(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸ್ವಲ್ಪ ಕಾಲಾನಂತರ ಬಂದಿರುವ ಸಂಬಂಧಗಳನ್ನೆಲ್ಲ ನಿರಾಕರಿಸುತ್ತಲೇ ಇದ್ದ ಮಾಲಿನಿಯನ್ನು ಒತ್ತಾಯಿಸಿ ಕೇಳಿದಾಗ “ಅಮ್ಮಾ ನಾನು ಮದುವೆ ಮಾಡಿಕೊಳ್ಳುವುದೇ ಇಲ್ಲ. ನನ್ನನ್ನು ಬಲವಂತ ಮಾಡಬೇಡಿ.” ಎಂದು ತನ್ನ ಅಂತಿಮ ತೀರ್ಮಾನ ಹೇಳಿಬಿಟ್ಟಳು ಮಾಲಿನಿ. ಆ ಹೊತ್ತಿನಲ್ಲಿ ಅಲ್ಲೇ ಇದ್ದ ಮಾನಸಾ ಇದೇ ಸರಿಯಾದ ಸಮಯವೆಂದು “ಅಮ್ಮಾ ನೀವು ನನ್ನ ಮದುವೆಗೋಸ್ಕರ ಶ್ರಮ ತೆಗೆದುಕೊಳ್ಳಬೇಡಿ. ನಾನು ಮದುವೆಯನ್ನು ನಿರಾಕರಿಸಿಲ್ಲ. ಆದರೆ ನನ್ನ ಮನಸ್ಸಿಗೆ ಒಪ್ಪುವಂತಹ ಹುಡುಗ ಸಿಕ್ಕಾಗ ನಿಮಗೆ ತಿಳಿಸಿ ಮದುವೆಯಾಗುತ್ತೇನೆ. ಇದರಲ್ಲಿ ಎರಡು ಮಾತಿಲ್ಲ” ಎಂದು ತನ್ನ ನಿರ್ಧಾರವನ್ನೂ ಹೇಳಿಬಿಟ್ಟಳು.
ಮಕ್ಕಳಿಬ್ಬರ ನಿರ್ಧಾರದಿಂದ ಭಾರ್ಗವಿಯು ಒಂದುಕ್ಷಣ ವಿಚಲಿತಳಾದಳು. ನಂತರ ಬಿಡು ಅವರವರ ಕಾಲಮೇಲೆ ಸ್ವತಂತ್ರವಾಗಿ ನಿಂತಿದ್ದಾರೆ. ಅವರ ನಿರ್ಧಾರವೂ ಸ್ವತಂತ್ರವೇ ಆಗಬೇಕು. ದೇವರಿಚ್ಛೆ ಏನಿದೆಯೋ ಹಾಗೇ ಆಗಲಿ ಎಂದು ತನಗೆ ತಾನೇ ಸಂತೈಸಿಕೊಂಡಳು.
ಎಂದಿನಂತೆ ಆಶ್ರಮದ ಕೆಲಸಗಳ ಜೊತೆಗೆ ಮುಂದುವರೆದಳು. ತನ್ನ ಗೆಳತಿ ಸುಮನಾಳ ಜೊತೆಗೂಡಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಣ್ಯಕ್ಷೇತ್ರ ಪುಟ್ಟಪರ್ತಿಗೆ ಹೋಗಲು ತೀರ್ಮಾನಿಸಿದಳು. ಪ್ರವಾಸ ವ್ಯವಸ್ಥಾಪಕರ ಹಿಂದೆ ಬೀಳದೆ ಪ್ರತ್ಯೇಕವಾಗಿ ಎಲ್ಲಿಗೆ ಹೋಗಬೇಕಾದರೂ ತಾವಿಬ್ಬರೇ ಹೋಗುತ್ತಿದ್ದುದರಿಂದ ಹೋಗಬೇಕಾದ ಸ್ಥಳ, ಅಲ್ಲಿನ ತಂಗುದಾಣದಿಂದ ಹಿಡಿದು ತಿನ್ನುವ ಆಹಾರ, ಸುತ್ತಮುತ್ತ ನೋಡಬೆಕಾದ ಸ್ಥಳಗಳು, ಎಲ್ಲದರ ಬಗ್ಗೆ ಮಾಹಿತಿಗಳನ್ನು ಕಲೆಹಾಕಿಕೊಂಡೇ ಹೊರಡುತ್ತಿದ್ದರು.
