ಪ್ರಾಜೆಕ್ಟು ಮುಕ್ತಾಯ
ಐಟಿ ಜಗತ್ತಿಗೂ ಪ್ರಾಜೆಕ್ಟುಗಳಿಗು ಅವಿನಾಭಾವ ಸಂಬಂಧ. ಅದರಲ್ಲಿ ತೊಡಗಿಸಿಕೊಂಡವರಿಗೆಲ್ಲ ಪ್ರಾಜೆಕ್ಟಿನ ವಿಶ್ವರೂಪದ ವಿವಿಧ ಮುಖಗಳು ಪರಿಚಿತವೇ. ತಿಂಗಳು, ವರ್ಷಾನುಗಟ್ಟಲೆ ನಡೆಯುವ ಪ್ರಾಜೆಕ್ಟುಗಳ ಜೀವನ ಶೈಲಿಯಿಂದಾಗಿ ಅಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಒಡನಾಟವುಂಟಾಗಿ ಎಷ್ಟೊ ಸಖ್ಯ, ಗೆಳೆತನಗಳು ಬೆಳೆಯುವ ಹಾಗೆಯೇ ಮತ್ಸರ, ವಿರಸ, ದ್ವೇಷಗಳ ಕೊಸರು ಉಳಿಸಿಹೋಗುವುದೂ ಉಂಟು. ಒಳ್ಳೆಯದೋ, ಕೆಟ್ಟದ್ದೊ – ಅದೇನೆ ಇದ್ದರು ಪ್ರಾಜೆಕ್ಟಿಗಿರುವ ನಿಶ್ಚಿತ ಆರಂಭ, ಮುಕ್ತಾಯದ ಗುಣದಿಂದಾಗಿ ಒಂದಲ್ಲ ಒಂದು ದಿನ ಪ್ರಾಜೆಕ್ಟಿನ ಅಂತ್ಯ ಸಮೀಪಿಸಿ, ಎಲ್ಲಕ್ಕೂ ಮುಕ್ತಾಯ ಗೀತೆ ಹಾಡಲೆಬೇಕಾದ ಅನಿವಾರ್ಯ ಉಂಟಾಗುತ್ತದೆ – ಎಲ್ಲಾ ಭಾವೋನ್ಮೇಷಕ್ಕು ಲಾಲಿ ಹಾಡಿ ಮಲಗಿಸುವ ಹಾಗೆ. ೨೦೧೨ರಲ್ಲಿ ಅಂತದ್ದೊಂದು ಪ್ರಾಜೆಕ್ಟಿನ ಮುಕ್ತಾಯ ಹಾಡುವಾಗ ಕೊರೆದ ಸಾಲುಗಳಿವು. ಐಟಿ ಜಗದಲ್ಲಿ ಪ್ರಾಜೆಕ್ಟುಗಳ ಜಗದಲ್ಲಿ ಹೆಣಗಿದವರಿಗೆ ತುಸು ಪರಿಚಿತವೆನಿಸಬಹುದಾದ ಚಿತ್ರಣ..😊
(೦೧)
ಪ್ರಾಜೆಕ್ಟು ಮುಗಿವಾ ಸಂಕಟ
ಕಟ್ಟಿದ ತಂಡ ಅಕಟಕಟ
ಎಷ್ಟು ದಿಟ ಸಂಕಟ ಕಾಟ
ಬಿಚ್ಚಬೇಕೆಂದರೆ ಆಗದೆ ಮಾಟ ||
ಶುರುವಿನಲ್ಲಿ ಅಪರಿಚಿತ ಮುಖ
ಆದಂತೆ ಮೀಟಿಂಗು ಸಖ
ಹೋದಂತೆ ಪ್ರಾಜೆಕ್ಟ್ಪೇಸು
ಆಗುವರಾತ್ಮೀಯ ಸುಖ ದುಃಖ ||
ಟೀಮೆಂದರೇನು ಟೀಮು ರಖಮು
ನೂಡಲ್ಲಿನ್ಹಾಗೆ ಕ್ಹೋರಮ್ಮು
ಬ್ರೆಡ್ಡಿಗೆ ಬಿದ್ದಂತೆ ಜ್ಯಾಮು
ಇಡ್ಲಿ ವಡೆ ಸಾಂಬಾರಿಗೂ ಟೈಮು ||
ಎಲ್ಲರು ಹರಿದಂಚಿದ ಪ್ರಪಂಚ
ಜಗದೆಲ್ಲ ಮೂಲೆಗು ಮಂಚ
ಮೂತಿ ನೋಡದ ಸರಪಂಚ
ಫೋನು ಕಂಪ್ಯುಟರ ಮಾತಿಂಚ ||
ಕೆಲಸವೆಲ್ಲ ಹರಿದ್ಹಂಚಿದ ಪಾಲು
ಎಲ್ಲರಿಗು ಅವರದೆ ರೋಲು
ಸಣ್ಣ ಮರಿ ತಂಡವೆ ಕೂಲು
