಾನಂತರದಲ್ಲಿ ಅದು ಅವನತಿಗೆ ಒಳಗಾಗಿ, 11 ನೇ ಶತಮಾನದಲ್ಲಿ ಪುನಾರಚನೆಗೊಂಡಿತ್ತೆಂದೂ ನಂಬಲಾಗುತ್ತದೆ. ಕಾಡಿನಲ್ಲಿ ಮರೆಯಾಗಿದ್ದ ಈ ದೇವಾಲಯ ಸಂಕೀರ್ಣವನ್ನು 1923 ರಲ್ಲಿ ಡಚ್ ಪುರಾತತ್ವ ತಜ್ಞರು ಸಂಶೋಧಿಸಿದರಂತೆ. ಪ್ರಸ್ತುತ ಇಲ್ಲಿಗುಹಾ ದೇವಾಲಯವಿದೆ. ಸುರಂಗದ ಮುಖ್ಯದ್ವಾರದಲ್ಲಿ ರಾಕ್ಷಸನ ಮುಖದಂತಹ ರಚನೆಯಿದೆ. ಗುಹೆಯ ಒಳಗೆ ಆನೆಯ ಮುಖದ ಗಣೇಶನ ವಿಗ್ರಹವಿದೆ. ಈ ಕೆತ್ತನೆಯಿಂದಾಗಿ ಹಾಗೂ ಗಣೇಶನ ಆನೆ ಮುಖದಿಂದಾಗಿ “ಎಲಿಫೆಂಟ್ ಕೇವ್’ ಅಥವಾ ‘ಗೊವಾ ಗಜ’ ಎಂಬ ಹೆಸರು ಬಂದಿದೆ ಎನ್ನುತಾರೆ. ಅಂದಾಜು 50 ಅಡಿ ಉದ್ದ 4 ಅಡಿ ಅಗಲ ಇರಬಹುದಾದ ಗುಹೆಯೊಳಗೆ ಮಂದ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಸರದಿ ಸಾಲಿನಲ್ಲಿ ಹೋದರೆ ಸುಮಾರು 15 ನಿಮಿಷದಲ್ಲಿ ನೋಡಿ ಬರಬಹುದು.
ಗುಹೆಯ ಒಳಗೆ ಬೌದ್ಧ ಹಾಗೂ ಹಿಂದೂ ಧಾರ್ಮಿಕ ನಂಬಿಕೆಯ ಕುರುಹುಗಳಿವೆ. ಗಣೇಶ, ಶಿವ, ಸರಸ್ವತಿ, ಕುಬೇರ ಮುಂತಾದ ಹಿಂದೂ ದೇವರ ಚಿಕ್ಕ ವಿಗ್ರಹಗಳಿವೆ. ಗುಹೆಯ ಹೊರಗಡೆಯ ಆವರಣದಲ್ಲಿ ಹಲವಾರು ದೇವತೆಗಳ ಗುಡಿಯಿದೆ. ಆವರಣದಿಂದ ಹೊರಬರುವ ದಾರಿಯಲ್ಲಿ ಅಂಗಡಿಗಳಿದ್ದವು. ಪಕ್ಕದಲ್ಲಿಯೇ ದಟ್ಟ ಕಾಡು, ಶುಭ್ರ ನೀರಿನ ಕೊಳಗಳು ಹಾಗೂ ಇನ್ನೂ ಕೆಲವು ಗುಡಿಗಳು ಕಾಣಿಸಿದುವು. ಕಾಡಿನಲ್ಲಿ ಇನ್ನೂ ಕೆಲವು ಗುಡಿಗಳಿವೆಯೆಂದೂ ಅಲ್ಲಿಗೆ ಹೋದರೆ ತಡವಾಗಬಹುದೆಂದೂ ಮಾರ್ಗದರ್ಶಿ ಮುದ್ದಣ ಎಚ್ಚರಿಸಿದ.
ಬಾಲಿಯಲ್ಲಿ ನಾವು ಗಮನಿಸಿದಂತೆ, ಇಲ್ಲಿಯ ಬಹುತೇಕ ಮಂದಿರಗಳು, ಪುಟ್ಟ ಗುಡಿಯ ರೂಪದಲ್ಲಿದ್ದು ಒಂದೇ ತರ ಕಾಣಿಸುತ್ತಿದ್ದುವು. ಗರ್ಭಗುಡಿಯ ಬಾಗಿಲನ್ನು ತೆರೆಯುವುದು ಅಮವಾಸ್ಯೆ, ಹುಣ್ಣಿಮೆ ಮತ್ತು ಅವರ ಹಬ್ಬಗಳಂದು ದಿನ ಮಾತ್ರ. ಸ್ಥಳೀಯ ಅರ್ಚಕ್ರಿಗೆ ಮಾತ್ರ ಗರ್ಭಗುಡಿಯೊಳಗೆ ಪ್ರವೇಶ. ಆಕರ್ಷಣೀಯ ಎನಿಸುವಂತಹ ವಾಸ್ತುಶಿಲ್ಪವಾಗಲಿ, ಕೆತ್ತನೆಯಾಗಲಿ ಇರುವುದಿಲ್ಲ. ಪೂಜೆ, ಗಂಟೆ-ಜಾಗಟೆಗಳ ಧ್ವನಿಯೂ ಕೇಳಿಸಲಿಲ್ಲ, ಆಡಂಬರವಂತೂ ಇಲ್ಲವೇ ಇಲ್ಲ ಒಟ್ಟಿನಲ್ಲಿ ಪ್ರಶಾಂತ ಪರಿಸರವನ್ನೇ ದೇವರು ಎಂವು ಆರಾಧಿಸುವ ಪದ್ಧತಿ. ದೇವಾಲಯದ ಪ್ರವೇಶದ್ವಾರ ಮತ್ತು ಹೊರಗಡೆ ಮಾತ್ರ ಫೊಟೊ ತೆಗೆಯಲು ಅವಕಾಶ. ಸರದಿ ಸಾಲಿನ ಅಗತ್ಯವೇ ಇಲ್ಲದಷ್ಟು ಕಡಿಮೆ ಜನ. ಆರಾಮವಾಗಿ ದೇವಾಲಯದ ಆವರಣದಲ್ಲಿ ಜಾತಿ, ಧರ್ಮಾತೀತವಾಗಿ ನಡೆದಾಡಬಹುದು. ಹಾಗಾಗಿ ಪ್ರವಾಸಿಗರಾಗಿ ಬಂದವರಿಗೆ ‘ಬಯಲೇ ಆಲಯ’. ಒಂದೇ ನಿಯಮವೇನೆಂದರೆ, ಅವರು ಕೊಡುವ ಸ್ಥಳೀಯ ಉಡುಪು ‘ಸಾರಂಗೊ’ವನ್ನು ನಮ್ಮ ಸೊಂಟಕ್ಕೆ ಲುಂಗಿಯಂತೆ ಉಟ್ಟುಕೊಂಡು ಅದರ ಮೇಲೆ ‘ಸಾಶ್’ ಎಂಬ ಬಟ್ಟೆಯನ್ನು ಕಟ್ಟಿಕೊಳ್ಳಬೇಕು . ಈ ಬಗ್ಗೆ ಮಾರ್ಗದರ್ಶಿ ಮುದ್ದಣನನ್ನು ಕೇಳಿದಾಗ ಆತ ಹೇಳಿದ ಮಾತು ‘ ಇನ್ ಬಾಲಿ ಟೆಂಪಲ್ಸ್ ಆರ್ ನಾಟ್ ಫಾರ್ ಟೂರಿಸ್ಟ್ಸ್, ಬಟ್ ಟೂರಿಸ್ಟ್ಸ್ ಆರ್ ಫಾರ್ ಟೆಂಪಲ್ಸ್ ‘ ಎಂದ.
ದೇವಾಲಯ ಸಂಕೀರ್ಣದ ಸುತ್ತಲಿನ ಕಾಲುದಾರಿಯಲ್ಲಿ ನಡೆಯುತ್ತಾ ಹೊರಗೆ ಬಂದಾಗ ಅಲ್ಲಿ ದೈತ್ಯಾಕಾರದ ಮರವೊಂದಕ್ಕೆ ಕಪ್ಪು-ಬಿಳುಪು ಚೌಕಳಿ ವಿನ್ಯಾಸದ ಬಟ್ಟೆಯನ್ನು ಕಟ್ಟಿರುವುದು ಕಾಣಿಸಿತು. ಬಾಲಿಯಲ್ಲಿ ನಮ್ಮ ಪ್ರವಾಸದ ಮುಂದಿನ ದಿನಗಳಲ್ಲಿ ಕೆಲವೆಡೆ ದೊಡ್ಡದಾದ ಮರಗಳಿಗೆ, ಕೆಲವೆಡೆ ಕಂಭಗಳಿಗೆ ಹಾಗೂ ಮೂರ್ತಿಗಳಿಗೂ ಈ ರೀತಿಯ ಬಟ್ಟೆ ಸುತ್ತಿರುವುದನ್ನು ಗಮನಿಸಿ ಅದರ ಉದ್ದೇಶವೇನೆಂದು ಮಾರ್ಗದರ್ಶಿಗೆ ಕೇಳಿದೆ. ಆತ ಹೇಳಿದ ಪ್ರಕಾರ, ಕಪ್ಪು-ಬಿಳುಪು ಸುಖ ದು:ಖದ ಸಂಕೇತ. ಬಾಲಿಯಲ್ಲಿ ಕೆಲವು ಮರಗಳನ್ನು ‘ಪವಿತ್ರ’ ಮರಗಳೆಂದು ಗುರುತಿಸಿ, ಬಟ್ಟೆ ಕಟ್ಟಿ ಅದನ್ನು ಪೂಜಿಸುವುದು ದೈವಿಕ ಭಾವನೆ ಹಾಗೂ ಪರಿಸರದ ಬಗ್ಗೆ ಇರುವ ಕಾಳಜಿ ಎಂದ. ಹೀಗೆ ಬಟ್ಟೆ ಕಟ್ಟಿದ ಮರವನ್ನು ಅವರು ಕಡಿಯುವುದಿಲ್ಲವಂತೆ. ಎಷ್ಟು ಸೊಗಸಾದ ಕಲ್ಪನೆ ಅಲ್ಲವೇ? ನಮ್ಮಲ್ಲಿ ಪೂರ್ವಜರು ಅರಳೀಮರಕ್ಕೆ ಕಟ್ಟೆ ಕಟ್ಟುವುದು, ದಾರ ಸುತ್ತಿ ಪೂಜಿಸುವುದು ಇತ್ಯಾದಿ ಆಚರಣೆಗಳನ್ನು ರೂಢಿಗೆ ತಂದಿರುವುದರ ಹಿಂದೆಯೂ ಇಂತಹುದೇ ಪರಿಕಲ್ಪನೆ ಇದೆ ಅನಿಸಿತು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43795

–ಹೇಮಮಾಲಾ.ಬಿ. ಮೈಸೂರು