ಅದೇ ರೀತಿ ಸತ್ಯಶ್ರೀ ಸಾಯಿಬಾಬಾರವರ ಕಾರ್ಯಕ್ಷೇತ್ರವಾಗಿದ್ದ ಪುಟ್ಟಪರ್ತಿಯು ಚಿತ್ರಾವತಿ ನದಿಯ ದಂಡೆಯಮೇಲಿದ್ದು ಅಲ್ಲಿ 1950 ರಲ್ಲಿ “ಪ್ರಶಾಂತಿನಿಲಯಂ” ಎಂದು ನಾಮಕರಣವಾಗಿರುವ ಪ್ರಸಿದ್ಧ ಆಶ್ರಮದ ಹೊಸ ಕಟ್ಟಡದ ಉದ್ಘಾಟನೆಯಾಗಿತ್ತು. ಅದೇ ಊರಿನಲ್ಲಿ ಆಸ್ಪತ್ರೆ, ಶಿಕ್ಷಣಸಂಸ್ಥೆಗಳು, ವಸ್ತುಸಂಗ್ರಹಾಲಯವಿದ್ದು ಅಲ್ಲಿ ವರ್ಷವಿಡೀ ಏನಾದರೊಂದು ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದವು. ಅದು ವಿಶ್ವದಾದ್ಯಂತ ಮನ್ನಣೆ ಪಡೆದಿದ್ದ ಪುಣ್ಯಕ್ಷೇತ್ರ ಎಂಬೆಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಅಲ್ಲಿಗೆ ಭೇಟಿಕೊಡಬೇಕೆಂದು ಹೊರಡುವ ದಿನವನ್ನು ನಿಗದಿ ಮಾಡಿಕೊಂಡು ಭಾರ್ಗವಿ ಮತ್ತು ಸುಮನಾ ಪ್ರಯಾಣ ಬೆಳಸಿದರು.
ಅಲ್ಲಿಗೆ ತಲುಪಿದ ನಂತರ ವೀಕ್ಷಿಸಬೇಕಾದುದನ್ನೆಲ್ಲ ನೋಡಿಕೊಂಡು ಅಂತಿಮವಾಗಿ ಆಶ್ರಮಕ್ಕೆ ಬಂದರು. ಅಲ್ಲಿನ ಕಾರ್ಯಕ್ರಮಗಳು, ಕೆಲಸದಲ್ಲಿ ತೊಡಗಿಕೊಂಡವರ ಸೇವಾಮನೋಭಾವ, ಬಂದವರೂ ಅದರಲ್ಲಿ ಭಾಗವಹಿಸುವಿಕೆ ಇವರನ್ನು ಬಹಳವಾಗಿ ಆಕರ್ಷಿಸಿದವು. ಅಲ್ಲಿರುವ ಆಸ್ಪತ್ರೆಯ ಸೇವೆಗಳು ನಿಸ್ವಾರ್ಥವಾಗಿದ್ದು ಎಲ್ಲರಿಗೂ ಲಭಿಸುವಂತಿದ್ದವು. ಅದನ್ನು ಕಂಡು ಮನಸ್ಸು ಹಿಗ್ಗಿತು. ಹಾಗೇ ಸುತ್ತಾಡುತ್ತಿರುವಾಗ ಆಶ್ರಮದ ಹೊರಾಂಗಣದಲ್ಲಿ ಯಾರೋ ಭಾರ್ಗವಿಯ ಹೆಸರು ಹಿಡಿದು ಕರೆದಂತಾಯಿತು. ನಾವು ಯಾರೆಂದು ಕಂಡೂ ಕೇಳದ ಈ ಸ್ಥಳದಲ್ಲಿ ಯಾರಪ್ಪಾ ನನ್ನನ್ನು ಗುರುತಿಸಿ ಕರೆದದ್ದು ಎಂದುಕೊಳ್ಳುತ್ತಿರುವಷ್ಟರಲ್ಲಿ ಗಟ್ಟಿಯಾಗಿ ಮತ್ತೊಮ್ಮೆ ಭಾರ್ಗವಿಯಮ್ಮಾ ಎಂದು ಕರೆದರು. ಹಾಗೇ ನಿಂತು ಹಿಂದಿರುಗಿ ಕಣ್ಣು ಹಾಯಿಸಿದರು. ಅಲ್ಲೇ ಎದುರಿಗೆ ಒಬ್ಬ ಮಹಿಳೆ ಇವರಿದ್ದ ಕಡೆಗೇ ದಾಪುಗಾಲಾಕುತ್ತ ಬರುತ್ತಿರುವುದು ಕಾಣಿಸಿತು. ಸುಮಾರು ನಲವತ್ತೈದರ ಆಸುಪಾಸಿನ ಮಹಿಳೆ ಒಳ್ಳೆಯ ನಿಲುವು. ಲಕ್ಷಣವಾದ ಮುಖ, ನಸುಗೆಂಪು ಬಣ್ಣ, ದಷ್ಟಪುಷ್ಟವಾಗಿದ್ದಳು. ಉಟ್ಟಿದ್ದ ಸೀರೆಯು ಆಶ್ರಮವಾಸಿಗಳಿಗೆ ನಿಗದಿಯಾಗಿದ್ದ ಸಮವಸ್ತ್ರದಂತಿತ್ತು. ಮುಖದಲ್ಲಿ ನಗೆ ಚಿಮ್ಮುತ್ತಾ ಬರುತ್ತಿದ್ದ ಅವಳು ಹತ್ತಿರವಾಗುತ್ತಿದ್ದಂತೆ ಗುರುತು ಸಿಕ್ಕಿತು. ಅವಳು ಭಾರ್ಗವಿಯ ಮನೆಗೆಲಸ ಮಾಡುತ್ತಿದ್ದ ಗಿರಿಜಾ ಅಲ್ಲವೇ ಎಂದು ಉದ್ಗಾರ ತೆಗೆದರು. ಅಶ್ಚರ್ಯವಾಯಿತು ಆಕೆ ಇಲ್ಲಿ ಹೇಗೆ? ಅಕೆ ಅವರನ್ನು ಸಮೀಪಿಸಿ ಹೌದಮ್ಮಾ ನಾನು ನಿಮ್ಮ ಗಿರಿಜಾಳೇ ಎಂದಳು. ಭಾರ್ಗವಿ “ಅಲ್ಲವೇ ಆ ದಿನ ಗಂಡನೊಡನೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಿದ್ದವಳು ಇಲ್ಲಿಗೆ ಹೇಗೆ ಬಂದೆ?” ಎಂದು ಕೇಳಿದಳು.
“ಹೂ ಕಣವ್ವಾ ಅದೊಂದು ದೊಡ್ಡ ಕತೆ, ಹಿಂಗೆಲ್ಲ ದಾರೀಲಿ ನಿಂತು ಹೇಳೋಕಾಗಲ್ಲ. ಬನ್ನಿ ಆ ಮರದ ಕೆಳಗೆ ನೆರಳಲ್ಲಿರೋ ಬೆಂಚಿನಮೇಲೆ ಕುಳಿತು ಹೇಳ್ತೀನಿ” ಎಂದು ಅವರುಗಳಿಗಿಂತ ಮುಂದೆ ದಾರಿತೋರುತ್ತ ನಡೆದಳು ಗಿರಿಜಾ. ಭಾರ್ಗವಿ ಮತ್ತು ಸುಮನಾ ಮಂತ್ರಮುಗ್ಧರಂತೆ ಅವಳನ್ನು ಹಿಂಬಾಲಿಸಿದರು.
ಅಗಲವಾಗಿಯೇ ಇದ್ದ ಬೆಂಚಿನಮೇಲೆ ಅವರಿಬ್ಬರನ್ನೂ ಕುಳ್ಳಿರಿಸಿ ತಾನು ಅವರಿಬ್ಬರಿಗೆದುರಾಗಿ ಕೆಳಗಡೆಯೇ ಕುಳಿತಳು. ಅದನ್ನು ನೋಡಿ ಗೆಳತಿಯರಿಬ್ಬರು “ಇದೇನೇ ಗಿರಿಜಾ, ಬೇರೆ ಕಡೆ ಕುಳಿತೆ. ಬಾ ಇಲ್ಲೇ ಪಕ್ಕದಲ್ಲಿ ಜಾಗವಿದೆ” ಎಂದು ಕರೆದರು.