ಕನ್ಸಲ್ಟೆಂಟುಗಳು ಜತೆಗೆ ಸಾಲು ||
(೦೨)
ಕಮ್ಯುನಿಕೆಷನ್ನೆ ನಿಜದೊಳಗುಟ್ಟು
ಅದಕಷ್ಟು ಸ್ಟೇಟಸ್ಸು ಕಟ್ಟು
ಮಾಹಿತಿ ಹಂಚುತ ಗಿಟ್ಟು
ತಕರಾರು ಮೊದಲೆ ಒಳಗಟ್ಟು ||
ಹೀಗೆಲ್ಲ ಕೂಡಿ ಕೊಳೆಕಸ ಗುಡಿಸಿ
ಲಂಚು ಡಿನ್ನರುಗಳ ಸುತ್ತಾಡಿಸಿ
ಉಂಡು ತಿಂದಾಡಿ ನಲಿಯಿಸಿ
ಹತ್ತಿರವಾದ ಟೀಮೆ ಪರಮಾಯಿಷಿ ||
ಪ್ರಾಜೆಕ್ಟು ಕೆಲಸ ಕರಿ ಮರ ತರಹ
ಕಡು ಕಷ್ಟಕರ ದಿನದ ಬರಹ
ಒಗ್ಗಟ್ಟಲಿ ಮಾಡಿದರೆ ತರಹ
ಸುಖವಾಗಿ ಮುಗಿವ ಹಣೆಬರಹ ||
ಐ ಟೆಸ್ಟುಗಳ ಅಗ್ನಿಪರೀಕ್ಷೆ ಮುಗಿಸಿ
ಕಟ್ಟೋವರುಗಳತ್ತ ಸರಿಸಿ
ಮಾಡಿ ದತ್ತದ ವಲಸೆ ಬಿಸಿ
ಗೋಲೈವಾದರೆ ಸಿಗುವ ಸದ್ಗತಿ ||
ಮುಂದಿನ್ನು ನಿಜದ ಪರೀಕ್ಷೆಯ ಕ್ಲೇಷೆ
ಸ್ಟೆಬಿಲೈಸೆಷನ್ನು ಪೇಸೆ ಜಯಿಸೆ
ಮುಗಿಸಲಣಿಯಾಗುವ ಕೂಸೇ
ಬೇಗ ಬೇಗ ಎಲ್ಲವನು ಮುಗಿಮುಗಿಸೆ ||
(೦೩)
ಅಲ್ಲಿಗೆ ಬಿದ್ದು ಕೊನೆ ಪರದೆಯಂಕ
ಕಲಿತ ಪಾಠಗಳ ಸೇವಾಂಕ
ಸರಿ ತಪ್ಪು ವಿಮರ್ಶೆಗಳ ಲೆಕ್ಕ
ಸೈನಾಫು ಪ್ರಾಜೆಕ್ಟು ಮುಕ್ತಾಯ ಪಕ್ಕಾ ||
ಅಲ್ಲಿಗೆ ತಂಡದ್ಹಣೆಬರಹ ನಿರ್ಧಾರ
ಬಿಚ್ಚಬೇಕು ಕಟ್ಟಿದವರವರ
ಹಿಂತಿರುಗಿ ಬಂದಾ ಸ್ಥಾವರ
ಕೆಲವರು ಮನೆ ಬಿಟ್ಟೆ ಹೋಗುವರ ! ||
ಆ ಗಳಿಗೆ ಗಟ್ಟಿ ತಂಡದ ಭಲೆ ಒಗಟು
ಎಲ್ಲರೊಂದೆ ಕುಟುಂಬದ ಕಟ್ಟು
ಮುರಿಯಲಾಗದ ಭಾವ ಬಂಧ
ತಂಡ ಮುರಿಯಲೆಲ್ಲರಿಗೂ ನಿರ್ಬಂಧ ||
ಆದರು ವಿಧಿಯಿಲ್ಲದ ಪ್ರಾಜೆಕ್ಟು ಯಾತ್ರೆ
ಮುರಿಯಲೇಬೇಕು ಜನ ಜಾತ್ರೆ
ಮತ್ತೆ ಅರಸುತ ಹೊಸ ಜಾಗ
ಓಡಿದರೆ ಮರಳಿ ಹೊಸ ಜನ ಜಗ ಲಾಗ ||
– ನಾಗೇಶ ಮೈಸೂರು
ಐಟಿ ಜಗತ್ತಿನ ಪ್ರಾಜೆಕ್ಟ್ ಕವನ ಸೂಪರ್! ಅಕ್ಷರಷಃ ನಿಜ.. 🙂
ತುಂಬಾ ಧನ್ಯವಾದಗಳು ಶ್ರುತಿಯವರೆ, ಸ್ವಂತ ಅನುಭವದಿಂದ ಬರೆದದ್ದಾದ ಕಾರಣ ನೈಜ ವಿವರಣೆ ಸೇರಿಕೊಂಡಿದೆ. ಐಟಿ ಜಗದವರಿಗೆ ಹತ್ತಿರವಾಗುತ್ತೆ ಅನಿಸಿ ಬರೆದೆ. ನಿಮಗೆ ಹಿಡಿಸಿದ್ದು ನಿಜಕ್ಕೂ ಸೂಪರ್ ಖುಷಿ