ವೈವಿಧ್ಯಮಯ ಭಾರತೀಯ ಸಂಸ್ಕೃತಿ…

Share Button

ಅದೆಷ್ಟು ವೈವಿಧ್ಯಮಯ ಭಾರತೀಯ ಸಂಸ್ಕೃತಿ…

ನಮ್ಮ ಮನೆಯ ಹಿಂದಿನ ರಸ್ತೆಯಲ್ಲಿ ಕಳೆದ ಕೆಲವು ತಿಂಗಳಿಂದ ಹೊಸಮನೆಯೊಂದನ್ನು ಕಟ್ಟುತ್ತಿದ್ದರು. ಆ ಮನೆಯೊಡಯ-ಮನೆಯೊಡತಿ ಇಬ್ಬರೂ ಬಂದು ಪರಿಚಯಿಸಿಕೊಂಡು, ಅಕ್ಷತೆ ಕೊಟ್ಟು, ಭಾನುವಾರ ಗೃಹಪ್ರವೇಶವಿದೆಯೆಂದು ಆಮಂತ್ರಿಸಿದ್ದರು. ಒಂದೇ ಸಮಾರಂಭಕ್ಕೆ ಬಗೆಬಗೆಯ ವಿನ್ಯಾಸದಲ್ಲಿ ಆಹ್ವಾನಪತ್ರಿಕೆಗಳನ್ನು ಮುದ್ರಿಸುವ ಈ ದಿನಗಳಲ್ಲಿ, ಒಂದೂ ಆಹ್ವಾನ ಪತ್ರಿಕೆಯನ್ನು ಮುದ್ರಿಸದೆ, ಅಕ್ಷತೆ ಕೊಟ್ಟು ಆಮಂತ್ರಿಸಿದ ಅವರ ಶೈಲಿ ಖುಷಿಯಾಯಿತು.

ಈವತ್ತು ಮಧ್ಯಾಹ್ನ ಗೃಹಪ್ರವೇಶ ಸಮಾರಂಭಕ್ಕೆ ಹೋಗಿದ್ದಾಗ, ಅಲ್ಲಿ ಸಂಸ್ಕೃತಿ ಎದ್ದು ಕಾಣುತ್ತಿತ್ತು. ಮನೆಯೂ ಸೊಗಸಾಗಿತ್ತು. ಊಟಕ್ಕೆ ಕುಳಿತಾಗ ಬಾಳೆ ಎಲೆಯ ಮೇಲೆ ರಸಗುಲ್ಲವನ್ನು ಹೋಲುವ Wet Tissue Wipe ಉಂಡೆಯನ್ನು ಮೊದಲನೆಯದಾಗಿ ‘ಬಡಿಸಿದರು’. ಅದೇನೆಂದು ಗೊತ್ತಿದ್ದ ಕಾರಣ ಅದನ್ನು ಬಿಡಿಸಿ ಬಾಳೆ ಎಲೆ ಒರೆಸಿದೆವು. ನೀರಿನ ಮಿತವ್ಯಯವೂ ಆಯಿತು, ಆಧುನಿಕತೆಯೂ ಆಯಿತು.

ಸಾಮಾನ್ಯವಾಗಿ ಸಾಂಪ್ರದಾಯಿಕ ಸಮಾರಂಭಗಳಲ್ಲಿ, ಎಲೆ ತುದಿ ಪಾಯಸದಿಂದ ಮೊದಲ್ಗೊಂಡು, ಪಲ್ಯ, ಕೊಸಂಬರಿಗಳನ್ನು ಬಡಿಸಿ ಆಮೇಲೆ ಅನ್ನದ ಸರದಿ. ಆದರೆ ಈ ಸಮಾರಂಭದಲ್ಲಿ, ಎಲೆ ತುದಿಯ ಮೇಲ್ಭಾಗದಲ್ಲಿ ಪ್ರಥಮವಾಗಿ ಸಕ್ಕರೆ ಬಡಿಸಿ, ಆಮೇಲೆ ಎಲೆ ಮಧ್ಯಕ್ಕೆ ಅನ್ನ,ತೊವ್ವೆ, ತುಪ್ಪ ಬಡಿಸಿದರು. ಅನಂತರ ಪಲ್ಯ, ಕೋಸಂಬರಿ, ಚಿತ್ರಾನ್ನ, ಹಪ್ಪಳ, ಸಂಡಿಗೆ, ಅನ್ನ, ಗೊಜ್ಜು, ಸಾಂಬಾರು, ತಿಳಿಸಾರು, ಮೊಸರು , ಉಪ್ಪಿನಕಾಯಿ ಸರದಿಯಲ್ಲಿ ಬಂದುವು.ಪುಟ್ಟ ಬಟ್ಟಲುಗಳಲ್ಲಿ ತೈರೊಡೆ, ಗಸಗಸೆ ಪಾಯಸ, ರಸಮಲಾಯಿ, ಬಾದಾಮಿ ಹಲ್ವ ಬಂದುವು. ಇನ್ನೊಂದು ಪುಟ್ಟ ಬಟ್ಟಲಲ್ಲಿ ಗಟ್ಟಿಮೊಸರು.

