ಹನಿಗತೆಗಳು..
ಯಾತ್ರೆ
ರಾಯರು ದೇವರ ದರ್ಶನ ಮಾಡುವ ಸಲುವಾಗಿ ಧಾರ್ಮಿಕ ಕ್ಷೇತ್ರಕ್ಕೆಂದು ಹೊರಟಿದ್ದರು. ಅವರು ಹೋಗುತ್ತಿದ್ದ ಬಸ್ಸು ಅಪಘಾತಕ್ಕೀಡಾಯಿತು.
ತಲೆಗೆ ತೀವ್ರ ಪೆಟ್ಟುಬಿದ್ದು ಕೊನೆಯುಸಿರು ಹೋಗುವ ಮುನ್ನ ರಾಯರು ಕೂಗಿದ್ದು: ‘ಓ ದೇವರೇ…’
ಅನಕ್ಷರಸ್ಥ
ಚಿಂದಿ ಆಯುವ ಹುಡುಗನಿಗೆ ಕಸದ ತಿಪ್ಪೆಯಲ್ಲಿ ಇಸ್ಪೀಟಿನ ಕಟ್ಟು ಮತ್ತು ಮಹಾತ್ಮರ ಪುಸ್ತಕಗಳು ಸಿಕ್ಕಿದವು. ಆ ಹುಡುಗ ಶಾಲೆಯ ಮುಖವನ್ನೇ ನೋಡದ ಅನಕ್ಷರಸ್ಥ.
ಕರಪತ್ರ
ಚುನಾವಣೆಯ ಕಾಲ.
ಎಲ್ಲೆಲ್ಲೂ ರಾಜಕೀಯ ಪಕ್ಷದ ಕರಪತ್ರಗಳು ಚಿಗುರುತ್ತಿವೆ.
ರಸ್ತೆಬದಿಯಲ್ಲಿ ಮತ್ತು ಪಾರ್ಕುಗಳಲ್ಲಿ ಮರ ಗಿಡಗಳು ಒಣಗಿ ನಿಂತಿವೆ.
ಮೇಕಪ್
“ಡಾರ್ಲಿಂಗ್ ಭೂಕಂಪವಾಗ್ತಿದೆ ಬೇಗ ಮನೆಯಿಂದ ಹೊರಗೆ ಬಾ..”
ಹೀಗೆಂದವನೇ ಗಂಡ ತನ್ನ ಪುಟ್ಟ ಮಗುವನ್ನು ಎದೆಗವುಚಿಕೊಂಡು
ತಲೆಬಾಗಿಲಿನಿಂದ ಹೊರ ನಡೆದಿದ್ದ.
ಬೆಡ್ ರೂಮಿನಲ್ಲಿ ಕನ್ನಡಿಯೆದುರು ನಿಂತಿದ್ದವಳ ಮೇಕಪ್ ಇನ್ನೂ ಮುಗಿದಿರಲಿಲ್ಲ!!!
ಹೆಲ್ಮೆಟ್
ದ್ವಿಚಕ್ರ ವಾಹನ ಸವಾರ ಕುಡಿದ ಮತ್ತಿನಲ್ಲಿ ಹೆಲ್ಮೆಟ್ ನ್ನು ಬಾರಿನಲ್ಲಿಯೇ ಮರೆತು ಮನೆಗೆ ಬಂದ.
ಬಾಗಿಲು ತೆರೆದ ಹೆಂಡತಿಯು ಕೈಯಲ್ಲಿ ಲಟ್ಟಣಿಗೆ ಹಿಡಿದು ನಿಂತಿದ್ದಳು!
ಕೋಳಿ
ಮುಂಜಾನೆ ನಸುಕಿಗೆ ಕೋಳಿಯು ಕೂಗಿ- ಬೆಳಕಾಯಿತೆಂದು ಮನೆಯವರನ್ನೆಲ್ಲ ಎಬ್ಬಿಸಿತು. ಮನೆಯಾಕೆ, ಊರಿಂದ ಬಂದ ನೆಂಟರಿಗೆ ಮಾಂಸದಡುಗೆ ಮಾಡಲು ಮಸಾಲೆ ಅರೆದಳು!
ಚುಕ್ಕಿ
ನನಗೆ ನೋವಾದಾಗೆಲ್ಲ ಅಮ್ಮನನ್ನು ನೆನಪಿಸಿಕೊಳ್ಳುವೆ. ಅಮ್ಮನೂ ಹೀಗೇನೆ.
ಆದರೆ ನಮ್ಮಜ್ಜಿ ಆಗಸದಲ್ಲೊಂದು ಚುಕ್ಕಿ.
– ನವೀನ್ ಮಧುಗಿರಿ
ತುಂಬಾ ಚೆನ್ನಾಗಿದೆ.
ಎರಡು ವಾಕ್ಯದ ಕಥೆಗಳು ಚೆನ್ನಾಗಿತ್ತು
Nice stories with meaningful words