“ಬೇಡ ಕನ್ರವ್ವಾ, ನಾನು ಏನೇ ಆಗಿದ್ರೂ, ಎಲ್ಲೇ ಇದ್ದರೂ ನಿಮ್ಮಗಳಿಗೆ ಸಮನಾಗಾಕೆ ಆಯ್ತದಾ. ನಾನು ಹೇಳದಾ ಒಸಿ ಗಮನಕೊಟ್ಟು ಕೇಳಿಸಿಕೊಳ್ಳಿ” ಎಂದಳು ಗಿರಿಜಾ.
“ಆಯಿತಮ್ಮಾ ಹೇಳು ನಮಗೂ ಕುತೂಹಲ ಹೆಚ್ಚಾಗುತ್ತಿದೆ” ಎಂದರು.
“ಆವತ್ತು ನಿಮ್ಮನೆ ಕೆಲಸ ಮುಗಿಸಿ ಮನೆಗೆ ಬತ್ತಿದ್ದಂಗೆ ನನ್ನ ಗಂಡ, ಏ ಅಮ್ಮೀ ಅಲ್ಲೇ ನಿಂತುಕೋ ಮನೆ ಒಳ್ಗಡೆ ಕಾಲಿಟ್ಟರೆ ಕಾಲು ಕತ್ತರಿಸಿ ಹಾಕ್ತೀನಿ ಅಂದ. ಅದಕ್ಕೆ ನಾನೂ ಏನಲೋ ಬೆಳಗ್ಗೆ ಬೆಳಗ್ಗೇನೇ ಹಾಕ್ಕೊಂಡು ಬಂದಿದ್ದೀಯಾ? ಅಥವಾ ರಾತ್ರಿ ಏರಿಸಿದ್ದು ನಶಾ ಇನ್ನೂ ಇಳಿದಿಲ್ಲವಾ? ಅಂದೆ. ತಕ್ಕೋ ಅವನು ವೀರಭದ್ರನ ಅವತಾರ ತಾಳಿಬಿಟ್ಟ. ಕೈಗೆ ಸಿಕ್ಕಿದ ಸೌದೆಪಾಳದಿಂದಲೇ ಯದ್ವಾತದ್ವಾ ಬಾರಿಸಿಬಿಟ್ಟ. ಮಾತಿಗೆ ಮಾತು ಬೆಳೆದು ಸುತ್ತಮುತ್ತಲ ಜನರೆಲ್ಲ ಜಮಾಯಿಸಿಬಿಟ್ರು. ನಾನೇನು ತಪ್ಪು ಮಾಡಿದೇಂತ ರಣರಂಗಮಾಡಿ ಒದೀತಿದ್ದೀಯಾ ಅಂತ ಕೇಳ್ದೆ. ಅದಕ್ಕವನು ನಿನ್ನ ಹೊಸ ಗೆಣೆಕಾರನ್ನ ಕೇಳೇ ಸೋಗಲಾಡಿ, ನನಗೆಲ್ಲ ವಿಸ್ಯ ಗೊತ್ತಾಗದೆ. ಕದ್ದುಮುಚ್ಚಿ ಅವನ್ಜೊತೆ ಆಟ ಆಡಿದ್ರೆ ಗೊತ್ತಾಗಕಿಲ್ವಾ ಅಂತ ಕೂಗಾಡಿದ. ನನಗೆ ಒಂದುಚಣ ಗರಬಡಿದಂಗಾತು. ಒಬ್ಬ ಸರಿಯಾಗಿ ನಂಜೊತೆ ಬಾಳ್ವೆ ಮಾಡ್ಲಿಲ್ಲಾಂತ ಬಿಟ್ಟು ಇವನ್ನ ಕಟ್ಟಿಕೊಂಡು ಬಂದಿದ್ದಂತೂ ದಿಟ. ಆದರೆ ಇವನು ಹೇಳ್ದಂಗೆ ತಪ್ಪುಕೆಲಸ ಮಾಡಿಲ್ಲ. ಅವನಿಗೆ ಅನುಮಾನ ಬಂದಂಗಾಗಿದೆ ಅಂದುಕೊಂಡು ನನಗ್ಯಾರೂ ಗೆಣೆಕಾರ ಇಲ್ಲಲೋ, ಶಿವನ ಸತ್ವಾಗಿ ಇಲ್ಲ ಅಂದೆ.. ಅವ ಕೇಳಲೇ ಇಲ್ಲ. ಅವನ ಬಾಯಿಂದ ನನ್ನ ಸ್ನೇಹಿತ ರಮಣಾ ಹೇಳ್ದ ಇಷ್ಟರಲ್ಲೆ ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಪೇರಿ ಕೀಳ್ತೀವಿ ಅಂತ. ಅದಕ್ಕೆ ನಾನು ಸುಳ್ಳು ಬೊಗಳಿದ್ರೆ ಅಂದ್ರೆ ನಿನ್ನ ಬುಳ್ಡೇಗೆ ಬಿಸಿನೀರು ಕಾಯಿಸಿಬಿಟ್ಟೇನು. ಇದೆಲ್ಲ ನೀನೇ ಕಟ್ಟಿರೋ ನಾಟ್ಕ. ನಂಗೇನೂ ತಿಳಿಯಲ್ಲಾಂತ ಅಂದುಕೊಂಡಿದ್ದೀಯಾ ಮೂಳ. ಆ ಕೆಲಸದ ನಂಜಿ ಹಿಂದೆ ನೀನೇ ಬಿದ್ದಿದ್ದೀ. ಅವಳ್ನ ಇಲ್ಲಿಗೆ ತಂದಿಟ್ಟುಕೊಳ್ಳೋಕೆ ಈ ನಾಟಕ ಆಡ್ತಿದ್ದೀಯ. ಬಿಡು ನೀನೇನು ನನ್ನ ಕಳಿಸೋದು ನಾನೇ ಹೊಂಟೆ. ನೀನಿಲ್ಲಂದ್ರೆ ಬದುಕೋಕ್ಕೆ ಆಗಲ್ವಾ ಅಂದು ಅಡ್ಡ ನಿಂತಿದ್ದ ಅವನ್ನ ಒಚ್ಚರಿಕೆ ತಳ್ಳಿ ಒಳಗೆ ನುಗ್ಗಿ ಬಟ್ಟೆಬರೆ ಗಂಟಿಕ್ಕೊಂಡು ಹೊರಬಂದು ಮಕ್ಕಳನ್ನೂ ಕರಕೊಂಡು ಬರಾನಾಂತ ರಸ್ತೇಲಿ ಕೂತಿದ್ದೆ. ಅಷ್ಟರಲ್ಲಿ ನನ್ನ ಹೆಸರಿನ ಜೊತೆ ಮಾಡಿದ್ದನಲ್ಲ ಅವನೇ ಅಲ್ಲಿಗೆ ಬಂದ. ವಿಷಯ ತಿಳಿದು ಬೀದೀಲಿ ಕೂತಿದ್ದ ನನ್ನನ್ನು ನೋಡಿದ. ಮನೆಬಾಗಿಲಲ್ಲ್ಲಿದ್ದೋನು ಇವನ್ನ ಕಂಡ ಕೂಡಲೇ ರೋಷಾವೇಶದಿಂದ ಕೂಗಾಡಿ ನನ್ನ ಕೈಲಿದ್ದ ಮೊಬೈಲ್ ಕಿತ್ತು ನೆಲಕ್ಕಪ್ಪಳಿಸಿ ಇವನ್ನೇ ಗುದ್ದೋಕೆ ಬಂದ. ಅಗ ನೋಡು ಇವ ನನ್ನ ಕೈಹಿಡಿದು ಅವನ್ಗೆ ನೋಡೋ ನೀನು ಹೇಳಿದ್ದನ್ನು ನಾನು ಮಾಡೇ ತೋರ‍್ತೀನಿ ಕಣ್ಲಾ. ಅಂತೇಳಿ ನಡಿಯಮ್ಮೀ ಅಂತ ನನ್ನ ಕರಕೊಂಡು ಅವರಟ್ಟಿತಾಕೆ ಹೊಂಟೇಬಿಟ್ಟ. ನನಗೆ ಒಂದುಚಣ ದಿಕ್ಕೇ ತೋಚದಂಗಾಯ್ತು. ಅಮ್ಯಾಕೆ ನಿಧಾನವಾಗಿ ಯೋಚ್ನೆ ಮಾಡಿದೆ. ನನ್ನವು ಎರಡು ಪಿಳ್ಳೆಗಳ ಇಟ್ಕೊಂಡು ಏನು ಮಾಡ್ಲೀ ಅಂತ. ಈ ಊರ‍್ನಾಗೆ ಇದ್ರೆ ಅವನು ಬಿಡಾಕಿಲ್ಲ ಅಂತ ಮಕ್ಕಳ ಇಸ್ಕೋಲಿಗೆ ಹೋಗಿ ಏನೇನೋ ಹೇಳಿ ಅವರ ಟಿ.ಸಿ. ಬರೆಸ್ಕೊಂಡು ನಿಂತ ನಿಲುವಿನಲ್ಲಿ ಇವನ ಜೊತೇಲಿ ಹೊಂಟೇಬಿಟ್ಟೆ. ಇಲ್ಲಿಗೆ ಬಂದೊ. ಇಲ್ಯಾರೋ ಗೊತ್ತಿದ್ದರು ಅವರಿಂದ ಹೇಳಿಸಿ ಮಕ್ಕಳನ್ನು ಇಸ್ಕೂಲಿಗೆ ಸೇರಿಸಿ ನಾವಿಬ್ಬರೂ ಇಲ್ಲೇ ಕೆಲಸ ಮಾಡ್ಕೊಂಡು ಇದ್ದೀವಿ. ಅವನು ಗಾಡಿ ನಡೆಸ್ತಾನೆ, ನಾನು ಅಡುಗೆಮನೆ ಕೆಲಸಕ್ಕೆ ಸೇರಿಕೊಂಡೆ. ಆಗಿನಿಂದ ಇಲ್ಲೇ ನೇರುಪ್ಪಾಗಿ ಇದ್ದೀವಿ” ಎಂದು ಮಾತು ಮುಗಿಸಿದಳು ಗಿರಿಜಾ.
“ಎಷ್ಟೊಂದು ವರ್ಷಗಳಾದವು, ಇಷ್ಟೊತ್ತಿಗೆ ನಿನ್ನ ಮಕ್ಕಳು ದೊಡ್ಡವರಾಗಿರಬೇಕು ಈಗೆಲ್ಲಿದ್ದಾರೆ ಏನು ಮಾಡ್ತಿದ್ದಾರೆ?” ಎಂದು ಭಾರ್ಗವಿ ಪ್ರಶ್ನಿಸಿದಳು.
“ಓ.. ತಕ್ಕಳ್ಳಿ ಮಗಳು ನರ್ಸ್ ಟ್ರೇನಿಂಗ್ ಮಾಡ್ಕೊಂಡು ಆಸ್ಪತ್ರೇಲಿ ಕೆಲಸ ಮಾಡ್ತವ್ಳೆ. ಮಗಾನೂ ಅಲ್ಲೇ ವಾರ್ಡ್ಬಾಯ್ ಆಗವ್ನೆ. ಇಬ್ಬರಿಗೂ ಮದುವೆ ಮಾಡಿವ್ನಿ. ಮೂರು ಜನ ಮೊಮ್ಮಕ್ಕಳವೆ. ಅವರವರ ಮನೇಲಿ ಅವ್ರೆ. ನಾನು ನನ್ನ ಜೊತೆಗಾರ ಒಟ್ಟಿಗಿದ್ದೇವೆ.” ಅಂದಳು ಗಿರಿಜಾ. “ಅದು ಸರಿ ಅಮ್ಮಾ ನಿಮ್ಮ ಮಕ್ಕಳು ಹೆಂಗವ್ರೆ?, ನಿಮ್ಮ ಯಜಮಾನಪ್ಪ , ಸುಮನವ್ವಾ ನಿಮ್ಮ ತಾಯಿಯವರು ಹೆಂಗವ್ರೆ” ಎಂದು ವಿಚಾರಿಸಿದಳು.
“ಅಬ್ಬಬ್ಬಾ ಎಷ್ಟೊಂದು ಪ್ರಶ್ನೆ ಒಟ್ಟಿಗೆ ಕೇಳ್ತೀಯೇ ನಮ್ಮವ್ವ” ಎಂದು ಚುಟುಕಾಗಿ ವಿಷಯಗಳೆಲ್ಲವನ್ನೂ ತಿಳಿಸಿದರು ಭಾರ್ಗವಿ ಮತ್ತು ಸುಮನಾ.
“ಹೂ ಕಣವ್ವಾ ನೀವೆಲ್ಲ ಬಾಳಾ ಸೂಕ್ಷ್ಮವಾದ ಜನ. ನಮ್ಮಂಗೆ ಒರಟಲ್ಲ. ಮುನ್ನುಗ್ಗುವ ಧೈರ್ಯಮಾಡಲ್ಲ. ಹೋಗಲಿಬಿಡಿ ಇಲ್ಲೇ ನಮಗೆ ಆಶ್ರಮದೋರು ಇರಕ್ಕೆ ಮನೆ ಕೊಟ್ಟವ್ರೆ. ಬನ್ನಿ ಹೋಗಾಣ. ವಸಿ ಕಾಫಿಗೀಪಿ ಕುಡ್ಕೊಂಡು ಹೋಗೀವ್ರಂತೆ” ಎಂದು ಆಹ್ವಾನಿಸಿದಳು ಗಿರಿಜಾ.
“ಬೇಡ ಗಿರಿಜಾ ಇನ್ನೊಮ್ಮೆ ಬಂದಾಗ ಬರುತ್ತೇವೆ.” ಎಂದು ಉತ್ತರ ಹೇಳಿ ತಾವಿಳಿದುಕೊಂಡಿದ್ದ ಹೋಂಸ್ಟೇ ಕಡೆಗೆ ತಿರುಗಿದರು.
ಆಶ್ರಮದಿಂದ ನಡೆದು ಹೊಗುವಷ್ಟು ಹತ್ತಿರವಿದ್ದುದರಿಂದ ನಡೆಯುತ್ತಾ ಭಾರ್ಗವಿ “ನೋಡಿದೆಯಾ ಸುಮನಾ ಗಿರಿಜಾಳ ಬದುಕಿನ ಅನಾವರಣವನ್ನು. ನಾವುಗಳು ನಮ್ಮ ಅಂತರಂಗದ ಮೃದಂಗ ಬಾರಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದೇವೆ. ಪ್ರಾಪಂಚಿಕ ವಾಸ್ತವ ವ್ಯವಹಾರಗಳಿಗೆ ತೆರೆದುಕೊಳ್ಳಲೇ ಇಲ್ಲ. ಬರಿಯ ಭ್ರಮೆಯ ಬದುಕಾಯಿತು ನಮ್ಮದು. ನಮ್ಮ ಯಾವುದೇ ಆಶಯ ಕೈಗೂಡಲಿಲ್ಲ. ಅವಳು ಹೇಳಿದಂತೆ ನಾವು ಧೈರ್ಯದಿಂದ ಮುನ್ನುಗ್ಗಲೇ ಇಲ್ಲ. ಅವಳು ಇನ್ನೇನೂ ಸಾಧ್ಯವೇ ಇಲ್ಲ ಎನ್ನುವಲ್ಲಿಗೆ ಮುಟ್ಟಿದ್ದವಳು ಮತ್ತೆ ಸಾಹಸ ಮಾಡಿ ಎಲ್ಲವನ್ನು ಸರಿಪಡಿಸಿಕೊಂಡು ಬದುಕು ಕಟ್ಟಿಕೊಂಡದ್ದೇ ಅಲ್ಲದೆ ತನ್ನ ಮಕ್ಕಳನ್ನೂ ದಡ ಸೇರಿಸಿದ್ದಾಳೆ. ನಾವು ಭ್ರಮೆಯ ಪರಿಧಿಯಿಂದ ಹೊರಬರುವ ಪ್ರಯತ್ನದಲ್ಲಿಯೇ ವಿಫಲರಾದೆವು. ದಡ ಸೇರಲೇ ಇಲ್ಲ”
ಭಾರ್ಗವಿಯ ಮಾತಿಗೆ ಸುಮನಳೂ ಹೌದೆಂದು ತಲೆ ಆಡಿಸುತ್ತ ಹೆಜ್ಜೆ ಹಾಕಿದಳು. ನಮ್ಮ ಬದುಕು ಭ್ರಮೆಯೇ ಅಥವಾ ವಾಸ್ತವವೇ? ಎಂಬ ಪ್ರಶ್ನೆಗೇ ಇಬ್ಬರಿಗೂ ಉತ್ತರ ದೊರಕಲೇ ಇಲ್ಲ.
(ಮುಗಿಯಿತು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=46310

-ಬಿ.ಆರ್.ನಾಗರತ್ನ, ಮೈಸೂರು

