ದ್ವಾದಶ ಸ್ಕಂದ – ಅಧ್ಯಾಯ – 2
ವೇದ ವಿಭಾಗ
ಚತುರ್ಮುಖ ಬ್ರಹ್ಮದೇವನು ಧ್ಯಾನಾವಸ್ಥೆಯಲಿ
ಅವನ ಹೃದಯಾಕಾಶದಿಂ ಪ್ರಾಣಘೋಷವು
ಸಣ್ಣರೂಪದಿ ಹೊರಡೆ ಆ ನಾದವ ಉಪಾಸನೆ
ಮಾಡಿಯೇ ಯೋಗಿಗಳು ಜ್ಞಾನೋದಯವ ಪಡೆದು
ಮೋಕ್ಷ ಸುಖವ ಪಡೆವರು
ಬ್ರಹ್ಮನ ಶರೀರದಿಂ ಹೊರಟ ಆ ಪ್ರಾಣಘೋಷವೇ
ʼಅʼಕಾರ ʼಉʼಕಾರ ʼಮʼಕಾರ ಎಂಬ ಮೂರು ಅವಯವಗಳಿಂ ಕೂಡಿ
ʼಓಂʼಕಾರವಾಗೆ ಆ ʼಓಂʼಕಾರ ಸ್ವಯಂಪ್ರಕಾಶಿತ ಮಂತ್ರರಾಜ
ಪರಮಾತ್ಮನಿಗೆ ಈ ಓಂಕಾರವೇ ವಾಚಕ
ಓಂಕಾರದಲಿ ವ್ಯಕ್ತವಾಗಿಹ
ಅಕಾರದಿಂ ಅನನ್ಯಾರ್ಹ ಶೇಷತ್ವವೂ
ಉಕಾರದಿಂ ಅನನ್ಯ ಶರಣತ್ವವೂ
ಮಕಾರದಿ ಅನನ್ಯ ಭೋಗತ್ವವೂ
ವ್ಯಕ್ತವಾಗೆ ನಾರಾಯಣಾದಿ ನಾಮಗಳ ಅರ್ಥವೂ
ಇದರಿಂದಲೇ ಪ್ರಕಾಶಿತವಾಗುವುದು
ಅಂತಸ್ಥ ಊಷ್ಮಸ್ವರ ಸ್ಪರ್ಶಗಳೆಂಬ ಭೇದಗಳಿಂದ
ಕಂಡುಬರುವ ವರ್ಗ ಸಮುದಾಯದಿಂ
ಯಜ್ಞಾದಿ ಕರ್ಮಗಳ ಪ್ರತಿಪಾದಿಪ ಉದ್ಧೇಶದಿ
ಬ್ರಹ್ಮ ನಾಲ್ಕು ಮುಖದಿಂ ನಾಲ್ಕು ವೇದವ ಉಚ್ಚರಿಸೆ
ನಂತರದಿ ಮರೀಚಿ ಕಶ್ಯಪರಾದಿಯಾಗಿ
ಶಿಷ್ಯಪರಂಪರೆಯಲಿ ಚತುರ್ಯುಗಗಳಲಿ
ವೇದಪ್ರಚಾರವಾಗಿರೆ ವ್ಯಾಸ ಮುನೀಶ್ವರರು ವೇದಗಳ
ಋಗ್ವೇದ ಯರ್ಜುವೇದ ಸಾಮವೇದ ಅಥರ್ವಣವೇದಗಳೆಂಬ
ನಾಲ್ಕು ಸಂಹಿತೆಯಾಗಿ ವಿಂಗಡಿಸಿ ತಮ್ಮ ಶಿಷ್ಯರಿಗುಪದೇಶಿಸಿದರು
ಗುರುಗಳಿಂದ ಋಗ್ವೇದವ ಉಪದೇಶ ಪಡೆದ ಪೈಲನು
ಅದನು ಎರಡಾಗಿ ವಿಭಾಗಿಸೆ
ನಂತರದಿ ಬಾಷ್ಕಲನು ನಾಲ್ಕು ಭಾಗವಾಗಿ ವಿಭಾಗಿಸೆ
ಯಾಜ್ಞವಲ್ಕ ಮತ್ತಿತರ ನಾಲ್ಕು ಶಿಷ್ಯರಿಗೆ ಬೋಧಿಸೆ
ಮುಂದುವರೆದು ಅನೇಕ ಭಾಗಗಳಾಗಿ ಬಹ್ವೃಚ ಸಂಹಿತೆಯೆಂದು
ಪ್ರಸಿದ್ಧಿಯಾಗಿ ಶ್ರವಣ ಮಾಡಿದ ಮಾತ್ರದಿ
ಪಾಪಮುಕ್ತಿಯು ಲಭಿಸುವುದು
ಯಜುರ್ವೇದದ ಉಪದೇಶ ಪಡೆದ ವೈಶಂಪಾಯನನ
ಎರಡು ಬಗೆಯ ಶಿಷ್ಯವರ್ಗ ಚರಕ ಮತ್ತು ಅಧ್ವರ್ಯ
ತಮ್ಮ ಗುರುನಾಮದಿಂದಲೇ ಗುರುತಿಸಲಟ್ಟರು
ವೈಶಂಪಾಯನ ಶಿಷ್ಯ ಯಾಜ್ಞವಲ್ಕ
ಸುಲಭದ ತತ್ವದಲಿ ವೇದಸಿದ್ಧಿಯಾಗದು
ದುಷ್ಕರವಾದ ವ್ರತವ ಹಿಡಿವೆನೆಂಬ
ಗರ್ವದ ಮಾತಿಗೆ ಮುನಿದ ಗುರು
ತನ್ನಿಂದ ಅಧ್ಯಯನ ಮಾಡಿದ ವೇದಶಾಖೆಗಳ
ಬಿಟ್ಟು ಹೋಗಲು ಅಜ್ಞಾಪಿಸೆ
ಗುರುಶಾಪಕೆ ಬಲಿಯಾಗಿ
ಗ್ರಹಿಸಿದ್ದ ಯಜುಶಾಖ್ಯಾಭಾಗಗಳ
ಬಾಯಿಂದ ಕಕ್ಕಿ ನಡೆದನು
ಕೆಲಋಷಿಗಳು ಅವುಗಳ ಗ್ರಹಿಸಲಿಚ್ಛಿಸಿದರೂ
ಬೇರೊಬ್ಬರ ಬಾಯಿಂದ ಬಿದ್ದುದ
ಗ್ರಹಿಸಲಿಚ್ಚಸದೆ ತಿತ್ತರಿ ಎಂಬ ಪಕ್ಷಿ ರೂಪವ ಧರಿಸಿ
ವೇದಭಾಗವ ನುಂಗಿದರು
ಆ ಯಜುಶ್ಯಾಖೆಗಳಿಗೆ ತೈತ್ತರೀಯ ಎಂದು ಹೆಸರಾಯಿತು
ಗುರುಸನ್ನಿಧಿಯ ತೊರೆದ ಯಾಜ್ಞವಲ್ಕ
ಅಭ್ಯಸಿಸಿದ್ಧ ವೇದ ಛಂದಸ್ಸು ದಕ್ಕದಿರುವುದಕ್ಕೆ
ದುಃಖಿಸಿ ಸಕಲ ವೇದ ಗರ್ಭನಾದ
ಸೂರ್ಯನಾರಾಯಣನ ಆರಾಧಿಸಿ
ಹಿಂದೆ ಅಧ್ಯಯನ ಮಾಡಿದ ಯಜುರ್ವೇದ
ಸಾರರಹಿತವಾಗದೆ ಮೊದಲಿನಂತೆ
ಸ್ವಾಧೀನವಾಗುವ ಅನುಗ್ರಹ ಮಾಡೆಂದು ಪ್ರಾರ್ಥಿಸೆ
ಪ್ರಸನ್ನರೂಪಿ ಆದಿತ್ಯನು ಯಾಜ್ಞವಲ್ಕನಿಗೆ
ಯಜುಸಂಹಿತೆಯ ಸಾರವು ನಷ್ಟವಾಗದಂತನುಗ್ರಹಿಸಿದನು
ವೇದವ್ಯಾಸ ಶಿಷ್ಯ ಜೈಮಿನಿ ಸಾಮವೇದವ ಅಭ್ಯಸಿಸಿ
ಸಾಮವೇದ ಸಂಹಿತೆಯ ಎರಡು ಭಾಗದಲಿ ವಿಂಗಡಿಸಿ
ಒಂದು ಭಾಗವ ಮಗ ಸುಮಂತನಿಗೂ
ಮತ್ತೊಂದು ಭಾಗವ ಮೊಮ್ಮಗ ಸುತನ್ವನಿಗೂ
ಉಪದೇಶಿಸಿದನು
ಸುಕರ್ಮ, ಜೈಮಿನಿ ಮಹರ್ಷಿಯ ಶಿಷ್ಯ
ಮಹಾಪ್ರಭಾವಶಾಲಿ ಸಾಮವೇದ ಮಹಾವೃಕ್ಷದಿಂ
ಸಾವಿರ ಶಾಖಾವೇದಗಳ ಕಲ್ಪಿಸೆ
ಸುಕರ್ಮ ಶಿಷ್ಯರುಗಳು ಅನೇಕ ಶಾಖೆಗಳ ಅಭ್ಯಸಿಸಿ
ನಂತರದಿ ಸುಕರ್ಮನ ಅನೇಕ ಶಿಷ್ಯರು
ಒಬೊಬ್ಬರೂ ನೂರು ನೂರು ಸಂಹಿತೆಗಳ ಅಭ್ಯಸಿಸಿ
ಸಾಮವೇದವ ಲೋಕದಲಿ ಪ್ರಸರಿಸಿದರು
ಅಥರ್ವವೇದವು ವೇದವ್ಯಾಸರಿಂದ
ಶಿಷ್ಯ ಸುಮಂತುವಿಗೆ ಬೋಧಿಸಲ್ಪಟ್ಟು
ಶಿಷ್ಯ ಸುಮಂತು ಕಬಂದನಿಗೆ ಬೋಧಿಸೆ
ನಂತರದಿ ಅವನ ಹತ್ತಾರು ಶಿಷ್ಯರುಗಳು
ಅಥರ್ವವೇದ ಶಾಖೆಯ ವಿಭಾಗಿಸಿ
ಲೋಕದಲಿ ಪ್ರಸರಿಸಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=46159

-ಎಂ. ಆರ್. ಆನಂದ, ಮೈಸೂರು