ಪ್ರತಿಯೊಂದು ಮೊಸರಿನ ಬಟ್ಟಲಿನಲ್ಲೂ ಸಣ್ಣದಾಗಿ ಚೌಕಾಕಾರದಲ್ಲಿ ಕತ್ತರಿಸಿದ ಒಂದು ಬಾಳೆಲೆಯ ತುಂಡು ಇದ್ದುದನ್ನು ಗಮನಿಸಿ ಇದು ಯಾತಕ್ಕೆ ಎಂದು ಬಡಿಸುವವರನ್ನು ಕೇಳಿದೆ. ‘ಮೊಸರು ಹೆಚ್ಚು ಹುಳಿ ಬರಬಾರದು ಎಂದು ಈ ರೀತಿ ಬಾಳೆಎಲೆ ತುಂಡನ್ನು ಹೆಪ್ಪು ಹಾಕುವಾಗಲೇ ಹಾಕುತ್ತೇವೆ’ ಎಂದರು. ಇದನ್ನು ಪ್ರಯೋಗಿಸಿ ನೋಡಬೇಕು!

Arasina kumkuma- book

ಊಟವಾದ ಮೇಲೆ ಮಹಿಳೆಯರಿಗೆ ಅರಶಿನ-ಕುಂಕುಮ, ಹೂವು, ಎಲೆ-ಅಡಿಕೆ, ಕಾಯಿಯ ಜತೆ ರವಕೆ ಕಣ ಕೊಡುವುದು ಮೈಸೂರು ಕಡೆಯಲ್ಲಿ ಸಾಮಾನ್ಯ ಪದ್ಧತಿ. ಕೇರಳದ ಗಡಿನಾಡಿನವಳಾದ ನನಗೆ ಮೈಸೂರಿಗೆ ಬಂದ ಹೊಸದರಲ್ಲಿ ಇದು ವಿಶಿಷ್ಟ ಎನಿಸಿತ್ತು. ಆದರೆ ಇವರು (ತಮಿಳುನಾಡು ಮೂಲದವರು) ಅರಶಿನ-ಕುಂಕುಮದ ವಸ್ತುಗಳ ಜತೆಗೆ, ವಾಲ್ಮೀಕಿ ರಾಮಾಯಣದ ‘ಸುಂದರಕಾಂಡ’ ಮತ್ತು ‘ಆದಿತ್ಯ ಹೃದಯಂ’ ಎಂಬ ಪುಸ್ತಕಗಳನ್ನೂ, ಸಿಹಿ-ಖಾರದ ಪೊಟ್ಟಣವನ್ನೂ ಕೊಟ್ಟಿದ್ದರು. ಹೀಗೆ, ಉಂಡೂ, ಕೊಂಡೂ, ಬಂದೆವು.

-ಹೇಮಮಾಲಾ.ಬಿ

 

6 Responses

  1. Rama Mv says:

    Nice description. Lots joragide. Etheechege halavu function galalli pusthaka needuvudu balakege baruthide..Gud idea

  2. Sreedhara Jois says:

    It proves not all that last, we still have people amongst us who practice and carry our rich cultural values!! Thank you for sharing!!

  3. ಅನಂತ ಅಯಾಚಿತ says:

    ಒಳ್ಳೆಯ ಅಬ್ಯಾಸ ಮಾಡಿಕೋಂಡಿದಾರೆ, return ಗಿಫ್ಟ್ ಅಂತ ಏನಾದ್ರೊ ವಸ್ತು ಕೊಡೊಬದಲು ಇದು ಒಳ್ಳೇದು

  4. C S Hanumantha Raju says:

    ಅನುಕರಣೀಯ ಆಚರಣೆ ಅಕ್ಕ ಖುಷಿಯಾಯ್ತು.

  5. Shankari Sharma says:

    ಒಳ್ಳೆ ಅನುಕರಣೀಯ ಪಧ್ಧತಿ….ಅವರ ಪುಸ್ತಕ ಪ್ರಿಯತೆ ತುಂಬಾ ಇಷ್ಟವಾಯಿತು…

  6. Hema says:

    ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: